Tag: Ramesh Kumar

  • ಮಾಜಿ  ಸ್ಪೀಕರ್​ಗೆ  ಮಾನ ಮರ್ಯಾದೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ: ಸುಧಾಕರ್

    ಮಾಜಿ  ಸ್ಪೀಕರ್​ಗೆ  ಮಾನ ಮರ್ಯಾದೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ: ಸುಧಾಕರ್

    ಚಿಕ್ಕಬಳ್ಳಾಪುರ: ನಿಮಗೆ ಮಾನ ಮರ್ಯಾದೆ ಇದ್ದರೆ ಮೊದಲು ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ, ನಿಮ್ಮನ್ನು ಕಾಂಗ್ರೆಸ್ ಪಕ್ಷದಿಂದ ವಜಾ ಮಾಡಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅನರ್ಹ ಶಾಸಕ ಡಾ.ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ನಾನು ದೋಸ್ತಿ ಸರ್ಕಾರದ ಆಡಳಿತದ ವಿರುದ್ಧ ಹಾಗೂ ನನ್ನ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ ಎಂದು ಮನನೊಂದು ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದರು.

    ಈ ಕ್ಷಣದವರೆಗೂ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ನಾನು ಮಾತನಾಡಿಲ್ಲ. ಆದರೆ ಕಾಂಗ್ರೆಸ್ ಪಕ್ಷದವರೇ ನನ್ನನ್ನು ವಜಾ ಮಾಡಿ ಅನರ್ಹ ಮಾಡಿದ್ದಾರೆ. ಬಸವಣ್ಣನವರು, ಅಂಬೇಡ್ಕರ್ ಆದ ಮೇಲೆ ನಾನು ಇದ್ದೀನಿ ಎಂದು ಈ ರಾಜ್ಯಕ್ಕೆ ಹೇಳಿಕೊಂಡು ತಿರುಗುತ್ತಿರುವ ಇವರ ಬಗ್ಗೆ ಸುಪ್ರೀಂ ಕೋರ್ಟ್ ಹೇಳುತ್ತೆ. ಮುಂದಿನ ದಿನಗಳಲ್ಲಿ ಈ ಜನರ ಆಶೀರ್ವಾದದಿಂದ ಮತ್ತೆ ನಾನು ಶಾಸಕನಾಗಿ ಸದನಕ್ಕೆ ಹೋಗುತ್ತೇನೆ. ಸದನದಲ್ಲಿ ಯಾವ ರೀತಿ ನಮ್ಮ ಮನಸ್ಸುಗಳನ್ನು ನೋಯಿಸಿದ್ದರು. ಅದೇ ರೀತಿ ನಿಮ್ಮ ವ್ಯಕ್ತಿತ್ವದ ಚರಿತ್ರೆಯನ್ನು ರಾಜ್ಯದ ಜನರ ಮುಂದಿಡುವ ಕೆಲಸ ಮಾಡುವೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.

    ಇದೇ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದ ಸುಧಾಕರ್, ಯಾವ ಕಾರಣಕ್ಕೆ ನನ್ನನ್ನ ಅನರ್ಹ ಮಾಡಿದ್ದೀರಿ? ಯಾವುದೇ ವಿಚಾರಣೆ ತನಿಖೆ ಆಗದೆ ಹೇಗೆ ಅನರ್ಹ ಮಾಡಿದ್ರೀ? ಕಾಂಗ್ರೆಸ್ ಪಕ್ಷದ ವಿರುದ್ಧ ನಾನು ಏನು ಮಾಡಿದ್ದೀನಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಮೌಲ್ಯಗಳು ಇದ್ರೆ ಮೊದಲು ರಮೇಶ್ ಕುಮಾರ್ ಅವರನ್ನು ವಜಾ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

    ಇದೇ ವೇಳೆ ಮಾಜಿ ಸಚಿವ ಹಾಗೂ ಹಾಲಿ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ವಿರುದ್ಧವೂ ಕಿಡಿಕಾರಿದ ಸುಧಾಕರ್, ಎಂಎಲ್‍ಸಿ ಚುನಾವಣೆಯಲ್ಲಿ ಜೆಡಿಎಸ್ ಪರ ಶಿವಶಂಕರರೆಡ್ಡಿ ಕೆಲಸ ಮಾಡಲಿಲ್ವಾ? ಪಕ್ಕದ ಕ್ಷೇತ್ರದ ಕಾಂಗ್ರೆಸ್ ಶಾಸಕನಾದ ನನ್ನನ್ನ ರಾಜಕೀಯವಾಗಿ ಮುಗಿಸುವಂತಹ ಕೆಲಸ ಮಾಡಲಿಲ್ವಾ? ಹೀಗಾಗಿ ಮೊದಲು ಅವರನ್ನು ಪಕ್ಷದಿಂದ ವಜಾ ಮಾಡಿ. ನಿಮ್ಮ ನೈತಿಕತೆ ನನಗೆ ಹೇಳಿ ಕೊಡ್ತೀರಾ. ನಿಮಗೆ ನೈತಿಕತೆ ಇದೆಯಾ ಜನ ನೋಡ್ತಾ ಇದ್ದಾರೆ ನಾನು ಒಬ್ಬ ವ್ಯಕ್ತಿ (ಸಿದ್ದರಾಮಯ್ಯ) ಯಿಂದ ಇಷ್ಟೆಲ್ಲಾ ನೋವು ತಡೆದುಕೊಂಡಿದ್ದೆ ಎಂದು ತಿಳಿಸಿದರು.

  • ಸಿದ್ದರಾಮಯ್ಯಗಿಂತ ಯೋಗ್ಯ ನಾಯಕ ಪಕ್ಷದಲ್ಲಿ ನಮ್ಗೆ ಸಿಗಲ್ಲ: ರಮೇಶ್ ಕುಮಾರ್

    ಸಿದ್ದರಾಮಯ್ಯಗಿಂತ ಯೋಗ್ಯ ನಾಯಕ ಪಕ್ಷದಲ್ಲಿ ನಮ್ಗೆ ಸಿಗಲ್ಲ: ರಮೇಶ್ ಕುಮಾರ್

    ಕೋಲಾರ: ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅವರೇ ಸೂಕ್ತ. ಅವರಗಿಂತ ಯೋಗ್ಯ ನಾಯಕ ಪಕ್ಷದಲ್ಲಿ ನಮಗೆ ಸಿಗೋದಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ಇಂದು ಕೋಲಾರದ ಸುಗಟೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಕುಮಾರ್, ನಮ್ಮ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ವಿಚಾರದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಇದೆಲ್ಲ ಊಹಾಪೋಹ ಎಂದು ಹೇಳಿದರು.

    ನಾನು ಮತ್ತೆ ಕಾಂಗ್ರೆಸ್ ಸದಸ್ಯತ್ವ ಪಡೆದಿರುವೆ, ಪಕ್ಷ ಒಪ್ಪಿಸಿದ ಕೆಲಸ ಮಾಡುವೆ. ಈ ರೀತಿಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರೇ ವಿಪಕ್ಷ ನಾಯಕನಾಗಲು ಅತ್ಯಂತ ಯೋಗ್ಯ ವ್ಯಕ್ತಿ. ಪಕ್ಷವನ್ನು ಬಲಪಡಿಸಿ ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಲು ಅವರ ನಾಯಕತ್ವ ಮುಖ್ಯ. ಉಳಿದ ವಿಚಾರವನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.

    ಯಡಿಯೂರಪ್ಪ ಅವರಿಗೆ ಒಬ್ಬರೇ ರಾಜ್ಯವನ್ನು ಅಭಿವೃದ್ಧಿ ಮಾಡುವ ಶಕ್ತಿ ಇದ್ದರೆ ಮಾಡಲಿ, ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಟಿಪ್ಪು ಜಯಂತಿ ಅವರಿಗೇ ಇಷ್ಟವಾಗಿಲ್ಲ ಅದಕ್ಕೆ ರದ್ದು ಮಾಡಿದ್ದಾರೆ. ಸಂವಿಧಾನಕ್ಕೆ ಬದ್ಧವಾಗಿ ಅವರು ಸರ್ಕಾರ ರಚನೆ ಮಾಡಿದ್ದಾರೆ. ಅವರು ಆಡಳಿತ ಮಾಡಲಿ ನಮಗೆ ಯಾವುದೇ ತೊಂದರೆ ಇಲ್ಲ. ಜನರು ಬುದ್ಧಿವಂತರು ಯಾವ ಕಾಲಕ್ಕೆ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅವರಿಗೆ ಗೊತ್ತು ಎಂದು ಹೇಳಿದರು.

  • ಬಿಎಸ್‍ವೈ ಭೇಟಿಯಾದ ಅನರ್ಹ ಶಾಸಕ ಸುಧಾಕರ್- ಮಾಜಿ ಸ್ಪೀಕರ್ ವಿರುದ್ಧ ಕಿಡಿ

    ಬಿಎಸ್‍ವೈ ಭೇಟಿಯಾದ ಅನರ್ಹ ಶಾಸಕ ಸುಧಾಕರ್- ಮಾಜಿ ಸ್ಪೀಕರ್ ವಿರುದ್ಧ ಕಿಡಿ

    – ಮೌಲ್ಯಗಳಿಗೆ ಪ್ರತಿಪಾದಕರಂತೆ ರಮೇಶ್ ಕುಮಾರ್ ನಟಿಸ್ತಾರೆ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಅನರ್ಹ ಶಾಸಕ ಕೆ.ಸುಧಾಕರ್ ಅವರು ಇಂದು ಬೆಳಗ್ಗೆ ಭೇಟಿ ನೀಡಿ, ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದ್ದಾರೆ.

    ಸಿಎಂ ಭೇಟಿಯ ಬಳಿಕ ಮಾತನಾಡಿದ ಸುಧಾಕರ್ ಅವರು, ಸಿ.ಎಂ.ಯಡಿಯೂರಪ್ಪನವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಹಾಗಾಗಿ ಈಗ ಅವರ ಮನೆಗೆ ಬಂದು ಅಭಿನಂದನೆ ಸಲ್ಲಿಸಿದ್ದೇನೆ. ರಾಜಕೀಯವಾಗಿ ಯಾವುದೇ ಚರ್ಚೆಯಾಗಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಿದ್ದೇನೆ ಅಷ್ಟೇ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ನಮ್ಮ ಜಿಲ್ಲೆಗೆ ಮೆಡಿಕಲ್ ಕಾಲೇಜ್ ಮಂಜೂರಾಗಿದೆ. ಆದರೆ ಹಿಂದನ ಸರ್ಕಾರ ಅನುದಾನ ನೀಡಲಿಲ್ಲ. ಇದನ್ನು ಸಿಎಂ ಗಮನಕ್ಕೆ ತಂದಿದ್ದೇನೆ. ಅವರು ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಮುಂದಿನ ವಾರದಲ್ಲಿ ಅನುದಾನ ನೀಡಬಹದು ಎಂದು ತಿಳಿಸಿದರು.

    ನಿರ್ಗಮಿತ ಸ್ಪೀಕರ್ ರಮೇಶ್ ಕುಮಾರ್ ಅವರ ವಿರುದ್ಧ ಗುಡುಗಿದ ಸುಧಾಕರ್ ಅವರು, ಮೌಲ್ಯಗಳಿಗೆ ಪ್ರತಿಪಾದಕರಂತೆ ರಮೇಶ್ ಕುಮಾರ್ ನಟಿಸುತ್ತಾರೆ. ಶಾಸಕರನ್ನು ಅನರ್ಹಗೊಳಿಸಿದ ಅವರ ಆದೇಶ ಅನೈತಿಕವಾದದ್ದು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೇವೆ. ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇದೆ ಎಂದರು.

    ರಮೇಶ್ ಕುಮಾರ್ ಅವರಂತಹ ನಾಯಕರಿಂದ ಸಂವಿಧಾನಕ್ಕೆ ಅಪಚಾರ ಆಗುತ್ತಿದೆ. ಸುಪ್ರೀಂಕೋರ್ಟ್ ತೀರ್ಪು ನಿಧಾನವಾದರೂ ಪರವಾಗಿಲ್ಲ, ನ್ಯಾಯ ಸಿಗುವ ವಿಶ್ವಾಸವಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ನಮ್ಮ ಪಕ್ಷದಲ್ಲಿನ ರಾಜಕೀಯ ಧೋರಣೆಯಿಂದ ಮನನೊಂದಿದ್ದೇನೆ. ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

    ಗೆಲ್ಲಿಸುವವನು, ಸೋಲಿಸುವವನು ಮೇಲಿದ್ದಾನೆ. ಯಾರನ್ನ ಗೆಲ್ಲಿಸಬೇಕು ಎನ್ನುವುದು ಕ್ಷೇತ್ರದ ಜನರಿಗೆ ಗೊತ್ತಿದೆ. ಎಲ್ಲಿಂದಲೋ ಕಾಲರ್ ಏರಿಸಿಕೊಂಡು ಬಂದರೆ ಜನ ಮತ ಹಾಕಲ್ಲ. ಅತಿರಥ ಮಹಾರಥರೆಲ್ಲಾ ರಾಜ್ಯ ಸುತ್ತಿದರೂ ಒಂದೇ ಸೀಟು ಗೆದ್ದಿದ್ಯಾಕೆ? ಕ್ಷೇತ್ರದಲ್ಲಿ ಕೆಲಸ ಮಾಡಿರುವವರನ್ನು ಜನರು ಗೆಲ್ಲಿಸುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.

  • ‘ರಾಜಕೀಯ ಬೆಳವಣಿಗೆಯಿಂದ ನೊಂದಿದ್ದೆ’ – ವಿವಾಹವಾದ ದೇವಾಲಯಕ್ಕೆ ರಮೇಶ್ ಕುಮಾರ್ ಭೇಟಿ

    ‘ರಾಜಕೀಯ ಬೆಳವಣಿಗೆಯಿಂದ ನೊಂದಿದ್ದೆ’ – ವಿವಾಹವಾದ ದೇವಾಲಯಕ್ಕೆ ರಮೇಶ್ ಕುಮಾರ್ ಭೇಟಿ

    ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ಹಾಗೂ ಹಾಲಿ ಶ್ರೀನಿವಾಪುರ ಶಾಸಕ ರಮೇಶ್ ಕುಮಾರ್ ಚಿಕ್ಕಬಳ್ಳಾಪುರ ತಾಲ್ಲೂಕಿನ ರಂಗಸ್ಥಳ ಗ್ರಾಮದ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

    ಅಂದಹಾಗೆ 1977 ರ ಮೇ 22 ರಂದು ರಮೇಶ್ ಕುಮಾರ್ ಇದೇ ದೇವಾಲಯದಲ್ಲಿ ವಿವಾಹವಾಗಿದ್ದರು. ದೇವರ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಇತ್ತೀಚಿನ ರಾಜ್ಯದ ರಾಜಕೀಯ ಘಟನಾವಳಿಗಳಿಂದ ಮಾನಸಿಕವಾಗಿ ಸಾಕಷ್ಟು ನೊಂದಿದ್ದೆ. ಹೀಗಾಗಿ ದೇವರ ದರ್ಶನ ಪಡೆದು ಮನಸ್ಸು ನಿರಾಳ ಮಾಡಿಕೊಳ್ಳಲು ದೇವಾಲಯಕ್ಕೆ ಆಗಮಿಸಿದ್ದೇನೆ. ಇದು ಖಾಸಗಿ ಭೇಟಿ ಆಗಿದ್ದು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದರು.

    ಇದೇ ವೇಳೆ ಅನರ್ಹ ಶಾಸಕರ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಗೆ ಹೋಗುವುದಾಗಿ ಹೇಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಏನು ತೀರ್ಮಾನ ಆಗುತ್ತೋ ನೋಡಬೇಕು. ಅಮೇಲೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಬೇಕು ಎಂದು ಹೇಳಿದರು.

    ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಕೆ ವಿಚಾರ ಸಂಬಂಧ ಮಾತನಾಡಿ, ಉಪಚುನಾವಣೆಯೇ ಬಂದಿಲ್ಲ ಮಗು ಹುಟ್ಟಿದರೆ ತಾನೇ ಮಗುವಿಗೆ ಸೋಮಲಿಂಗನೋ ಭೀಮಲಿಂಗನೋ ಎಂದು ಹೆಸರಿಡೋದು. ಮದುವೆಯೇ ಆಗಿಲ್ಲ ಮಗುನೇ ಹುಟ್ಟಿಲ್ಲ ಮಗು ಗಂಡಾ ಹೆಣ್ಣಾ ಎಂದು ಕೇಳಿದರೆ ಹೇಗೆ ಎಂದು ಹಾಸ್ಯ ಮಾಡಿದರು.

    ರಾಜ್ಯದಲ್ಲಿ ಸಿದ್ದರಾಮಯ್ಯ ಬಹಳ ಪ್ರಭಾವಯುತ ನಾಯಕರಾಗಿದ್ದು, ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಕಟ್ಟುವ ಕೆಲಸ ನಾವು ಮಾಡುತ್ತೇವೆ. ಶಾಸಕರ ಅನರ್ಹತೆಯನ್ನು ಸ್ಪೀಕರ್ ಸ್ಥಾನದಿಂದ ನಾನು ಮಾಡಿದ್ದೇನೆ. ಆದರೆ ಈಗ ಅದರ ಬಗ್ಗೆ ವ್ಯಾಖ್ಯಾನ ಮಾಡೋದು ಗೌರವ ಅಲ್ಲ. ಈಗ ಪಕ್ಷದ ಕಾರ್ಯಕರ್ತನಾಗಿ ಸವಾಲು ಇದೆ. ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟುವ ಕೆಲಸ ನಾವೆಲ್ಲರೂ ಮಾಡುತ್ತೇವೆ. ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆಯ ಹಂತಕ್ಕೆ ನಾವು ಹೋಗಿಯೇ ಇಲ್ಲ ಎಂದು ತಿಳಿಸಿದರು.

  • ಸ್ಪೀಕರ್ ಸ್ಥಾನಕ್ಕೆ ಮುಂಚೂಣಿಯಲ್ಲಿ ಮೂವರು

    ಸ್ಪೀಕರ್ ಸ್ಥಾನಕ್ಕೆ ಮುಂಚೂಣಿಯಲ್ಲಿ ಮೂವರು

    ಬೆಂಗಳೂರು: ಸಿಎಂ ಯಡಿಯೂರಪ್ಪನವರು ಬಹುಮತ ಸಾಬೀತು ಮತ್ತು ಧನ ವಿಧೇಯಕ ಅಂಗೀಕಾರವಾದ ಕೂಡಲೇ ಸ್ಪೀಕರ್ ರಮೇಶ್ ಕುಮಾರ್ ವಿದಾಯ ಭಾಷಣ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಸ್ಪೀಕರ್ ಸ್ಥಾನಕ್ಕೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

    ಸ್ಪೀಕರ್ ಸ್ಥಾನದ ರೇಸ್‍ನಲ್ಲಿ ಮೂವರು ಮುಂಚೂಣಿಯಲ್ಲಿದ್ದು, ನೂತನ ಸ್ಪೀಕರ್ ಆಯ್ಕೆ ಸಂಬಂಧ ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

    ಶಾಸಕರಾದ ರಾಜಾಜಿನಗರ ಶಾಸಕರಾದ ಸುರೇಶ್‍ಕುಮಾರ್, ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿರಾಜಪೇಟೆ ಶಾಸಕ ಮಾಜಿ ಸ್ಪೀಕರ್ ಆಗಿದ್ದ ಕೆ.ಜಿ.ಬೋಪಯ್ಯ ಮೂವರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಆದರೆ ಹೈಕಮಾಂಡ್ ಜೊತೆ ಚರ್ಚೆ ಬಳಿಕವಷ್ಟೇ ಸ್ಪೀಕರ್ ಆಯ್ಕೆ ಅಂತಿಮವಾಗಲಿದೆ.

    ಒಂದು ವೇಳೆ ಜಗದೀಶ್ ಶೆಟ್ಟರು ಒಪ್ಪಿದರೆ ಅವರು ಹೆಸರು ಕೇಳಿ ಬರುವ ಸಾಧ್ಯತೆ ಇದೆ. ಆದರೆ ಈ ಎಲ್ಲ ಮಾಹಿತಿಯನ್ನು ಹೈಕಮಾಂಡ್‍ಗೆ ತಿಳಿಸಿಲ್ಲ. ಕೇವಲ ಬಿಜೆಪಿ ವಲಯದಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಮಂಗಳವಾರ ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ಹೋಗುವ ಸಾಧ್ಯತೆ ಇದೆ. ಅಲ್ಲಿ ನಾಯಕರ ಜೊತೆ ಚರ್ಚೆ ಮಾಡಿ ಮೂರು-ನಾಲ್ಕು ದಿನಗಳಲ್ಲಿ ಅಂತಿಮವಾಗುವ ಸಾಧ್ಯತೆಯಿದೆ.

    ವಿಧಾನಸಭೆಯಲ್ಲಿ ಬಿಎಸ್ ಯಡಿಯೂರಪ್ಪನವರು ವಿಶ್ವಾಸ ಮತಯಾಚನೆ ಮಾಡಿದ ಬಳಿಕ ಧನವಿನಿಯೋಗ ಮತ್ತು ಪೂರಕ ಬಜೆಟ್‍ಗೆ ಸದನ ಧ್ವನಿ ಮತದ ಮೂಲಕ ಅಂಗೀಕಾರ ನೀಡಿತು. ಇದಾದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ವಿದಾಯ ಭಾಷಣ ಮಾಡಿ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದರು.

  • ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಣೆ ಮಾಡಿದ ಸ್ಪೀಕರ್​ಗೆ ಅಭಿನಂದನೆ – ಸಿದ್ದರಾಮಯ್ಯ

    ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಣೆ ಮಾಡಿದ ಸ್ಪೀಕರ್​ಗೆ ಅಭಿನಂದನೆ – ಸಿದ್ದರಾಮಯ್ಯ

    ಬೆಂಗಳೂರು: 14 ತಿಂಗಳು ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ರಮೇಶ್ ಕುಮಾರ್ ಇಂದು ತನ್ನ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಣೆ ಮಾಡಿದ ಸ್ವೀಕರ್ ಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

    ಇಂದು ಸದನದಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ವಿಶ್ವಾಸಮತಯಾಚನೆ ಮಾಡಿದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಸಮಯದಲ್ಲಿ ಅವರು ತಮ್ಮ ಕಾರ್ಯನಿರ್ವಹಣೆಯಲ್ಲಿ ತೋರಿದ ನಿಷ್ಠೆ, ನಿಷ್ಪಕ್ಷಪಾತತನವನ್ನು ಸಿದ್ದರಾಮಯ್ಯ ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಿದ್ದು, ಕೆ.ಆರ್ ರಮೇಶ್ ಕುಮಾರ್ ಅವರು ಯಾವುದೇ ಒತ್ತಡಕ್ಕೆ ಮಣಿಯದೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತೆಗೆದುಕೊಂಡ ಪ್ರಾಮಾಣಿಕ ನಿರ್ಧಾರಗಳು ದೇಶದಲ್ಲಿ ಓರ್ವ ಸ್ಪೀಕರ್ ಆಗಿದ್ದವರು ಹೇಗೆ ವರ್ತಿಸಬೇಕು ಎಂಬುದನ್ನು ತೋರಿಸಿದ್ದಾರೆ. ಸ್ಪೀಕರ್ ಆಗಿ ನಿಮ್ಮ ಸೇವೆಗೆ ನನ್ನ ಪ್ರಾಮಾಣಿಕ ಧನ್ಯವಾದಗಳು ಎಂದು ಹೇಳಿದ್ದಾರೆ.

    ತಮ್ಮ ಫೇಸ್ ಬುಕ್ ಖಾತೆಯಲ್ಲೂ ಪೋಸ್ಟ್ ಹಾಕಿರುವ ಸಿದ್ದರಾಮಯ್ಯ, ರಮೇಶ್ ಕುಮಾರ್ ಅವರು ಸಭಾಧ್ಯಕ್ಷರಾಗಿ ಕಾರ್ಯನಿರ್ವಹಣೆಯಲ್ಲಿ ತೋರಿದ ನಿಷ್ಠೆ, ನಿಷ್ಪಕ್ಷಪಾತತನ ಮತ್ತು ಸಂವಿಧಾನ, ಪ್ರಜಾಪ್ರಭುತ್ವದ ಕಡೆಗೆ ಅವರು ತೋರಿದ ಬದ್ಧತೆ ಅನುಕರಣೀಯವಾದುದು. ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯಗಳಿಗೆ ಚ್ಯುತಿ ಬಾರದಂತೆ ಅವರು ಕರ್ತವ್ಯ ನಿರ್ವಹಿಸಿದ ರೀತಿ ಪ್ರಶಂಸನೀಯ. ಅವರಿಗೆ ನಮ್ಮ ಪಕ್ಷದ ಪರವಾದ ಹಾಗೂ ನನ್ನ ವೈಯಕ್ತಿಕ ಅಭಿನಂದನೆಗಳು ಮತ್ತು ಧನ್ಯವಾದಗಳು ಎಂದು ಹೇಳಿದರು.

  • ಸದನದೊಳಗೆ ಮೈತ್ರಿ ಫೈಟ್ – ಬಿಜೆಪಿ ಪರ ಜಿಟಿಡಿ ಬ್ಯಾಟಿಂಗ್

    ಸದನದೊಳಗೆ ಮೈತ್ರಿ ಫೈಟ್ – ಬಿಜೆಪಿ ಪರ ಜಿಟಿಡಿ ಬ್ಯಾಟಿಂಗ್

    ಬೆಂಗಳೂರು: ಸರ್ಕಾರ ಪತನವಾದ ಬಳಿಕ ಜೆಡಿಎಸ್, ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎನ್ನುವ ಮಾತಿಗೆ ಪುಷ್ಠಿ ನೀಡುವಂತೆ ಇಂದು ಕಲಾಪದಲ್ಲಿ ದೋಸ್ತಿ ನಾಯಕರಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗಿ ಗೋಚರಿಸಿದೆ.

    ಬಿಎಸ್ ಯಡಿಯೂರಪ್ಪನವರು ಇಂದು ಧನ ವಿಧೇಯಕವನ್ನು ಮಂಡಿಸಿದ ಬಳಿಕ ಪೂರಕ ಬಜೆಟ್ ಗೆ ಸದನದ ಒಪ್ಪಿಗೆ ಬೇಕೆಂದು ಕೇಳಿಕೊಂಡರು. ಮೂರು ತಿಂಗಳಿಗೆ ಧನ ವಿಧೇಯಕ್ಕೆ ಮುಂದಾಗಿದ್ದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಇದಾದ ಬಳಿಕ ಪೂರಕ ಬಜೆಟ್ ಚರ್ಚೆ ನಡೆಸದೇ ಒಪ್ಪಿಗೆ ನೀಡಲು ಸಾಧ್ಯವಿಲ್ಲ. ಬೇಕಿದ್ದರೆ ಮತ್ತೊಮ್ಮೆ ಸದನ ಕರೆಯಿರಿ ಚರ್ಚೆ ನಡೆಸೋಣ ಎಂದು ಹೇಳಿದರು.

    ಸಿದ್ದರಾಮಯ್ಯ ಮಾತಿಗೆ ಯಡಿಯೂರಪ್ಪನವರು, ಸ್ವಾಮಿ ಇದು ನಿಮ್ಮ ಸರ್ಕಾರವೇ ಮಂಡಿಸಿದ ಪೂರಕ ಬಜೆಟ್. ನೀವೇ ಮಂಡಿಸಿದ ಬಜೆಟ್ ಚರ್ಚೆ ನಡೆಸಲು ಏನಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಸಿದ್ದರಾಮಯ್ಯ ಒಳಗಡೆ ನೀವು ಏನು ಬದಲಾವಣೆ ಮಾಡಿದ್ದೀರಿ ಎನ್ನುವುದು ಹೇಗೆ ಗೊತ್ತಾಗಬೇಕು. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ನೀವು ಹೇಳುತ್ತೀರಿ. ಆದರೆ ಧನ ವಿಧೇಯಕವನ್ನು ಕೇವಲ ಮೂರು ತಿಂಗಳಿಗೆ ಮಾತ್ರ ಅನುಮೋದನೆ ಪಡೆದುಕೊಂಡಿದ್ದೀರಿ. 8 ತಿಂಗಳಿಗೆ ಪಡೆದುಕೊಳ್ಳಬಹುದಾಗಿತ್ತು. ಇಲ್ಲಿ ನೀವು ಏನು ಬದಲಾವಣೆ ಮಾಡಿದ್ದೀರಿ ಎನ್ನುವುದು ಗೊತ್ತಾಗಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿಸಿದರು.

    ಈ ಸಂದರ್ಭದಲ್ಲಿ ಬಿಜೆಪಿಯ ಮಾಧುಸ್ವಾಮಿ ಮಾತನಾಡಿ, ಕೇಂದ್ರದಿಂದ ಎನ್‍ಡಿಆರ್‍ಎಫ್ ನಿಧಿ ಬಂದಿದೆ. ಅದನ್ನು ಬಳಸಬೇಕಾದರೆ ಸದನದ ಅನುಮತಿ ಬೇಕು. ರಾಜ್ಯದಲ್ಲಿ ಬರ ಇದೆ. ಹೀಗಾಗಿ ಬಂದಿರುವ ಹಣ ಬಳಸದೇ ಇದ್ದರೆ ಎಷ್ಟು ಸರಿಯಾಗುತ್ತದೆ. ಚರ್ಚೆ ನಡೆಸಬೇಕಾದರೆ ನಡೆಸೋಣ. ಇದು ನಮ್ಮ ವಿನಂತಿ ಸಿದ್ದರಾಮಯ್ಯನವರೇ ಎಂದು ಮನವಿ ಮಾಡಿಕೊಂಡರು.

    ಒಪ್ಪಿಗೆ ಬಗ್ಗೆ ನಾಯಕರ ಮಧ್ಯೆ ಚರ್ಚೆ ನಡೆಯುತ್ತಿದ್ದಾಗ ಮಧ್ಯಪ್ರವೇಶಿಸಿದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು, “ಮಾಡ್ಲೀ ಬಿಡ್ರೀ. ನಾವೇ ಮಂಡನೆ ಮಾಡಿರುವ ಬಜೆಟ್ ಅಲ್ವೇ ಇದು. ನಾವ್ಯಾಕೆ ಅಡ್ಡಿಯಾಗೋಣ” ಎಂದು ಪ್ರಶ್ನಿಸಿ ಬಿಜೆಪಿ ಪರ ಬ್ಯಾಟಿಂಗ್ ಮಾಡಿದರು. ಕೂಡಲೇ ಯಡಿಯೂರಪ್ಪನವರು ನಿಮ್ಮ ಸರ್ಕಾರದ ಜಿಟಿ ದೇವೇಗೌಡರೇ ಹೇಳಿದ ಮೇಲೆ ಮತ್ತೆ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಚರ್ಚೆಯಾಗದೇ ಪೂರಕ ಬಜೆಟ್ ಮಂಡಿಸುವುದು ಸರಿಯಲ್ಲ. ಇದು ಒಳ್ಳೆಯ ಸಂಪ್ರದಾಯ ಮಾತ್ರ ಅಲ್ಲ ಎಂದು ಹೇಳಿದರು.

    ಸಿದ್ದರಾಮಯ್ಯನವರ ಮಾತಿಗೆ ರಮೇಶ್ ಕುಮಾರ್, ಸರಿ ಈಗ ಏನು ಮಾಡೋಣ ಎಂದಾಗ ಸಿದ್ದರಾಮಯ್ಯ ಎಲ್ಲರ ಒಪ್ಪಿಗೆ ಇದೆ ಎಂದರೆ ನನ್ನ ಅಭ್ಯಂತರ ಏನು ಇಲ್ಲ. ಪಾಸ್ ಮಾಡಿ ಎಂದು ಹೇಳಿ ಅನುಮತಿ ಕೊಟ್ಟರು.

    ಜೈಪಾಲ್ ರೆಡ್ಡಿ ಅವರ ಅಂತ್ಯ ಸಂಸ್ಕಾರ ಕಾರ್ಯಕ್ರಮಕ್ಕೆ ತೆರಳಬೇಕಿದೆ. ಹೀಗಾಗಿ ಸದನವನ್ನು ಬೇಗನೇ ಮುಗಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಆರಂಭದಲ್ಲೇ ಹೇಳಿ ಸದಸ್ಯರಲ್ಲಿ ಮನವಿ ಮಾಡಿಕೊಂಡರು. ಸದಸ್ಯರ ನಡುವೆ ಚರ್ಚೆ ಜಾಸ್ತಿಯಾದಾಗ ಈ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡುತ್ತಿದ್ದರು. ಹೀಗಾಗಿ ಇಂದು ಸದನದಲ್ಲಿ ಜಾಸ್ತಿ ಚರ್ಚೆಯಾಗದೇ ಧನ ವಿಧೇಯಕ ಮತ್ತು ಪೂರಕ ಬಜೆಟ್ ಧ್ವನಿ ಮತದ ಮೂಲಕ ಅಂಗೀಕಾರಗೊಂಡಿತು.

  • ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ

    ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ

    ಬೆಂಗಳೂರು: ಸಿಎಂ ಯಡಿಯೂರಪ್ಪನವರು ಬಹುಮತ ಸಾಬೀತು ಮಾಡಿದ ನಂತರ ಧನ ವಿಧೇಯಕ ಅಂಗೀಕಾರವಾದ ಕೂಡಲೇ ಸ್ಪೀಕರ್ ರಮೇಶ್ ಕುಮಾರ್ ವಿದಾಯ ಭಾಷಣ ಮಾಡಿದರು.

    ಪಕ್ಷದ ಹಿರಿಯರ ಮಾತಿನಂತೆ ಸ್ಪೀಕರ್ ಆಗಿ ಆಯ್ಕೆಯಾದೆ. ನಾನು ಯಾರನ್ನು ಕೇಳಲಿಲ್ಲ, ಪಕ್ಷದ ವರಿಷ್ಠರ ಸಲಹೆಯಂತೆ ಈ ಸ್ಥಾನವನ್ನು ಅಲಂಕರಿಸಿದೆ. ಇದೂವರೆಗೂ ಈ ಸ್ಥಾನದ ಗೌರವ ಕಡಿಮೆಯಾಗದಂತೆ ಕೆಲಸ ಮಾಡಿದ್ದೇನೆ. ನನಗೆ ಸಹಕಾರ ನೀಡಿದ ಎಲ್ಲ ಸಿಬ್ಬಂದಿ ವರ್ಗ, ಪಕ್ಷದ ಮುಖಂಡರು ಮತ್ತು ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸಿದರು.

    ದಯವಿಟ್ಟು ಯಾರು ವೈಯಕ್ತಿಕ ವಿಚಾರಗಳನ್ನು ಕೆದಕಬೇಡಿ. ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯರ ದೂರಿನ ಅನ್ವಯ ಸಂವಿಧಾನದ ಪ್ರಕಾರವೇ 17 ಶಾಸಕರ ಅನರ್ಹತೆಯ ತೀರ್ಮಾನ ತೆಗೆದುಕೊಂಡಿದ್ದೇನೆ. ಯಾವುದೇ ಒತ್ತಡ, ಪ್ರಚೋದನೆಗೆ ಒಳಗಾಗದೇ ಆದೇಶವನ್ನು ಪ್ರಕಟಿಸಿದ್ದೇನೆ ಎಂದರು.

  • ಆಪರೇಷನ್ ಕಮಲ-2: ದೋಸ್ತಿಗಳಿಗೆ ಕೈ ಕೊಡಲು ‘6’ ಮಂದಿ ರೆಡಿ!

    ಆಪರೇಷನ್ ಕಮಲ-2: ದೋಸ್ತಿಗಳಿಗೆ ಕೈ ಕೊಡಲು ‘6’ ಮಂದಿ ರೆಡಿ!

    ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಿಡಿದು ನೆರೆಯ ಮಹಾರಾಷ್ಟ್ರ ಸೇರಿಕೊಂಡಿರುವ 17 ಶಾಸಕರಿಗೆ ವಿಧಾನಸಭೆ ಬಾಗಿಲು ಬಂದ್ ಆಗಿದೆ. ಸ್ಪೀಕರ್ ರಮೇಶ್ ಕುಮಾರ್ ಶಾಸಕರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಬಿಜೆಪಿ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎನ್ನಲಾಗಿದ್ದು, ದೋಸ್ತಿ ಪಕ್ಷಗಳ ಆರು ಜನರು ಬಾಜಪದತ್ತ ಮುಖ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಜೆಡಿಎಸ್ ಓರ್ವ ಶಾಸಕ ಸೇರಿದಂತೆ ಒಟ್ಟು ಆರು ಜನರು ಕಮಲ ಅಂಗಳಕ್ಕೆ ಪಾದಾರ್ಪಣೆ ಮಾಡಲು ನಿಂತಿದ್ದು, ಇಷ್ಟು ದಿನ ಅನರ್ಹತೆ ಭೀತಿಯಿಂದಾಗಿ ದೂರ ಉಳಿದುಕೊಂಡಿದ್ದರು ಎನ್ನಲಾಗಿದೆ. ಸೋಮವಾರ ಸಿಎಂ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತುಪಡಿಸಿದ ಬಳಿಕ ರಮೇಶ್ ಕುಮಾರ್ ತಮ್ಮ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ರಮೇಶ್ ಕುಮಾರ್ ರಾಜೀನಾಮೆ ನೀಡಿದ್ರೆ ಬಿಜೆಪಿಯ ನಾಯಕರೊಬ್ಬರು ಸ್ಪೀಕರ್ ಆಗಲಿದ್ದಾರೆ. ಇದನ್ನೂ ಓದಿ: ಸ್ಪೀಕರ್ ನಿರ್ಧಾರ ಕಾನೂನು ಬಾಹಿರ – ಬಿ.ವಿ.ಆಚಾರ್ಯ

    ಬಿಜೆಪಿ ಬೆಂಬಲಿತ ಸ್ಪೀಕರ್ ಆಯ್ಕೆಯಾದ್ರೆ ರಾಜೀನಾಮೆ ಸಹ ಬೇಗ ಅಂಗೀಕಾರವಾಗಲಿದೆ ಎಂದು ಆರು ಶಾಸಕರು ಇಷ್ಟು ದಿನ ಪ್ಲಾನ್ ಮಾಡಿಕೊಂಡಿದ್ದಾರೆ. ಹಾಗಾಗಿ ಇಷ್ಟು ದಿನ ರಾಜೀನಾಮೆಯಿಂದ ದೂರ ಉಳಿದುಕೊಂಡಿದ್ದರು. ಒಂದು ವೇಳೆ ಅತೃಪ್ತರೊಂದಿಗೆ ರಾಜೀನಾಮೆ ಸಲ್ಲಿಸಿದ್ದರೆ ಇಂದು ಅನರ್ಹವಾಗಬೇಕಿತ್ತು ಎಂಬ ಲೆಕ್ಕಾಚಾರಗಳಿಂದಲೇ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿವೆ.  ಇದನ್ನೂ ಓದಿ: ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು: ಸಿದ್ದರಾಮಯ್ಯ

    ಬಹುಮತ ಸಾಬೀತುಪಡಿಸುವ ನೂತನ ಬಿಜೆಪಿ ಸರ್ಕಾರ ಸ್ಪೀಕರ್ ವಿರುದ್ಧ ಅವಿಶ್ವಾಸ ಮಂಡಿಸಬಹುದು. ಸಭಾಧ್ಯಕ್ಷರನ್ನು ಮುಂದುವರಿಸಲು ಸಾಧ್ಯವಿಲ್ಲ ಎಂಬ ನೋಟಿಸ್ ನೀಡಲಾಗುತ್ತದೆ. 15 ದಿನಗಳ ಬಳಿಕ ದಿನಾಂಕ ನಿಗದಿ ಮಾಡಿ ಅವಿಶ್ವಾಸವನ್ನು ಅದನ್ನು ಮತಕ್ಕೆ ಹಾಕಲಾಗುತ್ತದೆ. ಬಹುಮತ ಸಿಗದೇ ಇದ್ದಲ್ಲಿ ಸ್ಪೀಕರ್ ಸ್ಥಾನದಿಂದ ರಮೇಶ್ ಕುಮಾರ್ ಕೆಳಗಿಳಿಯಬೇಕಾಗುತ್ತದೆ.

    ಯಾಕೆ ಈ ಆಪರೇಷನ್?
    ಅನರ್ಹಗೊಂಡ ಶಾಸಕರ ಪೈಕಿ ಹಳೆ ಮೈಸೂರು ಭಾಗದವರು ಇದ್ದಾರೆ. ಈ ಭಾಗದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಉಪಚುನಾವಣೆ ನಡೆದರೆ ಇಲ್ಲಿ ಜಯಗಳಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಮತ್ತೆ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.

    ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ಹಿಡಿತ ಹೆಚ್ಚಿದೆ. ಅದರಲ್ಲೂ ಹಲವಾರು ಕ್ಷೇತ್ರಗಳಲ್ಲಿ ಲಿಂಗಾಯತರೇ ನಿರ್ಣಾಯಕರಾಗಿದ್ದಾರೆ. ಹೀಗಾಗಿ ಲಿಂಗಾಯತ ಶಾಸಕರನ್ನು ಸೆಳೆಯಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ. ಒಂದು ವೇಳೆ ರಾಜೀನಾಮೆ ನೀಡಿರುವ ಶಾಸಕರು ಸೋತರೆ ಮತ್ತೆ ಸರ್ಕಾರ ಅಲ್ಪ ಮತಕ್ಕೆ ಕುಸಿಯಬಹುದು. ಈ ರೀತಿ ಆಗದಂತೆ ತಡೆಯಲು ಬಿಜೆಪಿ ಈಗ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದೆ. ಅತೃಪ್ತ ಶಾಸಕರ ಜೊತೆ ಸ್ನೇಹಿತರಾಗಿರುವ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿದ್ದು, ಈಗಾಗಲೇ ಶಾಸಕರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

  • ಯಾವ ಕಾನೂನಿನಡಿಯಲ್ಲಿ ಅನರ್ಹ ಮಾಡಿದ್ರಿ: ಶೋಭಾ ಕರಂದ್ಲಾಜೆ ಪ್ರಶ್ನೆ

    ಯಾವ ಕಾನೂನಿನಡಿಯಲ್ಲಿ ಅನರ್ಹ ಮಾಡಿದ್ರಿ: ಶೋಭಾ ಕರಂದ್ಲಾಜೆ ಪ್ರಶ್ನೆ

    -ಸ್ಪೀಕರ್ ಅವರದ್ದು ಭಂಡ ನಿರ್ಧಾರ

    ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್‍ನ 14 ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿ ಆದೇಶಿಸಿದ್ದಾರೆ. ಸ್ಪೀಕರ್ ನಿರ್ಣಯದ ಕುರಿತು ಅಸಮಾಧಾನ ಹೊರ ಹಾಕಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಯಾವ ಕಾನೂನಿನಡಿಯಲ್ಲಿ ಸ್ಪೀಕರ್ ಆದೇಶ ನೀಡಿದ್ದಾರೆ ಎಂಬುದನ್ನು ನಾಡಿನ ಜನತೆಗೆ ತಿಳಿಸಬೇಕೆಂದು ಆಗ್ರಹಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕರ್ನಾಟಕದಲ್ಲಿ ಇಂದು ಪ್ರಜಾತಂತ್ರ ಮತ್ತು ಸಂವಿಧಾನದ ಕಗ್ಗೊಲೆಯಾಗಿದೆ. ಕರ್ನಾಟಕ ಸ್ಪೀಕರ್ ತುಂಬಾ ಬುದ್ಧಿವಂತರು ಮತ್ತು ಅನುಭವಿಗಳು ಎನ್ನುವ ಗೌರವ ನಮಗೆಲ್ಲರಿಗಿತ್ತು. ಇಂದು ಸ್ಪೀಕರ್ ರಮೇಶ್ ಸಂವಿಧಾನದ ವಿರೋಧಿ ನಿರ್ಣಯವನ್ನು ಪ್ರಕಟಿಸುವ ಮೂಲಕ ಕರ್ನಾಟಕ ವಿಧಾನಸಭೆಯ ಗೌರವವನ್ನು ಮಣ್ಣು ಪಾಲು ಮಾಡಿದ್ದಾರೆ ಎಂದು ಕಿಡಿಕಾರಿದರು.

    ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋದಾಗ ಕೆಲವರು ರಾಜೀನಾಮೆಯನ್ನು ಕ್ರಮಬದ್ಧವಾಗಿ ಸಲ್ಲಿಸಿಲ್ಲ ಎಂದು ಹೇಳಿದ್ದರು. ತದನಂತರ ಸುಪ್ರೀಂಕೋರ್ಟ್ ಅದೇಶದನ್ವಯ ಎಲ್ಲ ಶಾಸಕರು ಕ್ರಮಬದ್ಧವಾಗಿ ರಾಜೀನಾಮೆಯನ್ನು ಸಲ್ಲಿಸಿದ್ದರೂ ಅಂಗೀಕಾರ ಮಾಡಿಲ್ಲ ಯಾಕೆ ಎಂದು ಗುಡುಗಿದರು.

    ಶಾಸಕರ ಅನರ್ಹತೆಯ ವಿಚಾರವಾಗಿ ಸ್ಪೀಕರ್ ಅವರಿಗೆ ಶೋಭಾ ಕರಂದ್ಲಾಜೆ ಕೆಲವು ಪ್ರಶ್ನೆಗಳಿಗೆ ಉತ್ತರ ಕೇಳಿದ್ದಾರೆ.
    1. ಅಂದು ಶಾಸಕರು ರಾಜೀನಾಮೆ ಕಾನೂನಬದ್ಧವಾಗಿದ್ದರೆ, ಇವತ್ತು ಅನರ್ಹ ಮಾಡಿದ್ಯಾಕೆ?
    2. ಯಾವ ಕಾನೂನಿನ ಅಡಿಯಲ್ಲಿ ಶಾಸಕರನ್ನು ಅನರ್ಹಗೊಳಿಸಲಾಗಿದೆ?
    3. ಯಾವ ಮತ್ತು ಯಾರ ಆದೇಶದಡಿಯಲ್ಲಿ ಅನರ್ಹ ಮಾಡಲಾಗಿದೆ?
    4. ಯಾರ ಒತ್ತಡದಲ್ಲಿ ಶಾಸಕರನ್ನು ಅನರ್ಹಗೊಳಿಸಿದ್ದೀರಿ ಎಂಬುದರ ಬಗ್ಗೆ ವಿವರಣೆಯನ್ನು ನೀಡಬೇಕು?

    ಸ್ಪೀಕರ್ ರಮೇಶ್ ಕುಮಾರ್ ಎಲ್ಲರ ರಾಜೀನಾಮೆಯನ್ನು ಅಂಗೀಕರಿಸುತ್ತಾರೆ ಎಂಬ ನಂಬಿಕೆ ಇತ್ತು. ದೇಶದ ಇತಿಹಾಸದಲ್ಲಿ ಯಾವ ಸ್ಪೀಕರ್ ಈ ರೀತಿಯ ಭಂಡ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಕರ್ನಾಟಕದಲ್ಲಿ ಸ್ಪೀಕರ್ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಏಜೆಂಟ್ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಸ್ಪೀಕರ್ ಆದೇಶ ಪ್ರಜಾತಂತ್ರ ಮತ್ತು ಸಂವಿಧಾನ ವಿರೋಧಿಯಾಗಿದ್ದು, ಅನರ್ಹಗೊಂಡಿರುವ ಎಲ್ಲ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ನಮಗೆಲ್ಲರಿಗೂ ನ್ಯಾಯ ಸಿಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.

    ಅನರ್ಹಗೊಂಡಿರುವ ಶಾಸಕರ ಪಟ್ಟಿ:
    ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್ ಅವರನ್ನು ರಮೇಶ್ ಕುಮಾರ್ ಜುಲೈ 25 ರಂದು ಸುದ್ದಿಗೋಷ್ಠಿ ಕರೆದು ಅನರ್ಹಗೊಳಿಸಿದ್ದರು. ಇಂದು ಕಾಂಗ್ರೆಸ್ಸಿನ ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಕಾಗವಾಡದ ಶ್ರೀಮಂತ್ ಪಾಟೀಲ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್. ಜೆಡಿಎಸ್ ಶಾಸಕರಾದ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡರನ್ನು ಅನರ್ಹಗೊಳಿಸಿದ್ದಾರೆ.