Tag: Ramayana

  • ರಾಮಾಯಣ ಸಿನಿಮಾ ಮಾಡಬೇಕಂತೆ ರಾಜಮೌಳಿ- ನೆಟ್ಟಿಗರ ಒತ್ತಾಯ

    ರಾಮಾಯಣ ಸಿನಿಮಾ ಮಾಡಬೇಕಂತೆ ರಾಜಮೌಳಿ- ನೆಟ್ಟಿಗರ ಒತ್ತಾಯ

    ನವದೆಹಲಿ: ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರವಾಹಿ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ರಾಜಮೌಳಿ ಅಭಿಮಾನಿಗಳು ಅವರಿಗೆ ಹೊಸದೊಂದು ಬೇಡಿಕೆಯನ್ನು ಇಟ್ಟಿದ್ದಾರೆ.

    ರಾಜಮೌಳಿಯವರು ರಾಮಾಯಣ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದಾರೆ. ಹ್ಯಾಶ್ ಟ್ಯಾಗ್‍ನೊಂದಿಗೆ ರಾಜಮೌಳಿ ಮೇಕ್ ರಾಮಾಯಣ ಎಂದು ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ರಮಾನಂದ ಸಾಗರ್ ಬಿಟ್ಟರೆ ಈ ಕತೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಸಾಮರ್ಥ್ಯ ಇರುವುದು ರಾಜಮೌಳಿಯವರಿಗೆ ಮಾತ್ರ. ಬಾಹುಬಲಿಯಂತಹ ಕಾಲ್ಪನಿಕ ಕತೆಯನ್ನೇ ನೈಜ ಕಥೆ ಎನ್ನುಂತೆ ಕಟ್ಟಿಕೊಟ್ಟಿದ್ದೀರಿ. ಇನ್ನು ರಾಮಾಯಣ ನಿಮ್ಮ ನಿರ್ದೇಶನದಲ್ಲಿ ಹೇಗೆ ಮೂಡಿ ಬರುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.

    ಪಾತ್ರವರ್ಗದ ಕುರಿತು ಸಹ ಹಲವರು ಚರ್ಚೆ ನಡೆಸುತ್ತಿದ್ದು, ರಾಜಮೌಳಿಯವರು ರಾಮಾಯಣ ಸಿನಿಮಾ ಮಾಡಿದರೆ ಪ್ರಮುಖ ಪಾತ್ರಗಳಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬಹುದು, ಈ ವರೆಗೆ ರಾಮ, ಲಕ್ಷ್ಮಣ, ರಾವಣ, ಹನುಮಂತನ ಪಾತ್ರದ ಕುರಿತು ಪ್ರಾಮಾಣಿಕ ಚರ್ಚೆ ನಡೆದಿಲ್ಲ. ಆದರೆ ಸೀತೆಯ ಪಾತ್ರಕ್ಕೆ ಅನುಷ್ಕಾ ಶೆಟ್ಟಿಯವರಿಂದ ಮಾತ್ರ ನ್ಯಾಯ ಒದಗಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ದೇಶದ ಅತ್ಯತ್ತಮ ನಿರ್ದೇಶಕರ ಪಟ್ಟಿಯಲ್ಲಿ ಎಸ್.ಎಸ್.ರಾಜಮೌಳಿ ಸಹ ಒಬ್ಬರು. ಬಾಹುಬಲಿ ಸೇರಿದಂತೆ ಹಲವು ವಿಶಿಷ್ಠ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಭಾರತೀಯ ಚಿತ್ರ ರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಇವರ ನಿರ್ದೇಶನದ ಚಿತ್ರಕ್ಕಾಗಿ ಹಲವು ಪ್ರಸಿದ್ಧ ನಟರು ಕಾದು ಕುಳಿತಿರುತ್ತಾರೆ. ಅಲ್ಲದೆ ನಿರ್ಮಾಪಕರು ಸಹ ಬಂಡವಾಳ ಹೂಡಲು ಹಿಂಜರಿಯುವುದಿಲ್ಲ. ಅಷ್ಟರ ಮಟ್ಟಿಗೆ ರಾಜಮೌಳಿಯವರು ತಮ್ಮ ನಿರ್ದೇಶನದ ಮೂಲಕ ಮೋಡಿ ಮಾಡುತ್ತಾರೆ.

    ಬಾಹುಬಲಿಯಂತಹ ಸಿನಿಮಾ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಈ ಸಿನಿಮಾ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಸದ್ದು ಮಾಡಿತ್ತು. ಚಿತ್ರದ ಎರಡೂ ಭಾಗಗಳು ಹಿಟ್ ಆಗಿದ್ದವು. ಇದಾದ ಬಳಿಕ ರಾಜಮೌಳಿಯವರು ಜೂನಿಯರ್ ಎಂಟಿಆರ್ ಹಾಗೂ ರಾಮ್‍ಚರಣ್‍ತೇಜಾ ಕಾಂಬಿನೇಶನ್‍ನಲ್ಲಿ ಆರ್‍ಆರ್‍ಆರ್ ಸಿನಿಮಾ ಮಾಡುತ್ತಿದ್ದು, ಇದೂ ಸಹ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರಹೊಮ್ಮುತ್ತಿದೆ.

    ಚಿತ್ರೀಕರಣ ಭರದಿಂದ ಸಾಗಿರುವಾಗಲೇ ಕೊರೊನಾ ಮಹಾಮಾರಿಯಿಂದಾಗಿ ಲಾಕ್‍ಡೌನ್ ಘೋಷಣೆಯಾಗಿತು. ಹೀಗಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದು, ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಆರಂಭವಾಗಲಿದೆ. ಅತ್ತ ಹಿಂದಿಯಲ್ಲಿ ಮರುಪ್ರಸಾರವಾದ ರಾಮಾಯಣ ಧಾರಾವಾಹಿ ಸಹ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದು, ಅತಿ ಹೆಚ್ಚು ಟಿಆರ್ ಪಿ ಗಳಿಸುವ ಮೂಲಕ ಜನಪ್ರಿಯತೆ ಗಳಿಸಿದೆ.

    ಇಷ್ಟೆಲ್ಲ ಚರ್ಚೆ ನಡೆಯುತ್ತಿದ್ದರೂ ರಾಜಮೌಳಿಯವರು ಮಾತ್ರ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾ ಮಾಡಲಿದ್ದಾರೆಯೇ, ಇಲ್ಲವೇ ಎಂಬುದರ ಕುರಿತು ಅವರ ಉತ್ತರವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

  • 33 ವರ್ಷಗಳ ನಂತ್ರ ಪ್ರಸಾರವಾದ್ರೂ ವಿಶ್ವದಾಖಲೆ ನಿರ್ಮಿಸಿದ ‘ರಾಮಾಯಣ’

    33 ವರ್ಷಗಳ ನಂತ್ರ ಪ್ರಸಾರವಾದ್ರೂ ವಿಶ್ವದಾಖಲೆ ನಿರ್ಮಿಸಿದ ‘ರಾಮಾಯಣ’

    ನವದೆಹಲಿ: ಕೊರೊನಾ ವೈರಸ್ ಲಾಕ್‍ಡೌನ್ ಸಂದರ್ಭದಲ್ಲಿ ಕಾಲ ಕಳೆಯಲು ಅನುಕೂಲವಾಗುವಂತೆ ಸರ್ಕಾರ ಹಳೆಯ ‘ರಾಮಾಯಣ’ ಧಾರಾವಾಹಿಯನ್ನು ಪ್ರಸಾರ ಮಾಡಿತ್ತು. ಆದರೆ 33 ವರ್ಷಗಳ ನಂತರ ಮತ್ತೆ ಸೀರಿಯಲ್ ಪ್ರಾರಂಭವಾದರೂ ಇದೀಗ ‘ರಾಮಾಯಣ’ ಧಾರಾವಾಹಿ ವಿಶ್ವ ದಾಖಲೆ ನಿರ್ಮಿಸಿದೆ.

    ಲಾಕ್‍ಡೌನ್ ಅವಧಿಯಲ್ಲಿ ಜನರ ಬೇಸರ ಕಳೆಯುವ ಉದ್ದೇಶದಿಂದ ದೂರದರ್ಶನ ‘ರಾಮಾಯಣ’ ಧಾರಾವಾಹಿಯನ್ನು ದಿನದ ಎರಡು ಸಮಯ ಮರು ಪ್ರಸಾರ ಆರಂಭಿಸಿತ್ತು. ಇದು ನಿರೀಕ್ಷೆಗೂ ಮೀರಿದ ಜನಪ್ರಿಯತೆ ಪಡೆದುಕೊಂಡಿತು. ಈ ಬಗ್ಗೆ ಸ್ವತಃ ದೂರದರ್ಶನ ಟ್ವೀಟ್ ಮಾಡುವ ಮೂಲಕ ಖುಷಿಯ ವಿಚಾರವನ್ನು ಹಂಚಿಕೊಂಡಿದೆ.

    ದೂರದರ್ಶನ ಮಾಹಿತಿ ನೀಡಿರುವ ಪ್ರಕಾರ ಮರು ಪ್ರಸಾರವಾದ ‘ರಾಮಾಯಣ’ ವಿಶ್ವದಾಖಲೆಯನ್ನೇ ಬರೆದಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ವೀಕ್ಷಿಸಿದ ಮನರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಯನ್ನು ಸಹ ‘ರಾಮಾಯಣ’ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ದೂರದರ್ಶನದಲ್ಲಿ ‘ರಾಮಾಯಣ’ ಸೀರಿಯಲ್ ಮರು ಪ್ರಸಾರವು ವಿಶ್ವದಾದ್ಯಂತ ವೀಕ್ಷಕರ ದಾಖಲೆಗಳನ್ನು ಬ್ರೇಕ್ ಮಾಡಿದೆ. ಏಪ್ರಿಲ್ 16ರ ವೇಳೆಗೆ 7.7 ಕೋಟಿ ವೀವರ್ಸ್ ಪಡೆದುಕೊಳ್ಳುವ ಮೂಲಕ ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಮನರಂಜನಾ ಕಾರ್ಯಕ್ರಮ ಎನಿಸಿಕೊಂಡಿದೆ” ಎಂದು ದೂರದರ್ಶನ ಟ್ವೀಟ್ ಮಾಡಿದೆ.

