Tag: Ram Mandir Inauguration

  • Ram Mandir Inauguration: ಪ್ರಾಣ ಪ್ರತಿಷ್ಠಾಪನೆಗೆ ಶ್ರೀ ರಾಮಲಲ್ಲಾ ವಿಗ್ರಹ ಆಯ್ಕೆ- ಇಂದು ಅಂತಿಮ ನಿರ್ಣಯ

    Ram Mandir Inauguration: ಪ್ರಾಣ ಪ್ರತಿಷ್ಠಾಪನೆಗೆ ಶ್ರೀ ರಾಮಲಲ್ಲಾ ವಿಗ್ರಹ ಆಯ್ಕೆ- ಇಂದು ಅಂತಿಮ ನಿರ್ಣಯ

    ಲಕ್ನೋ: ಅಯೋಧ್ಯೆಯ (Ayodhya) ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ರಾಮಲಲ್ಲಾ ಮೂರ್ತಿ (RamLala Idol) ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸರ್ವಾನುಮತದಿಂದ ಆಯ್ಕೆಯಾದ ಮೂರ್ತಿಯನ್ನು ಜ.22 ರಂದು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ರಾಮ ಜನ್ಮಭೂಮಿ (Ram Janmbhoomi) ತೀರ್ಥ ಕ್ಷೇತ್ರದ ಟ್ರಸ್ಟಿ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ತಿಳಿಸಿದ್ದಾರೆ.

    ಭವ್ಯ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವ ಶ್ರೀ ರಾಮಲಲ್ಲಾ ವಿಗ್ರಹವನ್ನು ಆಯ್ಕೆ ಮಾಡಲು ಮತದಾನ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ. ವಿಗ್ರಹವನ್ನು ಒಮ್ಮೆ ನೋಡಿದರೆ ನೀವು ಮಂತ್ರಮುಗ್ಧರಾಗುತ್ತೀರಿ. ವಿಗ್ರಹವು ನಿಮ್ಮೊಂದಿಗೆ ಮಾತನಾಡುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರಾಮನೂರಿನಲ್ಲಿಂದು ಮೋದಿ ಮೆಗಾ ಶೋ – 15,000 ಕೋಟಿ ರೂ. ಯೋಜನೆಗೆ ಚಾಲನೆ

    ಹಲವು ವಿಗ್ರಹಗಳನ್ನು ಒಟ್ಟಿಗೆ ಇರಿಸಿದರೂ, ಕಣ್ಣುಗಳು ಉತ್ತಮವಾದವುಗಳ ಕಡೆ ಆಕರ್ಷಣೆಗೊಳ್ಳುತ್ತವೆ. ಕಾಕತಾಳೀಯವೆಂದರೆ ನಾನು ವಿಗ್ರಹವನ್ನು ಇಷ್ಟಪಟ್ಟೆ ಮತ್ತು ಅದಕ್ಕೆ ನನ್ನ ಮತವನ್ನು ನೀಡಿದ್ದೇನೆ. ಆಯ್ಕೆಯಾದ ಮೂರ್ತಿಯನ್ನು ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

    ರಾಮಲಲ್ಲಾ ಮೂರ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಮೂರು ಮೂರ್ತಿಗಳ ಪೈಕಿ ಯಾವ ಮೂರ್ತಿ ಅಂತಿಮವೆಂದು ಇಂದು ಬೆಳಗ್ಗೆ 11 ಗಂಟೆಗೆ ನಿರ್ಣಯವಾಗಲಿದೆ. ಇಬ್ಬರು ಕರ್ನಾಟಕ ಒಬ್ಬರು ರಾಜಸ್ಥಾನ ಮೂಲದ ಶಿಲ್ಪಿಗಳಿಂದ ಬಾಲರಾಮನ ಮೂರ್ತಿ ಕೆತ್ತನೆಯಾಗಿದ್ದು, ರಾಮ ಮಂದಿರ ಟ್ರಸ್ಟ್ ಸಭೆಯ ಬಳಿಕ ಪ್ರತಿಷ್ಠಾಪನೆಗೆ ಯಾವ ಮೂರ್ತಿ ಎಂದು ಖಚಿತಪಡಿಸಲಾಗುತ್ತದೆ.

    ಇತ್ತೀಚೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕಾರ್ಯದರ್ಶಿ ಚಂಪತ್ ರೈ ಅವರು ಮೂರು ವಿಗ್ರಹಗಳಲ್ಲಿ ಐದು ವರ್ಷದ ರಾಮ್ ಲಲ್ಲಾನನ್ನು ಪ್ರತಿಬಿಂಬಿಸುವ (51 ಇಂಚು) 4.3 ಅಡಿ ಎತ್ತರದ ರಾಮನ ವಿಗ್ರಹವನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದರು.

    ಐದು ವರ್ಷದ ಬಾಲಕನ ರೂಪದಲ್ಲಿ, ಬಿಲ್ಲು ಬಾಣ ಹಿಡಿದು ಕಮಲದ ಮೇಲೆ ಕುಳಿತಿರುವ ಬಾಲರಾಮನ ದರ್ಶನಕ್ಕೆ 35 ಅಡಿಗಳ ದೂರದಿಂದ ಅವಕಾಶ ಮಾಡಲಾಗಿದೆ. ಇದನ್ನೂ ಓದಿ: Ram Mandir Inauguration: ಈ ಐವರಿಗೆ ಮಾತ್ರ ರಾಮಮಂದಿರದ ಗರ್ಭಗುಡಿ ಪ್ರವೇಶಕ್ಕೆ ಅವಕಾಶ

  • ರಾಮಮಂದಿರ ಉದ್ಘಾಟನೆಗೆ ದೇಶಾದ್ಯಂತ 50,000 ಕೋಟಿ ರೂ. ವಹಿವಾಟು ಸಾಧ್ಯತೆ

    ರಾಮಮಂದಿರ ಉದ್ಘಾಟನೆಗೆ ದೇಶಾದ್ಯಂತ 50,000 ಕೋಟಿ ರೂ. ವಹಿವಾಟು ಸಾಧ್ಯತೆ

    ಅಯೋಧ್ಯೆ (ರಾಮಮಂದಿರ): ರಾಮ ಜನ್ಮಭೂಮಿ ಅಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ಜನವರಿ ತಿಂಗಳು ಶ್ರೀರಾಮ ಭಕ್ತರಿಗಷ್ಟೇ ಅಲ್ಲ, ವ್ಯಾಪಾರಸ್ಥರು ಹಾಗೂ ಉದ್ಯಮಿಗಳಿಗೂ ಹಬ್ಬದ ಸಂದರ್ಭ. ರಾಮಮಂದಿರ (Ram Mandir) ಉದ್ಘಾಟನೆಯೊಂದಿಗೆ ಜನವರಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಯಲಿದೆ.

    ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜನವರಿಯಲ್ಲಿ 50,000 ಕೋಟಿ ರೂ. ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಅಂದಾಜಿಸಿದೆ. ರಾಮಮಂದಿರ ಮತ್ತು ಭಗವಾನ್‌ ರಾಮನಿಗೆ ಸಂಬಂಧಿಸಿದ ಉತ್ಪನ್ನಗಳ ಖರೀದಿ ಹೆಚ್ಚಾಗಲಿದೆ. ಅದಕ್ಕಾಗಿ ಉದ್ಯಮಿಗಳು ಸಹ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳು ಭರದಿಂದ ಸಾಗಿವೆ ಎಂದು CAIT ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಗೆ ಮೋದಿ ಭೇಟಿ- ಶನಿವಾರದ ಕಾರ್ಯಕ್ರಮಗಳೇನು?

    ಈ ಹೆಚ್ಚುವರಿ ವ್ಯಾಪಾರದ ಬೇಡಿಕೆಯನ್ನು ಪೂರೈಸಲು ಎಲ್ಲಾ ರಾಜ್ಯಗಳ ವ್ಯಾಪಾರಿಗಳು ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ದೊಡ್ಡ ಪ್ರಮಾಣದ ವಿಶೇಷ ಬಟ್ಟೆಯ ಹೂಮಾಲೆಗಳು, ಲಾಕೆಟ್‌ಗಳು, ಕೀ ಚೈನ್‌ಗಳು, ರಾಮ್ ದರ್ಬಾರ್‌ನ ಚಿತ್ರಗಳು, ರಾಮ ಮಂದಿರದ ಮಾದರಿಗಳು, ಭಗವಾನ್ ರಾಮಧ್ವಜ, ಭಗವಾನ್ ರಾಮನ ಅಂಗವಸ್ತ್ರ, ಭಗವಾನ್ ರಾಮನ ಚಿತ್ರವಿರುವ ಫೋಟೋಗಳು.. ಹೀಗೆ ಬಗೆಬಗೆಯ ವಸ್ತುಗಳನ್ನು ಮಾರಾಟ ಮಾಡಲಾಗುವುದು.

    ವಿಶೇಷವಾಗಿ ರಾಮಮಂದಿರದ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಮಾದರಿಗಳನ್ನು ಹಾರ್ಡ್‌ಬೋರ್ಡ್, ಪೈನ್‌ವುಡ್, ಮರ ಇತ್ಯಾದಿಗಳಿಂದ ವಿವಿಧ ಗಾತ್ರಗಳಲ್ಲಿ ತಯಾರಿಸಲಾಗುತ್ತಿದೆ. ಗಮನಾರ್ಹ ವಿಷಯವೆಂದರೆ, ಇವುಗಳನ್ನು ತಯಾರಿಸುವಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಉದ್ಯೋಗವನ್ನು ಪಡೆಯುತ್ತಿದ್ದಾರೆ. ಸ್ಥಳೀಯ ಕುಶಲಕರ್ಮಿಗಳು, ಕಲಾವಿದರು ಮತ್ತು ಕೆಲಸಗಾರರಿಗೆ ಎಲ್ಲಾ ರಾಜ್ಯಗಳಲ್ಲೂ ಉತ್ತಮ ವ್ಯಾಪಾರ ಆಗಲಿದೆ ಎಂದು ಪ್ರವೀಣ್‌ ತಿಳಿಸಿದ್ದಾರೆ. ಇದನ್ನೂ ಓದಿ: ಆ ’84 ಸೆಕೆಂಡ್‌’ ನಡುವೆಯೇ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಯಾಕೆ?

    ಮಣ್ಣಿನ ದೀಪ, ರಂಗೋಲಿ ಬಣ್ಣ, ಅಲಂಕಾರಕ್ಕಾಗಿ ಹೂವು ಮತ್ತು ಮಾರುಕಟ್ಟೆ-ಮನೆಗಳನ್ನು ಬೆಳಗಿಸಲು ವಿದ್ಯುತ್ ಅಲಂಕಾರಿಕ ವಸ್ತುಗಳು ಬೃಹತ್‌ ಪ್ರಮಾಣದ ವ್ಯಾಪಾರ ಪಡೆಯಲು ಸಿದ್ಧವಾಗಿವೆ. ಹೋರ್ಡಿಂಗ್‌, ಪೋಸ್ಟರ್‌, ಬ್ಯಾನರ್‌, ಕರಪತ್ರ, ಸಾಹಿತ್ಯ ಕೃತಿಗಳು, ಸ್ಟಿಕ್ಕರ್‌ಗಳು ಸೇರಿದಂತೆ ದೇಶಾದ್ಯಂತ ಪ್ರಚಾರ ಸಾಮಗ್ರಿಗಳು ಸಹ ಗಣನೀಯ ವ್ಯಾಪಾರ ವಹಿವಾಟಿಗೆ ಸಜ್ಜುಗೊಂಡಿವೆ. ಸೇವಾ ವಲಯವು ದೊಡ್ಡ ವ್ಯಾಪಾರ ಪಡೆಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಪಸ್ಥಿತಿಯೊಂದಿಗೆ ಜ.22 ರಂದು ರಾಮಮಂದಿರ ಉದ್ಘಾಟನೆಯಾಗಲಿದ್ದು, ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭದಲ್ಲಿ 6,000 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ರಾಮ ವಿಗ್ರಹ ಇಂದು ಆಯ್ಕೆ: ಕರ್ನಾಟಕದ ಕಲಾವಿದರ ಕೈಚಳಕ ಗೆಲ್ಲುತ್ತಾ ಮನ..?