Tag: rama mandir

  • 2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ- ಮೋಹನ್ ಭಾಗವತ್

    2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ- ಮೋಹನ್ ಭಾಗವತ್

    – ಧರ್ಮಸಂಸದ್ ನಲ್ಲಿ ರಾಮಮಂದಿರ ಕಹಳೆ
    – ಪರ್ಯಾಯ ನಂತರ ನಾನು ದೈಹಿಕವಾಗಿಯೂ ಹೊರಾಟಕ್ಕಿಳಿಯುತ್ತೇನೆಂದ ಪೇಜಾವರ ಶ್ರೀ

    ಉಡುಪಿ: ಬಾಬ್ರೀ ಮಸೀದಿ ಧ್ವಂಸವಾಗಿ 25 ವರ್ಷಗಳೇ ಕಳೆದಿವೆ. ಇನ್ನೂ ನಾವು ಕಾಯುವುದರಲ್ಲಿ ಅರ್ಥವಿಲ್ಲ. ಸಂಘ ಪರಿವಾರದ ಸ್ವಯಂ ಸೇವಕರು ತುಂಬಾ ಆಸೆಯಿಂದ ರಾಮ ಮಂದಿರ ಕಟ್ಟೋದು ಯಾವಾಗ ಅಂತಾ ಕೇಳ್ತಾರೆ. ಸ್ವಯಂ ಸೇವಕರ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗಿದೆ. ಒಂದು ವರ್ಷದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ. 2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ಆರ್‍ಎಸ್‍ಎಸ್ ಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

    ರಾಮಮಂದಿರದ ವಿಜಯ ನಿಶ್ಚಿತವಾಗಿದ್ದು, ಹಿಂದೂ ದೇಶದ ದಿಗ್ಧರ್ಶನ ಉಡುಪಿಯಲ್ಲಿ ಆಗಿದೆ. ಧರ್ಮ ಸಂಸದ್ ನಂತರ ಹಿಂದೂ ಸಮಾಜ ಒಂದು ಹೆಜ್ಜೆ ಮುಂದಿಟ್ಟು, ನಮ್ಮ ಹೋರಾಟ ವಿಜಯದತ್ತ ಸಾಗಬೇಕಿದೆ. ಮಂದಿರದ ವಿಜಯ ಸಾಧಿಸದೇ ನಾವು ಸುಮ್ಮನೆ ಕೂರುವವರಲ್ಲ. ಸಾಮಾಜಿಕ ಸಾಮರಸ್ಯ ನಮ್ಮ ಮೇಲೆ ಮಾತ್ರವಲ್ಲದೇ ಎಲ್ಲ ವರ್ಗಕ್ಕೂ ಸೀಮಿತವಾಗಬೇಕಿದೆ. ಗೋರಕ್ಷಣೆಯ ಮಹತ್ವದ ಜವಾಬ್ದಾರಿ ನಮ್ಮ ಮೇಲಿದ್ದು, ಗೋ ಹತ್ಯೆ ನಿಷೇಧ ಆಗುವರೆಗೂ ನಮಗೆಲ್ಲರಿಗೂ ನೆಮ್ಮದಿ ಇಲ್ಲ. ಮತಾಂತರ ನಿರಂತರವಾಗಿ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಡಬೇಕಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.

    ಆಯೋಧ್ಯೆಯಲ್ಲಿ ಬೇರೆ ಕಟ್ಟಡಗಳು ಬೇಡ: ಆಯೋಧ್ಯೆಯಲ್ಲಿ ರಾಮಮಂದಿರ ಮಾತ್ರ ನಿರ್ಮಾಣವಾಗಬೇಕು. ಅಲ್ಲಿ ಬೇರೆ ಯಾವುದೇ ಕಟ್ಟಡಗಳು ಬರಬಾರದು. ಅದೇ ಕಲ್ಲುಗಳಿಂದ ರಾಮಮಂದಿರ ಕಟ್ಟಲಾಗುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ, ಹಿಂದೂ ದೇಶ ವಿಶ್ವಗುರುವಾಗುವತ್ತ ಸಾಗುತ್ತಿದೆ. ರಾಮಮಂದಿರ ನಿರ್ಮಾಣವಾಗುವುದು ನೂರಕ್ಕೆ ನೂರರಷ್ಟು ಸತ್ಯವಾಗಿದ್ದು, ಎಲ್ಲರೂ ಜೈಕಾರ ಕೂಗಲು ಸಿದ್ಧರಾಗಿರಿ ಎಂದು ಭಾಗವತ್ ಹೇಳಿದ್ರು.

    ಸುತ್ತೂರು ಶ್ರೀಗಳು ಮಾತನಾಡಿ, ಧರ್ಮ ಸಂಸದ್ ನ ಆಶಯಗಳು ಈಡೇರಬೇಕಾದರೆ ಸಂತರ ನಿರ್ಣಯಗಳು ಶೀಘ್ರ ಅನುಷ್ಠಾನಕ್ಕೆ ಬರಬೇಕು. ಭಾರತ ವಿಜ್ಞಾನಿ-ತತ್ವಜ್ಞಾನಿಗಳ ದೇಶ, ಭಾರತದ ಸಂಸ್ಕೃತಿ- ಭಾಷೆ ಅನನ್ಯವಾದದ್ದು. ನಾವೀಗ ನ್ಯೂಕ್ಲಿಯರ್ ಯುಗದಲ್ಲಿದ್ದೇವೆ. ಮಾತಿನಲ್ಲಿ ಬಗೆಹರಿಯುವ ವಿಚಾರ ಯುದ್ಧಕ್ಕೆ ತಿರುಗುತ್ತಿದೆ. ಅಸ್ಪೃಶ್ಯತೆ, ಜಾತಿಪದ್ಧತಿ ಹಿಂದೂ ಧರ್ಮದಿಂದ ದೂರವಾಗಿ ಮಹಿಳೆಯರ ಸ್ಥಿತಿ ಬದಲಾಗಬೇಕು ಎಂದರು.

    ಇದೇ ವೇಳೆ ಪೇಜಾವರ ಶ್ರೀಗಳು ಮಾತನಾಡಿ, ಇದು ಧರ್ಮ ಸಂಸದ್ ಮಾತವಲ್ಲ, ಕ್ಷೀರ ಸಮುದ್ರದ ಮಂಥನವಾಗುತ್ತಿದೆ. ಅಸ್ಪೃಶ್ಯತೆ ಎಂಬುದು ಕಾಲಕೂಟ ವಿಷ ಸರ್ಪ. ಅದರ ಉಚ್ಛಾಟನೆ ಮೊದಲು ಹಿಂದೂಗಳಲ್ಲಿ ಆಗಬೇಕಿದೆ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಒಂದು ನಿಯಮ, ಬಹುಸಂಖ್ಯಾತರಿಗೆ ಬೇರೆಯೇ ಕಾನೂನುಗಳಿವೆ. ಜಾತ್ಯಾತೀತ ಪಕ್ಷಗಳು ಸಮಾಜವನ್ನು ಒಡೆಯುತ್ತಿದ್ದು ಭಾರತದ ಸಂವಿಧಾನ ಬದಲಾಗಬೇಕಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ತರುವ ಸರ್ಕಾರ ಬರಬೇಕಿದೆ. 2019 ರೊಳಗೆ ರಾಮ ಮಂದಿರ ಆಗೋದು ನಿಶ್ಚಿತವಾಗಿದೆ. ದೇಶ ರಾಮಮಂದಿರ ನಿರ್ಮಾಣದ ವಾತಾವರಣವನ್ನು ಹೊಂದಿದೆ. ರಾಮಮಂದಿರ ನಿರ್ಮಾಣ ವಿಚಾರಕ್ಕೆ ಕೃಷ್ಣನ ಅನುಗ್ರಹವಿದೆ. ಪರ್ಯಾಯ ನಂತರ ನಾನು ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಹೋರಾಟಕ್ಕೆ ಇಳಿಯುತ್ತೇನೆ ಎಂದು ಸ್ಪಷ್ಟನೆ ನೀಡಿದರು.

     

  • ರಾಮಮಂದಿರಕ್ಕೆ ಉಡುಪಿಯಲ್ಲಿ ಮುಹೂರ್ತ!?- ಪೇಜಾವರಶ್ರೀ ಹೇಳಿದ್ದಿಷ್ಟು

    ರಾಮಮಂದಿರಕ್ಕೆ ಉಡುಪಿಯಲ್ಲಿ ಮುಹೂರ್ತ!?- ಪೇಜಾವರಶ್ರೀ ಹೇಳಿದ್ದಿಷ್ಟು

    ಉಡುಪಿ: ಬಹು ಚರ್ಚಿತ ಮತ್ತು ಬಹು ನಿರೀಕ್ಷೆಯ ರಾಮಮಂದಿರ ನಿರ್ಮಾಣ ವಿಚಾರ ಚುರುಕುಗೊಂಡಿದೆ. ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಪೇಜಾವರಶ್ರೀಗಳ ಜೊತೆ ಚರ್ಚೆ ಮಾಡಿದ್ದಾರೆ. ನವೆಂಬರ್ ತಿಂಗಳ ಸಂತ ಸಮಾವೇಶದಲ್ಲಿ ರಾಮಮಂದಿರದ ನಿರ್ಮಾಣದ ಮಹೂರ್ತ ಫಿಕ್ಸ್ ಆಗಲಿದ್ಯಂತೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಪೇಜಾವರಶ್ರೀ ಮಾತನಾಡಿದ್ದಾರೆ.

    ಸಂಸದ ಸಾಕ್ಷಿ ಮಹಾರಾಜ್ ಉಡುಪಿ ಶ್ರೀಕೃಷ್ಣಮಠಕ್ಕೆ ಬಂದು ದರ್ಶನ ಪಡೆದಿದ್ದಾರೆ. ಈ ಸಂದರ್ಭ ನನ್ನ ಜೊತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಕುರಿತು ತನ್ನ ಅಭಿಪ್ರಾಯ ಮಂಡಿಸಿದರು. ನಮ್ಮ ಮೂರನೇ ಪರ್ಯಾಯ ಸಂದರ್ಭ ರಾಮ ಮಂದಿರ ಆವರಣಕ್ಕೆ ಹಾಕಿದ ಬೀಗ ಮುರಿದು ಒಳ ಪ್ರವೇಶ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದೆವು. ಆ ಸಂದರ್ಭ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಬೀಗ ತೆಗೆದು ದರ್ಶನಕ್ಕೆ ಅನುವು ಮಾಡಿಕೊಟ್ಟರು. ಈ ಬಾರಿ ನವೆಂಬರ್ ತಿಂಗಳಲ್ಲಿ ಉಡುಪಿ ರಾಜಾಂಗಣದಲ್ಲಿ ವಿಶ್ವ ಸಂತ ಸಮ್ಮೇಳನ ನಡೆಸಲಾಗುವುದು. ಈ ಸಂದರ್ಭ ರಾಮಮಂದಿರ ವಿಚಾರದಲ್ಲಿ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.

    ಸಾಕ್ಷಿ ಮಹಾರಾಜರು ತಮ್ಮ ಸ್ವಂತ ಅಭಿಪ್ರಾಯ ಹೇಳಿದ್ದಾರೆ. ಆದ್ರೆ ಕಮಿಟಿಯೊಂದು ರಚನೆಯಾಗಿ ಅದರಲ್ಲಿ ಈ ವಿಚಾರ ಚರ್ಚೆಯಾಗಬೇಕು. ಚರ್ಚೆಯ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇಷ್ಟಕ್ಕೂ ಸಾಕ್ಷಿ ಮಹಾರಾಜ್ ಹಿಂದಿಯಲ್ಲಿ ರಾಮ ಮಂದಿರದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಿ ನಕ್ಕರು, ನಾನೂ ನಕ್ಕೆ. ಇದಕ್ಕಿಂತ ಹೆಚ್ಚಾಗಿ ಏನೂ ಆಗಿಲ್ಲ ಎಂದು ಪೇಜಾವರ ಶ್ರೀ ಹೇಳಿದರು.

    ರಾಮ ಮಂದಿರ ನಿರ್ಮಾಣಕ್ಕೆ ಮುನ್ನ ಕಾನೂನು ಇದೆ, ಸಂವಿಧಾನ ಇದೆ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇದು ತೀರ್ಮಾನ ಆಗಬೇಕಿದೆ. ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ರಾಮ ಮಂದಿರಕ್ಕೆ ಅಸ್ತು ಸಿಗಬಹುದು. ಆದ್ರೆ ಅದಕ್ಕೂ ಮೊದಲು ಬೇರೆಲ್ಲಾ ಕಾನೂನಾತ್ಮಕ ನಿರ್ಣಯಗಳು ಆಗಬೇಕಿದೆ ಎಂದು ಹೇಳಿದರು. ನವೆಂಬರ್ ತಿಂಗಳಲ್ಲಿ ಉಡುಪಿಯಲ್ಲಿ ನಡೆಯುವ ಸಂತ ಸಮಾವೇಶದಲ್ಲಿ ಈ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆಯಿದೆ ಎಂದು ಹೇಳಿದರು.

    ಶಾಂತನಾಗಿ ಎಲ್ಲವನ್ನೂ ನೋಡುತ್ತಿದ್ದೇನೆ: ಉಡುಪಿ ಶ್ರೀಕೃಷ್ಣಮಠದಲ್ಲಿ ನಡೆದ ಇಫ್ತಾರ್ ಕೂಟಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿರೋ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಪೇಜಾವರ ಸ್ವಾಮೀಜಿ, ಜಸ್ಟ್ ವೈಯ್ಟ್ ಆಂಡ್ ಸೀ ಎಂದಿದ್ದಾರೆ. ಮುಂದೆನಾಗುತ್ತದೆ ಎಂಬುದರ ಬಗ್ಗೆ ಕಾದು ನೋಡುತ್ತೇವೆ. ಯಾವ ರೀತಿಯ ಪ್ರತಿಭಟನೆ ನಡೆಸುತ್ತಾರೆ ಗೊತ್ತಿಲ್ಲ. ನಾನಂತೂ ಶಾಂತವಾಗಿಯೇ ಇದ್ದೇನೆ. ನನ್ನ ಕೆಲಸವನ್ನು ನಾನು ಮಾಡಿದ್ದೇನೆ ಎಂದಿದ್ದಾರೆ.

    ಪ್ರಮೋದ್ ಮುತಾಲಿಕ್ ಅವರ ಜೊತೆ ನೆನ್ನೆ ಬಹಳ ಹೊತ್ತು ಮಾತನಾಡಿದ್ದೇನೆ. ಇರುವ ಎಲ್ಲಾ ವಿಚಾರಗಳ ಚರ್ಚೆ ನಡೆಸಿದ್ದೇನೆ. ಆದ್ರೆ ಯಾವುದಕ್ಕೂ ಮುತಾಲಿಕ್ ಕನ್ವಿನ್ಸ್ ಆಗಿಲ್ಲ. ಮಠದ ಪರ್ಯಾಯದ ಸಂದರ್ಭದಲ್ಲಿ ಬಹಳ ಮುಸ್ಲಿಮರು ದುಡಿದಿದ್ದಾರೆ. ಹೊರೆ ಕಾಣಿಕೆ ನೀಡಿದ್ದಾರೆ. ಮೆರವಣಿಗೆ ಸಾಗುವಾಗೆಲ್ಲಾ ಮಜ್ಜಿಗೆ ವಿತರಿಸಿದ್ದಾರೆ. ಉಡುಪಿ ಚಲೋ ಕಾರ್ಯಕ್ರಮ ಸಂದರ್ಭ ಕೃಷ್ಣಮಠಕ್ಕೆ ಮುತ್ತಿಗೆ ಹಾಕಲು ಡೇಟ್ ಫಿಕ್ಸಾದಾಗ ನನಗೆ ಮುಸ್ಲಿಮರು ಬೆಂಬಲ ನೀಡಿದ್ದಾರೆ. ಇಷ್ಟೆಲ್ಲಾ ಮಾಡಿದವರಿಗೆ ನಾನು ಔತಣ ನೀಡಿದ್ದೇನೆ. ಉಪಹಾರಕ್ಕೆ ಮೊದಲು ನಮಾಜ್ ಮಾಡಬೇಕೆಂದು ಸಂಪ್ರದಾಯವಿದೆ ಎಂದು ಹೇಳಿದರು. ಹೀಗಾಗಿ ಛತ್ರದಲ್ಲಿ ನಮಾಜ್ ಮಾಡಿದರು ಎಂದು ಸ್ಪಷ್ಟನೆ ನೀಡಿದರು.

    ನನ್ನ ಮನಸ್ಸಿನಲ್ಲಿರುವ ಎಲ್ಲಾ ಅಭಿಪ್ರಾಯವನ್ನು ಸರಿಯಾಗಿ ತಿಳಿಸಿದ್ದೇನೆ. ಅವರಿಗೆ ಅದು ಒಪ್ಪಿಗೆ ಆಗದಿದ್ದರೆ ನಾನೇನು ಮಾಡಲಿ? ಏನಾಗುತ್ತೆ ಮುಂದೆ ನೋಡೋಣ ಅಂತ ಹೇಳಿದರು.