Tag: Ramachandrappa

  • ಗ್ರಾಮೀಣ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಗ್ರಂಥಾಲಯ ನಿರ್ಮಿಸಿದ ತುಮಕೂರಿನ ನಿವೃತ್ತ ಅಧಿಕಾರಿ

    ಗ್ರಾಮೀಣ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಗ್ರಂಥಾಲಯ ನಿರ್ಮಿಸಿದ ತುಮಕೂರಿನ ನಿವೃತ್ತ ಅಧಿಕಾರಿ

    ತುಮಕೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಸಹಾಯವಾಗುವಂತೆ, ತಮ್ಮ ಮನೆಯಲ್ಲೇ ಗ್ರಂಥಾಲಯವನ್ನು ಸ್ಥಾಪಿಸಿ ವಿದ್ಯಾರ್ಥಿಗಳ ಜ್ಞಾನಸೆಲೆಗೆ ಆಧಾರವಾಗಿದ್ದಾರೆ ತುಮಕೂರಿನ ರಾಮಚಂದ್ರಪ್ಪ.

    ಜಿಲ್ಲೆಯ ತುರುವೇಕೆರೆ ತಾಲೂಕಿನ ನಿವಾಸಿಯಾಗಿರುವ ರಾಮಚಂದ್ರ ಅವರ ಈ ಸಾಮಾಜಿಕ ಕಳಕಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ರೈಲ್ವೇ ನಿಲ್ದಾಣಾಧಿಕಾರಿಯಾಗಿ ನಿವೃತ್ತರಾಗಿರುವ ಇವರು ತಮ್ಮೂರಿನ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಪುಸ್ತಕ ಇಲ್ಲದೆ ಇರುವ ಪರಿಸ್ಥಿತಿಯನ್ನು ಗಮನಿಸಿ ತಮ್ಮ ಮನೆಯಲ್ಲೇ ಉಚಿತವಾಗಿ ಗ್ರಂಥಾಲಯವನ್ನು ತೆರೆದಿದ್ದಾರೆ. ಪ್ರತಿ ತಿಂಗಳ ತಮ್ಮ ಪಿಂಚಣಿ ಹಣದಿಂದ ಖುದ್ದಾಗಿ ಪುಸ್ತಕಗಳನನ್ನು ಖರೀದಿಸಿ ಗ್ರಂಥಾಲಯವನ್ನು ನಿರ್ವಹಣೆ ಮಾಡುತ್ತಿದ್ದಾರೆ.

    ಮನೆಯ ಎರಡು ಕೊಠಡಿಗಳಲ್ಲಿ ಗ್ರಂಥಾಲಯ ಸ್ಥಾಪಿಸಿ, 8 ವರ್ಷಗಳಿಂದ ಸುಮಾರು 8 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಸಾಹಿತ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳು ಸೇರಿವೆ. ಅಲ್ಲದೇ ತಮ್ಮ ಗ್ರಂಥಾಲಯಕ್ಕೆ ಬಂದು ಓದುವುದಲ್ಲದೇ ವಿದ್ಯಾರ್ಥಿಗಳು ಮನೆಗೆ ಪುಸ್ತಕ ತೆಗೆದುಕೊಂಡು ಹೋಗುವುದಕ್ಕೂ ಅವಕಾಶವನ್ನು ನೀಡಿದ್ದಾರೆ.

     

    ಪ್ರತಿ ತಿಂಗಳಿಗೊಮ್ಮೆ ಪುಸ್ತಕ ಪರಿಚಯ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಪುಸ್ತಕಗಳ ಜೊತೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳಾದ ಬೇರು, ವಿಮುಕ್ತಿ, ಬೆಟ್ಟದ ಜೀವ ಚಿತ್ರಗಳನ್ನು ಪ್ರದರ್ಶಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಎಲೆಮರೆ ಕಾಯಿಯಂತೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ರಾಮಚಂದ್ರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ.