Tag: Ram Swaroop Sharma

  • ಬಿಜೆಪಿ ಸಂಸದನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಬಿಜೆಪಿ ಸಂಸದನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ನವದೆಹಲಿ: ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ರಾಮ್ ಸ್ವರೂಪ್ ಶರ್ಮಾ(62) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ದೆಹಲಿಯ ನಿವಾಸದಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಮನೆಯ ಕೊಠಡಿಯಲ್ಲಿ ಪತ್ತೆಯಾಗಿದ್ದು, ಕೊಠಡಿಯನ್ನು ಒಳಭಾಗದಿಂದ ಲಾಕ್ ಮಾಡಲಾಗಿತ್ತು. ಯಾವುದೇ ಡೇತ್ ನೋಟ್ ಮೃತದೇಹ ಸಿಕ್ಕ ಜಾಗದಲ್ಲಿ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

    ಕಳೆದ ಕೆಲ ತಿಂಗಳುಗಳಿಂದ ರಾಮ್ ಸ್ವರೂಪ್ ಶರ್ಮಾ ಅವರು ಅಸ್ವಸ್ಥರಾಗಿದ್ದರೆಂದು ಆಪ್ತ ಮೂಲಗಳಿಂದ ತಿಳಿದು ಬಂದಿದ್ದು, ರಾಮ್ ಸ್ವರೂಪ್ ಅವರ ಮೃತದೇಹವನ್ನು ಕಂಡ ಅವರ ಆಪ್ತ ಸಲಹೆಗಾರ ಪಾರ್ಲಿಮೆಂಟ್‍ನ ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡ ರಾಮ್ ಸ್ವರೂಪ್ ಶರ್ಮಾ ಅವರ ಕೊಠಡಿಯ ಬಾಗಿಲು ಮುರಿದು ಒಳಪ್ರವೇಶಿಸಿದಾಗ ಸಿಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

    ಶರ್ಮಾ ಅವರು ಮಂಡಿ ಸಂಸದೀಯ ಕ್ಷೇತ್ರದಿಂದ 2 ಬಾರಿ ಸಂಸದರಾಗಿದ್ದರು. ಶರ್ಮಾ ಅವರ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಇಂದು ಬೆಳಿಗ್ಗೆ ಬಿಜೆಪಿ ಸಂಸದೀಯ ಪಕ್ಷದ ಸಭೆಯನ್ನು ರದ್ದುಗೊಳಿಸಲಾಗಿದೆ.