Tag: rama

  • ರಾಮನನ್ನು ಕಣ್ತುಂಬಿಕೊಂಡು ಪುನೀತನಾದೆ: ರಕ್ಷಿತ್ ಬಿಚ್ಚಿಟ್ಟ ಅನುಭವ

    ರಾಮನನ್ನು ಕಣ್ತುಂಬಿಕೊಂಡು ಪುನೀತನಾದೆ: ರಕ್ಷಿತ್ ಬಿಚ್ಚಿಟ್ಟ ಅನುಭವ

    ಯೋಧ್ಯೆಗೆ ತೆರಳಿ ರಾಮನನ್ನು ಹತ್ತಿರದಿಂದ ನೋಡಬೇಕು ಎನ್ನುವುದು ನಟ ರಕ್ಷಿತ್ ಶೆಟ್ಟಿ (Rakshit Shetty) ಅವರ ಸಂಕಲ್ಪವಾಗಿತ್ತಂತೆ. ಹಾಗಾಗಿ ನಿನ್ನೆ ಸ್ನೇಹಿತರ ಜೊತೆ ಅಯೋಧ್ಯೆಗೆ ತೆರಳಿ ರಾಮನ ದರ್ಶನ ಪಡೆದಿದ್ದಾರೆ. ರಾಮನ (Rama) ಕಣ್ಣುಗಳಲ್ಲಿನ ತೇಜಸ್ಸು ಕಂಡು ಹಿರಿಹಿರಿ ಹಿಗ್ಗಿದ್ದಾರೆ. ಅದೊಂದು ಅವರ್ಣನೀಯ ಅನುಭೂತಿ ಎಂದು ರಕ್ಷಿತ್ ಬರೆದುಕೊಂಡಿದ್ದಾರೆ.

    ಕನ್ನಡದ ಶಿಲ್ಪಿ ಕೆತ್ತಿರುವ ಬಾಲರಾಮನ ವಿಗ್ರಹವನ್ನು ತದೇಕ ಚಿತ್ತದಿಂದ ನೋಡುತ್ತಾ ನಿಂತುಬಿಟ್ಟೆ. ಅವು ನಿಜವಾದ ಕಣ್ಣುಗಳು ಅನಿಸಿತು. ಜೂಮ್ ಮಾಡಿಕೊಂಡು ಹಲವಾರು ಬಾರಿ ನೋಡಿದ್ದೇನೆ. ಈ ಕಣ್ಣುಗಳನ್ನು ಹೇಗೆ ಕೆತ್ತಿದ್ದೀರಿ ಎಂದು ಶಿಲ್ಪಿಯ ಜೊತೆ ನಾನು ಮಾತನಾಡಬೇಕಿದೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

    ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದರೂ ಈ ನಡುವೆ ಅವರು ಟೆಂಪಲ್ ರನ್ ಕೂಡ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಅಲೆವೂರು ಜೋಡು ರಸ್ತೆಯಲ್ಲಿ ನಡೆದ 118ನೇ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ಅವರು ತಮ್ಮ ಮನೆಯಲ್ಲಿ ನಡೆದ ಕೋಲದಲ್ಲೂ ಭಾಗಿಯಾಗಿದ್ದರು. ಇದೀಗ ಅಯೋಧ್ಯೆಯಲ್ಲಿ (Ayodhya) ಕಾಣಿಸಿಕೊಂಡಿದ್ದಾರೆ ರಕ್ಷಿತ್.

    ಸ್ನೇಹಿತರ ಜೊತೆಗೆ ಅಯೋಧ್ಯೆಗೆ ತೆರಳಿರುವ ರಕ್ಷಿತ್, ಅಲ್ಲಿನ ರಾಮನ ದರ್ಶನ ಪಡೆದಿದ್ದಾರೆ. ಜೊತೆಗೆ ರಾಮಲಲ್ಲಾ ಮತ್ತು ಅಯೋಧ್ಯೆಯ ಕುರಿತಂತೆ ಮೆಚ್ಚುಗೆಯನ್ನೂ ವ್ಯಕ್ತ ಪಡಿಸಿದ್ದಾರೆ. ಅವರು ಅಯೋಧ್ಯೆಯಲ್ಲಿ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

     

    ರಕ್ಷಿತ್ ಶೆಟ್ಟಿ ಹೊಸ ಸಿನಿಮಾದ ಕೆಲಸದಲ್ಲಿ ತೊಡಗಿದ್ದಾರೆ. ಇದೇ ತಿಂಗಳು ಚಿತ್ರಕ್ಕೆ ಮುಹೂರ್ತ ಎಂದು ಹೇಳಲಾಗುತ್ತಿದೆ. ಹೊಂಬಾಳೆ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದೆ.

  • ರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್ ತರಬೇತಿ

    ರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್ ತರಬೇತಿ

    ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ ಇದೇ ಮೊದಲ ಬಾರಿಗೆ ಪಾತ್ರವೊಂದಕ್ಕಾಗಿ ತರಬೇತಿ ಪಡೆಯುತ್ತಿದ್ದಾರಂತೆ. ರಾಮಯಾಣ (Ramayana) ಸಿನಿಮಾದಲ್ಲಿ ಇವರು ರಾಮನ ಪಾತ್ರ ನಿರ್ವಹಿಸುತ್ತಿದ್ದು, ಈ ಪಾತ್ರಕ್ಕಾಗಿ ಹಲವು ಬಗೆಯ ತರಬೇತಿಯನ್ನು ರಣಬೀರ್ ಪಡೆದುಕೊಳ್ಳುತ್ತಿದ್ದಾರಂತೆ. ರಾಮನ ಪಾತ್ರವೆಂದರೆ, ಅದು ಸಾಮಾನ್ಯವಾದದ್ದಲ್ಲ. ಹಾಗಾಗಿ ಈ ತರಬೇತಿ ಅಗತ್ಯವಿದೆಯಂತೆ.

    ಈ ರಾಮಾಯಣ ಸಿನಿಮಾ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿದೆ. ನಿರ್ದೇಶಕ ನಿತಿಶ್ ತಿವಾರಿ ದಕ್ಷಿಣದ ಹೀರೋಗಳ ಬಗ್ಗೆ ಒಲವು ತೋರಿ, ಇಲ್ಲಿನ ಕಲಾವಿದರನ್ನು ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ (Vijay Sethupathi) ಕೂಡ ಈ ಸಿನಿಮಾದಲ್ಲಿ ರಾವಣನ ಸಹೋದರನಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ರಾವಣನ ಸಹೋದರನಾಗಿ ವಿಜಯ್ ಸೇತುಪತಿ ನಟಿಸಿದರೆ, ಈ ಹಿಂದೆ ರಾವಣನಾಗಿ (Raavan) ಕನ್ನಡದ ನಟ ಯಶ್ (Yash) ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಸಾಕಷ್ಟು ಬಾರಿ ಈ ವಿಚಾರ ಮುನ್ನೆಲೆಗೆ ಬಂದರೂ, ಯಶ್ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಈ ಸುದ್ದಿ ಹರಿದಾಡುವುದು ತಪ್ಪಿಲ್ಲ.

    ಯಶ್ ಏನೂ ಹೇಳದೇ ಇದ್ದರೂ, ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಮಧು ಮಾಂಟೇನ್ ಅವರು ಯಶ್ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದರು. ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದೂ ಮಾತನಾಡಿದ್ದರು. ಅದು ಈಗ ನಿಜವಾದಂತೆ ಕಾಣುತ್ತಿದೆ. ಈಗಾಗಲೇ ಯಶ್ ಲುಕ್ ಟೆಸ್ಟ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಸಿನಿಮಾಗಾಗಿ ಅವರು 15 ದಿನಗಳ ಕಾಲ ಕಾಲ್ ಶೀಟ್ ಕೂಡ ನೀಡಿದ್ದಾರೆ ಎನ್ನುವುದು ತಾಜಾ ಮಾಹಿತಿ.

    ನಿತಿಶ್ ತಿವಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಸತತ ಮೂರ್ನಾಲ್ಕು ವರ್ಷಗಳಿಂದ ಈ ಚಿತ್ರಕ್ಕಾಗಿ ತಿವಾರಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 2024ರಲ್ಲಿ ಈ ಸಿನಿಮಾ ಸೆಟ್ಟೇರಬಹುದು ಎಂದು ಅಂದಾಜಿಸಲಾಗಿದೆ. ರಾವಣನಾಗಿ ಯಶ್ ನಟಿಸಿದರೆ, ಶ್ರೀರಾಮನ ಪಾತ್ರವನ್ನು ರಣಬೀರ್ ಕಪೂರ್  (Ranbir Kapoor) ನಿರ್ವಹಿಸಲಿದ್ದಾರೆ. ಸೀತೆ ಪಾತ್ರವು ಸಾಯಿ ಪಲ್ಲವಿ (Sai Pallavi)ಅವರ ಪಾಲಾಗಿದೆ.

     

    ಸದ್ಯ ಯಶ್ ಹೊಸ ಸಿನಿಮಾದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಅಲ್ಲದೇ ದೇಶ ವಿದೇಶ ಸುತ್ತುತ್ತಿದ್ದಾರೆ. ಸದ್ಯದಲ್ಲೇ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ. ರಾಮಾಯಣ ಸಿನಿಮಾ ಶುರುವಾಗುವ ಹೊತ್ತಿಗೆ ಹೊಸ ಸಿನಿಮಾದ ಬಹುತೇಕ ಕೆಲಸ ಮುಗಿಯುವ ಸಾಧ್ಯತೆ ಇದ್ದು, ಅದಕ್ಕಾಗಿ ಈ ಸಿನಿಮಾವನ್ನು ಯಶ್ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

  • ಬೆಂಗ್ಳೂರಲ್ಲಿ ಧರೆಗುರುಳಿದ 40 ಅಡಿಯ ರಾಮನ ಬೃಹತ್ ಕಟೌಟ್!

    ಬೆಂಗ್ಳೂರಲ್ಲಿ ಧರೆಗುರುಳಿದ 40 ಅಡಿಯ ರಾಮನ ಬೃಹತ್ ಕಟೌಟ್!

    ಬೆಂಗಳೂರು: 40 ಅಡಿಯ ರಾಮನ ಕಟೌಟ್ (Rama Cutout) ಧರೆಗುರುಳಿದ ಘಟನೆ ಬೆಂಗಳೂರಿನ ನಂದಿನಿ ಲೇ ಔಟ್ (Nandini Lay Out) ಕೃಷ್ಣಾನಂದ ನಗರ ಸರ್ಕಲ್ ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

    ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ (Ayodhya Pran Prathistha ceremony) ಹಿನ್ನೆಲೆಯಲ್ಲಿ ರಾಮನ ಈ ಬೃಹತ್ ಕಟೌಟ್ ನಿಲ್ಲಿಸಲಾಗಿತ್ತು. ಆ ಬಳಿಕ ಬಿಬಿಎಂಪಿ ತೆರವು ಮಾಡಿರಲಿಲ್ಲ. ಅದೃಷ್ಟವಶಾತ್ ಕಟೌಟ್ ಬೀಳೋ ವೇಳೆ ಯಾವುದೇ ವಾಹನಗಳು ಸಂಚರಿಸಿಲ್ಲ. ಹೀಗಾಗಿ ಭಾರೀ ದುರಂತವೊಂದು ತಪ್ಪಿದೆ.

    ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಗಾಳಿಗೆ ಬಿದ್ದಿರೋ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ಕೃಷ್ಣಶಿಲೆಯ ಬಾಲರಾಮನ ಎದುರು ಸೋತ ವೈಟ್ ಮಾರ್ಬಲ್ ಬಾಲರಾಮನ ಲುಕ್ ಹೇಗಿದೆ?

    ಮೂರು ದಿನದಿಂದ ನಿಲ್ಲಿಸಿದ್ದ ಕಟೌಟ್ ಏಕಾಏಕಿ ಗಾಳಿಗೆ ಬಿದ್ದಿರುವುದರಿಂದ ಸ್ಥಳೀಯರಲ್ಲಿ ಅನುಮಾನ ಉಂಟಾಗಿದೆ. ಬೇಕುಂತಲೇ ಕಟೌಟ್ ಕಡೆವಿದ್ದಾರಾ ಅನ್ನೋ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿದ್ದ ಸಿಸಿ ಕ್ಯಾಮರಾಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಜೊತೆಗೆ ಕಟೌಟ್ ಹಾಕಿದ್ದವರು ಯಾರು?, ಕಟೌಟ್ ಹಾಕಲು ಅನುಮತಿ ಪಡೆದಿದ್ದರಾ ಅಂತಾನೂ ಪರಿಶೀಲನೆ ನಡೆಸುತ್ತಿದ್ದಾರೆ.

  • ಅಯೋಧ್ಯೆಯಲ್ಲಿ ಮಿಂಚಿದ ಆಲಿಯಾ ಭಟ್ : ಸೀರೆ ಮೇಲೆ ಅಭಿಮಾನಿಗಳ ಕಣ್ಣು

    ಅಯೋಧ್ಯೆಯಲ್ಲಿ ಮಿಂಚಿದ ಆಲಿಯಾ ಭಟ್ : ಸೀರೆ ಮೇಲೆ ಅಭಿಮಾನಿಗಳ ಕಣ್ಣು

    ನಿನ್ನ ಅಯೋಧ್ಯಯಲ್ಲಿ ನಡೆದ ರಾಮನ ಪ್ರಾಣ ಪತ್ರಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೇಶದ ನಾನಾ ಭಾಗಗಳಲ್ಲಿ ಕಲಾವಿದರು, ಗಣ್ಯರು ಆಗಮಿಸಿದ್ದರು. ನಾನಾ ಸಿನಿಮಾ ರಂಗದ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು. ಇವರೆಲ್ಲರ ಪೈಕಿ ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಸಖತ್ ವೈರಲ್ ಆಗಿದ್ದಾರೆ. ಅವರ ಧರಿಸಿದ್ದ ಸೀರೆ ಈಗ ರಾಮನ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

    ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಯೋಧ್ಯಗೆ ಬಂದಿದ್ದ ಆಲಿಯಾ ಭಟ್, ಹನುಮಾನ್, ಭಗವಾನ್ ರಾಮ ಹಾಗೂ ರಾಮಸೇತು ಚಿತ್ರಗಳನ್ನು ಇರುವಂತಹ ಸೀರೆಯನ್ನು ಅವರು ಧರಿಸಿದ್ದರು. ಈ ಸೀರೆ ಈಗ ರಾಮನ ಅಭಿಮಾನಿಗಳನ್ನು ಸೆಳೆದಿದೆ. ಆಲಿಯಾ ಭಟ್ ಅವರ ರಾಮನ ಬಗೆಗಿನ ಭಕ್ತಿಯನ್ನು ಎಲ್ಲರೂ ಕೊಂಡಾಡಿದ್ದಾರೆ.

    ಒಂದು ಕಡೆ ಆಲಿಯಾ ವೈರಲ್ ಆಗುತ್ತಿದ್ದರೆ, ಮತ್ತೊಂದು ಕಡೆ ಕನ್ನಡದಿಂದ ಹೋಗಿದ್ದ ರಿಷಬ್ ಶೆಟ್ಟಿ ಮತ್ತು ಪತ್ನಿ ಫೋಟೋಗಳನ್ನು ಅವರ ಅಭಿಮಾನಿಗಳು ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ (Rishab Shetty) ಅವರು ನಿನ್ನೆ ನಡೆದ (ಜ.22) ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪತ್ನಿ ಪ್ರಗತಿ ಜೊತೆ ಭಾಗಿಯಾಗಿದ್ದಾರೆ. ಈ ಕುರಿತ ಸುಂದರ ಫೋಟೋವನ್ನು ರಿಷಬ್ ಹಂಚಿಕೊಂಡಿದ್ದಾರೆ.

    500 ವರ್ಷಗಳ ನಂತರ ಎಲ್ಲರ ಕನಸು ನನಸಾಗಿದೆ. ಇಂದು ಅಯೋಧ್ಯೆಯ (Ayodhya) ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಈ ಸಂಭ್ರಮದಲ್ಲಿ ಭಾಗಿಯಾಗಿರೋದಕ್ಕೆ ರಿಷಬ್ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

     

    ಶ್ರೀರಾಮಚಂದ್ರನ ಜನ್ಮಸ್ಥಳದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದಲ್ಲಿ ಎಂದು ಶೀರ್ಷಿಕೆ ಕೊಟ್ಟು ರಾಮಮಂದಿರದ ಮುಂದೆ ನಿಂತು ಪತ್ನಿ ಪ್ರಗತಿ ಜೊತೆ ರಿಷಬ್ ಶೆಟ್ಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ವೇಳೆ, ರಿಷಬ್ ದಂಪತಿ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಕೂಡ ಭೇಟಿಯಾಗಿದ್ದಾರೆ.

  • ಅಯೋಧ್ಯೆಯಲ್ಲಿ ತಾರಾ ದಂಡು: ಭಾಗಿಯಾದವರು ಯಾರೆಲ್ಲ?

    ಅಯೋಧ್ಯೆಯಲ್ಲಿ ತಾರಾ ದಂಡು: ಭಾಗಿಯಾದವರು ಯಾರೆಲ್ಲ?

    ಇಂದು ಶ್ರೀರಾಮಲಲ್ಲಾ (Ramlalla) ಪ್ರಾಣಪ್ರತಿಷ್ಠಾಪನೆಗೆ ಕೆಲವೇ ಗಂಟೆ ಬಾಕಿ ಇದೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ (Ayodhya) ಭಾರತೀಯ ಸಿನಿಮಾ ರಂಗದ ಅನೇಕ ತಾರೆಯರು ಭಾಗಿಯಾಗಿದ್ದಾರೆ.

    ಈಗಾಗಲೇ ಕನ್ನಡದ ಹೆಸರಾಂತ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishabh Shetty), ಅನಿಲ್ ಕುಮಾರ ಸ್ವಾಮಿ, ಬಾಲಿವುಡ್ ಖ್ಯಾತ ನಟ ಅಮಿತಾಬ್‌ ಬಚ್ಚನ್‌, ತೆಲುಗು ನಟರಾದ ಚಿರಂಜೀವಿ, ರಾಮ್‌ಚರಣ್, ಪವನ್‌ ಕಲ್ಯಾಣ್‌ ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ತ್‌, ಕತ್ರಿನಾ ಕೈಫ್‌ ಸೇರಿದಂತೆ ಅನೇಕ ನಟ ನಟಿಯರು ಅಯೋಧ್ಯೆಗೆ ಆಗಮಿಸಿದ್ದಾರೆ.

    ಕೇವಲ ಸಿನಿಮಾ ನಟರು ಮಾತ್ರವಲ್ಲ, ಕ್ರೀಡಾ ತಾರೆ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ವೆಂಕಟೇಶ್‌ ಪ್ರಸಾದ್‌, ಆರ್‌.ಅಶ್ವಿನ್‌, ಸೈನಾ ನೆಹ್ವಾಲ್‌ ಸೇರಿದಂತೆ ಅನೇಕರು ಅಯೋಧ್ಯೆಗೆ ಆಗಮಿಸಿದ್ದು, ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

     

    ಅಯೋಧ್ಯೆಯಲ್ಲಿಂದು ಮೋದಿ:
    ಬೆಳಗ್ಗೆ 10.25: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ
    ಬೆಳಗ್ಗೆ 10.55: ರಾಮಜನ್ಮಭೂಮಿ ಆವರಣ ತಲುಪಲಿರುವ ಹೆಲಿಕಾಪ್ಟರ್‌
    ಬೆಳಗ್ಗೆ 11 ರಿಂದ ಮಧ್ಯಾಹ್ನ 12: ರಾಮಮಂದಿರದ ವೀಕ್ಷಣೆ ಮಾಡಲಿರುವ ಪ್ರಧಾನಿ
    ಮಧ್ಯಾಹ್ನ 12.05-12.55: ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಮೋದಿ. ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ.
    ಮಧ್ಯಾಹ್ನ 1-2: ನರೇಂದ್ರ ಮೋದಿ, ಮೋಹನ್‌ ಭಾಗವತ್‌, ಯೋಗಿ ಆದಿತ್ಯನಾಥ್‌ ಸಾರ್ವಜನಿಕ ಭಾಷಣ
    ಮಧ್ಯಾಹ್ನ 2.10: ರಾಮಜನ್ಮಭೂಮಿ ಆವರಣದಲ್ಲಿರುವ ಶಿವ ಮಂದಿರಕ್ಕೆ ಭೇಟಿ, ವಿಶೇಷ ಪ್ರಾರ್ಥನೆ
    ಮಧ್ಯಾಹ್ನ 3.30: ಅಯೋಧ್ಯೆಯಿಂದ ಪ್ರಧಾನಿ ನಿರ್ಗಮನ

  • ಅಯೋಧ್ಯೆಯ ಬಾಲರಾಮನ ವಿಗ್ರಹದ ವಿಶೇಷತೆ ಏನು..?

    ಅಯೋಧ್ಯೆಯ ಬಾಲರಾಮನ ವಿಗ್ರಹದ ವಿಶೇಷತೆ ಏನು..?

    ಅಯೋಧ್ಯೆ: ರಾಮಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ. ನಿನ್ನೆಯಷ್ಟೇ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಬೆನ್ನಲ್ಲೇ ಇಂದು ಪೂರ್ಣರೂಪದ ಬಾಲರಾಮನದ ದರ್ಶನವಾಗಿದೆ. ಬಾಲರಾಮನ ಸಂಪೂರ್ಣ ವಿಗ್ರಹವನ್ನು ತೋರಿಸುವ ಫೋಟೋ ಹಂಚಿಕೊಳ್ಳಲಾಗಿದ್ದು, ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

    ಇಂದು ಬಾಲರಾಮನ ವಿಗ್ರಹದ  ಫೋಟೋ ಹೊರಬೀಳುತ್ತಿದ್ದಂತೆಯೇ ರಾಮಭಕ್ತರು ತಮ್ಮ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಜೈ ಶ್ರೀ ರಾಮ್‌ ಎಂದು ಬರೆದುಕೊಂಡರು. ಹಾಗಿದ್ರೆ ಈ ವಿಗ್ರಹದಲ್ಲಿ ಏನೇನು ವಿಶೇಷತೆಗಳು ಇವೆ ಎಂಬುದನ್ನು ನೋಡೋಣ. ಇದನ್ನೂ ಓದಿ; ಅರುಣ್‌ ಕಣ್ಣು ಕಳೆದುಕೊಳ್ಳಬೇಕಿತ್ತು, 15 ದಿನ ಒಂದೇ ಕಣ್ಣಿನಲ್ಲಿ ನೋಡಿಕೊಂಡು ಶಿಲ್ಪ ಕೆತ್ತನೆ ಮಾಡಿದ್ದಾರೆ: ಅರುಣ್ ಯೋಗಿರಾಜ್ ಪತ್ನಿ

    https://twitter.com/publictvnews/status/1748320630792229332

    ಬಾಲರಾಮನ ವಿಗ್ರಹದ ವಿಶೇಷತೆ?: 51 ಇಂಚು ಎತ್ತರವಿರುವ ಮಂದಸ್ಮಿತ ಮುಖ ಹೊಂದಿರುವ ರಾಮನ ಮೂರ್ತಿಯು ಬಲಗೈಯಲ್ಲಿ ಬಾಣ, ಎಡಗೈಯಲ್ಲಿ ಬಿಲ್ಲು ಹಿಡಿದಿರುವ ಭಂಗಿಯಲ್ಲಿದೆ. ಬಾಲರಾಮನ ಹಣೆಯ ಮೇಲೆ ತಿಲಕವಿದೆ. ಬಾಲರಾಮ‌ನ ಮೂರ್ತಿಯ ಮೇಲ್ಬಾಗ ಸೂರ್ಯ ವಂಶದ ಶ್ರೀರಾಮಚಂದ್ರನನ್ನು ಬಿಂಬಿಸುವಂತಹ ಸೂರ್ಯದೇವರ ಕೆತ್ತನೆ ಮಾಡಲಾಗಿದೆ. ಬಾಲ ರಾಮನ ಮೂರ್ತಿ ಚಂದ್ರನ ನಾಚಿಸುವಷ್ಟು ಕಾಂತಿ ಅದ್ಭುತ ಕಳೆಯಲ್ಲಿದೆ.

