Tag: Ramesh Kumar

  • ಸಿಎಂ ಎಚ್‍ಡಿಕೆ ವಿರುದ್ಧ ಶಾಸಕ ರೇಣುಕಾಚಾರ್ಯ ಕೆಂಡಾಮಂಡಲ

    ಸಿಎಂ ಎಚ್‍ಡಿಕೆ ವಿರುದ್ಧ ಶಾಸಕ ರೇಣುಕಾಚಾರ್ಯ ಕೆಂಡಾಮಂಡಲ

    – ಎಚ್‍ಡಿಕೆಗೆ ಗೌರವವಿದ್ರೆ ಗೌಪ್ಯತೆ ಕಾಪಾಡಲಿ

    ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈನಿಂಗ್ ವಿಚಾರದಲ್ಲಿ ಎಸ್‍ಐಟಿಯನ್ನು ರಾಜಕೀಯ ದುರ್ಬಳಕೆಗೋಸ್ಕರ ರಚನೆ ಮಾಡಿದ್ರು. ಅಂದು ಕುಮಾರಸ್ವಾಮಿಯವರೇ ಎಸ್‍ಐಟಿಯನ್ನು ವಿರೋಧಿಸಿದ್ದರು. ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಮಾಡಿಸಿದ ಮುಖ್ಯಮಂತ್ರಿಯೇ ಮೊದಲ ಆರೋಪಿಯಾಗಿರುತ್ತಾರೆ. ಆರೋಪಿ ಕೈಕೆಳಗೆ ಎಸ್‍ಐಟಿ ಕೊಟ್ಟರೆ ಕಳ್ಳರ ಕೈಗೆ ಮನೆ ಕೀ ಕೊಟ್ಟಂತೆ ಆಗುತ್ತದೆ ಎಂದು ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸದನದಲ್ಲಿ ಇಂದು ಕೂಡ ಇದೇ ವಾದ ಮಾಡುತ್ತೇವೆ. ಎಸ್‍ಐಟಿ ತನಿಖೆಗೆ ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಸಭಾಧ್ಯಕ್ಷರು ಸಭೆ ಕರೆದಿದ್ದಾರೆ. ಯಡಿಯೂರಪ್ಪ ಹಾಗೂ ಬಿಜೆಪಿಯ ಮುಖಂಡರು, ಹಿರಿಯ ಶಾಸಕರು ಭಾಗವಹಿಸಿದ್ದಾರೆ. ಯಾವ ರೀತಿಯಲ್ಲಿ ಅಲ್ಲಿ ನಿರ್ಧಾರವಾಗುತ್ತದೆ. ಅದರ ನಂತರ ನಮ್ಮ ನಾಯಕರು ಏನ್ ಸೂಚನೆ ಕೊಡುತ್ತಾರೆ ಅದರ ಪ್ರಕಾರ ನಾವು ಎಸ್‍ಐಟಿಯನ್ನು ಪ್ರಬಲವಾಗಿ ವಿರೋಧ ಮಾಡುತ್ತೇವೆ ಎಂದು ಹೇಳಿದ್ರು.

    ಇದೂವರೆಗೂ ನಾನು ಸಭಾಧ್ಯಕ್ಷರಿಗೆ ಆರೋಪ ಮಾಡಿಲ್ಲ. ಕುಮಾರಸ್ವಾಮಿಯವರು ರಮೇಶ್ ಕುಮಾರ್ ವಿರುದ್ಧ ಯಾವ ರೀತಿಯ ಶಬ್ಧಗಳನ್ನು ಬಳಸಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ದಾಖಲೆ ಇದೆ. ಸಭಾಧ್ಯಕ್ಷರ ಪೀಠದ ಗೌರವವನ್ನು ಎತ್ತಿ ಹಿಡಿಯೋದಕ್ಕೋಸ್ಕರ ವಿಚಾರಗಳನ್ನು ಚರ್ಚೆ ಮಾಡಲ್ಲ. ಅಧಿವೇಶನದ ಹೊರಗಡೆ ನಡೆದಿರುವಂತಹ ಚರ್ಚೆಗಳಾಗಿವೆ. ಕುಮಾರಸ್ವಾಮಿಯವರಿಗೆ ನಿಜವಾಗಲೂ ಸ್ಪೀಕರ್ ರಮೇಶ್ ಕುಮಾರ್ ಪೀಠದ ಬಗ್ಗೆ ಗೌರವವಿದ್ದರೆ ಗೌಪ್ಯತೆಯನ್ನು ಕಾಪಾಡಿ ನೇರವಾಗಿ ಸಭಾಧ್ಯಕ್ಷರನ್ನು ಭೇಟಿ ಮಾಡಿ ಅಲ್ಲಿ ದೂರನ್ನು ಕೊಡಬೇಕಾಗಿತ್ತು ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಪ್ರಕರಣದ ಬಗ್ಗೆ ನಮಗೇನೂ ಭಯವಿಲ್ಲ, ಹುಳುಕಿಲ್ಲ. ಕುಮಾರಸ್ವಾಮಿಯವರು ಏನೇನ್ ಮಾಡಿದ್ದಾರೆಂದು ನಮಗೆ ಗೊತ್ತಿಲ್ಲ. 16 ಜನ ಶಾಸಕರನ್ನು ಗೋವಾಕ್ಕೆ ಹೈಜಾಕ್ ಮಾಡಿಲ್ಲವೇ? ಅಲ್ಲಿ ಏನೇನ್ ಮಾತಾಡಿದ್ದರೆ ಎಂದು ನನ್ನ ಬಳಿ ಬರಲಿ. ಬಹಿರಂಗ ಸವಾಲು ಹಾಕುತ್ತೇನೆ. ನಾನು ಗೋವಾದಲ್ಲಿದ್ದೆ. ರಾಜಕಾರಣದಲ್ಲಿ ಇವರೆಲ್ಲ ಸತ್ಯ ಹರಿಶ್ಚಂದ್ರರಾ ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಮಾಡಬಾರದದ್ದನ್ನು ಮಾಡಿದ್ದಾರೆ. ಇವರಿಗೆ ಎಷ್ಟು ಆಸ್ತಿಯಿತ್ತು. ಅವರು ಹುಟ್ಟದುಕ್ಕಿಂತ ಮುಂಚೆ ಭೂಮಿ ಇತ್ತಾ? ಇವರ ಕುಟುಂಬ ಯಾವ ರೀತಿ ಇತ್ತು..? ಹಾಸನ ಹಾಗೂ ಹೊಳೆನರಸೀಪುರ ಜನರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ ರೇಣುಕಾಚಾರ್ಯ, ಕುಮಾರಸ್ವಾಮಿಯವರು ಇಂದು ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ಸಲ್ಲಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿಯವರೇ ಮೊದಲನೆ ಆರೋಪಿ ಎಂದು ಅವರು ಸಿಎಂ ವಿರುದ್ಧ ಕೆಂಡಾಮಂಡಲರಾದ್ರು.

    ಈ ಸರ್ಕಾರ, ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇಲಲದಿರುವುದರಿಂದ ಅವರು ಹೋಗಿರುವುದನ್ನು ಬಿಜೆಪಿ ಪಕ್ಷದ ಹಣೆಗೆ ಕಟ್ಟಲು ಬರುತ್ತಾರೆ. ನಾವು ಸರ್ಕಾರ ರಚನೆಗೆ ಕೈ ಹಾಕಿಲ್ಲ. 104 ಶಾಸಕರ ಜನಾದೇಶ ನಮ್ಮ ಪರವಾಗಿದೆ. ಈ ಕಾಂಗ್ರೆಸ-ಜೆಡಿಎಸ್ ವಿರುದ್ಧವಾಗಿದೆ ಎಂದು ಗರಂ ಆದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೇಪ್ ಒಳಗಾದ ವ್ಯಕ್ತಿಯ ಸ್ಥಿತಿ ನನ್ನದು – ಎಲ್ಲರೂ ಸೇರ್ಕೊಂಡು ರೇಪ್ ಮಾಡ್ತಿದ್ದೀರಿ: ಸ್ಪೀಕರ್

    ರೇಪ್ ಒಳಗಾದ ವ್ಯಕ್ತಿಯ ಸ್ಥಿತಿ ನನ್ನದು – ಎಲ್ಲರೂ ಸೇರ್ಕೊಂಡು ರೇಪ್ ಮಾಡ್ತಿದ್ದೀರಿ: ಸ್ಪೀಕರ್

    ಬೆಂಗಳೂರು: ಆಪರೇಷನ್ ಕಮಲ ಆಡಿಯೋ ಟೇಪ್ ಪ್ರಕರಣ 2ನೇ ದಿನವೂ ಸದನದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ವೇಳೆ ವಿಧಾನಸಭಾ ಅಧ್ಯಕ್ಷರಾದ ರಮೇಶ್ ಕುಮಾರ್ ಅವರು ತಮ್ಮ ಸ್ಥಿತಿಯ ಬಗ್ಗೆ ವ್ಯಂಗ್ಯ ಮಾಡಿ ಎರಡು ಪಕ್ಷಗಳ ನಾಯಕರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.

    ಸದನದಲ್ಲಿ ನಡೆದ ಚರ್ಚೆ ವೇಳೆ ಸ್ಪೀಕರ್ ಅವರಿಗೆ ಎಲ್ಲಾ ಶಾಸಕರು ಕೂಡ ಬೆಂಬಲ ನೀಡುವಂತೆ ಮಾತನಾಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ನನ್ನ ಸದ್ಯದ ಸ್ಥಿತಿ ರೇಪ್‍ಗೆ ಒಳಗಾದವರ ಪರಿಸ್ಥಿತಿಯಂತಿದೆ. ರೇಪ್ ಆದ ವ್ಯಕ್ತಿಗೆ ಕೋರ್ಟ್ ನಲ್ಲಿ ಹೋದರೆ ಎಲ್ಲಿ ಆಯ್ತು? ಹೇಗಾಯ್ತು ಎಂದು ಪದೇ ಪದೇ ಕೇಳುತ್ತಾರೆ. ಅದೇ ರೀತಿ ನೀವೆಲ್ಲಾ ನನ್ನ ರೇಪ್ ಮಾಡುತ್ತಿದ್ದೀರಿ ಎಂದು ತಮ್ಮ ನೋವನ್ನು ಹೊರ ಹಾಕಿದರು.

    ಸಭಾಧ್ಯಕ್ಷರನ್ನು ಬೀದಿಗೆ ತಂದಿದ್ದಾರೆ, ತಂದಿದ್ದಾರೆ ಎಂದು ಪದೇ ಪದೇ ಎರಡು ಪಕ್ಷಗಳು ಹೇಳುತ್ತೀದ್ದಿರಿ. ಆದರೆ ರೇಪ್ ಆದ ಪರಿಸ್ಥಿತಿ ನನಗೆ ಆಗಿದ್ದು, ಕೋರ್ಟಿನಲ್ಲಿ ವಕೀಲರು ಪದೇ ಪದೇ ಪ್ರಶ್ನೆ ಮಾಡುತ್ತಾರೆ. ಒಬ್ಬ ವ್ಯಕ್ತಿಯ ಮೇಲೆ 1 ಬಾರಿ ರೇಪ್ ಆಗಿದ್ದರೆ, ಕೋರ್ಟ್ ನಲ್ಲಿ 100 ಬಾರಿ ರೇಪ್ ಮಾಡುತ್ತಾರೆ ಎಂಬಂತೆ ನನ್ನ ಸ್ಥಿತಿಯೂ ಆಗಿದೆ ಎಂದರು.

    ಆಪರೇಷನ್ ಕಮಲ ವಿಡಿಯೋ ಬಗ್ಗೆ ಸ್ಪೀಕರ್ ಗಮನಕ್ಕೆ ಮೊದಲು ತರಬೇಕಿತ್ತು. ಆದರೆ ಮಾಧ್ಯಮಗಳ ಮುಂದೇ ಸ್ಪೀಕರ್ ಬಗ್ಗೆ ಮಾತನಾಡಿ ಅವರನ್ನು ಬೀದಿಗೆ ತಂದಿದ್ದಾರೆ ಎಂದು ಬಿಜೆಪಿ ಶಾಸಕರು ಸದನದಲ್ಲಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಆರೋಪಿಸಿದರು. ಆದರೆ ಬಿಜೆಪಿ ನಾಯಕರ ಈ ಮಾತಿಗೆ ತಿರುಗೇಟು ಕೊಟ್ಟ ಸಿಎಂ ಎಚ್‍ಡಿಕೆ, ಏನೂ ತಪ್ಪು ಮಾಡಿಲ್ಲ ಅಂದರೆ ಬಿಜೆಪಿಯವರಿಗೆ ಭಯ ಏಕೆ ಎಂದು ಪ್ರಶ್ನಿಸಿದರು. ಅಲ್ಲದೇ ನಾವು ಆಪರೇಷನ್ ಕಮಲ ಮಾಡುತ್ತಾನೆ ಇಲ್ಲ ಎಂದು ಬಿಜೆಪಿಯವರು ಹೇಳುತ್ತಾ ಬಂದಿದ್ದರು. ಆದರೆ ಸತ್ಯವನ್ನ ಜನರಿಗೆ ತೋರಿಸಬೇಕಿತ್ತಲ್ವಾ? ಅದಕ್ಕೆ ಆಡಿಯೋ ನೀಡಿದೆ. ಸ್ಪೀಕರ್ ಹೆಸರನ್ನು ಬೀದಿಗೆ ತಂದಿದ್ದು ಯಾರು? ಎನ್ನುವುದನ್ನು ಅವರೇ ಯೋಚನೆ ಮಾಡಲಿ, ನಾನೇನು ಫೋನ್ ಕದ್ದಾಲಿಕೆ ಮಾಡಿಲ್ಲ ಎಂದು ಟಾಂಗ್ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳ್ಳನ ಕೈಗೆ ಬೀಗ ಕೊಟ್ರೆ ಏನ್ ಲಾಭ?: ಈಶ್ವರಪ್ಪ

    ಕಳ್ಳನ ಕೈಗೆ ಬೀಗ ಕೊಟ್ರೆ ಏನ್ ಲಾಭ?: ಈಶ್ವರಪ್ಪ

    -ಸದನದಲ್ಲಿ ಸಿಡಿ ಪ್ರದರ್ಶಿಸಿದ ರೇಣುಕಾಚಾರ್ಯ

    ಬೆಂಗಳೂರು: ಆಪರೇಷನ್ ಕಮಲ ನಡೆದಿದೆ ಎಂದು ಆರೋಪಿಸಿ ಸಿಎಂ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ ತನಿಖೆಯನ್ನು ಎಸ್‍ಐಟಿಗೆ ನೀಡುವ ತೀರ್ಮಾನದ ಕುರಿತು ಶಾಸಕ, ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸದನದಲ್ಲಿ ಈ ಕುರಿತು ಜೋರು ಧ್ವನಿಯಲ್ಲಿ ಸ್ಪೀಕರ್ ಅವರನ್ನು ಮನವಿ ಮಾಡಿದ ಈಶ್ವರಪ್ಪ ಅವರು, ಎಸ್‍ಐಟಿಗೆ ತನಿಖೆಗೆ ಅವಕಾಶ ನೀಡುವುದು, ಕಳ್ಳನ ಕೈಗೆ ಬೀಗ ಕೊಟ್ರೆ ಏನು ಲಾಭ ಎಂದು ಪ್ರಶ್ನೆ ಮಾಡಿದ್ದಾರೆ. ಕಲಾಪದ ವೇಳೆ ಸಿಎಂ ಕುಮಾರಸ್ವಾಮಿ ಅವರು ಸ್ಪೀಕರ್ ಅವರ ಮಾತಿನ ಮೇರೆಗೆ ತನಿಖೆ ನಡೆಸಲು ಒಪ್ಪಿಗೆ ಸೂಚಿದರು. ಆದರೆ ಇದಕ್ಕೆ ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಸ್ಪೀಕರ್ ಅವರೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಮನವಿ ಮಾಡಿದರು.

