Tag: Ramesh Kumar

  • ಉಪಚುನಾವಣೆಯಲ್ಲಿ ಜನರು ಕಾಂಗ್ರೆಸ್ ಬೇಡವೆಂದು ತೀರ್ಪು ನೀಡಿದ್ದಾರೆ: ರಮೇಶ್ ಕುಮಾರ್

    ಉಪಚುನಾವಣೆಯಲ್ಲಿ ಜನರು ಕಾಂಗ್ರೆಸ್ ಬೇಡವೆಂದು ತೀರ್ಪು ನೀಡಿದ್ದಾರೆ: ರಮೇಶ್ ಕುಮಾರ್

    – ಇವಿಎಂ ಯಂತ್ರದ ಮೂಲಕವೇ ನಾನು ಗೆದ್ದಿರುವೆ
    – ಬಾಗಿನ ಅರ್ಪಿಸಿ ಭಾವುಕರಾದ ಮಾಜಿ ಸ್ಪೀಕರ್

    ಕೋಲಾರ: ಬಿಹಾರ ಚುನಾವಣೆ ಮತ್ತು ರಾಜ್ಯ ಉಪಚುನಾವಣೆಯಲ್ಲಿ ಜನರು ಕಾಂಗ್ರೆಸ್ ಬೇಡವೆಂದು ತೀರ್ಪು ನೀಡಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ.

    ಇಂದು ಕೋಲಾರದಲ್ಲಿ ಮಾತನಾಡಿದ ಅವರು, ಇವಿಎಂ ಯಂತ್ರದ ಮೂಲಕವೇ ನಾನು ಗೆದ್ದಿರುವೆ. ದುಡುಕಿ ಮಾತನಾಡುವುದು, ಆವೇಷದಿಂದ ಮಾತಾಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರು ಚೆನ್ನಾಗಿಯೇ ಇದ್ದಾರೆ ಎಂದರು.

    ಕೋಲಾರದ ಕೆ.ಸಿ.ವ್ಯಾಲಿ ನೀರು ಅಮ್ಮೇರಹಳ್ಳಿ ಕೆರೆ ತುಂಬಿ ಕೋಲಾರಮ್ಮ ಕೆರೆಗೆ ಹರಿದ ಹಿನ್ನೆಲೆ, ಅಮ್ಮೇರಹಳ್ಳಿ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಬಾವುಕರಾಗಿ ಕಣ್ಣೀರು ಹಾಕಿದರು. ಕೋಲಾರದ ಹೊರವಲಯದಲ್ಲಿರುವ ಅಮ್ಮೇರಹಳ್ಳಿ ಕೆರೆ ಕೆ.ಸಿ.ವ್ಯಾಲಿ ಯೋಜನೆಡಿಯಲ್ಲಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಇಂದು ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.

    ಈ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ನಾಗೇಶ್, ಸಂಸದರು ಸೇರಿದಂತೆ ಶಾಸಕರು ಭಾಗಿಯಾಗಿದ್ದರು. ಕೆ.ಸಿ.ವ್ಯಾಲಿ ಯೋಜನೆಯ ರೂವಾರಿ ಕೆ.ಆರ್.ರಮೇಶ್ ಕುಮಾರ್ ಅವರಿಗೆ ಕಾಣದ ಕೈಗಳು ಸಾಕಷ್ಟು ತೊಂದರೆ ಕೊಟ್ಟರು ಜಗ್ಗದೆ ಯೋಜನೆ ಅನುಷ್ಟಾನಗೊಳಿಸಿದ್ದಾರೆಂದು ಬಣ್ಣಿಸಿದ್ದಕ್ಕೆ ಅವರು ಪಟ್ಟ ಕಷ್ಟ ನೆನೆದು ಕಣ್ಣೀರಾಕಿದರು. ಯೋಜನೆ ಅನುಷ್ಟಾನಕ್ಕೆ ಹಗಲಿರುಳು ರಮೇಶ್ ಕುಮಾರ್ ಶ್ರಮಿಸಿದರೆಂದು ಎಂಎಲ್‍ಸಿ ನಸೀರ್ ಅಹಮದ್ ಬಣ್ಣಿಸಿದರು.

  • 15 ವರ್ಷಗಳ ಬಳಿಕ ತುಂಬಿದ ಕೋಲಾರದ ಕೆರೆ- ನೀರಲ್ಲಿ ಕುಣಿದು ಕುಪ್ಪಳಿಸಿದ ಬಯಲುಸೀಮೆ ಜನ

    15 ವರ್ಷಗಳ ಬಳಿಕ ತುಂಬಿದ ಕೋಲಾರದ ಕೆರೆ- ನೀರಲ್ಲಿ ಕುಣಿದು ಕುಪ್ಪಳಿಸಿದ ಬಯಲುಸೀಮೆ ಜನ

    – ರಮೇಶ್ ಕುಮಾರ್ ಸೇರಿ ಮೂರು ಪಕ್ಷದ ಗಣ್ಯರಿಂದ ಬಾಗಿನ ಅರ್ಪಣೆ

    ಕೋಲಾರ: ನದಿ, ನಾಲೆಗಳಿಲ್ಲದ ಬರಗಾಲದ ಜಿಲ್ಲೆ, ಮಳೆ ಬರುವುದೇ ಅಪರೂಪ. ಪ್ರತಿ ವರ್ಷ ಯಾವಾಗ ಮಳೆ ಬರುತ್ತೋ ಎಂದು ಜನ ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆ ರಾತ್ರೋರಾತ್ರಿ ಸುಂದರ, ನಯನ ಮನೋಹರ, ರಮಣೀಯ ಸ್ಥಳವನ್ನು ಸೃಷ್ಟಿಸಿದೆ. ಈ ಸ್ಥಳವನ್ನು ನೋಡಲು ಜಿಲ್ಲೆಯ ನಾನಾ ಕಡೆಗಳಿಂದ ಸಾವಿರಾರು ಜನರು ಬಂದಿದ್ದು, ರಾಜಕಾರಣಿಗಳು, ಅಧಿಕಾರಿಗಳ ದಂಡು ಸಹ ಬೀಡು ಬಿಟ್ಟಿದೆ.

    ಮಳೆಯಿಂದಾಗಿ ಕೋಲಾರ ತಾಲೂಕಿನ ಎಸ್.ಅಗ್ರಹಾರ ಕೆರೆ 15 ವರ್ಷಗಳ ಬಳಿಕ ಈ ಬಾರಿ ತುಂಬಿದ್ದು, ಸ್ಥಳೀಯರ ಮೊಗದಲ್ಲಿ ಮಂದಹಾಸ ಮೂಡಿದೆ. ನದಿ, ನಾಲೆಗಳಿಲ್ಲದ ಜಿಲ್ಲೆಗೆ ಇಂತಹ ಬೃಹತ್ ಕೆರೆಗಳೇ ಜೀವಾಳ, ಹೀಗಿರುವಾಗ ಕಳೆದ ಹದಿನೈದು ವರ್ಷಗಳಿಂದ ಸರಿಯಾದ ಮಳೆ ಇಲ್ಲದೆ ಒಣಗಿ ಹೋಗಿದ್ದ ಎಸ್.ಅಗ್ರಹಾರ ಕೆರೆಗೆ ಸದ್ಯ ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ನೀರು ಹರಿಸಲಾಗುತ್ತಿದೆ.

    ಇದರ ಜೊತೆಗೆ ಇತ್ತೀಚೆಗೆ ಜಿಲ್ಲೆಯಲ್ಲಿ ಒಳ್ಳೆಯ ಮಳೆಯಾದ ಪರಿಣಾಮ ಸುಮಾರು 1,200 ಎರಕೆಯಷ್ಟು ವಿಸ್ತೀರ್ಣ ಹೊಂದಿರುವ ಅಗ್ರಹಾರ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಈ ವಿಷಯ ತಿಳಿದ ಜಿಲ್ಲೆಯ ಜನರು, ಬರದ ಭೂಮಿಯಲ್ಲಿ ಇಂಥಹದ್ದೊಂದು ನಯನ ಮನೋಹರ ದೃಷ್ಯಗಳನ್ನು ಸವಿಯಲು ಸಾವಿರಾರು ಸಂಖ್ಯೆಯಲ್ಲಿ ತಂಡೋಪ ತಂಡವಾಗಿ ಅಗ್ರಹಾರ ಕೆರೆಯತ್ತ ಹರಿದು ಬರುತ್ತಿದ್ದಾರೆ. ಬರದ ನಾಡಲ್ಲಿ ಸುಂದರ ಜಲಧಾರೆಯನ್ನು ಹರಿಯುವುದನ್ನು ಅನುಭವಿಸುತ್ತಿದ್ದಾರೆ. ಇದೇ ವೇಳೆ ಹರಿಯುತ್ತಿರುವ ನೀರಿಗೆ ಜನಪ್ರತಿನಿಧಿಗಳು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ್ದಾರೆ.

    ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಅಂತರ್ಜಲ ವೃದ್ಧಿಸುವ ಕೆ.ಸಿ.ವ್ಯಾಲಿ ಯೋಜನೆಯಿಂದ ಈಗಾಗಲೇ ಜಿಲ್ಲೆಯಲ್ಲಿ 75 ಕೆರೆಗಳು ತುಂಬಿವೆ. ಆದರೆ ಜಿಲ್ಲೆಯ ಅತಿ ದೊಡ್ಡ ಎಸ್.ಆಗ್ರಹಾರ ಕೆರೆ ತುಂಬಿದ್ದು ಜಿಲ್ಲೆಯ ಜನರಲ್ಲಿ ಪರಮಾನಂದವನ್ನುಂಟು ಮಾಡಿದೆ. ಜಿಲ್ಲೆಯ ಅತಿ ದೊಡ್ಡ ಕೆರೆಗಳಲ್ಲಿ ಇದೂ ಒಂದು. ಹೀಗಾಗಿ ತುಂಬಿ ಹರಿಯುತ್ತಿದ್ದ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲು ಪಕ್ಷಾತೀತವಾಗಿ ರಾಜಕಾರಣಿಗಳ ದಂಡು ಡೋಲು ವಾದ್ಯ ಸಮೇತ ಆಗಮಿಸಿತ್ತು.

    ಮಾಜಿ ಸ್ಪೀಕರ್ ರಮೇಶ್‍ಕುಮಾರ್, ಶಾಸಕ ಶ್ರೀನಿವಾಸಗೌಡ, ಮಾಜಿ ಸಚಿವ ಕೃಷ್ಣ ಭೈರೇಗೌಡ, ಸಂಸದ ಮುನಿಸ್ವಾಮಿ ಹೀಗೆ ಮೂರು ಪಕ್ಷಗಳ ಮುಖಂಡರು ಒಟ್ಟಾಗಿ ಆಗಮಿಸಿ ಅಗ್ರಹಾರ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ವೇಳೆ ಮಾತನಾಡಿದ ಮುಖಂಡರು ಇದೊಂದು ಸುಂದರ ಪ್ರವಾಸಿ ತಾಣವಾಗಿಸಿ ಅಭಿವೃದ್ಧಿ ಪಡಿಸಬೇಕೆಂದು ಅಭಿಪ್ರಾಯ ಪಟ್ಟರು. ಜೊತೆಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುತ್ತಿರುವ ಯೋಜನೆ ದೇಶಕ್ಕೆ ಹಾಗೂ ವಿಶ್ವಕ್ಕೆ ಮಾದರಿ ಎಂದರು.

    ಬರದ ನಾಡು ಕೋಲಾರಕ್ಕೆ ಕೆ.ಸಿ.ವ್ಯಾಲಿ ನೀರು ವರವಾಗಿ ಪರಿಣಮಿಸಿದ್ದು, ಯೋಜನೆಯಿಂದ ಜಿಲ್ಲೆಯ ಚಿತ್ರಣವೇ ಬದಲಾಗುತ್ತಿದೆ. ಜನರು ಕೂಡಾ ಯೋಜನೆಯಿಂದಾಗುತ್ತಿರುವ ಬದಲಾವಣೆಯನ್ನು ಸಂತೋಷವಾಗಿ ಅನುಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ಬರಗಾಲದ ಹಣೆ ಪಟ್ಟಿ ಕಳಚಲಿ ಅನ್ನೋದು ಜನರ ಮಾತಾಗಿದೆ.

  • ಈ ದೇಶದ ಆ ಪ್ರಧಾನಿಯನ್ನು ಶ್ರೀರಾಮನೇ ಕಾಪಾಡಲಿ: ರಮೇಶ್ ಕುಮಾರ್

    ಈ ದೇಶದ ಆ ಪ್ರಧಾನಿಯನ್ನು ಶ್ರೀರಾಮನೇ ಕಾಪಾಡಲಿ: ರಮೇಶ್ ಕುಮಾರ್

    ಕೋಲಾರ: ದೇಶದಲ್ಲಿ ಕೊರೊನಾ ತಾಂಡವವಾಡುತ್ತಿದ್ದರೆ, ಪ್ರಧಾನ ಮಂತ್ರಿಗಳು ಅಯೋಧ್ಯೆಯಲ್ಲಿ ಪೂಜೆ ಮಾಡುತ್ತಿದ್ದಾರೆಂದು ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಟೀಕಿಸಿದ್ದಾರೆ.

    ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಕೋವಿಡ್ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳು ಈ ದೇಶವನ್ನು ಲಾಕ್‍ಡೌನ್ ಮಾಡಿದಾಗ ನಮ್ಮಲ್ಲಿ ಪ್ರಕರಣ 524 ಇತ್ತು. 21 ದಿನದಲ್ಲಿ ಎಲ್ಲವೂ ನಿರ್ನಾಮ ಆಗುತ್ತೆ ಎಂದರು. ಆದರೆ ಈಗ ಕೊರೊನಾ ಸೋಂಕು 14 ಲಕ್ಷಕ್ಕೆ ಬಂದಿದೆ ಎಂದು ವ್ಯಂಗವಾಡಿದರು.

    ದೇಶದಲ್ಲಿರುವ ಸಮಸ್ಯೆಯನ್ನು ಬಿಟ್ಟು ಅಯೋಧ್ಯೆಯಲ್ಲಿ ಪೂಜೆ ಮಾಡುತ್ತಿದ್ದಾರೆ ಎಂದ ಅವರು, ಶ್ರೀರಾಮ ಅವರನ್ನು ನಮ್ಮನ್ನು ಸಾಯುತ್ತಿರುವ ಎಲ್ಲರನ್ನು ಕಾಪಾಡಲಿ ಎಂದು ವ್ಯಂಗ್ಯವಾಡಿದರು. ಈ ದೇಶವನ್ನು ಹಾಗೂ ಆ ಪ್ರಧಾನ ಮಂತ್ರಿಯನ್ನು ಶ್ರೀರಾಮನೆ ಕಾಪಾಡಲಿ ಎಂದು ತಿಳಿಸಿದರು.

  • 20 ಲಕ್ಷ ಕೋಟಿಗೆ ಎಷ್ಟು ಸೊನ್ನೆ ಗೊತ್ತಿಲ್ಲ, ಲಕ್ಷ ಕೊಟ್ರೆ ರಾತ್ರಿಯೆಲ್ಲಾ ಎಣಿಸ್ತೀನಿ: ರಮೇಶ್ ಕುಮಾರ್

    20 ಲಕ್ಷ ಕೋಟಿಗೆ ಎಷ್ಟು ಸೊನ್ನೆ ಗೊತ್ತಿಲ್ಲ, ಲಕ್ಷ ಕೊಟ್ರೆ ರಾತ್ರಿಯೆಲ್ಲಾ ಎಣಿಸ್ತೀನಿ: ರಮೇಶ್ ಕುಮಾರ್

    – ಯಾರಾದರೂ ಆಹಾರ ಕಿಟ್ ಕೊಟ್ರೆ ತೆಗೆದುಕೊಳ್ತೇನೆ

    ಕೋಲಾರ: ಒಂದು ಲಕ್ಷ ಕೋಟಿಗೆ ಎಷ್ಟು ಸೊನ್ನೆಗಳು ಬರುತ್ತೆ ಅನ್ನೋದೇ ಗೊತ್ತಿಲ್ಲ. 1 ಲಕ್ಷ ಕೈಗೆ ಬಂದ್ರೆ ರಾತ್ರಿಯೆಲ್ಲಾ ಎಣಿಸುತ್ತೇನೆ ಎಂದು ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಕುರಿತು ವ್ಯಂಗ್ಯವಾಡಿದ್ರು.

    ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಕೆ.ಸಿ ವ್ಯಾಲಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2-3 ಸಾವಿರ ಎಣಿಸುತ್ತೇನೆ. ಆದರೆ 20 ಲಕ್ಷ ಕೋಟಿಗೆ ಎಷ್ಟು ಸೊನ್ನೆಗಳು ಬರುತ್ತೆ ಅನ್ನೋದು ಗೊತ್ತಿಲ್ಲ ಎಂದರು.

    ಲಕ್ಷ ಕೋಟಿ ಬಗ್ಗೆ ವ್ಯಾಖ್ಯಾನ ಮಾಡಿ ಎಂದರೆ ನನಗೆ ಚಂದ್ರಯಾನ ಹೇಗಿರುತ್ತೆ ಅಂತ ಕೇಳಿದಾಗೆ ಆಗುತ್ತದೆ ಎಂದು ವ್ಯಂಗ್ಯವಾಡಿದರು. ಸರ್ಕಾರ ಕೊರೊನಾ ಪ್ಯಾಕೇಜ್ ಘೋಷಣೆ ಮಾಡಿದೆ, ಅದರ ಬಗ್ಗೆ ಮಾತನಾಡುವುದು ಸರಿಯಿಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇದ್ದೇನೆ, ನನಗಿಂತ ಆರ್ಥಿಕ ತಜ್ಞರು ಇದ್ದರೆ ಅವರು ಮಾತನಾಡುತ್ತಾರೆ. ನಾನು ಅಷ್ಟು ಮೇಧಾವಿ ಅಲ್ಲ ಎಂದರು.

    ನಮ್ಮ ಹಿರಿಯ ನಾಯಕರು ರಾಹುಲ್ ಗಾಂಧಿ ಅವರು ತಜ್ಞರ ಜೊತೆ ಚರ್ಚಿಸಿ ಹೇಳಿಕೆ ನೀಡಿರುತ್ತಾರೆ ಎಂದ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಜನ್ರಿಗೆ ಸಹಾಯ ಮಾಡುವಷ್ಟು ಶಕ್ತಿಯಿಲ್ಲ, ಯಾರಾದರೂ ದಿನಸಿ ಕಿಟ್ ಕೊಟ್ಟರೆ ನಾನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ರು.

  • ರಮೇಶ್ ಕುಮಾರ್ ಲಾಕ್‍ಡೌನ್ ಉಲ್ಲಂಘನೆ- ನೂರಾರು ಜನ ಸೇರಿಸಿ ಕೆರೆ ಪೂಜೆ

    ರಮೇಶ್ ಕುಮಾರ್ ಲಾಕ್‍ಡೌನ್ ಉಲ್ಲಂಘನೆ- ನೂರಾರು ಜನ ಸೇರಿಸಿ ಕೆರೆ ಪೂಜೆ

    – ಮಾಜಿ ಸ್ಪೀಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರ ಆಕ್ರೋಶ

    ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೂರಾರು ಜನರನ್ನು ಸೇರಿಸಿ ಕರೆಯಲ್ಲಿ ಪೂಜೆ ಮಾಡುವ ಮೂಲಕ ಲಾಕ್‍ಡೌನ್ ನಿಯಮ ಉಲ್ಲಂಘಿಸಿದ್ದಾರೆ.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆಲವಾಟ್ಟ ಗ್ರಾಮದ ಕೆರೆಗೆ ಕೆ.ಸಿ.ವ್ಯಾಲಿ ನೀರು ಹರಿದ ಹಿನ್ನೆಲೆ ತಮ್ಮದೆ ಮುಖಂಡರು, ಸ್ಥಳೀಯರನ್ನು ಸೇರಿಸಿಕೊಂಡು ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಪೂಜೆ ವೇಳೆ ನೂರಾರು ಜನರ ಜಮಾವಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಾಜಿ ಸ್ಪೀಕರ್ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯಾನಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಬಡವರ ಮದುವೆಗೆ 10 ಜನರಿಗೆ ಮಾತ್ರ ಅವಕಾಶ ನೀಡುವ ಸರ್ಕಾರ, ಜನಪ್ರತಿನಿಧಿಗಳಿಗೆ ಈ ರೀತಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಕೆರೆ ಪೂಜೆಗೆ ನೂರಾರು ಜನರನ್ನು ಸೇರಿಸಿಕೊಂಡ ರಮೇಶ್ ಕುಮಾರ್ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇನ್ನೂ ವಿಶೇಷವೆಂದರೆ ಇದನ್ನು ರಮೇಶ್ ಕುಮಾರ್ ಬೆಂಬಲಿಗರು ಫೇಸ್‍ಬುಕ್ ನಲ್ಲಿ ಲೈವ್ ಮಾಡಿದ್ದಾರೆ.

  • ಜನರನ್ನ ಕಟ್ಟಿಕೊಂಡು ಕೆರೆ ಪೂಜೆ- ಲಾಕ್‍ಡೌನ್ ಉಲ್ಲಂಘಿಸಿದ ರಮೇಶ್ ಕುಮಾರ್

    ಜನರನ್ನ ಕಟ್ಟಿಕೊಂಡು ಕೆರೆ ಪೂಜೆ- ಲಾಕ್‍ಡೌನ್ ಉಲ್ಲಂಘಿಸಿದ ರಮೇಶ್ ಕುಮಾರ್

    ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ನೂರಾರು ಜನರನ್ನ ಕಟ್ಟಿಕೊಂಡು ಕೆರೆಯಲ್ಲಿ ಪೂಜೆ ಸಲ್ಲಿಸಿ ಲಾಕ್‍ಡೌನ್ ಉಲ್ಲಂಘಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಶ್ರೀನಿವಾಸಪುರ ತಾಲೂಕಿನ ಆಲವಾಟ್ಟ ಗ್ರಾಮದ ಕೆರೆಗೆ ಕೆ.ಸಿ.ವ್ಯಾಲಿ ನೀರು ಹರಿದ ಹಿನ್ನೆಲೆ ರಮೇಶ್ ಕುಮಾರ್ ಅವರು ತಮ್ಮದೆ ಮುಖಂಡರು, ಸ್ಥಳೀಯರನ್ನ ಸೇರಿಸಿಕೊಂಡು ಪೂಜೆಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಪೂಜೆ ವೇಳೆ ನೂರಾರು ಜನರ ಸೇರಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದರಿಂದ ಮಾಜಿ ಸ್ಪೀಕರ್ ವಿರುದ್ಧ ಅನೇಕರು ಆಕ್ರೋಶ ಹೊರ ವ್ಯಕ್ತಪಡಿಸಿದ್ದಾರೆ. ಬಡವರಿಗೊಂದು ಶ್ರೀಮಂತರಿಗೊಂದು ನ್ಯಾಯಾನ ಎಂದು ನೆಟ್ಟಿಗರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಬಡವರ ಮದುವೆಯಲ್ಲಿ 10 ಜನರಿಗೆ ಮಾತ್ರ ಅವಕಾಶ ನೀಡುವ ಸರ್ಕಾರ ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಈ ರೀತಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಕೆರೆ ಪೂಜೆಗೆ ನೂರಾರು ಜನರನ್ನ ಸೇರಿಸಿಕೊಂಡ ರಮೇಶ್ ಕುಮಾರ್ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

  • ಹೆಗಲ ಮೇಲೆ ಪೈಪ್ ಹೊತ್ತು ನಡೆದ ರಮೇಶ್ ಕುಮಾರ್

    ಹೆಗಲ ಮೇಲೆ ಪೈಪ್ ಹೊತ್ತು ನಡೆದ ರಮೇಶ್ ಕುಮಾರ್

    ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಾಮಾನ್ಯರಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಅನೇಕ ರಾಜಕಾರಣಿಗಳು ಮನೆಯಲ್ಲೇ ಕಳೆಯುತ್ತಿದ್ದರೆ, ಕೆಲವರು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಆದರೆ ರಮೇಶ್ ಕುಮಾರ್ ಅವರು ತಮ್ಮ ತೋಟದಲ್ಲಿ ಕೆಲಸ ಮಾಡುವ ಮೂಲಕ ಲಾಕ್‍ಡೌನ್‍ನಲ್ಲಿ ಕಾಲ ಕಳೆಯುತ್ತಿದ್ದಾರೆ.

    ಕಾಂಗ್ರೆಸ್‍ನ ಟಾಸ್ಕ್ ಪೋರ್ಸ್ ಕಮಿಟಿ ಅಧ್ಯಕ್ಷ ರಮೇಶ್ ಕುಮಾರ್ ಅವರು ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿರುವ ತೋಟದಲ್ಲಿ ಸಸಿಗಳಿಗೆ ನೀರು ಹಾಯಿಸಲು ಸಿದ್ಧತೆ ನಡೆಸಿದ್ದಾರೆ. ಸ್ವತಃ ಹೆಗಲ ಮೇಲೆ ಪೈಪ್‍ಗಳನ್ನು ಹೊತ್ತು ಸಾಗಿದರು. ಅಷ್ಟೇ ಅಲ್ಲದೆ ಆಪ್ತರೊಂದಿಗೆ ಕುಳಿತು ಅನೇಕ ಕೆಲಸಗಳನ್ನು ನಿರ್ವಹಿಸಿದ್ದಾರೆ.

    ರಮೇಶ್ ಕುಮಾರ್ ಅವರು ತಮ್ಮ ಮಾವಿನ ತೋಟಕ್ಕೆ ಡ್ರಿಪ್ ಪೈಪ್ ಲೈನ್ ಅಳವಡಿಸುತ್ತಿರುವ ವಿಡಿಯೋ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೂಲಿ ಕೆಲಸದವರು ಸಿಗದ ಹಿನ್ನೆಲೆಯಲ್ಲಿ ತಮ್ಮ ಆಪ್ತರೊಂದಿಗೆ ತೋಟದ ಕೆಲಸದಲ್ಲಿ ಮಾಜಿ ಸ್ಪೀಕರ್ ಕಾರ್ ಚಾಲಕ ಬಂಗಾರು, ಆಪ್ತ ಸಹಾಯಕ ಶ್ರೀನಿವಾಸ ಜೊತೆಗೂಡಿ ಕೆಲಸ ಮಾಡಿದ್ದಾರೆ.

  • ‘ನೀವೇ ಸಾಕಿದ ಗಿಣಿಗಳು ಹದ್ದಾಗಿ ಕುಕ್ಕಿದ್ವು’ ಮಾಜಿ ಸ್ಪೀಕರ್ ಪರ ಸಿದ್ದು ಬ್ಯಾಟಿಂಗ್

    ‘ನೀವೇ ಸಾಕಿದ ಗಿಣಿಗಳು ಹದ್ದಾಗಿ ಕುಕ್ಕಿದ್ವು’ ಮಾಜಿ ಸ್ಪೀಕರ್ ಪರ ಸಿದ್ದು ಬ್ಯಾಟಿಂಗ್

    – ಸುಧಾಕರ್‌ಗೆ ಸಿದ್ದರಾಮಯ್ಯ ತಿರುಗೇಟು

    ಬೆಂಗಳೂರು: ಅಂತೂ ಇಂತೂ ಸದನದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಹಕ್ಕು ಚ್ಯುತಿ ಕದನಕ್ಕೆ ತೆರೆ ಬಿದ್ದಿದೆ. ಮೊನ್ನೆಯ ಮಾತುಗಳಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ ಬೆನ್ನಲ್ಲೇ ಉಭಯ ಪಕ್ಷಗಳ ನಾಯಕರ ಒಪ್ಪಿಗೆ ಮೇರೆಗೆ ಎರಡೂ ಹಕ್ಕುಚ್ಯುತಿ ಪ್ರಕರಣಗಳನ್ನು ಸ್ಪೀಕರ್ ಕೈಬಿಟ್ಟಿದ್ದಾರೆ.

    ಬುಧವಾರ ಸದನಕ್ಕೆ ಗೈರಾಗಿದ್ದ ರಮೇಶ್ ಕುಮಾರ್ ಅವರು ಇಂದು ಕಲಾಪಕ್ಕೆ ಹಾಜರಾದರು. ಈ ವೇಳೆ ಮಾತನಾಡಿದ ಅವರು, ನಾನು ಈ ಸಾರ್ವಜನಿಕ ಕ್ಷೇತ್ರಕ್ಕೆ ಅರ್ಹನಲ್ಲ. ಸಚಿವ ಡಾ.ಸುಧಾಕರ್ ವಿರುದ್ಧ ನಾನು ಯಾವುದೇ ಕೆಟ್ಟ ಶಬ್ಧ ಬಳಸಿಲ್ಲ. ಇದನ್ನು ನನ್ನ ಆತ್ಮಸಾಕ್ಷಿಯಾಗಿ ಹೇಳುತ್ತಿದ್ದೇನೆ. ಸುಳ್ಳು ಹೇಳಿ ರಾಜಕಾರಣ ಮಾಡುವವನು ನಾನಲ್ಲ. ಆ ಥರಾ ಪದ ನಾನು ಹೇಳಿದ್ದೀನಿ ಎನ್ನುವುದಾದರೆವಿಷಾದ ವ್ಯಕ್ತಪಡಿಸುತ್ತೇನೆ. ಇದರಿಂದ ನನ್ನ ವ್ಯಕ್ತಿತ್ವ ಕಡಿಮೆ ಆಗಲ್ಲ ಎಂದು ಹೇಳಿದರು.

    ಇದಕ್ಕೂ ಮುನ್ನ ಮಾತನಾಡಿದ ಸುಧಾಕರ್, ನೀವೆ ಸಾಕಿದ ಗಿಣಿಗಳು ಹದ್ದಾಗಿ ಕುಕ್ಕಿದ್ವು ಅಂತ ಸ್ಪೀಕರ್ ಕುರ್ಚಿಯಲ್ಲಿ ಕುಳಿತು ರಮೇಶ್ ಕುಮಾರ್ ಹೇಳಿದ್ದನ್ನು ನೆನಪಿಸಿ ವಾಗ್ದಾಳಿ ನಡೆಸಿದರು. ಆಗ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ, ರಮೇಶ್ ಕುಮಾರ್ ಸರಿಯಾಗೇ ಹೇಳಿದ್ದಾರೆ ಅಂತ ಸುಧಾಕರ್‍ಗೆ ತಿರುಗೇಟು ಕೊಟ್ಟರು.

    ಈ ಮಧ್ಯೆ ರಮೇಶ್ ಕುಮಾರ್ ಅವರು, ನಾನು ಅಂದು ಸ್ಪೀಕರ್ ಕುರ್ಚಿಯಲ್ಲಿ ಕುಳಿತು ಮಾತನಾಡಿದ ಮಾತಿಗೆ ಇವತ್ತು ಬದ್ಧ ಅಂತ ಹೇಳಿದರು. ಸ್ಪೀಕರ್ ಆಗಿದ್ದವರು, ಆ ಕುರ್ಚಿಯಲ್ಲಿ ಕುಳಿತು ಮಾತನಾಡಬಹುದಾ? ಅವರು ನಮ್ಮ ಬಗ್ಗೆ ಪೂರ್ವಾಗ್ರಹಪೀಡಿತರಾಗಿದ್ದರು ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಸುಧಾಕರ್ ಪ್ರಶ್ನೆ ಮಾಡಿದರು. ಇದರಿಂದಾಗಿ ಸದನದಲ್ಲಿ ಒಂದಿಷ್ಟು ಗದ್ದಲ ನಡೆಯಿತು.

  • ರಮೇಶ್ ಕುಮಾರ್ ಪಲಾಯನವಾದಿ- ಕೈ, ಬಿಜೆಪಿ ವಾಕ್ಸಮರಕ್ಕೆ ಕಲಾಪ ಬಲಿ

    ರಮೇಶ್ ಕುಮಾರ್ ಪಲಾಯನವಾದಿ- ಕೈ, ಬಿಜೆಪಿ ವಾಕ್ಸಮರಕ್ಕೆ ಕಲಾಪ ಬಲಿ

    – ಸುಧಾಕರ್ ವಿರುದ್ಧ ಕಾಂಗ್ರೆಸ್, ರಮೇಶ್ ವಿರುದ್ಧ ಬಿಜೆಪಿ ಹಕ್ಕುಚ್ಯುತಿ ನೋಟಿಸ್

    ಬೆಂಗಳೂರು: ವಿಧಾನಸಭೆ ಕಲಾಪ ಇಂದು ಬೆಳಗ್ಗೆ ಆರಂಭವಾಗುತ್ತಲೇ ಮತ್ತೆ ರಮೇಶ್ ಕುಮಾರ್ ಮತ್ತು ಸುಧಾಕರ್ ನಿಂದನೆ ವಿಷಯ ಪ್ರಸ್ತಾಪವಾಗಿ ಸದನ 15 ನಿಮಿಷ ಮುಂದೂಡಿಕೆಯಾದ ಪ್ರಸಂಗ ನಡೆಯಿತು.

    ವಿಧಾನಸಭೆ ಕಲಾಪದ ಆರಂಭದಲ್ಲೇ ರಮೇಶ್ ಕುಮಾರ್ ಅಮಾನತಿಗೆ ಸಚಿವ ಈಶ್ವರಪ್ಪ ಸ್ಪೀಕರ್ ಕಾಗೇರಿಗೆ ಆಗ್ರಹಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಬೆಂಬಲ ನೀಡಿದರು. ಇತ್ತ ಕಾಂಗ್ರೆಸ್ಸಿನಿಂದಲೂ ಸುಧಾಕರ್ ವಿರುದ್ಧ ಹಕ್ಕುಚ್ಯುತಿ ನೊಟೀಸ್ ಮೇಲಿನ ಚರ್ಚೆಗೆ ಸಿದ್ದರಾಮಯ್ಯ ಆಗ್ರಹ ಮಂಡಿಸಿದರು. ಈ ವೇಳೆ ಉಭಯ ಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿಗೆ ಸದನ ಸಾಕ್ಷಿಯಾಯ್ತು.

    ಗದ್ದಲದ ನಡುವೆಯೇ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಎರಡು ಹಕ್ಕುಚ್ಯುತಿ ನೋಟಿಸ್ ಕೊಟ್ಟಿರುವ ಬಗ್ಗೆ ಸ್ಪೀಕರ್ ಕಾಗೇರಿಯವರು ಸದನದ ಗಮನಕ್ಕೆ ತಂದರು. ಸುಧಾಕರ್ ವಿರುದ್ಧ ಕಾಂಗ್ರೆಸ್, ರಮೇಶ್ ಕುಮಾರ್ ವಿರುದ್ಧ ಬಿಜೆಪಿ ಹಕ್ಕುಚ್ಯುತಿಗೆ ನೋಟಿಸ್ ಕೊಟ್ಟಿದ್ದಾರೆಂದು ಕಲಾಪದಲ್ಲಿ ಸ್ಪೀಕರ್ ಹೇಳಿದರು. ಈ ನೋಟಿಸ್‍ಗಳ ಮೇಲಿನ ಚರ್ಚೆಗೆ ಪ್ರಶ್ನೋತ್ತರ ವೇಳೆಯ ಬಳಿಕ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ಹೇಳಿದರು.

    ನಮ್ಮ ನೋಟಿಸ್ ಮೊದಲು ಚರ್ಚೆಯಾಗಬೇಕೆಂದು ಉಭಯ ಪಕ್ಷಗಳು ಪಟ್ಟು ಹಿಡಿದವು. ಈ ವೇಳೆ ಸದನದಲ್ಲಿ ಗದ್ದಲ, ಕೋಲಾಹಲ ನಿಲ್ಲದೇ ಮುಂದುವರಿದಿತ್ತು. ಈ ಮಧ್ಯೆ ರಮೇಶ್ ಕುಮಾರ್ ಸದನಕ್ಕೆ ಬಾರದಿರುವುದನ್ನು ಕಂಡ ಬಿಜೆಪಿ ಸದಸ್ಯರು ತೀವ್ರ ಟೀಕೆ ವ್ಯಕ್ತಪಡಿಸಿದರು. ರಮೇಶ್ ಕುಮಾರ್ ಪಲಾಯನವಾದಿ. ಹಾಗಾಗಿ ಇಂದು ಅವರು ಸದನಕ್ಕೆ ಬಂದಿಲ್ಲ. ಎಲ್ಲಿ ಪಲಾಯನವಾದಿ ರಮೇಶ್ ಕುಮಾರ್ ಎಂದು ಬಿಜೆಪಿಯ ರೇಣುಕಾಚಾರ್ಯ ಮತ್ತಿತರೆ ಸದಸ್ಯರು ಕೂಗಿದರು. ಸದನದಲ್ಲಿ ಕೋಲಾಹಲ ನಿಲ್ಲದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಬೇಕಾಯಿತು.

  • ಹಕ್ಕುಚ್ಯುತಿ ಹಠದ ಹಿಂದೆ ತಾಂತ್ರಿಕ ಲೆಕ್ಕಾಚಾರ

    ಹಕ್ಕುಚ್ಯುತಿ ಹಠದ ಹಿಂದೆ ತಾಂತ್ರಿಕ ಲೆಕ್ಕಾಚಾರ

    ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ನಡುವಿನ ಸದನದ ಗಲಾಟೆ ವಿಚಾರವಾಗಿ ವಿಪಕ್ಷ ಮತ್ತು ಆಡಳಿತ ಪಕ್ಷಗಳು ಪರಸ್ಪರ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿವೆ. ಆದರೆ ಇದರ ಹಿಂದೆ ತಾಂತ್ರಿಕ ಅಂಶದ ಲೆಕ್ಕಾಚಾರ ಇಟ್ಟುಕೊಂಡು ಪರಸ್ಪರ ಒಬ್ಬರನೊಬ್ಬರು ಇಕ್ಕಟ್ಟಿಗೆ ಸಿಲುಕಿಸುವ ಹಠಕ್ಕೆ ಬಿದ್ದಿದ್ದಾರೆ.

    ಸಚಿವ ಸುಧಾಕರ್ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಮಂಡನೆಯ ಹಿಂದೆ ತಾಂತ್ರಿಕ ಲೆಕ್ಕಾಚಾರವಿದೆ. ರಮೇಶ್ ಕುಮಾರ್ ಅವಾಚ್ಯ ಪದ ಬಳಸಿದ್ದು ಸದನದ ಬಾವಿಯಲ್ಲಿ ನಿಂತು. ಸುಧಾಕರ್ ಅವಾಚ್ಯ ಪದ ಬಳಸಿದ್ದು ಸದನದಲ್ಲಿರುವ ತಮ್ಮ ಸ್ಥಳದಲ್ಲಿ ನಿಂತು. ಬಾವಿಗಿಳಿದು ಆಡಿದ ಮಾತು ಸದನದಲ್ಲಿ ಕಡತಕ್ಕೆ ಹೋಗಲ್ಲ. ಆದ್ದರಿಂದ ರಮೇಶ್ ಕುಮಾರ್ ಮಾತನಾಡಿದ್ದಕ್ಕೆ ಸದನದಲ್ಲಿ ಯಾವುದೇ ದಾಖಲೆ ಇಲ್ಲ. ಆದರೆ ಸುಧಾಕರ್ ಮಾತು ಕಡತಕ್ಕೆ ಎಂಟ್ರಿಯಾಗಿದೆ.

    ಸುಧಾಕರ್ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಮಂಡನೆಗೆ ನೈಜವಾದ ಕಾರಣ ಇದೆ ಮತ್ತು ದಾಖಲೆಯು ಇದೆ. ಆದ್ದರಿಂದ ಕಾಂಗ್ರೆಸ್ ಪಟ್ಟು ಹಿಡಿದು ಸುಧಾಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಿದೆ. ಹೀಗಾಗಿ ಬಿಜೆಪಿ ಸದನದಲ್ಲಿ ಗದ್ದಲ ಎಬ್ಬಿಸಿದೆ. ಸುಧಾಕರ್ ಹಕ್ಕುಚ್ಯುತಿ ಮಂಡಿಸಬಹುದು. ಆದರೆ ಅವರ ಹಕ್ಕುಚ್ಯುತಿ ಮಂಡನೆಗೆ ಸದನದ ನಿಯಮದ ಪ್ರಕಾರ ದಾಖಲೆ ಸಿಗಲ್ಲ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.

    ಬಿಜೆಪಿ ಪಾಳಯದ ಲೆಕ್ಕಾಚಾರವೇ ಬೇರೆ ಇದೆ. ರಮೇಶ್ ಕುಮಾರ್ ಮೊದಲು ಅವಾಚ್ಯ ಪದ ಬಳಸಿದ್ದು ಬಾವಿಗಿ ಇಳಿಯುವ ಮುನ್ನ. ಅವಾಚ್ಯ ಪದ ಬಳಕೆ ಮಾಡಿದ ನಂತರ ಅವರು ಸದನದ ಬಾವಿಗೆ ಬಂದಿದ್ದಾರೆ. ಆ ಮೂಲಕ ರಮೇಶ್ ಕುಮಾರ್ ಆಡಿದ ಮಾತು ಸಹ ಸದನದಲ್ಲಿ ದಾಖಲಾಗಿರುತ್ತದೆ. ಆದ್ದರಿಂದ ರಮೇಶ್ ಕುಮಾರ್ ವಿರುದ್ಧ ಸುಧಾಕರ್ ಸಹ ಹಕ್ಕುಚ್ಯುತಿ ಮಂಡನೆಗೆ ತೀರ್ಮಾನ ಮಾಡಿದ್ದಾರೆ. ಹೀಗೆ ರಮೇಶ್ ಕುಮಾರ್ ಹಾಗೂ ಸುಧಾಕರ್ ಇಬ್ಬರು ಪರಸ್ಪರ ತಾಂತ್ರಿಕ ಅಂಶವನ್ನು ಮುಂದಿಟ್ಟುಕೊಂಡು ಹಕ್ಕುಚ್ಯುತಿ ಅಸ್ತ್ರ ಬಳಕೆಗೆ ಮುಂದಾಗಿದ್ದಾರೆ.