ಬೆಂಗಳೂರು: ಸ್ಪೀಕರ್ ಅವರೇ ಸುಪ್ರೀ ಆಗಿರೋದರಿಂದ ಅವರ ಆದೇಶವನ್ನು ನಾವು ಯಾರೂ ಪ್ರಶ್ನೆ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ತಿಳಿಸಿದ್ದಾರೆ.
ಇಂದು 14 ಮಂದಿಯನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಅವರು ಆದೇಶ ಹೊರಡಿಸಿದ್ದರ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸ್ಪೀಕರ್ ಗೆ ಅಧಿಕಾರವಿದೆ. ಸ್ಪೀಕರೇ ಸುಪ್ರೀಂ. ಹೀಗಾಗಿ ಅವರು ಆದೇಶ ಮಾಡಿದ್ದಾರೆ. ಆದರೆ ಇದು ಸಮಂಜಸ ಹೌದೋ ಎಂದು ಪ್ರಶ್ನೆ ಮಾಡಲು ಪ್ರಾಯಶಃ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟಿಗೆ ಹೋಗುವ ಸಾಧ್ಯತೆಗಳಿವೆ ಎಂದರು.
ಸುಪ್ರೀಂ ಆದೇಶವನ್ನು ಪ್ರಶ್ನೆ ಮಾಡಬೇಕಾದಂತಹ ಸ್ಥಳ ಬೇರೆ ಇದೆ. ಹೀಗಾಗಿ ಅದನ್ನು ಪ್ರಶ್ನೆ ಮಾಡಲು ಇಷ್ಟ ಪಡುವುದಿಲ್ಲ. ಸ್ಪೀಕರ್ ತಮ್ಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆದರೂ ಸ್ಪೀಕರ್ ಅವರು ಅತೃಪ್ತ ಶಾಸಕರನ್ನು ವಿಚಾರ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಅದು ಮಾಡಿಲ್ಲ ಅನ್ನೋ ಲೋಪ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮೈತ್ರಿ ಸರ್ಕಾರ ಒತ್ತಡವಿತ್ತು ಎಂದು ಅನಿಸುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ಕಾರಣಕ್ಕೂ ಸ್ಪೀಕರ್ ವಿರುದ್ಧ ಆರೋಪ ಮಾಡಲ್ಲ. ಆದರೆ ಸ್ಪೀಕರ್ ಆದೇಶದಿಂದ ಸಣ್ಣಮಟ್ಟಿನಲ್ಲಿ ಸಂಶಯದ ವಾತಾವರಣ ಸೃಷ್ಟಿ ಮಾಡಿದೆ ಎಂದರು.
ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು 14 ಮಂದಿ ಶಾಸಕರನ್ನು ಅನರ್ಹಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಹಿರಿಯ ನಾಯಕ ಸುರೇಶ್ ಕುಮಾರ್ ತಮ್ಮದೇ ಶೈಲಿಯಲ್ಲಿ ಟ್ರೋಲ್ ಮಾಡಿದ್ದಾರೆ.
“ಭಾನುವಾರ” ಕೆಲವು ಸಲ (inconvenient ಆದರೆ) ರಜಾ ದಿನವಾಗುತ್ತದೆ ಮತ್ತು ಕೆಲವು ಸಲ (Convenient) Working Day ಆಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
"ಭಾನುವಾರ" ಕೆಲವು ಸಲ (inconvenient ಆದರೆ) ರಜಾ ದಿನವಾಗುತ್ತದೆ ಮತ್ತು ಕೆಲವು ಸಲ (Convenient ಆದರೆ) Working Day ಆಗುತ್ತದೆ!
ಈ ಹಿಂದೆ ಅತೃಪ್ತ ಶಾಸಕರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ಶನಿವಾರ ಸ್ಪೀಕರ್ ಕಚೇರಿ ತೆರೆದಿರುವುದಿಲ್ಲ. ಭಾನುವಾರ ಸರ್ಕಾರಿ ರಜಾ ದಿನ ಹೀಗಾಗಿ ಸೋಮವಾರ ಪರಿಶೀಲಿಸುವುದಾಗಿ ತಿಳಿಸಿದ್ದರು.
ಇಂದು ತಮ್ಮ ನಿರ್ಧಾರ ಪ್ರಕಟಿಸುವಾಗ ರಮೇಶ್ ಕುಮಾರ್ ಸೋಮವಾರ ವಿಧಾನಸಭಾ ಕಲಾಪ ಆರಂಭವಾಗಲಿದೆ. ಹೀಗಾಗಿ ಇಂದು ನಾನು ತುರ್ತು ಸುದ್ದಿಗೋಷ್ಠಿ ನಡೆಸಿ ಅನರ್ಹತೆಗೊಳಿಸುವ ನಿರ್ಧಾರ ಪ್ರಕಟಿಸುತ್ತಿದ್ದೇನೆ ಎಂದು ತಿಳಿಸಿದರು.
ಬೆಂಗಳೂರು: ಈಗಾಗಲೇ ಅನರ್ಹಗೊಂಡ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್. ಶಂಕರ್ ಬೈ ಎಲೆಕ್ಷನ್ ಗೆ ನಿಲ್ಲುವಂತಿಲ್ಲ ಎಂದು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಖಡಕ್ಕಾಗಿ ತಿಳಿಸಿದ್ದಾರೆ.
ತಮಿಳು ಸುದ್ದಿವಾಹಿನಿಯೊಂದರ ಜೊತೆಗೆ ಮಾತನಾಡಿದ ಸ್ಪೀಕರ್, ಈ ಮೂವರು ಶಾಸಕರು ವಿಧಾನಸಭೆ ಅವಧಿ ಮುಗಿಯೋವರೆಗೆ ಅಂದರೆ 2023ರ ಮೇ ತಿಂಗಳವರೆಗೆ ಉಪಚುನಾವಣೆಗೆ ನಿಲ್ಲುವಂತಿಲ್ಲ. ಹೀಗಾಗಿ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂಬ ಚುನಾವಣಾ ಆಯೋಗದ ಅಭಿಪ್ರಾಯ ತಪ್ಪು ಎಂದು ಹೇಳಿದ್ದಾರೆ.
ತಪ್ಪು ಮಾಡಿ ರಾಜೀನಾಮೆ ಕೊಟ್ಟು ಬಚಾವ್ ಆಗಲು ಸಾಧ್ಯವಿಲ್ಲ. ನೀವು ತಪ್ಪು ಮಾಡಿದ್ದೀರಿ. ನಾನು ರಾಜೀನಾಮೆ ಅಂಗೀಕರಿಸಲ್ಲ. ಪ್ರತಿಯೊಂದು ರಾಜೀನಾಮೆಯೂ ಬೇರೆ ಬೇರೆ ಪ್ರಕರಣವಾಗಿದೆ. ಹೀಗಾಗಿ ಪ್ರತಿಯೊಬ್ಬ ಶಾಸಕರ ರಾಜೀನಾಮೆ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದೇನೆ. ಇನ್ನು ನಾಲ್ಕೈದು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಆದರೆ ಇದೀಗ ಅನರ್ಹಗೊಂಡ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್ ಶಂಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಜಯ ಸಿಗುತ್ತದೆ ಎಂದು ಅತೃಪ್ತ ಶಾಸಕರೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ವಿಶ್ವಾಸ ವ್ಯಕ್ತಪಡಿಸಿದ್ದರು. ಜೊತೆಗೆ ನಮ್ಮ ರಾಜೀನಾಮೆ ಅಂಗೀಕರಿಸದೆ, ನಮ್ಮನ್ನೂ ಅನರ್ಹಗೊಳಿಸಿದರೆ, ನಾವೂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಎಚ್ಚರಿಸಿದ್ದರು.
ತಮಿಳುನಾಡಿನಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅಲ್ಲಿ ಶಾಸಕರು ರಾಜೀನಾಮೆ ಕೊಟ್ಟ 6 ತಿಂಗಳೊಳಗೆ ಅಂದರೆ ಆ ಸಮಯದಲ್ಲಿ ವಿಧಾನಸಭಾ ಅವಧಿ ಕೂಡ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅನರ್ಹಗೊಂಡವರು ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಇಲ್ಲಿ ಈ ವಿಧಾನಸಭೆ ಅವಧಿ ಮುಗಿಯಲು ಇನ್ನೂ 3 ವರ್ಷ 10 ತಿಂಗಳು ಇರುವುದರಿಂದ ಚುನಾವಣೆಗೆ ನಿಲ್ಲುವಂತಿಲ್ಲ ಎಂದು ಸ್ಪೀಕರ್ ಹೇಳುತ್ತಿದ್ದಾರೆ.
ಬೆಂಗಳೂರು: ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಬಿಜೆಪಿ, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಶಾಕ್ ಕೊಡಲು ಮುಂದಾಗಿದೆ.
ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ತಕ್ಷಣವೇ ಸ್ಪೀಕರ್ ಅವರಿಗೆ ಅವಿಶ್ವಾಸ ನೋಟಿಸ್ ನೀಡಲು ಮುಂದಾಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಅವಿಶ್ವಾಸ ನೋಟಿಸ್ ಕೊಟ್ಟರೆ ರಮೇಶ್ ಕುಮಾರ್ ಅವರಿಗೆ ಸ್ಪೀಕರ್ ಆಗಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ. ಅವಿಶ್ವಾಸ ಮಂಡನೆಯ ನಿರ್ಣಯ ಪಾಸ್ ಆಗುವವರೆಗೆ, ಈಗ ಬಾಕಿ ಇರುವ ಶಾಸಕರ ಅನರ್ಹತೆ ಅಥವಾ ರಾಜೀನಾಮೆ ಅಂಗೀಕಾರ ಹೀಗೆ ಯಾವುದೇ ತೀರ್ಮಾನವನ್ನು ಕೈಗೊಳ್ಳುವಂತಿಲ್ಲ. ಈ ಲೆಕ್ಕಾಚಾರವನ್ನು ಬಿಜೆಪಿ ಇಟ್ಟುಕೊಂಡಿದೆ ಎನ್ನಲಾಗಿದೆ.
ನಿನ್ನೆ ಮೂವರು ಶಾಸಕರನ್ನು ಅನರ್ಹಗೊಳಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸ್ಪೀಕರ್, ಏಕಾಏಕಿಯಾಗಿ ನನ್ನನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಸರ್ಕಾರ ಬದಲಾದರೂ ನಾನು ಸ್ಪೀಕರ್ ಆಗಿಯೇ ಮುಂದುವರಿಯುತ್ತೇನೆ. ಆದರೆ ಅಲ್ಲಿಯವರೆಗೆ ನಾನು ಕುಳಿತುಕೊಳ್ಳುವುದಿಲ್ಲ. ಒಂದು ವೇಳೆ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕಿದ್ದರೆ ಅದಕ್ಕೆ ಅವರು ನೋಟಿಸ್ ಕೊಡಲೇಬೇಕಾಗುತ್ತದೆ. 14 ದಿನ ಕಾಲಾವಕಾಶ ಇರುತ್ತದೆ ಎಂದಿದ್ದರು.
ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಮೊದಲು ಸ್ಪೀಕರ್ ಅವರ ಕಾರ್ಯದರ್ಶಿಗೆ ನೋಟಿಸ್ ಕೊಡಲಾಗುತ್ತದೆ. ಈ ನೋಟಿಸಿಗೆ 14 ದಿನಗಳ ಕಾಲ ಕಾಲಾವಕಾಶ ಇರುತ್ತದೆ. ಈ 14 ದಿನದಲ್ಲಿ ಒಂದು ದಿನ ಮತಕ್ಕೆ ಹಾಕುವ ಪ್ರಸ್ತಾಪ ಮಾಡಬೇಕಾಗುತ್ತದೆ. ಒಂದು ವೇಳೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಿದರೆ ಅವರು ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ.
ಉಳಿದಿರುವ ಶಾಸಕರ ಅನರ್ಹತೆ ಹಾಗೂ ರಾಜೀನಾಮೆ ಅಂಗೀಕಾರ ವಿಚಾರ ಇನ್ನೂ ಬಾಕಿಯಿದ್ದು ಸ್ಪೀಕರ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.
ಬೆಂಗಳೂರು: ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸ್ಪೀಕರ್ ರಮೇಶ್ ಕುಮಾರ್ 17 ಮಂದಿ ಅತೃಪ್ತ ಶಾಸಕರ ಪೈಕಿ ಮೂವರನ್ನು ಈಗಾಗಲೇ ಅನರ್ಹಗೊಳಿಸಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮಟಹಳ್ಳಿ ಹಾಗೂ ರಾಣೆ ಬೆನ್ನೂರಿನ ಶಂಕರ್ ಅವರನ್ನು ಅನರ್ಹ ಮಾಡಿ ಆದೇಶ ನೀಡಿದ್ದಾರೆ. ಹಾಗಾದರೆ ಈ ಮೂವರು ಅತೃಪ್ತ ಶಾಸಕರ ರಾಜಕೀಯ ಭವಿಷ್ಯ ಇಲ್ಲಿಗೆ ಮುಗಿದೋಯ್ತಾ ಅಥವಾ ಇವರು ಮುಂದೆ ಏನ್ ಮಾಡಬಹುದು ಎಂಬ ಕುತೂಹಲ ಇದೀಗ ಮೂಡಿದೆ.
ಏನ್ ಮಾಡಬಹುದು..?
ಸ್ಪೀಕರ್ ಆದೇಶ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಬಹುದು. ಮೊದಲು ಸುಪ್ರೀಂಕೋರ್ಟಿಗೆ ಅರ್ಜಿ ಹಾಕಿ ಸ್ಪೀಕರ್ ಆದೇಶಕ್ಕೆ ತಾತ್ಕಾಲಿಕ ತಡೆ ಕೋರಬಹುದು. ಸ್ಪೀಕರ್ ಈ ಹಿಂದೆ ನೀಡಿದ್ದ ದೂರಿನ ಮೇಲೆ ಅನರ್ಹ ಮಾಡಿದ್ದು ಸರಿಯಲ್ಲ ಎಂದು ವಾದಿಸಬಹುದು. ಈ ಹಿಂದೆ ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರ ಪ್ರಸ್ತಾಪಿಸಿ, ತಮ್ಮನ್ನ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಬಹುದು. ಫೆಬ್ರವರಿಯಲ್ಲಿ ನೀಡಿದ್ದ ದೂರಿಗೆ ಸುದೀರ್ಘ ಸಮಯ ತೆಗೆದುಕೊಂಡ ಬಗ್ಗೆ ಪ್ರಶ್ನೆ ಮಾಡಬಹುದು. ಕಾಂಗ್ರೆಸ್ ವಿಪ್‍ಗೆ ನಾವು ಉತ್ತರ ನೀಡಿದ್ದೇವೆ ಎಂದು ದಾಖಲಾತಿ ನೀಡಬಹುದು.
ಇತ್ತ ಶಂಕರ್ ಕಾಂಗ್ರೆಸ್ ಪಕ್ಷಕ್ಕೆ ನನ್ನ ಮೇಲೆ ದೂರು ನೀಡುವ ಅಧಿಕಾರ ಇಲ್ಲವೆಂದು ವಾದ ಮಾಡಬಹುದು. ನನಗೆ ವಿಪ್ ನೀಡುವ ಅಧಿಕಾರ ಸಹ ಕಾಂಗ್ರೆಸ್‍ಗೆ ಇಲ್ಲವೆಂದು ಪ್ರಶ್ನಿಸಬಹುದು. ಒಂದು ವೇಳೆ ಸ್ಪೀಕರ್ ಆದೇಶಕ್ಕೆ ತಡೆ ನೀಡಿದರೆ, ಅನರ್ಹ ಶಾಸಕರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಬಹುದು. ಅನರ್ಹಗೊಂಡ ಮೂವರು ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಇವತ್ತೇ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಈ ಹಿಂದೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಸ್ಪೀಕರ್ ಅನರ್ಹತೆ ಮಾಡಿದ್ದು ಸರಿಯಲ್ಲವೆಂದು ವಾದ ಮಾಡಲಿದ್ದಾರೆ. ಅನರ್ಹ ಶಾಸಕರ ಪರ ಮುಕುಲ್ ರೋಹ್ಟಗಿ ವಾದ ಮಂಡಿಸುವ ಸಾಧ್ಯತೆ ಇದೆ.
ಬೆಂಗಳೂರು: ರಾಣೇಬೆನ್ನೂರು ಶಾಸಕ ಆರ್.ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮೂವರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಹೊಳಿಸಿ ಅದೇಶಿಸಿದರು. ಇನ್ನುಳಿದ ರಾಜೀನಾಮೆ ನೀಡಿರುವ ಶಾಸಕರ ಪ್ರಕರಣಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸವಿವರವಾಗಿ ಮಾಹಿತಿ ನೀಡುತ್ತೇನೆ. ಅನರ್ಹಗೊಂಡಿರುವ ಶಾಸಕರು 15 ವಿಧಾನಸಭೆ ಅವಧಿ ಅಂದ್ರೆ 3 ವರ್ಷ 10 ತಿಂಗಳು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ರು.
ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಜುಲೈ 6ರಂದು ನನ್ನ ಕಚೇರಿಗೆ ಬರುತ್ತೇನೆ ಮೊದಲೇ ಹೇಳಿರಲಿಲ್ಲ. ನಾನು ಕಚೇರಿಯಿಂದ ಹೋದ ಮೇಲೆ ಕೆಲ ಶಾಸಕರೊಂದಿಗೆ ಬಂದು ನಮ್ಮ ಕಾರ್ಯದರ್ಶಿಗೆ ರಾಜೀನಾಮೆ ನೀಡಿ ತೆರಳಿದ್ದರು. ಆದ್ರೆ ಕೆಲ ರಾಜೀನಾಮೆಗಳ ಕ್ರಮಬದ್ಧವಾಗಿರಲಿಲ್ಲ. ಹಾಗಾಗಿ ಮತ್ತೊಮ್ಮೆ ನಿಯಮ 202ರನ್ವಯ ಇಚ್ಛೆಯಿದ್ದಲ್ಲಿ ರಾಜೀನಾಮೆ ಸಲ್ಲಿಸಬಹುದು ಎಂದು ನೋಟಿಸ್ ಕಳುಹಿಸಲಾಗಿತ್ತು. ನಂತ್ರ ಸಾಮೂಹಿಕವಾಗಿ ಎಲ್ಲರು ಬಂದು ರಾಜೀನಾಮೆ ನೀಡಿದರು. ರಾಜೀನಾಮೆ ನೀಡಿದ ಬಳಿಕ ವಿಚಾರಣೆಗೆ ಕರೆದ್ರೂ ಯಾವ ಶಾಸಕರು ಬಂದಿಲ್ಲ. ಅದೇ ರೀತಿ ಮಹೇಶ್ ಕುಮಟಳ್ಳಿ ಅವರನ್ನು ರಾಜೀನಾಮೆಗೂ ಮೊದಲೇ ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ಸಿಎಲ್‍ಪಿ ನಾಯಕರು ದೂರು ನೀಡಿದ್ದರು.
ರಾಣೇಬೆನ್ನೂರು ಶಾಸಕ ಆರ್.ಶಂಕರ್ ಕೆಪಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಜೂನ್ 14, 2019ರಂದು ಆರ್. ಶಂಕರ್ ನನಗೆ ಪತ್ರ ಬರೆದು ಶೆಡ್ಯೂಲ್ 10ರ ಪ್ರಕಾರ ಕೆಪಿಜೆಪಿಯನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದ್ದೇನೆಂದು ಹೇಳಿದ್ದರು. ಈ ಸಂಬಂಧ ಕಾಂಗ್ರೆಸ್ ಸಿಎಲ್‍ಪಿ ನಾಯಕ ಸಿದ್ದರಾಮಯ್ಯನವರು ಕೆಪಿಜೆಪಿ ವಿಲೀನದ ಬಗ್ಗೆ ಪತ್ರ ಬರೆದಿದ್ದರು. ನಂತರ ಮೈತ್ರಿಗೆ ನೀಡಿದ ಬೆಂಬಲ ವಾಪಾಸ್ ಪಡೆದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಂಬಂಧ ವಿಚಾರಣೆಗೆ ಕರೆದಾಗ ನಾಲ್ಕು ವಾರಗಳ ಸಮಯ ಬೇಕೆಂದು ಮೇಲ್ ಮಾಡಿದ್ದಾರೆ.
ಪಕ್ಷೇತರ ಶಾಸಕ ಆರ್.ಶಂಕರ್ ಮೈತ್ರಿ ಸಂಪುಟ ಸೇರ್ಪಡೆಯ ಮುನ್ನವೇ ತಮ್ಮ ಪಕ್ಷ ಕೆಪಿಜೆಪಿಯನ್ನು ಕಾಂಗ್ರೆಸ್‍ನೊಂದಿಗೆ ವಿಲೀನಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವಾಸಮತ ಕಲಾಪಕ್ಕೆ ಗೈರಾಗಿದ್ದರಿಂದ ಆರ್.ಶಂಕರ್ ಅವರನ್ನು ಸಹ ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ಸ್ಪೀಕರ್ ಬಳಿ ಮನವಿ ಮಾಡಿಕೊಂಡಿತ್ತು. ಉಳಿದಂತೆ ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಶ್ರೀಮಂತ್ ಪಾಟೀಲ್, ಆನಂದ್ ಸಿಂಗ್, ಕೆ.ಸುಧಾಕರ್, ಎಂಟಿಬಿ ನಾಗರಾಜ್, ನಾರಾಯಣಗೌಡ, ಹೆಚ್.ವಿಶ್ವನಾಥ್ ಮತ್ತು ಗೋಪಾಲಯ್ಯರ ಮೇಲೆ ಇನ್ನು ಅನರ್ಹತೆ ತೂಗುಗತ್ತಿ ನೇತಾಡುತ್ತಿದೆ.
ಬೆಂಗಳೂರು: ಇಂದು ವಿಚಾರಣೆಗೆ ಹಾಜರಾಗಿ ಎಂದು ಸೂಚಿಸಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಅತೃಪ್ತ ಶಾಸಕರು ಪತ್ರ ಬರೆದು ಹಾಜರಾಗಲು 4 ವಾರಗಳ ಸಮಯ ನೀಡಿ ಎಂದು ಕೇಳಿಕೊಂಡಿದ್ದಾರೆ.
ಪತ್ರದಲ್ಲಿ ನಾವು ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ರಾಜೀನಾಮೆಯನ್ನು ಶೀಘ್ರವೇ ಅಂಗೀಕರಿಸಬೇಕೆಂದು ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಇದರ ನಡುವೆ ನಮ್ಮ ಪಕ್ಷದ ಕಡೆಯಿಂದ ಅನರ್ಹತೆ ಅರ್ಜಿ ನಿಮ್ಮ ಬಳಿ ಬಂದಿದೆ ಅಂತ ಗೊತ್ತಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಅನರ್ಹತೆ ವಿಚಾರ ಸಂಬಂಧ ಪಕ್ಷದ ಕಡೆಯಿಂದ ಯಾವುದೇ ನೋಟಿಸ್ ಬಂದಿಲ್ಲ. ಆದರೆ ಇಂದು ನೀವು ಹಾಜರಾಗಿ ಎಂದು ನೋಟಿಸ್ ನೀಡಿದ್ದೀರಿ. ಕೆಲ ಅನಿವಾರ್ಯ ಕಾರಣಗಳಿಂದ ನಾವು ಹೊರಗಡೆ ಇದ್ದು ನಿಮ್ಮ ಪ್ರಶ್ನೆಗೆ ಉತ್ತರಿಸಲು ನಮಗೆ 4 ವಾರಗಳ ಸಮಯ ಬೇಕು ಎಂದು ಸ್ಪೀಕರ್ ಅವರಿಗೆ ಅತೃಪ್ತ ಶಾಸಕರು ಪತ್ರ ಬರೆದಿದ್ದಾರೆ.
ಸೋಮವಾರ ಶಾಸಕಾಂಗ ಪಕ್ಷದ ಅಧ್ಯಕ್ಷರಿಗೆ ವಿಪ್ ನೀಡುವ ಜವಾಬ್ದಾರಿ ಇದೆ ಎಂದು ಸ್ಪೀಕರ್ ರಮೇಶ್ ಕುಮಾರ್ ರೂಲಿಂಗ್ ನೀಡಿದ್ದಾರೆ. ವಿಪ್ ನೀಡಬಹುದೋ ಇಲ್ಲವೋ ಎನ್ನುವುದರ ಬಗ್ಗೆ ಸಿದ್ದರಾಮಯ್ಯ ಕ್ರಿಯಾ ಲೋಪ ಎತ್ತಿದ್ದಾರೆ. ಶಾಸಕಾಂಗ ಪಕ್ಷದ ನಾಯಕರು ಸದಸ್ಯರಿಗೆ ವಿಪ್ ನೀಡಬಹುದು. ಅದು ಸಂವಿಧಾನದತ್ತವಾದ ಹಕ್ಕು. ಈ ವಿಚಾರದ ಬಗ್ಗೆ ನಾನು ಕಾನೂನು ಪಂಡಿತರ ಜೊತೆ ಚರ್ಚೆ ನಡೆಸಿದ್ದೇನೆ. ಇದನ್ನು ನಾನು ಅಧಿಕಾರ ಎಂದು ಕರೆಯುವುದಿಲ್ಲ. ಇದನ್ನು ಜವಾಬ್ದಾರಿ ಎಂದು ಕರೆಯುತ್ತೇನೆ. ಹೀಗಾಗಿ ಶಾಸಕಾಂಗ ನಾಯಕರು ಸದಸ್ಯರಿಗೆ ವಿಪ್ ನೀಡಬಹುದು ಎಂದು ಸ್ಪೀಕರ್ ರೂಲಿಂಗ್ ನೀಡಿದರು.
ವಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಸ್ಪಷ್ಟನೆ ನೀಡುವಂತೆ ಕೋರಿದ್ದಾರೆ. ಜುಲೈ 17ರಂದು ಅತೃಪ್ತರ ಬಗ್ಗೆ ನೀಡಿರುವ ಮಧ್ಯಂತರ ಆದೇಶದಿಂದ ಗೊಂದಲ ಸೃಷ್ಟಿಯಾಗಿದೆ. ಕಲಾಪಕ್ಕೆ ಹಾಜರಾಗಬೇಕೇ? ಬೇಡವೇ ಎನ್ನುವುದನ್ನು ಶಾಸಕರ ವಿವೇಚನೆಗೆ ಬಿಡಲಾಗಿದೆ. ಈ ಆದೇಶ ರಾಜಕೀಯ ಪಕ್ಷಗಳ ವಿಪ್ ಅಧಿಕಾರವನ್ನು ಕಿತ್ತುಕೊಳ್ಳಲಿದೆ. ಶೆಡ್ಯೂಲ್ 102(1)ಬಿ ಅನ್ವಯ ರಾಜಕೀಯ ಪಕ್ಷಗಳಿಗೆ ವಿಪ್ ಅಧಿಕಾರವಿದೆ. ವಿಶ್ವಾಸಮತ ಸಾಬೀತು ವೇಳೆ ಶಾಸಕರಿಗೆ ವಿಪ್ ನೀಡುವುದು ಅನಿವಾರ್ಯವಾಗಿದೆ. ನೀವು ನೀಡಿರುವ ಆದೇಶ ಈ ವ್ಯಾಪ್ತಿಗೆ ಬರುತ್ತದೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಬೆಂಗಳೂರು: ವಿಶ್ವಾಸ ಮತಯಾಚನೆಯ ಚರ್ಚೆಯ ವೇಳೆ ಸದನದಲ್ಲಿ ಗದ್ದಲ ಎದ್ದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಕಲಾಪ ಮುಂದೂಡಿದ್ದು, ಇಂದು ರಾತ್ರಿ 9 ಗಂಟೆವರೆಗೆ ಡೆಡ್ ಲೈನ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
9 ಗಂಟೆಯಷ್ಟರಲ್ಲಿ ವಿಶ್ವಾಸ ಮತ ಸಾಬೀತು ಪಡಿಸಿ ಇಲ್ಲವೆಂದಲ್ಲಿ ನಾನೇ ಸ್ಪೀಕರ್ ಹುದ್ದೆಗೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸಿಎಂ ಗೆ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಧಾನಸಭೆಯಲ್ಲಿ ನಡೆಯುತ್ತಿದ್ದ ದೋಸ್ತಿಗಳ ಚರ್ಚೆ ನಾಲ್ಕನೇ ದಿನವಾದ ಇಂದೂ ಮುಂದುವರಿದಿತ್ತು. ಇಂದು ಕೂಡ ದೋಸ್ತಿಗಳೇ ಸದನದಲ್ಲಿ ಚರ್ಚೆ ಮಾಡಿದ್ದಾರೆ. ಆದರೆ ಬಿಜೆಪಿ ಇಂದೂ ಮೌನಕ್ಕೆ ಶರಣಾಗಿತ್ತು.
ಈ ಹಿಂದೆ ರಾಜ್ಯಪಾಲರು ಗಡುವು ನೀಡಿದ್ದರೂ ದೋಸ್ತಿಗಳು ಕ್ಯಾರೇ ಎಂದಿಲ್ಲ. ಅಲ್ಲದೆ ವಿಧಾನಸಭೆಯಲ್ಲಿ ಚರ್ಚೆ ಮಾಡುವ ಮೂಲಕ ದಿನ ದೂಡಿದ್ದರು. ಆದರೆ ಈ ಚರ್ಚೆ ಇಂದು ಕೂಡ ಮುಂದುವರಿದಿದ್ದರಿಂದ ಸಿಟ್ಟಾದ ಸ್ಪೀಕರ್ ವಿಧಾನಸಭೆಯಿಂದ ಹೊರ ನಡೆದು 9 ಗಂಟೆಯ ವರೆಗೆ ಗಡುವು ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ನನ್ನ ಮೇಲೆ ಒತ್ತಡ ತರಬೇಡಿ. ನನಗೆ ಮುಜುಗರ ಆಗ್ತಿದೆ. ಬೇಗ ಮುಗಿಸಿಬಿಡಿ ಎಂದು ಸ್ಪೀಕರ್ ರಮೇಶ್ ಅವರು ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದಾರೆ.
ಭೋಜನ ವಿರಾಮದ ವೇಳೆ ಕಾಂಗ್ರೆಸ್ ನಾಯಕರು ಸ್ಪೀಕರ್ ಕಚೇರಿಗೆ ತೆರಳಿ ಮಾತನಾಡಿದ್ದಾರೆ. ಈ ವೇಳೆ ಹಂತಹಂತವಾಗಿ ಪ್ರಕ್ರಿಯೆ ಮುಗಿಸಿ ಎಂಬ ನಾಯಕರ ಮನವಿಗೆ ಸ್ಪೀಕರ್ ಬೇಡ್ರಪ್ಪಾ.. ಕೂಡಲೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಿಬಿಡಿ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಚರ್ಚೆ ನಡೆಯುತ್ತಿದೆ. ಸ್ಪೀಕರ್ ಹೇಗೆ ಹೇಳುತ್ತಾರೋ ಹಾಗೆ ನಡೆಯುತ್ತಿದೆ. ನಾನು, ಸಿಎಂ ಇಬ್ಬರೂ ಸೋಮವಾರ ವಿಶ್ವಾಸಮತ ನಡೆಸೋದಾಗಿ ಹೇಳಿದ್ದೆವು. ಈ ನಡುವೆ ಸುಪ್ರೀಂಕೋರ್ಟ್ ನಲ್ಲಿ ಏನೆಲ್ಲ ಬೆಳವಣಿಗೆಯಾಗಿದೆ ನೋಡಬೇಕು. ಕೆಪಿಜೆಪಿಯ ಶಂಕರ್ ಮತ್ತು ನಾಗೇಶ್ ಸುಪ್ರೀಕೋರ್ಟ್ ಗೆ ಹೋಗಿದ್ದಾರೆ. ನಾಳೆ ವಿಚಾರಣೆಗೆ ಬರಬಹುದು. ವಿಪ್ ವಿಚಾರವಾಗಿ ಗೊಂದಲವಿದ್ದು ಅದೂ ಕೂಡ ನಾಳೆ ವಿಚಾರಣೆಗೆ ಬರಲಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಇವತ್ತು ವಿಶ್ವಾಸಮತ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಮ್ಮ ಶಾಸಕರು ಬಂದರೆ ನಮಗೆ ವಿಶ್ವಾಸ ಮತದಲ್ಲಿ ವೋಟ್ ಹಾಕುತ್ತಾರೆ. ಯಾಕಂದರೆ ಅವರೆಲ್ಲ ಗನ್ ಪಾಯಿಂಟ್ ನಲ್ಲಿದ್ದಾರೆ, ಐನೂರು ಜನ ಪೊಲೀಸರು ಅವರನ್ನ ಕಾಯುತ್ತಿದ್ದಾರೆ. ಬೆದರಿಕೆ ಇಲ್ಲ ಅನ್ನೋದಾದರೆ ಬಾಂಬೆಗೆ ಯಾಕೆ ಹೋಗಬೇಕಿತ್ತು. ಇಲ್ಲೇ ಇದ್ದಿದ್ದರೆ ಅವರಿಗೇನು ಚುಚ್ಚುತ್ತಿತ್ತಾ ಎಂದು ಸಿದ್ದರಾಮಯ್ಯ ಅವರು ಅತೃಪ್ತ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಶಾಸಕಾಂಗ ಪಕ್ಷದ ಅಧ್ಯಕ್ಷರಿಗೆ ವಿಪ್ ನೀಡುವ ಜವಾಬ್ದಾರಿ ಇದೆ ಎಂದು ಸ್ಪೀಕರ್ ರಮೇಶ್ ಕುಮಾರ್ ರೂಲಿಂಗ್ ನೀಡಿದ್ದಾರೆ.
ನಿಗದಿ ಪ್ರಕಾರ 11 ಗಂಟೆಗೆ ಕಲಾಪ ಆರಂಭಗೊಳ್ಳಬೇಕಿತ್ತು. ಈ ಮಧ್ಯೆ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ತನ್ನ ನಿರ್ಧಾರವನ್ನು ತಿಳಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಕಚೇರಿಯಲ್ಲಿ ಸಿಎಂ ಮತ್ತು ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸಿದರು. ಹೀಗಾಗಿ ಒಂದು ಗಂಟೆ ತಡವಾಗಿ ಕಲಾಪ ಆರಂಭಗೊಂಡಿತು.
ಆರಂಭದಲ್ಲೇ ಸದನಸ ಸದಸ್ಯರ ಜೊತೆ ಕ್ಷಮೆ ಕೇಳಿದ ಸ್ಪೀಕರ್ ಮೊನ್ನೆ ಸಿದ್ದರಾಮಯ್ಯ ಎತ್ತಿದ್ದ ಕ್ರಿಯಾ ಲೋಪದ ಬಗ್ಗೆ ರೂಲಿಂಗ್ ನೀಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ – ದೋಸ್ತಿಗಳಿಗೆ ಬಿಗ್ ರಿಲೀಫ್ ಕೊಟ್ಟ ಸುಪ್ರೀಂ
ವಿಪ್ ನೀಡಬಹುದೋ ಇಲ್ಲವೋ ಎನ್ನುವುದರ ಬಗ್ಗೆ ಸಿದ್ದರಾಮಯ್ಯ ಕ್ರಿಯಾ ಲೋಪ ಎತ್ತಿದ್ದಾರೆ. ಶಾಸಕಾಂಗ ಪಕ್ಷದ ನಾಯಕರು ಸದಸ್ಯರಿಗೆ ವಿಪ್ ನೀಡಬಹುದು. ಅದು ಸಂವಿಧಾನದತ್ತವಾದ ಹಕ್ಕು. ಈ ವಿಚಾರದ ಬಗ್ಗೆ ನಾನು ಕಾನೂನು ಪಂಡಿತರ ಜೊತೆ ಚರ್ಚೆ ನಡೆಸಿದ್ದೇನೆ. ಇದನ್ನು ನಾನು ಅಧಿಕಾರ ಎಂದು ಕರೆಯುವುದಿಲ್ಲ. ಇದನ್ನು ಜವಾಬ್ದಾರಿ ಎಂದು ಕರೆಯುತ್ತೇನೆ. ಹೀಗಾಗಿ ಶಾಸಕಾಂಗ ನಾಯಕರು ಸದಸ್ಯರಿಗೆ ವಿಪ್ ನೀಡಬಹುದು. ಅದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸ್ಪೀಕರ್ ರೂಲಿಂಗ್ ನೀಡಿದರು.
ಈ ವೇಳೆ ಜಗದೀಶ್ ಶೆಟ್ಟರ್ ಮತ್ತು ಮಾಧುಸ್ವಾಮಿ ಅವರು ಇಂದೇ ವಿಶ್ವಾಸ ಮತಯಾಚನೆ ನಡೆಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪೀಕರ್ ಈಗಾಗಲೇ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ಹೀಗಾಗಿ ಯಾವುದೇ ಕಾಲಹರಣ ನಡೆಸದೇ ಚರ್ಚೆ ಮಾತ್ರ ನಡೆಸಿ ಈ ಪ್ರಕ್ರಿಯೆ ಮುಗಿಸಿಕೊಡಲಾಗುವುದು ಎಂದು ತಿಳಿಸಿದರು.
ವಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಸ್ಪಷ್ಟನೆ ನೀಡುವಂತೆ ಕೋರಿದ್ದಾರೆ. ಜುಲೈ 17ರಂದು ಅತೃಪ್ತರ ಬಗ್ಗೆ ನೀಡಿರುವ ಮಧ್ಯಂತರ ಆದೇಶದಿಂದ ಗೊಂದಲ ಸೃಷ್ಟಿಯಾಗಿದೆ. ಕಲಾಪಕ್ಕೆ ಹಾಜರಾಗಬೇಕೇ? ಬೇಡವೇ ಎನ್ನುವುದನ್ನು ಶಾಸಕರ ವಿವೇಚನೆಗೆ ಬಿಡಲಾಗಿದೆ. ಈ ಆದೇಶ ರಾಜಕೀಯ ಪಕ್ಷಗಳ ವಿಪ್ ಅಧಿಕಾರವನ್ನು ಕಿತ್ತುಕೊಳ್ಳಲಿದೆ. ಶೆಡ್ಯೂಲ್ 102(1)ಬಿ ಅನ್ವಯ ರಾಜಕೀಯ ಪಕ್ಷಗಳಿಗೆ ವಿಪ್ ಅಧಿಕಾರವಿದೆ. ವಿಶ್ವಾಸಮತ ಸಾಬೀತು ವೇಳೆ ಶಾಸಕರಿಗೆ ವಿಪ್ ನೀಡುವುದು ಅನಿವಾರ್ಯವಾಗಿದೆ. ನೀವು ನೀಡಿರುವ ಆದೇಶ ಈ ವ್ಯಾಪ್ತಿಗೆ ಬರುತ್ತದೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಕೇಳಿಕೊಂಡಿದ್ದಾರೆ.