    ಬಿಜೆಪಿ ಶಾಸಕರ ಮಾತಿಗೆ ಒಪ್ಪಿಗೆ ಸೂಚಿಸದ ಸ್ಪೀಕರ್ ನ್ಯಾಯಾಂಗ ತನಿಖೆಗೆ ಆದೇಶ ನೀಡುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ, ಆದ್ದರಿಂದ ಸಿಎಂ ಅವರೇ ಈ ನಿರ್ಧಾರ ಮಾಡಲಿದ್ದಾರೆ. ಆದರೆ ಪ್ರಕರಣದ ಯಾರೇ ಪ್ರಕರಣದ ತನಿಖೆ ನಡೆಸಿದರು ಕೂಡ ನನ್ನ ಅಭಿಪ್ರಾಯ ಬದಲಾಗುವುದಿಲ್ಲ. 15 ದಿನಗಳಲ್ಲಿ ವರದಿ ಕೊಡದಿದ್ದರೆ ನನ್ನ ತಲೆಮೇಲೆ ಹೊತ್ತುಕೊಂಡು ಇರುವುದಕ್ಕೆ ಆಗಲ್ಲ, ನನ್ನ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು. ಈ ಹಂತದಲ್ಲಿ ಆಡಳಿತ ಪಕ್ಷದ ಶಾಸಕರು ಹಾಗೂ ಬಿಜೆಪಿ ಶಾಸಕರ ನಡುವೆ ವಾಗ್ವಾದ ಏರ್ಪಡಿಸಿತ್ತು. ಬಳಿಕ ಸ್ಪೀಕರ್ ಅವರು ಸದನವನ್ನು ನಾಳೆಗೆ ಮುಂದೂಡಿದರು.

    ಸದನದಲ್ಲಿ ಸರ್ಕಾರ ನಿರ್ಧಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರೇಣುಕಾಚಾರ್ಯ ಅವರು, ಬಿಎಸ್ ಯಡಿಯೂರಪ್ಪ ಅವರ ಮನೆಗೆ ರೇವಣ್ಣ ಏಕೆ ಆಗಮಿಸಿದ್ದರು. 2014 ರಲ್ಲಿ ಎಂಎಲ್‍ಸಿ ಸ್ಥಾನಕ್ಕಾಗಿ ಶಾಸಕರಿಗೆ ಕೋಟಿ ಕೋಟಿ ನೀಡಲು ಮಾತನಾಡಿದ್ದಾರೆ 40 ಕೋಟಿ ರೂ. ಡೀಲ್ ಎಂದು ಸಿಡಿ ಪ್ರದರ್ಶಿಸಿದರು. ಬಳಿಕ ಸ್ಪೀಕರ್ ಅವರಿಗೆ ಸಿಡಿ ನೀಡಿ ತನಿಖೆಗೆ ಆಗ್ರಹಿಸಿದರು. ಸದನ ಹೊರ ಬಂದು ಮಾಧ್ಯಮಗಳೊಂದಿಗೂ ಕೂಡ ಆಸಮಾಧಾನ ಹೊರ ಹಾಕಿದ ರೇಣುಕಾಚಾರ್ಯ ಅವರು, ಸಿಎಂ ಸತ್ಯ ಹರಿಶ್ಚಂದ್ರರಂತೆ ಪೋಸ್ ನೀಡುತ್ತಿದ್ದಾರೆ. ಅವರ ಸಿಡಿ ಬಗ್ಗೆಯೂ ತನಿಖೆ ಆಗಲಿ. ಮಾಧ್ಯಮಗಳಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಕೂಡ ನಾವು ಎಸ್‍ಐಟಿ ತನಿಖೆ ಒಪ್ಪಿಕೊಳ್ಳುವುದಿಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತನಿಖೆಯನ್ನು ಎಸ್‍ಐಟಿಗೆ ಒಪ್ಪಿಸಬೇಡಿ- ಬಿಜೆಪಿ ಶಾಸಕ ಮಾಧುಸ್ವಾಮಿ

    ತನಿಖೆಯನ್ನು ಎಸ್‍ಐಟಿಗೆ ಒಪ್ಪಿಸಬೇಡಿ- ಬಿಜೆಪಿ ಶಾಸಕ ಮಾಧುಸ್ವಾಮಿ

    ಬೆಂಗಳೂರು: ಆಪರೇಷನ್ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಬೇಡಿ ಎಂದು ಶಾಸಕ ಮಾಧುಸ್ವಾಮಿ ಆಗ್ರಹಿಸಿದ್ದಾರೆ.

    ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತನಿಖೆ ಶಾಸನ ಸಭೆಯ ಅಧ್ಯಕ್ಷರಿಂದ ನಡೆಯಬೇಕು ಎಂದು ನಾವು ಬಹಳ ಸ್ಪಷ್ಟವಾಗಿಯೇ ಹೇಳಿದ್ದೇವೆ. ಅವರು ನೇಮಕ ಮಾಡಬಹುದಾದ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ನಮ್ಮ ಅಪೇಕ್ಷೆಯಾಗಿದೆ. ಯಾಕಂದ್ರೆ ಈ ಎಲ್ಲಾ ಹಗರಣಗಳ ರೂವಾರಿ ಮುಖ್ಯಮಂತ್ರಿಗಳಾಗಿದ್ದಾರೆ.

    ಅಕಸ್ಮಾತ್ ಯಾರೋ ಒಬ್ಬರು ಸದಸ್ಯ ಸ್ಪೀಕರ್ ಬಗ್ಗೆ ಮಾತನಾಡಿದ್ರೂ ಕೂಡ ಅದನ್ನು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ಸಾರ್ವಜನಿಕವಾಗಿ ಚರ್ಚೆಗೆ ಬರುವಂತಹ ಸ್ಥಿತಿಗೆ ತಂದಿದ್ದಾರೆ. ಆ ಮಾತಿಗೆ ಇಷ್ಟೊಂದು ಪ್ರಚಾರ ಕೊಡದೇ ಹೋಗಿದ್ರೆ ಇಂದು ರಮೇಶ್ ಕುಮಾರ್ ಅವರು ಈ ರೀತಿ ಮಾತನಾಡಬೇಕಾದ ಅಗತ್ಯ ಇರಲಿಲ್ಲ ಅಂದ್ರು.

    ಯಾರೋ ಖಾಸಗಿಯಾಗಿ ಮಾತನಾಡಿದ್ದನ್ನು ಪ್ರಚಾರ ಕೊಟ್ಟು ಶಾಸನ ಸಭಾ ಅಧ್ಯಕ್ಷರ ಸ್ಥಾನಕ್ಕೆ ಕಳಂಕ ಬಂತು ಎಂದು ಹೇಳಿ ಅವರು ಮನಸ್ಸಿಗೆ ತೆಗೆದುಕೊಂಡಿದ್ದಾರೆ. ಇವರಿಗೆ ಗೊತ್ತಿತ್ತಲ್ವ ಅವರು ಬಹಳ ಸೂಕ್ಷ್ಮವಾದ ವ್ಯಕ್ತಿಯಾಗಿದ್ದು, ಅವರು ಇಂತಹ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾರೆ ಎಂದು ಕುಮಾರಸ್ವಾಮಿಗೆ ಗೊತ್ತಿದ್ದು ಅವರು ಅದನ್ನು ಸಾರ್ವಜನಿಕವಾಗಿ ಮಾತಾಡಿ ಇಷ್ಟೊಂದು ದೊಡ್ಡ ಸುದ್ದಿ ಮಾಡುವ ಅವಶ್ಯಕತೆ ಇರಲಿಲ್ಲ. ಚರ್ಚೆಯನ್ನು ಮೊದಲನೇ ಪಾರ್ಟ್‍ಗೆ ನಿಲ್ಲಬಹುದಾಗಿತ್ತು. ತನಿಖೆ ಶುರುವಾದಾಗ ಇದನ್ನು ಹೇಳಬಹುದಾಗಿತ್ತು. ಅವರ ಅಧೀನದಲ್ಲಿರುವ ಇಲಾಖೆಗಳು, ತನಿಖಾ ಸಂಸ್ಥೆಗಳಿಂದ ನ್ಯಾಯವಾದ ತನಿಖೆ ಆಗುತ್ತೆ ಎಂದು ನಮಗೆ ವಿಶ್ವಾಸ ಇಲ್ಲ. ಹೀಗಾಗಿ ಮರುಪರಿಶೀಲನೆ ಮಾಡಿ ಎಂದು ಸದನದಲ್ಲಿ ಸ್ಪೀಕರ್ ಅವರನ್ನು ಕೇಳಿಕೊಳ್ಳುವುದಾಗಿ ಹೇಳಿದ್ದಾರೆ.

    ಸ್ಪೀಕರ್ ಬಗ್ಗೆ ಮಾತನಾಡಿರುವವರನ್ನು ಬಿಟ್ಟು ಬಿಡಿ ಎಂದು ಹೇಳುವ ಸ್ಥಿತಿಯಲ್ಲಿ ನಾವಿಲ್ಲ. ಆದ್ರೆ ಅವರಿಗೆ ಅವಕಾಶ ಕೊಡಬೇಡಿ ಎಂದು ಅವರು ಮನವಿ ಮಾಡಿಕೊಂಡರು. ಇದೇ ವೇಳೆ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ಶಾಸಕರು ಎಸ್‍ಐಟಿ ತನಿಖೆಯನ್ನು ವಿರೋಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 50 ಕೋಟಿಯ ಕಸದ ಬುಟ್ಟಿ ತಲೆ ಮೇಲೆ ಇಟ್ಕೊಂಡು ಹೊರಗೆ ಹೋಗೋಕ್ಕಾಗಲ್ಲ- ಸ್ಪೀಕರ್ ಬೇಸರ

    50 ಕೋಟಿಯ ಕಸದ ಬುಟ್ಟಿ ತಲೆ ಮೇಲೆ ಇಟ್ಕೊಂಡು ಹೊರಗೆ ಹೋಗೋಕ್ಕಾಗಲ್ಲ- ಸ್ಪೀಕರ್ ಬೇಸರ

    -ಇಲ್ಲೇ ಇರ್ತೀನಿ ದೊಮ್ಮಲೂರಿನ ನನ್ನ ಮನೆ ನೋಡ್ಕೊಂಡು ಬನ್ನಿ

    ಬೆಂಗಳೂರು: 50 ಕೋಟಿ ಹಣವನ್ನು ಪಡೆದಿದ್ದೇನೆ ಎಂಬ ಕಸದ ಬುಟ್ಟಿಯನ್ನು ತಲೆ ಮೇಲೆ ಇಟ್ಟುಕೊಂಡು ಹೊರಗೆ ಹೋಗುವುದಕ್ಕೆ ಆಗಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

    ಅಧಿವೇಶನದ ಆರಂಭದಿಂದಲೂ ಸ್ಪೀಕರ್ ಅವರು, ಈ ಆರೋಪದಿಂದ ತುಂಬಾ ನೊಂದಿದ್ದೇನೆ. ಅಧಿವೇಶನಕ್ಕೆ ಬರುವ ಮುನ್ನ ಒಂದು ಬಾರಿ ಮತ್ತೆ ಆಡಿಯೋ ಕೇಳಿಕೊಂಡು ಬಂದಿದ್ದೇನೆ. ಆ ಆಡಿಯೋದಲ್ಲಿ ಸ್ಪೀಕರ್‍ಗೆ 50 ಕೋಟಿ ರೂ. ನೀಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ನನ್ನ ಬಗ್ಗೆಯೇ ಆ ಮಾತು ಕೇಳಿಬಂದಾಗ ಅವಿರೋಧವಾಗಿ ಆಯ್ಕೆಯಾದಾಗ ನನಗೆ ಈ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅನ್ನಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

    ಬದುಕಿರೋ ಒಬ್ಬ ಅಣ್ಣ ನನ್ನ ಮೇಲೆ ಪ್ರಾಣ ಇಟ್ಟುಕೊಂಡಿದ್ದಾನೆ. ಈ ಕಸದ ಬುಟ್ಟಿ ತಲೆ ಮೇಲೆ ಇಟ್ಟುಕೊಂಡು ನನಗೆ ಹೋಗುವುದಕ್ಕೆ ಆಗಲ್ಲ. 50 ಕೋಟಿ ರೂ. ಹಣ ಪಡೆದಿದ್ದೆನೆ ಎಂಬ ಆರೋಪ ಹೊತ್ತ ನಾನು ಮನೆಗೆ ತೆರಳಿ ನನ್ನ ಮುಖವನ್ನು ಹೆಂಡತಿ, ಮಕ್ಕಳಿಗೆ ಹೇಗೆ ತೋರಿಸಲಿ. ನನ್ನ ಮೇಲೆ ಆರೋಪ ಮಾಡಿದ ವ್ಯಕ್ತಿ ಸದನದಲ್ಲಿಯೇ ಇದ್ದಾರೆ. ಆರೋಪ ಮುಕ್ತನಾದ್ರೆ ಆ ಶಾಸಕ ರಾಜಕಾರಣದಿಂದ ದೂರ ಉಳಿಯಬೇಕು, ಇಲ್ಲವೇ ನಾನೇ ರಾಜಕೀಯದಿಂದ ನಿವೃತ್ತಿ ಪಡೆಯಬೇಕು ಎಂದು ಒಂದು ಕ್ಷಣ ಸ್ಪೀಕರ್ ಗರಂ ಆದ್ರು.

    ಬೆಂಗಳೂರಿನಲ್ಲಿ ಸರ್ಕಾರಿ ಬಂಗಲೆಯನ್ನ ಸಹ ತೆಗೆದುಕೊಳ್ಳದೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ನೀಡಿದ್ರೆ ನಾನು ಅದನ್ನು ಎಲ್ಲಿ ಇಟ್ಟುಕೊಳ್ಳಲಿ. ಯಾರಿಗಾದ್ರೂ ಅನುಮಾನ ಇದ್ದರೆ ನಾನು ಇಲ್ಲೇ ಇರ್ತಿನಿ, ದೊಮ್ಮಲೂರಿನ ನನ್ನ ಬಾಡಿಗೆ ಮನೆಯನ್ನು ನೋಡಿಕೊಂಡು ಬನ್ನಿ. ನನ್ನ ರಾಜಕೀಯ ಗುರು ನಮ್ಮ ತಾಯಿ. ಅವರನ್ನು ಕಳೆದುಕೊಂಡು 28 ವರ್ಷಗಳಾಗಿದೆ. ನನ್ನ ತಾಯಿಗೆ ನಾನು 8ನೇಯವನು ಹಾಗೆಯೇ ಕೊನೆಯವನು ಕೂಡ. ನಮಗಿಂತ ಒಳ್ಳೆಯವರ ಮನೆಗೆ ಹೋದರೆ ಅಥವಾ ನೆಂಟರು ಬಂದ್ರೆ ಕಾಲಿನ ಧೂಳು ನಮ್ಮ ಮನೆಗೆ ಅಂಟಿಕೊಳ್ಳಬಾರದೆಂದು ಕಾಲು ತೊಳೆದು ಬರಲು ಹೇಳಿಕೊಟ್ಟಿದ್ದರು. ಆ ಧೂಳು ನಮ್ಮ ಮನೆಯಲ್ಲಿರಬಾರದು ಎಂದು ಹೇಳಿಕೊಟ್ಟಿದ್ದರು ಎಂದು ಮಾತು ಮುಂದುವರಿಸುತ್ತಾ ಸ್ಪೀಕರ್ ಕಣ್ಣೀರಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಡಿಯೋ ಅಸಲಿಯೋ..? ನಕಲಿಯೋ ತಿಳಿಯಬೇಕು: ಈಶ್ವರಪ್ಪ

