Tag: Ramesh Kumar

  • ವಿಧಾನಸಭೆಯಲ್ಲಿ ಸುಧಾಕರ್, ರಮೇಶ್‍ ಕುಮಾರ್ ವಾಕ್ಸಮರ- ರಾಜೀನಾಮೆಗೆ ಮುಂದಾದ ಮಾಜಿ ಸ್ಪೀಕರ್

    ವಿಧಾನಸಭೆಯಲ್ಲಿ ಸುಧಾಕರ್, ರಮೇಶ್‍ ಕುಮಾರ್ ವಾಕ್ಸಮರ- ರಾಜೀನಾಮೆಗೆ ಮುಂದಾದ ಮಾಜಿ ಸ್ಪೀಕರ್

    – ಏಕವಚನದಲ್ಲಿ ಉಭಯ ನಾಯಕರ ನಡ್ವೆ ನಿಂದನೆ
    – ವಲಸೆ ಹಕ್ಕಿಗಳಿಗೆ ಬಿಜೆಪಿ ಶಾಸಕರು, ಸಚಿವರು, ಸಿಎಂ ಸಾಥ್..!

    ಬೆಂಗಳೂರು: ಸಂವಿಧಾನದ ಮೇಲೆ ಚರ್ಚೆ ವೇಳೆ ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಕೆಟ್ಟ ಪದಗಳಲ್ಲಿ ವಾಗ್ಯುದ್ಧ ನಡೆದಿದೆ.

    17 ಶಾಸಕರ ರಾಜೀನಾಮೆ ವಿಚಾರದಲ್ಲಿ ಈ ಹಿಂದಿನ ಸ್ಪೀಕರ್ ಪಕ್ಷಪಾತವಾಗಿ ನಡೆದುಕೊಂಡ್ರು ಅಂತ ಸದನದಲ್ಲಿ ಸಚಿವ ಡಾ.ಸುಧಾಕರ್ ಆರೋಪಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಮಾಜಿ ಸ್ಪೀಕರ್ ರಮೇಶ್ ಕುಮಾರ್, ತಾವು ಎಲ್ಲಿದ್ದೇವೆ ಎಂಬುದನ್ನು ಮರೆತು ಸುಧಾಕರ್ ವಿರುದ್ಧ ಅಶ್ಲೀಲ ಮತ್ತು ಕೆಟ್ಟ ಶಬ್ಧ ಪ್ರಯೋಗ ಮಾಡಿದರು. ಈ ವೇಳೆ ವಾಕ್ಸಮರವೇ ನಡೆದು ಹೋಯ್ತು.  ಇದನ್ನೂ ಓದಿ: ರೇವಣ್ಣನಿಗೆ ನೀವು ನಿಂಬೆಹಣ್ಣು ಕೊಟ್ಟು ಸಿಎಂ ಆದ್ರಾ? ಬಿಎಸ್‍ವೈ ಕಾಲೆಳೆದ ರಮೇಶ್ ಕುಮಾರ್

    ಬಿಜೆಪಿ ಶಾಸಕರು ಸಚಿವ ಸುಧಾಕರ್ ಅವರಿಗೆ ಸಾಥ್ ನೀಡಿದರು. ಅಷ್ಟೇ ಅಲ್ಲದೆ ಸದನದ ಒಳಗೆಯೇ ಇದ್ದ ನೂತನ ಸಚಿವರು ಸಹ ಅಬ್ಬರಿಸಿ ಘೋಷಣೆ ಕೂಗಿದ್ದು ವಿಶೇಷವಾಗಿತ್ತು. ಈ ನಡುವೆ ವಿಧಾನಸಭೆ ಕಲಾಪವನ್ನು ಕೆಲಕಾಲ ಮುಂದೂಡಿದಾಗ ವಲಸೆ ಹಕ್ಕಿಗಳ ಗುಂಪು ಸಿಎಂ ಯಡಿಯೂರಪ್ಪ ಸುತ್ತುವರಿದಿತ್ತು.

    ಕಾಂಗ್ರೆಸ್‍ನಿಂದ ಬಿಜೆಪಿಗೆ ಬಂದು ಶಾಸಕರಾಗಿ, ಸಚಿವರಾಗಿರುವ ಎಸ್.ಟಿ.ಸೋಮಶೇಖರ್, ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಆನಂದ್ ಸಿಂಗ್ ಅವರು ಸುಧಾಕರ್ ಅವರ ಬೆನ್ನಿಗೆ ನಿಲ್ಲಬೇಕು ಅಂತ ಮನವಿ ಮಾಡಿದರು. ಅಷ್ಟೇ ಅಲ್ಲ ರಮೇಶ್ ಕುಮಾರ್ ಬಾಸ್ಸರ್ಡ್ ಅಂತ ಪದ ಬಳಕೆ ಮಾಡಿದ್ದಾರೆ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ರಮೇಶ್ ಕುಮಾರ್ ಸಸ್ಪೆಂಡ್‍ಗೆ ಒತ್ತಾಯಿಸಬೇಕು ಎಂದು ಹೇಳಿದರು. ಆಗ ಸಿಎಂ ಕೂಡ ಸಾಥ್ ನೀಡುವುದಾಗಿ ಹೇಳಿ ನಗುನಗುತ್ತಾ ರಮೇಶ್ ಜಾರಕಿಹೊಳಿ ಬೆನ್ನುತಟ್ಟಿದರು. ಸ್ಪೀಕರ್ ಕೆಲಕಾಲ ಆಗ ಸಭೆ ಮುಂದೂಡಿದರೂ ವಿಧಾನಸಭೆ ಸಭಾಂಗಣದಲ್ಲಿ ಇರುವ ಸಿಎಂ, ಸಚಿವರು, ಬಿಜೆಪಿ ಶಾಸಕರು ಇದ್ದು ಚರ್ಚೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.

    ಈ ಬೆನ್ನಲ್ಲೇ ಸದನದಿಂದ ಹೊರ ನಡೆದ ರಮೇಶ್ ಕುಮಾರ್ ಅವರು ನೇರವಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದರು. ಈ ವಿಚಾರ ಗೊತ್ತಾಗಿ ಕೂಡಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೌಡಾಯಿಸಿ, ರಮೇಶ್ ಕುಮಾರ್ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು.

    ಬಿಜೆಪಿ ಸುಧಾಕರ್ ಪರ ನಿಂತಿದ್ದು, ಕಾಂಗ್ರೆಸ್ ರಮೇಶ್ ಕುಮಾರ ಪರ ನಿಂತಿದೆ. ಉಭಯ ಪಕ್ಷಗಳು ನಾಳೆ ಸದನದಲ್ಲಿ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿವೆ.

    ಕಲಾಪದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸುಧಾಕರ್, ನನ್ನ ವಿರುದ್ಧ ಕಾಂಗ್ರೆಸ್‍ನವರು ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದಾರೆ. ನಾಳೆ ನಾವು ಎಲ್ಲ ಬಿಜೆಪಿ ಸದಸ್ಯರೂ ರಮೇಶ್ ಕುಮಾರ್ ಉಚ್ಛಾಟನೆಗೆ ನಿರ್ಧರಿಸಿದ್ದೇವೆ. ನಾಳೆ ಸದನದಲ್ಲಿ ರಮೇಶ್ ಕುಮಾರ್ ಉಚ್ಛಾಟನೆಗೆ ನಾವು ಒತ್ತಾಯಿಸುತ್ತೇವೆ ಎಂದರು.

  • ರೇವಣ್ಣನಿಗೆ ನೀವು ನಿಂಬೆಹಣ್ಣು ಕೊಟ್ಟು ಸಿಎಂ ಆದ್ರಾ? ಬಿಎಸ್‍ವೈ ಕಾಲೆಳೆದ ರಮೇಶ್ ಕುಮಾರ್

    ರೇವಣ್ಣನಿಗೆ ನೀವು ನಿಂಬೆಹಣ್ಣು ಕೊಟ್ಟು ಸಿಎಂ ಆದ್ರಾ? ಬಿಎಸ್‍ವೈ ಕಾಲೆಳೆದ ರಮೇಶ್ ಕುಮಾರ್

    ಬೆಂಗಳೂರು: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ನಿಂಬೆಹಣ್ಣು ಕೊಟ್ಟು ನೀವು ಸಿಎಂ ಆದ್ರಾ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪ್ರಶ್ನಿಸಿ, ಸದನದಲ್ಲಿ ನಗೆ ಹರಿಸಿದರು.

    ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಶಾಸಕ ಜಿ.ಟಿ.ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಟೀ ಮಾರಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಾಲ್ಯದಲ್ಲಿ ನಿಂಬೆಹಣ್ಣು ಮಾರಿ, ಮಾಜಿ ಸಿಎಂ ಸಿದ್ದರಾಮಯ್ಯನವರು ಎಮ್ಮೆ ಮೇಯಿಸಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ರೈತ ಕುಟುಂಬದಿಂದ ಬಂದು ಹಲವು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಆದರೂ ಭ್ರಷ್ಟಾಚಾರ, ಜಾತಿ ವ್ಯವಸ್ಥೆಯಲ್ಲಿ ಏನು ಬದಲಾಗಿಲ್ಲ, ಏಕೆ ಬದಲಾಗಿಲ್ಲ ಎಂದು ಪ್ರಶ್ನಿಸಿದರು.

    ಈ ವೇಳೆ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಅವರು ಮಧ್ಯಪ್ರವೇಶಿಸಿ, ಬಹುಶಃ ಅದೇ ನಿಂಬೆಹಣ್ಣನ್ನು ಸಿಎಂ ಯಡಿಯೂರಪ್ಪ ಅವರು ಮಾಜಿ ಸಚಿವ ರೇವಣ್ಣ ಅವರಿಗೆ ಕೊಟ್ಟಿರಬಹುದಾ? ಈ ಬಗ್ಗೆ ಅವರು ಸ್ವಲ್ಪ ಸ್ಪಷ್ಟನೆ ಕೊಡಲಿ ಎಂದು ಕಾಲೆಳೆದರು.

    ರಮೇಶ್ ಕುಮಾರ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈಗ ರೇವಣ್ಣ ಸದನದಲ್ಲಿ ಇಲ್ಲ, ಅವರು ಬಂದ ನಂತರ ಹೇಳಿ ಎಂದು ಸೂಚನೆ ನೀಡಿದರು. ಆಗ ರಮೇಶ್ ಕುಮಾರ್ ಅವರು, ಅಲ್ಲ… ರೇವಣ್ಣ ಅವರಿಗೆ ನಿಂಬೆಹಣ್ಣು ಕೊಟ್ಟು ನೀವು ಮುಖ್ಯಮಂತ್ರಿ ಆಗಿಬಿಟ್ರಲ್ಲಾ ಎಂದರು. ಈ ವೇಳೆ ಸದನ ನಗೆಗಡಲಲ್ಲಿ ತೇಲಿತು. ಸದನದಲ್ಲಿ ಇದ್ದರೂ ಸಿಎಂ ಯಡಿಯೂರಪ್ಪ ಅವರು ರಮೇಶ್ ಕುಮಾರ್ ಮಾತಿಗೆ ಪ್ರತಿಕ್ರಿಯಿಸಲಿಲ್ಲ.

  • ಸಂತೆಯಲ್ಲಿ ಬಂಡೂರು ಟಗರು ಖರೀದಿಸಿದ ರಮೇಶ್ ಕುಮಾರ್

    ಸಂತೆಯಲ್ಲಿ ಬಂಡೂರು ಟಗರು ಖರೀದಿಸಿದ ರಮೇಶ್ ಕುಮಾರ್

    ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲಿನ ಸಂತೆ ಸುತ್ತಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಬಂಡೂರು ತಳಿಯ ಟಗರನ್ನು ಖರೀದಿ ಮಾಡಿದ್ದಾರೆ.

    ಇಂದು ಕಿರುಗಾವಲಿನಲ್ಲಿ ನಡೆದ ಬಂಡೂರು ಕುರಿ ಖರೀದಿಗೆಂದು ಸಂತೆಗೆ ಬಂದಿದ್ದ ರಮೇಶ್‍ಕುಮಾರ್ ಅವರು, ಮೊದಲು ಕುರಿಗಾಗಿ ಸಂತೆ ಸುತ್ತಿದ್ದಾರೆ. ನಂತರ ದಳ್ಳಾಳಿಗಳ ಮೊರೆ ಹೋಗದ ರಮೇಶ್‍ಕುಮಾರ್ ಅವರು ನೇರವಾಗಿ ರೈತರ ಬಳಿ ಹೋಗಿ ಕುರಿ ಬಗ್ಗೆ ವಿಚಾರಿಸಿದ್ದಾರೆ.

    ರೈತ ಸ್ವಾಮಿ ಎಂಬವರ ಬಳಿ ಇದ್ದ ಬಂಡೂರು ತಳಿಯ ಟಗರನ್ನು 25 ಸಾವಿರ ರೂ. ಗೆ ಖರೀದಿಸಿದ್ದಾರೆ. ಬಂಡೂರು ತಳಿಯ ರಕ್ಷಣೆಗಾಗಿ ರಮೇಶ್‍ಕುಮಾರ್ ಬಂಡೂರು ಟಗರನ್ನು ಖರೀದಿ ಮಾಡಿದ್ದಾರೆ.

    ಈ ಹಿಂದೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಆಂಧ್ರದ ಮದನಪಲ್ಲಿಯ ಅಂಗಲಾ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿ ಸಂತೆಗಳಿಗೆ ಭೇಟಿ ನೀಡಿ ಕುರಿಗಳನ್ನು ಖರೀದಿಸಿದ್ದರು. ಈ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿ ಕೂಡ ಕುರಿಗಳನ್ನು ಖರೀದಿಸಿದ್ದರು.

  • ದೊರೆಸ್ವಾಮಿ ಆನೆಯೋ, ಹಂದಿನೋ ಯಾರಿಗೆ ಗೊತ್ತು- ನಾಲಿಗೆ ಹರಿಬಿಟ್ಟ ಯತ್ನಾಳ್

    ದೊರೆಸ್ವಾಮಿ ಆನೆಯೋ, ಹಂದಿನೋ ಯಾರಿಗೆ ಗೊತ್ತು- ನಾಲಿಗೆ ಹರಿಬಿಟ್ಟ ಯತ್ನಾಳ್

    – ನೀವು ರಾಜಕಾರಣಕ್ಕೆ ಯಾಕೆ ಸೇರಿದ್ರಿ, ನಿಮ್ಮದೇನಿತ್ತು ಇಲ್ಲಿ ಮೂಲ
    – ಎಚ್‍ಡಿಕೆಗೆ ಯತ್ನಾಳ್ ಪ್ರಶ್ನೆ?

    ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಆನೆಯೋ, ಹಂದಿನೋ ಯಾರಿಗೆ ಗೊತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಾಲಿಗೆ ಹರಿಬಿಟ್ಟಿದ್ದಾರೆ.

    ದೊರೆಸ್ವಾಮಿ ಪಾಕ್ ಏಜೆಂಟ್ ಎಂಬ ಹೇಳಿಕೆಯನ್ನು ಸಾಣೆಹಳ್ಳಿ ಪಂಡಿತರಾದ್ಯ ಶ್ರೀಗಳು ಸಹ ಖಂಡಿಸಿದ್ದರು. ಹಿರಿಯ ಹೋರಾಟಗಾರರ ಬಗ್ಗೆ ಹಲವರು ಮಾತನಾಡಿದ್ದಾರೆ. ಹೀಗಾಗಿ ಆನೆ ನಡೆಯುವಾಗ ನಾಯಿಗಳು ಬೊಗಳಿದರೆ ಏನೂ ಆಗಲ್ಲ ಎಂದು ಸಾಣೇಹಳ್ಳಿ ಶ್ರೀ ಹೇಳಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ್, ದೊರೆಸ್ವಾಮಿ ಆನೆಯೋ, ಹಂದಿನೋ ಯಾರಿಗೆ ಗೊತ್ತು ಎಂದು ಹೇಳಿಕೆ ನೀಡಿದ್ದಾರೆ.

    ದೊರೆಸ್ವಾಮಿ ಅವರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಯತ್ನಾಳ್ ಹುಟ್ಟಿದ್ದರೋ ಇಲ್ಲವೋ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದೊರೆಸ್ವಾಮಿ ಅವರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕುಮಾರಸ್ವಾಮಿ ಹುಟ್ಟಿದ್ರಾ? ಅಷ್ಟೇ ಅಲ್ಲದೆ ಊಟಕ್ಕೆ ಗತಿ ಇಲ್ಲದವರು ಸೇನೆಗೆ ಸೇರ್ತಾರೆ ಎಂದು ಹೇಳಿದ್ದ ಅವರಿಗೆ ನಾಚಿಕೆ ಆಗಬೇಕು. ಹಾಗಾದರೆ ನೀವು ಯಾಕೆ ರಾಜಕಾರಣಕ್ಕೆ ಸೇರಿದ್ರಿ? ನಿಮ್ಮದೇನಿತ್ತು ಮೂಲ? ನಿಮ್ಮ ತಂದೆಯವರು ವರ್ಕ್ ಇನ್ಸ್‌ಪೆಕ್ಟರ್ ಇದ್ರಾ? ನಿಮಗೆ ಸಾವಿರಾರು ಕೋಟಿ ಹೇಗೆ ಬಂತು? ನನ್ನ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

    ನಿಮ್ಮ ತಂದೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವಗೌಡ ಅವರೇನದಾರು ಸ್ವಾತಂತ್ರ್ಯ ಸೈನಿಕರೇ? ರಾಜಕಾರಣಿಗಳಲ್ಲಿ ಹೊಂದಾಣಿಕೆ ಇರಬಹುದು. ಆದ್ರೆ ಯತ್ನಾಳ್ ಜೊತೆ ಯಾರಿಗೂ ಹೊಂದಾಣಿಕೆ ಆಗಲು ಸಾಧ್ಯವಿಲ್ಲ ಎಂದು ಗುಡುಗಿದರು.

    ವೀರ ಸಾವರ್ಕರ್ ಅವರಷ್ಟು ದೊರೆಸ್ವಾಮಿ ಅವರು ಲಾಠಿ ಏಟು ತಿಂದಿದ್ದಾರಾ? ಅವರು ಯಾವ ವಯಸ್ಸಿನಲ್ಲಿ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿರಬಹುದು ಎಂದು ದೊರೆಸ್ವಾಮಿ ಅವರ ವಿರುದ್ಧೆ ಮತ್ತೊಮ್ಮೆ ಹರಿಹಾಯ್ದರು.

    ಪ್ರಧಾನಿ ನರೇಂದ್ರ ಮೋದಿ, ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮೊದಲು ಕ್ಷಮೆ ಬೇಡಲಿ. ರಾತ್ರಿ ಒಂದು, ಬೆಳಗ್ಗೆ ಒಂದು ಮಾತನಾಡುವ ಚಟ ಇರುವ ರಾಜಕಾರಣಿ ನಾನಲ್ಲ ಎಂದು ಹೇಳಿದರು.

    ಗೂಡ್ಸೆ ಸಂತತಿಯ ಯತ್ನಾಳ್ ಸದನದಲ್ಲಿ ಇರಲು ನಾಲಾಯಕ್ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಶಾಸಕರು, ರಮೇಶ್ ಕುಮಾರ್ ಅವರ ಇತಿಹಾಸ ಏನು, ಎಷ್ಟು ಭೂ ಕಬಳಿಕೆ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಬಹಳ ಸಾಚಾ ಎಂಬಂತೆ ಮಾತನಾಡುತ್ತಾರೆ. ಸತ್ಯಹರಿಶ್ಚಂದ್ರನ 19ನೇ ಸಂತತಿಯವರಂತೆ ಮಾತನಾಡುತ್ತಾರೆ. ಮೊದಲು ಅವರು ತಮ್ಮ ಮನೆ ಸ್ವಚ್ಛ ಮಾಡಿಕೊಳ್ಳಲಿ ಎಂದು ಗುಡುಗಿದರು.

    ನನ್ನ ಬಗ್ಗೆ ಮಾತಾಡುವ ನೈತಿಕತೆ ರಮೇಶ್ ಕುಮಾರ್ ಅವರಿಗೆ ಇಲ್ಲ. ಹಾಗೆಯೇ ನನ್ನ ಮೇಲೆ ನೀರಾವರಿ ಹೋರಾಟದ 23 ಕೇಸ್ ಗಳಿವೆಯೇ ಹೊರತು, ಭೂ ಕಬಳಿಕೆ, ಅತ್ಯಾಚಾರ, ನಕಲಿ ನೋಟ್ ಮಾಡಿರುವ ಪ್ರಕರಣಗಳಿಲ್ಲ. ರಮೇಶ್ ಕುಮಾರ್ ಅವರಿಂದ ಯಾವುದೇ ಆದರ್ಶ ತತ್ವ ಕಲಿಯುವ ಅವಶ್ಯಕತೆಯಿಲ್ಲ. ಯಾಕಂದ್ರೆ ನಾನು ಆರ್‍ಎಸ್‍ಎಸ್ ಅವರು ಏನ್ ಮಾಡ್ತಾರೆ ಎಂದು ಪ್ರಶ್ನಿಸಿದರು.

    ನಾನೇನು ದೇಶ ವಿರೋಧಿ ಅಲ್ಲ, ಪಾಕಿಸ್ತಾನ್ ಏಜೆಂಟ್ ಕೂಡ ಅಲ್ಲ. ದೇಶದ ಪರ ಮಾತನಾಡುತ್ತೇನೆ. ಯಾರ ಭಯವೂ ನನಗಿಲ್ಲ. ಪೊಲೀಸರು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರೆ ಎರಡನೇ ದೆಹಲಿ ಮಂಗಳೂರು ಆಗುತ್ತಿತ್ತು. ದೆಹಲಿಯಲ್ಲಿ ಪೊಲೀಸರಿಗೆ ಬಂದೂಕು ತೋರಿಸುತ್ತಿದ್ದಾರೆ. ಅದನ್ನು ವಿರೋಧಿಸುವುದನ್ನು ಬಿಟ್ಟು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.

    ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರೇನು ಪಾಕಿಸ್ತಾನಕ್ಕೆ ಜೈ ಅಂದಿದ್ದಾರಾ? ನಮ್ಮ ದೇಶದ ಒಂದು ಭಾಗಕ್ಕೆ ಜೈ ಎಂದಿದ್ದಾರೆ. ಅದರಲ್ಲಿ ತಪ್ಪೇನಿದೆ? ಹುಬ್ಬಳ್ಳಿ, ಬೆಂಗಳೂರಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕುವಾಗ ಕನ್ನಡಪರ ಹೋರಾಟಗಾರರು ಎಲ್ಲಿ ಹೋಗಿದ್ರಿ. ನಮ್ಮ ದೇಶದಲ್ಲಿರುವ ಒಂದು ಭಾಗಕ್ಕೆ ಜೈಕಾರ ಹಾಕುವುದರಲ್ಲಿ ತಪ್ಪೇನಿಲ್ಲ ಎಂದು ಸಚಿವರ ಪರ ಬ್ಯಾಟ್ ಬೀಸಿದರು.

  • ನನಗೆ ಟಿವಿ ನೋಡೋ ಅಭ್ಯಾಸವಿಲ್ಲ, ಬಜೆಟ್ ಬಗ್ಗೆ ಗೊತ್ತಿಲ್ಲ: ರಮೇಶ್ ಕುಮಾರ್

    ನನಗೆ ಟಿವಿ ನೋಡೋ ಅಭ್ಯಾಸವಿಲ್ಲ, ಬಜೆಟ್ ಬಗ್ಗೆ ಗೊತ್ತಿಲ್ಲ: ರಮೇಶ್ ಕುಮಾರ್

    ಕೋಲಾರ: ನಾನು ಪೇಪರ್ ಓದಿಲ್ಲ, ಟಿವಿ ನೋಡಿಲ್ಲ. ನೋಡದೆ ಕೇಂದ್ರ ಬಜೆಜ್ ಬಗ್ಗೆ ವ್ಯಾಖ್ಯಾನ ಮಾಡುವುದು ತಪ್ಪು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಇಂದು ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶನಿವಾರ ಆಗಿರುವ ಬಜೆಟ್ ಕುರಿತು ತಿಳಿದುಕೊಳ್ಳುತ್ತೇನೆ. ನನಗೆ ಟಿವಿ ನೋಡುವ ಅಭ್ಯಾಸವಿಲ್ಲ. ನಮ್ಮೂರಿಗೆ ಪೇಪರ್ ಬರುವುದಿಲ್ಲ. ನಾನು ಊರಲ್ಲಿದ್ದಾಗ ಟಿವಿ ಮತ್ತು ಪೇಪರ್ ನೋಡಲ್ಲ. ಇದರಿಂದ ಏನು ಅಂತ ಗೊತ್ತಿಲ್ಲ. ಸಾಯಂಕಾಲ ಕುಳಿತುಕೊಂಡು ನೋಡಬೇಕು ಎಂದರು.

    ಯಾವುದೇ ವಿಷಯವನ್ನು ಅಧ್ಯಯನ ಮಾಡದೆ ಹೇಳುವುದು ಮೂರ್ಖತನ. ಇದೇ ವೇಳೆ ಸಚಿವ ಸಂಪುಟದ ಕುರಿತು ಕೇಳಿದಾಗ, ಅವರ ಅನುಕೂಲವಾಗುವ ಹಾಗೆ ಮಾಡಲಿ. ಸಂಪುಟ ವಿಚಾರ ಪಕ್ಷದ ಆಂತರಿಕ ವಿಚಾರ. ಒಟ್ಟಿನಲ್ಲಿ ರಾಜಕ್ಕೆ ಅನುಕೂಲವಾಗಬೇಕು ಎಂದು ತಿಳಿಸಿದರು.

    ರಮೇಶ್ ಕುಮಾರ್ ಅವರು ಗ್ರಾಮದಲ್ಲಿ ಕುರಿ ಮೇಯಿಸುತ್ತಿದ್ದಾರೆ ಎಂಬ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಸಾರ್ವಜನಿಕ ಜೀವನದಲ್ಲಿ ಎಲ್ಲಕ್ಕೂ ಸಿದ್ಧವಾಗಿರಬೇಕು. ನಾನು ಯಾರು ವಿರುದ್ಧವಿಲ್ಲ. ನಾನು ಹೇಗೆ ಬದುಕುಬೇಕು ನನ್ನ ಇಷ್ಟವೆಂದು ತಿಳಿಸಿದರು. ಸುಧಾಕರ್ ಅವರಿಗೆ ಮಾತನಾಡುವ ಹಕ್ಕು ಸಂವಿಧಾನ ನೀಡಿದೆ. ಅವರು ಹೇಳುವ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆ ನೀಡಲ್ಲ. ನಾನು ಯಾರ ಮೇಲೆ ತೊಡೆ ತಟ್ಟಲ್ಲ, ತಲೆನ್ನು ತಟ್ಟಲ್ಲ ಎಂದರು.

  • ಮುಸ್ಲಿಮರು ಭಾರತ ಮಾತೆಯ ಮಕ್ಕಳು: ರಮೇಶ್ ಕುಮಾರ್

    ಮುಸ್ಲಿಮರು ಭಾರತ ಮಾತೆಯ ಮಕ್ಕಳು: ರಮೇಶ್ ಕುಮಾರ್

    ಉಡುಪಿ: ನಗರದಲ್ಲಿ ಪೌರತ್ವ ಕಿಚ್ಚು ಸದ್ದುಮಾಡಿದೆ. ಸಹಬಾಳ್ವೆ ಸಂಘಟನೆ ನಗರದ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಸಿಎಎ ವಿರುದ್ಧ ಸಮಾವೇಶ ನಡೆಯಿತು. ಪ್ರಗತಿಪರ, ದಲಿತ ಮುಸಲ್ಮಾನ ಮತ್ತು ಕಾಂಗ್ರೆಸ್ ಜಂಟಿಯಾಗಿ ಕೇಂದ್ರದ ಪೌರತ್ವ ಕಾಯ್ದೆ ವಿರುದ್ಧ ಸಮಾವೇಶ ಆಯೋಜಿಸಿತು.

    ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕಾಯ್ದೆ ತಂದ ಮೋದಿ ಸರ್ಕಾರಕ್ಕೆ ವ್ಯಂಗ್ಯವಾಗಿ ಧನ್ಯವಾದ ಹೇಳಿದರು. ಸ್ವಾತಂತ್ರ್ಯ ಹೋರಾಟ ನೋಡಿಲ್ಲ, ಸಾಯೋ ಕಾಲಕ್ಕೆ ಇಷ್ಟು ಧ್ವಜಗಳನ್ನು ನೋಡುವ ಅವಕಾಶವಾಗಿದೆ. ಕೇಸರಿ ಬಟ್ಟೆ ಧ್ವಜ ನೋಡಿ ಸಾಕಾಗಿತ್ತು ಎಂದು ಕುಟುಕಿದರು.

    ಮುಸ್ಲಿಮರನ್ನು ಅನುಮಾನದಿಂದ ನೋಡಬೇಡಿ, ಭಾರತ ಮಾತೆ ಕಣ್ಣೀರು ಹಾಕುತ್ತಾಳೆ. ಮುಸ್ಲಿಮರು ಭಾರತ ಮಾತೆಯ ಮಕ್ಕಳು ಎಂದು ಭಾವನಾತ್ಮಕವಾಗಿ ಮಾತನಾಡಿದರು.

    ಬಿಜೆಪಿಯವರಿಗೆ ಭಾರತದ ಇತಿಹಾಸದ ಪರಿಚಯ ಇಲ್ಲ. ಭಾರತದ ಇತಿಹಾಸ ಬಿಜೆಪಿಗರಿಗೆ ಬೇಕಾಗಿಯೂ ಇಲ್ಲ, ನಾಥುರಾಮ ಗೋಡ್ಸೆ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಕಲಿಸಲು ನಾವು ಬಿಡಲ್ಲ ಎಂದು ಗುಡುಗಿದರು.

    ಅಮೆರಿಕದಲ್ಲಿ ಜನಿಸಿದ್ರೆ ಪೌರತ್ವ ಸಿಗುತ್ತದೆ. ನಮ್ಮ ದೇಶದ ಜನಕ್ಕೆ ಪೌರತ್ವ ಗಗನ ಕುಸುಮವಾಗುತ್ತಿದೆ. 1955ರಲ್ಲಿ ಜಾತಿ ಧರ್ಮದ ವಿಚಾರದಲ್ಲಿ ಪೌರತ್ವ ಕಾಯ್ದೆ ಮಾಡಿಲ್ಲ, ನಿರಾಶ್ರಿತರು ನುಸುಳುಕೋರರು ಎಂಬ ಎರಡು ವಿಧ ಇದೆ. ಪೌರತ್ವ ಕಾಯ್ದೆಯನ್ನು ಧರ್ಮಾಧಾರಿತ ಮಾಡಿದ್ದಾರೆ. ಮೋದಿ ಸರ್ಕಾರ ಸಂವಿಧಾನ ವಿರೋಧಿ ಎಂದು ಟೀಕಿಸಿದರು.

    ಸ್ವಾತಂತ್ರ್ಯ ನಂತರ ಸಂವಿಧಾನ ಮತ್ತು ಜನರ ನಡುವೆ ತಿಕ್ಕಾಟ ಶುರುವಾಗಿದೆ. ಇದೇ ತರ ಮುಂದುವರಿದರೆ ದೇಶದ ಜಾತಕವನ್ನು ಜನರೇ ಬದಲು ಮಾಡುತ್ತಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

    ಪ್ರಥಮ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಪೊಲೀಸ್ ಪರ್ಮಿಷನ್ ಇರಲಿಲ್ಲ. ಆದರೂ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

  • ರಮೇಶ್ ಕುಮಾರ್ ಏನೋ ಕುರಿ ವ್ಯಾಪಾರ ಮಾಡ್ತವರಂತೆ: ಸುಧಾಕರ್ ಟೀಕೆ

    ರಮೇಶ್ ಕುಮಾರ್ ಏನೋ ಕುರಿ ವ್ಯಾಪಾರ ಮಾಡ್ತವರಂತೆ: ಸುಧಾಕರ್ ಟೀಕೆ

    ಚಿಕ್ಕಬಳ್ಳಾಪುರ: ಈಗ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಏನೋ ಕುರಿ ವ್ಯಾಪಾರ ಮಾಡುತ್ತಿದ್ದಾರಂತೆ ಎಂದು ಶಾಸಕ ಸುಧಾಕರ್ ಟೀಕಿಸಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಬಳಿ ನೂತನ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಬೆಂಬಲಿಗರ ಸಮ್ಮುಖದಲ್ಲಿ ಭೂಮಿ ಪೂಜೆ ನೇರವೇರಿಸಿ ಸುಧಾಕರ್ ಅವರು ಮಾತನಾಡಿದರು. ಬೆಂಬಲಿಗರನ್ನ ಉದ್ದೇಶಿಸಿ ಮಾತನಾಡುತ್ತ ಸುಧಾಕರ್ ಅವರು ರಮೇಶ್ ಕುಮಾರ್ ವಿರುದ್ಧ ಕಿಡಿಕಾರಿದರು. ಈಗ ರಮೇಶ್ ಕುಮಾರ್ ಕುರಿ ವ್ಯಾಪಾರ ಮಾಡುತ್ತಿದ್ದಾರಂತೆ ಎಂದು ಬೆಂಬಲಿಗರು ಹೇಳಿದ್ದನ್ನು ಪುನರುಚ್ಚರಿಸಿದ ಸುಧಾಕರ್ ಅವರು, ‘ಹಾ ಏನೋ ಕುರಿಗಳ ವ್ಯಾಪಾರ ಮಾಡ್ತಾವರಂತೆ, ನನಗೆ ಗೊತ್ತಿಲ್ಲ’ ಎಂದು ನಗುತ್ತಾ ವ್ಯಂಗ್ಯವಾಡಿದರು.

    ಸುಪ್ರೀಂ ಕೋರ್ಟ್ ರಮೇಶ್ ಕುಮಾರ್ ಗೆ ತಕ್ಕಶಾಸ್ತಿ ಮಾಡಿದ್ದು, ಅದಕ್ಕಿಂತ ಹೆಚ್ಚಾಗಿ ನಾನು ನಂಬಿದ ನೀವು ತಕ್ಕಶಾಸ್ತಿ ಮಾಡಿದ್ದೀರಿ ಅಂತ ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದರು. ರಮೇಶ್ ಕುಮಾರ್ ನಮ್ಮನ್ನ ಅನರ್ಹರನ್ನಾಗಿ ಮಾಡಿದರು. 4 ವರ್ಷ ನಾವೆಲ್ಲಾ ಮನೆಯಲ್ಲಿರಬೇಕು. ಮತ್ತೆ ಚುನಾವಣೆಗೆ ನಿಲ್ಲಬಾರದು ಅಂತ ಅನರ್ಹರನ್ನಾಗಿ ಮಾಡಿದರು. ಕಾನೂನು ಬಿಟ್ಟು ರಮೇಶ್ ಕುಮಾರ್ ಅಂಬೇಡ್ಕರ್ ಆಗಲು ಹೊರಟರು. ಡಾ ಅಂಬೇಡ್ಕರ್ ಬರೆದಿರೋ ಸಂವಿಧಾನವೇ ಬೇರೆ, ಇವರು ಸಂವಿಧಾನವನ್ನ ಅರ್ಥೈಸಿದ್ದೇ ಬೇರೆ ಎಂದು ವಾಗ್ದಾಳಿ ನಡೆಸಿದರು.

    ಈ ಹಿಂದೆ ಆಂಧ್ರದ ಮದನಪಲ್ಲಿಯ ಅಂಗಲಾ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿ ಸಂತೆಗಳಿಗೆ ಭೇಟಿ ನೀಡಿ ರಮೇಶ್ ಕುಮಾರ್ ಕುರಿಗಳನ್ನು ಖರೀದಿಸಿದ್ದರು. ಆ ಬಳಿಕ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಚೇಳೂರು ಸಂತೆಯಲ್ಲಿ ಕುರಿಗಳನ್ನು ಖರೀದಿಸಿದ್ದರು. ಆಗ ರಾಜಕಾರಣಕ್ಕಿಂತ ಕುರಿ ಸಾಕುವುದು ಲೇಸು ಅಂತಲೋ ಏನೋ ಇತ್ತೀಚೆಗೆ ರಮೇಶ್ ಕುಮಾರ್ ಕುರಿ ಸಂತೆಗಳಲ್ಲಿ ಆಗಮಿಸಿ ಕುರಿ ಕೊಂಡುಕೊಳ್ಳುವ ಕಾಯಕ ಮಾಡುತ್ತಿದ್ದಾರೆ ಎಂಬ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು.

  • ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ರಮೇಶ್ ಕುಮಾರ್

    ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ರಮೇಶ್ ಕುಮಾರ್

    ಕೋಲಾರ: ರಾಯಲಸೀಮ ಶ್ರೀನಿವಾಸಪುರದಲ್ಲಿ ಮತ್ತೆ ಸಂಪ್ರದಾಯ ಬದ್ಧ ವೈರಿಗಳ ಕಾಳಗ ಶುರುವಾಗಿದೆ. ಜೆಡಿಎಸ್‍ನ ಮಾಜಿ ಶಾಸಕ ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ.

    ವಿಧಾನಸೌಧದಲ್ಲಿ ಒಂದು ತಿಂಗಳ ಹಿಂದಯೆ ಸುದ್ದಿಗೋಷ್ಠಿ ನಡೆಸಿದ್ದ ಜೆ.ಕೆ.ವೆಂಕಟಶಿವಾರೆಡ್ಡಿ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ರಮೇಶ್ ಕುಮಾರ್ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ರಮೇಶ್ ಕುಮಾರ್ ಅವರು ಶ್ರೀನಿವಾಸಪುರದ ಜೆಎಂಎಫ್‍ಸಿ ಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ.

    ವಕೀಲರಾದ ಶಂಕರಪ್ಪ ಹಾಗೂ ಸುಂದರ್ ಅವರೊಂದಿಗೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೀನಿವಾಸಪುರದ ಜೆಎಂಎಫ್‍ಸಿ ಕೋರ್ಟ್ ಗೆ  ಆಗಮಿಸಿದ ರಮೇಶ್ ಕುಮಾರ್ ಅವರು ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ವಿಶೇಷವೆಂದರೆ ಜೆಡಿಎಸ್‍ನ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ 40 ವರ್ಷಗಳಿಂದ ರಾಜಕೀಯವಾಗಿ ಸಾಂಪ್ರದಾಯಿಕ ಎದುರಾಳಿಗಲಾಗಿದ್ದಾರೆ.

  • ಕುರಿಗಳನ್ನು ಖರೀದಿಸಿದ ರಮೇಶ್ ಕುಮಾರ್

    ಕುರಿಗಳನ್ನು ಖರೀದಿಸಿದ ರಮೇಶ್ ಕುಮಾರ್

    ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಇತ್ತೀಚೆಗಷ್ಟೇ ಆಂಧ್ರದ ಮದನಪಲ್ಲಿಯ ಅಂಗಲಾ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿ ಸಂತೆಗಳಿಗೆ ಭೇಟಿ ನೀಡಿ ಕುರಿಗಳನ್ನು ಖರೀದಿಸಿದ್ದರು. ಇದರ ಬೆನ್ನೆಲ್ಲೇ ಅವರು ಇಂದು ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಕುರಿಗಳನ್ನು ಖರೀದಿಸಿದ್ದಾರೆ.

    ರಮೇಶ್ ಕುಮಾರ್ ಅವರು ಇಂದು ಬೆಳ್ಳಂಬೆಳಗ್ಗೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ಸಂತೆಯಲ್ಲಿ ಆಗಮಿಸಿದ್ದರು. ಪ್ರತಿ ಶುಕ್ರವಾರ ಕರ್ನಾಟಕ- ಆಂಧ್ರ ಗಡಿಭಾಗದಲ್ಲಿ ಅಂಚಿನಲ್ಲಿರುವ ಚೇಳೂರಿನಲ್ಲಿ ಕುರಿ-ಮೇಕೆಗಳ ಮಾರಾಟದ ಸಂತೆ ಬಲು ಜೋರಾಗಿ ಸಾಗುತ್ತದೆ. ಇದರಿಂದ ನೆರೆಯ ಆಂಧ್ರದ ರೈತರು ಕುರಿ ಮೇಕೆಗಳ ಜೊತೆಗೆ ಸಂತೆಗೆ ಆಗಮಿಸುತ್ತಾರೆ.

    ಇಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಹ ಈ ಸಂತೆಗೆ ಭೇಟಿ ನೀಡಿದ್ದು, ಅವರ ಕಡೆಯವರು ಕುರಿಗಳ ಖರೀದಿಯಲ್ಲಿ ತೊಡಗಿದರು. ರಮೇಶ್ ಕುಮಾರ್ ಕಂಡ ರೈತರಿಗೆ ಒಂದು ಕಡೆ ಅಚ್ಚರಿ ಆದರೆ ಮತ್ತೊಂದು ಕಡೆ ಸಂತಸ. ಮಾಜಿ ಸ್ಪೀಕರ್, ಶಾಸಕ, ಮಂತ್ರಿಗಳಾಗಿದ್ದವರು ಕುರಿ ಖರೀದಿಸಲು ಬಂದವರಲ್ಲ ಎಂದು ಅಚ್ಚರಿಪಟ್ಟರು.

    ರಮೇಶ್ ಕುಮಾರ್ ಎಷ್ಟು ಸರಳ ವ್ಯಕ್ತಿ ಎಂದು ರೈತರು ಅವರ ಜೊತೆ ಮಾತಿನಲ್ಲಿ ನಿರತರಾಗಿದರು. ರಾಜಕಾರಣಕ್ಕಿಂತ ಕುರಿ ಸಾಕುವುದು ಲೇಸು ಅಂತಲೋ ಏನೋ ಇತ್ತೀಚೆಗೆ ರಮೇಶ್ ಕುಮಾರ್ ಕುರಿ ಸಂತೆಗಳಲ್ಲಿ ಆಗಮಿಸಿ ಕುರಿ ಕೊಂಡುಕೊಳ್ಳುವ ಕಾಯಕ ಮಾಡುತ್ತಿದ್ದಾರೆ ಎಂದು ಕೆಲ ರೈತರು ಮಾತನಾಡುತ್ತಿದ್ದರು.

  • ಸಿಎಎ, ಎನ್‌ಆರ್‌ಸಿ ವಿರೋಧಿಸಿ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಹೋರಾಟ

    ಸಿಎಎ, ಎನ್‌ಆರ್‌ಸಿ ವಿರೋಧಿಸಿ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಹೋರಾಟ

    – ಪ್ರತಿಭಟನೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭಾಗಿ

    ಚಿಕ್ಕಬಳ್ಳಾಪುರ: ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಮುಸ್ಲಿಂ ಪೋರಂ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ ಮುಸ್ಲಿಂ ಭಾಂಧವರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಡಳಿತ ಭವನದ ಬಳಿ ಜಮಾಯಿಸಿ ಪ್ರತಿಭಟನಾ ಧರಣಿ ನಡೆಸಿರು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಕಾರರು ಜಿಲ್ಲಾಡಳಿತ ಭವನದ ಆವರಣದ ತುಂಬಾ ತುಂಬಿ ತುಳುಕಿದಿರು. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಮುಸ್ಲಿಂ ವಿರೋಧಿ ನೀತಿ ತಾಳಿದ್ದು ಮುಸ್ಲಿಂ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿದೆ ಎಂದು ಮುಖಂಡರು ಕೇಂದ್ರ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದರು.

    ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುವ ಹುನ್ನಾರ ಮಾಡಿದ್ದಾರೆ. ಹೀಗಾಗಿ ಇಂತಹ ದೇಶ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿದ್ದಾರೆ ಎಂದು ಸಿಪಿಐ ಮುಖಂಡ ಜಿ.ವಿ ಶ್ರೀರಾಮರೆಡ್ಡಿ ಆಕ್ರೋಶ ಭರಿತ ಭಾಷಣ ಮಾಡಿದರು.

    ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂ. ಅಂಜನಪ್ಪ ಮುಖಂಡರಾದ ಯಲವಳ್ಳಿ ರಮೇಶ್ ಕುಮಾರ್, ಸೇರಿದಂತೆ ನವೀನ್ ಕಿರಣ್ ಭಾಗವಹಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೇ ವೇಳೆ ಪ್ರತಿಭಟನೆಗೆ ತಡವಾಗಿ ಆಗಮಿಸಿದ ಮಾಜಿ ಸಚಿವ ಶಿವಶಂಕರರೆಡ್ಡಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಹ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

    ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಗೆ ಕಾಂಗ್ರೆಸ್ ನಾಯಕರೇ ಕಾರಣ ಎಂಬ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಮಾಜಿ ಸ್ಪೀಕರ್ ಸುರೇಶ್ ಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಇಂತಹ ವಿಷಯಗಳಲ್ಲಿ ಹುಡುಗಾಟಿಕೆ ಆಡೋದಕ್ಕಾತ್ತಾಗುತ್ತಾ? ನಾವು ಸಾರ್ವಜನಿಕ ಜೀವನದಲ್ಲಿ ಇರುವವರು ಎಲ್ಲವನ್ನೂ ರಾಜಕೀಯವಾಗಿ ಪರಿಗಣಿಸಬಾರದು, ಮನುಷ್ಯತ್ವ ರೂಢಿಸಿಕೊಳ್ಳಬೇಕೆಂದು ಸಂಸದ ಸಿಂಹಗೆ ತೀಕ್ಷ್ಣ ತಿರುಗೇಟು ನೀಡಿದರು.

    ರಾಜ್ಯದಲ್ಲಿ ಇಬ್ಬರು ಅಮಾಯಕ ಜೀವಗಳು ಬಲಿಯಾದವು ಎಂದು ಮರುಕ ವ್ಯಕ್ತಪಡಿಸಿದ ಮಾಜಿ ಸ್ಪೀಕರ್, ಪೌರತ್ವ ಕಾಯ್ದೆ ಜಾರಿಗೆ ಜನ ಬೀದಿಗೆ ಬಂದಿದ್ರಾ? ಜನರನ್ನು ಬೀದಿಗೆ ತಳ್ಳಿದ್ದು ಯಾರು? ಪೌರತ್ವ ಕಾಯ್ದೆ ತಿದ್ದುಪಡಿ ಅವಶ್ಯಕತೆ ಇತ್ತಾ? ಮಾಡದಿದ್ರೆ ದೇಶಕ್ಕೇನಾದರೂ ಅನಾಹುತವಾಗ್ತಿತ್ತಾ? ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ದೇಶ ನಡೆಸುವ ಸ್ಥಿತಿ ಇದೇನಾ? ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದರು.

    ಪೌರತ್ವ ಕಾಯ್ದೆ ಅಗತ್ಯತೆ ಇದ್ದಿದ್ದರೆ ಸ್ವಲ್ಪ ತಾಳ್ಮೆಯಿಂದ ಮಾಡಬೇಕಾಗಿತ್ತು. ದೇಶದ ಅಭಿವೃದ್ಧಿ ಮಾಡದೇ, ಬಿಜೆಪಿ ತಮ್ಮ ತಪ್ಪುಗಳನ್ನ ಮುಚ್ಚಿಕೊಳ್ಳಲು ಈ ರೀತಿಯ ಕಾಯ್ದೆಗಳನ್ನ ಜಾರಿಗೆ ತರುತ್ತಿದ್ದಾರೆ ಎಂದು ರಮೇಶ್ ಕುಮಾರ್ ಟೀಕಿಸಿದರು. ದೇಶದ ಸಂಸತ್ತಿನಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಕಾಂಗ್ರೆಸ್ ಪಕ್ಷ ಶಕ್ತಿಹೀನವಾಗಿದೆ. ಇಂತಹ ಸನ್ನಿವೇಶದಲ್ಲಿ ದೇಶವ್ಯಾಪ್ತಿ ಜನ ಬೀದಿಗೆ ಬರುವುದಕೆ ಕಾಂಗ್ರೆಸ್ ಕಾರಣ ಎಂದರೆ ಒಪ್ಪೋ ಮಾತಾ? ಎಂದು ಪ್ರಶ್ನಿಸಿದರು.