Tag: Ram Mandira

  • ಅಯೋಧ್ಯೆಯ ರಾಮಮಂದಿರದಲ್ಲಿ ಚಿನ್ನದ ಬಾಗಿಲು ಅಳವಡಿಕೆ ಕಾರ್ಯ ಪೂರ್ಣ

    ಅಯೋಧ್ಯೆಯ ರಾಮಮಂದಿರದಲ್ಲಿ ಚಿನ್ನದ ಬಾಗಿಲು ಅಳವಡಿಕೆ ಕಾರ್ಯ ಪೂರ್ಣ

    ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ (Pran Prathistha Ceremony)  ಸಿದ್ಧತೆ ಕಾರ್ಯ ಅಂತಿಮ ಹಂತದಲ್ಲಿದೆ. ಅಯೋಧ್ಯೆ ರಾಮ ಮಂದಿರದ ಚಿನ್ನದ ಬಾಗಿಲು ಅಳವಡಿಕೆ ಕಾರ್ಯ ಸಂಪೂರ್ಣಗೊಂಡಿದೆ.

    ಅಯೋಧ್ಯೆ ರಾಮ ಮಂದಿರದ (Ayodhya Ram Mandir) ನೆಲಮಹಡಿಯ ಒಟ್ಟು 14 ಬಾಗಿಲುಗಳನ್ನು ಅಳವಡಿಸಲಾಗಿದೆ. ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸುವ ಗರ್ಭಗುಡಿಗೆ ಚಿನ್ನದ ಬಾಗಿಲು (Golden Doors) ಅಳವಡಿಕೆ ಮಾಡುವ ಮೂಲಕ ನೆಲಮಹಡಿಯಲ್ಲಿ 14 ಬಾಗಿಲು ಅಳವಡಿಕೆ ಕಾರ್ಯ ಪೂರ್ಣಗೊಂಡಿವೆ.

    ಕೆಲ ದಿನಗಳ ಹಿಂದೆಯಷ್ಟೇ ದೇವಾಲಯದ ಚಿನ್ನದ ಲೇಪಿತ ಬಾಗಿಲಿನ ಮೊದಲ ಚಿತ್ರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ದೇವಾಲಯದ ಗರ್ಭಗುಡಿ ಅಥವಾ ‘ಗರ್ಬಗೃಹ’ದಲ್ಲಿ ಚಿನ್ನದ ಲೇಪಿತ ಬಾಗಿಲುಗಳನ್ನು (Swarn Dwaar) ಸ್ಥಾಪಿಸಲಾಗಿದೆ. ಅಲ್ಲಿ ದೇವರ ವಿಗ್ರಹವನ್ನು ಜನವರಿ 22 ರಂದು ಪ್ರತಿಷ್ಠಾಪಿಸಲಾಗುವುದು. ಹೈದರಾಬಾದ್ ಮೂಲದ ಕುಶಲಕರ್ಮಿಯೊಬ್ಬರು ಈ ಬಾಗಿಲನ್ನು ರೂಪಿಸಿದ್ದಾರೆ ಎನ್ನಲಾಗಿತ್ತು.  ಇದನ್ನೂ ಓದಿ: ಅಯೋಧ್ಯೆಯಲ್ಲಿ ಕರುನಾಡಿನ ರಾಮ – ಮೈಸೂರಿನ ಯೋಗಿರಾಜ್‌ ನಿರ್ಮಿಸಿದ ಮೂರ್ತಿ ಫೈನಲ್‌

    ಜನವರಿ 22 ರಂದು ಅಯೋಧ್ಯೆಯಲ್ಲಿ ಲಕ್ಷಾಂತರ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಕೇಂದ್ರ ಬಿಂದುವಾದ ‘ಪ್ರಾಣ ಪ್ರತಿಷ್ಠಾ’ ಸಮಾರಂಭವು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್‌ ಪಟೇಲ್ ಮತ್ತು ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ರಾಜಕಾರಣಿಗಳು, ವಿವಿಧ ಅಧಿಕಾರಿಗಳು, ಜಡ್ಜ್‌ಗಳು, ವಿಜ್ಞಾನಿಗಳು, ಆಟಗಾರರು, ಸಂಗೀತಗಾರರು, ಸಂತರು, ಪ್ರಾಣ ತ್ಯಾಗ ಮಾಡಿದ ಸೈನಿಕರ ಕುಟುಂಬಸ್ಥರು ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

  • ಅಯೋಧ್ಯೆಯಲ್ಲಿ ನಾಳೆಯಿಂದ್ಲೇ ಪೂರ್ವಭಾವಿ ಪೂಜೆಗಳು ಆರಂಭ: ಚಂಪತ್‌ ರೈ

    ಅಯೋಧ್ಯೆಯಲ್ಲಿ ನಾಳೆಯಿಂದ್ಲೇ ಪೂರ್ವಭಾವಿ ಪೂಜೆಗಳು ಆರಂಭ: ಚಂಪತ್‌ ರೈ

    ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ (Pran Prathistha Ceremony)ಭರದ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಪ್ರಾಣ ಪ್ರತಿಷ್ಠಾಕ್ಕೆ ಸಂಬಂಧಿಸಿದ ಪೂಜಾ ವಿಧಿ-ವಿಧಾನಗಳು ಮಂಗಳವಾರದಿಂದಲೇ ಪ್ರಾರಂಭವಾಗಲಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ (Champat Rai) ತಿಳಿಸಿದ್ದಾರೆ.

    ಇಂದು ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ರಾಮನ ವಿಗ್ರಹವು 150 ರಿಂದ 200 ಕೆಜಿ ತೂಕವಿರುತ್ತದೆ. ರಾಮಲಲ್ಲಾ ವಿಗ್ರಹವು 150 ರಿಂದ 200 ಕೆ.ಜಿ ತೂಗುತ್ತದೆ. ಇದರೊಂದಿಗೆ ವಿಗ್ರಹಕ್ಕೆ 5 ವರ್ಷದ ಬಾಲಕನ ರೂಪ ನೀಡಲಾಗಿದೆ. ಮಂಗಳವಾರದಿಂದ ಆರಂಭವಾಗಿ ಜನವರಿ 21ರವರೆಗೆ ಈ ಪೂಜಾ ಕಾರ್ಯಕ್ರಮಗಳು ಮುಂದುವರಿಯಲಿದೆ. ಇನ್ನು ಜನವರಿ 22ರಂದು ಮಧ್ಯಾಹ್ನ 12.20ಕ್ಕೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಗಳು ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಪೂರ್ಣಗೊಳ್ಳಲಿದೆ ಎಂದರು.

    ರಾಮಲಲ್ಲಾ ಪ್ರಣಪ್ರತಿಷ್ಠಾ ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲಿದ್ದಾರೆ. ಈ ಕಾರ್ಯಕ್ರಮವು ಸುಮಾರು 65 ರಿಂದ 75 ನಿಮಿಷಗಳವರೆಗೆ ಇರುತ್ತದೆ ಎಂದು ಚಂಪತ್ ರೈ ಹೇಳಿದರು.‌ ಇದನ್ನೂ ಓದಿ: ಜ.22ರಂದು ಶ್ರೀರಾಮ ದರ್ಶನ ನೀಡ್ತಿದ್ದು, ಆಹ್ವಾನಿಸಿರೋದು ನನ್ನ ಅದೃಷ್ಟ: ಮೋದಿ

    ಸಂಪ್ರದಾಯದಂತೆ 1000 ಬುಟ್ಟಿಗಳಲ್ಲಿ ಉಡುಗೊರೆಗಳು ನೇಪಾಳದ ಜನಕ್‌ಪುರ ಮತ್ತು ಮಿಥಿಲಾ ಪ್ರದೇಶಗಳಿಂದ ಬಂದಿದೆ. ನಾಡಿನ ಎಲ್ಲ ಕಲೆಗಳಲ್ಲಿ ಪಾರಂಗತರಾದವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದರಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಜಡ್ಜ್‌ಗಳು, ವಿಜ್ಞಾನಿಗಳು, ಆಟಗಾರರು, ಸಂಗೀತಗಾರರು, ಸಂತರು, ಪ್ರಾಣ ತ್ಯಾಗ ಮಾಡಿದ ಸೈನಿಕರ ಕುಟುಂಬಸ್ಥರು ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

  • ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ: ಡಾ.ಎಂ.ಸಿ ಸುಧಾಕರ್

    ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ: ಡಾ.ಎಂ.ಸಿ ಸುಧಾಕರ್

    ಚಿಕ್ಕಬಳ್ಳಾಪುರ: ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ (Rajiv Gandhi) ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ (Dr. M. C Sudhakar) ಹೇಳಿದ್ದಾರೆ.

    ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ (BJP- Congress) ಪಕ್ಷಗಳು ಪರ-ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ನಾವೆಲ್ಲರೂ ಹಿಂದುಗಳು ಇದು ಜ್ಯಾತ್ಯಾತೀತ ರಾಷ್ಟ್ರ ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ನಮಗೆಲ್ಲರಿಗೂ ಸಹಮತ ಇದೆ ಎಂದಿದ್ದಾರೆ.

    ನಾವೆಲ್ಲ ನಮ್ಮ ಜಾತಿ ನಮ್ಮ ಧರ್ಮದ ಮೇಲೆ ಹೆಚ್ಚು ನಂಬಿಕೆ ಇಟ್ಟುಕೊಂಡಿರೋರು. ನನ್ನ ಕೊರಳಲ್ಲಿ ವೆಂಕಟರವಣಸ್ವಾಮಿ ಲಾಕೆಟ್ ಇದೆ, ಅಯೋಧ್ಯೆಯಲ್ಲಿ ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ, ಇದನ್ನ ಬಿಜೆಪಿಯವರು ಮರೆಮಾಚಿದ್ದಾರೆ. ಈ ಸತ್ಯವನ್ನ ಜನರಿಗೆ ತಿಳಿಸಬೇಕು. ರಾಮಮಂದಿರ ಉದ್ಘಾಟನೆ ವಿಚಾರ ಎಲ್ಲರಿಗೂ ಸಂತೋಷ ಇದೆ ಎಂದು ಹೇಳಿದರು. ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ನಾನೂ ದೇಣಿಗೆ ಕೊಟ್ಟಿದ್ದೇನೆ: ಪರಮೇಶ್ವರ್‌

    ಅನ್ನಭಾಗ್ಯ ಅಕ್ಕಿ ರಾಮಮಂದಿರ ಮಂತ್ರಾಕ್ಷತೆಗೆ ಬಳಕೆ ಡಿಕೆಶಿ ಹೇಳಿಕೆ ವಿಚಾರವನ್ನ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಅವರು ರಾಮಮಂದಿರ ವಿಚಾರವನ್ನ ಬಿಜೆಪಿಯವರು ರಾಜಕೀಯವಾಗುವ ಬಂಡವಾಳ ಮಾಡಿಕೊಳ್ತಿದ್ದಾರೆ. ಯಾಕೆ ಅವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಅದಕ್ಕಾಗಿಯೇ ಡಿಕೆಶಿಯವರು ಹಾಗೆ ಹೇಳಿದ್ದಾರೆ ಎಂದರು. ಅವರವರ ಧರ್ಮ ಧರ್ಮದ ಮೇಲೆ ಅವರಿಗೆ ನಂಬಿಕೆ‌ ಇದೆ. ರಾಜಕೀಯ ವಾಗಿ ಅನುಕೂಲ ಪಡೆಯಲು ಹೀಗೆ ಮಾಡ್ತಿದ್ದಾರೆ. ಇದು ಕೀಳು ಮಟ್ಟದ ರಾಜಕಾರಣ ಎಂದು ಬಿಜೆಪಿಗೆ ವಿರುದ್ದ ಹರಿಹಾಯ್ದರು.

  • 51 ಇಂಚು ಎತ್ತರ, 1.5 ಟನ್ ತೂಕ ಇರಲಿದೆ ಅಯೋಧ್ಯೆ ರಾಮನ ವಿಗ್ರಹ

    51 ಇಂಚು ಎತ್ತರ, 1.5 ಟನ್ ತೂಕ ಇರಲಿದೆ ಅಯೋಧ್ಯೆ ರಾಮನ ವಿಗ್ರಹ

    ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಲೋಕಾರ್ಪಣೆಗೆ ಕೆಲವೇ ದಿನಗಳಿದ್ದು, ಈ ಹಿನ್ನೆಲೆಯಲ್ಲಿ ಸದ್ಯ ರಾಮಜನ್ಮಭೂಮಿಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ರಾಮನ ವಿಗ್ರಹವು 51 ಇಂಚು ಎತ್ತರ ಇರಲಿದ್ದು, ಬರೋಬ್ಬರಿ 1.5 ಟನ್‌ ತೂಕ ಹೊಂದಿದೆ ಎಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ 4 ದಿನ ಮುನ್ನ ಅಂದರೆ ಜ.18 ರಂದೇ ಗರ್ಭಗುಡಿಗೆ ಶ್ರೀರಾಮನ ಪ್ರವೇಶ ಆಗಲಿದೆ. ಅಲ್ಲದೆ ರಾಮನ ಕಪ್ಪು ಬಣ್ಣದ ವಿಗ್ರಹವು 51 ಇಂಚು ಎತ್ತರ, 1.5 ಟನ್ ತೂಕ ಹೊಂದಿದೆ. ಮುಖ 5 ವರ್ಷದ ಮಗುವಿನಷ್ಟೇ ಮುಗ್ಧತೆಯನ್ನು ಹೊಂದಿದೆ. ಪ್ರತಿ ವರ್ಷ ರಾಮ ನವಮಿಯಂದು ಚೈತ್ರ ಮಾಸದ ಶುಕ್ಲ ಪಕ್ಷದ 9ನೇ ತಾರೀಖಿನಂದು ಮಧ್ಯಾಹ್ನ 12 ಗಂಟೆಗೆ ಸೂರ್ಯ ಸ್ವತಃ ತನ್ನ ಕಿರಣಗಳ ಮೂಲಕ ಶ್ರೀರಾಮನ ಹಣೆಯನ್ನು ಸ್ಪರ್ಶಿಸಲಿದ್ದಾನೆ ಎಂದು ಅವರು ವಿವರಿಸಿದರು.

    ಜ.16 ರಿಂದ ಪ್ರತಿಷ್ಠಾಪನೆಯ ಪೂಜಾ ವಿಧಿವಿಧಾನಗಳು ಪ್ರಾರಂಭವಾಗಲಿವೆ. ಜ.18 ರಂದು ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹ ಇರಿಸಲಾಗುವುದು. ಭಾರತದ ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿಗಳ ಸಲಹೆಯ ಮೇರೆಗೆ ಭಗವಾನ್ ಶ್ರೀರಾಮನ ವಿಗ್ರಹದ ಉದ್ದ ಮತ್ತು ಅದರ ಸ್ಥಾಪನೆಯ ಎತ್ತರವನ್ನು ವಿನ್ಯಾಸಗೊಳಿಸಲಾಗಿದೆ. ಮೂವರು ಶಿಲ್ಪಿಗಳು ಶ್ರೀರಾಮನ ವಿಗ್ರಹವನ್ನು ಪ್ರತ್ಯೇಕವಾಗಿ ತಯಾರಿಸಿದ್ದು, ಅದರಲ್ಲಿ 1.5 ಟನ್ ತೂಕದ ಮತ್ತು ಪಾದದಿಂದ ಹಣೆಯವರೆಗೆ 51 ಇಂಚು ಉದ್ದದ ಒಂದು ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. ಮುಖದ ಮೃದುತ್ವ, ಕಣ್ಣುಗಳಲ್ಲಿನ ನೋಟ, ನಗು, ದೇಹ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಕಪ್ಪು ಶಿಲೆಯ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. ಪ್ರತಿಮೆಯ ಮೇಲೆ ತಲೆ, ಕಿರೀಟವನ್ನು ಸಹ ಉತ್ತಮವಾಗಿ ರಚಿಸಲಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: Ram Mandir; ರಾಮಮಂದಿರ ಉದ್ಘಾಟನೆಯ ಕೇಂದ್ರಬಿಂದು ಗರ್ಭಗುಡಿ ವಿಶೇಷತೆ ನಿಮಗೆಷ್ಟು ಗೊತ್ತು?

    ನೀರು ಹಾಗೂ ಪಂಚಾಮೃತ ಅಭಿಷೇಕ ಮಾಡಿದರೂ ವಿಗ್ರಹದ ಕಲ್ಲಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಅಲ್ಲದೆ ವಿಗ್ರಹದ ಅಭಿಷೇಕದಿಂದ ತೆಗೆದ ತೀರ್ಥ ಹಾಗೂ ಪಂಚಾಮೃತ ಸೇವಿಸಿದರೆ ಯಾರ ದೇಹದ ಮೇಲೂ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ರಾಯ್ ಸ್ಪಷ್ಟಪಡಿಸಿದರು.

  • ಹರಿಪ್ರಸಾದ್‌ರನ್ನು ಕೂಡಲೇ ಬಂಧಿಸಬೇಕು: ಡಿವಿಎಸ್‌ ಆಗ್ರಹ

    ಹರಿಪ್ರಸಾದ್‌ರನ್ನು ಕೂಡಲೇ ಬಂಧಿಸಬೇಕು: ಡಿವಿಎಸ್‌ ಆಗ್ರಹ

    ಬೆಂಗಳೂರು: ಕೂಡಲೇ ಕಾಂಗ್ರೆಸ್‌ ನಾಯಕ ಹರಿಪ್ರಸಾದ್‌ (BK Hariprasad) ಅವರನ್ನು ಸರ್ಕಾರ ಬಂಧಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಸದಾನಂದಗೌಡ (DV Sadananda Gowda) ಆಗ್ರಹಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ರಾಮ ಮಂದಿರ (Ram Mandira) ನಿರ್ಮಾಣ ಹೋರಾಟದಲ್ಲಿ ಭಾಗಿಯಾಗಿದ್ದ, 31 ವರ್ಷದ ಹಳೆಯ ಪ್ರಕರಣಗಳನ್ನು ಕೆದಕಿ ಶ್ರೀಕಾಂತ್ ಪೂಜಾರಿ ಸೇರಿದಂತೆ ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲೂ ಪ್ರತಿಭಟನೆ ನಡೆಸುತ್ತಿದೆ.

     

    ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಮಾಧ್ಯಮಗಳ ಜೊತೆ ಮಾತನಾಡಿದ ಡಿವಿಎಸ್‌, ರಾಷ್ಟ್ರೀಯ ನಾಯಕರೊಬ್ಬರು ಹೀಗೆ ಮಾತನಾಡುತ್ತಾರೆ ಅಂದರೆ ದೊಡ್ಡ ಪಿತೂರಿ ಮಾಡಿದಂತೆ ಕಾಣುತ್ತದೆ. ಒಬ್ಬೇ ಒಬ್ಬ ರಾಮ ಭಕ್ತರಿಗೆ ಸಮಸ್ಯೆ ಆದರೆ ಅದಕ್ಕೆ ಕಾಂಗ್ರೆಸ್ ಹೊಣೆ ಆಗುತ್ತದೆ. ಕೂಡಲೇ ಹರಿಪ್ರಸಾದ್‌ ಬಂಧನ ಮಾಡಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.  ಇದನ್ನೂ ಓದಿ: ಮಸೀದಿಯವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಳ್ಳುತ್ತಾರೆ, ದೇವಿ ದರ್ಶನಕ್ಕೆ ಸಮಯವಿಲ್ಲ: ಸಿದ್ದು ವಿರುದ್ಧ ಬಿಜೆಪಿ ಕಿಡಿ

     

    ಹರಿಪ್ರಸಾದ್‌ ಹೇಳಿದ್ದೇನು?
    ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ನೀಡಬೇಕು. ಯಾಕೆಂದರೆ ಗೋದ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರು ಆಗಬಹುದು. ನಮಗೆ ಮಾಹಿತಿ ಸಿಗುತ್ತಿದೆ. ಮಾಹಿತಿ ಇದ್ದೇ ಹೇಳುತ್ತಿದ್ದೇನೆ. ಕರ್ನಾಟಕದಲ್ಲಿ ಈ ರೀತಿ ಆಗಬಾರದು ಎಂದರೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕಟ್ಟೆಚ್ಚರ ವಹಿಸಬೇಕು. ಇವು ನನ್ನ ವೈಯಕ್ತಿಕ ಹೇಳಿಕೆ, ಪಕ್ಷಕ್ಕೂ ಇದಕ್ಕೂ ಸಂಬಂಧ ಇಲ್ಲ

    ರಾಮಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮ ಅಲ್ಲ. ಇದೊಂದು ರಾಜಕೀಯ ಕಾರ್ಯಕ್ರಮ ಆಗುತ್ತಿದೆ. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ನಾವೆಲ್ಲರೂ ಹೋಗುತ್ತಿದ್ದೆವು. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗಿ ಆಗಬೇಕಿತ್ತು.

     

  • ಹೆಚ್‍ಡಿಕೆ ಮನೆಯಲ್ಲಿನ ದೇವಸ್ಥಾನ ಪುಡಿ ಮಾಡಿದ್ರೆ ಸುಮ್ಮನಿರುತ್ತಿದ್ದರಾ?- ಈಶ್ವರಪ್ಪ

    ಹೆಚ್‍ಡಿಕೆ ಮನೆಯಲ್ಲಿನ ದೇವಸ್ಥಾನ ಪುಡಿ ಮಾಡಿದ್ರೆ ಸುಮ್ಮನಿರುತ್ತಿದ್ದರಾ?- ಈಶ್ವರಪ್ಪ

    ಬಾಗಲಕೋಟೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಮನೆಯಲ್ಲಿನ ದೇವಸ್ಥಾನ ಪುಡಿ ಮಾಡಿದರೆ ಸುಮ್ಮನಿರುತ್ತಿದ್ದರಾ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸುವ ಮೂಲಕ ಟಾಂಗ್ ಕೊಟ್ಟರು.

    ತಾಂಬೂಲ ಪ್ರಶ್ನೆ ವಿಚಾರವಾಗಿ ರಾಜ್ಯದ ಜನರ ಮೇಲೆ ಮೂಢನಂಬಿಕೆ ಹೇರುತ್ತಿದ್ದಾರೆಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ದೇವೇಗೌಡರ ವಂಶ ನನಗೂ ಒಂದು ಆದರ್ಶ. ದೇವರು, ಧರ್ಮದ ಬಗ್ಗೆ ಆ ವಂಶ ಇಟ್ಟುಕೊಂಡ ನಂಬಿಕೆಯನ್ನು ಎಲ್ಲಾ ಕುಟುಂಬದವರು ಇಟ್ಟುಕೊಳ್ಳಬೇಕು. ರಾಜಕಾರಣಕ್ಕಾಗಿ ಕುಮಾರಸ್ವಾಮಿ ಏನೋ ಒಂದು ಹೇಳಿದರೆ ನಾನು ಟೀಕೆ ಮಾಡಲ್ಲ. ಮಸೀದಿ ರಿಪೇರಿ ಮಾಡೋವಾಗ ದೇವರುಗಳು ಸಿಕ್ಕಿವೆ. ಅದೇ ಚರ್ಚೆ ನಡೆಯುತ್ತಿದೆ ಎಂದರು.

    ಕುಮಾರಸ್ವಾಮಿ ತಂದೆ ದೇವೇಗೌಡರು ಒಳ್ಳೆಯ ಕೆಲಸ ಮಾಡಿದ್ದಾರೆ. ದೇವೇಗೌಡರ ಬಗ್ಗೆ ಹೆಚ್ಚು ಟೀಕೆ ಮಾಡೋಕೆ ಹೋಗಲ್ಲ. ದೇವೇಗೌಡರು ಮತ್ತು ಯಡಿಯೂರಪ್ಪ ಅವರು ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಸ ಮಾಡಿ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಇಂದು ರಾಜ್ಯಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ

    ಕಾಶಿ, ಮಥುರಾ ಬಗ್ಗೆ ಮೊದಲು ಸರಿಯಾಗಿ ತಿಳಿದುಕೊಳ್ಳಲಿ. ರಾಮಮಂದಿರ ಬಗ್ಗೆ ಟೀಕೆ ಮಾಡಿದರು. ಇವತ್ತಲ್ಲ ನಾಳೆ ಭವ್ಯ ರಾಮಮಂದಿರ ನಿಮಾ9ಣವಾಗುತ್ತೆ. ಅದೇ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ದೇವೇಗೌಡರು ರಾಮಮಂದಿರಕ್ಕೆ ಹೋಗಿ ದರ್ಶನ ಮಾಡೋ ಕಾಲ ದೂರವಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣ – ಅನಂತರಾಜು ಜೊತೆಗಿನ ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್

    ಮೊನ್ನೆ ಡಿಕೆ ಶಿವಕುಮಾರ್ ದಂಪತಿ ಸಮೇತ ಕೇದಾರನಾಥ ದೇಗುಲಕ್ಕೆ ಹೋಗಿದ್ದರು ಸಂತೋಷ. ಮುಸ್ಲಿಂ ವೋಟು ಬೇಕು ಟೀಕೆ ಮಾಡಲಿ. ಆದರೆ ತಾನೊಬ್ಬ ಹಿಂದೂ ಅನ್ನೋ ಮನೋಭಾವನೆ ಇದೆಯಲ್ಲಾ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಲ್ಲಿ ಒಳಗಡೆ ದೈವಭಕ್ತಿ ಇದೆ. ಮುಸ್ಲಿಮರ ವೋಟಿಗಾಗಿ ನಾಟಕ ಮಾಡ್ತಿದ್ದಾರೆ ಮಾಡಲಿ ಎಂದರು.

  • ಊದುಕಡ್ಡಿ ತುಂಡುಗಳಿಂದ ಅಂಗೈಯಷ್ಟು ಸಣ್ಣದಾದ ರಾಮ ಮಂದಿರ ನಿರ್ಮಾಣ

    ಊದುಕಡ್ಡಿ ತುಂಡುಗಳಿಂದ ಅಂಗೈಯಷ್ಟು ಸಣ್ಣದಾದ ರಾಮ ಮಂದಿರ ನಿರ್ಮಾಣ

    ಮಂಗಳೂರು: ಇತಿಹಾಸ ಪ್ರಸಿದ್ಧ ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಶದಾದ್ಯಂತ ಪೂಜೆ, ಪುನಸ್ಕಾರ, ಪ್ರಾರ್ಥನೆಗಳು ನಡೆಯುತ್ತಿದೆ. ರಾಮಮಂದಿರ ನಿರ್ಮಾಣದ ಸಾರ್ಥಕ ಸಂಭ್ರಮದಲ್ಲಿ ಇಲ್ಲೊಬ್ಬರು ತಮ್ಮ ಕಲ್ಪನೆಯ ರಾಮ ಮಂದಿರ ನಿರ್ಮಾಣ ಮಾಡಿ ವಿಸ್ಮಯ ಸೃಷ್ಟಿಸಿದ್ದಾರೆ. ಇದನ್ನೂ ಓದಿ: ಮೋದಿಗೆ ಕರ್ನಾಟಕದಿಂದ ನೀಡಿದ್ದ ಕೋದಂಡರಾಮ ಪ್ರತಿಮೆ ಗಿಫ್ಟ್

    ಗಡಿನಾಡು ಕಾಸರಗೋಡಿನ ಮಂಜೇಶ್ವರದ ಕಡಂಬಾರ್ ಚೆಂಬಪದವು ನಿವಾಸಿ ಮೌನೇಶ್ ಆಚಾರ್ಯ ಉರಿದ ಊದುಬತ್ತಿಯ ಉಳಿದ ತುಂಡು ಕಡ್ಡಿಯಿಂದ ರಾಮ ಮಂದಿರದ ಕಲ್ಪನೆಗೆ ರೂಪ ನೀಡಿದ್ದಾರೆ. ಅಂಗೈಯೊಳಗೆ ಅಡಕವಾಗುವ ಅತೀ ಚಿಕ್ಕ ರಾಮಮಂದಿರ ನೋಡುಗರಿಗೆ ವಿಸ್ಮಯ ಸೃಷ್ಟಿಸುತ್ತಿದೆ. ರಾಮ ಮಂದಿರ ನಿರ್ಮಾಣಕ್ಕೆ ಕೋರ್ಟ್ ಹಸಿರು ನಿಶಾನೆ ತೋರಿಸಿದ ಅಂದಿನಿಂದ ಇವರ ಈ ಕಲ್ಪನೆಯ ಸೇವೆ ಆರಂಭವಾಗಿತ್ತು.

    ಮೌನೇಶ್ ಆಚಾರ್ಯ, ಮಂಜೇಶ್ವರ ಶ್ರೀಮದ್ ಅನಂತೇಶ್ವರ ಕ್ಷೇತ್ರ ಸಮೀಪ ಸ್ವರ್ಣೋದ್ಯಮಿಯಾಗಿ ಹರಕೆ ಸೇವೆಗಳ ವಸ್ತು ಪೂರೈಕೆಯ ಉದ್ಯಮ ನಡೆಸುತ್ತಿದ್ದಾರೆ. ಇವರು ಮೂಲತಃ ಕರಕುಶಲ ಕರ್ಮಿ. ಹಲವಾರು ಸಾಹಿತ್ಯಗಳನ್ನು ರಚಿಸುತ್ತಾ ಯುವ ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ರಾಮ ಭಕ್ತಿ ಪ್ರೇರಿತರಾಗಿ ತಮ್ಮ ಕರ ಕುಶಲತೆಯಿಂದ ಈ ಚಿಕ್ಕ ರಾಮ ಮಂದಿರ ನಿರ್ಮಾಣಕ್ಕೆ ತೊಡಗಿಕೊಂಡಿದ್ದರು. ರಾಮ ಮಂದಿರದ ಶಿಲಾನ್ಯಾಸದ ಸಂದರ್ಭಕ್ಕೆ ಸರಿಯಾಗಿ ತಮ್ಮ ಕಲ್ಪನೆಯ ಮಂದಿರ ನಿರ್ಮಾಣಕ್ಕೆ ಅಂತಿಮ ಸ್ಪರ್ಶ ನೀಡಿರುವುದು ವಿಶೇಷವಾಗಿದೆ.

    ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಉರಿದ ಊದು ಬತ್ತಿ ಕಡ್ಡಿಗಳನ್ನು ಉಪಯೋಗಿಸಿ ಐದು ಇಂಚು ಎತ್ತರದ ಸುಂದರ ಮಂದಿರ ನಿರ್ಮಿಸಿದ್ದಾರೆ. ಗೋಪುರ ನಾಲ್ಕು ಇಂಚು ಎತ್ತರವಿದ್ದು, ಮಂದಿರದ ಮೇಲ್ಗಡೆ ಸಹಿತ ಅತೀ ಚಿತ್ತಾಕರ್ಷಕ ಶೈಲಿಯಲ್ಲಿ ನೋಡುಗರ ಮನ ಸೆಳೆಯುತ್ತದೆ. ದಿನಂಪ್ರತಿ ದೇವರಿಗೆ ಊದು ಬತ್ತಿ ಉರಿಸಿ ಅದರಿಂದ ಸಿಗುವ ಕಡ್ಡಿಯನ್ನು ಸಂಗ್ರಹಿಸಿ, ಅಂಗೈ ಅಗಲದ ಅತ್ಯಂತ ಚಿಕ್ಕ ರಾಮ ಮಂದಿರ ನಿರ್ಮಿಸುವುದೆಂದರೆ ನಿಜವಾಗಿಯೂ ಸೋಜಿಗವಾಗಿದೆ.

  • 500 ವರ್ಷಗಳ ಕನಸು ನನಸು- ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಚಾಲನೆ

    500 ವರ್ಷಗಳ ಕನಸು ನನಸು- ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಚಾಲನೆ

    ಅಯೋಧ್ಯೆ: ಶತಶತಮಾನಗಳಿಂದ ಕಾಯುತ್ತಿದ್ದ ಕನಸು ನನಸಾಗಿದ್ದು, ಧನುರ್ಧಾರಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯನ್ನು ಪ್ರಧಾನಿ ಮೋದಿ ಅವರು ನೆರವೇರಿಸಿದ್ದಾರೆ.

    ದೇಶದ ಸಾಧು-ಸಂತರ ಧರ್ಮ ಹೋರಾಟ, ರಥಯಾತ್ರೆ ಆಂದೋಲನದ ಎಲ್ಲಾ ಮಜಲುಗಳನ್ನು ದಾಟಿ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದೆ. ಇಂದು ಮಧ್ಯಾಹ್ನ 12.44ರ ಶುಭ ಅಭಿಜಿನ್ ಲಗ್ನದ ಶತಾಭಿಷ ನಕ್ಷತ್ರದ ಮುಹೂರ್ತದಲ್ಲಿ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ಮುಗಿಸಿದರು. ನಂತರ 40 ಕೆಜಿಯ ಬೆಳ್ಳಿ ಇಟ್ಟಿಗೆಯನ್ನು ಇಟ್ಟು ಮಂದಿರಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.

    ಭೂಮಿ ಪೂಜೆಗೂ ಮೊದಲು ಶ್ರೀರಾಮನ ನವ ಮೂರ್ತಿಗಳಿಗೆ ಪೂಜೆ ಮಾಡಲಾಯಿತು. ಈ ವೇಳೆ ನಂದ, ಭದ್ರಾ, ಜಯ, ರಿಕ್ತಾ, ಪೂರ್ಣಾ ಹೆಸರಿನ ಇಟ್ಟಿಗೆಗೆ ಪೂಜೆ ನಡೆಯಿತು. ಶ್ರೀರಾಮ ಸೂರ್ಯವಂಶ ರಾಜನಾಗಿರುವ ಕಾರಣ ಮಧ್ಯಾಹ್ನ ಶಿಲಾನ್ಯಾಸ ಮಾಡಿದರೆ ಸೂರ್ಯನ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಭೂಮಿ ಪೂಜೆಗೆ ಸಮಯವನ್ನು ನಿಗದಿ ಮಾಡಲಾಗಿತ್ತು.

    https://twitter.com/DDNational/status/1290906611226034176

    ಈ ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉಪಸ್ಥಿತರಿದ್ದರು.

    ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಮೊದಲು ಹೆಲಿಪ್ಯಾಡ್‍ನಿಂದ ನೇರವಾಗಿ ಹನುಮಂತ ದೇವಾಲಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಜೊತೆ ಹೋಗಿದ್ದರು. ಮಾಸ್ಕ್ ಧರಿಸಿ ಆರತಿ ಎತ್ತಿ ಹನುಮಂತ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ನಂತರ ಮೋದಿಗೆ ಬೆಳ್ಳಿಯ ಕೀರಿಟ, ರಾಮನಾಮ ಇರುವ ಶಾಲನ್ನು ಹೊದಿಸಿ ಗೌರವಿಸಲಾಯಿತು.

    ಪ್ರಧಾನಿ ಮೋದಿ ರಾಮ್‍ಲಲ್ಲಾ ದರ್ಶನ ಮಾಡಿದ್ದು, ಈ ಮೂಲಕ ರಾಮ್‍ಲಲ್ಲಾ ದರ್ಶನ ಮಾಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಂತರ ಅಲ್ಲಿಯೇ ಪಾರಿಜಾತ ಗಿಡವನ್ನು ನೆಟ್ಟಿದ್ದಾರೆ.

    ಹನುಮಂತ ಇಲ್ಲದೇ ರಾಮನ ಯಾವುದೇ ಕೆಲಸ ಆರಂಭಗೊಳ್ಳುವುದಿಲ್ಲ. ಈ ಕಾರಣಕ್ಕೆ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರು ಮೊದಲು ಹನುಮಂತನ ಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು. ನಂತರ ರಾಮ ದೇವಸ್ಥಾನದ ಭೂಮಿ ಪೂಜೆಯನ್ನು ಸಲ್ಲಿಸಿದ್ದಾರೆ.

  • ಒಂದು ಇಂಚಿನ ಚಿನ್ನದ ರಾಮನ ಪ್ರತಿಮೆ ತಯಾರು

    ಒಂದು ಇಂಚಿನ ಚಿನ್ನದ ರಾಮನ ಪ್ರತಿಮೆ ತಯಾರು

    ಚೆನ್ನೈ: ಶತಮಾನಗಳ ಕನಸು ನನಸಾಗುವ ಸಂದರ್ಭದಲ್ಲಿ ಚಿಕಣಿ ಕಲಾವಿದರೊಬ್ಬರು ಚಿನ್ನವನ್ನು ಬಳಸಿ ಭಗವಾನ್ ಶ್ರೀರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ. ಇದನ್ನೂ ಓದಿ: ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ

    ಇಂದು ಧನುರ್ಧಾರಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರಲಿದೆ. ಹೀಗಾಗಿ ರಾಮನೂರು ಅಯೋಧ್ಯೆ ನವ ವಧುವಿನಂತೆ ಶೃಂಗಾರಗೊಂಡಿದ್ದು, ದೀಪಾವಳಿಯಂತಹ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಕೊಯಮತ್ತೂರಿನ ಚಿಕಣಿ ಕಲಾವಿದ ಮರಿಯಪ್ಪನ್ ರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ. ಇದನ್ನೂ ಓದಿ: ಭೂಕಂಪಕ್ಕೂ ಜಗ್ಗದಂತೆ ನಿರ್ಮಾಣವಾಗಲಿದೆ ರಾಮ ಮಂದಿರ

    ಮರಿಯಪ್ಪನ್ 1.2 ಗ್ರಾಂ ಚಿನ್ನವನ್ನು ಬಳಸಿ ಇಂದು ಇಂಚಿನ ರಾಮನ ಪ್ರತಿಮೆಯನ್ನು ತನ್ನ ಕೈಯಾರೆ ತಯಾರಿಸಿದ್ದಾರೆ. ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಇದರ ನೆನಪಿಗಾಗಿ ಮರಿಯಪ್ಪನ್ ಚಿನ್ನದ ರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ.

    https://twitter.com/ANI/status/1290743128681410560

    “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ಐತಿಹಾಸಿಕವಾಗಿದೆ. ಈ ಸಂದರ್ಭವನ್ನು ಗುರುತಿಸಲು ನಾನು 1.2 ಗ್ರಾಂ ಚಿನ್ನವನ್ನು ಬಳಸಿ ಭಗವಾನ್ ರಾಮನ ಒಂದು ಇಂಚಿನ ಪ್ರತಿಮೆಯನ್ನು ಮಾಡಿದ್ದೇನೆ. ಇದನ್ನು ರಾಮಮಂದಿರ ಟ್ರಸ್ಟ್‌ಗೆ ಕಳುಹಿಸುತ್ತೇನೆ” ಎಂದು ಮರಿಯಪ್ಪನ್ ಸಂತಸದಿಂದ ಹೇಳಿದ್ದಾರೆ.

  • ಸುತ್ತ 4 ಚಿಕ್ಕ ಮಂದಿರ – ರಾಮಮಂದಿರದ ಹೊರಗಡೆ ಏನೇನು ಇರಲಿದೆ?

    ಸುತ್ತ 4 ಚಿಕ್ಕ ಮಂದಿರ – ರಾಮಮಂದಿರದ ಹೊರಗಡೆ ಏನೇನು ಇರಲಿದೆ?

    ಲಕ್ನೋ: ಶತಮಾನಗಳಿಂದ ಕಾಯುತ್ತಿರುವ ಕ್ಷಣ ಬಂದಿದ್ದು, ಧನುರ್ಧಾರಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ.

    ದೇಶದ ಸಾಧು-ಸಂತರ ಧರ್ಮ ಹೋರಾಟ, ರಥಯಾತ್ರೆ ಆಂದೋಲನದ ಎಲ್ಲಾ ಮಜಲುಗಳನ್ನು ದಾಟಿ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರುತ್ತಿದೆ. ಹೀಗಾಗಿ ದೇಶಾದ್ಯಂತ ರಾಮನಾಮ ಜಪ ಮೊಳಗುತ್ತಿದೆ. ಎಲ್ಲೆಲ್ಲೂ ಮರ್ಯಾದಾ ಪುರುಷೋತ್ತನ ನಾಮವೇ ಅನುರಣಿಸುತ್ತಿದೆ. ರಾಮನೂರು ಅಯೋಧ್ಯೆ ನವ ವಧುವಿನಂತೆ ಶೃಂಗಾರಗೊಂಡಿದ್ದು, ದೀಪಾವಳಿಯಂತಹ ಸಂಭ್ರಮ ಮನೆ ಮಾಡಿದೆ.

    ರಾಮ ಮಂದಿರದ ಆವರಣ:
    * ರಾಮಮಂದಿರದ ಸುತ್ತ 4 ಚಿಕ್ಕ ಮಂದಿರ ಇರಲಿದೆ. ಭರತ, ಲಕ್ಷ್ಮಣ, ಸೀತಾ, ಗಣೇಶ ದೇವರ ಮಂದಿರವನ್ನು ನಿರ್ಮಿಸಲಾಗುತ್ತದೆ.
    * ರಾಮಮಂದಿರದ ಮುಂಭಾಗ ಎತ್ತರದ ವಿಜಯ ಸ್ತಂಭ
    * ರಾಮಮಂದಿರದ ಎಡಭಾಗದಲ್ಲಿ ಬೃಹತ್ ಕಲಾ ವೇದಿಕೆ
    * ಕಲಾ ವೇದಿಕೆಗೆ 4 ದಿಕ್ಕುಗಳಿಂದಲೂ ಪ್ರವೇಶ ದ್ವಾರ
    * ವೇದಿಕೆ ಸನಿಹದಲ್ಲೇ ಶ್ರೀರಾಮ ಸಂಶೋಧನಾ ಕೇಂದ್ರ
    * ಮಂದಿರ ಸಂತರಿಗೆ, ಸಿಬ್ಬಂದಿಗೆ ಕ್ವಾರ್ಟರ್ಸ್, ರಾಮಕಥಾ ಕುಂಜ್
    * 8 ಅತಿಥಿಗೃಹ, ಭೋಜನಶಾಲೆ ಸೇರಿ ಸುಸಜ್ಜಿತ ಕಾಂಪೌಂಡ್
    * 65 ರಿಂದ 105 ಎಕರೆಯಲ್ಲಿ ಎಕರೆಯಲ್ಲಿ ಅಭಿವೃದ್ಧಿ

    ಪ್ರಧಾನಿ ಮೋದಿ ಇಂದು ಬೆಳಗ್ಗೆ 11.30ಕ್ಕೆ ಅಯೋಧ್ಯೆಗೆ ಬಂದಿಳಿಯಲಿದ್ದು, ಮಧ್ಯಾಹ್ನ 12ಗಂಟೆಗೆ ರಾಮಜನ್ಮಭೂಮಿ ಸ್ಥಳಕ್ಕೆ ಮೋದಿ ತೆರಳಲಿದ್ದಾರೆ. ಅಲ್ಲಿ ಮೋದಿ ರಾಮ್‍ಲಲ್ಲಾ ದರ್ಶನ ಮಾಡಲಿದ್ದಾರೆ. ಈ ಮೂಲಕ ರಾಮ್‍ಲಲ್ಲಾ ದರ್ಶನ ಮಾಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅಲ್ಲಿಯೇ ಪಾರಿಜಾತ ಗಿಡವನ್ನು ನೆಡಲಿದ್ದಾರೆ. ಮಧ್ಯಾಹ್ನ 12.15ರಿಂದ ಭೂಮಿ ಪೂಜೆ ವಿದ್ಯುಕ್ತವಾಗಿ ಶುರುವಾಗಲಿದೆ. ಮಧ್ಯಾಹ್ಮ 12.44ಕ್ಕೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ಪ್ರಧಾನಿ ಮೋದಿ ಭೂಮಿ ಪೂಜೆ ಮುಗಿಸಲಿದ್ದಾರೆ. 40 ಕೆಜಿಯ ಬೆಳ್ಳಿ ಇಟ್ಟಿಗೆ ಇಟ್ಟು ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.