    ಬಾಲರಾಮನ ಕಿರೀಟದ ಮೇಲೆ ನರಸಿಂಹ ದೇವರ ಕೆತ್ತನೆ ಇದೆ. ದಶವತಾರ ಬಿಂಬಿಸುವ ಮತ್ಸ್ಯ, ಕೂರ್ಮ, ವರಾಹ, ವಾಮನ, ಕೃಷ್ಣ, ಕಲ್ಕಿ, ಬುದ್ಧ, ಪರಶುರಾಮ, ಬ್ರಹ್ಮ, ಓಂ, ಆದಿಶೇಷ, ಚಕ್ರ ಹಾಗೂ ಈಶ್ವರ ಬಲಭಾಗದಲ್ಲಿದ್ದಾನೆ. ಇನ್ನು ಬಾಲರಾಮನ ಎಡಗಡೆ ಹಾಗೂ ಮೇಲ್ಗಡೆ ಶಂಕ, ಗಧೆ, ಸ್ವಸ್ತಿಕ್‌, ವಿಷ್ಣು, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕ್ಲಕಿ, ಹಾಗೂ ನೆತ್ತಿನ ಮೇಲೆ ಸೂರ್ಯನಿದ್ದಾನೆ.

    ಬಿಳಿ ಬಟ್ಟೆಯಿಂದ ವಿಗ್ರಹವನ್ನು ಮುಚ್ಚಲಾಗಿತ್ತು: ಇದಕ್ಕೂ ಮುನ್ನ ರಾಮಲಲ್ಲಾ ವಿಗ್ರಹದ ಚಿತ್ರಗಳು ಹೊರಬಿದ್ದಿದ್ದವು. ಅದರಲ್ಲಿ ವಿಗ್ರಹವನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿತ್ತು. ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್ ಕೆತ್ತಿದ 51 ಇಂಚಿನ ರಾಮಲಲ್ಲಾ ವಿಗ್ರಹವನ್ನು ಗುರುವಾರ ಮುಂಜಾನೆ ದೇವಸ್ಥಾನಕ್ಕೆ ತರಲಾಯಿತು. ಅರ್ಚಕ ಅರುಣ್ ದೀಕ್ಷಿತ್ ಅವರು ರಾಮಲಲ್ಲಾ ವಿಗ್ರಹವನ್ನು ಗುರುವಾರ ಮಧ್ಯಾಹ್ನ ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

    ಜನವರಿ 22 ರಂದು ಬಾಲರಾಮನ ಪ್ರಣ ಪ್ರತಿಷ್ಠೆ ನಡೆಯಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಉಡುಪಿ ಪೇಜಾವರ ಮಠದ ಟ್ರಸ್ಟಿ ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ. ಭದ್ರತೆಯ ಕಾರಣದಿಂದ ಈ ದಿನದಂದು ಆಹ್ವಾನಿತ ಅತಿಥಿಗಳಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು. ಜನವರಿ 22 ರಂದು ರಾಮ ಮಂದಿರದಲ್ಲಿ ‘ಪ್ರಾಣ ಪ್ರ ತಿಷ್ಠಾ’ ಸಮಾರಂಭದ ನಂತರ, ದೇವಾಲಯವನ್ನು ಮರುದಿನ ಸಾರ್ವಜನಿಕರಿಗೆ ತೆರೆಯುವ ನಿರೀಕ್ಷೆಯಿದೆ.

  • 51 ಇಂಚು ಎತ್ತರ, 1.5 ಟನ್ ತೂಕ ಇರಲಿದೆ ಅಯೋಧ್ಯೆ ರಾಮನ ವಿಗ್ರಹ

    51 ಇಂಚು ಎತ್ತರ, 1.5 ಟನ್ ತೂಕ ಇರಲಿದೆ ಅಯೋಧ್ಯೆ ರಾಮನ ವಿಗ್ರಹ

    ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಲೋಕಾರ್ಪಣೆಗೆ ಕೆಲವೇ ದಿನಗಳಿದ್ದು, ಈ ಹಿನ್ನೆಲೆಯಲ್ಲಿ ಸದ್ಯ ರಾಮಜನ್ಮಭೂಮಿಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ರಾಮನ ವಿಗ್ರಹವು 51 ಇಂಚು ಎತ್ತರ ಇರಲಿದ್ದು, ಬರೋಬ್ಬರಿ 1.5 ಟನ್‌ ತೂಕ ಹೊಂದಿದೆ ಎಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ 4 ದಿನ ಮುನ್ನ ಅಂದರೆ ಜ.18 ರಂದೇ ಗರ್ಭಗುಡಿಗೆ ಶ್ರೀರಾಮನ ಪ್ರವೇಶ ಆಗಲಿದೆ. ಅಲ್ಲದೆ ರಾಮನ ಕಪ್ಪು ಬಣ್ಣದ ವಿಗ್ರಹವು 51 ಇಂಚು ಎತ್ತರ, 1.5 ಟನ್ ತೂಕ ಹೊಂದಿದೆ. ಮುಖ 5 ವರ್ಷದ ಮಗುವಿನಷ್ಟೇ ಮುಗ್ಧತೆಯನ್ನು ಹೊಂದಿದೆ. ಪ್ರತಿ ವರ್ಷ ರಾಮ ನವಮಿಯಂದು ಚೈತ್ರ ಮಾಸದ ಶುಕ್ಲ ಪಕ್ಷದ 9ನೇ ತಾರೀಖಿನಂದು ಮಧ್ಯಾಹ್ನ 12 ಗಂಟೆಗೆ ಸೂರ್ಯ ಸ್ವತಃ ತನ್ನ ಕಿರಣಗಳ ಮೂಲಕ ಶ್ರೀರಾಮನ ಹಣೆಯನ್ನು ಸ್ಪರ್ಶಿಸಲಿದ್ದಾನೆ ಎಂದು ಅವರು ವಿವರಿಸಿದರು.

