Tag: Ramadas

  • ಹಿಂದೂ ದೇವಾಲಯಗಳನ್ನ ಏಕಾಏಕಿ ತೆರವು ಮಾಡುತ್ತಿಲ್ಲ: ಶಾಸಕ ರಾಮದಾಸ್

    ಹಿಂದೂ ದೇವಾಲಯಗಳನ್ನ ಏಕಾಏಕಿ ತೆರವು ಮಾಡುತ್ತಿಲ್ಲ: ಶಾಸಕ ರಾಮದಾಸ್

    ಮೈಸೂರು: ದೇವಸ್ಥಾನ ತೆರವು ವಿಚಾರದಲ್ಲಿ ಆ ಧರ್ಮ ಈ ಧರ್ಮ ಎಂಬುದೇನೂ ಇಲ್ಲ ಎನ್ನುವ ಮೂಲಕ ಶಾಸಕ ರಾಮದಾಸ್ ಅವರು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ದೇವಸ್ಥಾನ ತೆರವು ವಿಚಾರ ಕ್ರಮ ಸರಿಯಲ್ಲ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಅವರ ಅಭಿಪ್ರಾಯ ಬೇರೆ, ನನ್ನ ಅಭಿಪ್ರಾಯ ಬೇರೆ. ಹಿಂದೂ ದೇವಾಲಯಗಳನ್ನು ಏಕಾಏಕಿ ತೆರವು ಮಾಡುತ್ತಿಲ್ಲ. ಮೊದಲು ದೇವಸ್ಥಾನಗಳನ್ನು ಉಳಿಸಿಕೊಳ್ಳಲು ಯೋಚನೆ ಮಾಡಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಸೋನಿಯಾ ಗಾಂಧಿ ಅನಿವಾರ್ಯತೆ ಇದೆ, ನಮಗೆ ಇಲ್ಲ: ಪ್ರತಾಪ್ ಸಿಂಹ

    ಮೊದಲ ಹಂತದಲ್ಲಿ ದೇವಸ್ಥಾನವನ್ನು ಉಳಿಸಿಕೊಳ್ಳಲು ಆಗದಿದ್ದರೆ ಎರಡನೇ ಹಂತದಲ್ಲಿ ಸ್ಥಳಾಂತರಕ್ಕೆ ಚಿಂತನೆ ಮಾಡುತ್ತಿದ್ದೇವೆ. ಇದೆರೆಡು ಸಾಧ್ಯವಾಗದಿದ್ದಾಗ ಮಾತ್ರ ತೆರವು ಕಾರ್ಯ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಆ ಧರ್ಮದ್ದು ಈ ಧರ್ಮದ್ದು ಎಂಬುದೇನು ಇಲ್ಲ. ಸುಪ್ರೀಂ ಕೋರ್ಟ್ ಸೂಚನೆಯಂತೆ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು.  ಇದನ್ನೂ ಓದಿ: ನಿಮ್ಮ ಧಮ್ಕಿಗೆ ಹೆದರಲ್ಲ – ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ತಿರುಗೇಟು

    ನಾವು ಆದಷ್ಟು ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಉಳಿಸಿಕೊಳ್ಳಲು ಹಾಗೂ ಸ್ಥಳಾಂತರಿಸಲು ಪ್ರಯತ್ನ ನಡೆಸಿದ್ದೇವೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇವೆ. ಇದರಲ್ಲಿ ಒಂದು ಕ್ಷೇತ್ರ ಒಂದು ಧರ್ಮ ಎಂಬುವ ವಿಚಾರ ಇರುವುದಿಲ್ಲ ಎಂದು ರಾಮದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ಅತ್ಯಾಚಾರ ಪ್ರಕರಣ- ಚಿಕಿತ್ಸೆ ಫಲಿಸದೆ ಮೃತಪಟ್ಟ ಸಂತ್ರಸ್ತೆ

    ಪ್ರತಾಪ್ ಸಿಂಹ ಹೇಳಿದ್ದೇನು..?

