Tag: Ramesh Kumar

  • ಗುಟ್ಟು ವ್ಯವಹಾರ ಏನಿಲ್ಲ, ನನ್ನನ್ನು ಭೇಟಿ ಮಾಡಲು ಕಚೇರಿಗೆ ಬರಬೇಕು: ಸ್ಪೀಕರ್

    ಗುಟ್ಟು ವ್ಯವಹಾರ ಏನಿಲ್ಲ, ನನ್ನನ್ನು ಭೇಟಿ ಮಾಡಲು ಕಚೇರಿಗೆ ಬರಬೇಕು: ಸ್ಪೀಕರ್

    ಬೆಂಗಳೂರು: ಅತೃಪ್ತ ಶಾಸಕರ ಜೊತೆ ಗುಟ್ಟಾಗಿ ಮಾತಡೋಕೆ ಏನು ಇಲ್ಲ. ರಾಜೀನಾಮೆ ಬಗ್ಗೆ ಮಾತನಾಡಲು, ನನ್ನನ್ನು ಭೇಟಿಯಾಗಲು ಕಚೇರಿಗೆ ಬರಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅತೃಪ್ತ ಶಾಸಕರಿಗೆ ಭದ್ರತೆ ಬೇಕಾದರೆ ಕೊಡುತ್ತೇನೆ. ಈ ಹಿಂದೆ ಶಾಸಕರ ರಾಜೀನಾಮೆ ವಿಚಾರಕ್ಕೆ ಹಲವು ತಿಂಗಳ ಕಾಲ ಕಳೆದಿರುವ ಉದಾಹರಣೆ ಇದೆ. ಅದರೆ ಒಂದು ವಾರದಲ್ಲಿ ಇವರಿಗೆ ಏಕೆ ಅರ್ಜೆಂಟ್? ಒಂದು ವಾರದ ವಿಳಂಬದಿಂದ ಅರ್ಜೆಂಟ್ ಅಗಬೇಕಿರುವ ಕೆಲಸವಾದರೂ ಏನು? ಜನ ಸಾಮಾನ್ಯರು ಅವರ ಪಾಡಿಗೆ ಇದ್ದಾರಲ್ಲವೇ? ಎಂದು ವ್ಯಂಗ್ಯವಾಡಿದ್ದಾರೆ.

    ನಾನು ಕುಟುಂಬದ ಜೊತೆ ಇದ್ದೇನೆ. ಇದು ನನ್ನ ಖಾಸಗಿ ಮನೆ. ಇಲ್ಲಿಗೆ ಯಾರನ್ನೂ ಕರೆದಿಲ್ಲ. ಅತೃಪ್ತ ಶಾಸಕರು ನನ್ನನ್ನು ಕಚೇರಿಗೆ ಬಂದು ಭೇಟಿ ಮಾಡಬೇಕು. ಅಲ್ಲಿಯೇ ನಾನು ಅವರಿಗೆ ಏನು ಕೆಲಸವಾಗಬೇಕೋ ಅದನ್ನ ಮಾಡಿಕೊಡುತ್ತೇನೆ. ಗುಟ್ಟು ವ್ಯವಹಾರ ಏನು ಇಲ್ಲ. ಗುಟ್ಟಾಗಿ ಮಾತನಾಡೋಕೆ, ಭೇಟಿಯಾಗೋಕೆ ಏನಾದರೂ ಡೀಲ್ ನಡೆಯುತ್ತಿದಿಯಾ? ಎಂದು ಪ್ರಶ್ನಿಸಿದರು. ಏನೇ ನಡೆದರು ಕಾನೂನಿನ ಚೌಕಟ್ಟಿನಲ್ಲೇ ನಡೆಯಬೇಕು. ನಾನು ಕಾನೂನು ಉಲ್ಲಂಘನೆ ಮಾಡಲ್ಲ ಎಂದು ಖಡಕ್ ಆಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

    ಬಳಿಕ ಅಧಿವೇಶನದ ಬಗ್ಗೆ ಮಾತನಾಡಿ, ಅಧಿವೇಶನ ಮುಂದೂಡಲು ನಾನು ಅವಕಾಶ ನೀಡಲ್ಲ. ಕಾನೂನಿನಲ್ಲಿ ಅ ರೀತಿ ಅವಕಾಶ ಇಲ್ಲ. ಆ ರೀತಿ ನಿರ್ಧರವನ್ನು ಸಿಎಂ ತೆಗೆದುಕೊಳ್ಳುವುದಿಲ್ಲ ಎಂಬ ನಂಬಿಕೆ ಇದೆ ಎಂದರು.

    ರಾಜೀನಾಮೆ ಸಲ್ಲಿಸಿರುವ ಅತೃಪ್ತ ಶಾಸಕರ ಅರ್ಜಿಯನ್ನು ಇಂದೇ ನಿರ್ಧರಿಸಿ. ಇಂದು ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಿರುವ 10 ಶಾಸಕರು ಸ್ಪೀಕರ್ ಮುಂದೆ ಹಾಜರಾಗಬೇಕು. ಹಾಗಾಗಿ ಇಂದು ಎಲ್ಲ ಅತೃಪ್ತ ಶಾಸಕರು ಎಲ್ಲರೂ ಸ್ಪೀಕರ್ ಮುಂದೆ ಹಾಜರಾಗಬೇಕು. ರಾಜೀನಾಮೆ ನೀಡಿರುವ ಎಲ್ಲ ಶಾಸಕರಿಗೆ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರು ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

  • ಕರೆದಾಗ ಸ್ಪೀಕರ್ ಕಚೇರಿಗೆ ಹೋಗ್ತೇನೆ: ರಾಮಲಿಂಗಾ ರೆಡ್ಡಿ

    ಕರೆದಾಗ ಸ್ಪೀಕರ್ ಕಚೇರಿಗೆ ಹೋಗ್ತೇನೆ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಕರೆದಾಗ ವಿಚಾರಣೆ ಹೋಗುತ್ತೇನೆ ಎಂದು ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

    ರಮೇಶ್ ಕುಮಾರ್ ಅವರಿಂದ ಯಾವುದೇ ನೋಟಿಸ್ ನನಗೆ ತಲುಪಿಲ್ಲ. ಸ್ಪೀಕರ್ ನಿರ್ಧಾರದ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಸ್ಪೀಕರ್ ಕರೆದಾಗ ಹೋಗುತ್ತೇನೆ ಎಂದು ಮಾಧ್ಯಮಗಳಿಗೆ ಕಾರಿನಲ್ಲಿಯೇ ತಿಳಿಸಿ ದಿಢೀರ್ ಅಂತಾ ಕರೆದಿದ್ದ ಸುದ್ದಿಗೋಷ್ಠಿಯನ್ನು ರದ್ದುಗೊಳಿಸಿದರು.

    ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ರಾಮಲಿಂಗಾ ರೆಡ್ಡಿ, ನಿರ್ಧಾರದಿಂದ ಹಿಂದೆ ಸರಿಯುವ ಮಾತಿಲ್ಲ. ನಾನು ಯಾಕೆ ರಾಜೀನಾಮೆ ನೀಡಿದ್ದೇನೆ ಎಂಬ ವಿಷಯ ಪಕ್ಷದ ಎಲ್ಲ ನಾಯಕರಿಗೂ ತಿಳಿದಿದೆ. ಪದೇ ಪದೇ ಅದೇ ಮಾತನ್ನು ಪುನಾರವರ್ತಿಸಲು ಹೋಗಲ್ಲ. ಪುತ್ರಿ, ಜಯನಗರ ಶಾಸಕಿಯಾಗಿರುವ ಸೌಮ್ಯ ರೆಡ್ಡಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು ಎಂದು ಹೇಳಿದ್ದರು.

    ಇಂದು ಕಚೇರಿಗೆ ಆಗಮಿಸಿದ್ದ ಸ್ಪೀಕರ್ ರಮೇಶ್ ಕುಮಾರ್, ಸಲ್ಲಿಕೆಯಾದ 13 ರಾಜೀನಾಮೆಗಳ ಪೈಕಿ ಐದು ಮಾತ್ರ ಕ್ರಮಬದ್ಧವಾಗಿವೆ. ಉಳಿದ 8 ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ. ರಾಮಲಿಂಗಾ ರೆಡ್ಡಿ ಅವರನ್ನು ವಿಚಾರಣೆಗೆ ಸ್ಪೀಕರ್ ಜುಲೈ 15ರಂದು ಕಚೇರಿಗೆ ಆಗಮಿಸುವಂತೆ ತಿಳಿಸಿದ್ದಾರೆ.

  • ಐವರ ರಾಜೀನಾಮೆಯಷ್ಟೇ ಕ್ರಮಬದ್ಧ – ಸ್ಪೀಕರ್

    ಐವರ ರಾಜೀನಾಮೆಯಷ್ಟೇ ಕ್ರಮಬದ್ಧ – ಸ್ಪೀಕರ್

    ಬೆಂಗಳೂರು: ಶಾಸಕರ ರಾಜೀನಾಮೆ ಪತ್ರವನ್ನು ಪರಿಶೀಲಿಸಿದ್ದು, ಇದರಲ್ಲಿ ಐವರ ರಾಜೀನಾಮೆಯಷ್ಟೇ ಕ್ರಮ ಬದ್ಧವಾಗಿದೆ. ಉಳಿದವರ ರಾಜೀನಾಮೆಗಳು ನಮ್ಮ ನಿಯಮದಂತೆ ಇಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 13 ರಾಜೀನಾಮೆಗಳಲ್ಲಿ 5 ಪತ್ರಗಳನ್ನು ಹೊರತುಪಡಿಸಿ ಅಂದ್ರೆ ಆನಂದ್ ಸಿಂಗ್, ನಾರಾಯಣ ಗೌಡ, ಪ್ರತಾಪ್ ಗೌಡ ಪಾಟೀಲ್, ಗೋಪಾಲಯ್ಯ ಹಾಗೂ ರಾಮಲಿಂಗಾ ರೆಡ್ಡಿ ಇವರು ನಮ್ಮ ನಿಯಮಾವಳಿಯಂತೆ ರಾಜೀನಾಮೆ ಪತ್ರವನ್ನು ಕೊಟ್ಟಿದ್ದಾರೆ. ಉಳಿದ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ. ಹೀಗಾಗಿ ಅವರಿಗೆ ನಮ್ಮ ಕಚೇರಿಯಿಂದ ತಿಳುವಳಿಕೆ ಕೊಟ್ಟಿದ್ದೇವೆ ಎಂದರು.

    ಇಂದು ರೋಷನ್ ಬೇಗ್ ಅವರು ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಸರಿಯಾದ ಕ್ರಮದಲ್ಲಿ ರಾಜೀನಾಮೆ ನೀಡಿರುವ 5 ಮಂದಿಗೆ ಇದೇ ತಿಂಗಳ 12 ರಂದು 3 ಗಂಟೆಗೆ ಆನಂದ್ ಸಿಂಗ್, 4 ಗಂಟೆಗೆ ನಾರಾಯಣ ಗೌಡ ಹಾಗೂ ಪ್ರತಾಪ್ ಗೌಡ ಪಾಟೀಲ್ ಅವರನ್ನು ವೈಯಕ್ತಿಕ ಕಾರಣ ನೀಡಲು ಕರೆದಿದ್ದೇವೆ. 15 ರಂದು ಗೋಪಾಲಯ್ಯ ಮತ್ತು ರಾಮಲಿಂಗಾ ರೆಡ್ಡಿಯನ್ನು ಪರ್ಸನಲ್ ಹೀಯರಿಂಗ್ ಗೆ ಕರೆಸಿದ್ದೇನೆ. ನಾನು ಸಮಯ ವ್ಯರ್ಥ ಮಾಡಲ್ಲ. ಎಲ್ಲವೂ ಪಾರದರ್ಶಕವಾಗಿರಬೇಕು ಎಂದು ಅವರು ಸ್ಪಷ್ಟಪಡಿಸಿದರು.

    ಇದಾದ ಬಳಿಕ ಸಾರ್ವಜನಿಕರಿಂದ ಕೆಲವೊಂದು ದೂರುಗಳು ಕಚೇರಿಗೆ ಬಂದಿದೆ. ಅವರಿಗೆ ವಿವರಣೆ ಕೊಡಬೇಕು. ಇಂದು ಗುಂಡೂರಾವ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್‍ಪಿ ಸಭೆ ನಡೆದ ಬಳಿಕ ಬಂದು ದೂರು ಕೊಟ್ಟು ಹೋಗಿದ್ದಾರೆ. ರಮೇಶ್ ಜಾರಕಿಹೊಳಿ ಇನ್ನು ಕೆಲವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅರ್ಜಿ ಕೊಟ್ಟಿದ್ದಾರೆ. ಅವರು ಇಂದು ಅರ್ಜಿ ಕೊಟಿದ್ದರಿಂದ 11 ರಂದು ಬಂದು ನಿಮ್ಮ ವಾದ ಮಂಡಿಸಿ ಎಂದು ಹೇಳಿದ್ದೇನೆ.

    ಎಲ್ಲ ಶಾಸಕರು ರಾಜ್ಯಪಾಲರಲ್ಲಿ ಹೋಗಿ ಅವರಿಗೆ ಅರ್ಜಿ ನೀಡಿದ್ದಾರೆ. ಅಲ್ಲದೇ ವೈಯಕ್ತಿಕವಾಗಿ ರಾಜೀನಾಮೆ ನೀಡಿದ್ದು, ಇದನ್ನು ಅಂಗೀಕರಿಸಬೇಕು ಎಂದು ಸ್ಪೀಕರ್ ಗೆ ಹೇಳಿ ಎಂದು ರಾಜ್ಯಪಾಲರಲ್ಲಿ ಹೇಳಿದ್ದಾರೆ. ಹೀಗಾಗಿ ರಾಜ್ಯಪಾಲರು ನನಗೆ ಪತ್ರ ಬರೆದಿದ್ದಾರೆ. ದಯಮಾಡಿ ಇದನ್ನು ನೋಡಿ ಕ್ರಮ ತೆಗೆದುಕೊಳ್ಳಲಿ ಎಂದು ಅವರು ನನಗೆ ಹೇಳಿದ್ದಾರೆ.

    ನಾನು ಕೂಡ ರಾಜ್ಯಪಾರಿಗೆ ಮರು ಪತ್ರ ಬರೆದಿದ್ದು, ಇವರು ಯಾರೂ ನನ್ನ ಭೇಟಿಯಾಗಿಲ್ಲ. ನನ್ನ ಬಳಿ ಸಮಯಾವಕಾಶ ಕೇಳಿಲ್ಲ. ಆಫೀಸಿಗೆ ರಾಜೀನಾಮೆ ಪತ್ರವನ್ನು ಕೊಟ್ಟು ಹೋಗಿದ್ದಾರೆ. ನನ್ನ ಕೆಲಸ ನಾನು ಮಾಡುವುದಾಗಿ ತಿಳಿಸಿದ್ದೇನೆ ಎಂದು ಅವರು ವಿವರಿಸಿದರು.

    ರಾಜೀನಾಮೆ ಕೊಟ್ಟ ಜೆಡಿಎಸ್ ಶಾಸಕರು:
    * ಎಚ್ ವಿಶ್ವನಾಥ್- ಹುಣಸೂರು
    * ಗೋಪಾಲಯ್ಯ- ಮಾಹಾಲಕ್ಷ್ಮಿ ಲೇ ಔಟ್
    * ನಾರಾಯಣ ಗೌಡ- ಕೆ. ಆರ್ ಪೇಟೆ

    ರಾಜೀನಾಮೆ ಕೊಟ್ಟ ಕೈ ಶಾಸಕರು:
    * ರಾಮಲಿಂಗಾ ರೆಡ್ಡಿ- ಬಿಟಿಎಂ ಲೇ ಔಟ್
    * ರಮೇಶ್ ಜಾರಕಿಹೊಳಿ- ಗೋಕಾಕ್
    * ಎಸ್.ಟಿ ಸೋಮಶೇಖರ್- ಯಶವಂತಪುರ
    * ಪ್ರತಾಪ್ ಗೌಡ ಪಾಟೀಲ್- ಮಸ್ಕಿ
    * ಬಿ.ಸಿ ಪಾಟೀಲ್- ಹಿರೇಕೆರೂರು

    * ಮಹೇಶ್ ಕುಮಟಳ್ಳಿ- ಅಥಣಿ
    * ಭೈರತಿ ಬಸವರಾಜ್- ಕೆ.ಆರ್ ಪುರಂ
    * ಶಿವರಾಂ ಹೆಬ್ಬಾರ್- ಯಲ್ಲಾಪುರ
    * ಮುನಿರತ್ನ- ರಾಜರಾಜೇಶ್ವರಿ ನಗರ
    * ರೋಷನ್ ಬೇಗ್- ಶಿವಾಜಿನಗರ

    ಪಕ್ಷೇತರ ಶಾಸಕರು:
    ಎಚ್ ನಾಗೇಶ್- ಮುಳಬಾಗಿಲು
    ಆರ್ ಶಂಕರ್- ರಾಣೆಬೆನ್ನೂರು

  • ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡ್ತಾರೆ ಎಂಬ ನಂಬಿಕೆ ಇದೆ: ಹೆಚ್. ವಿಶ್ವನಾಥ್

    ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡ್ತಾರೆ ಎಂಬ ನಂಬಿಕೆ ಇದೆ: ಹೆಚ್. ವಿಶ್ವನಾಥ್

    ಬೆಂಗಳೂರು: ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಶ್ವನಾಥ್, ಸ್ಪೀಕರ್ ರಮೇಶ್ ಕುಮಾರ್ ನಮಗೆ ಯಾವಾಗ ಕರೆಯುತ್ತಾರೆ, ನಾವು ಆವಾಗ ಬರುತ್ತೇವೆ ಎಂದು ಮೊದಲೇ ಹೇಳಿದ್ದೇವೆ. ಸ್ಪೀಕರ್ ಕರೆದಾಗ ನಾವು ಅವರ ಎದುರಿಗೆ ಬಂದು ರಾಜೀನಾಮೆಯನ್ನು ಅಂಗೀಕಾರ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.

    ಸ್ಪೀಕರ್ ಕಚೇರಿಯಿಂದ ನಮಗೆ ಕರೆ ಬರಬಹುದು. ಅವರು ಕರೆಯದೇ ನಾವು ಹೋಗುವುದಕ್ಕೆ ಆಗುವುದಿಲ್ಲ. ಸ್ಪೀಕರ್ ಏನೂ ಹೇಳುತ್ತಾರೋ ನಾವು ಅದನ್ನು ಗೌರವದಿಂದ ನಡೆದುಕೊಳ್ಳಬೇಕು. ನಮ್ಮ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕು. ಸ್ಪೀಕರ್ ರಮೇಶ್ ಕುಮಾರ್ ಅವರು ಸಂವಿಧಾನದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಹಾಗಾಗಿ ಅವರು ನಮ್ಮ ರಾಜೀನಾಮೆ ಅಂಗೀಕಾರ ಮಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ಹೇಳಿದರು.