    ಜ.16 ರಿಂದ ಪ್ರತಿಷ್ಠಾಪನೆಯ ಪೂಜಾ ವಿಧಿವಿಧಾನಗಳು ಪ್ರಾರಂಭವಾಗಲಿವೆ. ಜ.18 ರಂದು ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹ ಇರಿಸಲಾಗುವುದು. ಭಾರತದ ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿಗಳ ಸಲಹೆಯ ಮೇರೆಗೆ ಭಗವಾನ್ ಶ್ರೀರಾಮನ ವಿಗ್ರಹದ ಉದ್ದ ಮತ್ತು ಅದರ ಸ್ಥಾಪನೆಯ ಎತ್ತರವನ್ನು ವಿನ್ಯಾಸಗೊಳಿಸಲಾಗಿದೆ. ಮೂವರು ಶಿಲ್ಪಿಗಳು ಶ್ರೀರಾಮನ ವಿಗ್ರಹವನ್ನು ಪ್ರತ್ಯೇಕವಾಗಿ ತಯಾರಿಸಿದ್ದು, ಅದರಲ್ಲಿ 1.5 ಟನ್ ತೂಕದ ಮತ್ತು ಪಾದದಿಂದ ಹಣೆಯವರೆಗೆ 51 ಇಂಚು ಉದ್ದದ ಒಂದು ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. ಮುಖದ ಮೃದುತ್ವ, ಕಣ್ಣುಗಳಲ್ಲಿನ ನೋಟ, ನಗು, ದೇಹ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಕಪ್ಪು ಶಿಲೆಯ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. ಪ್ರತಿಮೆಯ ಮೇಲೆ ತಲೆ, ಕಿರೀಟವನ್ನು ಸಹ ಉತ್ತಮವಾಗಿ ರಚಿಸಲಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: Ram Mandir; ರಾಮಮಂದಿರ ಉದ್ಘಾಟನೆಯ ಕೇಂದ್ರಬಿಂದು ಗರ್ಭಗುಡಿ ವಿಶೇಷತೆ ನಿಮಗೆಷ್ಟು ಗೊತ್ತು?

    ನೀರು ಹಾಗೂ ಪಂಚಾಮೃತ ಅಭಿಷೇಕ ಮಾಡಿದರೂ ವಿಗ್ರಹದ ಕಲ್ಲಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಅಲ್ಲದೆ ವಿಗ್ರಹದ ಅಭಿಷೇಕದಿಂದ ತೆಗೆದ ತೀರ್ಥ ಹಾಗೂ ಪಂಚಾಮೃತ ಸೇವಿಸಿದರೆ ಯಾರ ದೇಹದ ಮೇಲೂ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ರಾಯ್ ಸ್ಪಷ್ಟಪಡಿಸಿದರು.

  • ರಾಮನನ್ನು ಬಿಜೆಪಿ ದೊಡ್ಡ ಅಸ್ತ್ರ ಮಾಡ್ಕೊಂಡು ಜನರ ಭಾವನೆ ಕೆರಳಿಸ್ತಿದೆ: ವೆಂಕಟೇಶ್

    ರಾಮನನ್ನು ಬಿಜೆಪಿ ದೊಡ್ಡ ಅಸ್ತ್ರ ಮಾಡ್ಕೊಂಡು ಜನರ ಭಾವನೆ ಕೆರಳಿಸ್ತಿದೆ: ವೆಂಕಟೇಶ್

    ಚಾಮರಾಜನಗರ: ರಾಮನನ್ನು ಬಿಜೆಪಿಯವರು (BJP) ದೊಡ್ಡ ಅಸ್ತ್ರ ಮಾಡಿಕೊಂಡು ಜನರ ಭಾವನೆ ಕೆರಳಿಸುತ್ತಿದ್ದಾರೆ ಎಂದು ರೇಷ್ಮೆ ಹಾಗೂ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ (K. Venkatesh) ಆರೋಪಿಸಿದರು.

    ಚಾಮರಾಜನಗರ (Chamarajanagar) ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಅವರು, ರಾಮನ ಮೇಲೆ ನಮ್ಮ ಅಭ್ಯಂತರವಿಲ್ಲ.ನಮ್ಮ ಅಭ್ಯಂತರ ಇರೋದು ಬಿಜೆಪಿ ನಡವಳಿಕೆ ಮೇಲೆ. ರಾಮಮಂದಿರ ನಿರ್ಮಾಣದ ಬಗ್ಗೆ ನಮ್ಮ ತಕರಾರಿಲ್ಲ, ಆದರೆ ರಾಮ ನಮ್ಮವನೇ ಅಂತಾ ಬಿಜೆಪಿಯವರು ಹೇಳುವ ವಿಚಾರದಲ್ಲಿ ನಮ್ಮ ತಕರಾರಿದೆ, ಆಕ್ರೋಶ ಇದೆ ಎಂದರು.

    ಎಲ್ಲರಿಗೂ ಬೇಕಾದವನು ರಾಮ, ಹನುಮಂತ, ಸೀತೆಯನ್ನು ಎಲ್ಲರೂ ಪೂಜೆ ಮಾಡ್ತಾರೆ. ಅದರೆ ಬಿಜೆಪಿಯವರು ರಾಮ ತಮಗೆ ಸೇರಿದವನೆಂದು ಪ್ರತಿಬಿಂಬಿಸುತ್ತಿದ್ದಾರೆ. ಇದು ಸರಿಯಾದ ವರ್ತನೆಯಲ್ಲ. ಆ ದೃಷ್ಟಿಯಿಂದ ಸಿದ್ದರಾಮಯ್ಯ ನಮ್ಮ ನಾಯಕರು. ಆದ್ದರಿಂದ ರಾಮ ನಮ್ಮಲ್ಲಿ ಇದ್ದಾರೆಂದು ಮಾಜಿ ಸಚಿವ ಆಂಜನೇಯ ಹೇಳಿದ್ದಾರಷ್ಟೇ. ರಾಮನನ್ನು ತುಚ್ಛೀಕರಿಸುವ ರೀತಿ ಅವರು ಹೇಳಿಲ್ಲ ಎಂದು ಅವರು ಮಾಜಿ ಸಚಿವ ಆಂಜನೇಯ ಹೇಳಿಕೆ ಸಮರ್ಥಿಸಿಕೊಂಡರು. ಇದನ್ನೂ ಓದಿ: ನಿಮಗೆ ತಾಕತ್ ಇದ್ದರೆ ಕರಸೇವಕರನ್ನು ಬಂಧಿಸಿ: ಸಿಎಂ ವಿರುದ್ಧ ಸುನೀಲ್ ಕುಮಾರ್ ಕಿಡಿ

    ರಾಮಮಂದಿರ (Ram Mandir) ನಮ್ಮದೇ ಎಂದು ಬಿಜೆಪಿ ಬಿಂಬಿಸಿಕೊಳ್ಳುವುದು ಬೇಸರದ ಸಂಗತಿ. ಅಯೋಧ್ಯೆ ವಿಚಾರ ಬಿಟ್ಟು ಇವರಿಗೆ ಬೇರೆ ಏನೂ ಇಲ್ಲ. ಈ ದೇಶದ ಸಮಸ್ಯೆ ಬಗ್ಗೆ ಯಾರೂ ಮಾತಾಡ್ತಿಲ್ಲ. ಕುಡಿಯುವ ನೀರು, ಮನೆಯಿಲ್ಲದವರು ಈ ದೇಶದಲ್ಲಿ ಎಷ್ಟೋ ಜನರಿದ್ದಾರೆ. ಮೋದಿ ಅವರಿಗೆ ಇದೆಲ್ಲಾ ಏನೂ ಗೊತ್ತಾಗಲ್ಲ. ವರ್ಷದಲ್ಲಿ ಆರು ತಿಂಗಳು ಫಾರಿನ್ ಗೆ ಸುತ್ತುತ್ತಾರೆ. ಎಲ್ಲೋ ಒಂದು ಕಡೆ ಬಂದು ಭಾಷಣ ಮಾಡಿ ಹೋಗ್ತಾರೆ. ಬಿಹಾರ, ಮಧ್ಯಪ್ರದೇಶ, ಯುಪಿಯ ಹಳ್ಳಿಗಳಿಗೆ ಹೋಗಿ ನೋಡಿದ್ರೆ ಜನರ ಪರಿಸ್ಥಿತಿ ತಿಳಿಯುತ್ತೆ ಎಂದು ಸಚಿವ ಕೆ ವೆಂಕಟೇಶ್ ಹೇಳಿದರು.

  • ಅಯೋಧ್ಯೆಗೆ ಹೋಗಲು ಹಿಂದೇಟು ಹಾಕ್ತಿದ್ದವರು ಈಗ ಆಹ್ವಾನ ಬಯಸ್ತಿದ್ದಾರೆ: ಯೋಗಿ ಆದಿತ್ಯನಾಥ್‌

    ಅಯೋಧ್ಯೆಗೆ ಹೋಗಲು ಹಿಂದೇಟು ಹಾಕ್ತಿದ್ದವರು ಈಗ ಆಹ್ವಾನ ಬಯಸ್ತಿದ್ದಾರೆ: ಯೋಗಿ ಆದಿತ್ಯನಾಥ್‌

    ಲಕ್ನೋ: ಈ ಹಿಂದೆ ಅಯೋಧ್ಯೆಗೆ ಹೋಗಲು ಹಿಂದೇಟು ಹಾಕುತ್ತಿದ್ದವರು ಇದೀಗ ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ಬಯಸುತ್ತಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಹೇಳಿದ್ದಾರೆ.

    ಮಥುರಾದಲ್ಲಿ (Mathura) ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಒಂದು ಕಾಲದಲ್ಲಿ ಅಯೋಧ್ಯೆಗೆ ಹೋಗಲು ಹಿಂದೇಟು ಹಾಕುತ್ತಿದ್ದ ಜನ ಈಗ ಜನವರಿ 22 ರಂದು ರಾಮಮಂದಿರ (Ram Mandir) ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಕೆಲವರು ದೂರುತ್ತಿದ್ದಾರೆ ಎಂದು ಟಾಂಗ್‌ ನೀಡಿದರು.

    ಇದೇ ವೇಳೆ ಸಿಎಂ ಅವರು, ಬಿಜೆಪಿ (BJP) ಸರ್ಕಾರದ ಆಡಳಿತದಲ್ಲಿ ದೇವಸ್ಥಾನದ ಸುತ್ತಮುತ್ತ ಆಗಿರುವ ಬೃಹತ್ ಅಭಿವೃದ್ಧಿಯನ್ನು ವಿವರಿಸಿದರು. ಈ ಹಿಂದೆ ರಸ್ತೆಗಳು ಕೂಡ ಕಳಪೆ ಸ್ಥಿತಿಯಲ್ಲಿದ್ದು, ನಗರಕ್ಕೆ ಸಂಪರ್ಕ ಕಲ್ಪಿಸುವ ಒಂದೇ ರೈಲು ಮಾರ್ಗವಿತ್ತು. ಆದರೆ ಈಗ ಎಲ್ಲಾ ಕಡೆಯಿಂದ ನಾಲ್ಕು ಪಥದ ಸಂಪರ್ಕವಿದೆ. ಜನವರಿ 22 ರ ನಂತರ ಅಯೋಧ್ಯೆಗೆ ಭೇಟಿ ನೀಡುವುದು ತ್ರೇತಾ ಯುಗವನ್ನು ನೆನಪಿಸುತ್ತದೆ ಎಂದರು. ಇದನ್ನೂ ಓದಿ: ಇದು ಇಡೀ ಭಾರತದ ಶ್ರೇಷ್ಠ ಕ್ಷಣ – ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಆಹ್ವಾನ ಪಡೆದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ

    ಸಾವಿರಾರು ವರ್ಷಗಳ ಹಿಂದೆ ರಾಮನು ಪುಷ್ಪಕ ವಿಮಾನದಿಂದ (Pushpak Viman) ಅಯೋಧ್ಯೆಗೆ ಬಂದನು ಎಂದು ಹೇಳಲಾಗುತ್ತಿದೆ. ಅಂತೆಯೇ ಈಗಾಗಲೇ ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಹ ಉದ್ಘಾಟಿಸಲಾಗಿದೆ. ರೈಲು ಮಾರ್ಗವನ್ನು ಡಬಲ್ ಲೈನ್‌ನೊಂದಿಗೆ ಸಂಪರ್ಕಿಸಲಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಅಯೋಧ್ಯೆ ಮತ್ತು ಸುತ್ತಮುತ್ತ ಇನ್ನೂ 5-6 ಹೊಸ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಿಎಂ ಹೇಳಿದರು.

    ಅಯೋಧ್ಯೆಯನ್ನು ಜಲಮಾರ್ಗದ ಮೂಲಕವೂ ಸಂಪರ್ಕಿಸಲು ಸರ್ಕಾರ ಹಲವು ಪ್ರಯತ್ನಗಳನ್ನು ಪ್ರಾರಂಭಿಸಿದೆ ಎಂದು ಅವರು ಇದೇ ವೇಳೆ ಹೇಳಿದರು.

  • ರಾಮನ ಹೆಸರು ಇಟ್ಟುಕೊಂಡಿರೋ ಸಿದ್ದರಾಮಯ್ಯಗೆ ಒಳ್ಳೆಯದಾಗಲಿ: ಮಂತ್ರಾಲಯ ಶ್ರೀ

    ರಾಮನ ಹೆಸರು ಇಟ್ಟುಕೊಂಡಿರೋ ಸಿದ್ದರಾಮಯ್ಯಗೆ ಒಳ್ಳೆಯದಾಗಲಿ: ಮಂತ್ರಾಲಯ ಶ್ರೀ

    ರಾಯಚೂರು: ರಾಮನ ಹೋಲಿಕೆಯನ್ನು ಇನ್ನೊಬ್ಬರಿಗೆ ಹೋಲಿಸುವಂತದ್ದಲ್ಲಾ, ರಾಮನ ಹೆಸರನ್ನ ಸಿದ್ದರಾಮಯ್ಯ ಇಟ್ಟುಕೊಂಡಿದ್ದಾರೆ. ಆದ್ದರಿಂದ ರಾಮನ ಆದರ್ಶ ಹಾಗೂ ರಾಮನ ಜನಾನುರಾಗ ಸಿದ್ದರಾಮಯ್ಯನು (Siddaramaiah) ಸಹ ಪಡೆಯಲಿ. ಅವರಿಗೂ ನಾವು ಅಭಿನಂದಿಸೋಣ ಅಂತ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮಿ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಮಂತ್ರಾಲಯ (Mantralaya) ಶ್ರೀಗಳು, ಸಿಎಂ ಸಿದ್ದರಾಮಯ್ಯರನ್ನ ರಾಮನಿಗೆ ಹೋಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರು ಯಾವ ಹೇಳಿಕೆ ಕೊಟ್ಟಿದ್ದಾರೆ ನಾನು ಗಮನಿಸಿಲ್ಲ. ರಾಮ ಎಲ್ಲ ರೀತಿಯಿಂದಲೂ ಅನುಕರಣೀಯ ಹಾಗೂ ಆದರ್ಶ ವ್ಯಕ್ತಿ. ನೀನು ಹೇಗಿರಬೇಕು ಅಂತ ಹೇಳುವಾಗ ರಾಮನಂತೆ ನೀನು ಇರು ಅಂತ ದೃಷ್ಟಾಂತ ಎಲ್ಲರೂ ಕೊಡುತ್ತಾರೆ. ಯಾರೊಂದಿಗೂ ಹೋಲಿಕೆ ಸರಿಯಲ್ಲ ಸಿದ್ದರಾಮಯ್ಯನವರಿಗೂ ಒಳ್ಳೆಯದಾಗಲಿ ಎಂದರು.

    ಭಾರತೀಯರ, ದೇಶದ ಹಿಂದೂಗಳ ಬಹುದಿನಗಳ ಕನಸು ಈಗ ನನಸಾಗುತ್ತಿದೆ. ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ನಿರ್ಮಾಣದ ಬೇಡಿಕೆ ಈಡೇರಿದೆ. ರಾಮ ಮಂದಿರ ಲೋಕಾರ್ಪಣೆ ದಿನ ಬಹುತೇಕ ನಾವು ಪಾಲ್ಗೊಳ್ಳುತ್ತೇವೆ. ವಿದ್ಯುತ್ ಪ್ಯಾನಲ್ ಚಾರ್ಜ್‍ನ್ನ ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿ ಬಂದಿದ್ದೇವೆ ಅಂತ ಮಂತ್ರಾಲಯ ಶ್ರೀ ಹೇಳಿದರು. ಇದನ್ನೂ ಓದಿ: ಮಗನ ಸಾಧನೆ ನೋಡೋಕೆ ಅವನ ತಂದೆ ನಮ್ಮೊಂದಿಗಿಲ್ಲ: ಮೈಸೂರಿನ ಶಿಲ್ಪಿ ಯೋಗಿರಾಜ್‌ ತಾಯಿ ಮಾತು

    ರಾಮ ವಿಗ್ರಹದ ಶಿಲೆ ಹಾಗೂ ಶಿಲ್ಪಿ ಕನ್ನಡಿಗರು ಅನ್ನೋದು ನಮ್ಮ ಹೆಮ್ಮೆ. ಹೀಗಾಗಿ ನಾವೆಲ್ಲ ಕನ್ನಡಿಗರು ಅಭಿನಂದಿಸಬೇಕು. ರಾಮ ಉತ್ತರದಿಂದ ದಕ್ಷಿಣಕ್ಕೆ ಬಂದು ಮತ್ತೆ ಉತ್ತರಕ್ಕೆ ಹೋದ. ದಕ್ಷಿಣದಿಂದ ಉತ್ತರಕ್ಕೆ ಬಾಲರಾಮನ ವಿಗ್ರಹ ಹೋಗುತ್ತಿರುವುದು ದಕ್ಷಿಣ ಉತ್ತರಗಳ ಅನುಸಂಧಾನ ಸನ್ನಿವೇಶ ಅಂತ ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ.