Tag: Ram Nam Bank

  • ರಾಮನ ಹೆಸರನ್ನು ಠೇವಣಿ ಇಟ್ಟರೆ ಬ್ಯಾಂಕಿನಿಂದ ಬೋನಸ್

    ರಾಮನ ಹೆಸರನ್ನು ಠೇವಣಿ ಇಟ್ಟರೆ ಬ್ಯಾಂಕಿನಿಂದ ಬೋನಸ್

    – ಪುಸ್ತಕದಲ್ಲಿ ರಾಮನ ಹೆಸರು ಬರೆದರೆ ಬೋನಸ್
    – ರಾಮ್ ನಾಮ್ ಬ್ಯಾಂಕ್‍ನಿಂದ ಘೋಷಣೆ

    ಲಕ್ನೋ: ಪುಸ್ತಕದಲ್ಲಿ ಭಗವಾನ್ ರಾಮನ ಹೆಸರನ್ನು ಬರೆದು ಠೇವಣಿ ಇಟ್ಟರೆ ಬೋನಸ್ ನೀಡುವುದಾಗಿ ರಾಮ್ ನಾಮ್ ಬ್ಯಾಂಕ್ ಘೋಷಿಸಿದೆ.

    ಸುಪ್ರೀಂಕೋರ್ಟ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ರಾಮ ಮಂದಿರ ನಿರ್ಮಾಣದ ಭಾಗವಾಗಿ ಈ ಅಭಿಯಾನ ನಡೆಸಲಾಗುತ್ತಿದೆ.

    ಅಲಹಬಾದ್ ಮೂಲದ ರಾಮ್ ನಾಮ್ ಬ್ಯಾಂಕ್ ಎನ್‍ಜಿಓ ಆಗಿದ್ದು, ಎಟಿಎಂ ಅಥವಾ ಚೆಕ್ ಬುಕ್ ಹೊಂದಿಲ್ಲ. ಅಲ್ಲದೆ ಅದರ ಏಕೈಕ ಕರೆನ್ಸಿ ರಾಮನ ಹೆಸರಿನಲ್ಲಿದೆ. ಬ್ಯಾಂಕಿನಲ್ಲಿ ಖಾತೆ ಹೊಂದಿದವರ ಪೈಕಿ ಸುಮಾರು ಒಂದು ಲಕ್ಷ ಜನರಿಗೆ ಈಗಾಗಲೇ ಬೋನಸ್ ಘೋಷಿಸಿದೆ.

    ಅಲ್ಲದೆ ನವೆಂಬರ್ 9-10ರ ಮಧ್ಯರಾತ್ರಿ ವೇಳೆಗೆ ಕನಿಷ್ಠ 1.25 ಲಕ್ಷ ಬಾರಿ ರಾಮನ ಹೆಸರನ್ನು ಬರೆದು ಬ್ಯಾಂಕ್‍ನಲ್ಲಿ ಠೇವಣಿ ಇಟ್ಟ ಭಕ್ತರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದೆ.

    ಈ ಕುರಿತು ರಾಮ್ ನಾಮ್ ಸೇವಾ ಸಂಸ್ಥಾನದ ಅಧ್ಯಕ್ಷ ಅಶುತೋಷ್ ವರ್ಷನಿ ಮಾಹಿತಿ ನೀಡಿ, ಭಕ್ತರು ರಾಮನ ಹೆಸರನ್ನು ಕೈ ಬರಹ, ಟೈಪ್ ಮಾಡಿ ಅಥವಾ ಮೊಬೈಲ್ ಆ್ಯಪ್ ಮೂಲಕ ಬರೆದಿದ್ದನ್ನು ಡಬಲ್ ಮಾಡಲಾಗುತ್ತದೆ. ಹಾಗಾಗಿ ಬ್ಯಾಂಕ್ ಬುಕ್‍ಲೆಟ್ ನೀಡಲಿದೆ. ಅಂದರೆ ಒಬ್ಬ ಭಕ್ತ ಒಂದು ಬಾರಿ ರಾಮ್ ನಾಮ್ ಎಂದು ಬರೆದಿದ್ದರೆ ಅದನ್ನು ಎರಡು ಎಂದು ಪರಿಗಣಿಸಲಾಗುತ್ತದೆ. ಆದರೆ ಪ್ರಶಸ್ತಿ ಪಡೆಯಬೇಕಾದಲ್ಲಿ ನವೆಂಬರ್ 9-10ರೊಳಗೆ ಕನಿಷ್ಠ 1.25 ಲಕ್ಷ ಬಾರಿ ಬರೆದಿರಬೇಕು ಎಂದರು.

    ಬ್ಯಾಂಕ್ ನೀಡಿದ ಬುಕ್‍ಲೆಟ್‍ನಲ್ಲಿ 30 ಪುಟಗಳಿರುತ್ತವೆ. ಪ್ರತಿ ಪುಟದಲ್ಲಿ 108 ಚೌಕಗಳಿರುತ್ತವೆ. ಅಲ್ಲಿ ರಾಮನ ಹೆಸರನ್ನು ಬರೆಯಬೇಕು. ಬೋನಸ್‍ನ್ನು ನವೆಂಬರ್ 10ರಂದು ಘೋಷಿಸಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರಿಗೆ 2020ರ ಮಾಘ ಮೇಳ ಸಂದರ್ಭದಲ್ಲಿ ಬಹುಮಾನ ನೀಡಲಾಗುವುದು. ಅಲಹಬಾದ್‍ನ ಸಂಗಮ್ ಪ್ರದೇಶದಲ್ಲಿ ಆಯೋಜಿಸಿರುವ ವಿಶೇಷ ಸಮಾರಂಭದಲ್ಲಿ ರಾಮ್ ನಾಮ್ ಬ್ಯಾಂಕ್ ಶಾಲು ಹೊದಿಸಿ ಸನ್ಮಾನಿಸಿ ಶ್ರೀಫಾಲ್ ಪ್ರಮಾಣ ಪತ್ರ ನೀಡಲಾಗುವುದು ಎಂದರು.

    ಒಂದು ಕೋಟಿ ಗಡಿ ದಾಟಿದವರಿಗೆ ಅಕ್ಷಯವತ್ ಮಾರ್ಗದ ಸೆಕ್ಟರ್-1ರಲ್ಲಿರುವ ಬ್ಯಾಂಕಿನ ಶಿಬಿರದಲ್ಲಿ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಈವರೆಗೆ 12ಕ್ಕೂ ಹೆಚ್ಚು ಭಕ್ತರು ಒಂದು ಕೋಟಿಯ ಗಡಿ ದಾಟಿದ್ದಾರೆ ಎಂದು ಅಶುತೋಷ್ ವರ್ಷನಿ ತಿಳಿಸಿದರು.

    ಅಯೋಧ್ಯೆಯ ವಿವಾದವು ಶಾಂತಿಯುತವಾಗಿ ಬಗೆಹರಿಯಲೆಂದು 2019ರ ಕುಂಭಮೇಳದ ಸಂದರ್ಭದಲ್ಲಿ 1,200 ಭಕ್ತರು ರಾಮನಾಮ ಬರೆಯುವುದಾಗಿ ಶಪಥ ಮಾಡಿದ್ದರು. ಹೀಗಾಗಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ರಾಮ್ ನಾಮ್ ಬ್ಯಾಂಕ್‍ನ ಅಂಗ ಸಂಸ್ಥೆ ರಾಮ್ ಸೇವಾ ಟ್ರಸ್ಟ್ ನ ಟ್ರಸ್ಟಿ ಗುಂಜಾನ್ ವರ್ಷಿಣಿ ಮಾಹಿತಿ ನೀಡಿದರು.