Tag: rama

  • ಮೋದಿಗೆ ಕರ್ನಾಟಕದಿಂದ ನೀಡಿದ್ದ ಕೋದಂಡರಾಮ ಪ್ರತಿಮೆ ಗಿಫ್ಟ್

    ಮೋದಿಗೆ ಕರ್ನಾಟಕದಿಂದ ನೀಡಿದ್ದ ಕೋದಂಡರಾಮ ಪ್ರತಿಮೆ ಗಿಫ್ಟ್

    ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ಮೋದಿ ಅವರಿಗೆ ಕರ್ನಾಟಕದಿಂದ ರವಾನೆಯಾಗಿದ್ದ ಕೋದಂಡರಾಮನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲಾಗಿದೆ.

    ಇಂದು ಮಧ್ಯಾಹ್ನ 12.44 ರ ಶುಭ ಅಭಿಜಿನ್ ಲಗ್ನದ ಶತಾಭಿಷ ನಕ್ಷತ್ರದ ಮುಹೂರ್ತದಲ್ಲಿ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ಮುಗಿಸಿದರು. ನಂತರ 40 ಕೆಜಿಯ ಬೆಳ್ಳಿ ಇಟ್ಟಿಗೆಯನ್ನು ಇಟ್ಟು ಮಂದಿರಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. ಹೀಗಾಗಿ ಈ ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿ ಹಾಗೂ ಗಣ್ಯರಿಗೆ ಕರ್ನಾಟಕದಿಂದ ಕಳುಹಿಸಲಾಗಿದ್ದ ಮೂರ್ತಿ ನೀಡಲಾಗಿದೆ.

    ಕೋದಂಡರಾಮ ಪ್ರತಿಮೆ ಶಿಲ್ಪಿ ಕೈಯಲ್ಲಿ ಅರಳಿದ್ದು, ದೇಶ ಕಾಯುತ್ತಿದ್ದ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗೆ ಸಾಕ್ಷಿಯಾಗಿದೆ. ನಾಗದೇವನಹಳ್ಳಿಯ ಕೆಂಗೇರಿ ನಿವಾಸಿ ರಾಮಮೂರ್ತಿ ಅವರು ಈ ಪ್ರತಿಮೆಯನ್ನು ತಯಾರಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ರಮಕ್ಕೆ ಮುನ್ನ ಈ ಮೂರ್ತಿಗಳು ಉತ್ತರ ಪ್ರದೇಶಕ್ಕೆ ತಲುಪಿದ್ದವು.

    ಉತ್ತರ ಪ್ರದೇಶ ಸರ್ಕಾರದ ಬೇಡಿಕೆ ಮೇರೆಗೆ ಕೋದಂಡರಾಮನ ಪ್ರತಿಮೆಯನ್ನು ಮಾಡಲಾಗಿತ್ತು. ಜುಲೈ 31 ರಂದು ರಾಮ, ಲವ, ಕುಶ ಮೂರು ಮೂರ್ತಿಗಳು ರವಾನೆಯಾಗಿದ್ದವು. ಇಂದು ನಡೆಯುವ ಕಾರ್ಯಕ್ರಮದಲ್ಲಿ ಗಣ್ಯರಿಗೆ ಉಡುಗೊರೆಯಾಗಿ ನೀಡಲಾಗಿದೆ.

    ತೇಗದ ಮರದಿಂದ ರಾಮ ಮೂರ್ತಿಯನ್ನು ಮಾಡಲಾಗಿದೆ. ಕೋದಂಡರಾಮನ ಪ್ರತಿಮೆ ಮೂರು ಅಡಿ ಇದೆ. ಲವ-ಕುಶ ಒಂದೂವರೆ ಅಡಿ, ಮತ್ತೊಂದು ರಾಮನ ಮೂರ್ತಿ ಒಂದೂವರೆ ಅಡಿ ಇದೆ.

  • 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    – ಕೌಸಲ್ಯೆ ಹುಟ್ಟಿದ ಸ್ಥಳವೆಂದು ನಂಬಲಾಗಿರುವಲ್ಲಿಂದ ಮಣ್ಣು

    ರಾಯ್ಪುರ್: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು 800 ಕಿ.ಮೀ ನಡೆದುಕೊಂಡೇ ತೆರಳಲು ನಿರ್ಧರಿಸಿ ಹೊರಟಿದ್ದಾರೆ.

    ಗಮನಾರ್ಹ ವಿಷಯವೆಂದರೆ ಭಗವಾನ್ ರಾಮನ ತಾಯಿ ಕೌಸಲ್ಯೆ ಹುಟ್ಟಿದ್ದು ಛತ್ತೀಸ್‍ಗಢದ ಚಂದ್ಖುರಿಯಲ್ಲಿ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಇದೇ ಗ್ರಾಮದ ನಿವಾಸಿ ಮೊಹಮ್ಮದ್ ಫಯಾಝ್ ಖಾನ್ ಅವರು ಶ್ರೀರಾಮನ ಪರಮ ಭಕ್ತನಾಗಿದ್ದಾರೆ. ಇದನ್ನೂ ಓದಿ: ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ ಮಂದಿರ ಭೂಮಿ ಪೂಜೆಗೆ ವಿರೋಧ- ಉದ್ಧವ್ ಠಾಕ್ರೆ ಹೇಳಿಕೆಗೆ ವಿಎಚ್‍ಪಿ ಕಿಡಿ

    ಮಧ್ಯಪ್ರದೇಶಕ್ಕೆ ತಲುಪಿದೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಫಯಾಜ್ ಖಾನ್, ನನ್ನ ಹೆಸರು ಹಾಗೂ ಧರ್ಮದಲ್ಲಿ ನಾನೊಬ್ಬ ಮುಸ್ಲಿಂ. ಆದರೆ ನನ್ನ ದೇವರು ರಾಮ. ನಾನು ರಾಮನ ಪರಮಭಕ್ತನಾಗಿದ್ದೇನೆ. ನಮ್ಮ ಪೂರ್ವಜರ ಬಗ್ಗೆ ತಿಳಿದುಕೊಂಡರೆ ಅವರು ಹಿಂದೂಗಳಾಗಿರಬಹುದು. ಅಲ್ಲದೆ ಅವರ ಹೆಸರು ರಾಮ್‍ಲಾಲ್ ಅಥವಾ ಶ್ಯಾಮ್‍ಲಾಲ್ ಆಗಿರಬಹುದು. ನಾವು ಚರ್ಚ್ ಅಥವಾ ಮಸೀದಿಗೇ ಹೋಗಲಿ ಆದರೆ ನಾವೆಲ್ಲರೂ ಹಿಂದೂ ಮೂಲವನ್ನು ಹೊಂದಿದ್ದೇವೆ ಎಂದು ತಿಳಿಸಿದರು.

    ನಮ್ಮ ಮುಖ್ಯ ಪೂರ್ವಜ ಭಗವಾನ್ ರಾಮನಾಗಿದ್ದಾನೆ. ಅಲ್ಲಮ ಇಕ್ಬಾಲ್(ಪಾಕಿಸ್ತಾನಿ ರಾಷ್ಟ್ರೀಯ ಕವಿ) ಅವರು ಅವರದ್ದೇ ಆದ ರೀತಿಯಲ್ಲಿ ವಿವರಣೆ ನೀಡಲು ಪ್ರಯತ್ನಿಸಿದ್ದರು. ರಾಮನನ್ನು ಭಾರತದ ಅಧಿಪತಿ ಅಥವಾ ದೊರೆ ಎಂದು ಪರಿಗಣಿಸುತ್ತಾರೆ ಎಂದು ಹೇಳಿದ್ದರು. ಇದೇ ಪೂಜ್ಯ ಭಾವದಿಂದ ಇಂದು ನಾನು ಕೌಸಲ್ಯೆ ಹುಟ್ಟಿದ ಸ್ಥಳ ಎಂದು ನಂಬಲಾಗಿರುವ ಚಂದ್ಖುರಿಯಿಂದ ಅಯೋಧ್ಯೆಗೆ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗೆ ಮಣ್ಣು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಖಾನ್ ಹೇಳಿದರು. ಇದನ್ನೂ ಓದಿ: ರಾಮಮಂದಿರ ಶಿಲಾನ್ಯಾಸಕ್ಕೆ ಭರ್ಜರಿ ಸಿದ್ಧತೆ – ಸಿಎಂ ಯೋಗಿ ಆದಿತ್ಯನಾಥ್ ಪರಿಶೀಲನೆ