    ರಮೇಶ್ ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿ, ಶನಿವಾರ ಮಧ್ಯಾಹ್ನದವರೆಗೂ ನಾನು ಕಚೇರಿಯಲ್ಲಿ ಇದ್ದೆ. ನಾನಿಲ್ಲದ ಸಂದರ್ಭದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ತುರ್ತಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಎರಡು ದಿನಗಳ ನಂತರ ನಾನು ಕಚೇರಿಗೆ ಬಂದಿದ್ದೇನೆ. ಈಗ ಹೋಗಿ ನೋಡಿ ರಾಜೀನಾಮೆ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

    ಜನರ ಭಾವನೆಗಳಿಗೆ ನಾನು ಸ್ಪಂದಿಸಬೇಕಿದೆ. ರೂಲ್ ಬುಕ್ ನೋಡಿ ಮುಂದಿನ ತೀರ್ಮಾನ ಮಾಡುತ್ತೇನೆ. ಹೀಗಾಗಿ ತಕ್ಷಣವೇ ಅತೃಪ್ತ ಶಾಸಕರ ರಾಜೀನಾಮೆಯನ್ನು ತುರ್ತಾಗಿ ಅಂಗೀಕಾರ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ಕರೆಸಿ ಮಾತುಕತೆ ನಡೆಸುತ್ತೇನೆ ಎಂದು ಸ್ಪೀಕರ್ ಸ್ಪಷ್ಟನೆ ನೀಡಿದರು.

  • ನಾನಿರೊದೇ ಸ್ಲಂನಲ್ಲಿ, ಸುಗಂಧದ ಪರಿಮಳ ಬರಬೇಕು ಅಂದ್ರೆ ಆಗುತ್ತಾ: ಸ್ಪೀಕರ್

    ನಾನಿರೊದೇ ಸ್ಲಂನಲ್ಲಿ, ಸುಗಂಧದ ಪರಿಮಳ ಬರಬೇಕು ಅಂದ್ರೆ ಆಗುತ್ತಾ: ಸ್ಪೀಕರ್

    ಬೆಂಗಳೂರು: ಕೊಳಚೆ ಪ್ರದೇಶದಲ್ಲಿ ವಾಸ ಮಾಡುವವರಿಗೆ ಇಲ್ಲಿ ದುರ್ವಾಸನೆ ಇದೆ ಎಂದರೆ ಹೇಗಾಗುತ್ತದೆ. ನಾನಿರುವುದೇ ಸ್ಲಂನಲ್ಲಿ. ಹೀಗಾಗಿ ಸ್ಲಂನಲ್ಲಿ ಇದ್ದುಕೊಂಡು ಸುಗಂಧದ ಪರಿಮಳ ಬರಬೇಕು ಎಂದರೆ ಆಗುತ್ತಾ ಎಂದು ರಾಜ್ಯ ರಾಜಕೀಯದ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ನನ್ನ ಸ್ಥಾನದಲ್ಲಿ ನಾನು ಹೇಗೆ ವರ್ತಿಸಬೇಕು. ಜನರು ಏನು ನಿರೀಕ್ಷೆ ಮಾಡುತ್ತಾರೆ, ಸಂವಿಧಾನ ಏನು ನಿರೀಕ್ಷೆ ಮಾಡುತ್ತೆ ಇಷ್ಟಕ್ಕೆ ನಾನು ಸೀಮಿತವಾಗಿರುತ್ತೇನೆ. ಸದ್ಯಕ್ಕೆ ಯಾವ ಶಾಸಕರು ಸಮಯ ಕೇಳಿಲ್ಲ. ಜನರ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಜನರಿಗೆ ವೋಟು ಹಾಕುವ ಹಕ್ಕು ಕೊಟ್ಟಿದ್ದೇವೆ. ಆದ್ದರಿಂದ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ ಎಂದರೆ ಸಾಕಪ್ಪ ನಿಮ್ಮ ಕೆಲಸ ಎಂದು ಹೇಳುತ್ತಾರೆ. ಶಾಸಕರ ರಾಜೀನಾಮೆಯಿಂದ ನನಗೆ ಬೇಸರವಾಗುವುದಿಲ್ಲ. ಕೊಳಚೆ ಪ್ರದೇಶದಲ್ಲಿ ವಾಸ ಮಾಡುವವರಿಗೆ ಇಲ್ಲಿ ದುರ್ವಾಸನೆ ಇದೆ ಎಂದರೆ ಹೇಗಾಗುತ್ತದೆ. ನಾನಿರುವುದೇ ಸ್ಲಂನಲ್ಲಿ, ಹೀಗಾಗಿ ಸ್ಲಂನಲ್ಲಿ ಇದ್ದುಕೊಂಡು ಸುಗಂಧದ ಪರಿಮಳ ಬರಬೇಕು ಎಂದರೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

    ನಮ್ಮ ಕಾರ್ಯದರ್ಶಿ ಅವರು ರಾಜೀನಾಮೆಯಲ್ಲಿ ತೆಗೆದುಕೊಂಡಿದ್ದಾರೆ. ನಾನು ಹೋಗಿ ನೋಡಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ. ಮೊದಲು ತಾಳಿಕಟ್ಟುವುದು, ಜೀರಿಗೆ, ಬೆಲ್ಲ ಇಡುವುದು ಬಹಳ ಮುಖ್ಯವಾಗಿತ್ತು. ಜನರು ಅಕ್ಷತೆ ಹಾಕಲು ಕಾಯುತ್ತಿದ್ದರು. ಈಗ ಹುಡುಗ ತಾಳಿ ಕಟ್ಟಿದ್ದಾನಾ ಎಂದು ನೋಡುವುದಿಲ್ಲ. ಬರೀ ವೈಭವದ ರೀತಿಯಾಗಿದೆ ಎಂದು ರಾಜಕೀಯದ ಬೆಳವಣಿಗೆ ಬಗ್ಗೆ ಹೇಳಿದರು.

  • ಇಂದೇನಾ ಮೈತ್ರಿ ಸರ್ಕಾರದ ಕ್ಲೈಮ್ಯಾಕ್ಸ್?- ಎಲ್ಲರ ಚಿತ್ತ ಸ್ಪೀಕರ್ ನಿರ್ಧಾರದತ್ತ

    ಇಂದೇನಾ ಮೈತ್ರಿ ಸರ್ಕಾರದ ಕ್ಲೈಮ್ಯಾಕ್ಸ್?- ಎಲ್ಲರ ಚಿತ್ತ ಸ್ಪೀಕರ್ ನಿರ್ಧಾರದತ್ತ

    ಬೆಂಗಳೂರು: ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಇಂದೇ ಮೈತ್ರಿ ಸರ್ಕಾರದ ಕ್ಲೈಮ್ಯಾಕ್ಸ್ ಆಗಿಬಿಡುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ.

    ಯಾಕಂದ್ರೆ ಈಗಾಗಲೇ 15 ಮಂದಿ ರಾಜೀನಾಮೆ ನೀಡಿದ್ದಾರೆ. ಆದರೆ ಸೋಮವಾರ ಸ್ಪೀಕರ್ ಇರಲಿಲ್ಲ. ಹೀಗಾಗಿ ಇಂದು ಅವರು ಶಾಸಕರ ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಮುಗಿಸ್ತಾರಾ ಅಥವಾ ವಿಳಂಬ ಮಾಡ್ತಾರಾ ಎಂಬ ಕುತೂಹಲ ರಾಜ್ಯದ ಜನರಲ್ಲಿ ಮೂಡಿಸಿದೆ.

    ಸ್ಪೀಕರ್ ಮುಂದಿರುವ ಅವಕಾಶ, ನಿಯಮ:
    ರಾಜೀನಾಮೆ ಕೊಟ್ಟ ಶಾಸಕರನ್ನು ಸ್ಪೀಕರ್ ವಿಚಾರಣೆಗೆ ಕರೀತಾರಾ, ಪ್ರತ್ಯೇಕ ವಿಚಾರಣೆ ಮಾಡುತ್ತಾರೆಯೋ ಅಥವಾ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಅವಕಾಶವೂ ಅವರ ಮುಂದಿದೆಯಾ ಎನ್ನುವ ಪ್ರಶ್ನೆ ಎದ್ದಿದೆ.

    ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಅಡಿ ಸಿದ್ದರಾಮಯ್ಯ ದೂರು ಕೊಟ್ಟಿದ್ದರು. ಆದರೆ ಈವರೆಗೂ ಈ ದೂರಿನ ಬಗ್ಗೆ ಸ್ಪೀಕರ್ ಅವರು ಸೂಕ್ತ ಕ್ರಮ ಕೈಗೊಂಡಿಲ್ಲ. ಈ ದೂರನ್ನು ಈಗ ವಿಚಾರಣೆಗೆ ತೆಗೆದುಕೊಂಡು ರಾಜೀನಾಮೆ ಪ್ರಕ್ರಿಯೆ ವಿಳಂಬ ಮಾಡಬಹುದಾದ ಸಾಧ್ಯತೆಗಳಿವೆ.

    ಕಾಂಗ್ರೆಸ್‍ನ ಈಗಿನ ಹೊಸ ದೂರುಗಳ ವಿಚಾರಣೆಯ ನೆಪ ಕೊಡುವ ಮೂಲಕ ಶಾಸಕರನ್ನು ಒಬ್ಬೊಬ್ಬರಾಗಿ ಕರೆಸಿ ರಾಜೀನಾಮೆ ನೀಡಲು ನಿಜ ಕಾರಣದ ಸ್ಪಷ್ಟನೆ ಪಡೆಯ ಸಾಧ್ಯತೆ ಇದೆ. ಅಲ್ಲದೆ ಯಾವುದೇ ಆಮಿಷಕ್ಕೆ ಒಳಗಾಗಿಲ್ಲ ಅಂತ ಖಾತರಿ ಪಡಿಸಿಕೊಳ್ಳುವ ನೆಪ ಹಾಗೂ ಶಾಸಕರ ಕ್ಷೇತ್ರಗಳಿಂದ ಸಂಘಟನೆಗಳು ಹಾಗೂ ಸಾರ್ವಜನಿಕರನ್ನು ಕರೆಸಿ ಅಭಿಪ್ರಾಯ ಸಂಗ್ರಹಿಸುವ ನೆಪವನ್ನೂ ನೀಡಬಹುದು. ಹೀಗೆ ರಾಜೀನಾಮೆ ಅಂಗಿಕಾರ ವಿಳಂಬ ಮೂಲಕ ಅತೃಪ್ತ ಶಾಸಕರ ಮನವೊಲಿಸಲು ದೋಸ್ತಿಗಳಿಗೆ ಸ್ಪೀಕರ್ ಸಮಯ ಕೊಡಬಹುದಾದ ಸಾಧ್ಯತೆಗಳಿವೆ.

    ವಿಳಂಬ ಧೋರಣೆ ಅನುಸರಿಸಿದರೂ ರಾಜೀನಾಮೆಯು ನಿಯಮ ಬದ್ಧವಾಗಿದ್ದರೆ ಅಂಗೀಕರಿಸ್ತಾರಾ ಅಥವಾ ಇಲ್ಲವೆ ಎಂಬುದನ್ನು ಕಾದುನೋಡಬೇಕು. ಒಟ್ಟಿನಲ್ಲಿ ಇಂದಿನ ಸ್ಪೀಕರ್ ನಡೆ ಭಾರೀ ಕುತೂಹಲ ಹುಟ್ಟಿಸಿದೆ.

    ರಾಜೀನಾಮೆ ಕೊಟ್ಟ ಜೆಡಿಎಸ್ ಶಾಸಕರು:
    * ಎಚ್ ವಿಶ್ವನಾಥ್- ಹುಣಸೂರು
    * ಗೋಪಾಲಯ್ಯ- ಮಾಹಾಲಕ್ಷ್ಮಿ ಲೇ ಔಟ್
    * ನಾರಾಯಣ ಗೌಡ- ಕೆ. ಆರ್ ಪೇಟೆ

    ರಾಜೀನಾಮೆ ಕೊಟ್ಟ ಕೈ ಶಾಸಕರು:
    * ರಾಮಲಿಂಗಾ ರೆಡ್ಡಿ- ಬಿಟಿಎಂ ಲೇ ಔಟ್
    * ರಮೇಶ್ ಜಾರಕಿಹೊಳಿ- ಗೋಕಾಕ್
    * ಎಸ್.ಟಿ ಸೋಮಶೇಖರ್- ಯಶವಂತಪುರ
    * ಪ್ರತಾಪ್ ಗೌಡ ಪಾಟೀಲ್- ಮಸ್ಕಿ

    * ಬಿ.ಸಿ ಪಾಟೀಲ್- ಹಿರೇಕೆರೂರು
    * ಮಹೇಶ್ ಕುಮಟಳ್ಳಿ- ಅಥಣಿ
    * ಭೈರತಿ ಬಸವರಾಜ್- ಕೆ.ಆರ್ ಪುರಂ
    * ಶಿವರಾಂ ಹೆಬ್ಬಾರ್- ಯಲ್ಲಾಪುರ
    * ಮುನಿರತ್ನ- ರಾಜರಾಜೇಶ್ವರಿ ನಗರ
    * ರೋಷನ್ ಬೇಗ್- ಶಿವಾಜಿನಗರ

    ಪಕ್ಷೇತರ ಶಾಸಕರು:
    ಎಚ್ ನಾಗೇಶ್
    ಆರ್ ಶಂಕರ್

  • 11 ಮಂದಿ ಪತ್ರ ಕೊಟ್ಟಿದ್ದು, ಮಂಗಳವಾರ ಮುಂದಿನ ಕ್ರಮ – ರಮೇಶ್ ಕುಮಾರ್

    11 ಮಂದಿ ಪತ್ರ ಕೊಟ್ಟಿದ್ದು, ಮಂಗಳವಾರ ಮುಂದಿನ ಕ್ರಮ – ರಮೇಶ್ ಕುಮಾರ್

    ಬೆಂಗಳೂರು: ಈಗಾಗಲೇ 11 ಮಂದಿ ರಾಜೀನಾಮೆ ಪತ್ರವನ್ನು ಕೊಟ್ಟಿದ್ದಾರೆ. ನಾಳೆ ಭಾನುವಾರವಾಗಿದ್ದು, ಸೋಮವಾರ ನಾನು ಇರಲ್ಲ. ಹೀಗಾಗಿ ಮಂಗಳವಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ಶಾಸಕರ ರಾಜೀನಾಮೆ ಕುರಿತು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಕಚೇರಿಗೆ 11 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ನಮ್ಮ ಕಾರ್ಯದರ್ಶಿ ಹೇಳಿದ್ದಾರೆ. ಭಾನುವಾರ ಕಚೇರಿ ಇರಲ್ಲ. ಸೋಮವಾರ ನಾನು ವೈಯಕ್ತಿಕ ಕಾರಣಗಳಿಂದ ಕಚೇರಿಗೆ ಬರುವುದಿಲ್ಲ. ಹಾಗಾಗಿ ಮಂಗಳವಾರ ಬಂದು ರಾಜೀನಾಮೆ ಪರಿಶೀಲಿಸುತ್ತೇನೆ ಎಂದು ಹೇಳಿದ್ದಾರೆ.

    ನಾನು ನನ್ನ ವೈಯಕ್ತಿಕ ಕೆಲಸ ಮುಗಿಸಿ ವಿಧಾನಸೌಧಕ್ಕೆ ಹೋಗಿ ಅಲ್ಲಿ ಸಭೆ ನಡೆಸುತ್ತಿದೆ. ಆದರೆ ಯಾರು ಕೂಡ ನನಗೆ ಕರೆ ಮಾಡಿ ಅಥವಾ ಪತ್ರದ ಮೂಲಕ ಅಪಾಯಿಂಟ್‍ಮೆಂಟ್ ತೆಗೆದುಕೊಂಡಿಲ್ಲ. ಭೇಟಿ ಮಾಡಬೇಕು ಎಂದು ಶಾಸಕರು ಮನಸ್ಸಿನಲ್ಲಿ ಎಂದುಕೊಂಡು ಬಂದರೆ ನನಗೆ ಅದು ಹೇಗೆ ಗೊತ್ತಾಗುತ್ತೆ. ಅವರು ಮೊದಲೇ ಕರೆ ಮಾಡಿ ನಾವು ಬರುತ್ತಿದ್ದೇವೆ ಎಂದು ಹೇಳಿದ್ದರೆ, ನಾನು ಅಲ್ಲಿಯೇ ಇರುತ್ತದೆ ಎಂದರು.

    ಕಚೇರಿಗೆ 11 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. 11 ಜನ ಶಾಸಕರಿಗೆ ಸ್ವೀಕೃತಿ ಪತ್ರ ನೀಡಿ. ನಾನು ಮಂಗಳವಾರ ಬಂದು ಮುಂದಿನ ಕ್ರಮ ಜರುಗಿಸುತ್ತೇನೆ ಎಂದು ಆಪ್ತ ಕಾರ್ಯದರ್ಶಿ ಬಳಿ ಹೇಳಿದ್ದೇನೆ. ನಾನು ಕಚೇರಿಯಲ್ಲಿ ಇಲ್ಲ ಮಾತ್ರಕ್ಕೆ ಅವರನ್ನು ವಾಪಸ್ ಕಳುಹಿಸಿಲ್ಲ. ಕಾನೂನು ಪ್ರಕಾರ ಮುಂದಿನ ಎಲ್ಲ ಕ್ರಮವನ್ನು ಜರುಗಿಸುತ್ತೇವೆ. ಭಾನುವಾರ ಕಚೇರಿ ತೆರೆದಿರುವುದಿಲ್ಲ. ಸೋಮವಾರ ನನಗೆ ಪೂರ್ವನಿಯೋಜತ ಕೆಲಸ ಇರುವುದರಿಂದ ನಾನು ಕಚೇರಿಗೆ ಬರುವುದಕ್ಕೆ ಆಗಲ್ಲ. ಮಂಗಳವಾರ ಬಂದು ರಾಜೀನಾಮೆ ಪರಿಶೀಲಿಸುತ್ತೇನೆ ಎಂದು ಹೇಳಿದರು.

    ಶಾಸಕರು ರಾಜಭಾವನಕ್ಕಾದರೂ ಹೋಗಲಿ, ರಾಷ್ಟ್ರಭವನಕ್ಕಾದರೂ ಹೋಗಲಿ ಅದು ನನಗೆ ಬೇಡದಿರುವ ವಿಷಯ. ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ಕೇಳಿ ನಾನು ನಿಮಗೆ ಹೇಳುತ್ತೇನೆ. ನನ್ನ ಕರ್ತವ್ಯ ಸಂವಿಧಾನ ಬದ್ಧವಾಗಿ ಕಾನೂನು ರೀತಿಯಲ್ಲಿ ಏನು ಇದೆ ಅಷ್ಟಕ್ಕೆ ನಾನು ಸೀಮಿತ. ಬೇರೆ ವಿಷಯ ನನಗೆ ಗೊತ್ತಿಲ್ಲ. ನಾನು ಯಾವುದೇ ಪಕ್ಷದಲ್ಲಿ ಇಲ್ಲ ಹಾಗಾಗಿ ಶಾಸಕರ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

    ಸರ್ಕಾರ ಬಿದ್ದು ಹೋಗುವುದು, ಬಿಡುವುದು ಸುಪ್ರಿಂ ಕೋರ್ಟ್‍ನ ತೀರ್ಪಿನ ಪ್ರಕಾರ ವಿಧಾನಸಭೆಯಲ್ಲಿ ನಿರ್ಧಾರವಾಗುತ್ತೆ. ಕಚೇರಿಯಲ್ಲಿ ರಾಜೀನಾಮೆ ಕೊಟ್ಟರೆ ಅದು ಸ್ವೀಕರಿಸಲು ಆಗಲ್ಲ. ಅವರು ಖುದ್ದಾಗಿ ನನಗೆ ಕೊಡಬೇಕು. ರಾಜೀನಾಮೆ ಪತ್ರ ತೆಗೆದುಕೊಂಡಿದ್ದೀವಿ ಎಂದು ಸ್ವೀಕೃತಿ ಪತ್ರ ಕೊಡುತ್ತೇವೆ. ಶಾಸಕರು ಅಪಾಯಿಂಟ್‍ಮೆಂಟ್ ಕೇಳಿಲ್ಲ. ಕೇಳಿದರೆ ನಾನು ಕೊಡಲು ನಿರಾಕರಿಸುವುದಿಲ್ಲ. ಇಂದು ಯಾರ್ಯಾರು ಬರುತ್ತಾರೆ ಎಂದು ನನಗೆ ಗೊತ್ತಿಲ್ಲ ಎಂದು ರಮೇಶ್ ಕುಮಾರ್ ಅವರು ಹೇಳಿದ್ದಾರೆ.

    ಜೆಡಿಎಸ್ ಮಾಜಿ ಅಧ್ಯಕ್ಷ ವಿಶ್ವನಾಥ್, ರಮೇಶ್ ಜಾರಕಿಹೊಳಿ, ಸೋಮಶೇಖರ್, ಪ್ರತಾಪ್ ಗೌಡ ಪಟೀಲ್, ಗೋಪಾಲಯ್ಯ, ಬಿಸಿ ಪಾಟೀಲ್, ಮಹೇಶ್ ಕುಮಟಳ್ಳಿ, ನಾರಾಯಣ ಗೌಡ, ಭೈರತಿ ಬಸವರಾಜ್, ಶಿವಾರಂ ಹೆಬ್ಬಾರ್, ರಾಮಲಿಂಗಾ ರೆಡ್ಡಿ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ನೀಡಿದ್ದಾರೆ.

  • ಗೆಟ್‍ಔಟ್ ಫ್ರಂ ಹಿಯರ್: ಮಾಧ್ಯಮಗಳ ವಿರುದ್ಧ ಸ್ಪೀಕರ್ ಕೆಂಡಾಮಂಡಲ

    ಗೆಟ್‍ಔಟ್ ಫ್ರಂ ಹಿಯರ್: ಮಾಧ್ಯಮಗಳ ವಿರುದ್ಧ ಸ್ಪೀಕರ್ ಕೆಂಡಾಮಂಡಲ

    ಬೆಂಗಳೂರು: ಬಂಡಾಯ ಶಾಸಕರ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಮಾಧ್ಯಮಗಳ ವಿರುದ್ಧ ಗುಡುಗಿದ್ದಾರೆ.

    ಸ್ಪೀಕರ್ ರಮೇಶ್ ಕುಮಾರ್ ಅನಾರೋಗ್ಯದಿಂದ ಸಂಬಂಧಿಕರೊಬ್ಬರು ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ವಿಚಾರಿಸಲು ಆಗಮಿಸಿದ್ದ ಸ್ಪೀಕರ್ ಮಾಧ್ಯಮಗಳ ವಿರುದ್ಧ ಗರಂ ಆದರು.

    ನೀವು ರಾಜೀನಾಮೆ ಅಂಗೀಕರಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನಿಸಿಗೆ ಕೋಪದಿಂದ ಪ್ರತಿಕ್ರಿಯೆ ನೀಡಿದ ಸ್ಪೀಕರ್, ಯೂ ಆರ್ ನಾಟ್ ಹ್ಯೂಮನ್ ಬೀಯಿಂಗ್? ನಿಮಗೆ ಮಾನವೀಯತೆ ಇಲ್ಲವೇ? ಗೆಟ್ ಔಟ್ ಫ್ರಂ ಹಿಯರ್. ಇಲ್ಲಿಂದ ನಡಿರೀ. ಆಸ್ಪತ್ರೆಯಲ್ಲಿ ಜನರು ಸಾಯುತ್ತಿದ್ದಾರೆ. ನಿಮಗೆ ಬೈಟ್ ಕೊಡಬೇಕಾ ಎಂದು ಕೆಂಡಾಮಂಡಲವಾದರು.

    ಖಾಸಗಿ ಕಾರಿನಲ್ಲಿ ಪ್ರಯಾಣ:
    ಜಯದೇವ ಆಸ್ಪತ್ರೆಯಿಂದ ಮಾಧ್ಯಮಗಳ ಕಣ್ಣು ತಪ್ಪಿಸಿದ ಸ್ಪೀಕರ್ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲಿ ಅಜ್ಞಾತ ಸ್ಥಳದತ್ತ ತೆರಳಿದ್ದಾರೆ. ಮುಂದಿನ ಗೇಟ್‍ನಲ್ಲಿ ತನಗಾಗಿ ಮಾಧ್ಯಮದವರು ಕಾಯುತ್ತಿದ್ದಾರೆ ಎನ್ನುವುದನ್ನು ತಿಳಿದು ಹಿಂದಿನ ಬಾಗಿಲಿನಿಂದ ಸ್ಪೀಕರ್ ತೆರಳಿದ್ದಾರೆ.

    ರಾಜ್ಯ ರಾಜಕಾರಣದಲ್ಲಿ ಬಹು ದೊಡ್ಡ ಆಪರೇಷನ್ ಕಮಲ ನಡೆದಿದ್ದು, ಬರೋಬ್ಬರಿ 13 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಇನ್ನು ರಾಜೀನಾಮೆ ನೀಡುವವರ ಸಂಖ್ಯೆ ಏರಿಕೆ ಆಗುತ್ತಿದೆ. ಈ ಮೂಲಕ ಅಮೆರಿಕದಿಂದ ಬರುವ ಮೊದಲೇ ಸಿಎಂಗೆ ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಬಂಡಾಯ ಶಾಸಕರ ನಡೆ ಭಾರೀ ಶಾಕ್ ಕೊಟ್ಟಿದೆ.

  • ನನ್ನನ್ನು ಯಾರೂ ಸಂಪರ್ಕಿಸಿಲ್ಲ, ನಾನೇನು ಸಂತೆಯಲ್ಲಿರುವ ಕುರಿಯಲ್ಲ – ಸ್ಪೀಕರ್ ಕಿಡಿ

    ನನ್ನನ್ನು ಯಾರೂ ಸಂಪರ್ಕಿಸಿಲ್ಲ, ನಾನೇನು ಸಂತೆಯಲ್ಲಿರುವ ಕುರಿಯಲ್ಲ – ಸ್ಪೀಕರ್ ಕಿಡಿ

    ಬೆಂಗಳೂರು: ನನ್ನನ್ನು ಯಾರೂ ಸಂಪರ್ಕಿಸಿಲ್ಲ ನಾನೇನು ಸಂತೆಯಲ್ಲಿರುವ ಕುರಿಯಲ್ಲ ಎಂದು ರಾಜೀನಾಮೆ ಕೊಡುತ್ತೇವೆ ಎಂಬ ಶಾಸಕರ ಮೇಲೆ ಸ್ಪೀಕರ್ ರಮೇಶ್ ಕುಮಾರ್ ಗರಂ ಆಗಿದ್ದಾರೆ.

    ಇಂದು ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ವಿಚಾರಕ್ಕೆ ವಿಧಾನಸೌಧಲ್ಲಿ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅವರು, ಇಲ್ಲಿಯವರೆಗೆ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಇದೆಲ್ಲ ಪುಕಾರು, ಕೆಲವು ಶಾಸಕರು ಅವರವರ ಬಿಸಿನೆಸ್ ಮಾಡಿಕೊಳ್ಳಲು ತಂತ್ರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಸ್ಪೀಕರ್ ಅಂದರೆ ಹುಡುಗಾಟಿಕೆ ಮಾತಲ್ಲ. ಬರುವುದಾದರೆ ಶಾಸಕರು ಬರಲಿ ನಾನು ಇಲ್ಲಿಯೇ ಇರುತ್ತೇನೆ. 13 ಜನರಲ್ಲಿ ಯಾರು ನನ್ನ ಸಂಪರ್ಕ ಮಾಡಿಲ್ಲ. ಇದೆಲ್ಲ ಹೆದರಿಸುವ ತಂತ್ರ. ಮಾಧ್ಯಮದರು ದಾರಿ ತಪ್ಪಿಸುತ್ತಿದ್ದಾರೆ. ನಾನು ಯಾರಿಗೂ ಕಾಯುತ್ತಾ ಕೂರುವುದಿಲ್ಲ. ಈ ರೀತಿಯ ಘಟನೆಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿದ್ದಾರೆ. ಇದನ್ನು ಓದಿ: ಇಂದು 13 ಮಂದಿ ಶಾಸಕರು ರಾಜೀನಾಮೆ?

    ಈ ಮಹಾನುಭಾವರ ಬರುತ್ತಾರೆ ಎಂದು ನಾನು ಕಾಯುತ್ತ ಕುಳಿತುಕೊಳ್ಳಬೇಕಾ? ಅವರು ಪುಕಾರು ಹಬ್ಬಿಸಿ ಅವರ ಬಿಸಿನೆಸ್ ಮಾಡಿಕೊಳ್ಳುತ್ತಿದ್ದಾರೆ. ಎಲ್ಲದಕ್ಕೂ ಒಂದು ನಿಯಮ ಇದೆ. ಮೂರಲ್ಲ ಮೂವತ್ತು ಮಂದಿ ಬರಲಿ ನಾನೇನು ಬೇಡ ಅಂದಿದ್ದೇನಾ ಇಲ್ಲಿ ತನಕ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಇದುವರೆಗೆ ಯಾರೂ ನನಗೆ ರಾಜೀನಾಮೆ ಕೊಟ್ಟಿಲ್ಲ- ಸ್ಪೀಕರ್ ಸ್ಪಷ್ಟನೆ

    ಇದುವರೆಗೆ ಯಾರೂ ನನಗೆ ರಾಜೀನಾಮೆ ಕೊಟ್ಟಿಲ್ಲ- ಸ್ಪೀಕರ್ ಸ್ಪಷ್ಟನೆ

    ಕೋಲಾರ: ನನಗೆ ಯಾರೂ ರಾಜೀನಾಮೆ ಕೊಟ್ಟಿಲ್ಲ. ರಾತ್ರಿಯಿಂದ ನಾನು ಮನೆಯಲ್ಲೇ ಇದ್ದೇನೆ. ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಹೀಗಾಗಿ ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

    ಶಾಸಕ ಆನಂದ್ ಸಿಂಗ್ ರಾಜೀನಾಮೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೂವರೆಗೂ ನನ್ನನ್ನು ಯಾರೂ ಸಂಪರ್ಕಿಸಿಲ್ಲ. 20 ಶಾಸಕರು ರಾಜೀನಾಮೆ ಬೇಕಾದ್ರೆ ಕೊಡಲಿ. ತಮ್ಮ ಪಿಎ ವಿಶಾಲಾಕ್ಷಿಗೆ ರಾಜೀನಾಮೆ ಕೊಟ್ಟಿರುವುದು ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಾದ್ರೂ ರಾಜೀನಾಮೆ ಕೊಡಲಿ, ಬಿಜೆಪಿ ಪಕ್ಷದಿಂದ ಆದ್ರೂ ರಾಜೀನಾಮೆ ಕೊಡಲಿ. ನನಗೂ ಅದಕ್ಕೂ ಸಂಬಂಧವಿಲ್ಲ. 20 ಜನ ರಾಜೀನಾಮೆ ಕೊಟ್ಟರೂ ಪಡೆಯುವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಒಟ್ಟಿನಲ್ಲಿ ಸಿಎಂ ಅಮೆರಿಕ ಪ್ರವಾಸಕ್ಕೆ ತೆರಳಿದ್ದು ರಾಜ್ಯದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಆಷಾಢದ ಮೊದಲ ದಿನವೇ ದೋಸ್ತಿ ಸರ್ಕಾರಕ್ಕೆ ಕಂಟಕ ಎದುರಾದಂತೆ ಕಾಣುತ್ತಿದೆ. ಹೊಸಪೇಟೆ ಶಾಸಕ ಆನಂದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಒಟ್ಟು 10 ಶಾಸಕರು ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

    ಜಿಂದಾಲ್‍ಗೆ ಭೂಮಿ ನೀಡಿದ್ದನ್ನು ನೆಪವಾಗಿಟ್ಟುಕೊಂಡು ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಕಾಂಗ್ರೆಸ್ ಸಂಖ್ಯಾಬಲ 78ಕ್ಕೆ ಕುಸಿದಿದೆ. ಇತ್ತ ಮೂರು ದಿನಗಳಿಂದ ರಮೇಶ್ ಜಾರಕಿಹೊಳಿಯವರು ಎಲ್ಲೂ ಕಾಣಿಸುತ್ತಿಲ್ಲ. ಗೋಕಾಕ್ ನಲ್ಲೂ ಇಲ್ಲ. ಬೆಂಗಳೂರಿನಲ್ಲೂ ಇಲ್ಲ. ಈ ಮೂಲಕ ಆಪರೇಷನ್ ಕಮಲಕ್ಕೆ ಮಹೂರ್ತ ಫಿಕ್ಸ್ ಮಾಡಿ ಗೌಪ್ಯ ಜಾಗಕ್ಕೆ ಹೋದ್ರಾ ಎಂಬ ಪ್ರಶ್ನೆ ಎದ್ದಿದೆ.