Tag: Ramesh Kumar

  • ಎಚ್‍ಡಿಕೆ ಸಿಎಂ ಆಗ್ತಾರೆ ಅಂತ 2 ವರ್ಷದ ಹಿಂದೆಯೇ ಭವಿಷ್ಯ – ಗುರೂಜಿಗೆ ದೇವೇಗೌಡ್ರು, ಸ್ಪೀಕರ್ ಪಾದಪೂಜೆ

    ಎಚ್‍ಡಿಕೆ ಸಿಎಂ ಆಗ್ತಾರೆ ಅಂತ 2 ವರ್ಷದ ಹಿಂದೆಯೇ ಭವಿಷ್ಯ – ಗುರೂಜಿಗೆ ದೇವೇಗೌಡ್ರು, ಸ್ಪೀಕರ್ ಪಾದಪೂಜೆ

    ಬೆಂಗಳೂರು: ಎಚ್‍.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಎರಡು ವರ್ಷಗಳು ಹಿಂದೆಯೇ ಬಾಲ ಗುರುಜಿ ವಿನಯ್ ಸ್ವಾಮೀಜಿ ಹೇಳಿದ್ದರಂತೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಅಧಿಕಾರಿ ಎಚ್.ಡಿ. ದೇವೇಗೌಡ ಪೂಜೆ ಮಾಡಿದ್ದಾರೆ.

    ವಿನಯ್ ಗುರೂಜಿ ದತ್ತಾತ್ರೆಯ ಅವಧೂತ ಸ್ವರೂಪ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಎಚ್‍ಡಿಕೆ ಸಿಎಂ ಆದ ಬಳಿಕ ದೇವೇಗೌಡ ದಂಪತಿ ತಮ್ಮ ನಿವಾಸಕ್ಕೆ ಗುರೂಜಿಯನ್ನು ಕರೆಸಿದ್ದರು. ನಂತರ ದೇವೇಗೌಡ ದಂಪತಿ ಮನೆಯಲ್ಲಿ ಬಾಲ ಗುರೂಜಿಗೆ ಪಾದಪೂಜೆ ಮಾಡಿದ್ದಾರೆ. ಈ ಗುರೂಜಿ ಹಲವು ರಾಜಕೀಯ ನಾಯಕರಿಗೆ ರಾಜಕೀಯ ಭವಿಷ್ಯ ಹೇಳಿದ್ದರು. 2 ವರ್ಷದ ಹಿಂದೆಯೇ ಎಚ್‍ಡಿಕೆಗೆ ನೀವು ಸಿಎಂ ಆಗುತ್ತೀರಿ ಎಂದು ಹೇಳಿ ಹಸಿರು ಶಲ್ಯೆ ನೀಡಿ ಮನೆಯಲ್ಲಿ ಪೂಜೆ ಮಾಡುವುದಕ್ಕೆ ಹೇಳಿದ್ದರಂತೆ. ಆದ್ದರಿಂದ ಅವರು ಹೇಳಿದ ಹಾಗೇ ಕುಮಾರಸ್ವಾಮಿ ಸಿಎಂ ಆಗಿದ್ದು, ಈಗ ಅವರಿಗೆ ದೇವೇಗೌಡರು ಪಾದಪೂಜೆ ನೆರವೇರಿಸಿದ್ದಾರೆ.

    ಸ್ಪೀಕರ್ ರಮೇಶ್ ಕುಮಾರ್ ಗೂ ನೀವು ಸತತ 2ನೇ ಬಾರಿಗೆ ಎಂಎಲ್‍ಎ ಆಗುತ್ತೀರಿ ಎಂದು ಬಾಲ ಗುರೂಜಿ ಹೇಳಿದ್ದರಂತೆ. ಈಗ ಅವರು ಕೂಡ ಪಾದಪೂಜೆ ಮಾಡಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್, ವಿನಯ್ ಗುರೂಜಿಗೆ ಪೂಜೆ ಮಾಡಿರುವ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ.

    ಇತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಯಲ್ಲಿ ಚಂಡಿಕಾ ಪಾರಾಯಣ ನಡೆದಿದೆ. ಶುಕ್ರವಾರವಾಗಿರುವ ಇಂದು ಬೆಂಗಳೂರಿನ ಜೆಪಿ ನಗರದಲ್ಲಿರುವ ಮನೆಯಲ್ಲಿ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆದ ಬಳಿಕ ವಾರಕ್ಕೊಂದು ಸಲ ಪೂಜೆ ನಡೆಯುತ್ತಿರುವುದು ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳುತ್ತಿಲ್ಲ. ಆದರೆ ಜೆಪಿ ನಗರದ ನಿವಾಸದಲ್ಲಿ ಜನತಾ ದರ್ಶನ ಕೈಗೊಂಡು ಅಹವಾಲು ಸ್ವೀಕರಿಸಿದ್ದಾರೆ.

  • ರಾಜಭವನ ಸಿಬ್ಬಂದಿ ವರ್ತನೆಗೆ ಸ್ಪೀಕರ್ ರಮೇಶ್‍ಕುಮಾರ್ ಆಕ್ರೋಶ

    ರಾಜಭವನ ಸಿಬ್ಬಂದಿ ವರ್ತನೆಗೆ ಸ್ಪೀಕರ್ ರಮೇಶ್‍ಕುಮಾರ್ ಆಕ್ರೋಶ

    ಬೆಂಗಳೂರು: ರಾಜಭವನದ ಸಿಬ್ಬಂದಿ ವರ್ತನೆಗೆ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶಗೊಂಡ ಘಟನೆ ಇಂದು ನಡೆಯಿತು.

    ಜೆಡಿಎಸ್ – ಕಾಂಗ್ರೆಸ್ ಶಾಸಕರ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು ಗಾಜಿನ ಮನೆಯಲ್ಲಿ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ರಮೇಶ್ ಕುಮಾರ್ ಆಗಮಿಸಿದ್ದರು.