    ಆಡಿಯೋ ಅಸಲಿಯೋ..? ನಕಲಿಯೋ ತಿಳಿಯಬೇಕು: ಈಶ್ವರಪ್ಪ

    ಬೆಂಗಳೂರು: ಧ್ವನಿ ಸುರಳಿಯಲ್ಲಿ ಯಾರು ಮಾತನಾಡಿದ್ದಾರೆ ಎಂಬವುದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ಯಾರ ಯಾರ ನಡುವೆ ಸಂಭಾಷಣೆ ನಡೆಯಿತು. ಎಷ್ಟು ಕೋಟಿಗೆ ಡೀಲ್ ಆಯ್ತು ಎಂಬ ಎಲ್ಲ ಮಾಹಿತಿಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಆಡಿಯೋದಲ್ಲಿ ಸ್ಪೀಕರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಪ್ರಧಾನಿ, ನ್ಯಾಯಮೂರ್ತಿಗಳ ಹೆಸರುಗಳು ಕೇಳಿ ಬಂದಿದ್ದು, ಪ್ರಜಾಪ್ರಭುತ್ವಕ್ಕೆ ದೊಡ್ಡ ಅವಮಾನ ಮಾಡಿದಂತಾಗಿದೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

    ಇದು ಕೇವಲ ರಮೇಶ್ ಕುಮಾರ್ ಅವರಿಗಾದ ವೈಯಕ್ತಿಕ ನೋವು ಅಲ್ಲ. ರಾಜ್ಯಕ್ಕೆ, ಸದನ ಹಾಗು ಸದಸ್ಯರೆಲ್ಲರಿಗಾದ ನೋವು. ಬಿಡುಗಡೆಯಾಗಿರುವ ಧ್ವನಿ ಸುರಳಿ ಫೇಕ್ ಅಲ್ಲವೋ ಹೌದೋ ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ. ಆಡಿಯೋ ಅಸಲಿಯೋ ಅಥವಾ ನಕಲಿಯೋ ಎಂಬ ವಿಷಯ ಗೊತ್ತಾಗಬೇಕಿದೆ ಎಂದು ಹೇಳುವ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿದರು.

    ಈಶ್ವರಪ್ಪನವರ ಮಾತಿಗೆ ಪ್ರತಿಕ್ರಿಯಿಸಿದ ಸ್ಪೀಕರ್, ಧ್ವನಿ ಸುರಳಿಯಲ್ಲಿನ ಪ್ರತಿಯೊಂದು ಪದಗಳನ್ನು ತೂಕಕ್ಕೆ ಹಾಕಿ ಸದನದಲ್ಲಿ ಮಾತನಾಡಿದ್ದೇನೆ. ಧ್ವನಿ ಸುರಳಿಯಲ್ಲಿ ಸ್ಪಷ್ಟವಾಗಿ ನನ್ನ ಹೆಸರು ಉಲ್ಲೇಖವಾಗಿದೆ. ಈ ಬಗ್ಗೆ ತನಿಖೆ ಸಹ ನಡೆಯಲಿ. ನಾನು ಆಡಿಯೋವನ್ನು ಅಸಲಿ ಎಂದು ಎಲ್ಲಿಯೂ ಹೇಳಿಲ್ಲ. ತನಿಖೆಯಲ್ಲಿ ಆಡಿಯೋ ನಕಲಿ ಎಂದು ಸಾಬೀತಾದ್ರೆ ಹೆಚ್ಚು ನೆಮ್ಮದಿಯಿಂದ ನಾನು ಉಸಿರಾಡುತ್ತೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಯವಿಟ್ಟು ಎಮೋಷನಲ್ ಆಗಬೇಡಿ-ಸ್ಪೀಕರ್​ಗೆ ಡಿಕೆಶಿ ಮನವಿ

    ದಯವಿಟ್ಟು ಎಮೋಷನಲ್ ಆಗಬೇಡಿ-ಸ್ಪೀಕರ್​ಗೆ ಡಿಕೆಶಿ ಮನವಿ

    – ನಿಮ್ಮ ತೀರ್ಪು ಇತಿಹಾಸ ಸೃಷ್ಟಿಸಬೇಕು

    ಬೆಂಗಳೂರು: ನಿಮ್ಮನ್ನು ಬಹಳ ಚಿಕ್ಕವಯಸ್ಸಿನಿಂದಲೇ ನಾನು ನೋಡಿದ್ದೇನೆ. ಅಂದು ಸ್ಪೀಕರ್ ಆಗಿದ್ದಾಗ ಸಾಕಷ್ಟು ಎಮೋಷನಲ್ ಆಗಿದ್ದನ್ನು ಕೂಡ ನಾನು ಕಂಡಿದ್ದೇನೆ. ಅಲ್ಲದೇ ಅಂದು ಈ ಕುರ್ಚಿ ಬಿಟ್ಟು ಎದ್ದು ಹೋಗಿದ್ದನು ಕೂಡ ನಾನು ಗಮನಿಸಿದ್ದೇನೆ. ಆದ್ರೆ ಇಂದು ಮತ್ತೆ ಎಮೋಷನಲ್ ಆಗಬೇಡಿ ಎಂದು ಸಚಿವ ಡಿಕೆ ಶಿವಕುಮಾರ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಮನವಿ ಮಾಡಿಕೊಂಡರು.

    ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿಯವರು ಆಪರೇಷನ್ ಕಮಲ ಮಾಡಿರುವ ಆಡಿಯೋದಲ್ಲಿ 50 ಕೋಟಿ ಕೊಟ್ಟು ಸ್ಪೀಕರ್ ಅವರನ್ನು ಖರೀದಿಸಿರುವ ವಿಚಾರ ಭಾರೀ ಸದ್ದು ಮಾಡಿತ್ತು. ಕಲಾಪದ ಆರಂಭದಲ್ಲೇ ಸ್ಪೀಕರ್ ಈ ವಿಚಾರ ಪ್ರಸ್ತಾಪಿಸಿ ಕಣ್ಣೀರು ಹಾಕಿದ್ರು. ಹೀಗಾಗಿ ಈ ವಿಚಾರದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ದಯವಿಟ್ಟು ಇದನ್ನು ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಬಗ್ಗೆ ಕೇವಲವಾಗಿ ಮಾತನಾಡಿದವರು, ಖರೀದಿ ಮಾಡಿದ್ದೀವಿ ಎಂದವರು ತಕ್ಕ ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದರು.

    ನೀವು ಒಂದು ದೊಡ್ಡ ಸ್ಥಾನದಲ್ಲಿ ಕುಳಿತಿದ್ದೀರಿ. ಇಲ್ಲಿ ಬಹಳ ದೊಡ್ಡ ದೊಡ್ಡ ವಿಚಾರ ಅಡಗಿರುವುದರಿಂದ ಇಂದು ಇಡೀ ದೇಶ ಹಾಗೂ ಹೊರದೇಶದಲ್ಲಿಯೂ ಕರ್ನಾಟಕದ ಪ್ರಜಾಪ್ರಭುತ್ವನ್ನು ಗಮನಿಸುತ್ತಿದೆ. ಹೀಗಾಗಿ ತಾವು ಎಮೋಷನಲ್ ಆಗಿ ಯಾವ ತೀರ್ಮಾನವನ್ನು ತೆಗೆದುಕೊಳ್ಳಬಾರದು. ಇದು ತಮ್ಮ ಒಬ್ಬರದ್ದೇ ವಿಚಾರವಲ್ಲ. ರಾಜ್ಯದ ಒಬ್ಬ ಮುಖ್ಯಮಂತ್ರಿಯಾಗಿರುವವರು ಅವರಿಗೆ ತಿಳಿದ ವಿಚಾರದ ಪತ್ರವನ್ನು ತಮಗೆ ಕೊಟ್ಟು, ಅದನ್ನು ಕೂಡ ತಾವು ಗಮನದಲ್ಲಿಟ್ಟುಕೊಂಡು ಇಂದು ಪ್ರಸ್ತಾಪ ಮಾಡಿದ್ದೀರಿ.

