Tag: Ramanagaram

  • ಕಾರಿನ ಟಯರ್ ಪಂಚರ್ ಅಂತಾ ಹೇಳಿ 15 ಲಕ್ಷ ರೂ. ಕದ್ರು

    ಕಾರಿನ ಟಯರ್ ಪಂಚರ್ ಅಂತಾ ಹೇಳಿ 15 ಲಕ್ಷ ರೂ. ಕದ್ರು

    ರಾಮನಗರ: ಖತರ್ನಾಕ್ ಕಳ್ಳರು ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ 15 ಲಕ್ಷ ರೂ. ಹಣ ಕಳವು ಮಾಡಿರುವ ಘಟನೆ ರಾಮನಗರದ ಸ್ಪೂರ್ತಿ ಭವನದ ಬಳಿ ನಡೆದಿದೆ.

    ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರಘುನಾಥರೆಡ್ಡಿ ಹಣ ಕಳೆದುಕೊಂಡ ವ್ಯಕ್ತಿ. ಜಮೀನಿನ ವ್ಯಾಪಾರಕ್ಕೆಂದು ರಾಮನಗರಕ್ಕೆ ಬಂದಿದ್ದ ವೇಳೆ ಈ ಕಳ್ಳತನ ನಡೆದಿದೆ. ನಗರದ ಸ್ಪೂರ್ತಿ ಭವನದ ಸಮೀಪದಲ್ಲಿನ ಸಬ್ ರಿಜಿಸ್ಟರ್ ಆಫೀಸ್ ಬಳಿ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನ ಬಳಿ ಬಂದ ಇಬ್ಬರು ವ್ಯಕ್ತಿಗಳು ಕಾರ್ ನ ಟಯರ್ ಪಂಚರ್ ಆಗಿದೆ ಅಂತಾ ಹೇಳಿದ್ದಾರೆ. ಕಳ್ಳರ ಮಾತನ್ನು ನಂಬಿದ ರಘುನಾಥ್ ಟಯರ್ ನೋಡುತ್ತಾ ನಿಂತಾಗ ಕಾರಿನಲ್ಲಿದ್ದ ಹಣವನ್ನು ಕದ್ದು ಪರಾರಿಯಾಗಿದ್ದಾರೆ.

    ಕೆಲ ನಿಮಿಷಗಳ ಬಳಿಕ ಕಾರಿನಲ್ಲಿದ್ದ ಹಣ ಕಾಣದೇ ಇರುವುದು ಗಮನಕ್ಕೆ ಬಂದಾಗ ರಘುನಾಥ್ ಅವರಿಗೆ ಕಳ್ಳತನದ ಅರಿವಾಗಿದೆ. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಚಿರತೆ ದಾಳಿಗೆ ಕುಟುಂಬ ನಿರ್ವಹಣೆಗಿದ್ದ ಕುರಿ, ಮೇಕೆ ಬಲಿ- ಗ್ರಾಮಸ್ಥ ಕಂಗಾಲು

    ಚಿರತೆ ದಾಳಿಗೆ ಕುಟುಂಬ ನಿರ್ವಹಣೆಗಿದ್ದ ಕುರಿ, ಮೇಕೆ ಬಲಿ- ಗ್ರಾಮಸ್ಥ ಕಂಗಾಲು

    ರಾಮನಗರ: ಚಿರತೆ ದಾಳಿಗೆ ಮೂರು ಕುರಿ ಮತ್ತು ಎರಡು ಮೇಕೆ ಬಲಿಯಾದ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಟಮಾರನಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ ನಿವಾಸಿ ಮಧು ಎಂಬವರಿಗೆ ಸೇರಿದ ಮೂರು ಕುರಿ ಹಾಗೂ ಎರಡು ಮೇಕೆಗಳನ್ನು ಭಾನುವಾರ ತಡರಾತ್ರಿ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಮಧು ಅವರು ತಮ್ಮ ಕುಟುಂಬದ ಜೀವನೋಪಾಯಕ್ಕಾಗಿ ಕುರಿ, ಮೇಕೆ ಸಾಕಾಣೆ ಮಾಡಿಕೊಂಡಿದ್ದರು. ಆದರೆ ಈಗ ಚಿರತೆ ದಾಳಿಯಿಂದ ಕುರಿ, ಮೇಕೆಯನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

    ಗ್ರಾಮದಲ್ಲಿ ಪದೇ ಪದೇ ಚಿರತೆ ದಾಳಿ ನಡೆಯುತ್ತಿದ್ದರೂ ಅರಣ್ಯ ಅಧಿಕಾರಿಗಳು ತಲೆ ಕೆಡಸಿಕೊಂಡಿಲ್ಲ. ಈಗ ಮತ್ತೆ ಕುರಿ ಮೇಕೆಗಳ ಸಾವಾಗಿದ್ದರಿಂದ ಗ್ರಾಮಸ್ಥರು ಆಕ್ರೋಶದಿಂದ ಚಿರತೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

  • ಕೆರೆಯಲ್ಲಿ ಮೀನಿಗಾಗಿ ಬಲೆ ಬೀಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ್ರು

    ಕೆರೆಯಲ್ಲಿ ಮೀನಿಗಾಗಿ ಬಲೆ ಬೀಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ್ರು

    ರಾಮನಗರ: ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬೀಸಲು ಹೋದ ಯುವಕರಿಬ್ಬರು ತೆಪ್ಪ ಮುಗುಚಿ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಸಮೀಪದ ನೆಲ್ಲಿಗುಡ್ಡೆ ಕೆರೆಯಲ್ಲಿ ನಡೆದಿದೆ.

    ಬಿಡದಿ ಸಮೀಪದ ಅವರೆಗೆರೆ ಗ್ರಾಮದ ನಿವಾಸಿಗಳಾದ ರವಿ (20) ಹಾಗೂ ಉಮೇಶ್ (31) ಮೃತ ದುರ್ದೈವಿಗಳು.

    ಶನಿವಾರ ಸಂಜೆ ನೆಲ್ಲಿಗುಡ್ಡೆ ಕೆರೆಯಲ್ಲಿ ಮೀನು ಹಿಡಿಯುವ ಸಲುವಾಗಿ ಬಲೆ ಬೀಸಲು ತೆಪ್ಪದಲ್ಲಿ ತೆರಳಿದ್ದರು. ರಾತ್ರಿಯಾದರೂ ಸಹ ಇಬ್ಬರೂ ಮನೆಗೆ ಬಂದಿರಲಿಲ್ಲ. ಅಲ್ಲದೇ ಗ್ರಾಮದಲ್ಲೂ ಅವರಿಬ್ಬರ ಸುಳಿವು ಇರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಸ್ಥಳೀಯರಲ್ಲಿ ವಿಚಾರಿಸಿದಾಗ ಮೀನು ಹಿಡಿಯಲು ನೆಲ್ಲಿಗುಡ್ಡೆ ಕೆರೆಗೆ ಹೋಗಿದ್ದಾರೆ ಎಂದು ತಿಳಿಸಿದ್ದರು.

    ರವಿ ಹಾಗೂ ಉಮೇಶ್ ಕುಟುಂಬದವರು ಬಿಡದಿ ಪೋಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ನಂತರ ಪೊಲೀಸರು ಘಟನೆಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸ್ಥಳದಲ್ಲಿ ಯಾವುದೇ ತೆಪ್ಪವೂ ಇರಲಿಲ್ಲ. ಇದರಿಂದ ತೆಪ್ಪ ಮುಗುಚಿ ಸಾವನ್ನಪ್ಪಿರಬಹುದು ಎಂದು ಶಂಕಿಸಿ ಸ್ಥಳಕ್ಕೆ ಅಗ್ನಿ ಶಾಮಕ ದಳವನ್ನು ಕರೆಸಿ ಶೋಧ ಕಾರ್ಯ ನಡೆಸಲು ಪ್ರಾರಂಭಿಸಿದ್ದಾರೆ. ಕೆರೆಯಲ್ಲಿ ಶವಶೋಧ ನಡೆಸುವ ವೇಳೆ ಮೊದಲಿಗೆ ತೆಪ್ಪ ಸಿಕ್ಕಿದೆ. ಬಳಿಕ ಇಬ್ಬರು ಸಾವನ್ನಪ್ಪಿರುವುದು ಖಾತ್ರಿಯಾಗಿ ಶೋಧ ನಡೆಸಿದಾಗ ಇಬ್ಬರ ಮೃತದೇಹಗಳು ಬಲೆಯಲ್ಲಿ ಸಿಲುಕಿದ್ದು, ಹೊರತೆಗೆಯಲಾಗಿದೆ.

    ಶನಿವಾರ ನಗರದಲ್ಲಿ ಮಳೆಯಾಗಿದ್ದು, ಇದರಿಂದ ಕೆರೆಗೆ ನೀರಿನ ಹರಿವು ಹೆಚ್ಚಾಗಿದೆ. ಏಕಾಏಕಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ತೆಪ್ಪ ಮುಗುಚಿ ಇಬ್ಬರು ಬಲೆಯ ಒಳಗೆ ಸಿಲುಕಿ ಕೆರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಬಿಡದಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

     

     

     

     

     

     

     

  • 100 ರೂ. ಲಂಚ ಪಡೆದು ಏಸ್ ಗಾಡಿಯನ್ನು ಮುಂದಕ್ಕೆ ಬಿಟ್ಟ ರಾಮನಗರ ಪೇದೆ! ವಿಡಿಯೋ ನೋಡಿ

    100 ರೂ. ಲಂಚ ಪಡೆದು ಏಸ್ ಗಾಡಿಯನ್ನು ಮುಂದಕ್ಕೆ ಬಿಟ್ಟ ರಾಮನಗರ ಪೇದೆ! ವಿಡಿಯೋ ನೋಡಿ

    ರಾಮನಗರ: ಟ್ರಾಫಿಕ್ ಪೇದೆಯೊಬ್ಬರು ರಸ್ತೆಯಲ್ಲಿ ವಾಹನ ತಡೆಗಟ್ಟಿ ಲಂಚ ಸ್ವೀಕರಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಾಮನಗರ ಸಂಚಾರಿ ಠಾಣೆಯ ಪೇದೆ ಅರಸು ಎಂಬುವರು 100 ರೂಪಾಯಿಗೆ ದುಂಬಾಲು ಬಿದ್ದು ರಸ್ತೆಯಲ್ಲಿಯೇ ಹಣ ವಸೂಲಿ ಮಾಡಿರುವ ಘಟನೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.

    ಮೈಸೂರು ಕಡೆಯಿಂದ ಹೊರಟಿದ್ದ ಟಾಟಾ ಏಸ್ ವಾಹನವನ್ನು ತಡೆದಿರುವ ಪೇದೆ ಹೆಚ್ಚಿನ ಲೋಡ್ ಹಾಕಿರುವ ಬಗ್ಗೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ವಾಹನದಲ್ಲಿದ್ದ ವ್ಯಕ್ತಿ 50 ರೂಪಾಯಿ ಕೊಡಲು ಮುಂದಾದಾಗ ಬೈದು 100 ರೂಪಾಯಿ ಕೊಟ್ಟರೇ ಮಾತ್ರ ವಾಹನ ಬಿಡ್ತೇನೆ ಇಲ್ಲವೇ ಕೇಸ್ ಹಾಕ್ತೇನೆ ಎಂದು ದಬಾಯಿಸಿದ್ದಾರೆ.

    ಕೊನೆಗೆ ವಾಹನದಲ್ಲಿನ ವ್ಯಕ್ತಿ 100 ರೂ. ಕೊಟ್ಟಿದ್ದಾರೆ. ಲಂಚ ಸ್ವೀಕರಿಸಿದ ಕೂಡಲೇ ಪೇದೆ ಅರಸು ಅವರು ವಾಹನವನ್ನು ಮುಂದಕ್ಕೆ ಬಿಟ್ಟಿದ್ದಾರೆ.

    ನೂರು ರೂ. ನೀಡುತ್ತಿರುವ ದೃಶ್ಯದ ವಿಡಿಯೋವನ್ನು ಬೇರೊಂದು ವಾಹನದಲ್ಲಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಣ ಮಾಡಿ ಫೇಸ್‍ಬುಕ್ ಗೆ ಅಪ್ಲೋಡ್ ಮಾಡಿದ್ದಾರೆ. ಈಗ ಪೇದೆ ಅರಸು ಲಂಚ ತೆಗೆದುಕೊಳ್ಳುವ ವಿಡಿಯೋ ವೈರಲ್ ಆಗಿದ.

    https://www.youtube.com/watch?v=BxM_XLSXLjQ

  • ಚಿರತೆ ದಾಳಿಯಿಂದ 60 ಸಾವಿರ ರೂ. ಮೌಲ್ಯದ ಮಿಶ್ರತಳಿ ಹಸು ಸಾವು

    ಚಿರತೆ ದಾಳಿಯಿಂದ 60 ಸಾವಿರ ರೂ. ಮೌಲ್ಯದ ಮಿಶ್ರತಳಿ ಹಸು ಸಾವು

    ರಾಮನಗರ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದುಹಾಕಿರುವ ಘಟನೆ ರಾಮನಗರ ತಾಲೂಕಿನ ಚೌಡೇಶ್ವರಿ ಹಳ್ಳಿಯಲ್ಲಿ ನಡೆದಿದೆ.

    ಚೌಡೇಶ್ವರಿಹಳ್ಳಿ ನಿವಾಸಿ ಪ್ರತಾಪ್ ಎಂಬವರಿಗೆ ಸೇರಿದ ಸುಮಾರು 60 ಸಾವಿರ ಮೌಲ್ಯದ ಮಿಶ್ರತಳಿ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದುಹಾಕಿದೆ. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ತಡರಾತ್ರಿ ಚಿರತೆ ದಾಳಿ ನಡೆಸಿದೆ.

    ಚಿರತೆ ಹಾವಳಿಯಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.