    ಪ್ರವೇಶದ ವೇಳೆ ರಾಜಭವನದ ಸಿಬ್ಬಂದಿ ರಮೇಶ್‍ಕುಮಾರ್ ಅವರನ್ನು ಒಳಗಡೆ ಬಿಡದೇ ತಡೆದಿದ್ದಾರೆ. ನಾನು ಸ್ಪೀಕರ್, ಹಾಲಿ ಶಾಸಕ ಎಂದು ರಮೇಶ್ ಕುಮಾರ್ ಹೇಳಿದರೂ ಒಳಗಡೆ ಬಿಡಲೇ ಇಲ್ಲ.

    ಎಷ್ಟು ಹೇಳಿದರೂ ಕೇಳದೇ ಇದ್ದಾಗ ಆಕ್ರೋಶಗೊಂಡ ರಮೇಶ್ ಕುಮಾರ್ ರಾಜಭವನದ ಸಿಬ್ಬಂದಿ ವಿರುದ್ಧ ರೇಗಾಡಿದ್ದಾರೆ. ಕೊನೆಗೆ ಸಿಬ್ಬಂದಿ ಒಳಗಡೆ ಪ್ರವೇಶಿಸಲು ಅನುಮತಿ ನೀಡಿದರು.

    ಮೈತ್ರಿ ಸರ್ಕಾರದ ಸ್ಪೀಕರ್ ಆಗಿ ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆ ಆಗಿದ್ದರು. ಬಿಜೆಪಿಯಿಂದ ಸುರೇಶ್ ಕುಮಾರ್ ಸ್ಪರ್ಧಿಸಿದ್ದರೂ ಕೊನೆ ಕ್ಷಣದಲ್ಲಿ ಹಿಂದಕ್ಕೆ ಸರಿದ ಕಾರಣ ರಮೇಶ್ ಕುಮಾರ್ ಅವಿರೋಧವಾಗಿ ನೇಮಕವಾಗಿದ್ದರು.

  • ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಹರಿದು ಬಂತು ನೀರು: ಸ್ಪೀಕರ್ ರಮೇಶ್ ಕುಮಾರ್ ಆನಂದಭಾಷ್ಪ

    ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಹರಿದು ಬಂತು ನೀರು: ಸ್ಪೀಕರ್ ರಮೇಶ್ ಕುಮಾರ್ ಆನಂದಭಾಷ್ಪ

    ಕೋಲಾರ: ಬರದ ನಾಡು ಕೋಲಾರಕ್ಕಿಂದು ಐತಿಹಾಸಿಕ ದಿನ, ಕಳೆದ 60 ವರ್ಷಗಳಿಂದ ನಿರೀಕ್ಷೆಯ ಕಣ್ಣುಗಳಿಂದ ಕಾದು ಕುಳಿತಿದ್ದ ಲಕ್ಷಾಂತರ ಮನಸ್ಸುಗಳಿಗೆ ತೃಪ್ತಿಯಾದ ದಿನ. ಕಳೆದ ಅರವತ್ತು ವರ್ಷಗಳ ಬೇಡಿಕೆ ಇಂದು ಈಡೇರಿದ ಸಂತೃಪ್ತಿ ಒಂದೆಡೆಯಾದ್ರೆ, ಬರಗಾಲದ ಕರಿನೆರಳು ದೂರವಾಗುತ್ತಾ ಅನ್ನೋ ನಿರೀಕ್ಷೆ ಚಿನ್ನದ ನಾಡಿನ ಜನರದ್ದು.

    ಕೆ.ಸಿ.ವ್ಯಾಲಿ ಯೋಜನೆಯ ನೀರು ಲಕ್ಷ್ಮೀಸಾಗರ ಕೆರೆಯನ್ನು ಪ್ರವೇಶಿಸಿದ ಸಂದರ್ಭ ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್ ನಮ್ಮ ತಾಯಿ ಜ್ಞಾಪಕಕ್ಕೆ ಬರುತ್ತಿದ್ದಾಳೆ, ನನ್ನಿಂದ ಈ ರೀತಿಯ ಒಳ್ಳೆ ಕಾರ್ಯವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ಹೇಳಿ ಸ್ಪೀಕರ್ ರಮೇಶ್ ಕುಮಾರ್ ಆನಂದಭಾಷ್ಪ ಹಾಕಿದ್ದಾರೆ.

    ಕೋಲಾರ ಜಿಲ್ಲೆಯ ಜನ ಕಳೆದ 60 ವರ್ಷಗಳಿಂದ ಮಾಡಿದ ನೂರಾರು ಹೋರಾಟ, ಉಪವಾಸ, ಕಣ್ಣೀರು, ಆಕ್ರೋಶ, ಎಲ್ಲದಕ್ಕೂ ಇಂದು ಉತ್ತರ ಸಿಕ್ಕಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಡಲಾದ ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕೆ.ಸಿ.ವ್ಯಾಲಿ ಯೋಜನೆಯ ನೀರು ಇಂದು ಕೋಲಾರ ತಾಲ್ಲೂಕು ಲಕ್ಷ್ಮೀಸಾಗರ ಕೆರೆಯನ್ನು ಪ್ರವೇಶಿಸಿದೆ.

    1400 ಕೋಟಿ ರೂ. ವೆಚ್ಚದಲ್ಲಿ ಕೋಲಾರ ಜಿಲ್ಲೆಯ 130 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದ್ದು, ಯೋಜನೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಇನ್ನು ಸಣ್ಣ ಪುಟ್ಟ ಮಾರ್ಪಾಟುಗಳನ್ನ ಸರಿಪಡಿಸಿದ ನಂತರ ಜಿಲ್ಲೆಯ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರು ಹರಿಸಲಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ವೆಂಕಟೇಶ್ ತಿಳಿಸಿದ್ದಾರೆ.

    ಕಳೆದ ಒಂದುವರೆ ವರ್ಷದ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಯೋಜನೆಗೆ ಅಡಿಗಲ್ಲು ಹಾಕಿ, ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ರು. ಅಲ್ಲದೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್‍ಕುಮಾರ್ ಈ ಯೋಜನೆಗಾಗಿ ಇನ್ನಿಲ್ಲದ ಹೋರಾಟಗಳನ್ನು ಮಾಡಿದ್ರು. ಯೋಜನೆಗೆ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡಲು ಸತಾಯಿಸಿದ್ದು, ಬೆಂಗಳೂರು ನಗರ ವ್ಯಾಪ್ತಿ ಯಲ್ಲಿ ಪೈಪ್‍ಲೈನ್ ಅಳವಡಿಸುವ ಕಾರ್ಯದಲ್ಲಿ ಆದ ಸಾಕಷ್ಟು ಅಡೆತಡೆಗಳು, ಅಕಾಲಿಕ ಮಳೆ ಇದೆಲ್ಲವನ್ನು ನಿಭಾಯಿಸಿಕೊಂಡು ಚುನಾವಣೆಗೆ ಮುನ್ನ ನೀರು ತರಬೇಕೆಂದು ಪ್ರಯತ್ನ ಮಾಡಿದ್ದರು ಎಂದು ಸ್ಥಳೀಯರಾದ ಕೆಎಸ್ ಗಣೇಶ್ ತಿಳಿಸಿದರು.

    ಸಂಸ್ಕರಿಸಿದ ತ್ಯಾಜ್ಯ ನೀರು ಜಿಲ್ಲೆಗೆ ಬಂದಿದ್ದು ಖುಷಿಯಾದ್ರು, ಇದರಿಂದ ಏನಾದ್ರು ಅಪಾಯ ಆಗಬಹುದಾ ಅನ್ನೋ ಆತಂಕವನ್ನು ಜನರಲ್ಲಿದೆ.

     

  • ನನ್ನ ಕೈ ಬಾಯಿ ಕಟ್ಟಿ ಹಾಕಲು ಬಂದವರನ್ನ ನಾನೇ ಕಟ್ಟಿ ಹಾಕುತ್ತೇನೆ: ರಮೇಶ್ ಕುಮಾರ್

    ನನ್ನ ಕೈ ಬಾಯಿ ಕಟ್ಟಿ ಹಾಕಲು ಬಂದವರನ್ನ ನಾನೇ ಕಟ್ಟಿ ಹಾಕುತ್ತೇನೆ: ರಮೇಶ್ ಕುಮಾರ್

    ಕೋಲಾರ: ಸ್ಪೀಕರ್ ಆಗಿ ನೇಮಿಸಿರುವ ಮೂಲಕ ನನ್ನ ಕೈ ಬಾಯಿ ಕಟ್ಟಿ ಹಾಕಲು ಸಾಧ್ಯವಿಲ್ಲ. ಹಾಗೇ ಅಂದುಕೊಳ್ಳುವವರ ಕೈ ಬಾಯಿಯನ್ನು ನಾನೇ ಕಟ್ಟಿ ಹಾಕುತ್ತೇನೆ ಎಂದು ವಿಧಾನ ಸಭೆ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಹುದ್ದೆಯಲ್ಲಿದ್ದರೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಲ್ಲ, ಇದೇ ಹುದ್ದೆಯಲ್ಲಿದ್ದು ಇನ್ನೂ ಹೆಚ್ಚಿನ ಕೆಲಸ ಮಾಡುತ್ತೇನೆ. ಜೂನ್ 7 ರಂದು ಕೆ.ಸಿ.ವ್ಯಾಲಿ ಯೋಜನೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಜಿ.ಪರಮೇಶ್ವರ್ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.

    ಈ ಹಿಂದೆ ಕೆ.ಸಿ.ವ್ಯಾಲಿ ಯೋಜನೆಗೆ ಕುಮಾರಸ್ವಾಮಿ ಅವರು ವಿರೋಧ ಮಾಡಿದ್ದರು. ಆದರೆ ಈಗ ವಿರೋಧ ಮಾಡಲು ಆಗೊಲ್ಲ. ನನ್ನ ಸ್ಪೀಕರ್ ಮಾಡುವಂತೆ ಯಾರನ್ನೂ ಕೇಳಿಕೊಂಡಿಲ್ಲ. ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿ ನೀಡಿದ್ದಾರೆ. ಸರಿಯಾಗಿ ನಿಬಾಯಿಸಿಕೊಂಡು ಹೋಗುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಸರ್ಕಾರ ಉಳಿವು- ಬಿಳು ಆಯಾ ಪಕ್ಷದವರಿಗೆ ಬಿಟ್ಟಿದ್ದು. ನಾನು ಯಾವ ಪಕ್ಷಕ್ಕೂ ಸೇರಿಲ್ಲ, ಸ್ವತಂತ್ರ ಸದನ ನಡೆಸುವುದು ನನ್ನ ಜವಾಬ್ದಾರಿಯಾಗಿದೆ. ಈಗಾಗಲೇ ಬಿಜೆಪಿಯವರು ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ಅದೇ ವೇಳೆ ಕರ್ನಾಟಕ ವಿಧಾನಸಭೆ ಉಪಚುನಾವಣೆ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.

  • ಪ್ರತಾಪ್ ಸಿಂಹರನ್ನು ದನಕ್ಕೆ ಹೋಲಿಸಿದ ಸಚಿವ ರಮೇಶ್ ಕುಮಾರ್

    ಪ್ರತಾಪ್ ಸಿಂಹರನ್ನು ದನಕ್ಕೆ ಹೋಲಿಸಿದ ಸಚಿವ ರಮೇಶ್ ಕುಮಾರ್

    ಗದಗ: ಆರೋಗ್ಯ ಸಚಿವ ರಮೇಶ್ ಕುಮಾರ್ ಮೈಸೂರು ಸಂಸದ ಪ್ರತಾಪ್ ಸಿಂಹರನ್ನು ದನಕ್ಕೆ ಹೋಲಿಕೆ ಮಾಡಿ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ.

    ನಗರದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಲೇಖನ ಬರೆಯುವ ಅವಕಾಶ ಸಿಕ್ಕಿದೆ ಎಂದು ಲೋಕಸಭಾ ಸದಸ್ಯರಾದ ಮಾತ್ರಕ್ಕೆ ನೆಹರೂ ಅವರನ್ನು ಹಿಯಾಳಿಸಿ ಬರೆಯುತ್ತಾರೆ. ದನಗಳಿಗೆ ಭಾಷೆ ಇಲ್ಲ, ಜನರಿಗೆ ಭಾಷೆ ಇದೆ. ಭಾಷೆಯ ಪ್ರಯೋಗ ಯೋಗ್ಯ ರೀತಿಯಲ್ಲಿ ಮಾಡದೇ ಹೋದರೆ ಜನರಿಗೆ ದನಗಳಿಗೆ ವ್ಯತ್ಯಾಸ ಇರುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

    ಇದೇ ವೇಳೆ ಈ ದೇಶದಲ್ಲಿ ಯಾರು ಯಾರ ಬಗ್ಗೆ ಮಾತಾಡಬೇಕು ಎನ್ನುವ ಸಂಹಿತೆಯೂ ಇರದಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಂಸದರು ಸಂಸತ್ ನಲ್ಲಿ ಯಾವ ಭಾಷೆ ಬಳಸಬೇಕು, ಹೊರಗೆ ಯಾವ ಭಾಷೆ ಬಳಸಬೇಕು ಎನ್ನುವ ಸಂಯಮ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ರಾಜ್ಯದಲ್ಲಿ ಹೆಚ್ಚಾಗುತ್ತಿದೆ ನಕಲಿ ವೈದ್ಯರ ಹಾವಳಿ- ನಕಲಿ ವೈದ್ಯರನ್ನು ಮಟ್ಟ ಹಾಕೋದು ಯಾವಾಗ?

    ರಾಜ್ಯದಲ್ಲಿ ಹೆಚ್ಚಾಗುತ್ತಿದೆ ನಕಲಿ ವೈದ್ಯರ ಹಾವಳಿ- ನಕಲಿ ವೈದ್ಯರನ್ನು ಮಟ್ಟ ಹಾಕೋದು ಯಾವಾಗ?

    ಚಿಕ್ಕಬಳ್ಳಾಪುರ/ಹುಬ್ಬಳ್ಳಿ: ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕಲು ಆರೋಗ್ಯ ಸಚಿವ ರಮೇಶ್ ಕುಮಾರ್ ನಡೆಸಿದ್ದ ಕಸರತ್ತು ಅಷ್ಟಿಷ್ಟಲ್ಲ. ಆದ್ರೆ ಆರೋಗ್ಯ ಸಚಿವರಿಗೆ ರಾಜ್ಯದಲ್ಲಿ ಅಮಾಯಕರನ್ನು ಬಲಿ ಪಡೀತಿರುವ ನಕಲಿ ವೈದ್ಯರ ಬಗ್ಗೆ ಮಾಹಿತಿನೇ ಇಲ್ಲ ಅನ್ನಿಸುತ್ತದೆ.

    ಯಾಕಂದ್ರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಪುರಸಭೆ ಮುಂಭಾಗವೇ ಆಂಧ್ರ ಮೂಲದ ಇ.ಎನ್.ರೆಡ್ಡಿ ಎಂಬಾತ ಕ್ಲಿನಿಕ್ ನಡೆಸುತ್ತಿದ್ದ. ಮೈಕೈ ನೋವು ಅಂತಾ ಆಸ್ಪತ್ರೆಗೆ ಬರೋರಿಗೆಲ್ಲಾ ಗ್ಲುಕೋಸ್ ಹಾಕುತ್ತಿದ್ದ. ಈತನಿಂದ ಗ್ಲುಕೋಸ್ ಹಾಕಿಸಿಕೊಂಡಿದ್ದ ರೋಗಿ ವಾಂತಿ ಮಾಡ್ಕೊಂಡಿದ್ರಿಂದ ಕ್ಲಿನಿಕ್ ನಿಂದಲೇ ಹೊರಹಾಕಿದ್ದನು.

    ಇನ್ನು 10 ದಿನಗಳ ಹಿಂದೆಯಷ್ಟೇ ಇನಾಯತ್ ಉಲ್ಲಾ ಅನ್ನೋ ನಕಲಿ ವೈದ್ಯನ ಬಳಿ ಹೋಗಿದ್ದ ನರಸಪ್ಪ ಅನ್ನೋರು ಮೃತಪಟ್ಟಿದ್ರು. ಖಾಸಗಿ ವೈದ್ಯರ ಮುಷ್ಕರದ ವೇಳೆ ಮೈಸೂರಲ್ಲಿ ಡಿಗ್ರಿ ವಿದ್ಯಾರ್ಥಿನಿಯೊಬ್ಬಳು ನಕಲಿ ವೈದ್ಯ ಕೊಟ್ಟಿದ್ದ ಇಂಜೆಕ್ಷನ್ ಗೆ ಬಲಿಯಾಗಿದ್ದಳು. ಒಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕುತ್ತಿರೋ ಆರೋಗ್ಯ ಸಚಿವರು ನಕಲಿ ವೈದ್ಯರನ್ನು ಮಟ್ಟ ಹಾಕೋದು ಯಾವಾಗ ಅಂತ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ನಕಲಿ ವೈದ್ಯ ಬಂಧನ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಕಲಿ ವೈದ್ಯನೊಬ್ಬನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. 31 ವರ್ಷದ ಬಸವರಾಜ್ ಬಂಧಿತ ನಕಲಿ ವೈದ್ಯ. ರಾತ್ರಿ ಅನುಮಾನಸ್ಪದವಾಗಿ ಕಿಮ್ಸ್ ಆಸ್ಪತ್ರೆಯಲ್ಲಿ ಬಸವರಾಜ್ ತಿರುಗಾಡುತ್ತಿದ್ದನು. ಕಿಮ್ಸ್ ಭದ್ರತಾ ಸಿಬ್ಬಂದಿ ವಿಚಾರಿಸಿದಾಗ ನಕಲಿ ವೈದ್ಯ ಅನ್ನೋದು ಗೊತ್ತಾಗಿದೆ. ಬಸವರಾಜನ ಅಜ್ಜ ನರಗುಂದ ತಾಲೂಕಿನ ಕೊಣ್ಣೂರ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ರು. ಅವರ ಸಮವಸ್ತ್ರವನ್ನು ಧರಿಸಿ ಕಿಮ್ಸ್ ಗೆ ಬಂದ್ದಿದ್ದ ಎಂದು ತಿಳಿದುಬಂದಿದೆ.

  • ಕೆಪಿಎಂಇ ಮಸೂದೆ ಮಂಡನೆ: ಮೂಲ ಮಸೂದೆಯಲ್ಲಿ ಏನಿತ್ತು? ಈಗ ಬದಲಾಗಿದ್ದು ಏನು?

    ಕೆಪಿಎಂಇ ಮಸೂದೆ ಮಂಡನೆ: ಮೂಲ ಮಸೂದೆಯಲ್ಲಿ ಏನಿತ್ತು? ಈಗ ಬದಲಾಗಿದ್ದು ಏನು?

    ಬೆಳಗಾವಿ: ವೈದ್ಯರ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ಮಸೂದೆ(ಕೆಪಿಎಂಇ) ವಿಧಾನಸಭೆಯಲ್ಲಿ ಮಂಡನೆಯಾಗಿದೆ.

    ಖಾಸಗಿ ವೈದ್ಯರ ಮುಷ್ಕರದಿಂದ 60ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಕೆಪಿಎಂಇ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಹಠ ಸಾಧಿಸಿ ಕೊನೆಗೂ ಮಂಡಿಸಿದ್ದಾರೆ.

    ಮಸೂದೆಯಲ್ಲಿರುವ ಪ್ರಮುಖ ಅಂಶಗಳು:
    ಮೂಲ ಮಸೂದೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟರೆ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಅಂಶವಿದೆ ಎಂದು ಹೇಳಲಾಗಿತ್ತು. ಆದರೆ ಮಂಡನೆಯಾಗಿರುವ ಮಸೂದೆಯಲ್ಲಿ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪವನ್ನು ಕೈಬಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಕಡ್ಡಾಯವಾಗಿ ಪ್ರದರ್ಶಿಸಬೇಕು, ಸರ್ಕಾರಿ ಯೋಜನೆಯಡಿ ನೀಡುವ ಚಿಕಿತ್ಸೆಗಳಿಗೆ ಸರ್ಕಾರವೇ ದರ ನಿಗದಿ ಪಡಿಸಬೇಕು ಎನ್ನುವ ಅಂಶವಿದೆ.

    ನಿಗದಿಯಾಗಿರುವ ದರ, ವೆಚ್ಚದ ಪಟ್ಟಿಯನ್ನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೆಬ್‍ಸೈಟ್‍ನಲ್ಲಿ ಪ್ರದರ್ಶಿಸಬೇಕು. ನಿಗದಿತ ಅವಧಿಯೊಳಗೆ ಹೆಚ್ಚಿಗೆ ಕಾಯಿಸದೇ ರೋಗಿಗಳೊಂದಿಗೆ ಸಮಾಲೋಚನೆ ಮಾಡಬೇಕು. ಸಮಾಲೋಚನಾ ಕೊಠಡಿಗೆ ರೋಗಿಯ ಸಂಬಂಧಿ ಅಥವಾ ಸ್ನೇಹಿತರಿಗೆ ಅವಕಾಶ ನೀಡಬೇಕು ಎನ್ನುವ ಅಂಶಗಳು ಮಸೂದೆಯಲ್ಲಿದೆ.

    ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕುಂದುಕೊರತೆ ದೂರು ಪ್ರಾಧಿಕಾರ ರಚನೆಯಾಗಲಿದ್ದು, ಈ ಸಮಿತಿಯಲ್ಲಿ ಡಿಎಚ್‍ಓ, ಜಿಲ್ಲಾ ಆಯುಷ್ ಅಧಿಕಾರಿ, ಐಎಂಎ ಓರ್ವ ಪ್ರತಿನಿಧಿ, ಜಿಲ್ಲಾಮಟ್ಟದ ಮಹಿಳಾ ಪ್ರತಿನಿಧಿ ಇರುತ್ತಾರೆ. ದೂರು ಪ್ರಾಧಿಕಾರದಲ್ಲಿ ವಾದಿಸಲು ಅವಕಾಶ ನೀಡಲಾಗಿದ್ದು, ಆರೋಪಿತ ವೈದ್ಯರು ಅಥವಾ ಸಂಸ್ಥೆ ವಕೀಲರನ್ನು ನೇಮಿಸಿಕೊಳ್ಳಬಹುದು. ತುರ್ತು ಚಿಕಿತ್ಸಾ ಸಮಯದಲ್ಲಿ ಮುಂಗಡ ಹಣಕ್ಕೆ ರೋಗಿಗಳ ಸಂಬಂಧಿಕರಿಗೆ ಒತ್ತಾಯಿಸುವಂತಿಲ್ಲ. ಅಷ್ಟೇ ಅಲ್ಲದೇ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸಾವನ್ನಪ್ಪಿದ್ದರೆ ಶವ ನೀಡದೇ ಬಾಕಿ ಹಣಕ್ಕೆ ಒತ್ತಾಯಿಸಬಾರದು ಎನ್ನುವ ಅಂಶಗಳಿವೆ.

    ಮೂಲ ಮಸೂದೆಯಲ್ಲಿ ಆಸ್ಪತ್ರೆಯಲ್ಲಿ ನೀಡಲಾಗುವ ಎಲ್ಲ ಚಿಕಿತ್ಸೆಗಳಿಗೆ ಆಸ್ಪತ್ರೆಗಳು ಎಷ್ಟು ದರವನ್ನು ವಿಧಿಸಬೇಕು ಎನ್ನುವ ಅಂಶವನ್ನು ಸರ್ಕಾರವೇ ನಿಗದಿ ಪಡಿಸಲಿದೆ. ಸರ್ಕಾರ ನಿಗದಿಪಡಿಸಿದ ಪಟ್ಟಿಯನ್ನು ಆಸ್ಪತ್ರೆಗಳು ಪ್ರದರ್ಶಿಸಬೇಕು ಮತ್ತು ಅಷ್ಟೇ ದರವನ್ನು ಪಡೆಯಬೇಕು ಎನ್ನುವ ಅಂಶವಿತ್ತು. ಆದರೆ ವೈದ್ಯರ ಜೊತೆಗೆ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ನಡೆಸಿದ ಸಂಧಾನ ಸಭೆಯ ಬಳಿಕ ಈ ಅಂಶಗಳನ್ನು ಕೈಬಿಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

  • ಇದು ಜನರ ಜೀವನ್ಮರಣದ ಪ್ರಶ್ನೆ, ಮುಷ್ಕರವನ್ನು ಕೈಬಿಡಿ: ವೈದ್ಯರಲ್ಲಿ ಹೈಕೋರ್ಟ್ ಮನವಿ

    ಇದು ಜನರ ಜೀವನ್ಮರಣದ ಪ್ರಶ್ನೆ, ಮುಷ್ಕರವನ್ನು ಕೈಬಿಡಿ: ವೈದ್ಯರಲ್ಲಿ ಹೈಕೋರ್ಟ್ ಮನವಿ

    ಬೆಂಗಳೂರು: ರೋಗಿಗಳು ತೊಂದರೆ ಅನುಭವಿಸುತ್ತಿದ್ದು, ಮೊದಲು ಮಾತುಕತೆ ನಡೆಸಿ ತೀರ್ಮಾನಕ್ಕೆ ಬನ್ನಿ. ಈ ಕೂಡಲೇ ಮುಷ್ಕರವನ್ನು ಕೈಬಿಡಿ ಎಂದು ಹೈಕೋರ್ಟ್ ಖಾಸಗಿ ಆಸ್ಪತ್ರೆಗಳ ವೈದ್ಯರಲ್ಲಿ ಮನವಿ ಮಾಡಿದೆ.

    ವೈದ್ಯರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ವಕೀಲರಾದ ಎನ್.ಪಿ.ಅಮೃತೇಶ್, ಜಿ.ಆರ್.ಮೋಹನ್ ಹಾಗೂ ಆದಿನಾರಾಯಣ ಎಂಬುವರು ಸಲ್ಲಿಸಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಗುರುವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

    ಸರ್ಕಾರದ ಪರ ವಾದ ಮಂಡನೆ ಮಾಡಿದ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್, ನಾವು ಇನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು(ಕೆಪಿಎಂಇ) ಮಂಡನೆ ಮಾಡಿಲ್ಲ. ಅಷ್ಟೇ ಅಲ್ಲದೇ ವೈದ್ಯರ ಜೊತೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಮಾತುಕತೆ ನಡೆಸಲು ಸಿದ್ಧರಿದ್ದಾರೆ. ಆದರೂ ವೈದ್ಯರು ಮುಷ್ಕರ ಮಾಡುತ್ತಿದ್ದಾರೆ ಎಂದು ವಾದಿಸಿದರು.

    ಮಧ್ಯಪ್ರವೇಶ ಮಾಡಿದ ಖಾಸಗಿ ವೈದ್ಯರ ಪರ ವಕೀಲ ಬಸವರಾಜು, ಈ ಮಸೂದೆ ಮಂಡನೆಯಾದರೆ ವೈದ್ಯರು ತಮ್ಮ ವೃತ್ತಿಯನ್ನೇ ಬಿಡಬೇಕಾಗುತ್ತದೆ. ಅಷ್ಟೇ ಅಲ್ಲದೇ ವೈದ್ಯರು ಸ್ವಯಂ ಪ್ರೇರಿತರಾಗಿ ಮುಷ್ಕರ ಮಾಡುತ್ತಿದ್ದಾರೆ ಹೊರತು ಭಾರತೀಯ ವೈದ್ಯ ಸಂಘ(ಐಎಂಎ) ಮುಷ್ಕರಕ್ಕೆ ಕರೆ ನೀಡಿಲ್ಲ. ಆರೋಗ್ಯ ಸಚಿವರು ವೈದ್ಯರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ವಾದ ಮಂಡಿಸಿದರು.

    ಈ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್, ಈಗಾಗಲೇ ಮುಷ್ಕರದಿಂದ ಸಾಕಷ್ಟು ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ನಿಮ್ಮ ವೈದ್ಯರಿಗೆ ಮುಷ್ಕರ ವಾಪಸ್ ಪಡೆಯಲು ಹೇಳಿ ಎಂದು ವಕೀಲರಲ್ಲಿ ಮನವಿ ಮಾಡಿದರು.

    ಸರ್ಕಾರ ಮಾತುಕತೆಗೆ ಸಿದ್ಧವಿದೆ ಎಂದು ಈಗಾಗಲೇ ಹೇಳಿದೆ. ಅಷ್ಟೇ ಅಲ್ಲದೇ ಅಧಿವೇಶನದಲ್ಲಿ ಇನ್ನೂ ಮಸೂದೆ ಮಂಡನೆಯೇ ಆಗಿಲ್ಲ. ರೋಗಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಪರಿಸ್ಥಿತಿ ಅರ್ಥಮಾಡಿಕೊಳ್ಳಿ. ಇದು ಜನರ ಜೀವನ್ಮರಣದ ಪ್ರಶ್ನೆ. ಕೂಡಲೇ ಸೇವೆಗೆ ಮರಳಿ ಚಿಕಿತ್ಸೆ ನೀಡಿ ಎಂದು ನ್ಯಾಯಮೂರ್ತಿಗಳು ಪರಿಪರಿಯಾಗಿ ಮನವಿ ಮಾಡಿದರು.

    ಸರ್ಕಾರದ ಮುಖ್ಯ ಕಾರ್ಯದರ್ಶಿ ಗೆ ನೋಟಿಸ್ ಜಾರಿಗೆ ಆದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಒಂದು ವೇಳೆ ಮುಷ್ಕರ ಕೈ ಬಿಡದೇ ಇದ್ದಲ್ಲಿ ಶುಕ್ರವಾರ ಹೈಕೋರ್ಟ್ ಖಡಕ್ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.

    img class=”alignnone size-full wp-image-194314″ src=”https://publictv.in/wp-content/uploads/2017/11/doctors-protest-19.png” alt=”” width=”786″ height=”576″ />

  • ಮುಷ್ಕರ ಕೈಬಿಟ್ಟ ಖಾಸಗಿ ವೈದ್ಯರು: ಶುಕ್ರವಾರದಿಂದ ಸೇವೆಗೆ ಹಾಜರ್

    ಮುಷ್ಕರ ಕೈಬಿಟ್ಟ ಖಾಸಗಿ ವೈದ್ಯರು: ಶುಕ್ರವಾರದಿಂದ ಸೇವೆಗೆ ಹಾಜರ್

    ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು(ಕೆಪಿಎಂಇ) ವಿರೋಧಿಸಿ ನಡೆಸುತ್ತಿದ್ದ ಖಾಸಗಿ ಆಸ್ಪತ್ರೆಗಳ ವೈದ್ಯರು ತಮ್ಮ ಮುಷ್ಕರವನ್ನು ಹೈಕೋರ್ಟ್ ಮನವಿಗೆ ಒಪ್ಪಿ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ.

    ನಾಳೆಯಿಂದ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಲಭ್ಯವಾಗಲಿದ್ದು, ಎಂದಿನಂತೆ ಖಾಸಗಿ ಆಸ್ಪತ್ರೆ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಫನಾ ಮುಖ್ಯಸ್ಥ ಜಯಣ್ಣ ನೇತೃತ್ವದಲ್ಲಿ ಚಾಮರಾಜಪೇಟೆಯಲ್ಲಿರುವ ಐಎಂಎನಲ್ಲಿ ನಡೆದ ಸಭೆಯಲ್ಲಿ ಹೈಕೋರ್ಟ್ ಮನವಿಗೆ ಒಪ್ಪಿ ಮುಷ್ಕರವನ್ನು ಕೈಬಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಖಾಸಗಿ ವೈದ್ಯರ ತುರ್ತು ಸಭೆ ಮುಕ್ತಾಯವಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫನಾ ಮುಖ್ಯಸ್ಥ ಜಯಣ್ಣ, ಹೈಕೋರ್ಟ್ ಮುಷ್ಕರ ಕೈಬಿಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಎಲ್ಲಾ ವೈದ್ಯರು ಸೇವೆಗೆ ತೆರಳುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈಗಾಗಲೇ ತುರ್ತು ಸೇವೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ ನಮ್ಮ ಕೆಲ ಪದಾಧಿಕಾರಿಗಳು ಬೆಳಗಾವಿಗೆ ಹೋಗಲಿದ್ದಾರೆ  ಎಂದು ತಿಳಿಸಿದರು.

    ಮುಂದುವರಿದ ಗೊಂದಲ: ಖಾಸಗಿ ಆಸ್ಪತ್ರೆಗಳ ಮುಷ್ಕರ ವಾಪಸ್ ಪಡೆಯುವ ವಿಚಾರದಲ್ಲಿ ವೈದ್ಯಕೀಯ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದೆ. ಹೈಕೋರ್ಟ್ ಸೂಚನೆಯನ್ವಯ ಸಭೆ ನಡೆಸಿದ ಫನಾ ಸಂಘಟನೆ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗೋದಾಗಿ ಪ್ರಕಟಿಸಿದೆ. ಆದ್ರೆ ವಿರೋಧ ವ್ಯಕ್ತಪಡಿಸಿದ ಐಎಂಎ ಸಂಘಟನೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳೋದಾಗಿ ಹೇಳಿದೆ. ಹೀಗಾಗಿ ಮುಷ್ಕರ ವಾಪಸ್ ವಿಚಾರದಲ್ಲಿ ಗೊಂದಲ ಮುಂದುವರಿದಿದೆ.

    ಇನ್ನು ನಾಳೆ ಮಧ್ಯಾಹ್ನ 2 ಗಂಟೆ ಮುಷ್ಕರ ನಿರತ ವೈದ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಇದಕ್ಕೆ ಪೂರ್ವಬಾವಿಯಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯಕೀಯ ತಿದ್ದುಪಡಿ ವಿಧೇಯಕವನ್ನು ಮಂಡಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.

     

    https://youtu.be/rAMDIHQ6ZjE

     

     

  • ಪ್ರತಿಭಟನೆಗೆ ಹೆದರಿ ಮಸೂದೆ ಹಿಂದಕ್ಕೆ ಪಡೆದ್ರೆ ಮುಂದೆ ಯಾವುದೇ ಕಾಯ್ದೆ ತರಲು ಸಾಧ್ಯವಿಲ್ಲ: ರಮೇಶ್ ಕುಮಾರ್

    ಪ್ರತಿಭಟನೆಗೆ ಹೆದರಿ ಮಸೂದೆ ಹಿಂದಕ್ಕೆ ಪಡೆದ್ರೆ ಮುಂದೆ ಯಾವುದೇ ಕಾಯ್ದೆ ತರಲು ಸಾಧ್ಯವಿಲ್ಲ: ರಮೇಶ್ ಕುಮಾರ್

    ಬೆಳಗಾವಿ: ಮಸೂದೆ ಇನ್ನೂ ಸದನಲ್ಲಿ ಮಂಡನೆಯಾಗಲಿಲ್ಲ. ಆದರೂ ಖಾಸಗಿ ವೈದ್ಯರು ಉಗ್ರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಲ್ಲಿ ಪ್ರತಿಷ್ಠೆಗೆ ಬಿದ್ದಿರೋದು ಯಾರು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ.

    ಖಾಸಗಿ ವೈದ್ಯರ ಮುಷ್ಕರ ಕುರಿತು ಬಿಜೆಪಿಯ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ರಮೇಶ್ ಕುಮಾರ್ ಉತ್ತರಿಸಿ, ನನಗೆ ಪ್ರತಿಷ್ಠೆ ಏಕೆ ಬೇಕು? ನಾನು ರಾಜರ ವಂಶದವನು ಅಲ್ಲ. ನನ್ನ ಅಪ್ಪ ಎರಡನೇ ಕ್ಲಾಸ್ ಓದಿದವರು ಅಷ್ಟೇ. ಅಮ್ಮ ಅನಕ್ಷರಸ್ಥೆ. ಇಂತಹವನಿಗೆ ಪ್ರತಿಷ್ಠೆ ಏಕೆ ಬೇಕು. ನನಗೆ ಪ್ರತಿಷ್ಠೆ ಇಲ್ಲ ಎಂದು ಹೇಳಿದರು.

    ವೈದ್ಯರ ಪ್ರತಿಭಟನೆಗೆ ಹೆದರಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು(ಕೆಪಿಎಂಇ) ಪಡೆದರೆ ಮುಂದೆ ಯಾವುದೇ ಕಾಯ್ದೆ ತರಲು ಸಾಧ್ಯವಿಲ್ಲ. ನಾವು ಜನರಿಗೆ ತಲೆ ಬಾಗಬೇಕು. ಅವರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

    ಮಸೂದೆ ಮಂಡನೆಯಾದ ಬಳಿಕ ಅದರಲ್ಲಿ ಏನಿದೆ ಎನ್ನುವುದು ಗೊತ್ತಾಗಲಿದೆ. ಇಂದು ಸಂಜೆ ಮಸೂದೆ ತಿದ್ದುಪಡಿ ಬಗ್ಗೆ ಏನು ಮಾಡಬೇಕು ಎನ್ನುವುದನ್ನು ಮುಖ್ಯಮಂತ್ರಿಗಳ ಜೊತೆ ಸೇರಿ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

    ನಮ್ಮ ಮೇಲೆ ಕೋಪ ಇದ್ದರೆ ಅದನ್ನು ರೋಗಿಗಳ ಮೇಲೆ ತೋರಿಸಬೇಡಿ. ವೈದ್ಯರು ಕೂಡಲೇ ಮುಷ್ಕರವನ್ನು ಕೈಬಿಡಬೇಕು ಎಂದು ಮನವಿ ಮಾಡಿದ ಅವರು, ಬಡ ರೋಗಿಗಳ ಪರವಾಗಿ ನಾವು ಕಾನೂನು ತರಲು ಮುಂದಾಗಿದ್ದೇವೆ ಎಂದು ಹೇಳುವ ಮೂಲಕ ಮಸೂದೆಯನ್ನು ಸಮರ್ಥಿಸಿಕೊಂಡರು.

    ನನ್ನ ಮತ್ತು ಸಿಎಂ ಮಧ್ಯೆ ಹೊಂದಾಣಿಕೆ ಇಲ್ಲ ಎನ್ನುವುದು ಸರಿಯಲ್ಲ. 40 ವರ್ಷಗಳ ಒಡನಾಟ ನನ್ನ ಸಿಎಂ ನಡುವೆ ಇದೆ. ಸಿಎಂ ಆಡಳಿತ ನನಗೆ ತೃಪ್ತಿ ನೀಡಿದೆ. ಬಡವರ ಪರವಾದ ಯಾವುದೇ ಕೆಲಸ ನೀಡಿದ್ರು ಅದನ್ನು ಜಾರಿಗೆ ತಂದಿದ್ದಾರೆ. ಲಾಭ-ನಷ್ಟ-ವ್ಯಾಪಾರಕ್ಕೆ ನಮ್ಮ ಸಂಬಂಧ ಇಲ್ಲ. ಲೀಡರ್ ವಿರುದ್ಧ ಮಾತನಾಡುವ ಸಂಸ್ಕೃತಿ ನಮ್ಮದಲ್ಲ. ನನ್ನ ಕೊನೆ ಉಸಿರು ಇರುವವರೆಗೂ ಸಿಎಂ ಸಿದ್ದರಾಮಯ್ಯ ಜೊತೆ ನಾನು ಇರುತ್ತೇನೆ. ನಿಲುವಳಿ ಸೂಚನೆಗೆ ಇದು ಯೋಗ್ಯವಲ್ಲ. ನಿಲುವಳಿ ಸೂಚನೆ ಪ್ರಸ್ತಾಪವನ್ನು ತಿರಸ್ಕರಿಸಿ ಬೇರೆ ರೀತಿಯಲ್ಲಿ ಚರ್ಚೆ ಮಾಡಿ ಎಂದು ಅವರು ಸಭಾಪತಿಗಳಿಗೆ ಮನವಿ ಮಾಡಿದರು.

    https://youtu.be/tHaPuie6qLI

    https://youtu.be/V7VmWYhVdec

    .