    ಇದೇ ಸಂದರ್ಭದಲ್ಲಿ ಮಾಧ್ಯಮದವರು ನಿಮ್ಮ ಈ ಕಾರ್ಯವನ್ನು ಟೀಕಿಸುವವರಿಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, ಪಾಕಿಸ್ತಾನದ ಕೆಲವರು ಹಿಂದೂ ಮುಸ್ಲಿಂ ಹೆಸರುಗಳೊಂದಿಗೆ ನಕಲಿ ಐಡಿಗಳನ್ನು ರಚಿಸಿಕೊಂಡು ಭಾರತದಲ್ಲಿ ಎಲ್ಲಾ ಸಮುದಾಯದವರೂ ಪರಸ್ಪರ ನಿಂದಿಸಿಕೊಳ್ಳುತ್ತಿದ್ದಾರೆ ಎಂದು ತೋರ್ಪಡಿಸಲು ಈ ರೀತಿ ಮಾಡುತ್ತಾರೆ ಎಂದು ಹೇಳಿದರು.

    ಇದೂವರೆಗೂ ನಾನು 15,000 ಕಿ.ಮೀ ನಡದುಕೊಂಡೇ ಹಲವು ದೇವಾಲಯಗಳಿಗೆ ತೆರಳಿದ್ದೇನೆ. ಹಾಗೂ ಕೆಲವೆಡೆ ದೇವಾಲಯಗಳಲ್ಲಿ ಉಳಿದುಕೊಂಡಿದ್ದೂ ಇದೆ. ಆದರೆ ಯಾರೊಬ್ಬರೂ ನನ್ನ ವಿರುದ್ಧ ಮಾತನಾಡಿಲ್ಲ ಎಂದು ಇದೇ ವೇಳೆ ಖಾನ್ ವಿವರಿಸಿದ್ದಾರೆ.

  • ರಾಮ ಮಂದಿರಕ್ಕೆ ಧನ ಸಹಾಯದ ಜೊತೆಗೆ ಸಾತ್ವಿಕ ಬೆಂಬಲ ಬೇಕು: ಪೇಜಾವರ ಶ್ರೀ

    ರಾಮ ಮಂದಿರಕ್ಕೆ ಧನ ಸಹಾಯದ ಜೊತೆಗೆ ಸಾತ್ವಿಕ ಬೆಂಬಲ ಬೇಕು: ಪೇಜಾವರ ಶ್ರೀ

    ಹಾಸನ: ರಾಮ ಮಂದಿರ ನಿರ್ಮಾಣಕ್ಕೆ ಧನ ಸಹಾಯದ ಜೊತೆಗೆ ಜನರ ಸಾತ್ವಿಕ ಬೆಂಬಲ ಕೂಡ ಬೇಕಿದೆ ಎಂದು ಪೇಜಾವರ ಮಠದ ಸ್ವಾಮೀಜಿ ಹಾಗೂ ರಾಮ ಮಂದಿರ ಟ್ರಸ್ಟ್ ಸದಸ್ಯರಾದ ವಿಶ್ವ ಪ್ರಸನ್ನ ಸ್ವಾಮೀಜಿ ಹೇಳಿದ್ದಾರೆ.

    ಹಾಸನದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣದ ಮೊದಲ ಸಭೆ ನಡೆದಿದೆ. ಅದಕ್ಕೆ ಒಂದು ಸಮಿತಿ ರಚನೆ ಆಗಲಿದೆ. ಅಯೋಧ್ಯೆಯಲ್ಲಿ ಎಸ್‍ಬಿಐ ಶಾಖೆಯಲ್ಲಿ ಒಂದು ಖಾತೆ ತೆರೆಯಲಾಗುತ್ತದೆ. ಈ ಖಾತೆಗೆ ಮಂದಿರ ಕಟ್ಟಲು ಯಾರು ಬೇಕಾದರೂ ಸಹಾಯ ಮಾಡಬಹುದು. 1 ರೂ. ನಿಂದ 1 ಕೋಟಿವರೆಗೂ ಯಾರು ಬೇಕಾದರೂ ಸಹಾಯ ಮಾಡಬಹುದು. ಈಗಾಗಲೇ ಪೇಜಾವರ ಗುರುಗಳ ಹೆಸರಿನಲ್ಲಿ ಮೊದಲನೆದಾಗಿ 5 ಲಕ್ಷ ರೂ. ನೀಡಲಾಯಿತು ಎಂದು ತಿಳಿಸಿದರು. ಇದನ್ನು ಓದಿ: ವ್ಯಾಟಿಕನ್ ಸಿಟಿ, ಮೆಕ್ಕಾ ಮಸೀದಿಗಿಂತಲೂ ವಿಸ್ತಾರವಾಗಿ ರಾಮ ಮಂದಿರ ನಿರ್ಮಾಣ

    ಇದೇ ವೇಳೆ ಮಾತನಾಡಿದ ಅವರು ರಾಮ ಮಂದಿರ ನಿರ್ಮಾಣಕ್ಕೆ ಕೇವಲ ಧನ ಸಹಾಯ ಮಾತ್ರವಲ್ಲ. ಜನರಿಂದ ನಮಗೆ ಸಾತ್ವಿಕ ಬೆಂಬಲ ಬೇಕಿದೆ. ಪ್ರತಿ ಮನೆಯಲ್ಲಿ ರಾಮಜಪ ನಡೆಯಬೇಕಿದೆ. ಹಿಂದೆ ಪ್ರತಿ ಮನೆಯಲ್ಲಿ ರಾಮಜಪ ಸಂಸ್ಕಾರ ಇತ್ತು. ಈಗ ಎಲ್ಲಾ ಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

  • ರಾಮನಿಂದ ಕಲ್ಲು ಬಂಡೆಗೆ ಬಾಣ, ಕಾಣಿಸಿಕೊಂಡಿತು ನೀರು – ‘ನಾಮದ ಚಿಲುಮೆ’ ಸ್ಥಳವೊಂದು, ವಿಶೇಷತೆ ಹಲವು!

    ರಾಮನಿಂದ ಕಲ್ಲು ಬಂಡೆಗೆ ಬಾಣ, ಕಾಣಿಸಿಕೊಂಡಿತು ನೀರು – ‘ನಾಮದ ಚಿಲುಮೆ’ ಸ್ಥಳವೊಂದು, ವಿಶೇಷತೆ ಹಲವು!

    ಯ್ಯೋ ಸಾಕಪ್ಪ ಸಾಕು ಸ್ವಲ್ಪ ರಿಲ್ಯಾಕ್ಸ್ ಆಗೋಣ, ಎಲ್ಲಾದ್ರೂ ಕೂಲ್ ಆಗಿರೋ ಜಾಗಕ್ಕೆ, ಒಳ್ಳೆಯ ಗಾಳಿ ಸಿಗೋ ಜಾಗಕ್ಕೆ ಹೋಗೋಣ ಅಂತಾ ಬೆಂಗಳೂರಿನಲ್ಲಿ ಕೆಲಸ ಮಾಡೋ ಪ್ರತಿಯೊಬ್ಬರಿಗೆ ಗ್ಯಾರೆಂಟಿ ಅನ್ನಿಸಿರುತ್ತೆ. ವೀಕೆಂಡ್ ಬಂದ್ರೆ ಸಾಕು, ಈ ವಿಚಾರ ಒಂದ್ಸಲ್ ತಲೇಲಿ ಸುಯ್ ಅಂತಾ ಹಾದು ಹೋಗಿರುತ್ತೆ. ಆದ್ರೆ, ಕೆಲವು ಟೈಂ ಅಯ್ಯೋ ನೂರಾರು ಕಿಮೀ ಎಲ್ಲಿ ಹೋಗೋದು ಬೀಡು ಅಂದುಕೊಂಡು ಸುಮ್ಮನಾಗಿರ್ತಾರೆ. ಅಂಥವರಿಗೆ ತುಮಕೂರು ಬಳಿ ಉತ್ತಮ ಸ್ಥಳವಿದೆ.

