Tag: Ramamandira

  • ರಾಮಮಂದಿರ ನಿರ್ಮಾಣಕ್ಕೆ ಕೆತ್ತನೆ ಕೆಲಸ- ಇದು ನಮ್ಮ ಸೌಭಾಗ್ಯವೆಂದ ಮುಸ್ಲಿಂ ವ್ಯಕ್ತಿ

    ರಾಮಮಂದಿರ ನಿರ್ಮಾಣಕ್ಕೆ ಕೆತ್ತನೆ ಕೆಲಸ- ಇದು ನಮ್ಮ ಸೌಭಾಗ್ಯವೆಂದ ಮುಸ್ಲಿಂ ವ್ಯಕ್ತಿ

    ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರದ (Ayodhya RamaMandira) ಉದ್ಘಾಟನೆಗೆ ದಿನಾಂಕ ಸಮೀಪಿಸುತ್ತಿದೆ. ಹೀಗಾಗಿ ರಾಮಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಈ ನಡುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿರುವ ಮುಸ್ಲಿಂ ವ್ಯಕ್ತಿಯೊಬ್ಬರು ಗಮನಾರ್ಹರಾಗಿದ್ದಾರೆ.

    ಉತ್ತರಪ್ರದೇಶಧ ಫತೇಪುರ್ ಸಿಕ್ರಿ ನತ್ತು ಖೇರಗಢ್‍ನಲ್ಲಿರುವ ಕುಶಲಕರ್ಮಿಗಳು ದೇಗುಲದಲ್ಲಿ ಬಳಸುವ ಕೆಂಪು ಮರಳುಗಲ್ಲಿನ ಮೇಲೆ ಅನನ್ಯ ಕೆತ್ತನೆಗಳನ್ನು ರಚಿಸುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಕುಶಲಕರ್ಮಿಗಳಲ್ಲಿ ಮುಸ್ಲಿಮರು ಕೂಡ ಇದ್ದಾರೆ. ಈ ಮೂಲಕ ರಾಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಕೂಡ ಸಹಕರಿಸಿದ್ದಾರೆ.

    ಈ ಕುಶಲಕರ್ಮಿಗಳಲ್ಲಿ ಹಲವಾರು ಮುಸ್ಲಿಂಮರು ತಮ್ಮ ಕಲೆಯನ್ನು ರಾಮಮಂದಿರ ನಿರ್ಮಾಣದಲ್ಲಿ ಬಳಸುತ್ತಿದ್ದಾರೆ. ಇದು ನಮಗೆ ಹೆಮ್ಮೆ ಅನಿಸ್ತದೆ ಎಂದು ದೇವಾಲಯದಲ್ಲಿ ಸ್ಥಾಪಿಸಲಾಗುವ ಕಂಬಗಳನ್ನು ಕೈಯಿಂದ ಕೆತ್ತುತ್ತಿರುವ ಕುಶಲಕರ್ಮಿಗಳಲ್ಲಿ ಒಬ್ಬರಾದ ಮುಸ್ಲಿಂ ವ್ಯಕ್ತಿ ತಿಳಿಸಿದ್ದಾರೆ. ಇಲ್ಲಿರುವ ನೂರಾರು ಕಂಬಗಳಲ್ಲಿ ಮೂಡಿ ಬರುವ ಕೆತ್ತನೆಗಳಲ್ಲಿ ಇವರ ಕೆತ್ತನೆಯ ಕೆಲಸಗಳು ಅಡಕವಾಗಿವೆ. ಹೀಗಾಗಿ ಅವರು ಇದು ನಮಗೆ ಒದಗಿ ಬಂದಿರುವ ಸೌಭಾಗ್ಯ, ನಮ್ಮ ಅದೃಷ್ಟ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ ಹಿನ್ನೆಲೆ – ರಾಯರ ವೃಂದಾವನಕ್ಕೆ ನಿರಂತರ ಜಲಾಭಿಷೇಕ

    ಈವರೆಗೆ ಸುಮಾರು 500 ಕ್ಯೂಬಿಕ್ ಅಡಿ ಕಲ್ಲು ಸಿದ್ಧಪಡಿಸಲಾಗಿದೆ ಎಂದು ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿರುವ ಕಿಶನ್ ಸ್ವರೂಪ್ ತಿಳಿಸಿದರು. ಎರಡು ವರ್ಷಗಳಿಂದ ನಿರಂತರವಾಗಿ ಈ ಕಲ್ಲುಗಳನ್ನು ಕೆತ್ತುತ್ತಿದ್ದಾರೆ ಎಂದು ಕುಶಲಕರ್ಮಿ ಶಿಲ್ಪಿ ಮಹಾವೀರ್ ಸಿಂಗ್ ಹೇಳಿದ್ದಾರೆ. ಒಟ್ಟಿನಲ್ಲಿ 2024ರ ಜನವರಿ 22ರಂದು ಶ್ರೀರಾಮ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ: ಸಿದ್ದರಾಮಯ್ಯ

    ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ: ಸಿದ್ದರಾಮಯ್ಯ

    ಮೈಸೂರು: ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭರದಿಂದ ಸಾಗುತ್ತಿದ್ದರೆ, ಇತ್ತ ಕರ್ನಾಟಕದಲ್ಲಿ ದೇಣಿಗೆ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ಈ ಸಂಬಂಧ ಮಾತನಾಡುತ್ತಾ ಸಿದ್ದರಾಮಯ್ಯ ಅವರು, ಹುಟ್ಟೂರಿನಲ್ಲಿ ರಾಮಮಂದಿರ ಕಟ್ಟಿಸುವುದಾಗಿ ಮಾಹಿತಿ ನೀಡಿದರು.

    ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಜನರು ಇದಕ್ಕೆ ವಂತಿಗೆ ನೀಡುತ್ತಿದ್ದಾರೆ. ಎಷ್ಟು ವೆಚ್ಚ ಎನ್ನುವುದರ ಬಗ್ಗೆ ಹೇಳಲು ಸಾಧ್ಯವಿಲ್ಲ. ರಾಮ ಜನರ ಧಾರ್ಮಿಕ ನಂಬಿಕೆ. ಎಲ್ಲಾ ಕಡೆ ರಾಮ ಮಂದಿರ ಕಟ್ಟುತ್ತಾರೆ ಅದರಲ್ಲೇನಿದೆ. ದೇವರು ಅನ್ನೋದು ಜನರಿಗೆ ಭಯ ಭಕ್ತಿಯ ಸಂಕೇತ. ಇದನ್ನು ಅವರು ರಾಜಕಾರಣಕ್ಕೆ ಬಳಸುತ್ತಾರೆ ಎಂದರು.

    ಜನರು ರಾಮಮಂದಿರಕ್ಕೆ ನೀಡುತ್ತಿದ್ದಾರೆ ಅದು ಬಿಜೆಪಿಗಾಗಿ ಅಲ್ಲ. ಲೆಕ್ಕ ಕೇಳುವ ಅಧಿಕಾರ ನನಗೆ ಇದೆ. ನಾನು ಈ ದೇಶದ ಪ್ರಜೆ ನಾನು ದುಡ್ಡು ಕೊಡಲಿ ಬಿಡಲಿ. ಲೆಕ್ಕೆ ಕೊಡಬೇಕಾಗಿರುವುದು ಅವರ ಕೆಲಸ ಕೇಳುವುದು ನಮ್ಮ ಹಕ್ಕು ಎಂದು ಕಟುವಾಗಿ ಹೇಳಿದ್ದಾರೆ.

    ಲೆಕ್ಕ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದರೆ ಅದರ ಅರ್ಥ ಹಣ ದುರುಪಯೋಗವಾಗುತ್ತಿದೆ. ಈ ಹಿಂದೆಯೂ ಇವರು ದೇಣಿಗೆ ಸಂಗ್ರಹಿಸಿ ಲೆಕ್ಕ ಕೊಟ್ಟಿಲ್ಲ. ಇದರ ಅರ್ಥ ಏನು ಅವರೇ ಹೇಳಬೇಕು ಎಂದು ಮಾಜಿ ಸಿಎಂ ಕಿಡಿಕಾರಿದ್ದಾರೆ.

  • ಪಿಎಫ್‍ಐ ಒಂದು ದೇಶದ್ರೋಹಿ ಸಂಘಟನೆ: ಪ್ರಹ್ಲಾದ್ ಜೋಶಿ

    ಪಿಎಫ್‍ಐ ಒಂದು ದೇಶದ್ರೋಹಿ ಸಂಘಟನೆ: ಪ್ರಹ್ಲಾದ್ ಜೋಶಿ

    ಧಾರವಾಡ: ಪಿ.ಎಫ್.ಐ ಒಂದು ದೇಶದ್ರೋಹಿ ಸಂಘಟನೆಯಾಗಿದ್ದು, ಅವರ ಬಗ್ಗೆ ಹೆಚ್ಚು ಹೇಳಬೇಕಾದ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುಡುಗಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟಿನ ತೀರ್ಮಾನ ಆದ ನಂತರ ರಾಮ ಮಂದಿರ ಟ್ರಸ್ಟ್‍ನ್ನು ರಚಿಸಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಇಡೀ ದೇಶಕ್ಕೆ ಸೇರಿದ ಮಂದಿರ ಅದು, ಶ್ರೀರಾಮ ಎಲ್ಲರಿಗೂ ಸೇರಿದವನು. ಜಾತಿ ಮತ ಪಂಥ ಎಲ್ಲ ಮಿರಿ ಮರ್ಯಾದಾ ಪುರುಷೋತ್ತಮ ಎನಿಸಿಕೊಂಡವನು ಶ್ರೀ ರಾಮ. ಪಿ.ಎಫ್.ಐ ಅಂಥವರ ಚಿಲ್ಲರೆ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದರು. ಇದನ್ನು ಓದಿ .ರಾಮಮಂದಿರ ನಿರ್ಮಾಣಕ್ಕೆ 1 ಪೈಸೆ ಕೊಡಬೇಡಿ – ಮುಸ್ಲಿಮರಿಗೆ ಪಿಎಫ್‍ಐ ಕರೆ

    ಬೇರೆ ಬೇರೆ ದೇಶದಲ್ಲಿ ನೂರರಷ್ಟು ಇಸ್ಲಾಮೇ ಇದೆ, ಅಲ್ಲಿ ಕೂಡಾ ಅವರು ಶಾಂತವಾಗಿಲ್ಲ. ಭಾರತದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಶಾಂತತೆಯಿಂದ ಬಾಳುತಿದ್ದೇವೆ. ಭಾರತದ ಮಣ್ಣಿನಲ್ಲಿ, ಭಾರತದ ರಕ್ತದಲ್ಲಿ ಧರ್ಮ ಐಕ್ಯತೆ ಇದೆ. ಆರ್.ಎಸ್.ಎಸ್ ಬಗ್ಗೆ ಪಿ.ಎಫ್.ಐ ಸರ್ಟಿಫಿಕೇಟ್ ಕೊಡುವ ಅವಶ್ಯಕತೆ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

  • ರಾಮಮಂದಿರ ನಿರ್ಮಾಣಕ್ಕೆ 1 ಪೈಸೆ ಕೊಡಬೇಡಿ – ಮುಸ್ಲಿಮರಿಗೆ ಪಿಎಫ್‍ಐ ಕರೆ

    ರಾಮಮಂದಿರ ನಿರ್ಮಾಣಕ್ಕೆ 1 ಪೈಸೆ ಕೊಡಬೇಡಿ – ಮುಸ್ಲಿಮರಿಗೆ ಪಿಎಫ್‍ಐ ಕರೆ

    – ರಾಮಮಂದಿರ ಅಲ್ಲ ಅದು ಆರ್‍ಎಸ್‍ಎಸ್ ಮಂದಿರ
    – ಆರ್‍ಎಸ್‍ಎಸ್ ಕ್ಯಾನ್ಸರ್ ಇದ್ದ ಹಾಗೆ ಅದು ವಾಸಿ ಆಗಲ್ಲ

    ಮಂಗಳೂರು: ರಾಮಮಂದಿರ ನಿರ್ಮಾಣಕ್ಕೆ 1 ಪೈಸ್ ಕೊಡಬೇಡಿ. ಅದು ರಾಮಮಂದಿರ ಅಲ್ಲ ಆರ್‍ಎಸ್‍ಎಸ್ ಮಂದಿರ ಎಂದು ಪಿಎಫ್‍ಐನ ಜನರಲ್ ಸೆಕ್ರೆಟರಿ ಅನಿಸ್ ಅಹಮ್ಮದ್ ಹೇಳಿಕೆ ನೀಡಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

    ರಾಮ ಮಂದಿರ ನಿರ್ಮಾಣಕ್ಕೆ 1 ಪೈಸೆಯನ್ನೂ ಕೊಡಬೇಡಿ. ನಿಮ್ಮ ಮನೆ ಬಾಗಿಲಿಗೆ ಚಂದಾ ಸಂಗ್ರಹಕ್ಕೆ ಬಂದ್ರೆ ಹಣ ಕೊಡಬೇಡಿ ಎಂದು ಮುಸ್ಲಿಮರಿಗೆ ಕರೆ ನೀಡಿದ್ದಾರೆ.

    ದೇಶದಲ್ಲಿ ಶಾಂತಿ ಸ್ಥಾಪನೆಗೆ ಬಾಬ್ರಿ ಮಸೀದಿ ಜಾಗ ಬಿಟ್ಟು ಕೊಡಿ ಎಂದಿದ್ದರು. ಈಗ ಜಾಗ ಬಿಟ್ಟು ಕೊಟ್ಟಾಯ್ತು. ಆದರೆ ದೇಶದಲ್ಲಿ ಶಾಂತಿ ಸ್ಥಾಪನೆ ಆಯ್ತಾ? ಇನ್ನೂ ಕೂಡ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಆ್ಯಂಟಿ ಹಿಂದೂ ಸಂಘಟನೆ ನಮ್ಮದಲ್ಲ, ಆರ್‍ಎಸ್‍ಎಸ್ ಆ್ಯಂಟಿ ಹಿಂದೂ ಸಂಘಟನೆ ಎಂದು ಕಿಡಿಕಾರಿದ್ದಾರೆ.

    ದೇಶದಲ್ಲಿರೋ ಆರ್‍ಎಸ್‍ಎಸ್ ಕ್ಯಾನ್ಸರ್ ಇದ್ದ ಹಾಗೆ ಅದು ವಾಸಿ ಆಗಲ್ಲ. ಆಗಾಗ ದೇಶದ ಶಾಂತಿಯನ್ನ ಕದಡುವ ಕೆಲಸ ಮಾಡುತ್ತಿದೆ. ಹಿಂದೂ ವರ್ಸಸ್ ಮುಸ್ಲಿಂ ಅಲ್ಲ, ಮುಸ್ಲಿಂ ವರ್ಸಸ್ ಆರ್‍ಎಸ್‍ಎಸ್ ಪರಿಸ್ಥಿತಿ ನಿರ್ಮಾಣ ಆಗ್ತಿದೆ. ಪಿಎಫ್‍ಐನ ದುಷ್ಮನ್ ಏನೇ ಇದ್ದರೂ ಆರ್‍ಎಸ್‍ಎಸ್ ಮಾತ್ರ. ನಿಮ್ಮಲ್ಲಿರೋ ಪ್ರತಿ ಆರ್‍ಎಸ್‍ಎಸ್ ನಾಯಕರನ್ನೂ ಗುರುತಿಸಿ ಇಟ್ಕೊಳ್ಳಿ ಎಂದು ಧಮ್ಕಿ ಭಾಷಣ ಮಾಡಿದ್ದಾರೆ.

  • ದೇಣಿಗೆ ಸಂಗ್ರಹದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಸರಿಯಲ್ಲ: ಸಿಎಂ ಎಚ್ಚರಿಕೆ

    ದೇಣಿಗೆ ಸಂಗ್ರಹದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಸರಿಯಲ್ಲ: ಸಿಎಂ ಎಚ್ಚರಿಕೆ

    ಶಿವಮೊಗ್ಗ: ದೇಶಾದ್ಯಂತ ರಾಮಮಂದಿರ ನಿರ್ಮಾಣಕ್ಕೆ ಭಕ್ತರು ಸ್ವಯಂಪ್ರೇರಿತರಾಗಿ ದೇಣಿಗೆ ನೀಡುತ್ತಿದ್ದಾರೆ. ಆದರೆ ರಾಮಮಂದಿರ ನಿರ್ಮಾಣಕ್ಕೆ ವಿರೋಧ ಮಾಡುವವರು ಸುಪ್ರೀಂಕೋರ್ಟ್ ನ ತೀರ್ಪನ್ನೇ ಪ್ರಶ್ನಿಸಿದ್ದಂತೆ. ಹೀಗಾಗಿ ಅಂತಹವರು ಅರಿತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪ್ರತಿಪಕ್ಷ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

    ಮಾಚೇನಹಳ್ಳಿ ಕೈಗಾರಿಕಾ ಸಂಘದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಹಣ ನೀಡಿ ಎಂದು ಯಾರನ್ನೂ ಒತ್ತಾಯ ಮಾಡಿಲ್ಲ. ಜನರೇ ಸ್ವಯಂಪ್ರೇರಿತರಾಗಿ ದೇಣಿಗೆ ಸಮರ್ಪಿಸುತ್ತಿದ್ದಾರೆ. ಅಲ್ಲದೇ ಇಂದು ಕೈಗಾರಿಕೋದ್ಯಮಿಗಳು ಮಂದಿರ ನಿರ್ಮಾಣಕ್ಕೆ 70 ಲಕ್ಷ ರೂ ನೀಡಿದ್ದಾರೆ. ರಾಜ್ಯದ ಉದ್ದಗಲಕ್ಕೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಲೇಬೇಕು ಎಂದು ಜನರು ಹಣ ನೀಡುತ್ತಿರುವುದು ಶ್ಲಾಘನೀಯ ಎಂದರು.

    ದೇಣಿಗೆ ಸಂಗ್ರಹ ಮಾಡುತ್ತಿರುವವರು ಯಾರಿಗೂ ಬಲವಂತ ಮಾಡಿ ಹಣ ನೀಡಿ ಎಂದು ಕೇಳಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಯಾರ ಮನೆಗೆ ಹೋದರು ಸ್ವಯಂಪ್ರೇರಿತರಾಗಿ ಹಣ ನೀಡುತ್ತಿದ್ದಾರೆ. ಇದನ್ನು ಟೀಕೆ ಮಾಡುವ ಮೂಲಕ ಅನಗತ್ಯವಾಗಿ ಗೊಂದಲವನ್ನು ಸೃಷ್ಟಿಸಬಾರದು. ನಿಮಗೆ ಇಷ್ಟವಿದ್ದರೆ ಹಣ ನೀಡಿ, ಇಲ್ಲವಾದರೆ ಬೇಡ. ಬೇರೆಯವರು ಹಣ ಕೊಡುವುದಕ್ಕೆ ಕಲ್ಲು ಹಾಕಬೇಡಿ. ಟೀಕೆ ಮಾಡುವವರು ಮೊದಲು ಇದನ್ನು ತಿಳಿದುಕೊಳ್ಳಬೇಕು. ನಾನು ಅಯೋಧ್ಯೆಯಲ್ಲಿನ ರಾಮ ಮಂದಿರಕ್ಕೆ ಹಣ ನೀಡಲ್ಲ, ನಮ್ಮೂರಿನ ರಾಮ ಮಂದಿರಕ್ಕೆ ನೀಡುತ್ತೇನೆ ಎನ್ನುವವರು ಗಮನಿಸಬೇಕು ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಸಿಎಂ ಟಾಂಗ್ ನೀಡಿದರು.

  • ರಾಮಮಂದಿರ ನಿರ್ಮಾಣಕ್ಕೆ ಬಲವಂತವಾಗಿ ದೇಣಿಗೆ ಸಂಗ್ರಹ ಮಾಡ್ತಿದ್ರೆ ದೂರು ಕೊಡಿ: ರೇಣುಕಾಚಾರ್ಯ

    ರಾಮಮಂದಿರ ನಿರ್ಮಾಣಕ್ಕೆ ಬಲವಂತವಾಗಿ ದೇಣಿಗೆ ಸಂಗ್ರಹ ಮಾಡ್ತಿದ್ರೆ ದೂರು ಕೊಡಿ: ರೇಣುಕಾಚಾರ್ಯ

    ಬೆಂಗಳೂರು: ರಾಮಮಂದಿರ ನಿರ್ಮಾಣಕ್ಕೆ ಯಾರೂ ಬಲವಂತವಾಗಿ ದೇಣಿಗೆ ಸಂಗ್ರಹ ಮಾಡುತ್ತಿಲ್ಲ. ಒಂದು ವೇಳೆ ಯಾರಾದರೂ ಬಲವಂತವಾಗಿ ದೇಣಿಗೆ ಸಂಗ್ರಹ ಮಾಡ್ತಿದ್ರೆ ಅಥವಾ ಅನುಮಾನ ಬಂದಿದ್ದರೆ ಅವರ ಮೇಲೆ ದೂರು ಕೊಡಿ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು. ಕುಮಾರಸ್ವಾಮಿಯವರೇ ನೀವ್ಯಾಕೆ ಸಂಘ ಪರಿವಾರದ ಕಾರ್ಯಕರ್ತರನ್ನು ಹಿಟ್ಲರ್ ಗೆ ಹೋಲಿಸ್ತೀರಿ?, ಯಾರೂ ಬಲವಂತವಾಗಿ ದೇಣಿಗೆ ಸಂಗ್ರಹಿಸ್ತಿಲ್ಲ. ಬಲವಂತವಾಗಿ ದೇಣಿಗೆ ಸಂಗ್ರಹ ಮಾಡ್ತಿದ್ರೆ ದೂರು ಕೊಡಿ ಎಂದು ತಿಳಿಸಿದ್ದಾರೆ.

    ಮನೆಗಳಿಗೆ ಮಾರ್ಕ್ ಮಾಡ್ತಿದ್ರೆ ಎಲ್ಲಿ ಅಂತ ತೋರಿಸಿ. ದಾಖಲೆ ಕೊಡಿ, ವಿಷಯಾಂತರ ಮಾಡಬೇಡಿ. ರಾಮಮಂದಿರ ಬಹಳ ವರ್ಷಗಳ ಕನಸು. ಬಿಜೆಪಿ ಯಾವತ್ತೂ ವೋಟ್ ಬ್ಯಾಂಕ್ ರಾಜಕಾರಣ ಮಾಡಿಲ್ಲ. ವಿನಾಕಾರಣ ಆರೋಪ ಮಾಡೋದು ಸರಿಯಲ್ಲ. ರಾಮಮಂದಿರ ದೇಣಿಗೆಯಲ್ಲಿ ಒಂದು ರೂ. ಸಹ ವ್ಯತ್ಯಾಸ ಆಗಲ್ಲ. ನೀವೂ ದೇವಭಕ್ತರು. ನೀವೂ ರಾಮಮಂದಿರಕ್ಕೆ ದೇಣಿಗೆ ಉದಾರವಾಗಿ ಕೊಡಿ. ದೇಣಿಗೆ ಕೊಟ್ಟು ರಾಮನ ಕೃಪೆಗೆ ಒಳಗಾಗಿ. ಆದರೆ ಇಂತಹ ಹೇಳಿಕೆ ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ ಎಂದು ವಾಗ್ದಾಳಿ ನಡೆಸಿದರು.

    ದೇಣಿಗೆಗೆ ಧಮ್ಕಿ ಹಾಕಿದ್ರೆ, ಬಲವಂತ ಮಾಡಿದ್ರೆ ಪಕ್ಷದ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಆದರೆ ಜನ ಉದಾರವಾಗಿ ದೇಣಿಗೆ ಕೊಡ್ತಿದ್ದಾರೆ. ವಿನಾಕಾರಣ ವಿವಾದ ಸೃಷ್ಟಿಸಬೇಡಿ ಎಂದು ಎಚ್ಚರಿಕೆ ನೀಡಿದರು.

    ಇದೇ ವೇಳೆ ಅಹಿಂದ ಸಮಾವೇಶಕ್ಕೆ ಕಾಂಗ್ರೆಸ್ ಗ್ರೀನ್ ಸಿಗ್ನಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ದೇಶ, ರಾಜ್ಯದಲ್ಲಿ ಸೋತು ಸುಣ್ಣವಾಗಿದೆ. ಕಾಂಗ್ರೆಸ್ ಅಹಿಂದ ಪರ ಇಲ್ಲ. ಬಿಜೆಪಿ ಅಹಿಂದ ವರ್ಗಕ್ಕೆ ಹಲವು ಉತ್ತಮ ಕೆಲಸ ಮಾಡಿಕೊಟ್ಟಿದೆ. ಬಿಜೆಪಿ ಮುಂದೆ ಕಾಂಗ್ರೆಸ್ ನ ಹಿಂದ ಅಹಿಂದ ಸಮಾವೇಶಗಳು ವರ್ಕೌಟ್ ಆಗಲ್ಲ. ಕಾಂಗ್ರೆಸ್ ಅಧಿಕಾರದಲ್ಲಿಲ್ಲ, ಅಧಿಕಾರಕ್ಕೆ ಬರೋದೂ ಇಲ್ಲ. ಅವರು ಅಹಿಂದ ಸಮಾವೇಶಕ್ಕೆ ಏನೂ ಪ್ರಯೋಜನ ಮಾಡ್ತಾರೆ ಹೇಳಿ ಎಂದು ಪ್ರಶ್ನಿಸಿದರು.

    ಅರುಣ್ ಸಿಂಗ್ ರಾಜ್ಯಕ್ಕೆ ಆಗಮನ ವಿಚಾರದ ಕುರಿತು ಮಾತನಾಡಿ, ನಮ್ಮ ರಾಜ್ಯದ ಉಸ್ತುವಾರಿಗಳು ಬಂದಾಗ ನಾವು ಭೇಟಿ ಮಾಡೋದು ಸಂಪ್ರದಾಯ. ಪ್ರಸ್ತುತ ವಿಚಾರಗಳ ಬಗ್ಗೆ ಅರುಣ್ ಸಿಂಗ್ ಜೊತೆ ಚರ್ಚೆ ಮಾಡ್ತೇವೆ. ಸಚಿವನಾಗಿಲ್ಲ ಅಂತ ಹಾದಿಬೀದಿಯಲ್ಲಿ ನಾನು ಮಾತಾಡಲ್ಲ. ಪಕ್ಷದ ವೇದಿಕೆಯಲ್ಲಿ ಅದರ ಬಗ್ಗೆ ಮಾತಾಡ್ತೇನೆ ಎಂದರು.

    ಯತ್ನಾಳ್ ವಿಚಾರದಲ್ಲಿ ಪಕ್ಷ ತೀರ್ಮಾನ ಕೈಗೊಂಡಿದೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧ. ಯತ್ನಾಳ್ ನೊಟೀಸ್ ಸಿಕ್ಕಿಲ್ಲ ಅಂತ ಹೇಳ್ತಿರೋ ವಿಚಾರ ನನಗೆ ಮಾಹಿತಿ ಇಲ್ಲ. ಎಲ್ಲವನ್ನೂ ಪಕ್ಷ ನಿರ್ಧರಿಸುತ್ತದೆ. ಯತ್ನಾಳ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷ ಎಲ್ಲವನ್ನೂ ಗಮನಿಸ್ತಿದೆ. ಪಕ್ಷದ ಎಲ್ಲದರ ನಿರ್ಧಾರ ಮಾಡುತ್ತೆ ಎಂದು ಹೇಳಿದರು.

    ನಮ್ಮ ಸರ್ಕಾರ ಸರ್ಕಾರ ಧರ್ಮದ ತಳಹದಿ ಮೇಲೆ ನಂಬಿಕೆ ಇಟ್ಟಿರುವ ಪಕ್ಷ. ಮೀಸಲಾತಿ ಬೇಕು ಅಂತ ಕನಕ ಪೀಠದ ಶ್ರೀಗಳು ಧರಣಿ ಮಾಡಿದ್ರು. ಅದಕ್ಕೆ ನಾನೂ ಬೆಂಬಲ ಕೊಟ್ಟೆ. ಪಂಚಮಸಾಲಿ ಲಿಂಗಾಯತ ಸಮಾಜದ ಪ್ರತಿಭಟನೆಯಲ್ಲಿ ನಾನೂ ಪಾಲ್ಗೊಂಡು ಬೆಂಬಲಿಸಿದ್ದೆ. ವೀರಶೈವ ಲಿಂಗಾಯತ ಸಮುದಾಯದಲ್ಲಿ ಹಲವು ಒಳಪಂಗಡಗಳಿಗೆ ಮೀಸಲಾತಿ ಬೇಕಿದೆ. ಪಂಚಮಸಾಲಿಯವ್ರಿಗೂ ಮೀಸಲಾತಿ ಕೊಡಲ ನಮ್ಮ ವಿರೋಧ ಇಲ್ಲ. ಹಾಗೆಯೇ ಸಮಾಜದ ಒಳಂಗಡಗಳಿಗೂ ಮೀಸಲಾತಿ ಕೊಡಲಿ ಎಂದು ಮೀಸಲಾತಿ ಹೋರಾಟಗಳ ವಿಚಾರ ಸಂಬಂಧ ಪ್ರತಿಕ್ರಿಯಿಸಿದರು.

  • ರಾಮಮಂದಿರ ನಿಧಿ ಸಂಗ್ರಹ ವಿಚಾರ ಕುಮಾರಸ್ವಾಮಿ ಕ್ಷಮೆಯಾಚನೆಗೆ ಭಜರಂಗದಳ ಒತ್ತಾಯ

    ರಾಮಮಂದಿರ ನಿಧಿ ಸಂಗ್ರಹ ವಿಚಾರ ಕುಮಾರಸ್ವಾಮಿ ಕ್ಷಮೆಯಾಚನೆಗೆ ಭಜರಂಗದಳ ಒತ್ತಾಯ

    ಬೆಂಗಳೂರು: ರಾಮಂದಿರಕ್ಕೆ ನಿಧಿ ಸಂಗ್ರದ ಕುರಿತಾಗಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಜವಬ್ದಾರಿ ಹೇಳಿಕೆ ನೀಡಿರುವ ಬೆನ್ನಲ್ಲೇ ಬಜರಂಗದಳದ ರಾಷ್ಟ್ರೀಯ ಸಹಸಂಯೋಜಕ ಸೂರ್ಯನಾರಾಯಣ ಬಜರಂಗದಳ ಆಕ್ರೋಶ ಹೊರಹಾಕಿ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದಾರೆ.

    ವಿಶ್ವ ಹಿಂದೂ ಪರಿಷದ್ ನ ಸ್ವಯಂ ಸೇವಕರು ಎಲ್ಲಾ ವರ್ಗದ ಜನರನ್ನು ಭೇಟಿಯಾಗಿ ರಾಮಮಂದಿರಕ್ಕೆ ನಿಧಿ ಸಂಗ್ರಹ ಮಾಡುತ್ತಿದ್ದಾರೆ. ಸಮಾಜವು ಅತ್ಯಂತ ಶ್ರದ್ಧೆಯಿಂದ, ಭಕ್ತಿಯಿಂದ, ಉತ್ಸಾಹದಿಂದ ಶ್ರೀರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಮಾಡುತ್ತಿದ್ದಾರೆ. ನಮ್ಮ ಸ್ವಯಂ ಸೇವಕರು ಯಾರಿಂದಲೂ ಬಲವಂತವಾಗಿ ನಿಧಿ ಪಡೆದಿಲ್ಲ. ದೇಶಾದ್ಯಂತ ಎಲ್ಲರೂ ತಾವಾಗಿಯೇ ಮುಂದೆ ಬಂದು ನಿಧಿ ಸಮರ್ಪಣೆ ಮಾಡುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಈ ಅಭಿಯಾನದ ಕುರಿತು ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.

    ಶ್ರೀರಾಮ ಭಾರತದ ಅಸ್ಮಿತೆ, ಶ್ರೀರಾಮ ಭಾರತದ ಆದರ್ಶ ರಾಷ್ಟ್ರ ಪುರುಷ, ಎಲ್ಲರೂ ಶ್ರೀರಾಮನ ಆದರ್ಶಗಳನ್ನು ಪಾಲಿಸಬೇಕು. ಮಾಜಿ ಮುಖ್ಯಮಂತ್ರಿಗಳು ಹೇಳಿಕೆ ಕೊಡುವ ಮುನ್ನ ಅಭಿಯಾನದ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಅವರ ಬಳಿ ಯಾವ ಪುರಾವೆಗಳು ಇಲ್ಲದೆ ರಾಷ್ಟ್ರೀಯ ಸ್ವಯಂ ಸೇವಕ(ಆರ್‍ಎಸ್‍ಎಸ್) ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ವಿಶ್ವ ಹಿಂದೂ ಪರಿಷದ್ ಗಂಭೀರವಾಗಿ ಪರಿಗಣಿಸಿದ್ದು, ಒಬ್ಬ ಮಾಜಿ ಮುಖ್ಯಮಂತ್ರಿಗಳಿಂದ ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ. ಮುಂದೆ ಎಚ್ಚರಿಕೆಯಿಂದ ಹೇಳಿಕೆ ನೀಡಲಿ ಎಂದು ಎಚ್ಚರಿಕೆ ನೀಡಿದರು.

    ಕರ್ನಾಟಕ ದಕ್ಷಿಣ ಪ್ರಾಂತದ ಸಂಘಟನಾ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳು ಆರ್‍ಎಸ್‍ಎಸ್ ಸಂಘಟನೆಯನ್ನು ನಾಝಿ ಸಂಘಟನೆಗೆ ಹೋಳಿಕೆ ಮಾಡಿರುವುದು ಖಂಡನೀಯ. ನಾಝಿ ಸಂಘ ಕೊಲೆ ಹಿಂಸೆಗಳಿಂದ ಏಕಚಕ್ರಾಧಿಪತ್ಯ ಸ್ಥಾಪಿಸಿರುವ ಇತಿಹಾಸವಿದೆ. ಆದರೆ ದೇಶ ಭಕ್ತ ಸಂಘಟನೆಯಾದ ಆರ್‍ಎಸ್‍ಎಸ್ ಸಂಘಟನಾ ಇತಿಹಾಸದಲ್ಲಿ ಲಕ್ಷಾಂತರ ದೇಶ ಭಕ್ತರನ್ನು ದೇಶಕ್ಕಾಗಿ ಕೊಟ್ಟಿದೆ. ಅದನ್ನು ಸರಿಯಾಗಿ ತಿಳಿದುಕೊಂಡು ಕುಮಾರಸ್ವಾಮಿ ಹೇಳಿಕೆ ಕೊಡಬೇಕು ಬೇಕಾಬಿಟ್ಟಿ ಸಂಘಟನೆಯ ಕುರಿತು ಮಾತನಾಡಿರುವುದು ಖಂಡನೀಯ ಎಂದರು.

  • ಒಂದು ಚೀಲ ಸಿಮೆಂಟ್ ಕೊಟ್ಟಿದ್ದು ಸಾರ್ಥಕವಾಯಿತು: ಕೊಪ್ಪಳದ ಮುಸ್ಲಿಂ ಯುವಕ

    ಒಂದು ಚೀಲ ಸಿಮೆಂಟ್ ಕೊಟ್ಟಿದ್ದು ಸಾರ್ಥಕವಾಯಿತು: ಕೊಪ್ಪಳದ ಮುಸ್ಲಿಂ ಯುವಕ

    ಕೊಪ್ಪಳ: ಒಂದು ಚೀಲ ಸಿಮೆಂಟ್ ಕೊಟ್ಟಿದ್ದು ಸಾರ್ಥಕವಾಯಿತು ಎಂದು ಕೊಪ್ಪಳದ ಮುಸ್ಲಿಂ ಯುವಕ ಅಯೋಧ್ಯೆ ತೀರ್ಪಿನ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

    ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಸಂಶುದ್ದೀನ್ ಎರಡು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಂದು ಚೀಲ ಸಿಮೆಂಟ್ ನೀಡಿದ್ದರು. ಇದೀಗ ಸುಪ್ರೀಂಕೋರ್ಟ್ ಶನಿವಾರ ನೀಡಿದ ಮಹತ್ವದ ತೀರ್ಪಿನ ಖುಷಿಯನ್ನು ಶಂಶುದ್ದೀನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಅಯೋಧ್ಯೆ ತೀರ್ಪು ದೇಶವು ಇಂದು ಖುಷಿ ಪಡುವ ವಿಚಾರ. ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವೀಕರಿಸಿದ್ದಾರೆ. ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಬದುಕಬೇಕಿದೆ. ಕೊಪ್ಪಳ ಜಿಲ್ಲೆಯ ವತಿಯಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಹೋಗಿ ರಾಮ ಮಂದಿರ ನಿರ್ಮಾಣಕ್ಕೆ ಒಂದು ಚೀಲ ಸಿಮೆಂಟ್ ನೀಡಿ ಬಂದಿದ್ದೇನೆ. ಈ ಕೆಲಸ ಇಂದು ಸಾರ್ಥಕ ಅನಿಸುತ್ತಿದೆ ಎಂದು ಸಂಶುದ್ದೀನ್ ಹೇಳಿದ್ದಾರೆ.

    ನಾನೊಬ್ಬ ಭಾರತೀಯ, ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಬದುಕಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗವನ್ನು ಸುಪ್ರೀಂಕೋರ್ಟ್ ನೀಡಿದೆ. ಅಯೋಧ್ಯೆಯ ತೀರ್ಪನ್ನು ತಲೆಬಾಗಿ ಸ್ವೀಕರಿಸಿದ್ದೇವೆ ಎಂದು ಸಂಶುದ್ದೀನ್ ತಿಳಿಸಿದರು. ಇದನ್ನೂ ಓದಿ: ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ

    ಸಂಶುದ್ದೀನ್ ಅವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 2017ರ ಏಪ್ರಿಲ್‍ನಲ್ಲಿ ನೈತಿಕ ಬೆಂಬಲ ನೀಡಿದ್ದರು. ಜೊತೆಗೆ ಸಾಂಕೇತಿಕವಾಗಿ ಒಂದು ಸಿಮೆಂಟ್ ಚೀಲ ನೀಡಲು ಅಯೋಧ್ಯೆಗೆ ಪ್ರಯಾಣ ಬೆಳೆಸುತ್ತಿದ್ದರು. ಇದಕ್ಕೂ ಮುನ್ನ ಸಂಶುದ್ದೀನ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ರಾಮಮಂದಿರ ಕಟ್ಟಲು ಒಂದು ಚೀಲ ಸಿಮೆಂಟ್ ಒಯ್ಯುತ್ತಿದ್ದೇನೆ ಎಂದು ಸ್ಟೇಟಸ್ ಹಾಕಿಕೊಂಡಿದ್ದರು. ಈ ವೇಳೆ ಅವರಿಗೆ ಸಾಕಷ್ಟು ಬೆದರಿಕೆ ಕರೆ ಬಂದಿದ್ದವು ಎನ್ನಲಾಗಿತ್ತು. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷತೆ ಏನು? ಹೇಗಿರಲಿದೆ ದೇವಾಲಯ?

    ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಸಂಶುದ್ದೀನ್ ಪ್ರವೃತ್ತಿಯಲ್ಲಿ ಸಿನಿಮಾ ಕಲಾವಿದರು. ಲಂಬಾಣಿ ಭಾಷೆಯ ಕೋವೆಲ್ ಮತ್ತು ನಟ ಲೂಸ್ ಮಾದ ನಟಿಸಿರುವ ಧೂಳಿಪಟ ಚಿತ್ರದಲ್ಲಿ ಸಂಶುದ್ದೀನ್ ಖಳನಾಯಕರಾಗಿ ಅಭಿನಯಿಸಿದ್ದಾರೆ. ಶಂಶುದ್ದೀನ್ ಅವರಿಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಹಿಂದೂ ಪರ ಸಂಘಟನೆ ಮುಖಂಡರು ಸನ್ಮಾನಿಸಿ, ಬೀಳ್ಕೊಟ್ಟಿದ್ದರು. ಇದನ್ನೂ ಓದಿ: ರಾಮನಿಗೆ `ಪುರಾತತ್ವ’ ಆಧಾರ – 5 ಶತಮಾನಗಳ ವಿವಾದಕ್ಕೆ ಷರಾ ಬರೆದ ಸುಪ್ರೀಂ

  • ಚಾಮರಾಜನಗರದಲ್ಲಿ 15 ಮಂದಿ ಅರೆಸ್ಟ್

    ಚಾಮರಾಜನಗರದಲ್ಲಿ 15 ಮಂದಿ ಅರೆಸ್ಟ್

    ಚಾಮರಾಜನಗರ: ಇಂದು ಅಯೋಧ್ಯೆ ತೀರ್ಪು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚಾಮರಾಜನಗರದಲ್ಲಿ 15 ಮಂದಿ ಬಂಧಿಸಲಾಗಿದೆ.

    ಬೆಳಗ್ಗೆ 10:30ಕ್ಕೆ ಅಯೋಧ್ಯೆ ತೀರ್ಪು ಹೊರಬೀಳಲಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಹಾಗೆಯೇ ರಾಜ್ಯದಲ್ಲಿಯೂ ನಿಗಾ ಇಡಲಾಗಿದ್ದು, ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚೆತ್ತಿರುವ ಚಾಮರಾಜನಗರ ಟೌನ್ ಪೋಲಿಸರು, ಮುಂಜಾಗ್ರತಾ ಕ್ರಮವಾಗಿ 15 ಮಂದಿ ಕಮ್ಯೂನಲ್ ಗೂಂಡಾಗಳನ್ನು ಬಂಧಿಸಿದ್ದಾರೆ.

    ಬೆಳಗ್ಗೆ 9 ಗಂಟೆಗೆ ಜಿಲ್ಲಾ ಕೇಂದ್ರದಲ್ಲಿ ಪೊಲೀಸ್ ಬಲ ಪ್ರದರ್ಶನ ನಡೆಯಲಿದೆ. ಚಾಮರಾಜನಗರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

    ಎಸ್ಪಿ, ಎಎಸ್ಪಿ, ಇಬ್ಬರು ಡಿವೈಎಸ್ಪಿ ಸೇರಿದಂತೆ 2000 ಪೊಲೀಸರಿಂದ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.

  • ಬಿಜೆಪಿಯಿಂದ ಮಾತ್ರವೇ ರಾಮಮಂದಿರ ನಿರ್ಮಾಣ ಸಾಧ್ಯ: ಯೋಗಿ ಆದಿತ್ಯನಾಥ್

    ಬಿಜೆಪಿಯಿಂದ ಮಾತ್ರವೇ ರಾಮಮಂದಿರ ನಿರ್ಮಾಣ ಸಾಧ್ಯ: ಯೋಗಿ ಆದಿತ್ಯನಾಥ್

    ಲಕ್ನೋ: ಬಿಜೆಪಿಯಿಂದ ಮಾತ್ರವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಾಧ್ಯವೇ ಹೊರತು, ಬೇರೆ ಯಾವುದೇ ಪಕ್ಷಗಳಿಂದ ನಿರ್ಮಾಣ ಅಸಾಧ್ಯವೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಭಾನುವಾರ ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಯುವ ಕುಂಭ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಬಿಜೆಪಿಯಿಂದ ಮಾತ್ರವೇ ಸಾಧ್ಯ. ಇದರಲ್ಲಿ ಯಾವುದೇ ಅನುಮಾನ ಬೇಡ. ಇದನ್ನು ಹೊರತುಪಡಿಸಿ ಇತರೆ ಯಾವುದೇ ಪಕ್ಷಗಳಿಂದ ಮಂದಿರದ ನಿರ್ಮಾಣ ಅಸಾಧ್ಯವೆಂದು ತಿಳಿಸಿದ್ದಾರೆ.

    ಈ ವೇಳೆ ಸಭೆಯಲ್ಲಿ ಪಾಲ್ಗೊಂಡಿದ್ದವರು “ಯಾರು ರಾಮಮಂದಿರ ನಿರ್ಮಿಸುತ್ತಾರೋ, ಅವರಿಗೆ ನಮ್ಮ ಮತ” ಎಂದು ಘೋಷಣೆ ಕೂಗಿದ್ದಾರೆ.

    ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಮಾಯಣದ ಭಗವಾನ್ ಶ್ರೀರಾಮ ಹಾಗೂ ಮಹಾಭಾರತದ ಶ್ರೀಕೃಷ್ಣನ ಅಸ್ತಿತ್ವವನ್ನು ಪ್ರಶ್ನಿಸಿದವರು, ಇಂದು ಮತಕ್ಕಾಗಿ ಜನಿವಾರವನ್ನು ಪ್ರದರ್ಶಿಸುತ್ತಿದ್ದಾರೆ. ಅಂತಹವರಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಾಧ್ಯವೆಂಬ ಯಾವುದೇ ನಿರೀಕ್ಷೆಗಳೂ ಬೇಡ ಎಂದು ಹೇಳಿದರು.

    ಇತಿಹಾಸಕಾರರು ನಮಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಅದನ್ನು ತಿದ್ದಿ ಸರಿಯಾದ ಇತಿಹಾಸ ಬರೆಯುವ ಹೊಣೆಗಾರಿಕೆ ನಮ್ಮ ಮೇಲಿದೆ. ರಾಮಾಯಣದ ಪುಷ್ಪಕ ವಿಮಾನ ಸತ್ಯವಾಗಿದೆ. ಹಾಗೆಯೇ ಮಹರ್ಷಿ ಭಾರಧ್ವಾಜರು ವೈಮಾನಿಕ ಶಾಸ್ತ್ರವನ್ನು ರಚಿಸಿದ್ದು, ಈ ಶಾಸ್ತ್ರದಲ್ಲಿ ಪುಷ್ಪಕ ವಿಮಾನದ ಸಿದ್ಧಾಂತವಿದೆಯೆಂದು ತಿಳಿಸಿದರು.

    ಪ್ರಯಾಗ್ ರಾಜ್ ನ ಮಹಾಕುಂಭಮೇಳವನ್ನು ಯುವ ವಿರೋಧ, ಮಹಿಳಾ ವಿರೋಧಿ ಹಾಗೂ ದಲಿತ ವಿರೋಧಿಯಂದು ಬಿಂಬಿಸಲಾಗುತ್ತಿದೆ. ಈ ಕುಂಭಮೇಳವು ಭಾರತೀಯ ಸಂಸ್ಕೃತಿಯನ್ನು ವಿಶ್ವ ಮಟ್ಟದಲ್ಲಿ ಪ್ರತಿಬಿಂಬಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv