ಕೋಲಾರ: ತಮಟೆ ಹಾಗೂ ಬ್ಯಾಂಡ್ ಸೆಟ್ ತಾಳಕ್ಕೆ ತಕ್ಕಂತೆ ಸ್ಪೀಕರ್ ರಮೇಶ್ ಕುಮಾರ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ನಡೆಯುತ್ತಿರುವ ಶ್ರೀನಿವಾಸಪುರ ಹಬ್ಬ ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಶನಿವಾರ ರಾತ್ರಿ ಪಟ್ಟಣದಲ್ಲಿ ನಡೆದ ನರಸಿಂಹಸ್ವಾಮಿಯ ಉತ್ಸವ ಮೆರವಣಿಗೆಯಲ್ಲಿ ರಮೇಶ್ ಕುಮಾರ್ ಪಾಲ್ಗೊಂಡಿದ್ದರು. ಈ ವೇಳೆ ತಮಟೆ ಹಾಗೂ ಬ್ಯಾಂಡ್ ಸೆಟ್ ತಾಳಕ್ಕೆ ತಕ್ಕಂತೆ ಅಭಿಮಾನಿಗಳ ಜೊತೆ ರಮೇಶ್ ಅವರು ಕುಳಿದು ಕುಪ್ಪಳಿಸಿದ್ದಾರೆ.
ಪ್ರತಿ ವರ್ಷ ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ನೆನಪಲ್ಲಿ ಶ್ರೀನಿವಾಸಪುರದಲ್ಲಿ ಹಬ್ಬ ಕಾರ್ಯಕ್ರಮ ಮಾಡಲಾಗುತ್ತದೆ. ಈ ವೇಳೆ ಊರ ಜನರೆಲ್ಲಾ ಹುತಾತ್ಮ ಯೋಧನಿಗೆ ಗೌವರ ಸಲ್ಲಿಸುತ್ತಾರೆ.
ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಸಿಎಂ ಕುಮಾರಸ್ವಾಮಿ ಅಲ್ಲದೇ, ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯವೈಖರಿಗೂ ಅಸಾಮಾಧನ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಜವಾಬ್ದಾರಿ ಮರೆತಿದ್ದೀರಿ. ಅಲ್ಲದೆ ನೀವು ಕೆಲವೇ ಕೆಲವು ಹಿಂಬಾಲಕ ನಾಯಕರಾಗಿ ವರ್ತಿಸುತ್ತಿದ್ದೀರಿ. ಸಮ್ಮಿಶ್ರ ಸರ್ಕಾರಕ್ಕೆ ನಿಮ್ಮ ಸಹಕಾರ ಹಾಗೂ ನೆರವು ಅತ್ಯಗತ್ಯ ಇದೆ. ಇನ್ನಾದರೂ, ನೀವು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ ಎಂದು ಸಿದ್ದರಾಮಯ್ಯಗೆ ಬರೆದಿರುವ ಪತ್ರದಲ್ಲಿ ಸ್ಪೀಕರ್ ರಮೇಶ್‍ಕುಮಾರ್ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಇದನ್ನೂ ಓದಿ:20 ತಿಂಗ್ಳ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸಿದ ನಾಯಕರು ನೀವೇನಾ – ಸಿಎಂಗೆ ಖಾರವಾದ ಪತ್ರ ಬರೆದ ಸ್ಪೀಕರ್
ಪತ್ರದಲ್ಲಿ ಏನಿದೆ?
ರಾಜ್ಯ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ತಾವು ಕಳೆದ ಒಂದು ವರ್ಷದಿಂದ ಜವಬ್ದಾರಿಯನ್ನು ನಿರ್ವಹಿಸುತ್ತಿದ್ದೀರಿ. ಯಾವುದೇ ಪೂರ್ವಗ್ರಹ ಪೀಡಿತರಾಗದೇ, ಪ್ರಾಮಾಣಿಕವಾಗಿ ನನ್ನ ಅನಿಸಿಕೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನೀವು ಶಾಸಕಾಂಗ ಪಕ್ಷದ ನಾಯಕನಂತೆ ನಡೆದುಕೊಳ್ಳದೆ ಕೆಲವೇ ಕೆಲವು ತಮ್ಮ ಆಪ್ತ ಶಾಸಕರ ಪಾಲಿನ ನಾಯಕನಂತೆ ನಡೆದುಕೊಳ್ಳುತ್ತಿದ್ದೀರಿ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ತಾವು ಹಾಗೇ ನಡೆದುಕೊಳ್ಳುತ್ತಿದ್ದೀರೋ ಅಥವಾ ತಮ್ಮ ಸುತ್ತಲಿನ ಆಪ್ತ ವಲಯ ಹಾಗೆ ಬಿಂಬಿಸುತ್ತಿದೆಯೋ ಗೊತ್ತಿಲ್ಲ. ಎರಡೆರಡು ಬಾರಿ ಉಪ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ 5 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಅಪಾರವಾದ ರಾಜಕೀಯ ಹಾಗೂ ಆಡಳಿತಾತ್ಮಕ ಅನುಭವ ತಮಗಿದೆ. ಸಮ್ಮಿಶ್ರ ಸರ್ಕಾರದಂತಹ ಸಂಕಷ್ಟದ ಸ್ಥಿತಿಯಲ್ಲಿ ಹೇಗೆ ನಡೆದುಕೊಂಡರೆ ಉತ್ತಮ ಎಂಬ ತಿಳುವಳಿಕೆಯು ತಮಗಿದೆ.
ಈ ಸಂದರ್ಭದಲ್ಲಿ ಸರ್ಕಾರಕ್ಕೆ ಹಾಗೂ ತಮ್ಮ ಪಕ್ಷಕ್ಕೆ ತಮ್ಮ ಅನುಭವದ ಅವಶ್ಯಕತೆ ದೊಡ್ಡ ಮಟ್ಟದಲ್ಲಿ ಬೇಕಿದೆ ಎನ್ನುವುದು ನನ್ನ ಅಭಿಪ್ರಾಯ. ಎಲ್ಲಾ ಕಾಂಗ್ರೆಸ್ ಶಾಸಕರ ನಾಯಕನಾಗಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಬಹು ದೊಡ್ಡ ಜವಾಬ್ದಾರಿ ತಮ್ಮ ಮೇಲಿದೆ. ಅವೆಲ್ಲವನ್ನು ನಿರ್ವಹಿಸುವ ಮಹತ್ತರ ಜವಾಬ್ದಾರಿ ತಮ್ಮ ಮೇಲಿದ್ದು ಅದನ್ನ ಯಶಸ್ವಿಯಾಗಿ ನಿರ್ವಹಿಸಬಲ್ಲಿರಿ ಎಂಬುದು ನನ್ನ ನಂಬಿಕೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
– ತಾಕತ್ತು ಇದ್ರೆ ರಾಜೀನಾಮೆ ಕೊಟ್ಟು ಚುನಾವಣೆಗೆ ಬನ್ನಿ
– ಒಬ್ಬೊಬ್ಬರ ಕಥೆ ಏ. 18ರ ನಂತ್ರ ಬಯಲಾಗುತ್ತದೆ
ಕೋಲಾರ: ಸಂಸದ, ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ನೇರವಾಗಿ ಸ್ವೀಕರ್ ರಮೇಶ್ ಕುಮಾರ್ ಬಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಸಂಸದರು, ಒಂದು ಸ್ಥಾನದಲ್ಲಿ ಇದ್ದುಕೊಂಡು ಸರ್ಕಾರನ್ನು ಹಾಗೂ ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡುತ್ತೀರಿ. ನಿಮಗೇನಾದರೂ ತಾಕತ್ತು ಇದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಕಣಕ್ಕೆ ಬನ್ನಿ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸವಾಲು ಹಾಕಿದರು.
ನಾನು ಸುಮ್ಮನಿದ್ದೇನೆ ಅಂತ ತಿಳಿಯಬೇಡಿ. ನೀವು ಮಹಾನ್ ಮೇದಾವಿ ರೀತಿಯಲ್ಲಿ ಮಾತನಾಡುತ್ತಿದ್ದೀರಿ. ಒಬ್ಬೊಬ್ಬರ ಕಥೆಯು ಏಪ್ರಿಲ್ 18ರ ನಂತರ ಬಯಲಾಗುತ್ತದೆ ಎಂದು ವಿರೋಧಿ ಬಣದ ದಲಿತ ಮುಖಂಡರು ಹಾಗೂ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಗುಡುಗಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು 30 ವರ್ಷ ಜೀವನ ಮಾಡಿದ್ದೀರಿ. ಆದರೆ ಈಗ ಸಂವಿಧಾನ ಸುಡುತ್ತೇವೆ ಎನ್ನುವ ಬಿಜೆಪಿಯವರಿಗೆ ಬೆಂಬಲ ಸೂಚಿಸುತ್ತಿರುವ ನಿಮಗೆ ನಾಚಿಕೆಯಾಗಲ್ವಾ? ನೀವು ಹೋರಾಟಗಾರರಾ? ಸಮಾಜ ಸೇವಕರಾ? ಸತ್ಯಕ್ಕೆ ಕಾಲವಿದೆ. ಈ ನೀಚರಿಗೆ ಜನ ಬುದ್ಧಿ ಕಲಿಸುತ್ತಾರೆ ಎಂದು ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದರು.
ಈ ಸಮಾವೇಶದಲ್ಲಿ ಮಾಜಿ ಶಾಸಕ ವರ್ತೂರ್ ಪ್ರಕಾಶ್, ಜೆಡಿಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರರೆಡ್ಡಿ ಹಾಜರಿದ್ದರು.
ಬೆಂಗಳೂರು: ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಚಿಂಚೋಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಉಮೇಶ್ ಜಾಧವ್ ಅಯ್ಕೆಯಾಗಿದ್ದರು. ಮಾರ್ಚ್ 4ರಂದು ಸ್ಪೀಕರ್ ನಿವಾಸಕ್ಕೆ ತೆರಳಿದ್ದ ಉಮೇಶ್ ಜಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು.
ಭಾರತ ಸಂವಿಧಾನದ ಅನುಚ್ಛೇದ 190(3)ಬಿ ಯಲ್ಲಿ ಸಭಾಧ್ಯಕ್ಷರು ಇಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸಂವಿಧಾನದ ಅನುಚ್ಛೇದ 190(3)ಬಿ ಯ ಅಡಿಯಲ್ಲಿ ಸೂಚಿಸಿದ ಹಾಗೆ ಕ್ರಮವನ್ನು ಜರುಗಿಸಿದ ನಂತರ ಡಾ. ಉಮೇಶ್ ಜಿ. ಜಾಧವ್ ಅವರ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆ ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆಯನ್ನು ನನ್ನ ಸ್ವಂತ ನ್ಯಾಯಿಕ ಪ್ರಜ್ಞೆಯ ಮೇರೆಗೆ ಅಂಗೀಕರಿಸಲಾಗಿದೆ ಎಂದು ರಮೇಶ್ ಕುಮಾರ್ ಧೃಡೀಕರಣ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆ ಅಂಗೀಕಾರಕ್ಕೂ ಮೊದಲೇ ಉಮೇಶ್ ಜಾಧವ್ ಅವರನ್ನು ಬಿಜೆಪಿ ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿತ್ತು. ರಾಜೀನಾಮೆ ಸಲ್ಲಿಕೆ ಬಳಿಕ ಮಾತನಾಡಿದ್ದ ಉಮೇಶ್ ಜಾಧವ್, ಸ್ಪೀಕರ್ ಮೇಲೆ ನಂಬಿಕೆ ಹೊಂದಿದ್ದು, ಪಕ್ಷಾತೀತವಾಗಿ ಕೆಲಸ ಮಾಡುತ್ತಾರೆ. ಸಂವಿಧಾನಬದ್ಧವಾಗಿ ನನ್ನ ರಾಜೀನಾಮೆಯನ್ನು ಅಂಗೀಕರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕಾಂಗ್ರೆಸ್ ಶಾಸಕಾಂಗದ ನಾಯಕರಾಗಿರುವ ಸಿದ್ದರಾಮಯ್ಯ, ವಿಪ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಉಮೇಶ್ ಜಾಧವ್ ಸೇರಿದಂತೆ ಇನ್ನುಳಿದ ಮೂವರು ಶಾಸಕರನ್ನು ಅನರ್ಹಗೊಳಿಸಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದರು.
ಪಕ್ಷಾಂತರ ಕಾಯ್ದೆ ಏನು ಹೇಳುತ್ತೆ?
ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದ ಆದೇಶ ಉಲ್ಲಂಘಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಬಹುದು. ಆಗ ಸಹಜವಾಗಿಯೇ ಶಾಸಕರು ಅನರ್ಹರಾಗುತ್ತಾರೆ. ಅನರ್ಹ ಶಾಸಕರು ವಿಧಾನಸಭೆ ಅವಧಿ ಮುಗಿಯುವವರೆಗೆ ಬೇರೆ ಪಕ್ಷಕ್ಕೆ ಸೇರುವಂತಿಲ್ಲ. ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೂ ಉಪ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡ ಶಾಸಕರು ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದುವಂತಿಲ್ಲ.
ಅನರ್ಹಗೊಂಡ ದಿನದಿಂದ ಅವರ ಶಾಸಕತ್ವ ಅವಧಿ ಯಾವಾಗ ಮುಗಿಯುತ್ತದಫ ಅಲ್ಲಿವರೆಗೆ ಹುದ್ದೆಗಳನ್ನ ಹೊಂದುವಂತಿಲ್ಲ. ಪಕ್ಷದ ಒಟ್ಟು ಶಾಸಕರಲ್ಲಿ 2/3ರಷ್ಟು ಶಾಸಕರು ಗುಂಪಾಗಿ ಪಕ್ಷಾಂತರ ಮಾಡಿದರಷ್ಟೇ ಅನರ್ಹತೆ ಅನ್ವಯಿಸಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ ಕೈಯಲ್ಲಿದ್ದು, ಅನರ್ಹತೆ ಪ್ರಶ್ನಿಸಿ ಸ್ಪೀಕರ್ ಅವರಿಗೂ ಮನವಿ, ಕಾನೂನು ಹೋರಾಟವನ್ನೂ ಮಾಡಬಹುದು.
ಕೋಲಾರ: ಮುನಿಯಪ್ಪ ಅವರಿಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗೆ ಇಷ್ಟವಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ರಮೇಶ್ ಕುಮಾರ್ ಮತ್ತು ನಾನು ಗಂಡ ಹೆಂಡತಿ ಇದ್ದಂತೆ ಎಂದಿದ್ದ ಮುನಿಯಪ್ಪ ಹೇಳಿಕೆ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ನಾನು ಗಂಡಸರೊಂದಿಗೆ ಮಲಗುವುದಿಲ್ಲ, ನಾನು ನನ್ನ ಮನೆಯಲ್ಲಿ ಮಲಗುವೆ. ಸಪ್ತಪದಿಯೊಂದಿಗೆ ಮದುವೆಯಾಗಿರುವ ನನ್ನ ಪತ್ನಿಯೊಂದಿಗೆ ಸಂಬಂಧವಿದೆ, ಅನೈತಿಕ ಸಂಬಂಧ ಯಾವುದೂ ಇಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಮುನಿಯಪ್ಪ ವಿರುದ್ಧ ಬಂಡಾಯ – ದೆಹಲಿಗೆ ದೂರು ಕೊಟ್ಟ ಕೋಲಾರ ಕೈ ಶಾಸಕರು
ಶಾಸನ ಸಭೆಯಲ್ಲಿ ನಾನು ಸ್ಪೀಕರ್ ಒಂದು ರೀತಿ ನಾನು ಜಡ್ಜ್, ಯಾರಿಗೂ ಸಹಮತವೂ ಇಲ್ಲ, ಭಿನ್ನಮತನೂ ಇಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಎರಡೂ ಕಡೆಯವರು ಸರ್ವಾನುಮತದಿಂದ ನನ್ನ ಆಯ್ಕೆ ಮಾಡಿದ್ದಾರೆ. ನಾನು ಯಾರ ಪರವಾಗಿಯೂ ಇಲ್ಲ. ನಾನು ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದ ಮೇಲೆ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಪಕ್ಷದಲ್ಲಿ ನಡೆಯುವ ವಿಷಯದ ಬಗ್ಗೆ ನನಗೆ ತಿಳಿದಿಲ್ಲ. ಚುನಾವಣೆಗೆ ಯಾರನ್ನು ಕಣಕ್ಕಿಳಿಸಬೇಕೆಂದು ಪಕ್ಷದಲ್ಲಿರುವವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನನಗೆ ಈ ಬಗ್ಗೆ ಗೊತ್ತಿಲ್ಲ. ಸ್ಪೀಕರ್ ಆಗಿರುವುದರಿಂದ ನನ್ನ ಮನಸ್ಸಿನಲ್ಲಿರುವುದನ್ನ ಹೇಳುವುದಕ್ಕೆ ಆಗುವುದಿಲ್ಲ ಎಂದರು. ಇದನ್ನೂ ಓದಿ:ನಾಮಪತ್ರ ಸಲ್ಲಿಸೋ ಮುನ್ನ ಡಿಕೆ ರವಿ ವರ್ಗಾವಣೆ ಕಾರಣ ತಿಳಿಸಲಿ – ಮುನಿಯಪ್ಪಗೆ ಕೃಷ್ಣಯ್ಯ ಶೆಟ್ಟಿ ಆಗ್ರಹ
ಉಮೇಶ್ ಜಾಧವ್ ರಾಜಿನಾಮೆ ವಿಚಾರ, 25 ನೇ ತಾರೀಖು ವಿಚಾರಣೆ ದಿನಾಂಕ ನಿಗದಿಯಾಗಿದೆ. ವಿಧಾನಸೌಧದಲ್ಲಿ ಈ ಸಂಬಂಧ ಪರ ವಿರೋಧ ವಾದ-ವಿವಾದ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಚಿಂಚೋಳಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಉಮೇಶ್ ಜಾಧವ್, ಬುಧವಾರ ಕಲಬುರಗಿಯಲ್ಲಿ ನಡೆಯೋ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ಕಮಲ ಹಿಡಿಯಲು ಸಜ್ಜಾಗಿದ್ದಾರೆ. ಈ ಸಮಯದಲ್ಲಿ ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರವಾಗುತ್ತಾ ಎಂಬ ಅನುಮಾನಗಳು ಮೂಡಿವೆ.
ಉಮೇಶ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿರೋ ಮಾಜಿ ಸಿಎಂ ಸಿದ್ದರಾಮಯ್ಯ, ಜಾಧವ್ ಸೇರಿ ನಾಲ್ವರ ಶಾಸಕರನ್ನು ಅನರ್ಹಗೊಳಿಸುವಂತೆ ದೂರು ನೀಡಿದ್ದೇವೆ. ಅದು ಇತ್ಯರ್ಥವಾಗುವವರೆಗೂ ಜಾಧವ್ ರಾಜೀನಾಮೆ ಅಂಗೀಕಾರವಾಗುವಂತಿಲ್ಲ. ಈ ಬಗ್ಗೆ ಸ್ಪೀಕರ್ ಏನು ನಿರ್ಣಯ ತೆಗೆದುಕೊಳ್ಳುತ್ತಾರೋ ನೋಡೋಣ. ಜಾಧವ್ ಆಪರೇಷನ್ ಕಮಲದ ದಾಳಕ್ಕೆ ಸಿಲುಕಿರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯರ ಹೇಳಿಕೆಗೆ ಕಲಬುರಗಿಯಲ್ಲಿ ತಿರುಗೇಟು ನೀಡಿದ ಉಮೇಶ್ ಜಾಧವ್, ನಾಳೆ ಬಿಜೆಪಿ ಸೇರುತ್ತಿದ್ದು, ಯಾರೇನೇ ಮಾಡಿದರೂ ಏನು ಆಗೋದಿಲ್ಲ ಅಂದ್ರು. ಸ್ಪೀಕರ್ ಪ್ರಾಮಾಣಿಕರಿದ್ದು, ಅವರು ನಮ್ಮ ರಾಜೀನಾಮೆ ಅಂಗೀಕಾರ ಮಾಡುವ ಬಗ್ಗೆ ವಿಶ್ವಾಸವಿದೆ. ಉಮೇಶ್ ಜಾಧವ್, ಬಿಜೆಪಿಗೆ ಸೇರ್ಪಡೆ ಆಗ್ತಿರೋದನ್ನು ಕಲಬರಗಿಯ ಬಿಜೆಪಿ ಮುಖಂಡ ಸುನಿಲ್ ವಲ್ಯಾಪುರೆ ಸ್ವಾಗತಿಸಿದ್ದಾರೆ. ನನಗೆ ಯಾವ ಅಸಮಾಧಾನವೂ ಇಲ್ಲ ಎಂದಿದ್ದಾರೆ.
ಉಮೇಶ್ ಜಾಧವ್ ಭವಿಷ್ಯ ಸ್ಪೀಕರ್ ರಮೇಶ್ ಕುಮಾರ್ ಕೈಯಲ್ಲಿದೆ. ರಮೇಶ್ ಕುಮಾರ್ ಕೈಗೊಳ್ಳುವ ನಿರ್ಧಾರದ ಮೇಲೆ ನಾಳೆ ಉಮೇಶ್ ಜಾಧವ್, ಬಿಜೆಪಿ ಸೇರ್ಪಡೆ ಆಗ್ತಾರೋ ಇಲ್ವೋ ಅನ್ನೋದು ನಿರ್ಧಾರ ಆಗಲಿದೆ.
ಸ್ಪೀಕರ್ ಅಂಗಳದಲ್ಲಿ ಚೆಂಡು: ನಾಳೆಯೊಳಗೆ ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡುತ್ತಾರಾ ಎಂಬ ಅನುಮಾನ ಮೂಡಿದೆ. ಈ ಮೊದಲೇ ಕಾಂಗ್ರೆಸ್ ಜಾಧವ್ ಸೇರಿ ನಾಲ್ವರ ಶಾಸಕರನ್ನು ಅನರ್ಹಗೊಳಿಸುವಂತೆ ದೂರು ನೀಡಿದೆ. ಕಾಂಗ್ರೆಸ್ ದೂರಿನ ಆಧಾರದ ಮೇಲೆ ಶಾಸಕರಿಗೆ ನೋಟಿಸ್ ನೀಡಬೇಕಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಬಗ್ಗೆ ಎಲ್ಲರಿಂದ ವಿವರಣೆ ಪಡೆಯಬೇಕಿದೆ. ಅನರ್ಹತೆ ದೂರಿನ ವಿಚಾರಣೆಯ ಕಾರಣ ನೀಡಿ ರಾಜೀನಾಮೆ ಸ್ವೀಕೃತಿ ವಿಳಂಬವಾಗುವ ಸಾಧ್ಯತೆಗಳಿವೆ. ಒಂದು ವೇಳೆ ರಾಜೀನಾಮೆ ಅಂಗೀಕಾರವಾಗದೇ ಇದ್ದಲ್ಲಿ ಉಮೇಶ್ ಜಾಧವ್ ಬಿಜೆಪಿ ಸೇರೋದು ವಿಳಂಬ ಆಗಬಹುದು.
ಕೋಲಾರ: ಚಿಂಚೋಳಿ ಶಾಸಕ ಉಮೇಶ್ ಜಾಧವ್ ನನ್ನ ಮನೆಗೆ ಬಂದ್ರು ರಾಜೀನಾಮೆ ಕೊಟ್ರು. ಆದ್ರೆ ರಾಜೀನಾಮೆಗೆ ಯಾವುದೇ ಕಾರಣ ಹೇಳಿಲ್ಲ. ಕಾನೂನಿನಡಿ ಮುಂದೆ ಕ್ರಮ ಕೈಗೊಳ್ಳುವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಕೋಲಾರದ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬೆಳಗ್ಗೆ ಮನೆಯಲ್ಲಿ ತಿಂಡಿ ತಿಂತಿದ್ದೆ. ಪಾಪ ಬೆಳಗ್ಗೆನೆ ಎದ್ದು ನಮ್ಮೂರಿಗೆ ಬಂದ್ರು ರಾಜೀನಾಮೆ ಕೊಟ್ರು. ನಾನು ತಗೊಂಡೆ ಜೊತೆಗೆ ತಿಂಡಿ ಮಾಡಿದ್ವಿ, ಪೇಪರ್ ಕೊಟ್ಟು ಹೋದ್ರು ಎಂದು ಹೇಳಿದ್ರು.
ರಾಜೀನಾಮೆ ಪತ್ರವನ್ನ ಅಧಿಕಾರಿಗಳಿಗೆ ಕಳಿಸಿದ್ದೇನೆ. ನಾನು ಹಳ್ಳಿಯಲ್ಲಿ ಇದ್ದೇನೆ. ಹಾಗಾಗಿ ನಾಳೆ ಬೆಂಗಳೂರಿಗೆ ಹೋಗಿ ಅಧಿಕಾರಿಗಳ ಬಳಿ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ. ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದವನು ಕಾನೂನಿನ ಅರಿವು ಗೊತ್ತಿಲ್ಲ. ಅದಕ್ಕೆ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಬೇಕು. ಅದಾದ ನಂತರ ಕ್ರಮ ಕೈಗೊಳ್ಳುವೆ. ಇನ್ನೂ ನನ್ನ ನಿರ್ಧಾರಕ್ಕೆ ನಿಗದಿತ ವೇಳೆ ಇಲ್ಲ ಎಂದು ಅವರು ಹೇಳಿದ್ರು.
ಇದೇ ವೇಳೆ ಮಕ್ಕಳ ಕಲಿಕೆಯ ಸಮಸ್ಯೆಯನ್ನೂ ರಾಜಕೀಯಕ್ಕಾಗಿ ತಮಾಷೆ ಮಾಡಿದ ಪ್ರಧಾನಿ ಮೋದಿ ವಿರುದ್ಧ ಟೀಕೆ ವ್ಯಕ್ತವಾಗಿರುವುದಕ್ಕೆ ಅವರ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಅವರ ವ್ಯಕ್ತಿತ್ವಗಳು ಇದರಿಂದ ನಿರ್ಧಾರವಾಗತ್ತದೆ. ಮಕ್ಕಳ ಕಲಿಕೆಯ ಸಮಸ್ಯೆಯಲ್ಲೂ ಪ್ರಧಾನಿ ಮೋದಿ ರಾಜಕೀಯ ಹುಡುಕಿ ತೀವ್ರ ಟೀಕೆಗೆ ಗುರಿಯಾಗಿರುವುದಕ್ಕೆ ತೀಕ್ಷ್ಣವಾಗಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದರು.
ಕೋಲಾರ: ಕಾಂಗ್ರೆಸ್ ಜೆಡಿಎಸ್ ಸಮನ್ವಯ ಸಮಿತಿಯ ಸಭೆ ಆರಂಭಗೊಳ್ಳುವ ಮುನ್ನವೇ ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.
ಕೋಲಾರದ ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ನಾನು ಕಾಂಗ್ರೆಸ್ ಪಕ್ಷದಲ್ಲಿರಬೇಕು. ಇಲ್ಲವೇ ರಾಜೀನಾಮೆ ನೀಡಬೇಕು. ಈ ಎರಡರಲ್ಲಿ ಒಂದು ನಿರ್ಧಾರ ಕೈಗೊಳ್ಳುತ್ತೇನೆ ಉಮೇಶ್ ಜಾಧವ್ ತಿಳಿಸಿದ್ದರು.
ರಾಜೀನಾಮೆ ನೀಡುವ ವಿಚಾರದಲ್ಲಿ ಗೊಂದಲವಿದ್ದು, ಕ್ಷೇತ್ರದ ಮತದಾರರ ಸಲಹೆ ಪಡೆದು ಮುಂದುವರಿಯುತ್ತೇನೆ. ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ ನೋಟಿಸ್ ತಲುಪಿದ ಮೇಲೆ ಉತ್ತರ ಕೊಡುತ್ತೇನೆ. ಸ್ಥಳೀಯವಾಗಿ ಕ್ಷೇತ್ರದಲ್ಲಿ ಸಮಸ್ಯೆಯಿಂದ ಅಸಮಾಧಾನವಿದೆ ಎಂದು ಹೇಳಿದ್ದರು.
ಬುಧವಾರ ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸಮಾವೇಶ ನಡೆಯಲಿದ್ದು, ಈ ವೇಳೆ ಅಧಿಕೃತವಾಗಿ ಜಾಧವ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಲೋಕಸಭಾ ಕಾಂಗ್ರೆಸ್ ಸಂಸದೀಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಬಾರಿ ಸೋಲಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಜಾಧವ್ ಅವರು ಖರ್ಗೆ ವಿರುದ್ಧ ಸ್ಪರ್ಧಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಖರ್ಗೆ ವಿರುದ್ಧ ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ಕಣಕ್ಕೆ?
ಕೋಲಾರ: ದೇಶಭಕ್ತಿ ಹಾಗೂ ದೇಶ ಕಾಯುವ ಸೈನ್ಯದ ಹೆಸರಿನಲ್ಲಿ ರಾಜಕೀಯ ಮಾಡಬಾರದು ಅದು ಶುದ್ಧ ಅವಿವೇಕಿತನ ಎಂದು ಕೇಂದ್ರ ಸರ್ಕಾರ ಹಾಗೂ ಮೋದಿಗೆ ಸ್ಪೀಕರ್ ರಮೇಶ್ ಕುಮಾರ್ ಕೋಲಾರದಲ್ಲಿ ಪರೋಕ್ಷವಾಗಿ ಟಾಂಗ್ ನೀಡಿದ್ರು.
ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಭಾರತೀಯ ಸೈನಿಕರಿಂದ ಉಗ್ರರ ಮೇಲೆ ನಡೆದ ಏರ್ ಸ್ಟ್ರೈಕ್‍ಗೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀರ ಯೋಧರಿಗೆ ಇಡೀ ದೇಶ ಗೌರವ ಸಮರ್ಪಣೆ ಮಾಡಬೇಕು. ಅವರ ಕುಟುಂಬಗಳಿಗೆ ನಾವೆಲ್ಲ ಋಣ ಹೊಂದಿದ್ದೇವೆ. ಸೈನಿಕರು ಮಾಡಿರುವಂತಹ ಒಳ್ಳೆಯ ಕೆಲಸವನ್ನ ನಾವೇ ಮಾಡಿದಂತೆ ತೋರಿಸುವುದು ಸರಿಯಲ್ಲ. ಅವರು ದೇಶ ಕಾಯೋ ಸೈನಿಕರು, ನಾವು ಓಟು ಕೇಳುವವವರು ಹೀಗಾಗಿ ಅವರ ಹೆಸರಿನಲ್ಲಿ ರಾಜಕೀಯ ಮಾಡಬಾರದು ಎಂದರು.
ಫೈಟ್ ಮಾಡುವವರು ಯೋಧರು, ವೋಟು ಕೇಳುವವರು ನಾವು. ಅವರು ಅಲ್ಲಿ ಪ್ರಾಣ ಬಿಟ್ಟು ಫೈಟ್ ಮಾಡುವುದಕ್ಕೆ ನಾವು ಇಲ್ಲಿ ಅದನ್ನು ವೋಟ್ ಗೆ ಉಪಯೋಗಿಸಿಕೊಳ್ಳಬಾರದು. ಅದನ್ನು ಯಾರು ಮಾಡಿದರೂ ಅಪರಾಧ. ವೀರ ಯೋಧರಿಗೆ ಇಡೀ ದೇಶ ನಮನ ಅರ್ಪಣೆ ಮಾಡಬೇಕು. ಯೋಧರ ಕುಟುಂಬಗಳಿಗೆ ನಾವೆಲ್ಲರೂ ತಲೆಬಾಗಿ ಅಭಿನಂದನೆ ಸಲ್ಲಿಸಬೇಕು. ಅವರು ಪ್ರಾಣದ ಮೇಲೆ ಆಸೆ ಬಿಟ್ಟು ಬಂದೂಕು ಇಟ್ಟುಕೊಂಡು ಬಾರ್ಡರ್ ನಲ್ಲಿ ನಿಂತುಕೊಂಡಿದ್ದರೆ ನಮ್ಮ ಬೇಳೆ-ಕಾಳು ಬೇಯಿಸಿಕೊಳ್ಳುವುದಕ್ಕೆ ಹೋಗಬಾರದು. ಅದು ಶುದ್ಧ ಅವಿವೇಕಿತನ ಎಂದು ಅವರು ತಿಳಿಸಿದ್ರು.
ಯಾರೇ ಆಗಲಿ, ಎಷ್ಟು ದೊಡ್ಡವರೇ ಆಗಲಿ. ವೀರ ಯೋಧರು ದೇಶಪ್ರೇಮಕ್ಕಾಗಿ ಪ್ರಾಣದ ಮೇಲೆ ಆಸೆ ತೊರೆದು ಅಲ್ಲಿ ನಿಂತು ಹೋರಾಟ ಮಾಡುತ್ತಿದ್ದಾರೆ. ಅದು ನಾವಿದ್ದರೂ ಮಾಡುತ್ತಾರೆ. ನೀವಿದ್ದರೂ ಅಥವಾ ಇನ್ನೊಬ್ಬರು ಇದ್ರೂ ಮಾಡ್ತಾರೆ. ಅದಕ್ಕೆ ನಾನು ಅಲ್ಲಿಗೆ ಹೋಗಿ ಬಟ್ಟೆ ಬಿಚ್ಚಿ ಫೈಟ್ ಮಾಡುತ್ತೇನೆ ಎಂದು ಹೇಳಿ ವೋಟ್ ಕೇಳುವ ಪ್ರಯತ್ನ ಮಾಡೋದು ತಪ್ಪು ಎಂದು ಗರಂ ಆದ್ರು.
ದೇಶ ಕಾಯುತ್ತಿರುವವರಿಗೆ ಎಲ್ಲವನ್ನೂ ತ್ಯಾಗ ಮಾಡಬೇಕು. ಯೋಧರಿಗೆ ನೈತಿಕ ಬೆಂಬಲ ಕೊಡಬೇಕು. ಅವರ ವಿಚಾರದಲ್ಲಿ ಹಗುರವಾದ ರಾಜಕಾರಣ ಮಾಡಬಾರದು ಎಂದು ರಮೇಶ್ ಕುಮಾರ್ ಹೇಳಿದ್ರು.
ಕೋಲಾರ: ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ನಾನು ಮೊದಲೇ ಹೇಳಿದ್ದೆ, ಅವರು ಈಗಲೂ ನಮ್ಮ ಮುಖ್ಯಮಂತ್ರಿಯೇ. ಅವರು ನಿಧಾನವಾಗಿ ನಡೆಯುತ್ತಿದ್ದರೆ ಹುಲಿ(ಪುಲಿ) ನಡೆಯುತ್ತಿದ್ದಂತೆ ಕಾಣುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಬಣ್ಣ ಬಣ್ಣವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ವರ್ಣಿಸಿದ್ದಾರೆ.
ಹೌದು ಕೋಲಾರದ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದ ಕನಕ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2012 ರಲ್ಲಿಯೇ ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದೆ. ಆಗ ತುಂಬಾ ಜನ ನನ್ನ ವಿರುದ್ಧ ಮಾತನಾಡಿದ್ದರು. ಸಿದ್ದರಾಮಯ್ಯ ಅವರು ಈಗಲೂ ನಮ್ಮ ಮುಖ್ಯಮಂತ್ರಿ, ನಮ್ಮ ನಾಯಕರು ಎಂದು ತಮ್ಮ ಮಾತಿನುದ್ದಕ್ಕೂ ಸಿದ್ದರಾಮಯ್ಯ ಅವರನ್ನು ವರ್ಣಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ ಸಿದ್ದರಾಮಯ್ಯ ಅವರ ವರ್ತನೆ ಒರಟು, ಗುಣ ಮಾತ್ರ ಮೃದು. ಅವರು ನಿಧಾನವಾಗಿ ನಡೆದು ಬರುತ್ತಿದ್ದರೆ ಹುಲಿ ಇದ್ದಂತೆ. ಅವರು ಇನ್ನೂ ಮುಂದೆ ರಾಜ್ಯದ ಬಬ್ಬುಲಿ ಪುಲಿ(ಹುಲಿ) ಎಂದು ಹೇಳಿ, ಬಬ್ಬುಲಿ ಪುಲಿಕಿ ಜೈ ಎಂದು ತೆಲುಗಿನಲ್ಲಿ ಹೇಳಿ ತಮ್ಮ ಭಾಷಣ ಮುಗಿಸಿದ್ದಾರೆ.
ಶ್ರೀಮಾನ್ ಸಿದ್ದರಾಮಯ್ಯನವರಿಗೆ ನಿಮ್ಮೆಲ್ಲರ ಪರವಾಗಿ ಒಂದೇ ಚಿಕ್ಕ ಪ್ರಾರ್ಥನೆ. ಸಾಯಿ ಬಾಬಾ ಬಳಿ ಪ್ರಾರ್ಥನೆ ಮಾಡುತ್ತೇನೆ. ಸದಾ ಕಾಲ ನಿಮ್ಮನ್ನ ಗೌರವಸ್ಥರ ರೀತಿ ದೇವರು ಇಟ್ಟಿರಲಿ. ಸದಾಕಾಲ ನಿಮ್ಮ ಮೂಲಕ ಜನರಿಗೆ ಒಳ್ಳೆಯದಾಗಲಿ. ಸದಾ ಕಾಲ ನಿಮ್ಮ ಆರೋಗ್ಯ ಚಿರಸ್ಥಾಯಿಯಾಗಿ ಇರಲಿ. ಗೌರವಸ್ಥರ ರೀತಿ ಜನರ ಮಧ್ಯೆ ನೀವು ಇರಬೇಕು. ಇನ್ನು ಮುಂದೆ ನಮ್ಮ ಕರ್ನಾಟಕದ ಬೊಬ್ಬುಲಿ ಪುಲಿ ಯಾರು ಸಿದ್ದರಾಮಯ್ಯ, ಬೊಬ್ಬುಲಿ ಪುಲಿಗೆ ಜೈ ಎಂದು ಜೈಕಾರ ಹಾಕಿದ್ದಾರೆ.