Tag: Ramesh Kumar

  • ಕೇವಲ ಬುದ್ಧಿವಂತಿಕೆ ಪ್ರದರ್ಶನಕ್ಕೆ ಸ್ಪೀಕರ್ ಚೇರ್ ಇಲ್ಲ: ರಮೇಶ್ ಕುಮಾರ್‌ಗೆ ಕಾಗೇರಿ ಟಾಂಗ್

    ಕೇವಲ ಬುದ್ಧಿವಂತಿಕೆ ಪ್ರದರ್ಶನಕ್ಕೆ ಸ್ಪೀಕರ್ ಚೇರ್ ಇಲ್ಲ: ರಮೇಶ್ ಕುಮಾರ್‌ಗೆ ಕಾಗೇರಿ ಟಾಂಗ್

    – ಮಾಜಿ-ಹಾಲಿ ಸ್ಪೀಕರ್ ವಾಕ್ ಸಮರ
    – ರಮೇಶ್ ಕುಮಾರ್ ಏನ್ ಹೇಳುತ್ತಾರೋ ಅದೇ ಸರ್ವಶ್ರೇಷ್ಠ
    – ಸದನದಲ್ಲಿ ಕಿಡಿಕಾರಿದ ಈಶ್ವರಪ್ಪ

    ಬೆಂಗಳೂರು: ವಿಧಾನಸಭಾ ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಹಾಲಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಧ್ಯೆ ವಾಕ್ ಸಮರವೇ ನಡೆಯಿತು.

    ನೆರೆ ಪರಿಹಾರ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸುದೀರ್ಘ ಚರ್ಚೆ ನಡೆಸಿದರು. ಇದರಿಂದಾಗಿ ಸ್ಪೀಕರ್ ಕಾಗೇರಿ ಆಗಾಗ ಸಾಕು ಚರ್ಚೆ ನಿಲ್ಲಿಸಿ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪದ ಸಿದ್ದರಾಮಯ್ಯ ಅವರು ಮಾತು ಮುಂದುವರಿಸಿದರು.

    ಸಂತ್ರಸ್ತರ ನೋವನ್ನು ಅರ್ಥ ಮಾಡಿಕೊಳ್ಳುವ ತಾಯಿ ಹೃದಯದ ನಾಯಕರು ಬೇಕಾಗಿದ್ದಾರೆ. ಆದಷ್ಟು ಬೇಗ ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಮನೆ ನೀಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಆದರೆ ಸ್ಪೀಕರ್ ಕಾಗೇರಿ ಅವರು ಮತ್ತೆ ಸಾಕು ನಿಮ್ಮ ಮಾತು ನಿಲ್ಲಿಸಿ ಎಂದು ಸೂಚನೆ ನೀಡಿದರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ, ನೀವು ಈ ರೀತಿ ಮಾತು ನಿಲ್ಲಿಸಿ ಎಂದು ಪದೇ ಪದೇ ಹೇಳುವುದು ಸರಿಯಲ್ಲ. ನಾನು ವಿಪಕ್ಷ ನಾಯಕ ಕೊನೆಗೆ ಬಂದಿದ್ದೇನೆ, ಮಾತನಾಡುತ್ತೇನೆ ಅಂತ ಗುಡುಗಿದರು.

    ಸರಿ, ಸರಿ ಎನ್ನುತ್ತಲೇ ಸ್ಪೀಕರ್, ನೀವು ಇಷ್ಟುದ್ದ ಮಾತನಾಡಬಾರದು ಎಂದು ಹೇಳಿದರು. ಸ್ಪೀಕರ್ ಕಾಗೇರಿ ಅವರನಡೆಯಿಂದ ಗರಂ ಆದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಿದ್ದರಾಮಯ್ಯನವರೇ ಸ್ಪೀಕರ್ ಅವರಿಂದ ಕುಳಿತುಕೊಳ್ಳುವಂತೆ ಆದೇಶ ಬಂದರೇ ಸಾಕು ಕುಳಿತುಬಿಡಿ. ಇದು ಸರಿಯಾದ ವಿಧಾನ ಎಂದು ಕುಟುಕಿದರು.

    ಸ್ಪೀಕರ್ ಚೇರ್‍ಗೆ ನಮ್ರತೆ ಇರುತ್ತದೆ. ನೀವು ಈ ರೀತಿ ಕುಳಿತುಕೊಳ್ಳಿ ಅಂತ ಪದೇ ಪದೇ ಹೇಳುವುದು ಸರಿಯಲ್ಲ ಎಂದು ರಮೇಶ್ ಕುಮಾರ್ ಧ್ವನಿ ಏರಿಸಿದರು. ಆಗ ಕಾಗೇರಿ, ಸ್ಪೀಕರ್ ಸ್ಥಾನದಿಂದ ಬಂದ ಸೂಚನೆಯನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ತಿರುಗೇಟು ನೀಡಿದರು. ವಾಕ್ ಸಮರ ಜೋರಾಗುತ್ತಿದ್ದಂತೆ, ನಾನು ಯಾವತ್ತೂ ಯಾವುದೇ ವಿರೋಧ ಪಕ್ಷದ ನಾಯಕರಿಗೂ ಮಾತು ಮುಗಿಸಿ ಎಂದು ಒತ್ತಾಯ ಮಾಡಿಲ್ಲ ಅಂತ ರಮೇಶ್ ಕುಮಾರ್ ಕುಟುಕಿದರು.

    ಹೌದ.. ಹೌದು.. ಇಲ್ಲಿ ಕುಳಿತವರು ಯಾವ ಸಂದರ್ಭದಲ್ಲಿ ವಿಪಕ್ಷ ನಾಯಕರನ್ನು ಎಷ್ಟು ಬಾರಿ ಹೇಳಿ ಕೂರಿಸಿದ್ದಾರೆ ಎನ್ನುವುದನ್ನು ನಾನು ನೋಡಿದ್ದೇನೆ. ಕೇವಲ ಬುದ್ಧಿವಂತಿಕೆ ಪ್ರದರ್ಶನ ಮಾಡಲಿಕ್ಕೆ ಸ್ಪೀಕರ್ ಚೇರ್ ಇಲ್ಲ. ಇಲ್ಲಿ ಬಂದು ಯಾರು ಎಷ್ಟು ಬುದ್ಧಿವಂತಿಕೆ ತೋರಿದ್ದಾರೆ ಎನ್ನುವುದನ್ನು ನಾನು ನೋಡಿದ್ದೇನೆ ಎಂದು ಕಾಗೇರಿ, ರಮೇಶ್ ಕುಮಾರ್ ಅವರಿಗೆ ಟಾಂಗ್ ಕೊಟ್ಟರು.

    ಈ ಬೆಳವಣಿಗೆಯಿಂದಾಗಿ ಸದನದಲ್ಲಿ ಗಲಾಟೆ ಆರಂಭವಾಯಿತು. ತಕ್ಷಣವೇ ಎದ್ದು ನಿಂತ ಸಚಿವ ಕೆ.ಎಸ್.ಈಶ್ವರಪ್ಪ, ರಮೇಶ್ ಕುಮಾರ್ ಏನು ಹೇಳುತ್ತಾರೋ ಅದೇ ಸರ್ವಶ್ರೇಷ್ಠ. ಅಧ್ಯಕ್ಷ ಸ್ಥಾನದಲ್ಲಿ ಕುಳಿತಾಗ ಒಂದು ಮಾತು, ಕೆಳಗೆ ಕುಳಿತಾಗ ಮತ್ತೊಂದು ಮಾತು ಎಂದು ಕಿಡಿಕಾರಿದರು. ಈ ಮಧ್ಯೆ ಸ್ಪೀಕರ್ ಕಾಗೇರಿ, ಸಿದ್ದರಾಮಯ್ಯನವರೇ ನೀವು ಮಾತು ಮುಂದುವರಿಸಿ, ನನಗೆ ಸಮಯ ಮುಖ್ಯ ಎಂದು ಸೂಚನೆ ನೀಡಿದರು.

    ಅದು ವಿಪಕ್ಷ ಸ್ಥಾನವೇ ಹೊರತು ಸಿದ್ದರಾಮಯ್ಯ ಅಲ್ಲ. ಈ ರೀತಿ ಸಮಯ ಹಾಗೂ ಆಮೇಲೆ ಮಾತನಾಡಿ ಎನ್ನುವುದು ಸರಿಲ್ಲ ಎಂದು ರಮೇಶ್ ಕುಮಾರ್ ಮತ್ತೆ ಗುಡುಗಿದರು. ಇದರಿಂದ ಮತ್ತಷ್ಟು ಕೋಪಗೊಂಡ ಸ್ಪೀಕರ್, ರಮೇಶ್ ಕುಮಾರ್ ಅವರೇ ನೀವು ಅಲ್ಲಿ ಕುಳಿತು ಹೇಳಬೇಡಿ. ನಿಯಮಾವಳಿ ಪುಸ್ತಕ ನನ್ನ ಬಳಿಯೇ ಇದೆ. ಎಲ್ಲವನ್ನೂ ನಿಮಗೆ ಹೇಳಿದ್ದೇನೆ ಅಂತ ಯಾಕೆ ಹೆಗಲು ತಟ್ಟಿಕೊಳ್ಳುತ್ತೀರಿ ಎಂದು ತಿರುಗೇಟು ನೀಡಿದರು.

    ಸಿದ್ದರಾಮಯ್ಯನವರೇ ನೀವು ಮಾತನಾಡಿ. ನೀವು ಒಬ್ಬರೇ 5 ಗಂಟೆಗಳ ಕಾಲ ಮಾತನಾಡಿದರೆ ಉಳಿದವರಿಗೆ ಅವಕಾಶ ಸಿಗುತ್ತಾ? ಮಾತನಾಡಬೇಕು ಎನ್ನುವವರಿಗೆ ಏನು ಹೇಳಲಿ ಎಂದು ಸ್ಪೀಕರ್ ಅಸಮಾಧಾನ ಹೊರ ಹಾಕಿದರು.

  • ನೀವು ಬೇಕಾದರೆ ಮುನಿಯಪ್ಪರನ್ನು ಲವ್ ಮಾಡಿ- ರಮೇಶ್ ಕುಮಾರ್

    ನೀವು ಬೇಕಾದರೆ ಮುನಿಯಪ್ಪರನ್ನು ಲವ್ ಮಾಡಿ- ರಮೇಶ್ ಕುಮಾರ್

    ಬೆಂಗಳೂರು: ಎಚ್. ಮುನಿಯಪ್ಪರನ್ನು ನೀವು ಬೇಕಾದರೆ ಲವ್ ಮಾಡಿ. ಅವರ ಮಾತಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಮೇಶ್ ಕುಮಾರ್ ಕಳ್ಳ ಎಂದು ಮುನಿಯಪ್ಪ ಗರಂ ಆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೌದು ನಾನು ಕಳ್ಳನೇ. ಅವರ ಹೇಳಿಕೆಗಳು, ಆರೋಪಗಳ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಜನರ ಜ್ವಲಂತ ಸಮಸ್ಯೆಗಳು ಸಾಕಾಷ್ಟಿವೆ. ಎಷ್ಟು ದಿನ ಬದುಕಿರ್ತಿನೋ ಗೊತ್ತಿಲ್ಲ, ಇರುವಷ್ಟು ದಿನ ಜನರ ಕೆಲಸ ಮಾಡುತ್ತೇನೆ. ನಾನು ಕಳ್ಳನೇ, ಹೋಗಿ ದೂರು ಕೊಡಲು ಹೇಳಿ ಎಂದು ಗರಂ ಆಗಿದ್ದಾರೆ.

    ಪರ್ಯಾಯ ಕೋಡೋಕೆ ಜನ ರೆಡಿ ಇದ್ದಾರೆ. ಬದಲಾವಣೆ ಮಾಡೋಕೆ ನಾವು (ರಾಜಕಾರಣಿಗಳು) ರೆಡಿ ಇಲ್ಲ. ಯಾವುದೇ ಪಕ್ಷಗಳು ತಯಾರಿಲ್ಲ. ರಾಜಕಾರಣಿಗಳಾದ ನಮಗೆ ಎರಡು ಮುಖಗಳಿವೆ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಕುಸಿದಿದೆ. ನನ್ನ ಹೇಳಿಕೆ ಸಹಿಸದಿದ್ದರೆ ನನ್ನ ಪಾರ್ಟಿ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ರಾಜಕೀಯ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲವೆಂದರೆ ಹೊರಗೆ ಜನರಿಗೆ ಹೇಗೆ ನ್ಯಾಯ ಕೊಡೋಕೆ ಆಗುತ್ತದೆ ಎಂದರು.

    ಕಾಂಗ್ರೆಸ್ ಸಿಡಬ್ಲ್ಯೂಸಿ(ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಅತ್ಯಂತ ಸರ್ವೊಚ್ಛ ಸಮಿತಿ. ಸಿಡಬ್ಲ್ಯೂಸಿ ನಲ್ಲಿ ಚಂದ್ರಶೇಖರ್ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದರು. ಅದು ಚಂದ್ರಶೇಖರ್ ಗುಣವನ್ನ ತೋರಿಸುತ್ತದೆ. ಆದರೆ ಮಾಧ್ಯಮಗಳು ವಿಲನ್‍ರನ್ನ ಹೀರೋ ಮಾಡುತ್ತಾರೆ. ಹೀರೋಗಳನ್ನ ವಿಲನ್ ಮಾಡುತ್ತಾರೆ. ಮಾಧ್ಯಮಗಳಿಗೆ ಅದೇ ಕೆಲಸ, ಬೇರೆ ಕೆಲಸ ಇಲ್ಲ. ನಮ್ಮ ಬಗ್ಗೆ ಏನಾದ್ರೂ ಬರೆದುಕೊಳ್ಳಿ ನಂಗೇನೂ ಚಿಂತೆ ಇಲ್ಲ. ಒಂದು ದಿನ ಓದುತ್ತಾರೆ, ಮರುದಿನ ಎಳೆ ಮಕ್ಕಳು ಇರುತ್ತಾರೆ. ಏನಾಕ್ಕಾದರೂ ಬಳಸಿಕೊಳ್ತಾರೆ ಎಂದು ಇದೇ ವೇಳೆ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.

    ಮುನಿಯಪ್ಪ ಏನು ಹೇಳಿದ್ದರು..?
    ಇತ್ತೀಚೆಗೆ ನಗರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ರೋಷನ್ ಬೇಗ್ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಿ. ನನ್ನನ್ನು ಸೋಲಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ತಂಡದ ವಿರುದ್ಧ ದೂರು ಕೊಟ್ಟರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮುನಿಯಪ್ಪ ಗರಂ ಆಗಿದ್ದರು. ರಮೇಶ್ ಕುಮಾರ್ ರನ್ನ ಪಕ್ಕದಲ್ಲಿ ಕೂರಿಸಿಕೊಂಡು ಮೀಟಿಂಗ್ ಮಾಡುತ್ತೀರಲ್ವ. ಪಕ್ಷದಲ್ಲಿ ಒಬ್ಬೊಬ್ಬರಿಗೆ ಒಂದು ನ್ಯಾಯನಾ ಎಂದು ಪ್ರಶ್ನಿಸಿ ದಿನೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

  • ‘ಸಿದ್ದರಾಮಯ್ಯ ಹೇಳಿದ್ದು ನಿಜ, ಮುನಿಯಪ್ಪರನ್ನ ಸೋಲಿಸಿದ್ದು ನಾನೇ’: ಜೆಡಿಎಸ್ ಶಾಸಕ

    ‘ಸಿದ್ದರಾಮಯ್ಯ ಹೇಳಿದ್ದು ನಿಜ, ಮುನಿಯಪ್ಪರನ್ನ ಸೋಲಿಸಿದ್ದು ನಾನೇ’: ಜೆಡಿಎಸ್ ಶಾಸಕ

    ಕೋಲಾರ: ಕಾಂಗ್ರೆಸ್ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯರ ವಿರುದ್ಧ ಮಾಜಿ ಸಂಸದ ಮುನಿಯಪ್ಪ ಅವರು ಕೆಂಡಕಾರಿದ್ದು, ಇದರ ಬೆನ್ನಲ್ಲೇ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅವರು ಮುನಿಯಪ್ಪ ಸೋಲಿಗೆ ನಾನೇ ಕಾರಣ ಎಂದು ಹೇಳಿದ್ದಾರೆ.

    ನಿನ್ನೆಯಷ್ಟೇ ಸಿದ್ದರಾಮಯ್ಯ ಅವರು ಮುನಿಯಪ್ಪ ಸೋಲಿಗೆ ಕಾರಣ ಶಾಸಕ ಶ್ರೀನಿವಾಸ್ ಗೌಡ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕರು, ನಾನೇ ಹದ್ದಾಗಿ ಕುಕ್ಕಿ ಮುನಿಯಪ್ಪ ಅವರನ್ನು ಸೋಲಿಸಿದ್ದೇನೆ. ಕೋಲಾರದಲ್ಲಿ ಮುನಿಯಪ್ಪ ಸೋಲಿಗೆ ನಾನೇ ಕಾರಣನಾಗಿದ್ದು, ನನ್ನನ್ನು 2 ಬಾರಿ ಚುನಾವಣೆಯಲ್ಲಿ ಸೋಲಿಸಿದ್ದರು. ಆದ್ದರಿಂದಲೇ ನಾನು ಅವರನ್ನು ಸೋಲಿಸಿದ್ದೇನೆ. ಮುನಿಯಪ್ಪಗೂ ಸೋಲು ಹೇಗಿರುತ್ತದೆ ಎಂದು ತೋರಿಸಲು ಎಷ್ಟು ಪ್ರಯತ್ನ ಮಾಡಬೇಕೋ ಅಷ್ಟೂ ಮಾಡಿದ್ದೇ ಎಂದು ಹೇಳಿದರು. ಇದನ್ನು ಓದಿ: ನಾನು ರಿಸೈನ್ ಮಾಡ್ತೀನಿ, ಯಾರು ಬೇಕಾದ್ರೂ ಅಧ್ಯಕ್ಷರಾಗಿ- ದಿನೇಶ್ ಗುಂಡೂರಾವ್

    ಇದೇ ವೇಳೆ ಮಾಜಿ ಸಿಎಂ ಎಚ್‍ಡಿಕೆ ಅವರು ಮುನಿಯಪ್ಪ ಸೋಲಿಗೆ ಜೆಡಿಎಸ್ ಶಾಸಕರು ಕಾರಣವಲ್ಲ ಎಂದಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನೇ ಮುನಿಯಪ್ಪರ ಸೋಲಿಗೆ ಕಾರಣ ಎಂದು ಹೇಳುತ್ತಿದ್ದೇನೆ. ನಮ್ಮ ವರಿಷ್ಠರು ಯಾವ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಕೆಎಚ್ ಮುನಿಯಪ್ಪ ಅವರು ಸೋಲಿಗೆ ನಾನೇ ಕಾರಣ ಎಂದು ಹೇಳಲು ಯಾವುದೇ ಭಯ, ಭಕ್ತಿ ಇಲ್ಲ. ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕುಗಳಲ್ಲಿಯೂ ಅವರ ವಿರುದ್ಧ ಪ್ರಚಾರ ಮಾಡಿದ್ದೇನೆ ಎಂದರು. ಇದನ್ನು ಓದಿ: ‘ಹೋಗೋಲೋ ಸಿದ್ದರಾಮಯ್ಯ’ – ಸಿದ್ದು ವಿರುದ್ಧ ಮುನಿಯಪ್ಪ ಏಕವಚನದಲ್ಲೇ ಗರಂ

    ಸಿದ್ದರಾಮಯ್ಯ ಹಾಗೂ ಎಚ್‍ಡಿಕೆ ನಡುವಿನ ಮಾತಿನ ಸಮಯದಲ್ಲಿ ಕೆ.ಎಚ್ ಮುನಿಯಪ್ಪ ಅವರನ್ನು ರಮೇಶ್ ಕುಮಾರ್ ಹದ್ದಾಗಿ ಕುಕ್ಕಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಅವರು, ಹಾಗಾದರೆ ಶ್ರೀನಿವಾಸ್ ಗೌಡ ಹದ್ದಾಗಿ ಕುಕ್ಕಿಲ್ವ ಎಂದು ಟಾಂಗ್ ನೀಡಿದ್ದರು.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಮುನಿಯಪ್ಪ ಅವರ ಪುತ್ರಿ, ಶಾಸಕಿ ರೂಪಕಲಾ ಅವರು, ಸತತ 35 ವರ್ಷಗಳಿಂದ ಪಕ್ಷ ಕಟ್ಟುವ ಕಾರ್ಯವನ್ನು ನಮ್ಮ ತಂದೆಯಾವರು ಮಾಡಿದ್ದಾರೆ. ಆದರೆ ಇಂದಿನ ಸಭೆಯಲ್ಲಿ ಏನು ನಡೆದಿದೆ ಎಂಬ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಆದರೆ ಕಳೆದ ಚುನಾವಣೆಯಲ್ಲಿ ಅವರಿಗೆ ಉಂಟಾದ ನೋವಿನ ಬಗ್ಗೆ ಪಕ್ಷದ ವೇದಿಕೆಯಲ್ಲಿ ತಮ್ಮದೇ ರೀತಿಯಲ್ಲಿ ಮಾತನಾಡಿರಬಹುದು ಎಂದು ಹೇಳಿದರು. ಇದನ್ನು ಓದಿ: ಮುನಿಯಪ್ಪಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗಿಲ್ಲ: ರಮೇಶ್ ಕುಮಾರ್ ವ್ಯಂಗ್ಯ

  • ಸಿದ್ದರಾಮಯ್ಯ ಮಾಡದ ತಪ್ಪಿಗೆ ನೋವು ಅನುಭವಿಸಿದ್ದಾರೆ: ರಮೇಶ್ ಕುಮಾರ್

    ಸಿದ್ದರಾಮಯ್ಯ ಮಾಡದ ತಪ್ಪಿಗೆ ನೋವು ಅನುಭವಿಸಿದ್ದಾರೆ: ರಮೇಶ್ ಕುಮಾರ್

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಗನನ್ನು ಕಳೆದುಕೊಂಡ ನೋವಿಗಿಂತ, ತಾವು ಮಾಡದೇ ಇರುವ ತಪ್ಪಿಗೆ ಹೆಚ್ಚು ನೋವು ಅನುಭವಿಸಿದ್ದಾರೆ ಎಂದು ಶಾಸಕ ರಮೇಶ್ ಕುಮಾರ್ ಹೇಳಿದ್ದಾರೆ.

    ಸಿದ್ದರಾಮಯ್ಯ ಅವರ ಆಡಳಿತ ಅಂತರಂಗ ಬಹಿರಂಗ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗೆ ಬಂದ ಮಗ ಕಣ್ಮುಂದೆ ಸಾವು, ಜನರಿಗೆ ಇನ್ನಷ್ಟು ಉತ್ತಮ ಕೆಲಸ ಮಾಡಬೇಕು ಅಂದುಕೊಂಡಾಗ ಸೋಲು. ಈ ಸೋಲಿನಿಂದ ಆ ಜೀವ ಎಷ್ಟು ಪರಿತಪಿಸಿರಬಹುದು. ಅವಿಭಕ್ತ ಕುಟುಂಬದಲ್ಲಿ ಆದ ಸಣ್ಣ ಗಲಾಟೆ ಕುಟುಂಬ ಒಡೆಯಿತು. ಅದೇ ರೀತಿ ಕಾಂಗ್ರೆಸ್‍ನಲ್ಲಿ ಆದ ಬೆಳವಣಿಗೆಗಳಿಂದ ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿಗೆ ಬರಬೇಕಾಯಿತು. ಮಾಡದ ತಪ್ಪಿಗೆ ಅವರು ನೋವು ಅನುಭವಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರ ಪರಿಸ್ಥಿತಿ ತಿಳಿಸಿ ದುಃಖಿಸಿದರು.

    2018ರಲ್ಲಿ ಕಾಂಗ್ರೆಸ್ ಸೋಲುವುದಕ್ಕೆ ಕಾಂಗ್ರೆಸ್ ಒಳಜಗಳವೇ ಕಾರಣ. ದೇವರಾಜು ಅರಸು ಬಂದ ಬಳಿಕ ಭ್ರಷ್ಟಾಚಾರ ಜಾಸ್ತಿ ಆಯ್ತು ಎಂದು ಹೇಳಿದರು. ಯಾಕೆಂದರೆ ಅವರನ್ನ ಸಮರ್ಥಿಸಿಕೊಳ್ಳುವವರು ಯಾರು ಇರಲಿಲ್ಲ. ಹಾಗೆಯೇ ಸಿದ್ದರಾಮಯ್ಯ ಅವರಿಗೂ ಅದೇ ಪರಿಸ್ಥಿತಿ ಆಗಿದೆ. ಇವರಿಬ್ಬರಿಗಿಂತ ಮೊದಲು ಬಂದವರು ಬಹಳ ಹಣ ತಿಂದರು. ಅವರಿಗೆ ಸಮರ್ಥಿಸಿಕೊಳ್ಳಲು ಜನರಿದ್ದರು ಎಂದರು.

    ನೀವು ನೋಡಿರುವುದು ಬಹಿರಂಗ ಆದರೆ ಒಳಗೆ ಕೈ, ಕಾಲು ಹಿಡಿದುಕೊಂಡು ನಮ್ಮನ್ನ ಬದುಕಿಸಿ ಎಂದು ಸಹಿ ಹಾಕಿಸಿರುತ್ತಾರೆ, ಅದು ಅಂತರಂಗ. ಇದರ ಬಗ್ಗೆ ಪುಸ್ತಕದಲ್ಲಿ ಬರೆದಿಲ್ಲ, ಇದು ಸಿದ್ದರಾಮಯ್ಯ ಅವರೇ ಬರೆಯಲು ಸಾಧ್ಯ. ಹೀಗಾಗಿ ಟೈಟಲ್ ಕೊಟ್ಟಿರುವುದು ಸರಿಯಲ್ಲ ಎಂದು ಪುಸ್ತಕದ ಬಗ್ಗೆ ಅಭಿಪ್ರಾಯ ತಿಳಿಸಿದರು.

    ಕೋಲಾರಕ್ಕೆ ಬನ್ನಿ ಎಂದು ನಾನು, ನಜೀರ್ ಅಹಮದ್ ಸಿದ್ದರಾಮಯ್ಯ ಅವರನ್ನು ಬೇಡಿಕೊಂಡಿದ್ದೆವು. ತನ್ನ ಕ್ಷೇತ್ರ ಬಿಟ್ಟು ಬರಬಾರದು ಎಂದು ಅವರು ಬರಲಿಲ್ಲ. ಕೆಲವರು ಬಿಟ್ಟಿಲ್ಲವಾ ಕ್ಷೇತ್ರವನ್ನ? ಅವರಿಗಿಲ್ಲದು ನಿಮಗೆ ಬೇಕಾ? ಚಾಮುಂಡೇಶ್ವರಿ ಸೋಲಿನಿಂದ ಹೊರಬನ್ನಿ. ನೀವೇ ಸಾಕಿದ ಗಿಣಿ ನಿಮಗೆ ಕುಕ್ಕಿದೆ ಎಂದು ಹಾಡು ಹೇಳಿ, ಅನರ್ಹ ಶಾಸಕರು ಕೇಳಿದ್ದೆಲ್ಲ ಕೊಟ್ಟಿರಿ, ಆದರೆ ಅವರು ನಿಮಗೆ ಕುಕ್ಕಿ ಹೋಗಿದ್ದಾರೆ. ಆದ್ದರಿಂದ ನಿಮ್ಮ ಮುಖದ ಮೇಲೆ ಗಾಯ ಆಗಿದೆ. ಅದನ್ನ ಹೊಗಲಾಡಿಸಬೇಕಿದೆ ಎಂದು ಅನರ್ಹ ಶಾಸಕರ ವಿರುದ್ಧ ರಮೇಶ್ ಕುಮಾರ್ ಕಿಡಿಕಾರಿದರು.

  • ರಾಷ್ಟ್ರಪತಿಗಳಿಂದ ತುಘಲಕ್ ದರ್ಬಾರ್: ರೇಣುಕಾಚಾರ್ಯ ಎಡವಟ್ಟು

    ರಾಷ್ಟ್ರಪತಿಗಳಿಂದ ತುಘಲಕ್ ದರ್ಬಾರ್: ರೇಣುಕಾಚಾರ್ಯ ಎಡವಟ್ಟು

    – ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ
    – ಅಹರ್ನ ಶಾಸಕರ ಬಗ್ಗೆ ಗೌರವ, ವಿಶ್ವಾಸವಿದೆ

    ದಾವಣಗೆರೆ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ರಾಷ್ಟ್ರಪತಿಗಳು ತುಘಲಕ್ ದರ್ಬಾರ್ ನಡೆಸಿದರು ಎಂದು ಎಡವಟ್ಟು ಮಾಡಿಕೊಂಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ತಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಅಂತ ಅಸಮಾಧಾನದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್‍ನ 17 ಜನ ಶಾಸಕರು ರಾಜೀನಾಮೆ ನೀಡಿದರು. ಸುಪ್ರೀಂಕೋರ್ಟ್ ಇದನ್ನು ಎತ್ತಿ ಹಿಡಿದಿದೆ. ಆದರೆ ರಾಜೀನಾಮೆಯನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸದೆ ಕಾಂಗ್ರೆಸ್ ಏಜೆಂಟ್‍ರಂತೆ ವರ್ತಿಸಿ ಶಾಸಕರನ್ನು ಅನರ್ಹಗೊಳಿಸಿದರು. ಆದರೆ ನಾನು ಮಾತ್ರ ಅವರನ್ನು ಅನರ್ಹರು ಅಂತ ಕರೆಯುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ಕುಚು-ಕುಚು ಮಾಡಿ ಅಧಿಕಾರಕ್ಕೆ ಬಂದಿತ್ತು

    ಬಿಜೆಪಿಗೆ ಸಂಘಟನೆ ಹಾಗೂ ಚುನಾವಣೆ ಹೊಸದೇನಲ್ಲ. ಪಕ್ಷದ ಸಂಘಟನೆ ಯಾವತ್ತೂ ನಿಂತ ನೀರಲ್ಲ. ಚುನಾವಣೆ ಈಗಾಗಲೇ ಘೋಷಣೆಯಾಗಿದೆ. ಉಪಚುನಾವಣೆಯ 15 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷ ತೀರ್ಮಾನ ಮಾಡುತ್ತದೆ. ಈ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುತ್ತದೆ. ಜನರು ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಅನರ್ಹ ಶಾಸಕರ ಬಗ್ಗೆ ವಿಶ್ವಾಸ, ಗೌರವ ಇದೆ. 17 ಜನ ರಾಜೀನಾಮೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಆದರೂ ಮಾಜಿ ಸ್ಪೀಕರ್ ತುಘಲಕ್ ದರ್ಬಾರ್ ನಡೆಸಿ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಶಾಸಕರ ಪರ ತೀರ್ಪು ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

    ಎಚ್‍ಡಿಕೆ ಲಾಟರಿ ಸಿಎಂ:
    ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬ ರಾಜಕಾರಣ ಮುಗಿದ ಅಧ್ಯಾಯ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಲಾಟರಿ ಮುಖ್ಯಮಂತ್ರಿ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳನ್ನು ರಾಜ್ಯದ ಜನರು ತಿರಸ್ಕರಿಸಿದ್ದಾರೆ. ಹೀಗಾಗಿ ಉಪ ಚುನಾವಣೆಯಲ್ಲಿಯೂ ಎರಡು ಪಕ್ಷಗಳ ಅಭ್ಯರ್ಥಿಗಳನ್ನು ಮತದಾರರು ಕೈಬಿಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.

  • ನಾವು ಅನರ್ಹರೂ ಅಲ್ಲ, ಅನಾಥರೂ ಅಲ್ಲ: ಶಿವರಾಮ್ ಹೆಬ್ಬಾರ್

    ನಾವು ಅನರ್ಹರೂ ಅಲ್ಲ, ಅನಾಥರೂ ಅಲ್ಲ: ಶಿವರಾಮ್ ಹೆಬ್ಬಾರ್

    ಕಾರವಾರ: ಅನರ್ಹ ಶಾಸಕರು ಹತಾಶರಾಗಿದ್ದಾರೆ ಎನ್ನುವುದು ಕೇವಲ ಊಹಾಪೋಹ. ನಾವು ಅನರ್ಹರೂ ಅಲ್ಲ, ಅನಾಥರೂ ಅಲ್ಲ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು.

    ಶಿರಸಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸ್ವಯಂ ಘೋಷಿತ ಬುದ್ಧಿವಂತ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ರಾಜಕೀಯ ದ್ವೇಷ ಪ್ರೇರಿತರಾಗಿ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಅವರು ಮನಸ್ಸಿಗೆ ಬಂದಂತೆ ನಿರ್ಣಯ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ಹಾಗೂ ಮುಖಂಡರ ಒತ್ತಡಕ್ಕೆ ಒಳಗಾಗಿ ಅಥವಾ ಅವರ ಓಲೈಕೆಗಾಗಿ ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಅತೃಪ್ತ 15 ಜನ ಶಾಸಕರು ಸದನಕ್ಕೆ ಹಾಜರಾಗಬಹುದು, ಇಲ್ಲವೇ ಹಾಜರಾಗದೇ ಇರಬಹುದು. ಇದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಆದರೂ ರಮೇಶ್ ಕುಮಾರ್ ಅವರು ನಾವು ಸದನಕ್ಕೆ ಹಾಜರಾಗಿಲ್ಲವೆಂದು ಅನರ್ಹಗೊಳಿಸಿದ್ದಾರೆ. ಇದು ರಾಜಕೀಯ ದ್ವೇಷ ಪ್ರೇರಿತ ನಿರ್ಣಯವಾಗಿದೆ ಎಂದು ಆರೋಪಿಸಿದರು.

    ಉತ್ತರ ಕನ್ನಡ ಜಿಲ್ಲೆಯಿಂದ ನಾನೊಬ್ಬನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆಯಿದೆ. ನಾವು ಎಲ್ಲಿಯೂ ಬಿಜೆಪಿ ಸೇರುತ್ತೇವೆ ಅಂತ ಹೇಳಿಕೆ ನೀಡಿಲ್ಲ. ಮೈತ್ರಿಯಿಂದ ಮೋಸಕ್ಕೆ ಒಳಗಾಗಿರುವ ಕಾರಣ ರಾಜೀನಾಮೆ ನೀಡಿದ್ದೇವೆ. ನ್ಯಾಯಾಲಯದ ಅಂತಿಮ ನಿರ್ಣಯ ಬಂದ ಮೇಲೆ ನಾವೆಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಜೊತೆಗೆ ಕಾಂಗ್ರೆಸ್ ನಾಯಕರ ಒತ್ತಡವನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.

  • ಎದೆಯಲ್ಲಿದ್ದ ಸಿದ್ದರಾಮಯ್ಯರನ್ನ ಎತ್ತಿ ಸೈಡಿಗಿಟ್ಟಿದ್ದೀನಿ: ಎಂಟಿಬಿ ನಾಗರಾಜ್

    ಎದೆಯಲ್ಲಿದ್ದ ಸಿದ್ದರಾಮಯ್ಯರನ್ನ ಎತ್ತಿ ಸೈಡಿಗಿಟ್ಟಿದ್ದೀನಿ: ಎಂಟಿಬಿ ನಾಗರಾಜ್

    ಬೆಂಗಳೂರು: ಅವತ್ತು ಎದೆ ಬಗೆದರೆ ಸಿದ್ದರಾಮಯ್ಯ ಇದ್ದಾರೆ ಅಂತ ಹೇಳಿದ್ದು ನಿಜ. ಆದರೆ ಈಗ ಸಿದ್ದರಾಮಯ್ಯರನ್ನ ಎತ್ತಿ ಸೈಡಿಗಿಟ್ಟಿದ್ದೇನೆ ಎಂದು ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್ ತಮ್ಮ ಹಳೆಯ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

    ಅನರ್ಹಗೊಂಡಿರುವ ಶಾಸಕರು ಇಂದು ಸಭೆ ನಡೆಸಿದ್ದರು. ಸಭೆಯ ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್, ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ನಡೆಸಲಾಯ್ತು. ಅನರ್ಹತೆ ಪ್ರಕರಣ ನ್ಯಾಯಾಲಯದಲ್ಲಿದ್ದು, ಅದರ ಬಗ್ಗೆ ಮಾತನಾಡಿದ್ದೇವೆ. ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ ಮೊದಲು ರಮೇಶ್ ಕುಮಾರ್ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಬೇಕು ಎಂದು ಆಗ್ರಹಿಸಿದರು.

    ಕಳೆದ ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪನವರು ತಮ್ಮ ಸೋಲಿಗೆ ರಮೇಶ್ ಕುಮಾರ್ ಎಂದು ಹೈಕಮಾಂಡ್‍ಗೆ ವರದಿ ನೀಡಿದ್ದಾರೆ. ಹಾಗಾಗಿ ಮೊದಲು ಕಾಂಗ್ರೆಸ್ ರಮೇಶ್ ಕುಮಾರ್ ಅವರನ್ನು ಉಚ್ಛಾಟನೆಗೊಳಿಸಬೇಕಿದೆ. ರಮೇಶ್ ಕುಮಾರ್ ಪಾರ್ಟಿಗೆ ಮೋಸ ಮಾಡಿದ್ದಾರೆ. ಮುನಿಯಪ್ಪವರನ್ನು ಸೋಲಿಸಿದವರನ್ನು ಪಕ್ಷದಲ್ಲಿ ಯಾಕೆ ಇಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರನ್ನು ಎಂಟಿಬಿ ಪ್ರಶ್ನೆ ಮಾಡಿದರು.

    ಮೊದಲು ಎದೆ ಬಗೆದರೆ ಸಿದ್ದರಾಮಯ್ಯ ಇದ್ದಾರೆ ಎಂದು ಹೇಳಿದ್ದು ನಿಜ. ಇದೀಗ ಅವರನ್ನು ಆ ಸ್ಥಳದಿಂದ ಎತ್ತಿ ಪಕ್ಕದಲ್ಲಿ ಇಟ್ಟಿದ್ದೇನೆ. ಹೃದಯದಲ್ಲಿ ಮತ ನೀಡುವ ಮತದಾರರಿದ್ದಾರೆ. ಸಿದ್ದರಾಮಯ್ಯ ಜಾಗಕ್ಕೆ ಯಾರು ಬಂದಿಲ್ಲ ಎಂದು ಹೇಳಿದರು.

  • ಮಾನ ಮರ್ಯಾದೆ ಇದ್ರೆ ಕಾಂಗ್ರೆಸ್ ಕಚೇರಿಗೆ ಕಾಲಿಡ್ಬಾರ್ದು: ಮುನಿಯಪ್ಪ ಆಕ್ರೋಶ

    ಮಾನ ಮರ್ಯಾದೆ ಇದ್ರೆ ಕಾಂಗ್ರೆಸ್ ಕಚೇರಿಗೆ ಕಾಲಿಡ್ಬಾರ್ದು: ಮುನಿಯಪ್ಪ ಆಕ್ರೋಶ

    ಕೋಲಾರ: ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಾನ ಮರ್ಯಾದೆ ಇದ್ದರೆ ಅವರು ಕಾಂಗ್ರೆಸ್ ಕಚೇರಿಗೆ ಕಾಲಿಡಬಾರದು ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಅವರಿಗೆಲ್ಲಾ ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಕಾಲಿಡಬಾರದು. ಇದನ್ನು ನಾನು ಗಂಭಿರವಾಗಿಯೇ ಪರಿಗಣಿಸಿ ಹೇಳುತ್ತಿದ್ದೇನೆ ಎಂದು ಕಿಡಿಕಾರಿದರು.

    ಕಾಂಗ್ರೆಸ್ಸಿನಲ್ಲಿ ಇದ್ದುಕೊಂಡೆ ಬಿಜೆಪಿಗೆ ಬೆಂಬಲಿಸಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದೇನೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ನಾರಾಯಣಸ್ವಾಮಿ, ವಿ. ಮುನಿಯಪ್ಪ, ಎಚ್.ನಾಗೇಶ್, ನಜೀರ್ ಅಹ್ಮದ್ ವಿರುದ್ಧ ಹೈ ಕಮಾಂಡ್‍ಗೆ ದೂರು ನೀಡಲಾಗಿದೆ. ಅದರಂತೆ ಇಂದಿನ ಸತ್ಯ ಶೋಧನ ಸಮಿತಿಗೂ ದೂರು ನೀಡಿದ್ದೇನೆ ಎಂದು ತಿಳಿಸಿದರು.

    ಕಾಂಗ್ರೆಸ್ಸಿಗೆ ದ್ರೋಹ ಮಾಡಿದ ಜನ ಪಕ್ಷಕ್ಕೆ ಬೇಡ. ಮೈತ್ರಿ ಸರ್ಕಾರ ರಚಿಸಲು ಜನತಾ ದಳ ಕೂಡ ನಮ್ಮ ಜೊತೆ ನಿಂತರು, ಆದರೆ ಎರಡು ಪಕ್ಷದ ಕಾರ್ಯಕರ್ತರು ಒಂದಾಗಲಿಲ್ಲ. ಇದರ ಪರಿಣಾಮವಾಗಿ ಎಂದಿಗೂ ಸಂಸತ್ತಿನಲ್ಲಿ ಇಲ್ಲದ ಪರಿಸ್ಥಿತಿಯನ್ನು ಇಂದು ನೋಡಬೇಕಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಶಾಸಕರು, ನಾಯಕರು ಮಾಡಿರುವ ತಪ್ಪು ಕೆಲಸಕ್ಕೆ ಕ್ರಮ ಕೈಗೊಳ್ಳಲೇಬೇಕು. ಅದು ಪಕ್ಷದ ಜವಾಬ್ದಾರಿ, ಶಿಸ್ತಿನ ಸಿಪಾಯಿಗಳಂತೆ ನಮಗೆ ಬೆಂಬಲಿಸಿದ ಜನರಿಗೆ ನಾವು ಗೌರವ ನೀಡಬೇಕು. ಮತ್ತೆ ಕಾಂಗ್ರೆಸ್ಸನ್ನು ನಾವು ಕಟ್ಟಬೇಕಿದೆ ಎಂದು ಹೇಳಿದರು.

  • ಯತ್ನಾಳ್‍ಗೆ ಭಗವಂತ ತಿದ್ದಿಕೊಳ್ಳುವ ಬುದ್ಧಿ ನೀಡಲಿ – ಈಶ್ವರಪ್ಪ ಕಿಡಿ

    ಯತ್ನಾಳ್‍ಗೆ ಭಗವಂತ ತಿದ್ದಿಕೊಳ್ಳುವ ಬುದ್ಧಿ ನೀಡಲಿ – ಈಶ್ವರಪ್ಪ ಕಿಡಿ

    ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಕೇಳಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವ ಅವಶ್ಯಕತೆ ಇಲ್ಲ ಎಂದು ಬಸನ ಗೌಡ ಯತ್ನಾಳ್ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ನೇಮಕ ವಿರುದ್ಧ ಯತ್ನಾಳ್ ಟೀಕಿಸಿದ ಹಿನ್ನೆಲೆ ಇಂದು ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ಕಿಡಿ ಕಾರಿದ್ದಾರೆ. ಪಕ್ಷದಲ್ಲೆ ಇದ್ದುಕೊಂಡು ಈ ರೀತಿ ಹೇಳುವುದು ಒಳ್ಳೆಯದಲ್ಲ ಎಂದು ಯತ್ನಾಳ್ ಮುಖಕ್ಕೆ ಹಲವು ಬಾರಿ ಹೇಳಿದ್ದೇನೆ. ಭಗವಂತ ಅವರಿಗೆ ತಿದ್ದಿಕೊಳ್ಳುವ ಬುದ್ಧಿ ಕೊಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಯಾರು ಯಾರಿಗೆ ಬೇಕಾದರೂ ಗಡುವು ಕೊಡುವ ಅಧಿಕಾರ ಇದೆ. ವ್ಯಕ್ತಿ ಸ್ವಾತಂತ್ರ್ಯ ನಮ್ಮ ದೇಶದಲ್ಲೇ ತುಂಬಾ ಇದೆ ಎಂದು ಅಸಮಾಧಾನಗೊಂಡ ಬಿಜೆಪಿ ಶಾಸಕರಿಗೆ ಈಶ್ವರಪ್ಪ ಟಾಂಗ್ ನೀಡಿದರು.

    ಬಾಲಚಂದ್ರ ಜಾರಕಿಹೊಳಿ ಯಾವುದೇ ಕಾರಣಕ್ಕೂ ಸರ್ಕಾರ ಬೀಳಿಸುವುದಿಲ್ಲ. ಕುಟುಂಬದಲ್ಲಿ ಅನೇಕ ಸಮಸ್ಯೆಗಳು ಬಂದಾಗ ಅದನ್ನು ಹೊರ ಹಾಕುವುದು ತಪ್ಪಲ್ಲ. ಇದರಿಂದ ನಮ್ಮ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ತೊಂದರೆ ಆಗುವುದಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದರು.

    ಅನರ್ಹ ಶಾಸಕರು ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅನರ್ಹ ಶಾಸಕರಿಗೆ ದ್ರೋಹ ಮಾಡುವುದಿಲ್ಲ. ಅವರಿಗೂ ನಾವು ನ್ಯಾಯ ನೀಡುತ್ತೇವೆ. ರಮೇಶ್ ಕುಮಾರ್ ಅವರು ಒಬ್ಬ ಸಂವಿಧಾನ ತಜ್ಞ. ಅಂಬೇಡ್ಕರ್ ಬಿಟ್ಟರೆ ರಮೇಶ್ ಕುಮಾರ್ ಅವರೇ ಎರಡನೇ ಅಂಬೇಡ್ಕರ್. ರಮೇಶ್ ಕುಮಾರ್ ಕಾಂಗ್ರೆಸ್ ಏಜೆಂಟ್‍ರಂತೆ ವರ್ತಿಸಿ, ಸಭಾಧ್ಯಕ್ಷ ಸ್ಥಾನವನ್ನು ದುರುಪಯೋಗ ಮಾಡಿಕೊಂಡರು ಎಂದು ಹರಿಹಾಯ್ದರು.

  • ಸತ್ಯ ಹರಿಶ್ಚಂದ್ರನಂತೆ ಮಾತನಾಡೋ ನೀವು ಯಾಕೆ ಬೇರೆ ಪಕ್ಷಕ್ಕೆ ಹೋದ್ರಿ: ರಮೇಶ್ ಕುಮಾರ್‌ಗೆ ಸುಧಾಕರ್ ಪ್ರಶ್ನೆ

    ಸತ್ಯ ಹರಿಶ್ಚಂದ್ರನಂತೆ ಮಾತನಾಡೋ ನೀವು ಯಾಕೆ ಬೇರೆ ಪಕ್ಷಕ್ಕೆ ಹೋದ್ರಿ: ರಮೇಶ್ ಕುಮಾರ್‌ಗೆ ಸುಧಾಕರ್ ಪ್ರಶ್ನೆ

    – ಮಾಜಿ ಸಚಿವ ಶಿವಶಂಕರರೆಡ್ಡಿ ವಿರುದ್ಧವೂ ವಾಗ್ದಾಳಿ

    ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರ ವಿರುದ್ಧ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ. ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್ ಅವರು, ರಮೇಶ್ ಕುಮಾರ್ ಅವರನ್ನು ನಾನು ಸ್ವಾಮಿ ಅಂತ ದೇವರ ಭಾವನೆಯಿಂದ ಕರೆಯುತ್ತಿದ್ದೆ. ಸತ್ಯ ಹರಿಶ್ಚಂದ್ರನಂತೆ ಮಾತನಾಡುವ ರಮೇಶ್ ಕುಮಾರ್ ಅವರೇ ಮಾಜಿ ಸಿಎಂ ದೇವರಾಜು ಅರಸು ಅವರ ಜೊತೆಯಲ್ಲಿದ್ದ ನೀವು ರಾಮಕೃಷ್ಣ ಹೆಗೆಡೆ ಜೊತೆ ಯಾಕೆ ಸೇರಿಕೊಂಡಿರಿ? ನಂತರ ರಾಮಕೃಷ್ಣ ಹೆಗಡೆ ಅವರಿಂದ ಎಚ್.ಡಿ.ದೇವೇಗೌಡರ ಬಳಿ ಯಾಕೆ ಹೋದ್ರಿ? ನಿಮ್ಮನ್ನು 5 ವರ್ಷ ಸ್ಪೀಕರ್ ಆಗಿ ನೇಮಕ ಮಾಡಿದ್ದ ಎಚ್.ಡಿ.ದೇವೇಗೌಡರಿಗೆ ಕೈ ಕೊಟ್ಟು ಕೊನೆಗೆ ಕೆ.ಎಚ್.ಮುನಿಯಪ್ಪ ಹಾಗೂ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಯಾಕೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿರಿ? ಇದು ಪಕ್ಷಾಂತರ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ನೈತಿಕತೆ, ಪಾರದರ್ಶಕತೆ, ಧರ್ಮದ ಬಗ್ಗೆ ಸತ್ಯ ಹರಿಶ್ಚಂದ್ರನಂತೆ ಮಾತನಾಡುವ ನೀವು ಯಾಕೆ ಬೇರೆ ಪಕ್ಷಕ್ಕೆ ಹೋದ್ರಿ ಅಂತ ಹೇಳಿ. ವ್ಯಾಪಾರ ಎಂದು ಆರೋಪಿಸಿರುವ ನೀವು ಈ ಹಿಂದೆ ಮಾಡಿರೋದು ಏನು? ಸದನದಲ್ಲಿ ಹದ್ದುಗಳು ಅಂತ ಕರೆದ್ರಲ್ಲಾ ನೀವು ಯಾರು? ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನಿಮಗೆ ಮಂತ್ರಿ ಸ್ಥಾನ ಕೊಡಲಿಲ್ಲ ಅಂತ ನೀವು ಹೇಗೆ ನಡೆದುಕೊಂಡ್ರಿ? ಅಧಿಕೃತ ವಿರೋಧ ಪಕ್ಷದವರ ತರ ಮಾತನಾಡುತ್ತಿದ್ರಲ್ಲಾ ಮಿನಿಸ್ಟರ್ ಪೋಸ್ಟ್ ಕೊಟ್ಟ ಮೇಲೆ ಸೈಲೆಂಟ್ ಆಗಿದ್ದು ಯಾಕೆ? ಅಧಿಕಾರ ಇಲ್ಲದಾಗ ಒಂದು ರೀತಿ. ಇರುವಾಗ ಮತ್ತೊಂದು ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಕಿಡಿಕಾರಿದರು.

    ನೈತಿಕತೆ ಇದ್ದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಜೀನಾಮೆ ಕೊಡಿ ಎಂದು ಗೌರಿಬಿದನೂರು ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ಅವರು, ಅನರ್ಹ ಶಾಸಕ ಸುಧಾಕರ್ ಅವರಿಗೆ ಆಗ್ರಹಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುಧಾಕರ್ ಅವರು, ನನ್ನ ಶಾಸಕ ಸ್ಥಾನದ ಬೆಂಬಲದಿಂದಲೇ ಶಿವಶಂಕರರೆಡ್ಡಿ ಅವರು 14 ತಿಂಗಳು ಮಂತ್ರಿಯಾಗಿ ಅಧಿಕಾರ ಅನುಭವಿಸಿದರು. ಅವರು ಮಂತ್ರಿ ಆಗುವುದಕ್ಕೆ ನನ್ನ ಪಾಲು ಇದೆ. ಹೀಗಾಗಿ ನಾನು ಪಿಸಿಬಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಕೆಲವೇ ದಿನಗಳು ಕಳೆದಿವೆ. ಸಮಯ ಬಂದಾಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

    ಗೌರಿಬಿದನೂರು ಕ್ಷೇತ್ರದಲ್ಲಿ ಏನೆಲ್ಲಾ ನಡೆಯುತ್ತಿದೆ ಅಂತ ನನಗೆ ಗೊತ್ತಿದೆ. ನಿಮ್ಮ ಗುರುಗಳು, ತಂದೆ ಸಮಾನರಾದ ದಿವಂಗತ ಅಶ್ವತ್ಥರಾಯಣರೆರಡ್ಡಿ ಅವರ ವಿರುದ್ಧವೇ ಸ್ಫರ್ಧಿಸಿ ಸೋಲಿಸಿದರಲ್ಲಾ ಆಗ ಎಲ್ಲಿ ಹೋಗಿತ್ತು ನಿಮ್ಮ ನೈತಿಕತೆ? ಎಸಿಸಿ ಕಾರ್ಖಾನೆಯ ಜೊತೆ ನಿಮ್ಮ ಒಂಡಬಂಡಿಕೆ ಏನು ಅಂತ ಗೊತ್ತಿದೆ. ಎಸಿಸಿ ಸಿಮೆಂಟ್ ಕಾರ್ಖಾನೆಗೆ ಬೇಕಾಗುವ ಚೀಲ ತಯಾರಿಕಾ ಕಾರ್ಖಾನೆಯನ್ನು ನಿಮ್ಮ ಮಗ ಆರಂಭಿಸಿರುವುದು ಗೊತ್ತಿದೆ. ಸಾದಲಿ ಬಳಿ ಕಲ್ಲು ಗಣಿಗಾರಿಕೆ ಮಾಡುವುಕ್ಕೆ ಮುಂದಾಗಿರುವುದು ಗಮನಕ್ಕೆ ಬಂದಿದೆ ಎಂದು ಶಿವಶಂಕರರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.