    ಬಹಳ ದೂರ ಇಲ್ಲ, ಬೆಂಗಳೂರಿನಿಂದ ಜಸ್ಟ್ 70 ಕಿಮೀ, ತುಮಕೂರಿನಿಂದ 15 ಕಿಮೀ ದೂರ. ಇಲ್ಲಿ ನಿಮಗೆ ಶುದ್ಧ ಗಾಳಿ, ರಿಲ್ಯಾಕ್ಸ್ ಮಾಡುವ ವೆದರ್, ದಟ್ಟ ಕಾನನದ ನಡುವಿನ ನಿಶ್ಯಬ್ಧ ವಾತಾವರಣ, ಜಿಂಕೆ, ಕಡವೆ, ವಿವಿಧ ಜಾತಿಯ ಪಕ್ಷಿಗಳು, ಶುದ್ಧ ನೀರು, ಶುದ್ಧ ಜೇನುತುಪ್ಪ, ಧ್ಯಾನ ಕೇಂದ್ರ, ಪಕ್ಷಿ ಪ್ರೀಯ ಸಲೀಂ ಅಲಿಯ ಅಚ್ಚುಮೆಚ್ಚಿನ ತಾಣ, ಹೀಗೆ ಹತ್ತು ಹಲವು ವಿಶೇಷತೆಗಳು ನಿಮಗೆ ಸಿಗಬೇಕು ಅಂದ್ರೆ ನೀವು ನಾಮದ ಚಿಲುಮೆಗೆ ಹೋಗಲೇಬೇಕು.

     

    ಪೌರಾಣಿಕ ಹಿನ್ನೆಲೆ ಏನು?
    ಈಡೀ ವಾರ ದಣಿದ ದೆಹಕ್ಕೆ ರಿಲ್ಯಾಕ್ಸ್ ಕೊಡೋ ಈ ಜಾಗಕ್ಕೆ ಒಂದು ಪೌರಾಣಿಕ ಕಥೆ ಇದೆ. ರಾಮ ತನ್ನ ವನವಾಸದ ಸಂದರ್ಭದಲ್ಲಿ ಈ ಜಾಗದಲ್ಲಿ ಕೆಲವು ದಿನ ಉಳಿದುಕೊಂಡಿದ್ದನಂತೆ. ಈ ಸಂದರ್ಭದಲ್ಲಿ ಹಣೆಗೆ ನಾಮವನ್ನಿಟ್ಟುಕೊಳ್ಳಲು ನೀರನ್ನು ಹುಡುಕಿದನಂತೆ. ಎಲ್ಲೆಡೆ ಬರೀ ಕಲ್ಲು ಬಂಡೆಗಳೆ ಇದ್ದಿದ್ದರಿಂದ ಎಲ್ಲೂ ನೀರು ಸಿಗಲಿಲ್ಲವಂತೆ. ಆಗ ಈ ಕಲ್ಲುಬಂಡೆಗೆ ತನ್ನ ಬಾಣ ಬಿಟ್ಟಾಗ ನೀರಿನ ಚಿಲುಮೆ ಕಾಣಿಸಿಕೊಂಡಿದೆ. ಹಾಗಾಗಿ ಇದಕ್ಕೆ ನಾಮದ ಚಿಲುಮೆ ಅಂತಾನೆ ಕರೆಯುತ್ತಾರೆ. ಇದರ ವಿಶೇಷತೆ ಏನೂ ಅಂದ್ರೆ, ಈ ಚಿಲುಮೆ ಯಾವತ್ತು ಬತ್ತಿಲ್ಲ. ಬೇಸಿಗೆಯಲ್ಲೂ ಸದಾ ನೀರು ಇದ್ದೆ ಇರುತ್ತೆ.

    ಜಿಂಕೆ ವನವಿದೆ:
    ಮಕ್ಕಳನ್ನ ಕರೆದುಕೊಂಡು ಹೋದ್ರಂತೂ ಮಕ್ಕಳು ಸಖತ್ ಆಗಿ ಎಂಜಾಯ್ ಮಾಡ್ತಾರೆ. ಕಾರಣ ಇಲ್ಲಿರೋ ಜಿಂಕೆಗಳು, ಕಡವೆಗಳು ನಿಮ್ಮನ್ನ ಆಕರ್ಷಿಸುತ್ವೆ. ಅವುಗಳಿಗೆ ತಿನ್ನಲು ಹುಲ್ಲನ್ನ ಸಹ ನೀವು ಕೊಡಬಹುದು. ಇಲ್ಲಿರೋ ಜಿಂಕೆಗಳಿಗೆ, ಕಡವೆಗಳಿಗೆ ಭಯ ಇಲ್ಲ. ನಿಮ್ಮ ಹತ್ತಿರ ಬರುತ್ವೆ. ಅವುಗಳಿಗೆ ಹುಲ್ಲನ್ನ ಕೊಟ್ಟು ನೀವು ಮುಟ್ಟಬಹುದು. ಈ ಜಿಂಕೆಗಳೊಂದಿಗೆ ಸ್ವಲ್ಪ ಟೈಂ ಸ್ಪೆಂಡ್ ಮಾಡಿದ್ರೆ ನಿಮ್ಮ ಮನಸ್ಸು ಹಗುರವಾಗೋದಂತೂ ಗ್ಯಾರಂಟಿ, ಟೆನ್ಷನ್ ಎಲ್ಲ ಮಂಗಮಾಯವಾಗೋಗುತ್ತೆ.

    ಸಲೀಂ ಅಲಿ ಅಚ್ಚುಮೆಚ್ಚಿನ ಜಾಗ:
    ಈ ಜಾಗ ಪಕ್ಷಿ ಪ್ರೇಮಿ ಸಲೀಂ ಅಲಿ ಅವರಿಗೆ ಅಚ್ಚುಮೆಚ್ಚಿನದ್ದಾಗಿತ್ತು. ಒಮ್ಮೆ ಈ ಜಾಗಕ್ಕೆ ಬಂದಾಗ ಇಲ್ಲಿನ ಪಕ್ಷಿಗಳನ್ನ, ಇಲ್ಲಿರುವ ಸಸ್ಯಸಂಕುಲಗಳನ್ನ ನೋಡಿ ಕಾಡಿನಲ್ಲೇ ಮೂರು ದಿನ ಉಳಿದುಕೊಂಡಿದ್ದರಂತೆ. ಇದಾದ ಬಳಿ ಮೂರು ಬಾರಿ ಇಲ್ಲಿಗೆ ಬಂದು ಹೋಗಿದ್ದರಂತೆ. ಅವರು ಉಳಿದುಕೊಳ್ತಿದ್ದ ಚಿಕ್ಕ ಕೊಠಡಿ ಕೂಡ ಇಲ್ಲೇ ಇದೆ. ಆದ್ರೆ ಸದ್ಯ ಅದು ಪಾಳು ಬಿದ್ದಿದೆ.

    ರಾಮನ ಬಂಟನ ತುಂಟಾಟ.
    ಈ ಜಾಗದಲ್ಲಿ ಸ್ವಲ್ಪ ಮಂಗಗಳಿಂದ ಎಚ್ಚರವಾಗಿರಿ. ನೀವೇನಾದ್ರು ಸೌತೆಕಾಯಿ, ಬ್ಯಾಗ್, ತಿಂಡಿ ಒಯ್ಯೋದಾದ್ರೆ, ಹೆಗಲಿಗೆ ಹಾಕಿಕೊಳ್ಳೊ ಬ್ಯಾಗ್‍ನಲ್ಲಿಟ್ಟುಕೊಂಡು ಹೋಗಿ. ಕೈಯಲ್ಲಿ ಹಿಡಿದುಕೊಂಡು ಹೋದ್ರೆ, ಅಷ್ಟೇ ಕಥೆ. ಎಗರಿಸಿಕೊಂಡು ಹೋಗೋದು ಪಕ್ಕ. ಸೋ ಮಂಗಗಳಿಂದ ನಿಮ್ಮ ಬ್ಯಾಗ್‍ಗಳ ಬಗ್ಗೆ ಎಚ್ಚರ.

    ಶುದ್ಧ ಕಾಡು ಜೇನುತುಪ್ಪ.
    ಇಲ್ಲಿ ನಿಮಗೆ ಶುದ್ಧವಾದ ಕಾಡುಜೇನುತುಪ್ಪ ಸಿಗುತ್ತೆ. ಜೇನುತುಪ್ಪ ಇಷ್ಟಪಡೋರು ಮಿಸ್ ಮಾಡ್ದೆ ತಗೊಳ್ಳಿ. ನಾಮದ ಚಿಲುಮೆಯ ಎದುರುಗಡೆ ಸಿದ್ಧ ಸಜೀವಿನಿ ಔಷಧಿ ಸಸ್ಯ ವನವಿದೆ. ಇಲ್ಲಿ ನಿಮಗೆ ಈ ಜೇನುತುಪ್ಪ ಲಭ್ಯವಿರುತ್ತೆ. ಅಷ್ಟೇ ಅಲ್ಲ ಇಲ್ಲಿ ಕಾಡಿನಲ್ಲಿ ಸಿಗುವ ನೈಸರ್ಗಿಕ ಔಷಧಿಗಳು ಲಭ್ಯವಿದೆ. ಇದಲ್ಲದೆ, ಇಲ್ಲೊಂದು ಪಿರಾಮಿಡ್ ಧ್ಯಾನಮಂದಿರ ಕೂಡ ಇದೆ. ಆದ್ರೆ, ಸದ್ಯ ಇದರ ಬಳಕೆ ಯಾರು ಮಾಡದೇ ಇರೋದ್ರಿಂದ, ಅದಕ್ಕೆ ಬೀಗ ಹಾಕಿರುತ್ತಾರೆ.

    ದೇವರಾಯನದುರ್ಗ:
    ನಾಮದ ಚಿಲುಮೆ ಬರೋದೆ ಈ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ. ನಾಮದ ಚಿಲುಮೆಯಿಂದ 3 ಕಿಮೀ ದೂರದಲ್ಲಿ ಈ ದೇವರಾಯನದುರ್ಗ ಬರುತ್ತೆ. ತುಮಕೂರಿನಿಂದ 10 ಕಿ.ಮೀ. ದಾಟಿದರೆ ಸಾಕು ದೇವರಾಯನದುರ್ಗ ಅರಣ್ಯಪ್ರದೇಶ ಆರಂಭವಾಗುತ್ತದೆ. ಒಂದು ದಿನದ ಪ್ರವಾಸಕ್ಕೆ ಅತ್ಯಂತ ಯೋಗ್ಯವಾದ ಸ್ಥಳ ಇದಾಗಿದೆ. ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ 8ನೇ ಶತಮಾನದ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಾಲಯವಿದೆ. ಸಮೀಪದಲ್ಲಿ ‘ನಾಯಕನ ಕೆರೆ’ ಎಂಬ ಮನೋಹರವಾದ ಕೆರೆ ಇದೆ. ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯಗಳಿವೆ, ಹಳೆಯ ಕೋಟೆ, ಸೂರ್ಯಾಸ್ತ ನೋಡಲು ಅತ್ಯಂತ ಸುಂದರಾವಾದ ಜಾಗ ಇದು.

    ದೇವರಾಯನ ದುರ್ಗದ ಕಾಡಿನಲ್ಲಿ ಚಿರತೆ, ಕಾಡು ಹಂದಿ, ಮುಳ್ಳು ಹಂದಿ, ಜಿಂಕೆ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ. ಆದರೆ ಇದು ಅಭಯಾರಣ್ಯವಲ್ಲದಿದ್ದರಿಂದ ಕಾಣಲು ಸಿಗುವುದು ಅಪರೂಪ. ಇತ್ತೀಚಿನ ವರದಿ ಪ್ರಕಾರ ದೇವರಾಯನದುರ್ಗದಲ್ಲಿ ಹುಲಿ ಕೂಡ ಪತ್ತೆಯಾಗಿದೆ. ಉಳಿದುಕೊಳ್ಳೋಕೆ ಸರ್ಕಾರಿ ಗೆಸ್ಟ್ ಹೌಸ್ ಬಿಟ್ಟರೇ ಬೇರೆ ಹೋಟೆಲ್‍ಗಳಿಲ್ಲ. ಹಾಗಾಗಿ ಏನಾದ್ರು ತಿನ್ನಲು, ಕುಡಿಯಲು ನೀರನ್ನ ತುಮಕೂರಿನಿಂದಲೇ ತೆಗೆದುಕೊಂಡು ಹೋದರೆ ಒಳ್ಳೆಯದು.
    – ಅರುಣ್ ಬಡಿಗೇರ್

  • ರಾಮನಗರದ ದುರ್ದೈವ ರಾಮನ ಪರಂಪರೆ ಇಲ್ಲಿ ಬೆಳೆದಿಲ್ಲ- ಕಲ್ಲಡ್ಕ ಪ್ರಭಾಕರ್ ಭಟ್

    ರಾಮನಗರದ ದುರ್ದೈವ ರಾಮನ ಪರಂಪರೆ ಇಲ್ಲಿ ಬೆಳೆದಿಲ್ಲ- ಕಲ್ಲಡ್ಕ ಪ್ರಭಾಕರ್ ಭಟ್

    – ರಾವಣನ ಪರಂಪರೆ ಬೆಳೆದಿದೆ

    ರಾಮನಗರ: ಕಾಶ್ಮೀರ ನಮ್ಮ ಜೊತೆಯಲ್ಲಿ ಸೇರಿಕೊಂಡಿದ್ದು ಅಲ್ಲಿಗೆ ನಾವು ಹೋಗಬಹುದು ಬರಬಹುದು. ಹಾಗೇಯೇ ರಾಮನಗರದ ಬಾಲಗೇರಿಗೆ ಹೋಗಬಹುದು, ಅಲ್ಲಿಂದ ಬರಬಹುದು. ಇನ್ನೊಂದು ಸ್ವಲ್ಪ ಪಿಓಕೆ ಬಾಕಿಯಿದೆ ನಾಲಬಂದವಾಡಿ (ಮುಸ್ಲಿಂರೇ ಹೆಚ್ಚಿನದಾಗಿ ಅಲ್ಪ ಹಿಂದುಗಳು ವಾಸಿಸುವ ಬಡಾವಣೆ) ಅದು ಸ್ವಲ್ಪ ದಿನದ ಬಳಿಕ ನಮಗೆ ಸಿಗುತ್ತೆ ಎಂದು ಹಿರಿಯರು ಹೇಳಿರುವುದಾಗಿ ಆರ್‍ಎಸ್‍ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಪಥಸಂಚಲನದಲ್ಲಿ ಹೇಳಿದ್ದಾರೆ.

    ರಾಮನಗರದಲ್ಲಿ ನಡೆದ ಆರ್‍ಎಸ್‍ಎಸ್ ಪಥಸಂಚಲನದಲ್ಲಿ ಭಾಗವಹಿಸಿ ಗಣವೇಷಧಾರಿಗಳನ್ನುದ್ದೇಶಿ ಮಾತನಾಡಿದ ಅವರು, ರಾಮನಗರದ ದುರ್ದೈವ ರಾಮನಗರ ಪರಂಪರೆ ಇಲ್ಲಿ ಬೆಳೆದಿಲ್ಲ. ಬದಲಿಗೆ ರಾವಣನ ಪರಂಪರೆ ಬೆಳೆಯುವಂತಾಯ್ತು. ಅಧಿಕಾರದ ದರ್ಪ, ದೌರ್ಜನ್ಯದಿಂದ ಅಧಿಕಾರ ನಡೆಸಲು ಸಾಧ್ಯವಿಲ್ಲ. ಅಧಿಕಾರ ಸಾಕಷ್ಟು ದಿನವೂ ಉಳಿಯುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.

    ಮಂಗಳೂರು ಗಲಭೆ ವಿಚಾರವಾಗಿ ಮಂಗಳೂರನ್ನು ಪಾಕಿಸ್ತಾನದ ರೀತಿ ಮಾಡಬೇಕು ಎಂದು ಮುಂದಾಗಿದ್ದರು. ಅಲ್ಲದೇ ಅಂದು ನಡೆದ ಗಲಭೆ ಎಲ್ಲೋ ಕಾಶ್ಮೀರದಲ್ಲಿ ನಡೆಯುತ್ತಿದ್ಯಾ ಎನ್ನುವಂತಿತ್ತು ಎಂದು ತಿಳಿಸಿದರು. ಅಂಬೇಡ್ಕರ್ ಅವರನ್ನು ಬರೀ ದಲಿತರ ಬಂಧು ಅಂತಾರೆ. ಆದರೆ ಅವರ ದಲಿತರ ಬಂಧುವಲ್ಲ ರಾಷ್ಟ್ರೀಯ ಬಂಧು ಎಂದರು.

    ಕನಕಪುರಕ್ಕೆ ಭೇಟಿ ನೀಡಿದ್ದ ವಿಚಾರವನ್ನು ಪ್ರಸ್ತಾಪಿಸಿದ ಅವರು ಕಪಾಲ ಬೆಟ್ಟದಲ್ಲಿ ಈಗಾಗಲೇ 11 ಅಡಿ ಎತ್ತರದ ಯೇಸು ಪ್ರತಿಮೆ ನಿಲ್ಲಿಸಿದ್ದು, 113 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಅಲ್ಲಿನ ಮುನೇಶ್ವರ ಕಲ್ಲಿನ ಮೇಲೆ ಶಿಲುಬೆ ನಿಲ್ಲಿಸಿದ್ದಾರೆ. ಪಕ್ಕದಲ್ಲಿನ ಕೆರೆಗೆ ಪಾದ್ರಿ ಕೆರೆ ಎನ್ನುತ್ತಾರೆ, ಅದು ಯಾವಾಗ ಪಾದ್ರಿ ಕೆರೆಯಾಯ್ತು ಎಂದು ಪ್ರಶ್ನಿಸಿದರು. ಅಲ್ಲಿನ ಜನರಿಗೆ ಮತಾಂತರಗೊಂಡರೆ ಎರಡ್ಮೂರು ಎಕರೆ ಜಮೀನು ನೀಡುವ ಷರತ್ತಿನ ಮೇಲೆ ಮತಾಂತರ ಮಾಡಿದ್ದಾರೆ. ಕ್ರಿಶ್ಚಿಯನ್ ಸಮಾಜ ನಿರ್ಮಿಸಲು ಹೊರಟಿದ್ದಾರೆ. ಆದರೆ ಇದು ಕ್ರಿಸ್ತನ ನಾಡಲ್ಲ, ಕೃಷ್ಣನ ನಾಡು ಎಂದು ಕಿಡಿಕಾರಿದರು.

    ಸ್ವತಂತ್ರ ಭಾರತದ ವೇಳೆ ದುರ್ಬಲ ಹಾಗೂ ಹೇಡಿ ನಾಯಕತ್ವವಿತ್ತು. ಆದರೆ ಇದೀಗ ದೇಶದಲ್ಲಿ ಅತ್ಯಂತ ಪ್ರಬಲವಾದ ನಾಯಕತ್ವ ಅಧಿಕಾರ ನಡೆಸುತ್ತಿದ್ದು, ಪಾಕಿಸ್ತಾನಕ್ಕೆ ನಮ್ಮನ್ನ ಕೆಣಕುವುದು ಕಷ್ಟದ ಕೆಲಸವಾಗಿದೆ. ಭಯೋತ್ಪಾದಕರನ್ನು ನಿರ್ಮಾಣ ಮಾಡುವಂತಹ ಕಾರ್ಖಾನೆ ಪಾಕಿಸ್ತಾನವಾಗಿದ್ದು, ಅದು ಪಾಪಿಗಳ ರಾಜ್ಯ ಪಾಕಿಸ್ತಾನವಾಗಿದೆ ಎಂದು ವಾಗ್ದಾಳಿ ಮಾಡಿದರು.

    ಇದೇ ವೇಳೆ ಹೊರದೇಶದಿಂದ ಬಂದು ದೇಶದಲ್ಲಿರುವ ಎರಡ್ಮೂರು ಕೋಟಿ ಜನರಿಗೆ ರೇಷನ್ ಕಾರ್ಡ್ ಕೊಟ್ಟಿಲ್ಲ. ಭೂಮಿ ಕೊಟ್ಟಿಲ್ಲ, ಏನೇನೂ ಕೊಟ್ಟಿಲ್ಲ. ಆ ಹಿಂದೂ ಸಮಾಜಕ್ಕೆ ನ್ಯಾಯ ಕೊಡುವುದಕ್ಕಾಗಿ ಪೌರತ್ವ ಕಾಯ್ದೆ ತಂದಿರುವುದು. ಪೌರತ್ವವನ್ನು ಕೊಡುತ್ತಿರುವುದೇ ವಿನಃ ತೆಗೆಯುತ್ತಿರುವುದಲ್ಲ ಎಂದು ಪೌರತ್ವ ಕಾಯ್ದೆ ತಿದ್ದುಪಡಿ ಪರ ಬ್ಯಾಟಿಂಗ್ ನಡೆಸಿದರು.

    ಸ್ವಾಮಿ ವಿವೇಕಾನಂದರವರು ಭಾಗವಹಿಸಿದ್ದು ಸರ್ವಧರ್ಮ ಸಮ್ಮೇಳನ ಅಲ್ಲ, ಅದು ವರ್ಡ್ ರಿಲಿಜಿಯನ್ ಕಾನ್ಫರೆನ್ಸ್, ರಿಲಿಜಿಯನ್ ಅನ್ನೋದು ಒಂದು ಮತ ಮಾತ್ರವಾಗಿದ್ದು ಕ್ರೈಸ್ತ ಧರ್ಮವೇ ಶ್ರೇಷ್ಠ ಅನ್ನೋದನ್ನ ತೋರಿಸಲು ಮಾಡಿದ್ದ ಕಾರ್ಯಕ್ರಮವಾಗಿತ್ತು. ಆದರೆ ಕಾರ್ಯಕ್ರಮದ ಬಳಿಕ ವಿವೇಕಾನಂದರು ಧರಿಸಿದ್ದ ಕೇಸರಿ ವಸ್ತ್ರವನ್ನ ಮುಟ್ಟಿದರೆ ಪಾವನರಾಗ್ತೇವೆ ಎಂಬ ಭಾವನೆ ಆ ಜನಗಳಿಗೆ ಬಂತು ಎಂದು ತಿಳಿಸಿದರು.

  • ಒಂದೇ ಪ್ರಕರಣದಲ್ಲಿ 8 ಜನ ರಾಮ ಹೆಸರಿನ ಪ್ರತಿವಾದಿಗಳು

    ಒಂದೇ ಪ್ರಕರಣದಲ್ಲಿ 8 ಜನ ರಾಮ ಹೆಸರಿನ ಪ್ರತಿವಾದಿಗಳು

    -ವೈರಲ್ ಆಯ್ತು ಜಿಲ್ಲಾಧಿಕಾರಿಯ ಟ್ವೀಟ್

    ಲಕ್ನೋ: ಪ್ರಕರಣವೊಂದರ ಪ್ರತಿವಾದಿಗಳ ಪಟ್ಟಿಯಲ್ಲಿ ಒಂದೇ ಹೆಸರಿನ 8 ಜನರು ಇರುವ ಬಗ್ಗೆ ಜಿಲ್ಲಾಧಿಕಾರಿ ಮಾಡಿರುವ ಟ್ವೀಟ್ ವೈರಲ್ ಆಗಿದೆ.

    ಒಂದೇ ಹೆಸರಿನ ಇಬ್ಬರು ಅಕ್ಕ-ಪಕ್ಕ ಕುಳಿತ್ರೆ ಕರೆಯುವಾಗ ಕನ್ಫ್ಯೂಸ್ ಆಗ್ತಾರೆ. ಆದರೆ ಪ್ರಕರಣವೊಂದು ಅಯೋಧ್ಯೆ ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಂದೆ ಬಂದಿತ್ತು. 12 ಪ್ರತಿವಾದಿಗಳ ಪೈಕೆ ಎಂಟು ಜನರ ಹೆಸರಿನಲ್ಲಿ ‘ರಾಮ’ ಅಂತಿದೆ. ಪ್ರತಿವಾದಿಗಳ ಹೆಸರಿನ ಫೋಟೋ ತೆಗೆದುಕೊಂಡ ಜಿಲ್ಲಾಧಿಕಾರಿ ಅನುಜ್ ಕೆ.ಜಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಪ್ರತಿವಾದಿಗಳು ಹೆಸರು: ರಾಮಕುಮಾರ್, ರಾಮಕೇವಲ್, ರಮಾಕಾಂತ್, ಸೀತಾರಾಮ್, ಸಿಯಾರಾಮ್, ಅನಂತರಾಮ್, ಧನಿರಾಮ್ ಮತ್ತು ರಾಮಚಂದ್ರ ಎಂಬ ಎಂಟು ಜನ ಪ್ರತಿವಾದಿಗಳಿದ್ದರು. ನನ್ನ ಮುಂದೆ ಬಂದ ಪ್ರಕರಣದಲ್ಲಿದ್ದ ಪ್ರತಿವಾದಿಗಳ ಪ್ರತಿ ಹೆಸರಿನೊಂದಿಗೆ ‘ರಾಮ’ ಇತ್ತು. ನಿಜವಾಗಿಯೊ ಅಯೋಧ್ಯೆ ರಾಮನ ಭೂಮಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

  • 27 ವರ್ಷ ಉಪವಾಸ ಮಾಡಿ ಅಯೋಧ್ಯೆ ತೀರ್ಪಿಗೆ ಕಾದ ಆಧುನಿಕ ಶಬರಿ

    27 ವರ್ಷ ಉಪವಾಸ ಮಾಡಿ ಅಯೋಧ್ಯೆ ತೀರ್ಪಿಗೆ ಕಾದ ಆಧುನಿಕ ಶಬರಿ

    ಭೋಪಾಲ್: ರಾಮಾಯಣದಲ್ಲಿ ಉಲ್ಲೇಖವಾಗಿರುವಂತೆ ರಾಮನ ಆಗಮನಕ್ಕಾಗಿ ಕಾದಿದ್ದ ಶಬರಿಯ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಮಧ್ಯ ಪ್ರದೇಶದಲ್ಲೊಬ್ಬರು ಆಧುನಿಕ ಶಬರಿ ಇದ್ದಾರೆ. ಅವರು ರಾಮನ ಬದಲಿಗೆ ಅಯೋಧ್ಯೆ ಜಮೀನು ವಿವಾದ ಪರಿಹಾರವಾಗಿ ತೀರ್ಪು ಹೊರಬರಲಿ ಎಂದು ಬರೋಬ್ಬರಿ 27 ವರ್ಷದಿಂದ ಅನ್ನ ಬಿಟ್ಟು ಉಪವಾಸ ಮಾಡಿದ್ದಾರೆ.

    ಮಧ್ಯಪ್ರದೇಶದ ಜಬಲ್‍ಪುರದ ಊರ್ಮಿಳಾ ಚರ್ತುವೇದಿ(81) ರಾಮ ಜನ್ಮಭೂಮಿ ವಿವಾದ ಬಗೆಹರಿಯಲೆಂದು ಉಪವಾಸ ಮಾಡಿದ್ದಾರೆ. ಊರ್ಮಿಳಾ ಅವರು ಸಂಸ್ಕೃತ ಭಾಷಾ ಶಿಕ್ಷಕಿಯಾಗಿದ್ದು, ಅಯೋಧ್ಯೆ ಜಮೀನು ವಿವಾದ ಪರಿಹಾರಕ್ಕಾಗಿ 1992ರಿಂದ ಅನ್ನ ಆಹಾರ ತ್ಯಜಿಸಿ ಉಪವಾಸ ಮಾಡಿಕೊಂಡು ಬಂದಿದ್ದಾರೆ. ಜಮೀನು ವಿವಾದ ಇತ್ಯರ್ಥವಾಗುವ ತನಕ ಅಂದರೆ 27 ವರ್ಷ ಕಾಲ ಬರೀ ಹಣ್ಣು ಮತ್ತು ಹಾಲು ಕುಡಿದು ಊರ್ಮಿಳಾ ಬದುಕಿದ್ದಾರೆ. ಶಬರಿ ರಾಮನಿಗಾಗಿ ಕಾದಂತೆ ಶಿಕ್ಷಕಿ ಅಯೋಧ್ಯೆ ತೀರ್ಪಿಗಾಗಿ ಕಾದು ಭಕ್ತಿ ಮೆರೆದಿದ್ದಾರೆ. ಇದನ್ನೂ ಓದಿ:ಅಯೋಧ್ಯೆ ರಾಮನಿಗೆ ಸಿಗಲು ‘ಸ್ಕಂದ’ ಕಾರಣ

    ಈ ಬಗ್ಗೆ ಊರ್ಮಿಳಾ ಮಗ ಅಮಿತ್ ಚರ್ತುವೇದಿ ಮಾತನಾಡಿ, ಶನಿವಾರ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ಅಯೋಧ್ಯೆ ತೀರ್ಪು ಹೊರಡಿಸಿರುವುದನ್ನು ಕೇಳಿ ಅಮ್ಮ ಖುಷಿಪಟ್ಟಿದ್ದಾರೆ. 27 ವರ್ಷದಿಂದ ಊಟ ಬಿಟ್ಟಿದ್ದ ಅವರು ಈಗ ಊಟ ಮಾಡಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ:ರಾಮ ಮಂದಿರ ನಿರ್ಮಾಣಕ್ಕೆ 5 ವರ್ಷ ಬೇಕು

    ಅಮ್ಮ ಶ್ರೀರಾಮನ ದೊಡ್ಡ ಭಕ್ತೆ, ಅಯೋಧ್ಯೆ ಜಮೀನು ವಿವಾದ ಪರಿಹಾರಕ್ಕಾಗಿ ಎರಡು ದಶಕಗಳಿಂದ ಅವರು ಕಾಯುತ್ತಿದ್ದರು. ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಸಂಸ್ಕೃತ ಭಾಷಾ ಶಿಕ್ಷಕಿಯಾಗಿ ಅಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸಗೊಂಡು ದೇಶದಾದ್ಯಂತ ಹಿಂಸಾಚಾರ ನಡೆದಾಗ ಅವರು ಬಹಳ ಖಿನ್ನತೆಗೊಳಗಾಗಿದ್ದರು. ತಮ್ಮ 54ನೇ ವಯಸ್ಸಿನಲ್ಲಿ ಅವರು ಉಪವಾಸ ಮಾಡಲು ಆರಂಭಿಸಿದರು. ಅನ್ನ ಸೇವಿಸುವುದನ್ನು ಬಿಟ್ಟು ಕೇವಲ ಹಣ್ಣು ಮತ್ತು ಹಾಲನ್ನು ಮಾತ್ರ ಸೇವನೆ ಮಾಡಿಕೊಂಡು ಬಂದಿದ್ದಾರೆ. ಸಂಬಂಧಿಕರು ಹಲವು ಬಾರಿ ಊಟ ಮಾಡುವಂತೆ ಮನವಿ ಮಾಡಿದರೂ ಅಮ್ಮ ಮಾತ್ರ ತಮ್ಮ ನಿರ್ಧಾರವನ್ನು ಕೈಬಿಡಲಿಲ್ಲ ಎಂದು ಅಮಿತ್ ತಿಳಿಸಿದರು. ಇದನ್ನೂ ಓದಿ:ಅಯೋಧ್ಯೆ ಕೇಸ್ – 92 ವರ್ಷದ ‘ತರುಣ’ ವಕೀಲನ ಸಾಧನೆಗೆ ಪ್ರಶಂಸೆಯ ಸುರಿಮಳೆ

    ಅಯೋಧ್ಯೆ ಜಮೀನು ವಿವಾದ ತೀರ್ಮಾನವಾಗಿ ಅಮ್ಮನ ಆಸೆ ನೆರವೇರಿದೆ. ಶೀಘ್ರದಲ್ಲೇ ನಮ್ಮ ಕುಟುಂಬ ಅಮ್ಮನ ಉಪವಾಸ ಕೈಬಿಡುವ `ಉದ್ಯಾಪನ್’ ಕಾರ್ಯಕ್ರಮವನ್ನು ಆಯೋಜಿಸಲಿದೆ. ಹಾಗೆಯೇ ನನ್ನ ಅಮ್ಮ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿಲ್ಲ ಎಂದು ಅಮಿತ್ ಮಾಹಿತಿ ನೀಡಿದರು.

  • ರಾಮ ಜನಿಸಿದ್ದು ಆಯೋಧ್ಯೆಯಲ್ಲಿ ಎಂದು ಮುಸ್ಲಿಂರಿಗೂ ಗೊತ್ತು: ಬಾಬಾ ರಾಮದೇವ್

    ರಾಮ ಜನಿಸಿದ್ದು ಆಯೋಧ್ಯೆಯಲ್ಲಿ ಎಂದು ಮುಸ್ಲಿಂರಿಗೂ ಗೊತ್ತು: ಬಾಬಾ ರಾಮದೇವ್

    ನವದೆಹಲಿ: ಅಯೋಧ್ಯೆಯಲ್ಲಿ ಜನಿಸಿದ್ದು ಪ್ರವಾದಿ ಮುಹಮ್ಮದ್ ಅಲ್ಲ, ಭಗವಾನ್ ರಾಮ ಎಂದು ಇಡೀ ವಿಶ್ವ ಮತ್ತು ಮುಸ್ಲಿಂ ಸಮುದಾಯಕ್ಕೂ ಗೊತ್ತಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.

    ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯೋಧ್ಯೆ ತೀರ್ಪು ಬಂದ ಕೂಡಲೇ ಆ ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು. ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷವನ್ನು ಬೆಂಬಲಿಸುವುದಾಗಿ ತಿಳಿಸಿದ ರಾಮದೇವ್ ದೇಶ ಅಭಿವೃದ್ಧಿಯಾಗಬೇಕು ಎಂದರೆ ರಾಜ್ಯ ಮತ್ತು ಕೇಂದ್ರದಲ್ಲಿ ಸ್ಥಿರ ಸರ್ಕಾರಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.

    ಯಾವ ಪಕ್ಷಕ್ಕೆ ಅಧಿಕಾರ ನೀಡಿದರೆ ಮುಂದಿನ 10-15 ವರ್ಷದಲ್ಲಿ ಭಾರತ ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಯುರೋಪ್ ನಂತಹ ಬಲಿಷ್ಠ ರಾಷ್ಟ್ರಗಳ ವಿರುದ್ಧ ತಲೆ ಎತ್ತಿ ನಿಲ್ಲುತ್ತದೆ ಎಂದು ನಾವು ಯೋಚಿಸಬೇಕು. ಸ್ಥಿರ ರಾಜಕೀಯ ಮತ್ತು ಉತ್ತಮ ಆಡಳಿತಕ್ಕಾಗಿ ನಾವು ಬಲವಾದ ಪಕ್ಷಕ್ಕೆ ಅಧಿಕಾರ ನೀಡಬೇಕಾಗಿದೆ ಎಂದು ರಾಮದೇವ್ ಸಲಹೆ ನೀಡಿದರು.

    ಇದೇ ವೇಳೆ ಜನರು ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ಉತ್ತಮ ಸರ್ಕಾರವನ್ನು ಆಯ್ಕೆ ಮಾಡಬೇಕು ಎಂದು ಹೇಳಿದ ಅವರು, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಹೊಗಳಿದರು. ಖಟ್ಟರ್ ಗೆ ಯಾವುದೇ ಆಸ್ತಿ ಇಲ್ಲ ಮತ್ತು ಅವರು ಪ್ರಾಮಾಣಿಕರು. ಮನೋಹರ್ ಲಾಲ್ ಖಟ್ಟರ್ ಒಳ್ಳೆಯ ಮನುಷ್ಯ ಮತ್ತು ಅವರು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಹಾಡಿಹೊಗಳಿದರು.

    370 ನೇ ವಿಧಿಯನ್ನು ರದ್ದುಪಡಿಸಿದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದ ರಾಮದೇವ್, ಸರ್ದಾರ್ ಪಟೇಲ್ ನಂತರ ಮೋದಿ ಮತ್ತು ಶಾ ಒಂದು ರಾಷ್ಟ್ರ, ಒಂದು ಸಂವಿಧಾನ ಮತ್ತು ಒಂದು ಧ್ವಜದ ಕಲ್ಪನೆಯನ್ನು ತಂದರು. ಇದು ನರೇಂದ್ರ ಮೋದಿ-ಅಮಿತ್ ಶಾ ಸರ್ಕಾರದ ಮೇಲೆ ಜನರ ನಂಬಿಕೆಯನ್ನು ಬಲಪಡಿಸಿದೆ. ಎಲ್ಲಾ ರಾಜಕೀಯ ಮತ್ತು ಸಾಮಾಜಿಕ ಅಡೆತಡೆಗಳನ್ನು ಅಮಿತ್ ಶಾ ಮತ್ತು ಪಿಎಂ ಮೋದಿ ದೂರ ಮಾಡಿದ್ದಾರೆ ಎಂದು ಹೇಳಿದರು.

    ದೇಶದಲ್ಲಿ ಸೈದ್ಧಾಂತಿಕ ಭಯೋತ್ಪಾದನೆ ನಡೆಯುತ್ತಿದೆ. ದಲಿತವಾಡಿ ಮತ್ತು ಕೆಲವು ಸಮಾಜವಾದಿಗಳು ನಮ್ಮವರ ವಿರುದ್ಧ ದ್ವೇಷವನ್ನು ಹರಡುತ್ತಿದ್ದಾರೆ. ಇದನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದ ಅವರು ವಿಧಾನ ಸಭೆಚುನಾವಣೆಯಲ್ಲಿ ಹರ್ಯಾಣ ಮತ್ತು ಮಹಾರಾಷ್ಟ್ರದ ಎರಡು ರಾಜ್ಯದ ಎಲ್ಲ ಜನರು ಹೊರಗೆ ಬಂದು ಮತ ಹಾಕಬೇಕು ಎಂದು ಮನವಿ ಮಾಡಿದರು.

  • ನಮ್ಮ ರಾಮ ಬೇರೆ, ಬಿಜೆಪಿ ರಾಮ ಬೇರೆ- ಕಾಂಗ್ರೆಸ್ ಸಚಿವ

    ನಮ್ಮ ರಾಮ ಬೇರೆ, ಬಿಜೆಪಿ ರಾಮ ಬೇರೆ- ಕಾಂಗ್ರೆಸ್ ಸಚಿವ

    ರಾಯಪುರ: ಬಿಜೆಪಿ ರಾಮನ ಹೆಸರಿನಲ್ಲಿ ಮತ ಪಡೆಯುತ್ತಿದೆ. ನಮ್ಮ ರಾಮನೇ ಬೇರೆ ಅವರ ರಾಮನೇ ಬೇರೆ ಎಂದು ಪಂಜಾಬಿನ ಕಾಂಗ್ರೆಸ್ ಸಚಿವ ರವೀಂದ್ರ ಚೌಬೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಮ್ಮ ರಾಮ ಮತ್ತು ಅವರ ರಾಮನ ನಡುವೆ ದೊಡ್ಡ ವ್ಯತ್ಯಾಸವಿದೆ. ಬಿಜೆಪಿಗೆ ರಾಮ ಎಂದರೆ ದೇಣಿಗೆ ಸಂಗ್ರಹಿಸಲು ಮತ್ತು ವ್ಯಾಪಾರ ಮಾಡಲು ಒಂದು ಮಾರ್ಗ. ರಾಮ್‍ಶಿಲಾ ಪೂಜೆ ಹೆಸರಿನಲ್ಲಿ ಮತ ಕೇಳುವುದು. ರಾಮನ ಹೆಸರಿನಲ್ಲಿ ಜನಸಮೂಹದ ಹತ್ಯೆ ಮಾಡುವುದಾಗಿದೆ ಎಂದು ಚೌಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್‍ನ ರಾಮನೆಂದರೆ ಶಬರಿಯ ರಾಮ, ನಿಶಾದ್ ರಾಜ್ ಅವರ ರಾಮ, ವನವಾಸದ ರಾಮ, ಮರ್ಯಾದಾ ಪುರುಷೋತ್ತಮ ರಾಮ. ದೇಶದ ಮೂಲೆ ಮೂಲೆಯಲ್ಲಿಯೂ ರಾಮನಿದ್ದಾನೆ. ರಾಮಲೀಲಾ ಆಯೋಜಿಸುವುದು ಕಾರ್ಯಕ್ರಮದ ಒಂದು ಭಾಗವಾಗಿರುತ್ತದೆ ಅಷ್ಟೇ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    9 ದಿನಗಳ ನವರಾತ್ರಿಯ ಸಂದರ್ಭದಲ್ಲಿ ದೇಶಾದ್ಯಂತ ರಾಮಾಯಣದ ನಾಟಕಗಳು ಹಾಗೂ ಪೂಜೆಯನ್ನು ನಡೆಸಲಾಗುತ್ತದೆ. ದಸರಾ ಹಬ್ಬದ 10ನೇ ದಿನವಾದ ವಿಜಯದಶಮಿಯಂದು ರಾವಣ, ಕುಂಭಕರ್ಣ ಹಾಗೂ ಮೇಘನಾದ್ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ.

  • ರಾವಣನ ಲಂಕೆಯಲ್ಲಿ ಬುರ್ಕಾ ನಿಷೇಧವಾದ್ರೆ ರಾಮನ ಅಯೋಧ್ಯೆಯಲ್ಲಿ ಯಾಕೆ ನಿಷೇಧಿಸಬಾರದು: ಶಿವಸೇನೆ

    ರಾವಣನ ಲಂಕೆಯಲ್ಲಿ ಬುರ್ಕಾ ನಿಷೇಧವಾದ್ರೆ ರಾಮನ ಅಯೋಧ್ಯೆಯಲ್ಲಿ ಯಾಕೆ ನಿಷೇಧಿಸಬಾರದು: ಶಿವಸೇನೆ

    ಮುಂಬೈ: ಶ್ರೀಲಂಕಾದಲ್ಲಿ ನಿಷೇಧಗೊಂಡಂತೆ ಭಾರತದಲ್ಲೂ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕ ಸ್ಥಳದಲ್ಲಿ ಬುರ್ಕಾವನ್ನು ನಿಷೇಧಿಸಬೇಕೆಂದು ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾದ ಶಿವಸೇನೆ ಆಗ್ರಹಿಸಿದೆ.

    ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ, ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ತಮ್ಮ ದೇಶದಲ್ಲಿ ಬುರ್ಕಾವನ್ನು ನಿಷೇಧ ಮಾಡಿದ್ದಾರೆ. ಅದೇ ರೀತಿಯಲ್ಲಿ ಭಾರತದಲ್ಲೂ ಬುರ್ಕಾವನ್ನು ನಿಷೇಧಿಸಬೇಕೆಂದು ಆಗ್ರಹಿಸಿದೆ.

    ಪ್ರಧಾನಿ ಮೋದಿ ಅವರು ಶ್ರೀಲಂಕಾದ ನಡೆಯನ್ನು ಅನುಸರಿಸಬೇಕು. ರಾವಣನ ಲಂಕೆಯಲ್ಲಿ ಬುರ್ಕಾ ನಿಷೇಧವಾದರೆ ರಾಮನ ಅಯೋಧ್ಯೆಯಲ್ಲಿ ಯಾಕೆ ನಿಷೇಧಿಸಬಾರದು ಎಂದು ಶಿವಸೇನೆ ಪ್ರಶ್ನಿಸಿದೆ.

    ಬುರ್ಕಾ ಧರಿಸುವುದರಿಂದ ಉಗ್ರರು ತಮ್ಮ ಮುಖ ಮುಚ್ಚಿಕೊಂಡು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಈ ರೀತಿಯ ಸಂಪೂರ್ಣ ಮುಖ ಮುಚ್ಚಿಕೊಳ್ಳುವ ಉಡುಪುಗಳನ್ನು ಧರಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ಹಿನ್ನಡೆಯಾಗುತ್ತಿದೆ. ಭಾರತದ ಮೇಲೂ ಉಗ್ರರು ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಭದ್ರತೆಯ ದೃಷ್ಟಿಯಿಂದ ನಮ್ಮ ದೇಶದಲ್ಲೂ ಬುರ್ಕಾವನ್ನು ನಿಷೇಧಿಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಹೇಳಿದೆ.

    ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ದೊಡ್ಡ ನಿರ್ಧಾರವನ್ನು ಕೈಗೊಳ್ಳಬೇಕು. ಉರಿ ದಾಳಿಯ ನಂತರ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಮತ್ತು ಪುಲ್ವಾಮಾ ದಾಳಿ ನಂತರ ಕೈಗೊಂಡ ಏರ್ ಸ್ಟ್ರೈಕ್ ನಿರ್ಧಾರದಂತೆ ಈ ವಿಚಾರದಲ್ಲೂ ವಿಶೇಷ ಆಸಕ್ತಿ ತೋರಿಸಿ ಬುರ್ಕಾವನ್ನು ನಿಷೇಧಿಸಬೇಕೆಂದು ಶಿವಸೇನೆ ಆಗ್ರಹಿಸಿದೆ.

    ಸರಣಿ ಬಾಂಬ್ ದಾಳಿ ನಡೆದ ನಂತರ ಶ್ರೀಲಂಕಾ ಸರ್ಕಾರ ಬುರ್ಕಾ ಸೇರಿದಂತೆ ಮುಖವನ್ನು ಸಂಪೂರ್ಣವಾಗಿ ಮುಚ್ಚುವಂತಹ ವಸ್ತ್ರ ಧರಿಸುವುದನ್ನು ನಿಷೇಧಿಸಿದೆ. ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ಸೋಮವಾರ ಈ ಆದೇಶವನ್ನು ಹೊರಡಿಸಿದ್ದಾರೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮುಖವನ್ನು ಸಂಪೂರ್ಣ ಮುಚ್ಚಿಕೊಳ್ಳುವ ವಸ್ತ್ರವನ್ನು ನಿಷೇಧಿಸಲಾಗಿದೆ ಎಂದು ಅಧ್ಯಕ್ಷರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಪೂರ್ಣ ವಸ್ತ್ರವನ್ನು ಧರಿಸಿದರೆ ಸೇನಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ಹೀಗಾಗಿ ಮುಖವನ್ನು ಮುಚ್ಚಿಕೊಳ್ಳುವ ವಸ್ತ್ರಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಬುರ್ಕಾವನ್ನು ನಿಷೇಧ ಮಾಡಿದ ದೇಶಗಳ ಪೈಕಿ ಶ್ರೀಲಂಕಾ ಮೊದಲನೆಯದ್ದಲ್ಲ. ಈಗಾಗಲೇ ವಿಶ್ವದ 13 ದೇಶಗಳಲ್ಲಿ ಬುರ್ಕಾ ನಿಷೇಧಗೊಂಡಿದೆ. 2010ರಲ್ಲಿ ಉಗ್ರರ ದಾಳಿ ಬಳಿಕ ಫ್ರಾನ್ಸ್ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ಧರಿಸುವುದನ್ನು ನಿಷೇಧಿಸಿತ್ತು. ನಂತರ ಬೆಲ್ಜಿಯಂ, ನೆದರ್ಲ್ಯಾಂಡ್ ಸರ್ಕಾರಗಳು ಬುರ್ಕಾ ನಿಷೇಧಿಸಿತ್ತು.