Tag: ramalingareddy

  • ನನಗೆ ಯಾವುದೇ ಹುದ್ದೆ ಬೇಡ, ಎಚ್‍ಡಿಡಿ ಭೇಟಿ ಬಳಿಕ ರಾಮಲಿಂಗಾರೆಡ್ಡಿ ಸ್ಪಷ್ಟನೆ

    ನನಗೆ ಯಾವುದೇ ಹುದ್ದೆ ಬೇಡ, ಎಚ್‍ಡಿಡಿ ಭೇಟಿ ಬಳಿಕ ರಾಮಲಿಂಗಾರೆಡ್ಡಿ ಸ್ಪಷ್ಟನೆ

    ಬೆಂಗಳೂರು: ನನಗೆ ಯಾವುದೇ ಹುದ್ದೆ ಬೇಡ, ಡಿಸಿಎಂ ಹುದ್ದೆಯೂ ಬೇಡ, ಔಪಚಾರಿಕವಾಗಿ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿದ್ದೆಯಷ್ಟೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

    ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಔಪಚಾರಿಕವಾಗಿ ಭೇಟಿಯಾಗಿದ್ದೆ ಅಷ್ಟೇ, ಅತೃಪ್ತ ಶಾಸಕರ ಮನವೊಲಿಕೆ ಕುರಿತು ಯಾವುದೇ ರೀತಿಯ ಚರ್ಚೆ ನಡೆದಿಲ್ಲ. ನಾನು ರಾಜೀನಾಮೆ ಹಿಂಪಡೆಯುವ ನಿರ್ಧಾರ ಮಾಡಿದಾಗ ಅತೃಪ್ತ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಇದೇ ವೇಳೆ ತಿಳಿಸಿದರು.

    ಎಸ್.ಟಿ.ಸೋಮಶೇಖರ್ ಹೇಳಿದ್ದು ನಿಜ:
    ಅತೃಪ್ತ ಶಾಸಕ ಸೋಮಶೇಖರ್ ಅವರು ನನ್ನ ಬಗ್ಗೆ ಹೇಳಿದ್ದು ನಿಜ. ನಾನು, ಸೋಮಶೇಖರ್ ಹಾಗೂ ವಿಶ್ವನಾಥ್ ಅವರು ಮೂವರೂ ಸೇರಿ ಮಾತನಾಡಿಕೊಂಡು ಯಾವುದೇ ಒತ್ತಡ ಬಂದರೂ, ನಮ್ಮ ರಾಜೀನಾಮೆಯನ್ನು ವಾಪಸ್ ಪಡೆಯಬಾರದು ಎಂಬ ತಿರ್ಮಾನಕ್ಕೆ ಬಂದಿದ್ದೆವು. ಆದರೆ ಅಷ್ಟು ಜನ ಮುಖಂಡರು ಬಂದು ಒತ್ತಡ ಹಾಕಿದ್ದರಿಂದ ರಾಜೀನಾಮೆ ಹಿಂಪಡೆಯಬೇಕಾಯಿತು. ಭಾನುವಾರ ರಾಜೀನಾಮೆ ವಾಪಸ್ ಪಡೆಯಬೇಕೆಂದು ನಿರ್ಧಾರ ಮಾಡಿದ ನಂತರ ಸೋಮವಾರ, ಮಂಗಳವಾರ ಮಾತನಾಡಲು ಯತ್ನಿಸಿದೆ. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

    ನನಗೆ ಯಾವುದೇ ಹುದ್ದೆ ಬೇಡ, ಡಿಸಿಎಂ ಹುದ್ದೆಯ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಹೀಗಿರುವಾಗ ನನಗೆ ಸಿಗಲು ಹೇಗೆ ಸಾಧ್ಯ. ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ. ಅವರೂ ನೀಡಿದರೂ ನನಗೆ ಬೇಡ. ಹುದ್ದೆಗಾಗಿ ನಾನು ರಾಜೀನಾಮೆ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

    ಎಸ್.ಟಿ.ಸೋಮಶೇಖರ್ ಹೇಳಿದ್ದೇನು?
    ರಾಮಲಿಂಗಾರೆಡ್ಡಿ ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಹಿಂಪಡೆದ ನಂತರ ಅತೃಪ್ತ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ನಾವು ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಹಿಂಪಡೆಯುತ್ತಾರೆ ಎಂದು ಊಹಿಸಿರಲಿಲ್ಲ. ರಾಜೀನಾಮೆ ಹಿಂಪಡೆಯುವ ಮೂಲಕ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ಆದರೆ, ನಾವು(ಉಳಿದ ಅತೃಪ್ತ ಶಾಸಕರು) ಎಂತಹ ಒತ್ತಡ ಹೇರಿದರೂ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನಮ್ಮ ನಿರ್ಧಾರಕ್ಕೆ ನಾವು ಎಂದಿಗೂ ಬದ್ಧರಾಗಿರುತ್ತೇವೆ. ನಾವು ನಾಲ್ಕೂ ಜನ (ಎಚ್.ವಿಶ್ವನಾಥ್, ಮುನಿರತ್ನ, ಸೋಮಶೇಖರ್, ರಾಮಲಿಂಗಾರೆಡ್ಡಿ) ಮತನಾಡಿಕೊಂಡು ರಾಜೀನಾಮೆ ನೀಡಿದ್ದೆವು. ಇದರಲ್ಲಿ ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆದಿದ್ದಾರೆ. ನಾವು ಮೂವರೂ ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದರು.

  • ಮೋಸ ಮಾಡಿದವರನ್ನು ಫಾಲೋ ಮಾಡಲ್ಲ- ರೆಡ್ಡಿ ವಿರುದ್ಧ ಅತೃಪ್ತರ ಕಿಡಿ

    ಮೋಸ ಮಾಡಿದವರನ್ನು ಫಾಲೋ ಮಾಡಲ್ಲ- ರೆಡ್ಡಿ ವಿರುದ್ಧ ಅತೃಪ್ತರ ಕಿಡಿ

    ಮುಂಬೈ: ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ವಾಪಸ್ ಪಡೆದು ನಮಗೆ ಮೋಸ ಮಾಡಿದ್ದಾರೆ. ನಾವು ಮಾತ್ರ ಯಾವುದೇ ಕಾರಣಕ್ಕೂ ಅವರನ್ನು ಫಾಲೋ ಮಾಡಲ್ಲ ಎಂದು ಮುಂಬೈನಿಂದ ಬೆಂಗಳೂರಿನ ಅತೃಪ್ತ ಶಾಸಕರಾದ ಎಸ್. ಟಿ ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು ತಿರುಗೇಟು ನೀಡಿದ್ದಾರೆ.

    ಮುಂಬೈ ರೆಸಾರ್ಟಿನಿಂದ ಸಂದೇಶ ರವಾನಿಸಿರುವ ಅತೃಪ್ತ ಶಾಸಕರು ರಾಮಲಿಂಗಾರೆಡ್ಡಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ವಾಪಾಸ್ ಪಡೆಯುತ್ತಿದ್ದೇನೆ. ಸದನಕ್ಕೆ ಹಾಜರಾಗಿ ವಿಶ್ವಾಸಮತಯಾಚನೆ ವೇಳೆ ಮತ ಹಾಕುತ್ತೇನೆ ಎಂದಿರುವ ಬಗ್ಗೆ ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. ರಾಜೀನಾಮೆ ನೀಡುವ ಮೊದಲು ನಾವು ನಾಲ್ಕು ಮಂದಿ ಅಂದರೆ ಎಸ್. ಟಿ ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು ಹಾಗೂ ರಾಮಲಿಂಗಾರೆಡ್ಡಿ ಸೇರಿ ಒಟ್ಟಾಗಿ ಕುಳಿತು ಮಾತನಾಡಿ, ಒಂದು ಸಾರಿ ರಾಜೀನಾಮೆ ಕೊಟ್ಟ ನಂತರ ಯಾವುದೇ ಕಾರಣಕ್ಕೂ ಅದನ್ನು ವಾಪಾಸ್ ಪಡೆಯಬಾರದು ಎಂಬ ಒಪ್ಪಂದದ ಮೇರೆಗೆ ನಿರ್ಧಾರ ತೆಗೆದುಕೊಂಡಿದ್ದೆವು ಎಂದು ತಿಳಿಸಿದರು.

    ಅನೇಕ ಬಾರಿ, ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ವಾಪಸ್ ಪಡೆಯುವುದಿಲ್ಲ. ನನ್ನ ಮೇಲೆ ನೂರಕ್ಕೆ ನೂರು ವಿಶ್ವಾಸವಿಡಿ ಎಂದು ರಾಮಲಿಂಗರೆಡ್ಡಿ ಅವರು ಹೇಳಿದ್ದರು. ಆದ್ರೆ ಈಗ ರಾಜೀನಾಮೆ ವಾಪಸ್ ಪಡೆದು ನಮಗೆ ಮೋಸ ಮಾಡಿದ್ದಾರೆ. ನಾವು ರಾಮಲಿಂಗಾರೆಡ್ಡಿಯನ್ನು ಫಾಲೋ ಮಾಡಲ್ಲ ಎಂದು ಅತೃಪ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಕುತೂಹಲಕ್ಕೆ ಇಂದು ತೆರೆ

    ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಕುತೂಹಲಕ್ಕೆ ಇಂದು ತೆರೆ

    ಬೆಂಗಳೂರು: ಕಳೆದ ವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿಯವರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.

    ದೋಸ್ತಿ ಪಕ್ಷಗಳ ನಾಯಕರು ಅದೆಷ್ಟೇ ಮನವೊಲಿಸಲು ಯತ್ನಿಸಿದರೂ ಅವರ ಬಾಯಿಂದ ಬರ್ತಿರೋದು ಇಂದು ಹೇಳುತ್ತೇನೆ ಎಂದಾಗಿತ್ತು. ಇಂದು ಸದನಕ್ಕೆ ಹಾಜರಾಗಲಿರುವ ರಾಮಲಿಂಗಾರೆಡ್ಡಿ, ಮಧ್ಯಾಹ್ನ ಸ್ಪೀಕರ್ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ವೇಳೆ ತಮ್ಮ ಮನದಲ್ಲೇನಿದೆ ಅನ್ನೋದನ್ನು ಬಹಿರಂಗಪಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ರಾಜೀನಾಮೆ ಹಿಂಪಡೆದು ಸರ್ಕಾರಕ್ಕೆ ಗುಟುಕು ಜೀವ ಕೊಡುವರೋ ಅಥವಾ ರಾಜೀನಾಮೆ ಹಿಂಪಡೆಯಲ್ಲ ಎಂದು ಹೇಳಿ ಶಾಕ್ ಕೊಡುವರೋ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

    ತೋಟದ ಮನೆಯಲ್ಲಿ ಓಲೈಕೆ:
    ಭಾನುವಾರ ಸಂಜೆ, ಬೆಂಗಳೂರು ಹೊರವಲಯದ ತೋಟದ ಮನೆಗೆ ಹೋಗಿದ್ದ ಸಿಎಂ, ಡಿಸಿಎಂ ಪರಮೇಶ್ವರ್, ಮಾಜಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಡಿಕೆ ಬ್ರದರ್ಸ್, ರಾಮಲಿಂಗಾರೆಡ್ಡಿ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ರಾಮಲಿಂಗಾರೆಡ್ಡಿ ಹಾಗೂ ಪರಮೇಶ್ವರ್ ಅವರನ್ನು ಎದುರು- ಬದುರು ಕೂರಿಸಿ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಪರಮೇಶ್ವರ್ ಎದುರೇ ರಾಮಲಿಂಗಾರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆಂದು ತಿಳಿದು ಬಂದಿದೆ.

    ಕೊನೆಗೆ ರಾಮಲಿಂಗಾರೆಡ್ಡಿ, ತಮ್ಮ ನಿಲುವಿನಿಂದ ಹಿಂದೆ ಸರಿಯದ ಕಾರಣ ಸಿದ್ದರಾಮಯ್ಯ ಹೊರಟು ಬಂದಿದ್ದಾರೆ. ಆದರೆ ಪಟ್ಟು ಬಿಡದ ಸಿಎಂ ಮತ್ತು ಡಿಕೆ ಶಿವಕುಮಾರ್ ಮತ್ತೆ ಒಂದೂವರೆ ಗಂಟೆ ಕಾಲ ಸರ್ಕಸ್ ಮಾಡಿದರು. ಕೊನೆಗೆ ನಿರಾಸೆಯ ಮೊಗ ಹೊತ್ತು ಹಿಂತಿರುಗಿದರು. ನಂತರ ಮಾತನಾಡಿದ ರಾಮಲಿಂಗಾರೆಡ್ಡಿ, ನಾನಿನ್ನು ಶಾಸಕ. ಸದನಕ್ಕೆ ಹಾಜರಾಗುತ್ತೇನೆ. ಎಲ್ಲಾ ಕುತೂಹಲಗಳಿಗೂ ಇಂದು ಮಧ್ಯಾಹ್ನ ತೆರೆ ಎಳೆಯುತ್ತೇನೆ ಎಂದು ಹೇಳಿದರು.

    ಚರ್ಚೆಯಲ್ಲೇನಿತ್ತು..?
    ಕಳೆದ 45 ವರ್ಷದಿಂದ ಪಕ್ಷ ಕಟ್ಟಿದ್ದೇನೆ. ನನ್ನ ಶ್ರಮಕ್ಕೆ ಏನು ಬೆಲೆ ಇದೆ. ನನಗೆ ಸಚಿವ ಸ್ಥಾನ ಕೊಡಲಿಲ್ಲ ಓಕೆ, ಆದರೆ ಯಾವ ಕಾರಣಕ್ಕೆ ಕೊಡಲಿಲ್ಲ ಅನ್ನೋದನ್ನು ಸೌಜನ್ಯಕ್ಕಾದರೂ ನನಗೆ ತಿಳಿಸಲಿಲ್ಲ ಯಾಕೆ. ನನ್ನ ಮಗಳಿಗೆ ಟಿಕೆಟ್ ಕೊಟ್ಟಿದ್ದನ್ನೇ ದೊಡ್ಡದಾಗಿ ಬಿಂಬಿಸಲಾಗಿದೆ. ಹಲವರ ಮಕ್ಕಳಿಗೆ, ಕುಟುಂಬದವರಿಗೆ ಟಿಕೆಟ್ ಕೊಟ್ಟಿಲ್ವಾ. ಬೇರೆ ಯಾರು ಟಿಕೆಟ್ ಪಡೆದೇ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

    ಬೆಂಗಳೂರಲ್ಲಿ ರಾಮಲಿಂಗಾರೆಡ್ಡಿ ಪವರ್‍ಫುಲ್ ಅಂತೀರಿ, ಆದರೆ ಈ ಸರ್ಕಾರದಲ್ಲಿ ನನ್ನ ಯಾವ ಮಾತು ನಡೆದಿದೆ. ಮೇಯರ್ ನಮ್ಮವರು ಆದರು ನಿಜ. ಆದರೆ ಅವರ ಕೆಲಸಕ್ಕೆ ಎಷ್ಟೆಲ್ಲಾ ಅಡ್ಡಿಪಡಿಸಲಾಯ್ತು ಗೊತ್ತಾ. ನಾವು ಇಲ್ಲೇ ಹುಟ್ಟಿ- ಇಲ್ಲೇ ಬೆಳೆದವರು, ಆದರೆ ನಮ್ಮನ್ನು ಇನ್ಯಾರೋ ಆಳುತ್ತಿದ್ದಾರೆ ಎಂದು ಪರಮೇಶ್ವರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಪಕ್ಷ ಬೇರೆ ಯಾರನ್ನೋ ಬೆಂಗಳೂರು ಉಸ್ತುವಾರಿ ಸಚಿವರನ್ನಾಗಿ ಮಾಡಿದೆ. ಆದರೆ ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಕೈಕಟ್ಟಿ ಕೂರಬೇಕಾ. ಈಗ ಸರ್ಕಾರ ಸಂಕಷ್ಟದಲ್ಲಿ ಇದೆ ಅಂತೀರಿ. ಆದರೆ ಇಷ್ಟು ದಿನ ಎಲ್ಲರೂ ಎಲ್ಲಿದ್ರಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಮನವೊಲಿಕೆಗೆ ಕೈ ನಾಯಕರಿಂದ 2 ಗಂಟೆ ಕಸರತ್ತು – ಯಾವುದೇ ಸ್ಪಷ್ಟ ಭರವಸೆ ನೀಡದ ರೆಡ್ಡಿ

    ಮನವೊಲಿಕೆಗೆ ಕೈ ನಾಯಕರಿಂದ 2 ಗಂಟೆ ಕಸರತ್ತು – ಯಾವುದೇ ಸ್ಪಷ್ಟ ಭರವಸೆ ನೀಡದ ರೆಡ್ಡಿ

    ಬೆಂಗಳೂರು: ಅತೃಪ್ತ ಶಾಸಕ ರಾಮಲಿಂಗರೆಡ್ಡಿ ಅವರನ್ನು ಮನವೊಲಿಸಲು ಕಾಂಗ್ರೆಸ್ ನಾಯಕರ ಕಸರತ್ತು ಮಾಡಿದ್ದಾರೆ. ಆದರೆ ರೆಡ್ಡಿ ಅವರು ಯಾವುದೇ ಖಚಿತ ಭರವಸೆಯನ್ನು ನೀಡಲಿಲ್ಲ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಲಕ್ಕಸಂದ್ರದ ರಾಮಲಿಂಗಾರೆಡ್ಡಿ ನಿವಾಸಕ್ಕೆ ಕಾಂಗ್ರೆಸ್ ನಾಯಕರಾದ ಈಶ್ವರ ಖಂಡ್ರೆ ಹಾಗೂ ಹೆಚ್.ಕೆ. ಪಾಟೀಲ್ ಬಂದಿದ್ದರು. ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ರಾಮಲಿಂಗಾರೆಡ್ಡಿಗೆ ಆಪ್ತರು. ಹೀಗಾಗಿ ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸಲು ಸತತವಾಗಿ ಎರಡು ಗಂಟೆಯ ಕಾಲ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಖಾಲಿ ಕೈಯಲ್ಲಿ ಕೈ ನಾಯಕರು ವಾಪಸ್ಸಾಗಿದ್ದಾರೆ.

    ರಾಜೀನಾಮೆ ಹಿಂಪಡೆಯುವ ಬಗ್ಗೆ ರಾಮಲಿಂಗಾರೆಡ್ಡಿ ಅವರು ಗುಟ್ಟು ಬಿಟ್ಟು ಕೊಡದೆ ಸಸ್ಪನ್ಸ್ ಆಗಿ ಇಟ್ಟಿದ್ದಾರೆ. ಚರ್ಚೆಯಾದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ದಿನಾಂಕ 15ರವರೆಗೂ ಯಾವ ರಾಜಕೀಯದ ಬಗ್ಗೆಯೂ ಮಾತನಾಡಲ್ಲ. ಎಲ್ಲರೂ ಆಪ್ತರು ಮಾತನಾಡಲು ಬಂದಿದ್ದರು ಅಷ್ಟೇ ಎಂದು ಹೇಳಿದರು.

    ಸೋಮವಾರ ಸ್ಪೀಕರ್ ಅವರನ್ನು ರಾಮಲಿಂಗಾರೆಡ್ಡಿ ಅವರು ಭೇಟಿ ಮಾಡಲಿದ್ದಾರೆ. ಹೀಗಾಗಿ ನಾಳೆ ರಾಜೀನಾಮೆ ಹಿಂಪಡೆಯದ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸುವ ಹೊಣೆಯನ್ನು ಈಶ್ವರ್ ಖಂಡ್ರೆಗೆ ವಹಿಸಲಾಗಿತ್ತು. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಎರಡು ಬಾರಿ ರೆಡ್ಡಿ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ.

    ಕಾಂಗ್ರೆಸ್ ಕಷ್ಟದಲ್ಲಿದೆ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ರಾಮಲಿಂಗಾರೆಡ್ಡಿ ಅವರನ್ನು ನಾನು ಮತ್ತೆ ಎಚ್.ಕೆ.ಪಾಟೀಲ್ ಅವರು ಭೇಟಿಯಾಗಿದ್ದೇವೆ. ಇಂದು ಕಾಂಗ್ರೆಸ್ ಕಷ್ಟದಲ್ಲಿದೆ. ರಾಮಲಿಂಗಾರೆಡ್ಡಿ ಅವರು ಪಕ್ಷವನ್ನ ಬಲವಾಗಿ ಕಟ್ಟಿದ್ದಾರೆ. ಹೀಗಾಗಿ ಅವರ ಸೇವೆ ಪಕ್ಷಕ್ಕೆ ಅವಶ್ಯಕತೆ ಇದೆ. ಇಂತಹ ಸಂದರ್ಭದಲ್ಲಿ ನಿಮ್ಮ ಅವಶ್ಯಕತೆ ಪಕ್ಷಕ್ಕೆ ಇದೆ ರಾಜೀನಾಮೆ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ. ರಾಮಲಿಂಗಾರೆಡ್ಡಿ ಅವರು ನಮ್ಮ ಮನವಿಗೆ ಸ್ಪಂದನೆ ಮಾಡುತ್ತಾರೆ. ಸರ್ಕಾರದ ಮತ್ತು ಪಕ್ಷದ ಜೊತೆ ಇರುತ್ತಾರೆ ಎಂಬ ಭರವಸೆ ಇದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

  • ರಾಜೀನಾಮೆ ವಾಪಸ್ ತಗೋಳ್ತೀನೋ, ಇಲ್ವೋ ಮುಂದೆ ಹೇಳ್ತೀನಿ: ರಾಮಲಿಂಗಾ ರೆಡ್ಡಿ

    ರಾಜೀನಾಮೆ ವಾಪಸ್ ತಗೋಳ್ತೀನೋ, ಇಲ್ವೋ ಮುಂದೆ ಹೇಳ್ತೀನಿ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ರಾಜೀನಾಮೆ ವಾಪಸ್ ಪಡೆಯಬೇಡಿ ಎಂದು ಯಾರೂ ಕೂಡ ಒತ್ತಡ ಹಾಕಿಲ್ಲ. ಹೀಗಾಗಿ ನಾನು ರಾಜೀನಾಮೆ ವಾಪಸ್ ತೆಗೆದುಕೊಳ್ಳುತ್ತೀನೋ, ಇಲ್ಲವೋ ಎಲ್ಲವನ್ನು ಸಂದರ್ಭ ಬಂದಾಗ ಹೇಳುತ್ತೇನೆ ಎಂದು ಅತೃಪ್ತ ಶಾಸಕ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ, ನಾನು ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೀನಿ ಎಂದು ಯಾರಿಗೂ ಗೊತ್ತಿರಲಿಲ್ಲ. ಹೀಗಾಗಿ ಅದನ್ನು ತಿಳಿಸೋಣ ಎಂದು ಶನಿವಾರ ಬೆಂಬಲಿಗರ ಸಭೆ ಕರೆದಿದ್ದೆ. ಆದರೆ ನನಗೆ ಈ ಸಮಯದಲ್ಲಿ ಬೇಡ ಎಂದು ಸಭೆಯನ್ನು ರದ್ದು ಮಾಡಿದೆ ಎಂದರು.

    ಸ್ವಲ್ಪವಾದರೂ ಮನಸ್ಸು ಬದಲಾವಣೆ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಕ್ಕೆ, ನಾಳೆ ಸ್ಪೀಕರ್ ಬಳಿ ಹೋದಾಗ ಎಲ್ಲವನ್ನು ಹೇಳುತ್ತೇನೆ. ರಾಜೀನಾಮೆ ವಾಪಸ್ ಪಡೆಯಬೇಡಿ ಎಂಬ ಯಾವ ಒತ್ತಡವೂ ನನಗೆ ಇಲ್ಲ. ಯಾವ ನಾಯಕರು ಕೂಡ ನನ್ನನ್ನು ಸಂಪರ್ಕ ಮಾಡಿಲ್ಲ. ಎಲ್ಲ ಪಕ್ಷದಲ್ಲಿ ಸ್ನೇಹಿತರಿದ್ದಾರೆ. ಹೀಗಾಗಿ ಅವರು ಬಂದು ಭೇಟಿ ಮಾಡುತ್ತಾರೆ. ಯಾರೂ ರಾಜೀನಾಮೆ ಬಗ್ಗೆ ಮಾತನಾಡಿಲ್ಲ ಎಂದು ಅವರು ತಿಳಿಸಿದರು.

    ನಾನು ರಾಜೀನಾಮೆ ವಾಪಸ್ ತೆಗೆದುಕೊಳ್ಳುತ್ತೀನೋ, ಇಲ್ಲವೋ ಎಲ್ಲವನ್ನು ಸಂದರ್ಭ ಬಂದಾಗ ಹೇಳುತ್ತೇನೆ. ಸೌಮ್ಯ ರೆಡ್ಡಿ ಪಕ್ಷೇತರ ಅಭ್ಯರ್ಥಿಯಾಗಿದ್ದು, ಅವರೇ ಸ್ವತಃ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮ್ಮ ಕುಟುಂಬದಲ್ಲಿ ರಾಜಕೀಯದ ಬಗ್ಗೆ ಯಾರಿಗೂ ಗೊತ್ತಿಲ್ಲ. ಹೀಗಾಗಿ ಇದರ ಬಗ್ಗೆ ಮಾತನಾಡುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

  • ರಾಜೀನಾಮೆ ವಾಪಸ್ ಪಡೆಯಲ್ಲ, ಅಧಿವೇಶನಕ್ಕೂ ಹೋಗಲ್ಲ ಎಂದಿದ್ದ ಶಾಸಕರು ಉಲ್ಟಾ?

    ರಾಜೀನಾಮೆ ವಾಪಸ್ ಪಡೆಯಲ್ಲ, ಅಧಿವೇಶನಕ್ಕೂ ಹೋಗಲ್ಲ ಎಂದಿದ್ದ ಶಾಸಕರು ಉಲ್ಟಾ?

    ಬೆಂಗಳೂರು: ಯಾವುದೇ ಕಾರಣಕ್ಕೂ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆಯಲ್ಲ. ಅಧಿವೇಶನಕ್ಕೂ ಹೋಗಲ್ಲ ಎಂದಿದ್ದ ಶಾಸಕ ರಾಮಲಿಂಗಾ ರೆಡ್ಡಿ ಹಾಗೂ ರೋಷನ್ ಬೇಗ್ ಉಲ್ಟಾ ಹೊಡೆದ್ರಾ ಅನ್ನೋ ಅನುಮಾನ ಎದ್ದಿದೆ.

    ಯಾಕಂದರೆ ಇಬ್ಬರು ಬಂಡಾಯಗಾರರು ವಿಚಿತ್ರ ಷರತ್ತಿನೊಂದಿಗೆ ಯೂ ಟರ್ನ್ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದ್ದು, ಇಬ್ಬರು ಶಾಸಕರು ಮೈತ್ರಿ ಪಾಳಯಕ್ಕೆ ವಾಪಾಸ್ ಆಗಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಯಾವ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ. ನನ್ನ ದಾರಿ ನನಗೆ ಆದರೆ ವಿಶ್ವಾಸ ಮತ ಸಾಬೀತು ಹಾಗೂ ಫೈನಾನ್ಸ್ ಬಿಲ್ ಸಂದರ್ಭದಲ್ಲಿ ಸದನಕ್ಕೆ ಬಂದು ಬೆಂಬಲ ಕೊಡುತ್ತೇನೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

    ಇತ್ತ ಈಗಾಗಲೇ ಪಕ್ಷದಿಂದ ಉಚ್ಛಾಟನೆಗೊಂಡು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರೋಷನ್ ಬೇಗ್ ಕೂಡ, ನನ್ನ ದಾರಿ ನನಗೆ ನಿಮ್ಮ ಹಂಗಲ್ಲಿ ನಾನಿರಲ್ಲ. ಆದರೆ ಅಧಿವೇಶನದಲ್ಲಿ ವಿಶ್ವಾಸಮತ ಸಾಬೀತಿಗೆ ಮುಂದಾದ್ರೆ ನಾನು ಸದನಕ್ಕೆ ಬಂದು ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದಾರೆ.

    ಈ ಮೂಲಕ ಇಬ್ಬರು ಬಂಡಾಯ ಶಾಸಕರ ಬೆಂಬಲವನ್ನು ದೋಸ್ತಿ ಸರ್ಕಾರ ಗಿಟ್ಟಿಸಿಕೊಂಡಿದೆ. ಇತ್ತ ಸತತ ಹಲವು ಗಂಟೆಗಳ ಕಾಲ ಸಚಿವ ಡಿಕೆಶಿ, ಡಿಸಿಎಂ ಪರಮೇಶ್ವರ್ ಹಾಗೂ ಇತರ ನಾಯಕರೊಂದಿಗಿನ ಸುದೀರ್ಘ ಚರ್ಚೆಯ ಬಳಿಕ ಎಂಟಿಬಿ ನಾಗರಾಜ್ ಕೂಡ ರಾಜೀನಾಮೆ ವಾಪಸ್ ಗೆ ಸಮಯ ಕೇಳುವ ಮೂಲಕ ತನ್ನ ರಾಜೀನಾಮೆ ವಾಪಸ್ ತೆಗೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

  • ರಾಮಲಿಂಗಾ ರೆಡ್ಡಿ ಮನೆಗೆ ಬಿಜೆಪಿ ನಾಯಕರು ಭೇಟಿ

    ರಾಮಲಿಂಗಾ ರೆಡ್ಡಿ ಮನೆಗೆ ಬಿಜೆಪಿ ನಾಯಕರು ಭೇಟಿ

    ಬೆಂಗಳೂರು: ರೆಬೆಲ್ ಶಾಸಕ ರಾಮಲಿಂಗಾ ರೆಡ್ಡಿ ಮನೆಗೆ ಬಿಜೆಪಿ ನಾಯಕರಾದ ಶಾಸಕ ಎಸ್.ಆರ್ ವಿಶ್ವನಾಥ್ ಮತ್ತು ಎಂ. ಕೃಷ್ಣಪ್ಪ ಭೇಟಿ ಕೊಟ್ಟಿದ್ದಾರೆ.

    ಎಸ್.ಆರ್ ವಿಶ್ವನಾಥ್ ಮತ್ತು ಎಂ. ಕೃಷ್ಣಪ್ಪ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಾಮಲಿಂಗಾ ರೆಡ್ಡಿ ಜೊತೆ ಮಾತುಕತೆ ನಡೆಸಿದ್ದಾರೆ. ಚರ್ಚೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವನಾಥ್, ಯಾವುದೇ ರಾಜಕೀಯ ಮಾತನಾಡಲು ಬಂದಿಲ್ಲ. ರೆಡ್ಡಿ ಸಂಘದ ಚುನಾವಣೆ ದಿನಾಂಕ 15ಕ್ಕೆ ನಾಮಿನೇಷನ್ ಲಾಸ್ಟ್ ಇದೆ. 27ಕ್ಕೆ ಚುನಾವಣೆ ಇದೆ. ಈ ಕಾರಣಕ್ಕೆ ಬಂದಿದ್ದೇವೆ ಅಷ್ಟೇ. ಅವರು ಒಂಥರಾ ಬಂಡೆ ಇದ್ದ ಹಾಗೆ, ಯಾರು ಏನೇ ಮಾಡಿದರೂ ಅವರ ನಿರ್ಧಾರ ಅವರದ್ದು ಎಂದು ಹೇಳಿದರು.

    ಸಿಎಂ ಅವರ ಬಳಿ ನಂಬರ್ ಇಲ್ಲ. ಯಾವ ನಂಬರ್ ಗೇಮ್ ಆಗಲ್ಲ. ಗೌರವದಿಂದ ನಿರ್ಗಮಿಸಬೇಕು ಅನ್ನೋದು ಸಿಎಂ ಮನಸ್ಸಿನಲ್ಲಿ ಇರಬೇಕು. ಅದಕ್ಕೆ ವಿಶ್ವಾಸಮತ ಯಾಚನೆ ನಿರ್ಧಾರ ಮಾಡಿದ್ದಾರೆ. ನಂಬರ್ ಗೇಮ್ ಆಡಲಿಕ್ಕೆ ಸಾಧ್ಯವಿಲ್ಲ. ವಿಶ್ವಾಸಮತ ಯಾಚನೆ ದಿನ ಅವರ ಬಳಿ ಇರುವ ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೇ ಗೈರಾಗುತ್ತಾರೆ ನೋಡಿ ಎಂದು ವಿಶ್ವನಾಥ್ ಪರೋಕ್ಷವಾಗಿ ಸಮ್ಮಿಶ್ರ ಸರ್ಕಾರ ಇರುವುದಿಲ್ಲ ಎಂದು ತಿಳಿಸಿದರು.

  • ರಾಜೀನಾಮೆಯಿಂದ ಹಿಂದೆ ಸರಿದು ಸೇಫ್ ಗೇಮ್‍ಗೆ ಸೌಮ್ಯಾ ರೆಡ್ಡಿ ಪ್ಲಾನ್

    ರಾಜೀನಾಮೆಯಿಂದ ಹಿಂದೆ ಸರಿದು ಸೇಫ್ ಗೇಮ್‍ಗೆ ಸೌಮ್ಯಾ ರೆಡ್ಡಿ ಪ್ಲಾನ್

    ಬೆಂಗಳೂರು: ಶಾಸಕ, ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಮನವೊಲಿಕೆ ವಿಫಲವಾಗಿದ್ದು, ಇತ್ತ ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.

    ಸೌಮ್ಯ ರೆಡ್ಡಿ ರಾಜೀನಾಮೆ ನೀಡದೇ ಸೇಫ್ ಗೇಮ್‍ನತ್ತ ಮುಖ ಮಾಡುವ ಮೂಲಕ ಅನರ್ಹತೆ ಭೀತಿಯಿಂದ ಪಾರಾಗಲು ಶಾಸಕಿ ನಿರ್ಧರಿಸಿದ್ದಾರೆ. ಒಂದು ವೇಳೆ ತಂದೆ ರಾಮಲಿಂಗಾ ರೆಡ್ಡಿ ರಾಜೀನಾಮೆಯಿಂದ ಹಿಂದೆ ಸರಿದರೆ, ಪ್ರತಿಯಾಗಿ ಪುತ್ರಿಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆಯನ್ನು ಮುಂದಿಡುವ ಸಾಧ್ಯತೆಗಳಿವೆ. ಹೀಗಾಗಿ ರಾಜೀನಾಮೆಯಿಂದ ಸೌಮ್ಯಾ ರೆಡ್ಡಿ ಹಿಂದೆ ಸರಿದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಶಾಸಕಾಂಗ ಸಭೆಯಿಂದ ಹೊರಬಂದು ಮಾಧ್ಯಮಗಳ ಜೊತೆ ಮಾತನಾಡಿದ ಸೌಮ್ಯ ರೆಡ್ಡಿ, ಸಿಎಲ್‍ಪಿ ಸಭೆಯಿಂದ ಬಂದಿದ್ದೇನೆ. ನಾನು ತಂದೆ ಹಾಗೂ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ನಾನು ಇಂಡಿಪೆಂಡೆಂಟ್ ಮಹಿಳೆಯಾಗಿದ್ದು, ಯಾರು ನನ್ನ ಮೇಲೆ ಒತ್ತಡ ಹಾಕಲು ಸಾಧ್ಯವಿಲ್ಲ. ನನ್ನ ನಿರ್ಧಾರವನ್ನು ನಾನು ತೆಗೆದುಕೊಳ್ಳುತ್ತೇನೆ. ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನನ್ನನ್ನು ಆಯ್ಕೆ ಮಾಡಲಾಗಿತ್ತು. ಹಾಗಾಗಿ ದೆಹಲಿಗೆ ತೆರಳಿ ಸುಷ್ಮಿತಾ ದೇವ್ ಅವರನ್ನು ಭೇಟಿಯಾಗಿದ್ದೇನೆ ಎಂದು ತಿಳಿಸಿದರು.

    ಇಂದು ಬೆಳಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮಲಿಂಗಾರೆಡ್ಡಿ, ನಾನು ಯಾರಿಗೂ ನಡುಕ ಹುಟ್ಟಿಸಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಕಾಂಗ್ರೆಸ್‍ನ ಹಿರಿಯ ನಾಯಕರು ಯಾವುದೇ ಕಾರಣಕ್ಕೂ ಪಕ್ಷ ಬಿಡಬಾರದು ಎಂದು ಹೇಳಿದ್ದಾರೆ. ನಾನು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುವುದು ಮೊದಲೇ ಎಲ್ಲರಿಗೂ ಗೊತ್ತಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಮಾತ್ರ ಕರೆ ಮಾಡಿ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಪತ್ರವನ್ನು ಹಿಂಪಡೆಯಲ್ಲ. ಸ್ಪೀಕರ್ ಎಲ್ಲರನ್ನು ಕರೆದು ಮಾತನಾಡಿಸುತ್ತಾರೆ. ನನ್ನೊಬ್ಬನ ರಾಜೀನಾಮೆಯಿಂದ ದೋಸ್ತಿ ಸರ್ಕಾರಕ್ಕೆ ಏನೂ ಆಗುವುದಿಲ್ಲ. ನಾನು ಯಾರಿಗೂ ರಾಜೀನಾಮೆ ನೀಡಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದರು.

  • 14ನೇ ವಿಕೆಟ್ ಪತನ – ರೋಷನ್ ಬೇಗ್ ರಾಜೀನಾಮೆ

    14ನೇ ವಿಕೆಟ್ ಪತನ – ರೋಷನ್ ಬೇಗ್ ರಾಜೀನಾಮೆ

    ಬೆಂಗಳೂರು: ಶಿವಾಜಿನಗರದ ಶಾಸಕ ರೋಷನ್ ಬೇಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದೋಸ್ತಿ ಸರ್ಕಾರ 14ನೇ ವಿಕೆಟ್ ಪತನಗೊಂಡಿದೆ.

    ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ ತೆರಳಿದ ರೋಷನ್ ಬೇಗ್ ಅವರು ರಾಜೀನಾಮೆಯನ್ನು ಸಲ್ಲಿಸಿದರು. ರೋಷನ್ ಬೇಗ್ ರಾಜೀನಾಮೆ ಸಲ್ಲಿಸುವ ಸಮಯದಲ್ಲಿ ಸ್ಪೀಕರ್ ಕೊಠಡಿಯ ಒಳಗೆಡ ಕೃಷ್ಣಬೈರೇಗೌಡ ಮತ್ತು ಕೆಜೆ ಜಾರ್ಜ್ ಇದ್ದರು.

    ಲೋಕಸಭಾ ಚುನಾವಣೆಯ ನಂತರ ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದ್ದಕ್ಕೆ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ಸಿನಿಂದ ಉಚ್ಚಾಟಿಸಲಾಗಿತ್ತು.

    ತಮ್ಮ ರಾಜೀನಾಮೆ ನಿರ್ಧಾರದ ಕುರಿತು ಭಾನುವಾರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಶಾಸಕ ರೋಷನ್ ಬೇಗ್, ಕಾಂಗ್ರೆಸ್ ನನ್ನನ್ನು ಈಗಾಗಲೇ ಅಮಾನುತು ಮಾಡಿದೆ. ಅಂದು ನಾನು ಆಡಿದ್ದ ಮಾತುಗಳೇ ದೊಡ್ಡ ಅಪರಾಧವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ 14 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಬಂದಿದೆ. ಬೇರೆ ಯಾವ ಕ್ಷೇತ್ರದ ಅಭ್ಯರ್ಥಿಯೂ ಈ ಕೆಲಸವನ್ನು ಮಾಡಲಿಲ್ಲ. ಕೋಲಾರಲ್ಲಿ ದಲಿತ ನಾಯಕನನ್ನು ಸೋಲಿಸುತ್ತೇವೆ ಎಂದು ನಮ್ಮ ಪಕ್ಷದ ಶಾಸಕರೇ ಹೇಳಿದ್ದರು. ಇತ್ತ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಪರ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸಿದರು. ಅಂತವರ ವಿರುದ್ಧ ಪಕ್ಷ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಬಡಪಾಯಿಯಾದ ನನ್ನ ಮೇಲೆ ಮಾತ್ರ ಕ್ರಮ ಕೈಗೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

    ರಾಜೀನಾಮೆ ನೀಡಲು ಮುಂದಾಗಿರುವ 7 ರಿಂದ 8 ಶಾಸಕರಲ್ಲಿ ನಾನು ಇರಬಹುದು. ಒಂದು ವೇಳೆ ನಾನು ರಾಜೀನಾಮೆ ನೀಡಿದ್ರೆ ಯಾವುದೇ ತಪ್ಪಿಲ್ಲ. ಇಂದು ಕಾಂಗ್ರೆಸ್ ಅವರಿಗೆ ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ ನೆನಪಿಗೆ ಬಂದಿದ್ದಾರೆ ವ್ಯಂಗ್ಯವಾಡಿದ್ದರು.

    ರಾಜಕೀಯ ಸಮನ್ವಯತೆ ಪಕ್ಷಗಳಲ್ಲಿ ಚೆನ್ನಾಗಿದ್ದಿದ್ದರೆ ಇಂದಿನ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದ ಅವರು, ಈ ವೇಳೆ ಯಾರ ಬಗ್ಗೆಯೂ ಟೀಕೆ ಟಿಪ್ಪಣಿ ಮಾಡಲು ಇಚ್ಛಿಸಲ್ಲ. ರಾಮಲಿಂಗಾ ರೆಡ್ಡಿ ಮತ್ತು ನಾವು ವಿದ್ಯಾರ್ಥಿ ಚಳುವಳಿಯ ಸಮಯದಿಂದ ರಾಜಕೀಯದಲ್ಲಿದ್ದವರು. ಲೋಕಸಭಾ ಚುನಾವಣೆಯಲ್ಲಿ ಯಾವ ನಾಯಕರು ರಾಮಲಿಂಗಾ ರೆಡ್ಡಿ ಅವರನ್ನು ಸಂಪರ್ಕಿಸಿ ಸಲಹೆ ಪಡೆಯಲಿಲ್ಲ. ಇದೀಗ ಎಲ್ಲರಿಗೂ ನಾವು ಬೇಕಾಗಿದ್ದೇವೆ. ನನಗೆ ಮಂತ್ರಿ ಆಗಲು ಇಷ್ಟವಿಲ್ಲ. ಯಾವ ಮಂತ್ರಿ ಪದವಿಯೂ ನನಗೆ ಬೇಡ ಎಂದರು.

  • ರಾಮಲಿಂಗಾರೆಡ್ಡಿ ಯೂಟರ್ನ್ ವಂದತಿಗೆ ಬಿಜೆಪಿ ಅಲರ್ಟ್

    ರಾಮಲಿಂಗಾರೆಡ್ಡಿ ಯೂಟರ್ನ್ ವಂದತಿಗೆ ಬಿಜೆಪಿ ಅಲರ್ಟ್

    -ಸಿಎಲ್‍ಪಿ ಸಭೆಗೆ ಹೋಗಲ್ಲವೆಂದು ರೆಡ್ಡಿ ಸ್ಪಷ್ಟನೆ

    ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ಯೂಟರ್ನ್ ತೆಗೆದುಕೊಳ್ಳುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಅವರು ಅಲರ್ಟ್ ಆಗಿದ್ದು, ತಕ್ಷಣ ರಾಮಲಿಂಗಾರೆಡ್ಡಿ ಮನೆಗೆ ಭೇಟಿ ನೀಡಿದ್ದಾರೆ.

    ರಾಮಲಿಂಗಾರೆಡ್ಡಿ ಯೂಟರ್ನ್ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ಮಾಜಿ ಮೇಯರ್ ನಟರಾಜ್ ಭೇಟಿ ನೀಡಿದ್ದಾರೆ. ಇವರ ಜೊತೆಗೆ ರಾಮಲಿಂಗಾ ರೆಡ್ಡಿ ಜೊತೆ ಮಾತುಕತೆ ನಡೆಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ವಿಶ್ವನಾಥ್, ರೆಡ್ಡಿ ಜನಾಂಗದ ಚುನಾವಣೆ ಸಂಬಂಧ ಮಾತುಕತೆಗೆ ಬಂದಿದ್ದೇವೆ. ರಾಜಕೀಯದ ಬಗ್ಗೆ ಮಾತನಾಡಲು ಬಂದಿಲ್ಲ. ಆಪರೇಷನ್ ಮಾಡಲು ರಾಮಲಿಂಗಾರೆಡ್ಡಿ ಅವರನ್ನ ಆಗಲ್ಲ. ಶಾಸಕರ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮುಂದೆ ಕಾದು ನೋಡಿ. ನಾನು ಯಾವ ಸಂದೇಶ ಹೊತ್ತು ತಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ರಾಮಲಿಂಗಾರೆಡ್ಡಿ ಅವರು ಸಿಎಲ್‍ಪಿ ಸಭೆಗೆ ಹೋಗುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತ ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ಸಿನಲ್ಲೇ ಉಳಿಯಬೇಕು. ಹೀಗಾಗಿ ಅವರು ರಾಜೀನಾಮೆ ವಾಪಸ್ ಪಡೆದುಕೊಳ್ಳಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಕಾರ್ಯಕರ್ತರು ಅವರ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.

    ಸೋಮವಾರ ಎಐಸಿಸಿ ನಾಯಕಿ ಸೋನಿಯಾ ಗಾಂಧಿಯವರನ್ನು ರಾಮಲಿಂಗಾರೆಡ್ಡಿ ಪುತ್ರಿ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಭೇಟಿ ಮಾಡಿದ ಬಳಿಕ ಈ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಸೋನಿಯಾ ಗಾಂಧಿ ಸಲಹೆ ಮೇರೆಗೆ ಶಾಸಕಿ ಸೌಮ್ಯಾ ರೆಡ್ಡಿ ಕೂಡ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್‍ನಲ್ಲೇ ರಾಜಕಾರಣ ಮಾಡುತ್ತಾ ಬಂದಿರುವ ರಾಮಲಿಂಗಾರೆಡ್ಡಿಗೆ ಪಕ್ಷ ಬಿಡುವ, ಬಿಜೆಪಿ ಸೇರುವ ಮನಸ್ಸಿಲ್ವಾ ಎಂಬ ಪ್ರಶ್ನೆ ಎದ್ದಿದೆ.