Tag: rama mandira

  • ರಾಮಮಂದಿರ ಪರ ಪೋಸ್ಟ್ ಹಾಕಿದ್ದಕ್ಕೆ ಆಕ್ರೋಶ – ರಾತ್ರೋರಾತ್ರಿ ಮನೆಗೆ ನುಗ್ಗಿ ಅಟ್ಯಾಕ್

    ರಾಮಮಂದಿರ ಪರ ಪೋಸ್ಟ್ ಹಾಕಿದ್ದಕ್ಕೆ ಆಕ್ರೋಶ – ರಾತ್ರೋರಾತ್ರಿ ಮನೆಗೆ ನುಗ್ಗಿ ಅಟ್ಯಾಕ್

    ಮಂಗಳೂರು: ದೇಶಾದಾದ್ಯಂತ ಈಗ ರಾಮಮಂದಿರ ನಿರ್ಮಾಣದ ವಿಚಾರದ್ದೇ ಚರ್ಚೆ. ರಾಜ್ಯದಲ್ಲೂ ಅದರ ವಿಚಾರವಾಗಿ ರಾಜಕೀಯ ನಾಯಕರುಗಳು ಪರ ವಿರೋಧ ಮಾತನಾಡಿದ್ದು ಗೋತ್ತೆ ಇದೆ. ಅದರ ಪರಿಣಾಮ ಈಗ ಮೂಲೆ ಮೂಲೆಯಲ್ಲೂ ರಾಮ ಮಂದಿರದ್ದೇ ಸುದ್ದಿಯಾಗುತ್ತಿದೆ. ಇದೀಗ ರಾಮ ಮತ್ತು ರಾಮಮಂದಿರದ ಪರವಾಗಿ ಪೋಸ್ಟ್ ಹಾಕಿದ್ದಕ್ಕೆ ರಾತ್ರೋರಾತ್ರಿ ಮಹಿಳೆಯರಿದ್ದ ಮನೆಗೆ ಯುವಕರ ತಂಡ ಅಟ್ಯಾಕ್ ಮಾಡಲು ಮುಂದಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ನೆಕ್ಕಿಲಾಡಿಯಲ್ಲಿರುವ ಮುಕುಂದ ಎಂಬವರ ಮನೆಗೆ ಪುಂಡ ಯುವಕರ ತಂಡವೊಂದು ಮಧ್ಯ ರಾತ್ರಿ ಗಲಾಟೆ ಮಾಡಿದೆ. ಮುಕುಂದ ಅವರ ಮಕ್ಕಳು ರಾಮಮಂದಿರದ ವಿಚಾರವಾಗಿ ವಾಟ್ಸಪ್ ಸ್ಟೇಟಸ್ ಮತ್ತು ಪೋಸ್ಟ್ ಹಾಕಿದ್ರು. ಇದಕ್ಕೆ ಕೆರಳಿದ ಮತ್ತೊಂದು ಕೋಮಿನ ಯುವಕರು ಅದಕ್ಕೆ ರಿಪ್ಲೇ ಮಾಡಿದ್ದರು. ಆಗ ಅನ್ಯಧರ್ಮವನ್ನು ಕೂಡ ನಿಂದಿಸಿದ್ದು, ನಂತರ ಎರಡು ಧರ್ಮಗಳ ನಡುವೆ ಪರಸ್ಪರ ನಿಂದನೆ ನಡೆದಿತ್ತು.

    ಸಾಮಾಜಿಕ ಜಾಲತಾಣದ ಜಟಾಪಟಿ ಅಲ್ಲಿಗೆ ಮುಗಿದಿರಲಿಲ್ಲ. ರಾತ್ರಿ ವೇಳೆಗೆ ಮುಕುಂದರ ಮನೆಗೆ ಆಗಮಿಸಿದ ಯುವಕರ ತಂಡವೊಂದು ಈ ವಿಚಾರವಾಗಿ ಜಗಳ ತೆಗೆದಿದೆ. ಹೆಣ್ಣು ಮಕ್ಕಳು ಇರುವ ಮನೆಗೆ ನುಗ್ಗಲು ಯತ್ನಿಸಿದೆ. ಈ ಬಗ್ಗೆ ಮುಕುಂದ ಮನೆಯವರು ಉಪ್ಪಿನಂಗಡಿ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಆರೋಪಿಗಳೆಲ್ಲಾ ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾರೆ.

    ದಾಳಿಯ ಹಿಂದೆ ಎಸ್‍ಡಿಪಿಐ ಕೈವಾಡ ಅಂದ್ರು ಶೋಭಾ ಕರಂದ್ಲಾಜೆ: ಈ ದಾಳಿಯ ಹಿಂದೆ ಎಸ್.ಡಿ.ಪಿ.ಐ ಪಕ್ಷವಿದೆ. ಎಸ್.ಡಿ.ಪಿ.ಐ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ ಅಂತಾ ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ. ಅಲ್ಲದೆ ಡಿಐಜಿ ಮತ್ತು ಎಸ್ಪಿಗೆ ಕರೆ ಮಾಡಿ ಈ ಪ್ರಕರಣದ ತನಿಖೆ ಸರಿಯಾಗಿ ಮಾಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

    ಶಂಕಿತರ ಬಂಧನ: ಮೂವರು ಶಂಕಿತ ಆರೋಪಿಗಳನ್ನು ಉಪ್ಪಿನಂಗಡಿ ಪೋಲೀಸರ ತಂಡ ಬಂಧಿಸಿದ್ದು, ಇನ್ನುಳಿದ ಆರೋಪಿಗಳ ಸುಳಿವು ಸಿಕ್ಕಿದೆ. ಆದಷ್ಟು ಬೇಗ ಎಲ್ಲಾ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿಪ್ರಸಾದ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಈ ಪ್ರಕರಣ ರಾಜಕೀಯ ತಿರುವ ಪಡೆದುಕೊಳ್ಳುತ್ತಿದೆ. ರಾಜಕೀಯ ತಿರುವು ಮುಂದೆ ಕೋಮುದ್ವೇಷಕ್ಕೆ ದಾರಿಯಾಗಬಾರದು. ಹೀಗಾಗಿ ಈ ಬಗ್ಗೆ ಸಮಗ್ರ ಮತ್ತು ಶೀಘ್ರ ತನಿಖೆ ಮಾಡಿ ಶಾಂತಿ ಕಾಪಾಡುವುದು ಪೋಲೀಸರ ಜವಾಬ್ದಾರಿಯಾಗಿದೆ.

  • ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್‍ರಿಂದ ರಾಮಮಂದಿರಕ್ಕೆ 11 ಲಕ್ಷ ದೇಣಿಗೆ

    ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್‍ರಿಂದ ರಾಮಮಂದಿರಕ್ಕೆ 11 ಲಕ್ಷ ದೇಣಿಗೆ

    ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇತ್ತ ದೇಶಾದ್ಯಂತ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಅಂತೆಯೇ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಅವರು ಕೂಡ 11 ಲಕ್ಷ ದೇಣಿಗೆ ನೀಡಿದ್ದಾರೆ.

    ಬಳಿಕ ಮಾತನಾಡಿದ ಅವರು, ರಾಮಂದಿರ ನಿರ್ಮಾಣಕ್ಕೆ ನಾನು ಸ್ವ-ಇಚ್ಛೆಯಿಂದ ದೇಣಿಗೆ ನೀಡಿದ್ದೇನೆ. ನನ್ನ ಕುಟುಂಬ ಮಾಡಿದ್ದಕ್ಕೆ ನಾನು ಜವಾಬ್ದಾರಿಯಾಗಲಾರೆ. ಹಿಂದೆ ನಡೆದಿರುವ ಘಟನೆಯಗಳು ಎಂದಿಗೂ ಮುಂದಿನ ಭವಿಷ್ಯಕ್ಕೆ ಸಮನಾಗಿರುವುದಿಲ್ಲ ಎಂದು ಅಪರ್ಣಾ ಹೇಳಿದ್ದಾರೆ.

    ನನಗೆ ರಾಮನಲ್ಲಿ ನಂಬಿಕೆ ಹಾಗೂ ಗೌರವ ಇದೆ. ಹೀಗಾಗಿ ಸ್ವಯಂಪ್ರೇರಿತರಾಗಿ ನಾನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 11 ಲಕ್ಷ ದೇಣಿಗೆ ನೀಡಿದ್ದೇನೆ. ಅಲ್ಲದೆ ಪ್ರತಿಯೊಬ್ಬ ಭಾರತೀಯ ಕೂಡ ದೇಣಿಗೆ ನೀಡಬೇಕು ಎಂದು ಅವರು ಕರೆ ನೀಡಿದರು.

  • ನಾನು ಈ ದೇಶದ ಪ್ರಜೆ, ಲೆಕ್ಕ ಕೇಳೋ ಅಧಿಕಾರ ಇದೆ: ಸಿದ್ದರಾಮಯ್ಯ

    ನಾನು ಈ ದೇಶದ ಪ್ರಜೆ, ಲೆಕ್ಕ ಕೇಳೋ ಅಧಿಕಾರ ಇದೆ: ಸಿದ್ದರಾಮಯ್ಯ

    ಮೈಸೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭರದಿಂದ ಸಾಗುತ್ತಿದ್ದು, ಇತ್ತ ಕರ್ನಾಟಕದಲ್ಲಿ ದೇಣಿಗೆ ಸಂಗ್ರಹ ವಿಚಾರವಾಗಿ ರಾಜಕೀಯ ಕೆಸರೆರಚಾಟಗಳು ನಡೆಯುತ್ತಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಈ ದೇಶದ ಪ್ರಜೆ, ಲೆಕ್ಕ ಕೇಳುವ ಅಧಿಕಾರ ನನಗಿದೆ ಎಂದು ಗುಡುಗಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ರಾಮಮಂದಿರಕ್ಕೆ ನೀಡುತ್ತಿದ್ದಾರೆ ಅದು ಬಿಜೆಪಿಗಾಗಿ ಅಲ್ಲ. ಲೆಕ್ಕ ಕೇಳುವ ಅಧಿಕಾರ ನನಗೆ ಇದೆ. ನಾನು ಈ ದೇಶದ ಪ್ರಜೆ ನಾನು ದುಡ್ಡು ಕೊಡಲಿ ಬಿಡಲಿ. ಲೆಕ್ಕೆ ಕೊಡಬೇಕಾಗಿರುವುದು ಅವರ ಕೆಲಸ ಕೇಳುವುದು ನಮ್ಮ ಹಕ್ಕು ಎಂದು ಕಟುವಾಗಿ ಹೇಳಿದ್ದಾರೆ.

    ಲೆಕ್ಕೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದರೆ ಅದರ ಅರ್ಥ ಹಣ ದುರುಪಯೋಗವಾಗುತ್ತಿದೆ. ಈ ಹಿಂದೆಯೂ ಇವರು ದೇಣಿಗೆ ಸಂಗ್ರಹಿಸಿ ಲೆಕ್ಕ ಕೊಟ್ಟಿಲ್ಲ. ಇದರ ಅರ್ಥ ಏನು ಅವರೇ ಹೇಳಬೇಕು ಎಂದು ಮಾಜಿ ಸಿಎಂ ಕಿಡಿಕಾರಿದ್ದಾರೆ.

  • ರಾಮಂದಿರ ನಿರ್ಮಾಣಕ್ಕೆ 2.50 ಲಕ್ಷ ರೂ. ದೇಣಿಗೆ ನೀಡಿದ ಅಮೂಲ್ಯ ದಂಪತಿ

    ರಾಮಂದಿರ ನಿರ್ಮಾಣಕ್ಕೆ 2.50 ಲಕ್ಷ ರೂ. ದೇಣಿಗೆ ನೀಡಿದ ಅಮೂಲ್ಯ ದಂಪತಿ

    ಬೆಂಗಳೂರು: ನಟಿ ಅಮೂಲ್ಯ, ಜಗದೀಶ್ ದಂಪತಿ ರಾಮ ಮಂದಿರ ನಿರ್ಮಾಣಕ್ಕೆ 2.50 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ.

    ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ದೇಶಾದ್ಯಂತ ನಡೆಯುತ್ತಿದ್ದು, ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಮನೆಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಆಗಮಿಸಿದ್ದರು. ಪ್ರತಿ ವರ್ಷವೂ ಜನ್ಮದಿನಾಚರಣೆಗಾಗಿ ಖರ್ಚು ಮಾಡುತ್ತಿದ್ದ ಹಣಕ್ಕೆ ನಮ್ಮಿಂದಾದ ಮೊತ್ತವನ್ನು ಸೇರಿಸಿ ಶ್ರೀರಾಮ ಮಂದಿರಕ್ಕಾಗಿ ಅರ್ಪಿಸಿದೆವು. ಈ ಕ್ಷಣ ನಮಗೆ ಅತ್ಯಂತ ಸಾರ್ಥಕತೆಯ ಕ್ಷಣವೆನಿಸಿತು ಜೈ ಶ್ರೀರಾಮ್ ಎಂದು ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಣವನ್ನು ನೀಡಿರುವ ರಶೀದಿಗಳನ್ನು ಅಮೂಲ್ಯ ಮತ್ತು ಜಗದೀಶ್ ಹಂಚಿಕೊಂಡಿದ್ದಾರೆ.

    ಜಗದೀಶ್ ಅವರು 1.50 ಲಕ್ಷ ರೂ. ಹಾಗೂ ಅವರ ತಂದೆ ಜಿ.ಎಚ್. ರಾಮಚಂದ್ರ ಅವರ ಹೆಸರಿನಲ್ಲಿ 1 ಲಕ್ಷ ರೂಪಾಯಿ ಹಣವನ್ನು ರಾಮಂದಿರ ನಿರ್ಮಾಣಕ್ಕೆ ನೀಡಲಾಗಿದೆ. ಚೆಕ್‍ಗೆ ಸಹಿ ಹಾಕುತ್ತಿರುವ ಹಾಗೂ ರಶೀದಿಗಳ ಫೋಟೋಗಳನ್ನು ಅಮೂಲ್ಯ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಅಯೋಧ್ಯೆ ಶ್ರೀರಾಮನಿಗಾಗಿ ನಮ್ಮ ಕಿರುಕಾಣಿಕೆ ಎಂದು ಕ್ಯಾಪ್ಷನ್ ಕೂಡ ನೀಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಮೂಲ್ಯ ಕುಟುಂಬದ ಈ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ಮತ್ತು ಉತ್ತಮವಾದ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ.

    ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ ದಿನದಿಂದ ದೇಶಾದ್ಯಂತ ದೇಣಿಗೆ ಸಂಗ್ರಹ ಕಾರ್ಯ ಮಾಡಲಾಗುತ್ತಿದೆ. ಅನೇಕ ರಾಜಕೀಯ ನಾಯಕರು, ರಾಮ ಭಕ್ತರು, ಉದ್ಯಮಿಗಳು, ನಟ-ನಟಿಯರು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಕರೆ ನೀಡಿದ್ದರು. ನಟ ಜಗ್ಗೇಶ್, ಬಹುಭಾಷಾ ನಟಿ ಪ್ರಣಿತಾ, ತೆಲುಗು ನಟ ಪವನ್ ಕಲ್ಯಾಣ್, ಇದೀಗ ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಕೂಡ ದೇಣಿಗೆ ನೀಡಿದ್ದಾರೆ.

    ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ದೇಶಾದ್ಯಂತ ನಡೆಯುತ್ತಿದ್ದು, ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ…

    Posted by Amulya & Jagdish on Sunday, 24 January 2021

  • ಪಟ್ಟಾಭಿರಾಮನಾಗಿ ದರ್ಶನ ಕೊಟ್ಟ ಕಡೆಗೋಲು ಕೃಷ್ಣ

    ಪಟ್ಟಾಭಿರಾಮನಾಗಿ ದರ್ಶನ ಕೊಟ್ಟ ಕಡೆಗೋಲು ಕೃಷ್ಣ

    ಉಡುಪಿ: ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುತ್ತಿದ್ದಂತೆ ಶ್ರೀಕೃಷ್ಣಮಠದ ಕಡೆಗೋಲು ಕೃಷ್ಣ ಪಟ್ಟಾಭಿರಾಮನಾಗಿ ಭಕ್ತರಿಗೆ ದರ್ಶನ ಕೊಟ್ಟಿದ್ದಾನೆ.

    ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದೆ. ಈ ಮೂಲಕ ಭಕ್ತ ಕೋಟಿಯ ಕನಸು ನನಸಾಗಿದೆ. ಉತ್ತರ ಭಾರತದಲ್ಲಿ ಧಾರ್ಮಿಕ ವಿಧಿವಿಧಾನಗಳು ಶ್ರೀರಾಮನಿಗೆ ಅರ್ಪಣೆಯಾಗುತ್ತಿದ್ದಂತೆ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಡುಪಿಯಲ್ಲಿ ಶ್ರೀಕೃಷ್ಣ ಮಠದಲ್ಲಿ ಮಹಾಪೂಜೆಯನ್ನು ನೆರವೇರಿಸಲಾಯಿತು.

    ಉಡುಪಿ ಶ್ರೀಕೃಷ್ಣನಿಗೆ ಈ ಸಂದರ್ಭದಲ್ಲಿ ಪಟ್ಟಾಭಿರಾಮನ ಅಲಂಕಾರ ಮಾಡಲಾಗಿತ್ತು. ಈ ಮೂಲಕ ಶ್ರೀಕೃಷ್ಣನಲ್ಲಿ ಶ್ರೀರಾಮನನ್ನು ಕಂಡುಕೊಳ್ಳಲಾಯಿತು. ಅಷ್ಠ ಮಠಗಳಲ್ಲಿ ಒಂದಾದ ಕಾಣಿಯುರು ಮಠಾಧೀಶ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ವಿಶೇಷ ಅಲಂಕಾರ ಮಾಡಿದ್ದರು. ಶ್ರೀಕೃಷ್ಣನಿಗೆ ರಾಮಾಲಂಕಾರ ಮಾಡಿ ಕೃಷ್ಣನನ್ನು ಶ್ರೀ ರಾಮನನ್ನಾಗಿಸಿದರು.

    ಬಿಲ್ಲು ಬಾಣವನ್ನು ಹಿಡಿದು, ಸಿಂಹಾಸನದಲ್ಲಿ ಕುಳಿತು ಪಟ್ಟಾಭಿಷೇಕ ಆದ ದಿನವನ್ನು ಸ್ವಾಮೀಜಿಗಳು ನೆನಪು ಮಾಡಿ ಕೊಟ್ಟರು. ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಶ್ರೀಪಾದರು ಪಟ್ಟಾಭಿರಾಮನಿಗೆ ಮಹಾಪೂಜೆಯನ್ನು ನೆರವೇರಿಸಿದರು.

    ಉಡುಪಿ ಶ್ರೀಕೃಷ್ಣ ಅಲಂಕಾರ ಪ್ರಿಯನಾಗಿದ್ದು, ಪ್ರತಿದಿನ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ದಿನದ ವಿಶೇಷತೆ ಹೊಂದಿಕೆಯಾಗುವಂತೆ ಅಲಂಕಾರ ಇರುತ್ತದೆ. ಪ್ರತಿ ಶುಕ್ರವಾರ ಕೃಷ್ಣನಿಗೆ ದೇವಿಯ ಅಲಂಕಾರ ಮಾಡಲಾಗುತ್ತದೆ. ರಾಮ ಮಂದಿರಕ್ಕೆ ಶಿಲಾನ್ಯಾಸ ನಿರ್ಮಾಣದ ಸಂದರ್ಭದಲ್ಲಿ ರಾಮನ ಪಟ್ಟಾಭಿಷೇಕ ನೆನಪಿಸುವ ಪಟ್ಟಾಭಿರಾಮ ಅಲಂಕಾರವನ್ನು ನೆರವೇರಿಸಲಾಯಿತು.

  • ಅಯೋಧ್ಯೆಯಲ್ಲಿ ಶಿಲಾನ್ಯಾಸ- ಉಡುಪಿಯಲ್ಲಿ ರಾಮ ದೇವರಿಗೆ ಲಕ್ಷ ತುಳಸಿ ಅರ್ಪಣೆ

    ಅಯೋಧ್ಯೆಯಲ್ಲಿ ಶಿಲಾನ್ಯಾಸ- ಉಡುಪಿಯಲ್ಲಿ ರಾಮ ದೇವರಿಗೆ ಲಕ್ಷ ತುಳಸಿ ಅರ್ಪಣೆ

    ಉಡುಪಿ: ಐತಿಹಾಸಿಕ ರಾಮಮಂದಿರಕ್ಕೆ ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆದಿದೆ. ದೇವಾಲಯಗಳ ನಗರಿ ಉಡುಪಿಯಲ್ಲಿ ಶಿಲಾನ್ಯಾಸ ದಿನ ಸಂಭ್ರಮಾಚರಣೆ ಮನೆಮಾಡಿತು. ರಾಮಮಂದಿರದ ಟ್ರಸ್ಟಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನೀಲಾವರದಲ್ಲಿ ರಾಮ ದೇವರಿಗೆ ಲಕ್ಷ ತುಳಸಿ ಅರ್ಪಿಸಿದರು.

    ಪೇಜಾವರಶ್ರೀ ಚಾತುರ್ಮಾಸ್ಯದಲ್ಲಿ ಇರೋದ್ರಿಂದ ನೀಲಾವರ ಕೃಷ್ಣ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಬೆಳಗ್ಗೆ 7ರಿಂದ ಹೋಮ ಹವನಾದಿ ಆರಂಭವಾಗಿದೆ.

    ಕೆರೆಯ ನಡುವಿನ ದೇವಸ್ಥಾನದಲ್ಲಿ ಶ್ರೀ ರಾಮ ಲಕ್ಷ್ಮಣ ಸೀತೆ ಆಂಜನೇಯನ ವಿಗ್ರಹವನ್ನಿಟ್ಟು ಲಕ್ಷ ತುಳಸಿಯನ್ನು ದೇವರಿಗೆ ಅರ್ಪಿಸಿದರು. ರಾಮಮಂದಿರದ ಹೋರಾಟದಲ್ಲಿ ಇಡೀ ಜೀವನವನ್ನು ಸವೆಸಿದ ತನ್ನ ಹಿರಿಯ ಗುರುಗಳು ಬೃಂದಾವನಸ್ಥರಾದ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಗೌರವವನ್ನು ಈ ಸಂದರ್ಭದಲ್ಲಿ ಅರ್ಪಿಸಿದರು. ನೀಲಾವರ ಗೋ ಶಾಲೆಯಲ್ಲಿ ರಾಮ ಮಂತ್ರ ಜಪ, ರಾಮ ಮಂತ್ರ ಹೋಮ, ವಿಷ್ಣುಸಹಸ್ರನಾಮ ಇತ್ಯಾದಿ ಪೂಜೆಗಳು ನಡೆದವು.

    ಪೇಜಾವರ ಮಠದ ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಇಂದು ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆದಿದೆ. ಮಂದಿರ ಕಟ್ಟುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು. ತಮ್ಮ ತಮ್ಮ ಮನೆಗಳಲ್ಲಿ ರಾಮನಾಮ ತಾರಕ ಮಂತ್ರಗಳನ್ನು ಮಾಡಬೇಕು. ರಾಮ ಮಂದಿರ ಆದರೆ ಸಾಲದು ರಾಮರಾಜ್ಯ ನಿರ್ಮಾಣ ಮಾಡಬೇಕು. ಗುರುಗಳು ರಾಮಮಂದಿರಕ್ಕಾಗಿ ತನ್ನ ಜೀವನವನ್ನೇ ಸವೆಸಿದ್ದಾರೆ. ಅವರು ನಮ್ಮ ಜೊತೆ ದೈಹಿಕವಾಗಿ ಇಲ್ಲದಿದ್ದರೂ, ಅವರು ಎಲ್ಲೇ ಇದ್ದರೂ ಯಾವ ರೂಪದಲ್ಲಿದ್ದರೂ ಎಲ್ಲ ಕಾರ್ಯಗಳನ್ನು ವೀಕ್ಷಿಸುತ್ತಿದ್ದಾರೆ ಎಂಬ ಭಾವನೆ ನಮ್ಮದು ಎಂದು ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

  • ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ

    ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ

    – 366 ಸ್ತಂಭಗಳ ಆಧಾರ, 24 ಅಮೃತಶಿಲೆಯ ಬಾಗಿಲುಗಳು
    – ವಿಶ್ವದ ಮೂರನೇ ಅತೀದೊಡ್ಡ ಹಿಂದೂ ದೇಗುಲ

    ಲಕ್ನೋ: ಇಂದು ದೇಶದ ರಾಜಕೀಯ, ಸಾಮಾಜಿಕ ಚರಿತ್ರೆಯಲ್ಲಿ ಒಂದು ಅಪೂರ್ವ ದಿನ. ಶತಮಾನಗಳ ಕನಸು ನನಸಾಗುವ ಸಂದರ್ಭ ಬಂದಿದೆ.

    ಸರಿಯಾಗಿ ವರ್ಷದ ಹಿಂದೆ ಜಮ್ಮು ಕಾಶ್ಮೀರದಲ್ಲಿ 370ನೇ ಆರ್ಟಿಕಲ್ ರದ್ದು ಮಾಡಿದಾಗ ಅದನ್ನು ಐತಿಹಾಸಿಕ ಘಟ್ಟ ಎಂದು ಬಣ್ಣಿಸಲಾಗಿತ್ತು. ಇದು ದಶಕಗಳ ವಿವಾದವಷ್ಟೇ ಆಗಿತ್ತು. ಆದರೆ ಭರತ ಖಂಡದ ಅಸ್ತಿತ್ವದ ಚಿನ್ಹೆಯಾದ ರಾಮಜನ್ಮ ಭೂಮಿಯಲ್ಲಿ ಒಂದು ಮಸೀದಿ ನಿರ್ಮಾಣ ಆಗಿ ಶತಮಾನಗಳು ಕಳೆದು ಹೋಗಿದ್ವು. ಪುರಾತತ್ವ ಇಲಾಖೆಯಲ್ಲಿ ಮಾತ್ರವಲ್ಲ, ಮೊಗಲ್ ಸಾಮ್ರಾಜ್ಯದ ದಾಖಲೆಗಳಲ್ಲಿಯೂ ಮಂದಿರ ಸ್ಥಾನದಲ್ಲಿ ಮಸೀದಿ ನಿರ್ಮಾಣ ಮಾಡಿದ ಬಗ್ಗೆ ಸಾಕ್ಷ್ಯಗಳಿವೆ.

    ಶತಮಾನಗಳ ಕಾಲ ಎರಡು ಧರ್ಮೀಯರ ನಡುವೆ ಕಗ್ಗಂಟಾಗಿ ಉಳಿದಿದ್ದ ಸಮಸ್ಯೆಯನ್ನು ಅಂತಿಮವಾಗಿ 2019ರ ನವೆಂಬರ್ 09ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡುವ ಮೂಲಕ ಇತ್ಯರ್ಥ ಮಾಡಿತ್ತು. ಹಿಂದೂಗಳ ಪಾಲಿಗೆ ರಾಮಜನ್ಮಭೂಮಿ ದಕ್ಕಿತು. ಇಂದು ಶುಭ ಗಳಿಗೆಯಲ್ಲಿ ಕೋಟ್ಯಾನುಕೋಟಿ ಜನರ ಆಶಯ, ನಂಬಿಕೆ, ಕನಸಿನಂತೆ ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ. ಭರತ ಖಂಡದ ಐತಿಹಾಸಿಕ, ಪೌರಾಣಿಕ ಸ್ಮಾರಕದ ಪುನರ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದೆ. ಇದಕ್ಕಾಗಿ ಅಯೋಧ್ಯೆ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ.

    ಭಾರತೀಯರ ಆತ್ಮಗೌರವದ ಪ್ರಶ್ನೆಯಾದ ಶ್ರೀರಾಮಧಾಮದ ನಿರ್ಮಾಣ ಹೇಗಿರಲಿದೆ. ಇದರ ನೀಲ ನಕ್ಷೆ ಹೇಗಿರುತ್ತೆ? ಏನೆಲ್ಲಾ ವಿಶೇಷತೆಗಳು ಇಂದು ನಿರ್ಮಾಣ ಆಗುವ ರಾಮಮಂದಿರದಲ್ಲಿ ಅಡಕವಾಗಿ ಇರಲಿವೆ ಎಂಬುದನ್ನು ಒಂದೊಂದಾಗಿಯೇ ತೋರಿಸ್ತೀವಿ. ಮೊದಲಿಗೆ ರಾಮಮಂದಿರ ಯಾವ ಶೈಲಿಯಲ್ಲಿ ನಿರ್ಮಾಣ ಆಗಲಿದೆ ಅನ್ನೋದನ್ನು ನೋಡೋಣ

    ನಾಗರ ಶೈಲಿಯಲ್ಲಿ ರಾಮಮಂದಿರ:
    ಉತ್ತರ ಭಾರತದ ನಾಗರ ಶೈಲಿಯಲ್ಲಿ ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣವಾಗಲಿದೆ. ಒಳಮುಖವಾಗಿ ತಿರುಗುವ ಗೋಪುರ ಇದರ ವೈಶಿಷ್ಟ್ಯವಾಗಿದ್ದು, ದ್ರಾವಿಡ ಶೈಲಿಯ ಪಿರಾಮಿಡ್ ಗೋಪುರಗಳಿಗೆ ಇದು ಸಂಪೂರ್ಣ ವಿರುದ್ಧವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಗೋಪುರಗಳ ನಿರ್ಮಾಣವಾಗಲಿದೆ. ಅತಿ ಉದ್ದದ ಗೋಪುರದ ಕೆಳಗೆ ಗರ್ಭಗುಡಿ ಇರಲಿದೆ. ವೃತ್ತಾಕಾರದಲ್ಲಿ ರಾಮಮಂದಿರ ಪರಿಧಿ ಇರಲಿದ್ದು, ನಾಗರ ಶೈಲಿಗೆ ಸೋಮನಾಥ ದೇಗುಲ ಉದಾಹರಣೆಯಾಗಿದೆ. ಶಿಲ್ಪಿ ಚಂದ್ರಕಾಂತ ಸೋಂಪುರ ನೇತೃತ್ವದಲ್ಲಿ ನಿರ್ಮಾಣವಾಗಲಿದೆ. (ಇವರ ಕುಟುಂಬ ತಲತಲಾಂತರಗಳಿಂದ 131 ದೇಗುಲ ನಿರ್ಮಿಸಿದೆ. ರಾಮಮಂದಿರ ನಿರ್ಮಾಣಕ್ಕಾಗಿ ಇವರನ್ನು 30 ವರ್ಷಗಳ ಹಿಂದೆಯೇ ಸಂಪರ್ಕಿಸಲಾಗಿತ್ತು ಎಂದು ತಿಳಿದು ಬಂದಿದೆ.)

    ರಾಮ ಮಂದಿರದ ಗರ್ಭಗುಡಿ:
    * ನಾಗರ ಶೈಲಿಯಲ್ಲಿ ಅಷ್ಟಭುಜಾಕೃತಿಯ ಗರ್ಭಗುಡಿ
    * ಗರ್ಭಗುಡಿ ಮೇಲ್ಭಾಗ ಅತ್ಯಂತ ಎತ್ತರದ ಶಿಖರ
    * ಶ್ರೀರಾಮಚಂದ್ರನ ವಿಗ್ರಹ ಪ್ರತಿಷ್ಠಾಪನೆ
    * ಗರ್ಭಗುಡಿಯ ಜಾಗದಲ್ಲೇ ಇಂದು ಅಡಿಗಲ್ಲು

    ಗರ್ಭಗುಡಿಯ ತಳಪಾಯಕ್ಕೆ ಕಲ್ಲು, ಮಣ್ಣಿನ ಇಟ್ಟಿಗೆಗಳ ಜೊತೆಗೆ ಚಿನ್ನ, ಬೆಳ್ಳಿಯ ಇಟ್ಟಿಗೆಗಳನ್ನು ಬಳಸಲಾಗುತ್ತಿದೆ. ಶುಭ ಅಭಿಜಿನ್ ಲಗ್ನದಲ್ಲಿ ಮಂದಿರಕ್ಕೆ ಭೂಮಿಪೂಜೆ ಮಾಡಲಾತ್ತದೆ. 40 ಕೆಜಿ ತೂಕದ ಬೆಳ್ಳಿ ಇಟ್ಟಿಗೆ ಇಟ್ಟು ಭೂಮಿಪೂಜೆ ಮಾಡಲಾಗುತ್ತದೆ. ಗರ್ಭಗುಡಿಯ ತಳಪಾಯಕ್ಕೆ ಚಿನ್ನ, ಬೆಳ್ಳಿ ಇಟ್ಟಿಗೆಗಳ ಬಳಸಲಾಗುತ್ತದೆ. ಮನ್ನಾರ್‍ಗುಡಿಯ ಜೀಯಾರ್ ಸ್ವಾಮಿಯಿಂದ 5 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಇಟ್ಟಿಗೆ ನೀಡಿದ್ದು, ಜೈನ ಸಮುದಾಯ ಕೂಡ 24 ಕೆಜಿ ತೂಕ ಬೆಳ್ಳಿ ಇಟ್ಟಿಗೆಗಳನ್ನು ನೀಡಿದೆ.

    ಶ್ರೀರಾಮಧಾಮದ ವಿಸ್ತೀರ್ಣ
    * ವಿಶ್ವದ ಮೂರನೇ ಅತೀದೊಡ್ಡ ಹಿಂದೂ ದೇಗುಲ
    (ಮೊದಲನೆಯದ್ದು ಅಂಕೋರ್ ವ್ಯಾಟ್ (401 ಎಕರೆ), 2ನೇಯದ್ದು ತಿರುಚನಾಪಲ್ಲಿಯ ರಂಗನಾಥ ದೇಗುಲ (135 ಎಕರೆ))
    * 84 ಸಾವಿರ ಚದರಡಿ ಪ್ರದೇಶದಲ್ಲಿ ಪ್ರಧಾನ ಮಂದಿರ
    (ಮೊದಲು 37 ಸಾವಿರ ಚದರಡಿ ಎಂದು ಪ್ಲಾನ್ ಮಾಡಿಕೊಳ್ಳಲಾಗಿತ್ತು)
    * 161 ಅಡಿ ಎತ್ತರ (ಮೊದಲು 128 ಅಡಿ ಎಂದು ಪ್ಲಾನ್ ಮಾಡಲಾಗಿತ್ತು)
    * 360 ಅಡಿ ಉದ್ದ (ಮೊದಲು 270 ಅಡಿ ಎಂದು ಪ್ಲಾನ್ ಮಾಡಲಾಗಿತ್ತು)
    * 235 ಅಡಿ ಅಗಲ (ಮೊದಲು 145 ಅಡಿ ಎಂದು ಪ್ಲಾನ್ ಮಾಡಲಾಗಿತ್ತು)
    * ಒಂದೇ ಬಾರಿಗೆ 10 ಸಾವಿರ ಭಕ್ತರು ದರ್ಶನ ಮಾಡಬಹುದಾದಷ್ಟು ವಿಶಾಲ
    * 30 ಸಾವಿರ ಟನ್‍ಗಳಷ್ಟು ಬನ್ಸಿ ಪಹಾಡ್‍ಪುರ್ ಕಲ್ಲು (ಪಿಂಕ್ ಸ್ಟೋನ್)

    ಶ್ರೀರಾಮಧಾಮ ಎಷ್ಟು ಅಂತಸ್ತು
    * ಮೂರು ಅಂತಸ್ತಿನ ರಾಮಮಂದಿರ ನಿರ್ಮಾಣ
    * ನೆಲಮಹಡಿಯಲ್ಲಿ ರಾಮ್ ಲಲ್ಲಾ ವಿಗ್ರಹ
    * ನೆಲಮಹಡಿಯಲ್ಲಿ ಕೋಲಿ, ರಂಗಮಂಟಪ
    * ಮೊದಲ ಮಹಡಿಯಲ್ಲಿ ರಾಮದರ್ಬಾರ್ ಮೂರ್ತಿ (ರಾಮ-ಸೀತೆ-ಲಕ್ಷಣ ಮತ್ತು ಹನುಮಂತ)
    * ಮೊದಲ ಮಹಡಿಯಲ್ಲಿ ನೃತ್ಯ ಮಂಟಪ, ಗರ್ಭಗುಡಿ

    ಮಂದಿರಕ್ಕೆ ಪಂಚ ಗೋಪುರ
    * ರಾಮಮಂದಿರಕ್ಕೆ ಇರಲಿವೆ ಐದು ಗೋಪುರ
    * ಮೂರು ಗುಮ್ಮಟದ ಬದಲು ಐದು ಗುಮ್ಮಟ ನಿರ್ಮಾಣ
    * ಗರ್ಭಗುಡಿಯ ಮೇಲ್ಭಾಗದಲ್ಲಿ ಬರುವಂತೆ ಎತ್ತರದ ಶಿಖರ
    * ಗರ್ಭ ಗುಡಿಯ ಮೇಲ್ಭಾಗ 161 ಅಡಿ ಎತ್ತರದ ಶಿಖರ
    * ಶಿಖರದ ಮುಂಭಾಗ ಇಳಿಕೆ ಕ್ರಮದಲ್ಲಿ ಮೂರು ಗೋಪುರ
    * ದೇಗುಲದ ಎಡ- ಬಲ ಬದಿಯಲ್ಲಿ 2 ಚಿಕ್ಕ ಗೋಪುರ

    ಮಂದಿರಕ್ಕೆಷ್ಟು ಸ್ತಂಭ?
    * ರಾಮಮಂದಿರಕ್ಕೆ 366 ಸ್ತಂಭಗಳ ಆಧಾರ
    * ಮೊದಲ ಮಹಡಿಯಲ್ಲಿ 160 ಸ್ತಂಭ. ಉದ್ದ 15.6 ಅಡಿ
    * ಎರಡನೇ ಮಹಡಿಯಲ್ಲಿ 132 ಸ್ತಂಭ. ಉದ್ದ 14.6 ಅಡಿ
    * ಮೂರನೇ ಮಹಡಿಯಲ್ಲಿ 74 ಸ್ತಂಭ
    * ಪ್ರತಿ ಸ್ತಂಭದಲ್ಲಿಯೂ 16 ದೇವರ ಮೂರ್ತಿಗಳ ಕೆತ್ತನೆ

    ರಾಮಮಂದಿರಕ್ಕೆ ಸಿಂಹದ್ವಾರ
    * 24 ಅಮೃತಶಿಲೆಯ ಬಾಗಿಲುಗಳು
    * ದೇಗುಲದ 6 ಭಾಗದಲ್ಲಿ ಸಿಂಹದ್ವಾರ
    * ಮೂರು ಅಂತಸ್ತುಗಳಲ್ಲಿ 18 ಬಾಗಿಲು
    * 6 ಸಿಂಹದ್ವಾರಗಳಿಗೆ 10 ಅಡಿ ಅಗಲದ ಮಾರ್ಗ

  • ರಾಮಮಂದಿರ ಕಟ್ಟೋವರೆಗೂ ನಿದ್ರಿಸಬೇಡಿ, ನಾನೂ ನಿದ್ರಿಸಲ್ಲ- ಪೇಜಾವರ ಶ್ರೀ

    ರಾಮಮಂದಿರ ಕಟ್ಟೋವರೆಗೂ ನಿದ್ರಿಸಬೇಡಿ, ನಾನೂ ನಿದ್ರಿಸಲ್ಲ- ಪೇಜಾವರ ಶ್ರೀ

    ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವವರೆಗೆ ನಿದ್ರಿಸಬೇಡಿ. ನಾನಂತೂ ನಿದ್ರಿಸಲ್ಲ ಎಂದು ಉಡುಪಿ ಮಠದ ಪೇಜಾವರ ಶ್ರೀ ಹೇಳಿದ್ದಾರೆ.

    ಹಿಂದೂ ಸಮಾಜೊತ್ಸವದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಕಟು ಟೀಕೆ ಮಾಡಿದ್ರು. ಸಿಎಂ ಬಸವಣ್ಣನ ಭಕ್ತರೆನ್ನುತ್ತಾರೆ. ನಾನು ಇದನ್ನು ಒಪ್ಪಲು ಸಾಧ್ಯವಿಲ್ಲ. ಬಸವಣ್ಣ ಗೋಹತ್ಯೆ ಬಗ್ಗೆ ವಿರೋಧ ಇದ್ದವರು. ಸಿಎಂ ಗೋಮಾಂಸ ಭಕ್ಷಕರಿಗೆ ಬೆಂಬಲ ಇದ್ದಾರೆ. ಸಿದ್ದರಾಮಯ್ಯ ಹೇಗೆ ಬಸವಣ್ಣನ ಭಕ್ತರಾಗಲು ಸಾಧ್ಯ ಅಂತ ಹೇಳಿದ್ರು.

    ರಾಮಮಂದಿರ ನಿರ್ಮಾಣ ಆಗುವವರೆಗೆ ನಿದ್ದೆ ಮಾಡದಿರಿ. ನಾನಂತೂ ನಿದ್ದೆ ಮಾಡಲ್ಲ. ನನಗೆ ಹಿಂದ- ಅಹಿಂದ ಒಂದೇ. ಕೆಲವರಿಗೆ ಅಹಿಂದ ಮಾತ್ರ ಮುಖ್ಯ. ಬುದ್ಧಿಜೀವಿಗಳ ಬಗ್ಗೆ ನನಗೆ ಕನಿಕರವಾಗುತ್ತಿದೆ. ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತಾರೆ ಅಂತ ಅವರು ಹೆಳಿದ್ರು.

    ಮುಸ್ಲಿಮರಿಂದ ತಂಪು ಪಾನೀಯ: ಹಿಂದೂ ಸಮಾಜೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಸ್ತ ಮುಸ್ಲಿಂ ಬಾಂಧವರಿಂದ ತಂಪು ಪಾನೀಯವನ್ನು ವಿತರಿಸಲಾಗಿತ್ತು.