    ಕೇವಲ ಹಿಂದೂ ಧರ್ಮದ ದೇವಸ್ಥಾನಗಳನ್ನು ಮಾತ್ರ ಟಾರ್ಗೆಟ್ ಮಾಡಿದರೆ ಸುಮ್ಮನಿರಲ್ಲ. ರಸ್ತೆ ಆಗಲೀಕರಣಕ್ಕೆ ತೊಂದರೆಯಾಗಿರುವ ಇರ್ವಿನ್ ರಸ್ತೆಯ ಮಸೀದಿಯನ್ನು ತೆರವುಗೊಳಿಸಿಲ್ಲ. ದೇವರಾಜ ರಸ್ತೆಯಲ್ಲಿರುವ ದರ್ಗಾವನ್ನು ಯಾಕೆ ತೆರವು ಮಾಡಿಲ್ಲ ಎಂದು ಮೈಸೂರು ಜಿಲ್ಲಾಡಳಿತದ ವಿರುದ್ಧ ಸಂಸದ ಪ್ರತಾಪ್ ಸಿಂಹ ಕೆಡಿಪಿ ಮೀಟಿಂಗ್‍ನಲ್ಲಿ ಕಿಡಿಕಾರಿದ್ದರು.

     

  • ನಾಡಹಬ್ಬದಲ್ಲೂ ಬಿಜೆಪಿ ಭಿನ್ನಮತ ಸ್ಫೋಟ – ಸಚಿವ ಸ್ಥಾನ ವಂಚಿತ ರಾಮದಾಸ್ ಕಾರ್ಯಕ್ರಮಕ್ಕೆ ಗೈರು

    ನಾಡಹಬ್ಬದಲ್ಲೂ ಬಿಜೆಪಿ ಭಿನ್ನಮತ ಸ್ಫೋಟ – ಸಚಿವ ಸ್ಥಾನ ವಂಚಿತ ರಾಮದಾಸ್ ಕಾರ್ಯಕ್ರಮಕ್ಕೆ ಗೈರು

    – ಸರಿ ಹೋಗುತ್ತೆ ಎಂದ ಸೋಮಣ್ಣ

    ಮೈಸೂರು: ನಾಡಹಬ್ಬ ದಸರಾದಲ್ಲೂ ಬಿಜೆಪಿಯ ಭಿನ್ನಮತ ಸ್ಫೋಟಗೊಂಡಿದ್ದು, ಸಚಿವ ಸ್ಥಾನ ವಂಚಿತ ಶಾಸಕ ಎಸ್.ಎ.ರಾಮದಾಸ್ ಎಲ್ಲ ಕಾರ್ಯಕ್ರಮಗಳಿಗೂ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಜಂಬೂ ಸವಾರಿಯಲ್ಲಿ ಭಾಗಿಯಾಗುವ ಮೊದಲ ಆರು ಆನೆಗಳ ತಂಡಕ್ಕೆ ಜಿಲ್ಲಾ ಉಸ್ತುವಾರಿ, ಸಚಿವ ವಿ.ಸೋಮಣ್ಣ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು. ಆನೆಗಳು ಒಂದೂವರೆ ತಿಂಗಳು ಅರಮನೆಯಲ್ಲಿಯೇ ಉಳಿದುಕೊಳ್ಳಲಿವೆ. ದಕ್ಷಿಣ ಭಾರತದಲ್ಲಿ ಹೈ ಅಲರ್ಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಆನೆಗಳ ಪೂಜೆಗೂ ಮುನ್ನ ಮುಂಜಾಗ್ರತಾ ಕ್ರಮವಾಗಿ ಗಜಪಡೆಯ ಸುತ್ತಲಿನ ಕಲಾ ತಂಡ ಹಾಗೂ ವಸ್ತುಗಳ ಪರಿಶೀಲನೆ ನಡೆಸಲಾಯ್ತು.

    ಗಜಪಡೆಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ವಿ.ಸೋಮಣ್ಣ, ಇನ್ನೆರಡು ದಿನ ಮೈಸೂರಿನಲ್ಲಿ ಉಳಿಯಲಿದ್ದೇನೆ. ಗಜಪಡೆ ಸ್ವಾಗತಕ್ಕೆ ಅವರನ್ನು ಆಹ್ವಾನಿಸಲು ಬೆಳಗ್ಗೆಯಿಂದ ದೂರವಾಣಿ ಮಾಡುತ್ತಿದ್ದೇನೆ. ಆದ್ರೆ ರಾಮದಾಸ್ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. 28ರಂದು ಖುದ್ದಾಗಿ ರಾಮದಾಸ್ ಅವರನ್ನ ಭೇಟಿಯಾಗಿ ಮನವೊಲಿಸುತ್ತೇನೆ. ವರ್ಷಕ್ಕೊಮ್ಮೆ ಬರುವ ನಾಡಹಬ್ಬವನ್ನು ಎಲ್ಲರೂ ಒಟ್ಟಾಗಿ ಆಚರಿಸಬೇಕು. ನನಗೆ ಖಾತೆ ಹಂಚಿಕೆ ಬಗ್ಗೆ ಕಾಳಜಿಯೂ ಇಲ್ಲ ಆಸಕ್ತಿಯು ಇಲ್ಲ. ನನಗೆ ಖಾತೆ ಹಂಚಿಕೆ ಬಗ್ಗೆ ಕಾಳಜಿಯೂ ಇಲ್ಲ ಆಸಕ್ತಿಯೂ ಇಲ್ಲ ಎಂದರು.

    ಇಂದು ಮಧ್ಯಾಹ್ನ 12.30ರ ಅಭಿಜಿನ್ ಲಗ್ನದಲ್ಲಿ ಚಾಮುಂಡೇಶ್ವರಿ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರು ಗಜಪಡೆಗೆ ಸಾಂಪ್ರದಾಯಕವಾಗಿ ಪೂಜೆ ಸಲ್ಲಿಸಿದರು. ಗಜಪಡೆ ಸ್ವಾಗತದಲ್ಲಿ ಡಿಸಿ ಅಭಿರಾಮ್ ಜಿ.ಶಂಕರ್, ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

    https://www.youtube.com/watch?v=LwXO4sOBHTs

     

  • ನಮ್ಮದು ಸಮ್ಮಿಶ್ರ ಸರ್ಕಾರ: ಸಚಿವ ವಿ.ಸೋಮಣ್ಣ

    ನಮ್ಮದು ಸಮ್ಮಿಶ್ರ ಸರ್ಕಾರ: ಸಚಿವ ವಿ.ಸೋಮಣ್ಣ

    ಮೈಸೂರು: ಸಿಎಂ ಬಿ.ಎಸ್.ಯಡಿಯೂರಪ್ಪನವರದ್ದು ಸಮ್ಮಿಶ್ರ ಸರ್ಕಾರ ಎಂದು ಸಚಿವ ವಿ.ಸೋಮಣ್ಣ ಮೈಸೂರಿನ ವೀರನಹೊಸಳ್ಳಿಯಲ್ಲಿ ಹೇಳಿದ್ದಾರೆ.

    ಮೈಸೂರು ದಸರಾ ಗಜಪಡೆಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದ ಸಚಿವರು, ಇದೊಂದು ಸಮ್ಮಿಶ್ರ ಸರ್ಕಾರ, ಯಾರಿಗೆ ಏನು ಸಿಗಬೇಕೋ ಅದು ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ಸಿಗಲಿದೆ. ಇಂದು ಬೆಳಗ್ಗೆ ಮುಖ್ಯಮಂತ್ರಿಗಳು ಆರ್.ಅಶೋಕ್ ಅವರೊಂದಿಗೆ ತೆರಳಿ ರಾಮದಾಸ್ ಜೊತೆ ಗಜಪಡೆಗೆ ಪೂಜೆ ಸಲ್ಲಿಸಲು ಸೂಚಿಸಿದ್ದರು. ಸಿಎಂ ಸೂಚನೆಗೆ ಗಜಪಡೆಗೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಗಿದೆ ಎಂದರು.

    ಸದ್ಯ 17 ಜನ ಸಚಿವರಾಗಿದ್ದೇವೆ. ಇನ್ನು 16 ಸ್ಥಾನಗಳು ಖಾಲಿ ಉಳಿದಿವೆ. ಹಾಗಾಗಿ ಯಾರಿಗೆ ಆದ್ಯತೆ ಕೊಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ರಾಮದಾಸ್ ಸಹ ಹಿರಿಯರು ಅನ್ನೋದಕ್ಕಿಂತ ನಮ್ಮ ಜೊತೆ ಕೆಲಸ ಮಾಡಿದ ನಾಯಕರು. ತಾಯಿಯ ಆಶೀರ್ವಾದದಿಂದ ಎಲ್ಲರಿಗೂ ಒಳ್ಳೆಯದು ಆಗಲಿ ಎಂದು ಅಸಮಾಧಾನಿತ ಶಾಸಕರಿಗೆ ಭರವಸೆ ನೀಡಿದರು.

    ಮೊದಲ ತಂಡವಾಗಿ ಐದು ಅನೆಗಳು ಮೈಸೂರಿಗೆ ಪ್ರಯಾಣ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ರಾಮದಾಸ್ ಕೂಡ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಬರಬೇಕಾದ ನೂತನ ಸಚಿವರಾದ ಆರ್. ಅಶೋಕ್ ಮತ್ತು ವಿ. ಸೋಮಣ್ಣ ಬರುವುದನ್ನು ಒಂದು ನಿಮಿಷವೂ ಕಾಯದೇ ಪುಷ್ಪಾರ್ಚಾನೆ ಮಾಡಿದ ಶಾಸಕ ಎಸ್.ಎ ರಾಮದಾಸ್, ಯಾರನ್ನು ಕಾಯುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳಿಗೆ ಹೇಳಿ ಪುಷ್ಪಾರ್ಚಾನೆ ಮಾಡಿದರು. ಎಲ್ಲ ಕಾರ್ಯಕ್ರಮಗಳು ಮುಗಿದ ಮೇಲೆ ತಡವಾಗಿ ಬಂದ ಸಚಿವಾರದ ಆರ್. ಅಶೋಕ್ ಮತ್ತು ವಿ. ಸೋಮಣ್ಣ ಅವರು ಮತ್ತೊಮ್ಮೆ ಗಜಪಡೆಗೆ ಪುಷ್ಪಾರ್ಚನೆ ಮಾಡಿದರು.

    ಸಾಂಪ್ರದಾಯಿಕವಾಗಿ ಪ್ರತಿ ವರ್ಷ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ, ಗಜಪಯಣಕ್ಕೆ ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ದಸರಾ ಗಜಪಯಣಕ್ಕೆ ಚಾಲನೆ ನೀಡುವ ವಿಚಾರಕ್ಕೆ ಗೊಂದಲ ಶುರುವಾಗಿತ್ತು. ಯಾಕೆಂದರೆ ಪ್ರತಿ ಬಾರಿ ದಸರಾ ಗಜಪಯಣಕ್ಕೆ ಉಸ್ತವಾರಿ ಸಚಿವರು ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ಜಿಲ್ಲೆಯಿಂದ ಯಾವ ನಾಯಕರು ಸಚಿವರಾಗಿಲ್ಲ. ಅಲ್ಲದೆ ಸ್ಥಳೀಯ ಶಾಸಕರ ಬಳಿ ಚಾಲನೆ ಕೊಡಿಸೋಣ ಎಂದರೆ ಶಾಸಕರು ಕೂಡ ಅನರ್ಹರಾಗಿದ್ದಾರೆ. ಹೀಗಾಗಿ ಗಜಪಯಣಕ್ಕೆ ಚಾಲನೆ ನೀಡುವವರು ಯಾರು ಎಂಬ ಗೊಂದಲ ಎದುರಾಗಿತ್ತು. ಆದರೆ ಶಾಸಕ ರಾಮದಾಸ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.