    ಸಾರ್ವಜನಿಕ ಬೇಡಿಕೆಯ ಮೇರೆಗೆ ಮಾರ್ಚ್ 28ರಿಂದ ಮತ್ತೆ ರಾಮಾನಂದ್ ಸಾಗರ್ ನಿರ್ದೇಶನದ ‘ರಾಮಾಯಣ’ ಧಾರಾವಾಹಿಯನ್ನು ಪ್ರಸಾರ ಮಾಡಲಾಗುತ್ತಿತ್ತು. ಈ ಸೀರಿಯಲ್ ದಿನಕ್ಕೆ ಎರಡು ಬಾರಿ ಡಿಡಿ ನ್ಯಾಷನಲ್ ಚಾನೆಲ್‍ನಲ್ಲಿ ಪ್ರಸಾರವಾಗುತ್ತಿತ್ತು. ದೂರದರ್ಶನವು ‘ರಾಮಾಯಣ’ ಸೀರಿಯಲ್ ಮಾತ್ರವಲ್ಲದೇ ‘ಮಹಾಭಾರತ’, ‘ಶ್ರೀ ಕೃಷ್ಣ’ ಮತ್ತು ‘ಉತ್ತರ ರಾಮಾಯಣ’ ಮುಂತಾದ ಪೌರಾಣಿಕ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುತ್ತಿದೆ.

    ‘ರಾಮಾಯಣ’ ಧಾರಾವಾಹಿ ದೇಶದಲ್ಲಿ ಮೊದಲ ಬಾರಿಗೆ ಜನವರಿ 25, 1987 ರಿಂದ ಜುಲೈ 31, 1988 ರವರೆಗೆ ಪ್ರಸಾರವಾಗಿದೆ. 1987 ರಿಂದ 1988 ರವರೆಗೆ ‘ರಾಮಾಯಣ’ ವಿಶ್ವದಲ್ಲೇ ಹೆಚ್ಚು ವೀಕ್ಷಿಸಿದ ಧಾರಾವಾಹಿ ಆಗಿತ್ತು. ಅಲ್ಲದೇ ಇದು ಲಿಮ್ಕಾ ಬುಕ್ ಆಫ್ ರೆಕಾರ್ಟ್ ನಲ್ಲಿ ‘ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಪೌರಾಣಿಕ ಧಾರಾವಾಹಿ’ ಎಂದು ದಾಖಲೆ ಬರೆದಿತ್ತು.

    ಲಾಕ್‍ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾಗುತ್ತಿರುವ ಚಾನೆಲ್‍ಗಳ ಪಟ್ಟಿಯಲ್ಲಿ ಡಿಡಿ ನ್ಯಾಷನಲ್ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ ‘ರಾಮಾಯಣ’ ಧಾರಾವಾಹಿ ಏಪ್ರಿಲ್ 18ರಂದು ಮುಕ್ತಾಯವಾದ ನಂತರ ಅದರ ವೀಕ್ಷಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

  • ರಾಮಾಯಣದ ‘ಅಂಗದ’ನಂತೆ ಸೆಹ್ವಾಗ್ ಫುಟ್‍ವರ್ಕ್..!

    ರಾಮಾಯಣದ ‘ಅಂಗದ’ನಂತೆ ಸೆಹ್ವಾಗ್ ಫುಟ್‍ವರ್ಕ್..!

    ಮುಂಬೈ: ಟೀಂ ಇಂಡಿಯಾ ಡ್ಯಾಶಿಂಗ್ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಫುಟ್‍ವರ್ಕ್ ಕುರಿತು ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಕ್ರಿಸ್‍ನಲ್ಲಿ ಪಾದವನ್ನು ಕದಲಿಸದೆ ಕ್ರೀಡಾಂಗಣದ ಮೂಲೆ ಮೂಲೆಗೂ ಯಾವ ರೀತಿ ಶಾಟ್ ಆಡುತ್ತಿದ್ದರು ಎಂಬ ಅಭಿಮಾನಿಗಳ ಚರ್ಚೆಗೆ ಸ್ವತಃ ಸೆಹ್ವಾಗ್ ಉತ್ತರಿಸಿದ್ದಾರೆ.

    ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಸೆಹ್ವಾಗ್ ಟೆಸ್ಟ್ ಪಂದ್ಯದಲ್ಲಿ ಮೊದಲ ತ್ರಿಶತಕ ಸಿಡಿಸಿ ದಾಖಲೆ ಬರೆದಿದ್ದರು. ಕ್ರಿಕೆಟ್ ಕೆರಿಯರ್ ಆರಂಭದಲ್ಲಿ ಎಷ್ಟು ಅಕ್ರಮಣಕಾರಿಯಾಗಿ ಆಡುತ್ತಿದ್ದರೋ ನಿವೃತ್ತಿ ಸಮಯದ ವೇಳೆಗೂ ಅದೇ ಪವರ್‍ಫುಲ್ ಹೊಡೆತಗಳು ಸೆಹ್ವಾಗ್ ಬ್ಯಾಟಿಂಗ್‍ನಲ್ಲಿ ಕಾಣಸಿಗುತ್ತಿತ್ತು.

    ವೃತ್ತಿ ಜೀವನದ ಸಂದರ್ಭದಲ್ಲಿ ತಮ್ಮ ಫುಟ್‍ವರ್ಕ್ ಕುರಿತು ಎಂದು ಮಾತನಾಡದ ಸೆಹ್ವಾಗ್, ಸದ್ಯ ಟ್ವೀಟ್ ಮಾಡಿ ಈ ಕುರಿತು ಮಾಹಿತಿ ನೀಡಿದ್ದಾರೆ. ರಾಮಾಯಣದ ‘ಅಂಗದ’ ತಮ್ಮ ಬ್ಯಾಟಿಂಗ್ ಸ್ಫೂರ್ತಿ ಎಂದು ಸೆಹ್ವಾಗ್ ತಿಳಿಸಿದ್ದಾರೆ. ಅಂದಹಾಗೇ ರಾಮಾಯಣದಲ್ಲಿ ಸೀತಾದೇವಿಯನ್ನು ರಾವಣ ಅಪಹರಿಸಿದ ಬಳಿಕ ಶ್ರೀರಾಮ ಯುದ್ಧ ಘೋಷಣೆ ಮಾಡುವ ಮುನ್ನ ಲಂಕೆಗೆ ಅಂಗದ ಯುದ್ಧದ ಸಂಧಿಗೆ ಕಳುಹಿಸಲಾಗಿತ್ತು. ಈ ವೇಳೆ ಅಂಗದ ಹಾಗೂ ರಾವಣನ ನಡುವೆ ಸಭೆಯಲ್ಲಿ ಮಾತು ಮಾತು ಬೆಳೆದು ಸವಾಲು ಎದುರಾಗಿತ್ತು. ಸವಾಲಿನ ಭಾಗವಾಗಿ ತನ್ನ ಕಾಲನ್ನು ಮುಂದಿಟ್ಟು ಅಂಗದ ನೆಲದ ಮೇಲೆ ತನ್ನ ಪಾದವನ್ನು ಯಾರಾದರೂ ಕದಲುವಂತೆ ಮಾಡಿದರೆ ಶ್ರೀರಾಮ ಸೋತಂತೆ ಎಂದು ಸವಾಲು ಎಸೆಯಲಾಗಿತ್ತು.

    ಅಂಗದನ ಸವಾಲು ಸ್ವೀಕರಿಸಿದ ಸಭೆಯಲ್ಲಿದ್ದವರು ಅಂಗದನ ಪದಾವನ್ನು ಕದಲಿಸಲು ವಿಶ್ವ ಪ್ರಯತ್ನವನ್ನು ಮಾಡಿದ್ದರು. ಆದರೆ ಈ ಸವಾಲವನ್ನು ಗೆಲ್ಲಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಸದ್ಯ ಲಾಕ್‍ಡೌನ್ ಹಿನ್ನೆಲೆಯಲ್ಲಿ ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿಯನ್ನು ಮರು ಪ್ರಸಾರ ಮಾಡಲಾಗುತ್ತಿದೆ. ಧಾರಾವಾಹಿಯ ಅಂಗದ ಸವಾಲಿನ ಸನ್ನಿವೇಶದ ಫೋಟೋವನ್ನು ಟ್ವೀಟ್ ಮಾಡಿ ತಮ್ಮ ಫುಟ್‍ವರ್ಕ್ ಕುರಿತು ಬರೆದುಕೊಂಡಿದ್ದಾರೆ.

  • ‘ಸಂಜೀವಿನಿ ಪರ್ವತ’ ಉಲ್ಲೇಖಿಸಿ ಮಾತ್ರೆ ಬೇಡಿದ ಬ್ರೆಜಿಲ್

    ‘ಸಂಜೀವಿನಿ ಪರ್ವತ’ ಉಲ್ಲೇಖಿಸಿ ಮಾತ್ರೆ ಬೇಡಿದ ಬ್ರೆಜಿಲ್

    – ಹನುಮಂತನನ್ನ ಉಲ್ಲೇಖಿಸಿ ಪತ್ರ ಬರೆದ ಜೈರ್ ಬೋಲ್ಸನಾರೊ
    – ಯೂಟರ್ನ್ ಹೊಡೆದು ಮೋದಿ ‘ಗ್ರೇಟ್’ ಎಂದ ಟ್ರಂಪ್

    ನವದೆಹಲಿ: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಮಾಯಣದಲ್ಲಿ ಬರುವ ಸಂಜೀವಿನಿ ಪರ್ವತವನ್ನು ಉಲ್ಲೇಖಿಸಿ ಮಾತ್ರೆ ನೀಡುವಂತೆ ಮನವಿ ಮಾಡಿದ್ದಾರೆ.

    ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ರಫ್ತಿಗೆ ಅನುಮತಿ ಮುಂದಾದ ಭಾರತದ ನಿರ್ಧಾರವನ್ನು ರಾಮಾಯಣದ ಪೌರಾಣಿಕ ಕಥೆಗೆ ಹೋಲಿಕೆ ಮಾಡಿದ್ದಾರೆ.

    ಲಂಕಾದಲ್ಲಿ ನಡೆದ ಯುದ್ಧದಲ್ಲಿ ಭಗವಾನ್ ಶ್ರೀರಾಮನ ಸಹೋದರ ಲಕ್ಷ್ಮಣ ಭಾರೀ ಗಾಯಗೊಂಡಿದ್ದ. ಆಗ ಲಕ್ಷ್ಮಣನಿಗೆ ಚಿಕಿತ್ಸೆ ನೀಡಲು ಗಿಡಮೂಲಿಕೆ ಬೇಕಾಗಿದ್ದರಿಂದ ರಾಮನ ಪರಮಭಕ್ತ ಹನುಮಂತ ಸಂಜೀವಿನಿ ಪರ್ವತವನ್ನೇ ಹೊತ್ತುಕೊಂಡು ಬರುತ್ತಾನೆ. ಈ ಪ್ರಸಂಗವನ್ನು ನೆನೆದು ಜೈರ್ ಬೋಲ್ಸನಾರೊ ಸಂಜೀವಿನಿ ಪರ್ವತವನ್ನು ಉಲ್ಲೇಖಿಸಿ ಮಾತ್ರೆ ನೀಡುವಂತೆ ಕೇಳಿಕೊಂಡಿದ್ದಾರೆ.

    ಕೊರೊನಾ ವೈರಸ್‍ನಿಂದ ಕಂಗೆಟ್ಟಿರುವ ಅಮೆರಿಕ ಸೇರಿದಂತೆ ವಿವಿಧ ದೇಶಗಳಿಗೆ ಭಾರತವು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್ ರಫ್ತು ಮಾಡಲು ಅನುಮತಿ ನೀಡಿದೆ. ಸರ್ಕಾರದ ಈ ನಿರ್ಧಾರದ ಹಿನ್ನೆಲೆಯಲ್ಲಿ ಬೋಲ್ಸನಾರೊ ಅವರು ಪತ್ರವನ್ನು ಬರೆದಿದ್ದಾರೆ.

    ಭಗವಾನ್ ರಾಮನ ಸಹೋದರ ಲಕ್ಷ್ಮಣನ ಜೀವವನ್ನು ಉಳಿಸಲು ಹನುಮಂತ ಹಿಮಾಲಯದಿಂದ ಸಂಜೀವಿನಿ ತಂದ. ಯೇಸು ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಗುಣಪಡಿಸಿದನು ಹಾಗೂ ಬಾರ್ಟಿಮಿಯುಗೆ ಕಣ್ಣು ಕಾಣುವಂತೆ ಮಾಡಿದ. ಅಂತೆ ಜಗತ್ತಿನ ಎಲ್ಲಾ ಜನರ ಸಲುವಾಗಿ ಭಾರತ ಮತ್ತು ಬ್ರೆಜಿಲ್ ಈ ಜಾಗತಿಕ ಬಿಕ್ಕಟ್ಟನ್ನು ನಿವಾರಿಸಲು ಶ್ರಮಿಸುತ್ತಿವೆ ಎಂದು ಬೋಲ್ಸನಾರೊ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

    ಅಮೆರಿಕ ಏಪ್ರಿಲ್ 6ರಂದು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್‍ಗಳಿಗೆ ಬೇಡಿಕೆ ಇಟ್ಟಿತ್ತು. ಅಮೆರಿಕ ಸೇರಿದಂತೆ ಕೊರೊನಾ ಬಾಧಿತ ರಾಷ್ಟ್ರಗಳಿಗೆ ಮಾನವೀಯತೆ ದೃಷ್ಟಿಯಲ್ಲಿ ಆ್ಯಂಟಿ ಮಲೇರಿಯಾ (ಹೈಡ್ರೋಕ್ಸಿಕ್ಲೋರೋಕ್ವೀನ್) ಔಷಧಿ ರಫ್ತು ಮಾಡುವುದಾಗಿ ಭಾರತ ಹೇಳಿದೆ. 26 ಜೆನರಿಕ್ ಔಷಧಿಗಳ ರಫ್ತಿಗೆ ಕಳೆದ ತಿಂಗಳಷ್ಟೇ ಭಾರತ ನಿರ್ಬಂಧ ಹೇರಿತ್ತು. ಆದರೆ ಅಮೆರಿಕದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆ್ಯಂಟಿ ಮಲೇರಿಯಾ ಔಷಧಿಯನ್ನು ತ್ವರಿತವಾಗಿ ರಫ್ತು ಮಾಡುವಂತೆ ಅಮೆರಿಕ ಕೇಳಿತ್ತು.

    ಈ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು, ಒಂದು ವೇಳೆ ಆ್ಯಂಟಿ ಮಲೇರಿಯಾ ಔಷಧಿಯನ್ನು ರಫ್ತು ಮಾಡದಿದ್ದಲ್ಲಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಸಿದ್ದರು. ಇದಕ್ಕೆ ದೇಶದಲ್ಲಿ ಟೀಕೆ ವ್ಯಕ್ತವಾಗಿದೆ. ದೇಶವೊಂದರ ವಿರುದ್ಧ ಇಂಥ ಬೆದರಿಕೆ ನೋಡಿಯೇ ಇಲ್ಲ ಅಂತ ಕಾಂಗ್ರೆಸ್‍ನ ಶಶಿತರೂರ್ ಮಂಗಳವಾರ ಟ್ವೀಟ್ ಮಾಡಿದ್ದರು.

    ಆದರೆ ಈಗ ಟ್ರಂಪ್ ತಮ್ಮ ಹೇಳಿಕೆ ಪರಿಣಾಮ ಅರಿತು ಯೂಟರ್ನ್ ಹೊಡೆದಿದ್ದಾರೆ. ”ನಾನು ಲಕ್ಷಾಂತರ ರೂ. ಮೌಲ್ಯದ ಪ್ರಮಾಣದಲ್ಲಿ ಔಷಧಿ ಖರೀದಿಸಿದೆ. ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ಆದಷ್ಟು ವೇಗ ಭಾರತದಿಂದ ರಫ್ತು ಆಗುತ್ತದೆ. ಅವರು ಗ್ರೇಟ್, ನಿಜವಾಗಿಯೂ ಒಳ್ಳೆಯವರಾಗಿದ್ದಾರೆ. ಔಷಧಿ ಭಾರತಕ್ಕೆ ಬೇಕಾಗಿರುವುದರಿಂದಲೇ ರಫ್ತಿನ ಮೇಲೆ ನಿರ್ಬಂಧ ಹೇರಿದ್ದರು. ಆದರೆ ಈಗ ಅವರಿಂದ ಸಾಕಷ್ಟು ಒಳ್ಳೆಯ ಸಂಗತಿಗಳು ಬರುತ್ತಿವೆ” ಎಂದು ಟ್ರಂಪ್ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ.

    ಬಹಳಷ್ಟು ಜನರು ಭಾರತದ ಸಹಾಯವನ್ನು ನೋಡುತ್ತಿದ್ದಾರೆ, ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಕೆಟ್ಟ ಕಥೆಗಳನ್ನು ಕೇಳುವುದಿಲ್ಲ. ಭಾರತಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.

    ಕೊರೊನಾ ಮೇಲೆ ಪರಿಣಾಮ ಬೀರುತ್ತಾ?
    ಅಮೆರಿಕದಲ್ಲಿ 3.60 ಲಕ್ಷ ಮಂದಿಗೆ ಕೊರೊನಾ ಬಂದಿದ್ದು ಈಗಾಗಲೇ 10 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕೊರೊನಾಗೆ ಸಧ್ಯಕ್ಕೆ ಯಾವುದೇ ಔಷಧಿ ಇಲ್ಲ. ಹೀಗಾಗಿ ಇಂದು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಎನ್ನವ ಪ್ರಶ್ನೆ ಏಳುವುದು ಸಹಜ. ಮಲೇರಿಯಾ ರೋಗದ ವಿರುದ್ಧವಾಗಿ ಹೋರಾಡಲು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಈ ಮಾತ್ರೆಗಳನ್ನು ದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ.

    ಮಲೇರಿಯಾಗೆ ನೀಡುವ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದಲೇ ಕೊರೊನಾ ಗುಣವಾಗುತ್ತದೆ ಎಂದು ಪೂರ್ಣವಾಗಿ ಹೇಳಲು ಬರುವುದಿಲ್ಲ. ಯಾಕೆಂದರೆ ವಿಶ್ವ ಆರೋಗ್ಯ ಸಂಸ್ಥೆಯೇ ಯಾವುದೇ ಔಷಧಿಯಿಂದ ಕೊರೊನಾ ವಾಸಿಯಾಗಿದ್ದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದೆ.

    ಪರಿಸ್ಥಿತಿ ಹೀಗಿರುವಾಗ ತಾತ್ಕಾಲಿಕವಾಗಿ ಕೊರೊನಾಗೆ ಯಾವ ಮಾತ್ರೆ ನೀಡಿದರೆ ಕಡಿಮೆಯಾಗುತ್ತದೆ ಎನ್ನುವ ಬಗ್ಗೆ ಕಂಪನಿಯೊಂದು ಅಧ್ಯಯನ ನಡೆಸಿದೆ. ಹಲವು ದೇಶಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಾಗತಿಕವಾಗಿ ಆರೋಗ್ಯ ಕುರಿತಾಗಿ ಅಧ್ಯಯನ ಮಾಡುವ sermo ಕಂಪನಿ ತಿಳಿಸಿದ ಹಿನ್ನೆಲೆಯಲ್ಲಿ ಈ ಮಾತ್ರೆಗೆ ಬೇಡಿಕೆ ಹೆಚ್ಚಾಗಿದೆ.

    ಅಧ್ಯಯನ ಹೇಳಿದ್ದು ಏನು?
    ಕೊರೊನಾ ತೀವ್ರವಾಗಿ ಹರಡುತ್ತಿರುವ ಯುರೋಪ್, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 30 ದೇಶಗಳ ಒಟ್ಟು 6,227 ಮಂದಿ ವೈದ್ಯರನ್ನು ಸಂಪರ್ಕಿಸಿ ಅಧ್ಯಯನ ನಡೆಸಲಾಗಿದೆ. ಈ ಪೈಕಿ ಶೇ.37ರಷ್ಟು ಮಂದಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಕೊರೊನಾ ತಡೆಗಟ್ಟಲು ನೀಡಲಾಗುವ ಔಷಧಿಗಳ ಪೈಕಿ ಶೇ.56 ನೋವು ನಿವಾರಕಗಳು, ಶೇ.41 ಅಜಿಥ್ರೊಮೈಸಿನ್, ಶೇ.33 ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗುತ್ತಿದೆ. ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಉತ್ತಮ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ.

    ಸ್ಪೇನ್ ಶೇ.72, ಇಟಲಿ ಶೇ.49, ಬ್ರೆಜಿಲ್ ಶೇ.41, ಮೆಕ್ಸಿಕೋ ಶೇ.39, ಫ್ರಾನ್ಸ್ ಶೇ.28, ಅಮೆರಿಕ ಶೇ.23, ಜರ್ಮನಿ ಶೇ.17, ಕೆನಡಾ ಶೇ.16, ಇಂಗ್ಲೆಂಡ್ ಶೇ.13, ಜಪಾನ್ ಶೇ.7 ರಷ್ಟು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗಿದೆ.

    ಟ್ರಂಪ್ ಹೇಳಿದ್ದು ಏನು?
    ಇಂದಿನ ತುರ್ತು ಪರಿಸ್ಥಿತಿಯಲ್ಲಿ ಲ್ಯಾಬ್‍ನಲ್ಲಿ ಕೊರೊನಾಗೆ ಔಷಧಿ ಕಂಡು ಹುಡುಕುವುದು ಬಹಳ ಸವಾಲಿನ ಕೆಲಸ. ಹೀಗಿರುವಾಗ ಅಮೆರಿಕನ್ನರ ರಕ್ಷಣೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅಗತ್ಯವಾಗಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಎರಡು ಮೆಡಿಕಲ್ ಇತಿಹಾಸದಲ್ಲಿ ಗೇಮ್ ಚೇಂಜರ್ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ನಾನು ಕೂಡ ಈ ಮಾತ್ರೆಯನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.

  • ಪುರಾಣ, ಐತಿಹಾಸಿಕ ಚರಿತ್ರೆಯ ಶಕ್ತಿ ಕೇಂದ್ರ ಶಿರಸಂಗಿಯ ಕಾಳಿ ದೇವಾಲಯ

    ಪುರಾಣ, ಐತಿಹಾಸಿಕ ಚರಿತ್ರೆಯ ಶಕ್ತಿ ಕೇಂದ್ರ ಶಿರಸಂಗಿಯ ಕಾಳಿ ದೇವಾಲಯ

    – ಐವರು ರಾಕ್ಷಸರನ್ನು ಸಂಹಾರಗೈದ ಕಾಳಿ
    – ಋಷ್ಯಶೃಂಗರ ಆಶೀರ್ವಾದ ಪಡೆದ ರಾಮ

    ಯುಗಾದಿ ಹತ್ತಿರ ಬರುತ್ತಿದೆ. ಈ ಯುಗಾದಿ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಹೋಗುವುದು ವಾಡಿಕೆ. ಹೀಗಾಗಿ ಈ ವಾರದ ‘ಪಬ್ಲಿಕ್ ಟೂರ್’ ನಲ್ಲಿ ಯುಗಾದಿ ವೇಳೆ ವಿಶೇಷ ಜಾತ್ರೆ ನಡೆಯುವ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿರುವ ಶ್ರೀ ಕಾಳಿಕಾದೇವಿಯ ದೇವಾಲಯದ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಪೌರಾಣಿಕ ಹಿನ್ನೆಲೆ, ರಾಮಾಯಣದ ಕಾಲದಲ್ಲಿ ರಾಮ ಲಕ್ಷ್ಮಣರು ಭೇಟಿ ನೀಡಿರುವ ಶಾಸನದ ಉಲ್ಲೇಖ, ರಾಜಮಹಾರಾಜರ ಕಾಲದ ಐತಿಹಾಸಿಕ ಚರಿತ್ರೆ ಹೀಗೆ ಎಲ್ಲ ಶಕ್ತಿಗಳನ್ನೊಳಗೊಂಡ ಶಕ್ತಿಕೇಂದ್ರ ಶಿರಸಂಗಿಯ ಶ್ರೀ ಕಾಳಿಕಾದೇವಿಯ ದೇವಸ್ಥಾನ.

    ಪ್ರತಿ ವರ್ಷ ಯುಗಾದಿಯಂದು ಬಂದು ತಾವು ಬೆಳೆದ ಹೊಸ ಗೋಧಿ ಧಾನ್ಯವನ್ನು ಕಾಳಿಕಾ ದೇವಿಗೆ ಅರ್ಪಿಸಿ, ಅದರಿಂದ ತಯಾರಿಸಿದ ಪ್ರಸಾದವನ್ನು ಚೈತ್ರ ಶುದ್ಧ ಪ್ರತಿಪದೆಯಂದು ಸ್ವೀಕರಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂಬುದು ಇಲ್ಲಿಗೆ ಬರುವ ವಿಶ್ವಕರ್ಮ ಸಮಾಜದ ಭಕ್ತರ ನಂಬಿಕೆ.

    ಪ್ರತಿ ಯುಗಾದಿ ಸಂದರ್ಭದಲ್ಲಿ ಇಲ್ಲಿ ಐದು ದಿನಗಳ ಜಾತ್ರೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಯುಗಾದಿ ಅಮವಾಸ್ಯೆಯ ಬೆಳಿಗ್ಗೆ ದೇವಿಯ ಅಭಿಷೇಕದೊಂದಿಗೆ ಜಾತ್ರಾ ಕಾರ್ಯಕ್ರಮಗಳು ಆರಂಭವಾಗುತ್ತವೆ. ಧ್ವಜಾರೋಹಣ, ದೇವಿಗೆ ಹೊಸ ಗೋಧಿಯ (ನಿಧಿ) ಅರ್ಪಣೆ, ನಂತರ ಚೈತ್ರಶುದ್ಧ ಪ್ರತಿಪದೆಯ ಬೆಳಿಗ್ಗೆ 5 ಘಂಟೆಗೆ ಬುತ್ತಿ ಹಾರಿಸುವ ಕಾರ್ಯಕ್ರಮ ನಡೆಯುತ್ತದೆ. ಕಾಳಿಕಾದೇವಿ ರಾಕ್ಷಸರ ಸಂಹಾರ ಮಾಡಿದ ಸಂದರ್ಭದ ಸಂಕೇತವಾಗಿ ಈ ಆಚರಣೆ ನಡೆಯುತ್ತದೆ.

    ಅನ್ನವನ್ನು ರುಂಡದ ಆಕಾರದಲ್ಲಿ ಮಾಡಿ ಹಾರಿಸಲಾಗುತ್ತದೆ. ಈ ಬುತ್ತಿ ಯಾರಿಗೆ ಸಿಗುತ್ತದೋ ಅವರ ಜೀವನದಲ್ಲಿ ಅನ್ನ ಮತ್ತು ವಸ್ತ್ರಕ್ಕೆ ಕೊರತೆ ಇರುವುದಿಲ್ಲ ಎಂಬ ನಂಬಿಕೆಯಿದೆ. ಬುತ್ತಿ ಸಿಕ್ಕವರಿಗೆ ಭಾಗ್ಯದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ. ಯುಗಾದಿಯ ಪ್ರತಿಪದೆಯ ನಂತರ ಬರುವ ಐದೂ ಪಂಚಮಿ ತಿಥಿಗಳೂ ಕೂಡ ವಿಶೇಷ ದಿನಗಳಾಗಿವೆ. ಅದರಲ್ಲೂ ಐದನೇ ಪಂಚಮಿ ಯಂದು ಹೆಚ್ಚಿನ ಮಹತ್ವ. ದೇವಿಯು ಚೈತ್ರ ಶುದ್ದ ಪ್ರತಿಪದೆಯಂದು ರಾಕ್ಷಸರ ಸಂಹಾರಕ್ಕೆ ಹೋದವಳು ಜೇಷ್ಠ ಶುದ್ಧ ಪಂಚಮಿ (ಐದನೇ ಪಂಚಮಿ) ಯಂದು ಮರಳಿ ದೇವಸ್ಥಾನಕ್ಕೆ ಬರುತ್ತಾಳೆ ಎಂಬುದು ವಾಡಿಕೆ.

    ಎಲ್ಲಿದೆ?
    ದೇವಸ್ಥಾನ ಇರುವ ಶಿರಸಂಗಿ ಗ್ರಾಮವೂ ಬೆಳಗಾವಿಯಿಂದ 80 ಕಿ.ಮೀ, ಬೆಂಗಳೂರಿನಿಂದ 400 ಕಿ.ಮೀ ಹಾಗೂ ಸವದತ್ತಿಯಿಂದ 22 ಕಿ.ಮೀ, ಧಾರವಾಡದಿಂದ 55 ಕಿ.ಮೀ ದೂರದಲ್ಲಿದೆ.

    ರಾಮಕೃಷ್ಣ ಪರಮಹಂಸರು ಕಾಳಿಕಾ ದೇವಿಯನ್ನು ಪೂಜಿಸಿ ಸಾಕ್ಷಾತ್ಕಾರ ಮಾಡಿಕೊಂಡು ಕಾಳಿಕಾದೇವಿಯ ಭಕ್ತರಾಗಿದ್ದರು. ಸ್ವಾಮಿ ವಿವೇಕಾನಂದರೂ ಕೂಡ ಕಾಳಿಕಾ ದೇವಿ ಬಗ್ಗೆ ಭಕ್ತಿಪರವಶರಾಗಿ ಚೈತನ್ಯಮಯರೂಪ ಎಂದು ವರ್ಣಿಸಿದ್ದರು. ಕವಿ ಡಿ.ಎಸ್.ಕರ್ಕಿಯವರು ತಮ್ಮ ಕವನದಲ್ಲಿ ಉತ್ತರ ಕರ್ನಾಟಕದ ವಿವಿಧ ಸ್ಥಳಗಳ ವರ್ಣನೆಯಲ್ಲಿ ಶಿರಸಂಗಿಯನ್ನು ಕೂಡ ನೆನಪಿಸಿಕೊಂಡಿದ್ದಾರೆ.

    ನಾನು ನೀನು ಮೋಡಮೋಡವಾಗಿ ತೇಲಿಬಂದು
    ನಮ್ಮ ನಾಡ ಮುಗಿಲಿನಲ್ಲಿ ಮೇಳಗೂಡಿ ನಿಂದು,
    ಬನವಾಸಿಯ ಮಧುಕೇಶ್ವರ,ಕಡಲ ಕಾರವಾರ
    ಸೊಗಲಕೊಲಿದ ಸೋಮೇಶ್ವರ,ಗೋಕರ್ಣ ತೀರ,
    ಶಿರಸಂಗಿ ಮಾತೆ ಶ್ರೀ ಕಾಳಿಕಾ ಪ್ರಧಾಮ
    ಗಜಶಾಲೆಯ ವಿಜಯನಗರ ಪಂಪಾಪತಿಪುರ,
    ಜೋಗದ ಜಲ ತುಂಬಿ ಬರಲಿ ಜೀವನದಲಿ ಸಾರ”

    ಪುರಾಣ ಕಥೆ ಏನು?
    ಶ್ರೀ ಮಾರ್ಕಂಡೇಯ ಪುರಾಣದಂತೆ ಸಾವರ್ಣಿಕ ಮನ್ವಂತರದ ಸಪ್ತಋಷಿಗಳಲ್ಲಿ ಓರ್ವರಾದ ಋಷ್ಯಶೃಂಗರಿಗೆ ಶ್ರೀ ಕಾಳಿಕಾದೇವಿ ಪ್ರತ್ಯಕ್ಷಳಾಗಿ ಆಶೀರ್ವದಿಸಿದ ಸ್ಥಳ ಈ ಶಿರಸಂಗಿ ಎನ್ನುವ ಕಥೆ ಪುರಾಣದಲ್ಲಿದೆ. ಕಲ್ಯಾಣ ಚಾಲುಕ್ಯರ ಆಡಳಿತ ಅವಧಿಯಲ್ಲಿ ಮೊದಲನೆಯ ಜಗದೇಕಮಲ್ಲ-2, ಹಾಗೂ ಎರಡನೇಯ ವೀರ ಸೋಮೇಶ್ವರ ಕಾಲದ ಶಾಸನಗಳು ಇಲ್ಲಿ ಲಬ್ಯವಾಗಿದ್ದು. ಕ್ರಿ.ಶ.1148 ರ ಶಾಸನದಲ್ಲಿ “ಕುಂತಳದಲ್ಲಿ ಬರುವ ಚಿನ್ನ ಹೂ ಬೆಳುವಲ”ಎಂದು ಹೇಳುವ ಮೂಲಕ 30 ಗ್ರಾಮಗಳಿಗೆ ಮುಖ್ಯ ಪಟ್ಟಣವೆನಿಸಿದ್ದು ಋಷ್ಯಶೃಂಗಿಗ್ರಾಮ ಎಂದು ಹೇಳಿದೆ. ಇನ್ನೊಂದು ಶಾಸನ ಹೆಬ್ಬಯ್ಯ ನಾಯಕನಿಗೆ ಸಂಬಂಧಿಸಿದ ವಿವರಣೆ ಹೊಂದಿದೆ.

    ವಿಶ್ವಕರ್ಮ ವಂಶಜ, ಕಾಶ್ಯಪ ಗೋತ್ರಜರಾದ ವಿಭಾಂಡಕ ಮುನಿಯ ಮಗನಾದ ಋಷ್ಯಶ್ರಂಗ ಮುನಿಗಳಿಗೆ ಜಮದಗ್ನಿ, ಭಾರ್ಗವ ಇತ್ಯಾದಿ ಋಷಿಗಳು ಸತ್ಕರಿಸಿ ಗೌರವಿಸುತ್ತಾರೆ. ಅವರ ಪ್ರಾರ್ಥನೆಯ ಮೇರೆಗೆ ಋಷ್ಯಶೃಂಗ ಮುನಿ ಈಗಿನ ಶಿರಸಂಗಿ ಪ್ರದೇಶದಲ್ಲಿ 10 ವರ್ಷಗಳ ಕಾಲ ಕಠೋರ ತಪಸ್ಸು ಆಚರಿಸಿದ್ದರಂತೆ. ಆದರೆ, ಈ ಮುನಿಗಳ ಯಜ್ಞಯಾಗಗಳನ್ನು ಐವರು ರಾಕ್ಷಸರಾದ ನಲುಂದಾಸುರ (ಈಗಿನ ಧಾರವಾಡ ಜಿಲ್ಲೆಯ ನವಲಗುಂದದ ವಾಸಿ), ನರುಂದಾಸುರ (ಈಗಿನ ಗದಗ ಜಿಲ್ಲೆಯ ನರಗುಂದದ ವಾಸಿ), ಹಿರಿಕುಂಬಾಸುರ (ಈಗಿನ ಬೆಳಗಾವಿಯ ಜಿ. ಸವದತ್ತಿ ತಾ. ಹಿರೇಕುಂಬಿ ಗ್ರಾಮದ ವಾಸಿ), ಚಿಕ್ಕುಂಬಾಸುರ (ಈಗಿನ ಬೆಳಗಾವಿಯ ಜಿ. ಸವದತ್ತಿ ತಾ. ಚಿಕ್ಕುಂಬಿ ಗ್ರಾಮದ ವಾಸಿ) ಹಾಗೂ ಬೆಟ್ಟಾಸುರ (ಈಗಿನ ಬೆಳಗಾವಿಯ ಜಿ. ಸವದತ್ತಿ ತಾ.ಬೆಟಸೂರ ಗ್ರಾಮದ ವಾಸಿ) ಕೆಡಿಸುತ್ತಿದ್ದರು.

    ಋಷ್ಯಶೃಂಗ ಮುನಿಯ ಕಠೋರ ಪ್ರಾರ್ಥನೆಯ ಮೇರೆಗೆ ಹಾಗೂ ಆತನ ತಪಸ್ಸನ್ನು ಮೆಚ್ಚಿ ಆದಿಶಕ್ತಿ ಜಗನ್ಮಾತೆ ಶ್ರೀ ಕಾಳಿಕಾದೇವಿ ಅವತಾರದಲ್ಲಿ ಪ್ರತ್ಯಕ್ಷಳಾಗಿ ಐದು ರಾಕ್ಷಸರನ್ನು ಕೊಂದು ಅವರ ರುಂಡಗಳನ್ನು ಕಡಿದು ಆಕಾಶದತ್ತ ತೂರಿದಳು ಎಂಬ ಪ್ರತೀತಿ. ಆಗ ಋಷ್ಯಶೃಂಗ ಮುನಿಗಳ ಕೋರಿಕೆಯಂತೆ ಶಾಂತಸ್ವರೂಪಳಾಗಿ ಜಗನ್ಮಾತೆ ಶ್ರೀ ಕಾಳಿಕಾದೇವಿಯೂ ಶಿರಸಂಗಿಯಲ್ಲಿ ನೆಲೆಸಿದಳು ಎಂದು ಪುರಾಣದಲ್ಲಿ ಉಲ್ಲೇಖವಿದೆ.

    ವಿಶೇಷತೆ ಏನು?
    ಶಿರಸಂಗಿ ಕಾಳಿಕಾ ಮಾತೆಯ ದೇವಾಲಯ ಆವರಣದಲ್ಲಿ ಹಬ್ಬೇಶ್ವರ ದೇವಾಲಯ, ಕಲ್ಮೇಶ್ವರ ದೇವಾಲಯ, ಭೈರವೇಶ್ವರ ದೇವಾಲಗಳಲ್ಲಿ ಕಂಡು ಬರುವ ಗಣೇಶ, ಷಣ್ಮುಖ, ಉಮಾಮಹೇಶ್ವರ, ಕಾಳಭೈರವ, ಚನ್ನಭೈರವ, ಸಪ್ತಮಾತೃಕೆಯರು, ಸೂರ್ಯ ನಾರಾಯಣ ಶಿಲ್ಪಗಳು ಕಲ್ಯಾಣ ಚಾಲುಕ್ಯರ ಶಿಲ್ಪಕಲಾ ವೈಭವಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಕಲ್ಮೇಶ್ವರ ದೇವಾಲಯ ಗರ್ಭಗೃಹ, ಅರ್ಧಮಂಟಪ, ನವರಂಗ ಮತ್ತು ಮುಖಮಂಟಪ ಹೊಂದಿದ್ದು, ಈ ದೇವಾಲಯದಲ್ಲಿ ಶಿವಲಿಂಗವಿದ್ದು ಇಳಿದಾದ ಮೇಲ್ಚಾವಣೆ ಈ ದೇವಾಲಯದ ವಿಶೇಷ. ದೇವಾಲಯ ಪಕ್ಕದಲ್ಲಿ ಕ್ರಿ.ಶ.1148ರ ಶಿಲಾಶಾಸನವಿದೆ. ಇವುಗಳಲ್ಲದೇ ಭೀಮರತಿ ಹೊಂಡ, ಮೌನೇಶ್ವರ ದೇವಾಲಯ, ಖಡ್ಗತೀರ್ಥ, ರಾಮಲಕ್ಷ್ಮಣರ ದೇವಾಲಯಗಳು ಕೂಡ ಇಲ್ಲಿನ ಪ್ರಮುಖ ಆಕರ್ಷಣೆ.

    ಕ್ರಿ.ಶ.1ನೇ ಶತಮಾನದಲ್ಲಿ ಕಾಳಿಕಾ ದೇವಸ್ಥಾನ ನಿರ್ಮಾಣಗೊಂಡಿರಬಹುದು ಪುರಾತತ್ವ ಇಲಾಖೆ ತಿಳಿಸಿದೆ. ಈ ದೇವಾಲಯವನ್ನು ಹೇಮಾಡನೆಂಬುವನು ಕಟ್ಟಿದ್ದು, ದೇವಿಯ ಗರ್ಭಗುಡಿಯು ಬೇರೆಯಾಗಿದ್ದು ಮಂಟಪವು ದೊಡ್ಡದಿದೆ. ಶ್ರೀ ಕಾಳಿಕಾದೇವಿಯ ಮೂರ್ತಿಯು 9 ಅಡಿ ಎತ್ತರವಿದ್ದು ಸ್ವರ್ಣ ರೇಖಾಂಕಿತ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತನೆ ಹೊಂದಿದೆ. ಬಲಗೈಯಲ್ಲಿ ಖಡ್ಗ, ತ್ರಿಶೂಲ, ಬಾಕು, ಎಡಗೈಯಲ್ಲಿ ಡಮರು, ಸರ್ಪ, ಖೇಟಕ ಮತ್ತು ಪಾನ ಪಾತ್ರೆ ಹೊಂದಿದ್ದು ಆಕರ್ಷಕವಾಗಿದೆ. ಪೂಜಾ ಸಮಯದಲ್ಲಿ ದೇವಿ ತನ್ನದೇ ಆಭರಣಗಳ ಮೂಲಕ ಶೋಭಿಸುತ್ತಾಳೆ

    ಪ್ರತಿ ವರ್ಷ ನಡೆಯುವ ಯುಗಾದಿಗೆ ದೇವಿಯ ಪಲ್ಲಕ್ಕಿ ಉತ್ಸವ ಲಕ್ಷಾಂತರ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಕಾಳಿಕಾದೇವಿಯ ಎದುರಿನಲ್ಲಿ ದೇವಿಗೆ ಆಭಿಮುಖವಾಗಿ ಕಾಲಭೈರವ ದೇವಾಲಯವಿದೆ. ಈ ದೇವಾಲಯವನ್ನು ಕ್ರಿ.ಶ. 11ನೇ ಶತಮಾನದಲ್ಲಿ ಚಾಲುಕ್ಯ ಅರಸರ ಮಾಂಡಲಿಕನಾಗಿದ್ದ ಹೆಬ್ಬೆಯ ನಾಯಕನು ಕಟ್ಟಿಸಿದ್ದಾನೆ. ಕಾಳಿಕಾ ದೇವಸ್ಥಾನದ ಬದಿಯಲ್ಲಿ ಕಮಠೇಶ್ವರ ಹಾಗೂ ಭೈರವೇಶ್ವರ ದೇವಾಲಯಗಳಿವೆ. ಕಮಠೇಶ್ವರ ದೇವಾಲಯದ ಮುಂಭಾಗದಲ್ಲಿ ಬ್ರಹ್ಮದೇವರ ವೇದಿಕೆಯಿದೆ. ಕಾಳಿಕಾ ದೇವಸ್ಥಾನದ ಪೂರ್ವಾಭಿಮುಖವಾಗಿರುವ ಮಹಾದ್ವಾರ ದಾಟಿದ ಕೂಡಲೇ ಒಳಗೆ ಎಡಬದಿಗೆ, ಬುತ್ತಿ ಹಾರಿಸುವ ವೇದಿಕೆ ಇದೆ.

    ಇದೆಲ್ಲವೂ ದೇವಸ್ಥಾನದ ಒಳಗಡೆ ಆದರೆ ಇನ್ನು ಶ್ರೀ ಕಾಳಿಕಾ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಎಡಬದಿಗೆ ಬನ್ನಿ ಮಹಾಂಕಾಳಿ ಎಂಬ ಹೆಸರಿನ ಚಿಕ್ಕ ಗುಡಿಯಿದೆ. ಶ್ರೀ ಕಾಳಿಕಾದೇವಿಯ ಪಲ್ಲಕ್ಕಿಯು ಇಲ್ಲಿಯವರೆಗೂ ತರಲಾಗುತ್ತದೆ. ಇದಕ್ಕೆ ಕಾಳಿಕಾ ಪಾದಗಟ್ಟೆ ಅಂತಾ ಕರೆಯುತ್ತಾರೆ. ಕಾಳಿಕಾ ದೇವಸ್ಥಾನದಿಂದ ತುಸು ದೂರದಲ್ಲಿ ಭೀಮರಥಿ ಹೊಂಡವಿದೆ. ಇದರ ಬದಿಗೆ ಖಡ್ಗತೀರ್ಥ ಎಂಬ ಮತ್ತೊಂದು ಹೊಂಡವಿದೆ. ರಾಕ್ಷಸರ ಸಂಹಾರದ ನಂತರ ಕಾಳಿಕಾದೇವಿ ತನ್ನ ಖಡ್ಗವನ್ನು ಈ ಹೊಂಡದಲ್ಲಿ ತೊಳೆದಿದ್ದರಿಂದ ಅದಕ್ಕೆ ಖಡ್ಗತೀರ್ಥವೆಂಬ ಹೆಸರು ಬಂತು ಎಂಬ ಐತಿಹ್ಯವಿದೆ. ಇದೇ ಹೊಂಡದ ಪಕ್ಕದಲ್ಲಿ ಬೆಟ್ಟದ ಮೇಲೆ ಶ್ರೀ ಕಾಳಿಕಾದೇವಿಯ ಹೆಜ್ಜೆಗುರುತುಗಳಿವೆ. ರಾಕ್ಷಸರ ಸಂಹಾರ ಮಾಡುವ ಸಂದರ್ಭದಲ್ಲಿ ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ ಹಾರಿದ ವೇಳೆ ಈ ಹೆಜ್ಜೆಗುರುತುಗಳು ಮೂಡಿವೆ ಅನ್ನೋದು ಇಲ್ಲಿನ ನಂಬಿಕೆ.

    ಈ ದೇವಾಲಯದಲ್ಲಿ ಶುಕ್ರವಾರ, ಮಂಗಳವಾರ ಹಾಗೂ ಅಮವಾಸ್ಯೆಯಂದು ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಜರುಗುತ್ತದೆ. ಪ್ರತಿನಿತ್ಯವೂ ಬೆಳಿಗ್ಗೆ 4 ಗಂಟೆಯಿಂದಲೇ ಪೂಜೆ ಆರಂಭವಾಗುತ್ತದೆ. ವಿಶೇಷವಾಗಿ ಸೀರೆಗಳಿಂದ ದೇವಿಯನ್ನು ಅಲಂಕರಿಸಲಾಗುತ್ತೆ. ಶ್ರಾವಣ ಮಾಸದಲ್ಲಿ ಪ್ರತಿದಿನ ಬೆಳಗ್ಗೆ 3 ಗಂಟೆಯಿಂದಲೇ ಪ್ರಾರಂಭವಾಗುವ ಮಹಾಪೂಜೆ, ಪಂಚಾಮೃತ ಅಭೀಷೇಕ, ನೈವೇದ್ಯಗಳೊಂದಿಗೆ ವೈಶಿಷ್ಟ್ಯಪೂರ್ಣವಾಗಿರುತ್ತದೆ.

    ರಾಮಾಯಣದ ಕಥೆ ಏನು?
    ರಾಮಾಯಣಕ್ಕೆ ಸಂಬಂಧಿಸಿದಂತೆ ರಘುವಂಶದ ಚಕ್ರವರ್ತಿ ದಶರಥನು ಅನೇಕ ವರ್ಷಗಳ ಕಾಲ ಮಕ್ಕಳಾಗದೇ ಇದ್ದಾಗ ಯಜ್ಞಯಾಗಾದಿಗಳನ್ನು ಮಾಡುವ ಸಂದರ್ಭದಲ್ಲಿ ಋಷ್ಯಶೃಂಗ ಮುನಿಗಳನ್ನು ಆಹ್ವಾನಿಸಿ ಆ ಯಾಗಕ್ಕೆ ಅಗ್ನಿಹೋತ್ರಿಯಾಗಲು ಕೋರಿಕೆ ಸಲ್ಲಿಸಿದ್ದನಂತೆ. ಇದರ ಕುರುಹಾಗಿ ಲಂಕಾಸುರನ ಸಂಹರಿಸಿ ಅಯೋಧ್ಯೆಯಿಂದ ರಾಮನು ಮರಳಿ ಬರುವಾಗ ಇಲ್ಲಿಗೆ ಆಗಮಿಸಿ ಕಾಳಿಕಾ ಮಾತೆಯನ್ನು ಪೂಜಿಸಿ ಋಷ್ಯಶೃಂಗ ಮುನಿಗಳ ಆಶೀರ್ವಾದ ಪಡೆದ ಬಗ್ಗೆ ಕೂಡ ಉಲ್ಲೇಖಗಳು ಪುರಾಣದಲ್ಲಿ ಬರುತ್ತವೆ. ಬಹುತೇಕ ಮಾಹಿತಿ ಕ್ರಿ.ಶ 1148 ರಲ್ಲಿ ಕಲ್ಯಾಣ ಚಾಲುಕ್ಯ ಅರಸು ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ಕಾಳಿಕಾ ದೇವಸ್ಥಾನದ ಬಳಿ ನೆಟ್ಟ ಶಿಲಾ ಶಾಸನಗಳಿಂದ ತಿಳಿದುಬರುತ್ತದೆ.

    ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸತಿ ವ್ಯವಸ್ಥೆಯಿದೆ. ಈ ದೇವಾಲಯ ಆವರಣದಲ್ಲಿರುವ ಸಭಾಮಂಟಪದಲ್ಲಿ ವಿವಾಹಗಳು ಜರುಗುತ್ತವೆ. ಅಲ್ಲದೇ ಮಲ್ಲಕಂಭ, ಯೋಗ, ಸಂಗೀತ, ಗಾಯನ. ವಿವಿಧ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತದೆ. ದೇವಾಲಯ ಪಕ್ಕದಲ್ಲಿ ವಿಭಿನ್ನ ಕಲಾಕೃತಿಗಳ ಉದ್ಯಾನ ನಿರ್ಮಿಸಲಾಗುತ್ತಿದ್ದು ಅದು ಕೂಡ ಗಮನ ಸೆಳೆಯುತ್ತದೆ. ದೇವಾಲಯಕ್ಕೆ ಬರುವಾಗ ಮಾರ್ಗ ಮಧ್ಯೆ ಶಿರಸಂಗಿ ಲಿಂಗರಾಜರ ಕೋಟೆ ಇದೆ. ಇದೂ ಕೂಡ ಪ್ರವಾಸಿ ತಾಣವೇ.

    ಈ ದೇವಾಲಯದಲ್ಲಿ ಕಾಯಿ ಕಟ್ಟುವ ಕಾರ್ಯ ಭಕ್ತಾಧಿಗಳಿಂದ ಜರುಗುತ್ತದೆ. ಇಲ್ಲಿ ಹರಕೆ ಹೊತ್ತು ಬರುವ ಭಕ್ತರು ದೇವಾಲಯ ಆವರಣದಲ್ಲಿ ಕಾಯಿ ಕಟ್ಟುವರು. ಅಂದರೆ ದೇವಿಯ ಮೊರೆ ಹೋಗಿ ಹರಕೆ ಹೊತ್ತು ದೇವಾಲಯದಲ್ಲಿ 51 ರೂ. ನೀಡಿ ಕಾಯಿ ಪಡೆದು ಇಲ್ಲಿ ಕಟ್ಟುವರು. ತಮ್ಮ ಹರಕೆ ಈಡೇರಿದ ನಂತರ ಬಂದು ಕಾಯಿಯನ್ನು ಬಿಚ್ಚಿ ಅಭಿಷೇಕ ಮಾಡಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
    –  ಅರುಣ್ ಬಡಿಗೇರ್

     

  • ಕೇರಳ ಸರ್ಕಾರಕ್ಕೆ ಸಾಹಿತಿ ಚಂಪಾ ಅಭಿನಂದನೆ

    ಕೇರಳ ಸರ್ಕಾರಕ್ಕೆ ಸಾಹಿತಿ ಚಂಪಾ ಅಭಿನಂದನೆ

    ಧಾರವಾಡ: ಇಬ್ಬರು ಮಹಿಳೆಯರಿಗೆ ಭದ್ರತೆ ನೀಡಿ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಲು ಸಹಾಯ ಮಾಡಿದ್ದಕ್ಕೆ ಸಾಹಿತಿ ಚಂದ್ರಶೇಖರ ಪಾಟೀಲ್ ಅವರು ಕೇರಳ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೇರಳ ಸರ್ಕಾರ ನಡೆದುಕೊಂಡಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಹೀಗಾಗಿ ಕೇರಳ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೆನೆ. ಅಲ್ಲಿನ ಸರ್ಕಾರ ಸೂಕ್ತವಾದ ನಿರ್ಣಯ ತೆಗೆದುಕೊಂಡಿದೆ. ಮಹಿಳೆಯರ ಪ್ರವೇಶಕ್ಕೆ ವಿರೋಧಿಸಿದರೆ ಸುಪ್ರಿಂಗೆ ಅಗೌರವ ಸಲ್ಲಿಸಿದಂತಾಗುತ್ತದೆ. ನಾವು ಇಡೀ ಕೇರಳ ಜನತೆಗೆ ಅಭಿನಂದನೆ ಸಲ್ಲಿಸಬೇಕು. ಒಬ್ಬರಿಗೆ ಎಂಟ್ರಿ ಸಿಕ್ಕರೆ ಸಾಕು ಮೂಢನಂಬಿಕೆ, ಕೋಮುವಾದ ಆಧುನಿಕ ಮೌಲ್ಯಗಳಲ್ಲ ಅಂತ ಅವರು ಹೇಳಿದ್ರು.

    ಇದೇ ವೇಳೆ ಪ್ರೋ. ಭಗವಾನ್ ಪುಸ್ತಕದಲ್ಲಿ ಶ್ರೀರಾಮನಿಗೆ ಅವಮಾನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದ ಮುಖ್ಯ ಗುಣ ಪ್ರತಿರೋಧವಾಗಿದೆ. ಪ್ರಜಾಪ್ರಭುತ್ವದಲ್ಲಿ ವೈಚಾರಿಕ ವಿರೋಧಗಳಿರಬೇಕು. ರಾಮಮಂದಿರ ಏಕೆ ಬೇಡ? ಹಳೆಯ ಪುಸ್ತಕವಾಗಿದೆ. ಇದೀಗ ಅದರ ಎರಡನೇ ಮುದ್ರಣ ಹೊರ ಬರುತ್ತಿದೆ. ಈಗ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ‘ಬೇಡ’ ಅನ್ನೋ ಪುಸ್ತಕ ಬರೆಯಲಾಗಿದೆ. ಅದನ್ನು ಎದುರಿಸಲು ‘ಏಕೆ ಬೇಕು?’ ಅನ್ನೋದನ್ನು ಬರೆಯಬೇಕು ಅಂದ್ರು. ಇದನ್ನೂ ಓದಿ: ಕಾನೂನಾತ್ಮಕವಾಗಿ ಮಾನ್ಯತೆ ಸಿಕ್ಕಿದ್ದು, ಹಿಂದೂಗಳು ಹಿಂದೂ ದೇವಸ್ಥಾನಕ್ಕೆ ಹೋಗೋದ್ರಲ್ಲಿ ತಪ್ಪೇನಿದೆ- ಜಯಮಾಲಾ ಪ್ರಶ್ನೆ

    ‘ಏಕೆ ಬೇಕು?’ ಅನ್ನೋ ಪುಸ್ತಕ ಬರೆದು ಎದುರಿಸಲಿ. ಆಗ ಅದು ಪ್ರಜಾಪ್ರಭುತ್ವದ ಗುಣವೆನ್ನಿಸಿಕೊಳ್ಳುತ್ತದೆ. ನಾನು ಮೂಲತಃ ನಾಸ್ತಿಕ. ಹೀಗಾಗಿ ದೇವರು, ಪುರಾಣಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಮಂದಿರ ನಿರ್ಮಾಣದ ವಿಚಾರ ನನ್ನ ವ್ಯಾಪ್ತಿಯಲ್ಲಿ ಬರೋದಿಲ್ಲ. ವಾಲ್ಮೀಕಿ ಮುಂಚೆಯೂ ರಾಮಾಯಣದ ಕಥೆ ಇದೆ ಅಂತಾರೆ. ನನ್ನ ಪಾಲಿಗೆ ಅದೊಂದು ಮಹಾಕಾವ್ಯವಾಗಿದೆ. ವಾಲ್ಮೀಕಿ ರಾಮಾಯಣ ಸಂಸ್ಕೃತ ಮೂಲದ್ದಾಗಿದೆ. ಆದರೆ ಸಂಸ್ಕೃತ ನನಗೆ ಬರೋದಿಲ್ಲ. ಹೀಗಾಗಿ ನಾನು ವಾಲ್ಮೀಕಿ ರಾಮಾಯಣ ಓದಿಲ್ಲ. ನಾನು ಕುವೆಂಪು ರಾಮಾಯಣ ಓದಿದ್ದೇನೆ. ನಮ್ಮಲ್ಲಿ ಒಟ್ಟು 300 ರಾಮಾಯಣಗಳಿವೆ. ರಾಮ ದೇವರೋ, ಇತಿಹಾಸ ಪುರುಷನೋ ಅನ್ನೋದನ್ನು ಸಂಶೋಧಕರಿಗೆ ಬಿಡಬೇಕು. ಹೀಗಾಗಿ ಈ ವಿಚಾರ ನನ್ನ ವ್ಯಾಪ್ತಿಗೆ ಬರೋದಿಲ್ಲ ಅಂತ ಅವರು ತಿಳಿಸಿದ್ರು.

    ರಾಮಮಂದಿರ ನಿರ್ಮಾಣ ವಿಚಾರದ ಕುರಿತು ಮಾತನಾಡಿದ ಸಾಹಿತಿ, ಮೋದಿಯವರು ಕೋರ್ಟ್ ಆದೇಶ ಬಂದ ಮೇಲೆ ನೋಡೋಣ ಅಂದಿದ್ದಾರೆ. ಹೀಗಾಗಿ ಪ್ರಧಾನಿ ಹೇಳಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲಿವುಡ್ಡಲ್ಲಿ ಶ್ರೀರಾಮಚಂದ್ರ ಆಗಲಿದ್ದಾರೆ ದಿಗಂತ್!

    ಬಾಲಿವುಡ್ಡಲ್ಲಿ ಶ್ರೀರಾಮಚಂದ್ರ ಆಗಲಿದ್ದಾರೆ ದಿಗಂತ್!

    ದಿಗಂತ್ ಅಭಿನಯದ ಕಥೆಯೊಂದು ಶುರುವಾಗಿದೆ ಚಿತ್ರ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಮೂಲಕವೇ ದಿಗಂತ್ ಬದುಕಲ್ಲಿ ಹೊಸ ಅಲೆಯೊಂದು ಶುರುವಾಗೋ ಲಕ್ಷಣಗಳೂ ಕಾಣಿಸಲಾರಂಭಿಸಿದೆ. ಈ ಚಿತ್ರದ ಯಶಸ್ಸಿನ ಬೆನ್ನಲ್ಲಿಯೇ ದಿಗಂತ್ ಬಾಲಿವುಡ್ ಚಿತ್ರವೊಂದರಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ!

    ಬಾಲಿವುಡ್‍ನ ಖ್ಯಾತ ನಿರ್ದೇಶಕ ಕುನಾಲ್ ಕೊಹ್ಲಿ ಪೌರಾಣಿಕ ಕಥಾ ಹಂದರದ ರಾಮ್ ಯುಗ್ ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿನ ಶ್ರೀರಾಮಚಂದ್ರನ ಪಾತ್ರಕ್ಕೆ ದೂದ್ ಪೇಡಾ ದಿಗಂತ್ ನಾಯಕನಾಗಿ ಆಯ್ಕೆಯಾಗಿದ್ದಾರೆ.

    ಕುನಾಲ್ ಕೊಹ್ಲಿ ನಿರ್ದೇಶನದ ಈ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರೂ ಒಂದೊಂದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಆದರೆ ರಾಮನ ಪಾತ್ರಕ್ಕೆ ದಿಗಂತ್ ನಿಕ್ಕಿಯಾಗಿದ್ದಾರೆ.

    ಬಹು ಕಾಲದಿಂದಲೂ ಕುನಾಲ್ ಮತ್ತು ದಿಗಂತ್ ಪರಿಚಿತರು. ಆದ್ದರಿಂದಲೇ ದಿಗಂತ್ ವ್ಯಕ್ತಿತ್ವಕ್ಕೆ ಮನ ಸೋತು ಅವರನ್ನೇ ಶ್ರೀರಾಮಚಂದ್ರನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿರೋದಾಗಿ ಕುನಾಲ್ ಹೇಳಿದ್ದಾರೆ. ಇನ್ನು ದೂರದರ್ಶನದಲ್ಲಿ ಧಾರಾವಾಹಿಯಾಗಿ ಬರುತ್ತಿದ್ದ ರಾಮಾಯಣ ಕಥೆ ಅಂದ್ರೆ ದಿಗಂತ್ ಅವರಿಗೆ ಇಷ್ಟವಾಗುತ್ತಿತ್ತಂತೆ. ಬಾಲ್ಯದಲ್ಲಿಯೇ ಅವರನ್ನು ರಾಮನ ಪಾತ್ರ ಪ್ರಭಾವಿಸಿತ್ತಂತೆ. ಇದೀಗ ತಾನೇ ರಾಮನಾಗಿ ನಟಿಸೋ ಅವಕಾಶ ಸಿಕ್ಕಿದ್ದರಿಂದ ದಿಗಂತ್ ಖುಷಿಗೊಂಡಿದ್ದಾರೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ವೈರಲ್ ಆಯ್ತು ಕೇರಳ ಶಾಸಕಿಯ ರಾಮಾಯಣ ಪಠಣ: ವಿಡಿಯೋ ನೋಡಿ

    ವೈರಲ್ ಆಯ್ತು ಕೇರಳ ಶಾಸಕಿಯ ರಾಮಾಯಣ ಪಠಣ: ವಿಡಿಯೋ ನೋಡಿ

    ತಿರುವನಂತಪುರಂ: ಕೇರಳದ ಸಿಪಿಎಂ ಶಾಸಕಿಯೊಬ್ಬರು ರಾಮಾಯಣ ವಾಚನ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಕೇರಳದಲ್ಲಿ ಬೆಳೆಯುತ್ತಿರುವ ಆರೆಸ್ಸೆಸ್ ಹಾಗೂ ಬಿಜೆಪಿಯ ಪ್ರಾಬಲ್ಯವನ್ನು ಎದುರಿಸಲು ಸಿಪಿಎಂ ಸೇರಿದಂತೆ ಎಡಪಂಥೀಯ ಸಂಘಟನೆಗಳು ರಾಮಾಯಣ ವಾಚನ ಮತ್ತು ರಾಮಾಯಣ ಕುರಿತ ವಿಚಾರ ಸಂಕಿರಣಗಳನ್ನು ಆಯೋಜಿಸಲು ಮುಂದಾಗಿರುವ ಬೆನ್ನಲ್ಲೇ ಶಾಸಕಿಯ ವಿಡಿಯೋ ಸಾಕಷ್ಟು ಸುದ್ದಿ ಮಾಡಿದೆ.

    ಕೇರಳದ ಕಾಯಂಕುಳಂ ವಿಧಾನಸಭಾ ಕ್ಷೇತ್ರದ ಶಾಸಕಿ ಯು. ಪ್ರತಿಭಾ ಹರಿ ಅವರು ಕರ್ಕಾಟಕ ಮಾಸದ ಆಚರಣೆಗಳ ಭಾಗವಾಗಿ ರಾಮಾಯಣ ವಾಚನ ಮಾಡುತ್ತಿರುವ ವೀಡಿಯೋ ಒಂದನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಕೆಲವೇ ಗಂಟೆಗಳಲ್ಲಿ ಅದನ್ನು ಹಲವರು ಶೇರ್ ಮಾಡಿಕೊಂಡಿದ್ದಾರೆ. ಆ ವೀಡಿಯೋವನ್ನು 1.32 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

    ಸಾಮಾನ್ಯವಾಗಿ ಎಡಪಂಥೀಯ ವಿಚಾರಧಾರೆಯವರು ಲೆನಿನ್, ಮಾರ್ಕ್ಸ್ ಮುಂತಾದ ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಓದುವುದು ಸಾಮಾನ್ಯ. ಆದರೆ ಸಿಪಿಎಂ ಶಾಸಕಿಯೊಬ್ಬರು ರಾಮಾಯಣ  ವಾಚಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

     

    https://www.youtube.com/watch?v=4yt2tO8BIbY

  • ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ರಾಮಾಯಣ ಕಾಲದಲ್ಲೇ ಇತ್ತು: ಯುಪಿ ಡಿಸಿಎಂ

    ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ರಾಮಾಯಣ ಕಾಲದಲ್ಲೇ ಇತ್ತು: ಯುಪಿ ಡಿಸಿಎಂ

    ಲಕ್ನೋ: ರಾಮಾಯಣ ಕಾಲದಲ್ಲೇ ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ಇತ್ತು ಅದಕ್ಕೆ ಸಾಕ್ಷಿ ಸೀತಾಜಿ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ.

    ನಿನ್ನೆಯೆಷ್ಟೇ ಪತ್ರಿಕೋದ್ಯಮ ಮಹಾಭಾರತದ ಕಾಲದಲ್ಲೇ ಇತ್ತು ಎಂದು ಹೇಳಿದ್ದ ಅವರು ಇವತ್ತು ಸೀತಾಜಿ ಮಡಿಕೆಯಲ್ಲಿ ಜನಿಸಿದ್ದಳು ಎಂದು ಹೇಳಿದ್ದಾರೆ. ಸೀತಾ ಮಾತೆ ಮಡಿಕೆಯಲ್ಲಿ ಜನಿಸಿದ ಕಾರಣ ರಾಮಾಯಣದಲ್ಲೇ ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ಇತ್ತು ಎಂದು ನಾವು ಊಹಿಸಿಕೊಳ್ಳಬಹುದು ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.

    ಮಥುರಾ ದಲ್ಲಿ ನಡೆಯುತ್ತಿರುವ ಹಿಂದಿ ಪತ್ರಿಕೋದ್ಯಮ ದಿನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಹಾಭಾರತ ಯುದ್ಧದ ಚಿತ್ರಣವನ್ನು ಹಸ್ತಿನಾವತಿಯಲ್ಲಿದ್ದ ಧೃತರಾಷ್ಟ್ರನಿಗೆ ಸಂಜಯನು ವಿವರಿಸುತ್ತಿದ್ದನು. ಇದನ್ನು ಗಮನಿಸಿದಾಗ ಲೈವ್ ಟೆಲಿಕಾಸ್ಟ್ ಮಹಾಭಾರತದ ಸಮಯದಲ್ಲೇ ಇತ್ತು ಎಂದು ಹೇಳಿಕೆ ನೀಡಿದ್ದರು.

    ಇನ್ನು ನಾರದನನ್ನು ಇವತ್ತಿನ ಗೂಗಲ್ ಗೆ ಹೋಲಿಸಿ ಮಾತನಾಡಿದ ಅವರು ಮಾಹಿತಿಯನ್ನು ಯಾರಿಂದ ಯಾರಿಗೆ ಬೇಕಾದರೂ ಯಾವ ಜಾಗಕ್ಕೂ ಮೂರು ಬಾರಿ ನಾರಾಯಣ ಎಂದು ಹೇಳಿ ತಲುಪಿಸುತ್ತಿದ್ದರು ಎಂದು ತಿಳಿಸಿದ್ದರು.

  • ಸೀತೆಯ ಜನ್ಮ ಸ್ಥಳದಿಂದ ಅಯೋಧ್ಯೆಗೆ ಬಸ್: ನೇಪಾಳದಲ್ಲಿ ಮೋದಿ ಚಾಲನೆ

    ಸೀತೆಯ ಜನ್ಮ ಸ್ಥಳದಿಂದ ಅಯೋಧ್ಯೆಗೆ ಬಸ್: ನೇಪಾಳದಲ್ಲಿ ಮೋದಿ ಚಾಲನೆ

    ಕಠ್ಮಂಡು: ಸೀತಾ ದೇವಿಯ ಜನ್ಮ ಸ್ಥಳವಾದ ಜನಕಪುರದಿಂದ ಆಯೋಧ್ಯೆಗೆ ಸಂಪರ್ಕ ಕಲ್ಪಿಸುವ ಬಸ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

    2 ದಿನ ನೇಪಾಳ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಜನಕಪುರದ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂತರ ನೇಪಾಳ ಪ್ರಧಾನಮಂತ್ರಿ ಶರ್ಮಾ ಓಲಿ ಮತ್ತು ನರೇಂದ್ರ ಮೋದಿ ಜನಕಪುರ, ಅಯೋಧ್ಯೆ ನಡುವಿನ ಬಸ್ ಸೇವೆಗೆ ಚಾಲನೆ ನೀಡಿದರು.

    ಈ ವೇಳೆ ಮಾತನಾಡಿದ ಮೋದಿ, ಸೀತಾ ಮಾತೆಯ ಜನ್ಮ ಸ್ಥಳಕ್ಕೆ ಬಂದು ಪುನೀತನಾಗಿದ್ದೇನೆ. ರಾಮಾಯಣದ ಸಕ್ರ್ಯೂಟ್ ಅನ್ನು ಬೆಸೆಯಲು ಎರಡೂ ದೇಶಗಳು ಶ್ರಮಿಸಲಿವೆ ಎಂದು ತಿಳಿಸಿದರು.

    ಏನಿದು ರಾಮಾಯಣ ಸರ್ಕ್ಯೂಟ್?
    ಧಾರ್ಮಿಕ ಪ್ರವಾಸಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಪ್ರವಾಸೋದ್ಯಮ ಇಲಾಖೆ ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ಸಾಧಿಸಲು ವಿಶೇಷ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಇದರಲ್ಲಿ ರಾಮಾಯಣ ಸರ್ಕ್ಯೂಟ್ ಒಂದಾಗಿದ್ದು, ಇದರ ಅಡಿಯಲ್ಲಿ ರಾಮಾಯಣ ಕಥೆಗೆ ಸಂಬಂಧಿಸಿದ 15 ಪ್ರವಾಸಿ ಜಾಗಗಳನ್ನು ಸಂಪರ್ಕಿಸುವ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ.

    ಉತ್ತರಪ್ರದೇಶದ ಅಯೋಧ್ಯೆ, ನಂದಿ ಗ್ರಾಮ್, ಶೃಂಗವೇರ್ ಪುರ ಮತ್ತು ಚಿತ್ರಕೂಟ, ಬಿಹಾರದ ಸೀತಾಮಡಿ, ಬಕ್ಸರ್ ಮತ್ತು ದರ್ಭಂಗಾ, ಮಧ್ಯಪ್ರದೇಶದ ಚಿತ್ರಕೂಟ, ಒಡಿಶಾದ ಮಹೇಂದ್ರ ಗಿರಿ, ಛತ್ತೀಸ್‍ಗಢದ ಜಗದಾಲ್ ಪುರ, ಮಹಾರಾಷ್ಟ್ರದ ನಾಸಿಕ್ ಮತ್ತು ನಾಗ್ಪುರ, ತೆಲಂಗಾಣದ ಭದ್ರಾಚಲಮ್, ಹಾಗೂ ತಮಿಳುನಾಡಿನ ರಾಮೇಶ್ವರಂ, ಕರ್ನಾಟಕದ ಹಂಪಿ ರಾಮಾಯಣ ಸರ್ಕ್ಯೂಟ್ನಲ್ಲಿರಲಿದೆ.

    ಸೀತಾ ಮಾತೆಯ ಮಂದಿರವನ್ನು 1910ರಲ್ಲಿ ನಿರ್ಮಿಸಲಾಗಿದೆ. ಮೂರು ಮಹಡಿಯ ಮಂದಿರವನ್ನು ಕಲ್ಲು ಮತ್ತು ಮಾರ್ಬಲ್ ಗಳಿಂದ ಕಟ್ಟಲಾಗಿದೆ. 50 ಮೀಟರ್ ಎತ್ತರವಿರುವ ಮಂದಿರವು 4860 ಚದುರ ಅಡಿಯಲ್ಲಿ ವ್ಯಾಪಿಸಿದೆ.