    ಇಲ್ಲಿ ಶಾಸಕ ಹಾಗೂ ಸಚಿವರ ಮರ್ಯಾದೆ ಎಲ್ಲಾ ಹಾಳಾಗಿ ಹೋಗುತ್ತಿದೆ. ಇದರಿಂದ ಇಂದು ನಾವು ಯಾರೂ ಕೂಡ ತಲೆ ಎತ್ತಿ ನಡೆಯೋ ಹಾಗಿಲ್ಲ. ಹೀಗಾಗಿ ತಾವು ಅದನ್ನು ಪ್ರಶ್ನೆ ಮಾಡಿದ್ದೀರಿ. ನಮ್ಮ ಗೌರವವನ್ನು ಉಳಿಸಬೇಕಾದವರು ಹಾಗೆಯೇ ನಮ್ಮನ್ನು ರಕ್ಷಣೆ ಮಾಡಬೇಕಾದವರು ನೀವು. ಹೀಗಾಗಿ ತಾವು ಮೇಲ್ಗಡೆ ಕೂತಂತಹ ಸಂದರ್ಭದಲ್ಲಿ ನಿಮ್ಮದೊಂದು ವಿಚಾರದಲ್ಲಿ ಮಾತ್ರ ನೀವು ತೀರ್ಪು, ಆದೇಶ, ಸಂದೇಶ, ಈ ಸರ್ಕಾರಕ್ಕೆ ಹಾಗೂ ಈ ಮನೆಗೆ ನೀವು ಅವಕಾಶ ಮಾಡಿಕೊಡಬಾರದು ಅಂದ್ರು.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರು, ಸಚಿವರನ್ನು ನೀವು ರಕ್ಷಣೆ ಮಾಡಬೇಕು. ಸಂಸತ್ತಿನ ವ್ಯವಸ್ಥೆಯಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಬೇಕು. ಹಳ್ಳಿಗಳಲ್ಲಿ ನಮ್ಮ ಬಗ್ಗೆ ಏನು ಮಾತಾಡ್ತಿದ್ದಾರೆ. ಹೀಗಾಗಿ ಇಲ್ಲಿ ನೀವು ನಿಮ್ಮ ಬಗ್ಗೆ ಮಾತ್ರ ಚರ್ಚೆ ನಡೆಸಬಾರದು ಎಂದು ಅವರು ಹೇಳಿದ್ದಾರೆ.

    ಒಟ್ಟಿನಲ್ಲಿ ಈ ಬಗ್ಗೆ ನೀವು ಕೊಡುವ ಆದೇಶ ಇತಿಹಾಸವಾಗಲೇ ಬೇಕು. ಈ ಮೂಲಕ ತಮ್ಮ ತೀರ್ಪನ್ನು ಇಡೀ ದೇಶ ನೋಡುವಂತಾಗಬೇಕು. ಇಲ್ಲಿ ನಾನು ಯಾರನ್ನೂ ಆರೋಪಿಗಳನ್ನಾಗಿ ಮಾಡಿ ಎಂದು ಹೇಳುತ್ತಿಲ್ಲ. ಆದ್ರೆ ಸಮಗ್ರ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿ, ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನಗೆ ನಿಮ್ಮ ಮೇಲೆ ಎಳ್ಳಷ್ಟೂ ಅನುಮಾನ ಬರಲು ಸಾಧ್ಯವಿಲ್ಲ: ಸಿದ್ದರಾಮಯ್ಯ

    ನನಗೆ ನಿಮ್ಮ ಮೇಲೆ ಎಳ್ಳಷ್ಟೂ ಅನುಮಾನ ಬರಲು ಸಾಧ್ಯವಿಲ್ಲ: ಸಿದ್ದರಾಮಯ್ಯ

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು 50 ಕೋಟಿ ರೂ.ಗೆ ಬುಕ್ ಆಗಿದ್ದಾರೆ ಎಂಬ ವಿಚಾರ ಆಡಿಯೋದಲ್ಲಿ ಪ್ರಸ್ತಾಪವಾಗಿರುವುದಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನನಗೆ ನಿಮ್ಮ ಮೇಲೆ ಎಳ್ಳಷ್ಟು ಕೂಡ ಅನುಮಾನ ಬರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

    ಇಂದಿನ ಅಧಿವೇಶನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು, “ಸಿದ್ದರಾಮಯ್ಯ ನಿಮಗೂ ನನ್ನ ಮೇಲೆ ಅನುಮಾನನಾ? ನೀವು ನನಗೆ ಒಂದು ಮಾತು ಹೇಳಲಿಲ್ಲ. ನೀವು ನನಗೆ ಸಹಾನುಭೂತಿ ಕೂಡ ಹೇಳಲಿಲ್ಲ. ಈಗ ನಾನು ಸಹಾಯಕ್ಕೆ ಯಾರ ಬಳಿ ಹೋಗಲಿ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕುಟುಕಿದ್ರು.

    ಈ ವೇಳೆ ಮಾತು ಆರಂಭಿಸಿದ ಸಿದ್ದರಾಮಯ್ಯ ಅವರು ನನಗೆ ನಿಮ್ಮ ಮೇಲೆ ಎಳ್ಳಷ್ಟು ಕೂಡ ಅನುಮಾನ ಬರಲು ಸಾಧ್ಯವೇ ಇಲ್ಲ. ಏಕೆಂದರೆ ನಾನು ಬಹಳ ವರ್ಷಗಳಿಂದ ನಿಮ್ಮ ವೈಯಕ್ತಿಕ ಬದುಕು ಸಾರ್ವಜನಿಕ ಬದುಕನ್ನು ನೋಡ್ತಾ ಬಂದಿದ್ದೇನೆ. ನಿಮ್ಮ ನಡವಳಿಕೆ, ನೀವು ಹೇಗೆ ಬದುಕಿದ್ದೀರಿ ಎಂಬುದನ್ನು ಬಹಳ ಹತ್ತಿರದಿಂದ ನೋಡಿದ್ದೀನಿ. ಹಾಗಾಗಿ ಅನುಮಾನ ಪಡೋ ಪ್ರಶ್ನೆನೇ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಜನರಿಂದ ಆಯ್ಕೆ ಆಗಿ ಇಲ್ಲಿ ಬಂದು ನಮ್ಮ ನಡುವಳಿಕೆ ಬಗ್ಗೆ ಜನರು ಏನು ಹೇಳುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂದರು.

    ಈಗ ಇಲ್ಲಿ ಚರ್ಚೆ ಆಗುತ್ತಿರುವ ವಿಷಯ ಬಹಳ ಸ್ಪಷ್ಟವಾಗಿದೆ. ಇದು ಸದನದ ಒಳಗೆ ಆಗಿಲ್ಲ, ಹೊರಗಡೆ ಯಾರೋ ಮಾತನಾಡಿದ್ದರು ಎಂದು ಶಾಸಕ ಮಾಧುಸ್ವಾಮಿ ಹೇಳಿದ್ದರು. ಇದು ಹೊರಗಡೆಯವರು ಮಾತನಾಡಿದ್ದಲ್ಲ. ಆದ್ರೆ ಇದು ನಾವು ಹಗುರವಾಗಿ ತೆಗೆದುಕೊಳ್ಳುವಂತಹ ವಿಷಯ ಅಲ್ಲ. ಈ ಸದನ ನಿಮ್ಮನ್ನು ಸರ್ವಾನು ಮತದಿಂದ ಆಯ್ಕೆ ಮಾಡಿ ಅಲ್ಲಿ ಕೂರಿಸಿದ್ದಾರೆ. ಈ ಸ್ಥಾನದ ಗೌರವವನ್ನು ಎತ್ತಿ ಹಿಡಿಯುವುದು ನಮ್ಮೆಲ್ಲರ ಜವಬ್ದಾರಿ. ಒಬ್ಬ ಸದಸ್ಯರ ಅಲ್ಲ 125 ಸದಸ್ಯರ ಜವಾಬ್ದಾರಿ. ಯಾವುದೇ ಸದಸ್ಯರು ಕೂಡ ಆಧಾರ ರಹಿತವಾಗಿ ನಿಮ್ಮ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ರು.

    ಮಾಧುಸ್ವಾಮಿ ಅವರು ಭಾವನಾತ್ಮಕವಾಗಿ ಹೇಳಿದ್ದರು. ಆದರೆ ಇದು ಭಾವನಾತ್ಮಕ ಆಗುವ ವಿಷಯ ಅಲ್ಲ. ಸಾರ್ವಜನಿಕರು ಏನು ಹೇಳುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಅದಕ್ಕೆ ಎಲ್ಲರಿಗೂ ಸತ್ಯ ಗೊತ್ತಾಗುತ್ತೆ. ಧ್ವನಿ ಸುರುಳಿಯಲ್ಲಿ ರಾಜೀನಾಮೆ ಕೊಡಿಸುತ್ತೇನೆ ಎಂಬುದು ಸ್ಪಷ್ಟವಾಗಿದೆ. ರಾಜೀನಾಮೆ ಒಪ್ಪಿಕೊಳ್ಳೋಕೆ ಸ್ಪೀಕರ್ ಗೆ 50 ಕೋಟಿ ರೂ. ಕೊಟ್ಟು ಬುಕ್ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇದು ಸಾರ್ವಜನಿಕರಿಗೆ ಯಾವ ರೀತಿ ಸಂದೇಶ ಹೋಗುತ್ತದೆ ಎಂಬುದು ಮುಖ್ಯವಾಗುತ್ತದೆ. ಇದರಿಂದ ಇದರ ಸತ್ಯ ಹೊರಗಡೆ ಬರಬೇಕು. ಇದು ಗಂಭೀರ ವಿಷಯ ಆಗುತ್ತದೆ. ಇದು ನಿಮ್ಮ ಹಾಗೂ ಸದನದ ಗೌರವದ ವಿಚಾರವಾಗಿದೆ ಅಂದ್ರು.

    ಕಳೆದ ಆರೇಳು ತಿಂಗಳಿನಿಂದ ಏನು ನಡೆಯುತ್ತಿದೆ ಎಂಬುದು ಎಲ್ಲರೂ ದಿನನಿತ್ಯ ನೋಡುತ್ತಿದ್ದಾರೆ. ಈ ಇಡೀ ಘಟನೆ ಅಥವಾ ಸಂಭಾಷನೆ ಬಗ್ಗೆ ತನಿಖೆ ಆಗಬೇಕು, ಸತ್ಯ ಗೊತ್ತಾಗಬೇಕು. ನಿಮ್ಮ ಬಗ್ಗೆ ಅಗೌರವ ತೋರಿಸುವ ಕೆಲಸ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗಿದೆ. ರಾಷ್ಟ್ರದ ಜನರ ಬಾಯಿಗೆ ಸುದ್ದಿ ಆಗಿದೆ. ಈ ಬಗ್ಗೆ ತನಿಖೆ ಆಗಬೇಕಿದೆ ಹಾಗೂ ತಪ್ಪಿಸ್ಥತರ ಶಿಕ್ಷೆ ಆಗಬೇಕಿದೆ. ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ನನಗೆ ಹಾಗೂ ಯಾವ ಸದಸ್ಯರಿಗೂ ನಿಮ್ಮ ಮೇಲೆ ಅನುಮಾನ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈ ಆರೋಪ ಹೊತ್ತು ನನ್ನ ಕುಟುಂಬಕ್ಕೆ ಹೇಗೆ ಮುಖ ತೋರಿಸಲಿ: ಸ್ಪೀಕರ್ ಕಣ್ಣೀರು

    ಈ ಆರೋಪ ಹೊತ್ತು ನನ್ನ ಕುಟುಂಬಕ್ಕೆ ಹೇಗೆ ಮುಖ ತೋರಿಸಲಿ: ಸ್ಪೀಕರ್ ಕಣ್ಣೀರು

    -ಸರ್ಕಾರಿ ಬಂಗಲೆ ಪಡೆಯದೆ ಬಾಡಿಗೆ ಮನೆಯಲ್ಲಿದ್ದೇನೆ
    -ಸದನದಲ್ಲಿ ನಾನಿರಬೇಕು ಇಲ್ಲ ‘ಆ’ ಶಾಸಕನಿರಬೇಕು

    ಬೆಂಗಳೂರು: ಇಂದಿನ ವಿಧಾನಸಭಾ ಅಧಿವೇಶನದ ಆರಂಭದಲ್ಲಿಯೇ ಬಿಜೆಪಿ ಆಪರೇಷನ್ ಕಮಲದ ಆಡಿಯೋ ವಿಚಾರ ಸಖತ್ ಸದ್ದು ಮಾಡಿತು. ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ಮೇಲೆ ಕೇಳಿ ಬಂದ ಆರೋಪಗಳ ಕುರಿತು ಮಾತನಾಡುತ್ತಾ ಕಣ್ಣೀರು ಹಾಕಿದ್ರು.

    ದಾರಿಯಲ್ಲಿ ಹೋಗುವ ವ್ಯಕ್ತಿಗಳು ನನ್ನ ಬಗ್ಗೆ ಮಾತನಾಡಿದ್ರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದ್ರೆ ಜವಬ್ದಾರಿಯುತ ಸ್ಥಾನದಲ್ಲಿರುವ ಓರ್ವ ವ್ಯಕ್ತಿ, ಪಬ್ಲಿಕ್ ಸರ್ವೆಂಟ್ ಅಂತಾ ಗುರುತಿಸಿಕೊಂಡವರು ನನ್ನ ಮೇಲೆ ಆರೋಪಗಳನ್ನು ಮಾಡಿದ್ದಾರೆ. ಆಡಿಯೋದಲ್ಲಿ ಸಂಭಾಷಣೆ ನಡೆಸಿದವರು ಸದನದಲ್ಲಿ ಜವಬ್ದಾರಿಯುತ ಸ್ಥಾನದಲ್ಲಿದ್ದಾರೆ ಎಂದು ಹೇಳಿದ್ರು.

    ಬಾಡಿಗೆ ಮನೆಯಲ್ಲಿದ್ದೇನೆ:
    ಬೆಂಗಳೂರಿನಲ್ಲಿ ಸರ್ಕಾರಿ ಬಂಗಲೆಯನ್ನ ಸಹ ತೆಗೆದುಕೊಳ್ಳದೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ನೀಡಿದ್ರೆ ನಾನು ಅದನ್ನು ಎಲ್ಲಿ ಇಟ್ಟುಕೊಳ್ಳಲಿ. ನನ್ನ ರಾಜಕೀಯ ಗುರು ನಮ್ಮ ತಾಯಿ. ಅವರನ್ನು ಕಳೆದುಕೊಂಡು 28 ವರ್ಷಗಳಾಗಿದೆ. ನನ್ನ ತಾಯಿಗೆ ನಾನು 8ನೇಯವನು ಹಾಗೆಯೇ ಕೊನೆಯವನು ಕೂಡ. ನಮಗಿಂತ ಒಳ್ಳೆಯವರ ಮನೆಗೆ ಹೋದರೆ ಅಥವಾ ನೆಂಟರು ಬಂದ್ರೆ ಕಾಲಿನ ಧೂಳು ನಮ್ಮ ಮನೆಗೆ ಅಂಟಿಕೊಳ್ಳಬಾರದೆಂದು ಕಾಲು ತೊಳೆದು ಬರಲು ಹೇಳಿಕೊಟ್ಟಿದ್ದರು. ಆ ಧೂಳು ನಮ್ಮ ಮನೆಯಲ್ಲಿರಬಾರದು ಎಂದು ಹೇಳಿಕೊಟ್ಟಿದ್ದರು ಎಂದು ಹೇಳುತ್ತಾ ಸ್ಪೀಕರ್ ಕಣ್ಣೀರು ಹಾಕಿದರು.

    ನನ್ನ ಮೇಲೆ ಆಪಾದನೆ ಮಾಡಿದ್ರೆ ನನ್ನ ಸಾವಿಗಿಂತ ಕ್ರೌರ್ಯವಾಗಿದ್ದಾಗಿದೆ. ನಾನು ಇಲ್ಲೇ ಇರುತ್ತೇನೆ. ನನ್ನ ದೊಮ್ಮಲೂರು ಬಾಡಿಗೆ ಮನೆಗೆ ಹೋಗಿ ನೋಡಿಕೊಂಡು ಬನ್ನಿ. ಅಷ್ಟು ದೊಡ್ಡ ಮೊತ್ತದ ಹಣವನ್ನು ನನ್ನ ಮನೆಯರಿಗೆ ಕೊಟ್ಟಿದ್ದಾರಾ..? ನನ್ನ ಸಂಬಂಧಿಕರಿಗೆ ಕೊಟ್ಟಿದ್ದಾರಾ..? ಗೊತ್ತಿಲ್ಲ. ನಾನು ಯಾರ ಮೇಲೆಯೂ ಹೇಳಲು ಹೋಗಲ್ಲ. ನಾನು ಕಷ್ಟದಲ್ಲಿ ಇದ್ದೀನಿ, ನನಗೆ ಸತ್ಯ ಗೊತ್ತಾಗಬೇಕು. ಸತ್ಯ ಗೊತ್ತಾಗಬೇಕಾದ್ರೆ ವಿಚಾರಣೆ ಆಗಬೇಕು ಎಂದು ಆಗ್ರಹಿಸಿದರು.

    ಕುಟುಂಬಕ್ಕೆ ಹೇಗೆ ಮುಖ ತೋರಿಸಲಿ:
    ಈ ಆರೋಪಗಳಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನನ್ನ ನೋವು ಮನೆಯವರಿಗೆ ಗೊತ್ತಾಗದಂತೆ ಇರಬೇಕಾಯ್ತು. ಶುಕ್ರವಾರ ಹೊರಟು ರೈಲಿನಲ್ಲಿ ರಾಯಚೂರಿಗೆ ಪ್ರಯಾಣ ಬೆಳೆಸಿ, ಇಂದು ಬಂದಿದ್ದೇನೆ. 2 ದಿನ ನನ್ನ ಮನಸ್ಥಿತಿ ಹೇಗಿದ್ದಿರಬಹುದು ಊಹಿಸಿಕೊಳ್ಳಿ. ಈ ಆರೋಪ ಹೊತ್ತ ನಾನು ಕುಟುಂಬದವರಿಗೆ ಹೇಗೆ ಮುಖ ತೋರಿಸಲಿ. ಇಂದು ಬೆಳಗ್ಗೆವರೆಗೆ ನಾನು ಸಮಯ ಕಳೆಯಬೇಕಾಯ್ತು ಎಂದು ತಮ್ಮ ಎರಡು ದಿನದ ನೋವನ್ನು ಸದನದ ಸದಸ್ಯರೊಂದಿಗೆ ಹಂಚಿಕೊಂಡರು.

    ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವುದಾಗ ಶಾಸಕ ಶಿವನಗೌಡ ನಾಯಕ ಅವರು ಸದನದಿಂದ ಎದ್ದು ಹೊರನಡೆದರು. ಆಪರೇಷನ್ ಕಮಲ ಮಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿರುವ ಒಂದು ವಾಯ್ಸ್ ಶಿವನಗೌಡ ಅವರದ್ದಾಗಿದೆ ಎಂಬುದಾಗಿ ಕೇಳಿಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಆಡಿಯೋ ಸದನದಲ್ಲಿ ನಡೆದಿಲ್ಲ: ಬಿಜೆಪಿ ಶಾಸಕ ಮಾಧುಸ್ವಾಮಿ

    ಆಪರೇಷನ್ ಆಡಿಯೋ ಸದನದಲ್ಲಿ ನಡೆದಿಲ್ಲ: ಬಿಜೆಪಿ ಶಾಸಕ ಮಾಧುಸ್ವಾಮಿ

    ಬೆಂಗಳೂರು: ಇಂದು ಸದನದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದೆ ಎನ್ನಲಾದ ಆಡಿಯೋ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಬೆಂಗಳೂರಿನ ಬಾಡಿಗೆ ಮನೆಯಲ್ಲಿದ್ದೇನೆ. ಅಷ್ಟು ದೊಡ್ಡ ಪ್ರಮಾಣದ ಹಣವನ್ನು ನಾನು ಎಲ್ಲಿ ಇಟ್ಟುಕೊಳ್ಳಲಿ ಎಂದು ಹೇಳುತ್ತಾ ಭಾವುಕರಾಗಿ ಕಣ್ಣೀರಿಟ್ಟರು.

    ಸ್ಪೀಕರ್ ಮಾತಿನ ಮಧ್ಯೆ ಪ್ರವೇಶಿಸಿದ ಸಚಿವ ಕೃಷ್ಣೆಬೈರೇಗೌಡರು, ವಿಪಕ್ಷ ನಾಯಕರ ಮೇಲೆ ಆರೋಪ ಮಾಡಿದರು. ಈ ವೇಳೆ ಬಿಜೆಪಿ ಶಾಸಕ ಮಾಧುಸ್ವಾಮಿ, ಆಪರೇಷನ್ ಕಮಲ ಸದನದ ಒಳಗಡೆ ನಡೆದಿಲ್ಲ. ಹೀಗಾಗಿ ಆ ವಿಚಾರವನ್ನು ಇಲ್ಲಿ ಮಾತನಾಡೋದು ಸರಿಯಲ್ಲ ಎಂದು ಆಗ್ರಹಿಸಿದರು.

    ಹೊರಗಡೆ ಮಾತನಾಡೋದನ್ನು ನೀವು ಇಷ್ಟು ಸೀರಿಯಸ್ ಆಗಿ ತೆಗೆದುಕೊಂಡು ಭಾವುಕರಾಗುವುದು ಬೇಡ. ಸದನದಲ್ಲಿ ಈ ರೀತಿಯಾಗಿ ನಡೆದಿದ್ದರೆ ಮೊದಲೇ ನಾವು ವಿರೋಧ ಮಾಡುತ್ತಿದ್ದೆವು. ಆ ವಿಚಾರ ಸದನದ ಹೊರಗಡೆ ನಡೆದಿದೆ. ನೀವು ಈ ರೀತಿ ಭಾವುಕರಾಗಿ ಮಾತನಾಡಿದ್ರೆ ನಾವು ಏನು ಮಾಡೋದು. ಮುಂದೆ ನೀವು ಏನು ಹೇಳಬಹುದು ಎಂಬ ಭಯ ಶುರುವಾಗಿದ್ದರಿಂದ ನಾನು ಮಾತನಾಡುತ್ತಿದ್ದೇನೆ ಎಂದರು.

    ಕೃಷ್ಣಬೈರೇಗೌಡರು ಈ ರೀತಿ ನಮ್ಮ ಮೇಲೆ ಆರೋಪ ಮಾಡೋದು ಸರಿಯಲ್ಲ. ಎಲ್ಲಿ ನಡೆದಿದೆ, ಯಾರು ಮಾತನಾಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಎಲ್ಲೋ ನಡೆದ ವಿಚಾರವನ್ನು ಇಷ್ಟೊಂದು ತೀಕ್ಷ್ಣವಾಗಿ ಮಾತಾಡೋದು ತಪ್ಪಾಗುತ್ತದೆ. ರಮೇಶ್ ಕುಮಾರ್ ಅವರ ಬಗ್ಗೆ ಯಾರು ಏನು ಮಾತನಾಡ್ತಾರೆ ಎಂಬ ಆಡಿಯೋಗಳು ನಮ್ಮ ಬಳಿ ಇವೆ. ನೀವು ಅವಕಾಶ ನೀಡಿದ್ರೆ, ಸದನದಲ್ಲಿ ಹಾಜರು ಮಾಡುತ್ತೇನೆ. ಈ ಆಡಿಯೋಗೆ ಸಂಬಂಧಿಸಿದಂತೆ ತನಿಖೆ ನಡೆಸಬಹುದು. ಒಂದು ವೇಳೆ ನಮ್ಮಿಂದ ತಪ್ಪಾಗಿದ್ರೆ, ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಸದನದಲ್ಲಿ ಮಾತನಾಡಿದ್ರೆ ಹಕ್ಕುಚ್ಯುತಿ ಮಾಡಬಹುದು ಎಂದು ಕೃಷ್ಣೇಬೈರೇಗೌಡರಿಗೆ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv