Tag: rally

  • ಕಾಂಗ್ರೆಸ್ ಪಕ್ಷಕ್ಕೆ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ನಂಬಿಕೆ ಇಲ್ಲ: ನಳಿನ್ ಕುಮಾರ್ ಕಟೀಲ್

    ಕಾಂಗ್ರೆಸ್ ಪಕ್ಷಕ್ಕೆ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ನಂಬಿಕೆ ಇಲ್ಲ: ನಳಿನ್ ಕುಮಾರ್ ಕಟೀಲ್

    ಚಾಮರಾಜನಗರ: ಕಾಂಗ್ರೆಸ್ ಪಕ್ಷಕ್ಕೆ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ನಂಬಿಕೆ ಇಲ್ಲ. ಹಾಗೂ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿಲ್ಲ. ಅದಕ್ಕೆ ಬೆಳಗಾವಿಯಲ್ಲಿ ಅನುಮತಿ ಕೇಳದೇ ಸಮಾವೇಶ ಮಾಡುತ್ತಿದೆ ಎಂದು ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

    ಚಾಮರಾಜನಗರದಲ್ಲಿ ಇಂದು ಮಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಹತ್ಯೆ ಖಂಡಿಸಿ ಬೈಕ್ ರ‍್ಯಾಲಿ ಹಾಗೂ ಪ್ರತಿಭಟನೆ ಮಾಡಲು ಪೊಲೀಸರಿಗೆ ಅನುಮತಿ ಕೇಳಿದ ಸಂದರ್ಭದಲ್ಲಿ ನೀಡಿರಲಿಲ್ಲ. ಇದೀಗ ಕಾಂಗ್ರೆಸ್ ಬೆಳಗಾವಿಯಲ್ಲಿ ಅನುಮತಿಯನ್ನು ಪಡೆಯದೇ ರ‍್ಯಾಲಿ ಹಾಗೂ ಸಮಾವೇಶ ಮಾಡಲು ಮುಂದಾಗಿದೆ. ಇದರಲ್ಲೇ ತಿಳಿಯುತ್ತದೆ ಅವರಿಗೆ ಪ್ರಜಾಪ್ರಭುತ್ವದ ಮೇಲೆ ಗೌರವ ಇಲ್ಲ ಎಂದು ಅಂತ ಹೇಳಿದ್ರು.

    ಕಾಂಗ್ರೆಸ್ ಪಕ್ಷದವರು ಕಾನೂನು ಮೀರಿ ವರ್ತನೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ ಸಂಸ್ಕೃತಿ ಕಾಂಗ್ರೆಸ್ ಗೆ ಇಲ್ಲ. ಇವರಿಗೆ ಸಮಾಜದ ಸ್ವಾಸ್ಥ್ಯ ಯಾವುದು ಎಂದು ತಿಳಿದಿಲ್ಲ ಅಂತ ಕಿಡಿ ಕಾರಿದರು.

    ಕಾಂಗ್ರೆಸ್ ಸರ್ಕಾರ ಬೆಳಗಾವಿಯಲ್ಲಿ ನಡೆಸುತ್ತಿರುವ ಸಮಾವೇಶದ ಬಗ್ಗೆ ಬಿಜೆಪಿ ಕಾನೂನು ಹಾಗೂ ಸಾಮಾಜಿಕ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ರು.

  • ಗೌರಿ ಲಂಕೇಶ್ ಹಂತಕರನ್ನು ಕೂಡಲೇ ಬಂಧಿಸಿ: ಸಮಾವೇಶದಲ್ಲಿ ಕೈಗೊಂಡ 3 ಹಕ್ಕೊತ್ತಾಯ ಏನು?

    ಗೌರಿ ಲಂಕೇಶ್ ಹಂತಕರನ್ನು ಕೂಡಲೇ ಬಂಧಿಸಿ: ಸಮಾವೇಶದಲ್ಲಿ ಕೈಗೊಂಡ 3 ಹಕ್ಕೊತ್ತಾಯ ಏನು?

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬೆಂಗಳೂರಲ್ಲಿ ಮಂಗಳವಾರ ಬೃಹತ್ ರ‍್ಯಾಲಿ ಹಾಗೂ ಸಮಾವೇಶ ನಡೆಯಿತು. ನಾನೂ ಗೌರಿ ಹೆಸರಿನ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ವಿವಿಧ ಸಾಮಾಜಿಕ ಹೋರಾಟಗಾರರು, ಚಿಂತಕರು, ಪ್ರಗತಿಪರರು, ವಿಚಾರವಾದಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

    ಬಿಜೆಪಿ ಹಾಗೂ ಆರ್‍ಎಸ್‍ಎಸ್ ಕಡೆ ಬೊಟ್ಟು ಮಾಡಿದ ಇವರು ಹಿಂಸೆಯನ್ನು ವಿರೋಧಿಸಿದ ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಮಾದರಿಯಲ್ಲೇ ಗೌರಿ ಲಂಕೇಶ್ ಹತ್ಯೆಯಾಗಿದೆ. ದಾಬೋಲ್ಕರ್‍ರಿಂದ ಗೌರಿ ತನಕ ನಡೆದ ಹತ್ಯೆಗಳಲ್ಲಿ ಗೋವಾದ ಸನಾತನ ಸಂಸ್ಥೆಯಂತ ಮೂಲಭೂತವಾದಿಗಳ ಕೈವಾಡವಿದೆ ಎಂದು ಆರೋಪಿಸಿದ್ರು. ಭಾಷಣದ ವೇಳೆ ಕೆಲವರು ಕಣ್ಣೀರಿಟ್ಟರು.

    ಬೇಟಿ ಬಚಾವ್-ಬೇಟಿ ಪಡಾವ್ ಅಂತಾ ಘೋಷಣೆ ಮಾಡ್ತಾರೆ. ಆದರೆ ಆಕೆ ಹೆಚ್ಚು ಮಾತನಾಡಿದರೆ ಗುಂಡಿಟ್ಟು ಹೊಡೆದು ಉರುಳಿಸ್ತಾರೆ ಅಂತಾ ಕೇಂದ್ರದ ವಿರುದ್ಧ ಹರಿಹಾಯ್ದರು. ರ‍್ಯಾಲಿಯಲ್ಲಿ ಮಾತಾಡಿದ ಪ್ರಗತಿಪರರರು, ಚಿಂತಕರ ಹತ್ಯೆ ಬಗ್ಗೆ ವಿಶ್ವಸಂಸ್ಥೆಗೆ ದೂರು ನೀಡೋದಾಗಿ ಹೇಳಿದರು. ವಿಶೇಷ ಅಂದರೆ ಗೌರಿ ಲಂಕೇಶ್ ಮಾಜಿ ಪತಿ ಚಿದಾನಂದ ರಾಜಘಟ್ಟ ತಮ್ಮ ವಿದೇಶಿ ಪತ್ನಿ ಜೊತೆ ಸಮಾವೇಶಕ್ಕೆ ಬಂದಿದ್ದರು.

    ನನಗೆ 99 ವರ್ಷ ವಯಸ್ಸು, ಈ ವಯಸ್ಸಿನಲ್ಲೂ ನನಗೆ ಹೋರಾಡುವ ಕಿಚ್ಚಿದೆ. ಆದ್ರೆ, ನಿಮ್ಮಲ್ಲಿ ಯಾಕೆ ಇಲ್ಲ ಕಿಚ್ಚು? ದ್ವೇಷ ಪ್ರಚೋದಿಸುವ ಧರ್ಮವನ್ನ ನಾವು ಒಪ್ಪಲ್ಲ. ಬದಲಾವಣೆಗೆ ಈ ಹೋರಾಟ ಅನಿವಾರ್ಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಕಿರಿಯರನ್ನು ಪ್ರಶ್ನಿಸಿದರು.

    ಅನೇಕ ಗೌರಿಯರಿಗೆ ನಮಸ್ಕಾರ ಎಂದು ಕಣ್ಣೀರು ಸುರಿಸುತ್ತಾ ಮಾತು ಆರಂಭಿಸಿದ ಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್ ನೀವೆಲ್ಲಾ ನನ್ನ ಗೌರಿಯರು ಎಂದರು. ಸಾಹಿತಿ ಚಂಪಾ, ಸತ್ತವರು ಎಲ್ಲಿ ಹೋಗುತ್ತಾರೆ, ನೆನಪಿನಾಳದಲ್ಲಿ ಪ್ರತಿಭಟನೆ ಕಾವು ಕೊಡುತ್ತಲೇ ಇರುತ್ತಾರೆ ಎಂದು ಕವನ ವಾಚನ ಮಾಡಿದರು.

    ಕೇಂದ್ರ ರೈಲ್ವೇ ನಿಲ್ದಾಣದಿಂದ ಶುರುವಾದ ನಾನು ಗೌರಿ ಬೃಹತ್ ರ‍್ಯಾಲಿ, ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮುಕ್ತಾಯಗೊಂಡಿತು. ನಗಾರಿ ಬಾರಿಸುವ ಮೂಲಕ ಪ್ರತಿರೋಧ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ದೊರೆಸ್ವಾಮಿಯವರು ಲಂಕೇಶ್ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಗೌರಿಗೆ ಪೆರಿಯಾರ್ ಪ್ರಶಸ್ತಿ ಘೋಷಣೆ ಆಯ್ತು. ಶೀಘ್ರ ಕ್ರಮಕ್ಕೆ ಹಕ್ಕೋತ್ತಾಯ ಮಾಡಲಾಯ್ತು.

    ಪ್ರತಿರೋಧ ಸಮಾವೇಶಕ್ಕೆ ಸ್ವಯಂಪ್ರೇರಿತವಾಗಿ ಸಾವಿರಾರು ಮಂದಿ ಬಂದಿದ್ದರು. ವಿಶೇಷ ಎಂದರೆ ಸಚಿವರಾದ ಖಾದರ್, ಹೆಚ್‍ಎಂ ರೇವಣ್ಣ, ಸಿಪಿಎಂ ನಾಯಕ ಸೀತಾರಂ ಯೆಚೂರಿ, ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್, ಸಾಹಿತಿ ದೇವನೂರು ಮಹಾದೇವ, ಪತ್ರಕರ್ತ ಪಿ. ಸಾಯಿನಾಥ್, ತೀಸ್ತಾ ಸೆಟಲ್ವಾಡ್, ಮುರುಘಾಶ್ರೀಗಳು, ಸ್ವಾಮಿ ಅಗ್ನಿವೇಶ್, ಸ್ವರಾಜ್ ಇಂಡಿಯಾ ಮುಖಂಡರಾದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ಕವಿತಾ ಕೃಷ್ಣನ್, ಜಿಗ್ನೆಶ್ ಮೇವಾನಿ ನಟ ಪ್ರಕಾಶ್ ರೈ ಸೇರಿದಂತೆ ಹಲವು ಪ್ರಗತಿ ಪರ ಚಿಂತಕರು ಭಾಗವಹಿಸಿದ್ದರು.

    ಸಮಾವೇಶದಲ್ಲಿ ಕೈಗೊಂಡ 3 ಹಕ್ಕೊತ್ತಾಯಗಳು:

    1. ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ರಾಜ್ಯ ಸರ್ಕಾರ ರಚಿಸಿರುವ ಎಸ್‍ಐಟಿ ಮುಖಾಂತರ ತೀವ್ರಗೊಳಿಸಿ, ಕಾಲನಿಗದಿತವಾಗಿ ಮುಗಿಸಿ ಹಂತಕರನ್ನು ಹಾಗೂ ಅವರ ಹಿಂದೆ ಇರುವ ಶಕ್ತಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು.

    2. ಗೌರಿ ಲಂಕೇಶ್‍ರು ಕಳೆದ ಒಂದೂವರೆ ದಶಕಗಳಿಂದ ಕೆಲವು ಸಂವಿಧಾನ ವಿರೋಧಿ ಹಾಗೂ ಮಾನವತೆಯ ವಿರೋಧಿಗಳನ್ನು ಖಂಡಿಸುತ್ತಾ ಚಿಂತನೆ ಹಾಗೂ ಹೋರಾಟವನ್ನು ನಡೆಸಿದ್ದರು. ಅವರು ಮಾತ್ರವಲ್ಲದೇ, ಈ ದೇಶದಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ವಿಚಾರವಾದಿಗಳ ಸರಣಿ ಕೊಲೆಗಳು ಇನ್ನೂ ಹಲವಡೆ ನಡೆಯುತ್ತಿದೆ. ಹಾಗಾಗಿ ಈ ಆಯಾಮಗಳನ್ನು ವಿಶೇಷವಾಗಿ ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಬೇಕೆಂದು ಈ ಸಮಾವೇಶವು ಒತ್ತಾಯಿಸುತ್ತದೆ.

    3. ಆರ್‍ಎಸ್‍ಎಸ್, ಹಿಂದೂ ಜಾಗರಣ ವೇದಿಕೆ, ವಿಎಚ್‍ಪಿ, ಭಜರಂಗದಳ, ಶ್ರೀರಾಮಸೇನೆ, ಸನತನ ಸಂಸ್ಥೆ ಇತ್ಯಾದಿ ಆರೆಸ್ಸೆಸ್‍ನ ಅಂಗಸಂಘಟನೆಗಳ ಸದಸ್ಯರು/ಬೆಂಬಲಿಗರು ಈ ಹತ್ಯೆಯನ್ನು ಸಂಭ್ರಮಿಸಿದ ದುರಂತವು ಈ ನಾಡಿನಲ್ಲಿ ನಡೆದುದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಹಾಗೆಯೇ ಬಿಜೆಪಿಯ ನಾಯಕರುಗಳು ಹತ್ಯೆಗೆ ಪರೋಕ್ಷ ಸಮರ್ಥನೆ ನೀಡಿ ಮಾತಾಡಿದ್ದನ್ನೂ ಈ ನಾಡು ನೋಡಿದೆ. ಯಾವುದೇ ಧರ್ಮದ ಬೋಧನೆಗಳಿಗೂ ವಿರುದ್ಧವಾದ ಇಂತಹ ಅಮಾನವೀಯ ನಡವಳಿಕೆಗಳನ್ನು ಸಮಾವೇಶವು ಖಂಡಿಸುತ್ತದೆ. ಈ ಬಗೆಯ ಮನಸ್ಥಿಯನ್ನು ಇಲ್ಲವಾಗಿಸಲು ಪ್ರಯತ್ನ ಪಡುವುದು ನಾಗರಿಕ ಸಮಾಜದ ಸರ್ಕಾರಗಳ ಕರ್ತವ್ಯವಾಗಿದೆ. ಆ ಒಟ್ಟಿನಲ್ಲಿ ಕರ್ನಟಕ ಸರ್ಕರವು ಪರಿಣಾಮಕಾರಿ ಕ್ರಮಗಳನ್ನು ತಗೆದುಕೊಳ್ಳಬೇಕೆಂದು ಆಗ್ರಹಿಸಿಸುತ್ತೇವೆ.

    https://youtu.be/SrOsUvt0IkA

  • ಮಂಗಳೂರು ಚಲೋ ರ‍್ಯಾಲಿ ಪೊಲೀಸರ ನೋಟಿಸ್

    ಮಂಗಳೂರು ಚಲೋ ರ‍್ಯಾಲಿ ಪೊಲೀಸರ ನೋಟಿಸ್

    ಮಂಗಳೂರು: ಬಿಜೆಪಿ ಯುವಮೋರ್ಚಾ ಆಯೋಜಿಸಿರುವ ಮಂಗಳೂರು ಚಲೋ ರ‍್ಯಾಲಿ ತಡೆಯಲು ಪೊಲೀಸರು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ.

    ಮೈಸೂರು, ಮಡಿಕೇರಿ ಭಾಗದಿಂದ ಬೈಕ್ ರ‍್ಯಾಲಿ ಮೂಲಕ ಬರುವ ಕಾರ್ಯಕರ್ತರಿಗೆ ಸೆ.6ರಂದು ಸುಳ್ಯ ತಾಲೂಕಿನ ಕೇರ್ಪಳದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಸುಳ್ಯ ಪೊಲೀಸರು ಈಗ ಹಾಲ್ ವ್ಯವಸ್ಥಾಪಕರಿಗೆ ನೋಟಿಸ್ ನೀಡಿದ್ದು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅವಕಾಶ ನೀಡದಂತೆ ಸೂಚನೆ ನೀಡಿದ್ದಾರೆ.

     

    ಈ ಮೂಲಕ ಮಂಗಳೂರು ಚಲೋ ಕಾರ್ಯಕ್ರಮ ತಡೆಯಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ. ಈಗಾಗಲೇ ಸಚಿವ ಯು.ಟಿ.ಖಾದರ್ ಹಾಗೂ ಎಸ್‍ಡಿಪಿಐ ಸಂಘಟನೆ ಬಿಜೆಪಿ ರ‍್ಯಾಲಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ರ‍್ಯಾಲಿಯಿಂದ ಶಾಂತಿಗೆ ಧಕ್ಕೆಯಾಗಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಬಿಜೆಪಿ ಈ ವಿರೋಧವನ್ನು ಹೇಗೆ ಎದುರಿಸಲಿದೆ ಎನ್ನುವುದು ಕುತೂಹಲದ ವಿಚಾರ.

     

    ಏನಿದು ಮಂಗಳೂರು ಚಲೋ? ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಹಿಂದೆ ಪಿಎಫ್‍ಐ ಸಂಘಟನೆ ಭಾಗಿಯಾಗಿದ್ದು, ಇದನ್ನು ನಿಷೇಧಿಸುವ ಸಲುವಾಗಿ ಸೆಪ್ಟೆಂಬರ್ 7 ರಂದು ಬಿಜೆಪಿ ಯುವಾ ಮೋರ್ಚಾ ಮಂಗಳೂರು ಚಲೋವನ್ನು ಆಯೋಜಿಸಿದೆ. ಸೆಪ್ಟೆಂಬರ್ 5 ರಿಂದ ಬಿಜೆಪಿ ಬೈಕ್ ರ‍್ಯಾಲಿ ಆರಂಭವಾಗಲಿದ್ದು, ಬೆಂಗಳೂರು, ಹುಬ್ಬಳ್ಳಿಯಿಂದ ರ‍್ಯಾಲಿ ಹೊರಟರೆ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರಿನಿಂದ ಸೆಪ್ಟೆಂಬರ್ 6ರಂದು ರ‍್ಯಾಲಿ ಹೊರಡಲಿದೆ. ಕೆಎಫ್ ಡಿ, ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಲಿದ್ದು, ಬಿಎಸ್ ಯಡಿಯೂರಪ್ಪ ಭಾಗವಹಿಸಲಿದ್ದಾರೆ.

    ಇದನ್ನೂ ಓದಿ: ಬೈಕ್ ಅಲ್ಲ ತಲೆ ಕೆಳಗಾಗಿ ಮಂಗ್ಳೂರಿಗೆ ಹೋದ್ರೂ ರಾಜ್ಯಕ್ಕೆ ಪ್ರಯೋಜನವಿಲ್ಲ: ಬಿಜೆಪಿಗೆ ಯುಟಿ ಖಾದರ್ ಟಾಂಗ್

  • ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ತೀವ್ರ- ಸುತ್ತೂರು ಮಠದಲ್ಲಿ ಗೌಪ್ಯ ಸಭೆ

    ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ತೀವ್ರ- ಸುತ್ತೂರು ಮಠದಲ್ಲಿ ಗೌಪ್ಯ ಸಭೆ

    -ನಾಳೆ ಬೆಳಗಾವಿಯಲ್ಲಿ ಬೃಹತ್ ಸಮಾವೇಶ

    ಮೈಸೂರು: ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಮತ್ತೆ ಹೋರಾಟ ತೀವ್ರಗೊಂಡಿದೆ. ಮೈಸೂರಿನ ಸುತ್ತೂರು ಮಠದಲ್ಲಿ ವೀರಶೈವ-ಲಿಂಗಾಯಿತ ಚಿಂತಕರ ಕಾರ್ಯಗಾರ ನಡೆದಿದೆ.

    ಇದೇ ಮೊದಲ ಬಾರಿಗೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸುತ್ತೂರು ಮಠ ವೇದಿಕೆಯಾಗಿದೆ. ಹಲವು ದಿನದಿಂದ ಧರ್ಮ ಸ್ಥಾಪನೆ ವಿಚಾರದ ವಿವಾದದಿಂದ ದೂರ ಇದ್ದ ಶ್ರೀಮಠ ಹಾಗೂ ಸುತ್ತೂರು ಶ್ರೀಗಳು ಸಹ ಇದೇ ಮೊದಲ ಬಾರಿಗೆ ಈ ವಿಚಾರದ ಚರ್ಚೆಗೆ ಮಠದಲ್ಲೇ ವೇದಿಕೆ ಕಲ್ಪಿಸಿದ್ದಾರೆ. ಈ ಕಾರ್ಯಗಾರದಲ್ಲಿ 700ಕ್ಕು ಹೆಚ್ಚು ಮಂದಿ ಭಾಗಿಯಾಗಿದ್ದರು. ಸಮುದಾಯದ ಸಂಪನ್ಮೂಲಗಳ ವ್ಯಕ್ತಿಗಳೊಂದಿಗೆ ವಿಶೇಷ ಚರ್ಚೆ ಕೂಡ ನಡೆಯಿತು. ವೀರಶೈವ-ಲಿಂಗಾಯಿತ ಒಂದಾಗಿರಬೇಕೋ? ಅಥವಾ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪಿಸಲು ಹೋರಾಟ ನಡೆಸಬೇಕೋ ಎನ್ನುವುದರ ಬಗ್ಗೆ ಚರ್ಚೆ ನಡೆಯಿತು.

    ವಿವಿಧ ಕ್ಷೇತ್ರದ ಗಣ್ಯರು ಹಾಗೂ ಸಮುದಾಯದ ಇತರೆ ಮಠಾಧಿಶರು ಕಾರ್ಯಾಗಾರದಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಮಾಧ್ಯಮಗಳನ್ನು ಹೊರಗಿಟ್ಟು ನಡೆದ ಕಾರ್ಯಾಗಾರದಲ್ಲಿ ಅಂತಿಮವಾಗಿ ಯಾವ ನಿರ್ಣಾಯಕ್ಕೂ ಬಂದಿಲ್ಲ. ಬದಲಾಗಿ ಕೇವಲ ಚರ್ಚೆ ಮಾತ್ರ ನಡೆದಿದೆ. ಲಿಂಗಾಯತ ಸ್ವಾತಂತ್ರ್ಯ ಧರ್ಮ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದ ಸುತ್ತೂರು ಮಠ ಈಗ ಇಂತಹ ಚರ್ಚೆಗೆ ವೇದಿಕೆ ಕಲ್ಪಿಸಿರುವುದು ತೀವ್ರ ಕೂತುಹಲ ಕೆರಳಿಸಿದೆ.

    ಅತ್ತ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಆಗ್ರಹಿಸಿ ನಾಳೆ ಬೆಳಗಾವಿ ಚಲೋ ಮಹಾ ಜಾಥಾ ನಡೆಯಲಿದ್ದು, ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗುವ ಸಾಧ್ಯತೆ ಇದೆ.

  • ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಒತ್ತಾಯ – ಆಗಸ್ಟ್ 22ಕ್ಕೆ ಬೆಳಗಾವಿಯಲ್ಲಿ ಬೃಹತ್ ಜಾಥಾ

    ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಒತ್ತಾಯ – ಆಗಸ್ಟ್ 22ಕ್ಕೆ ಬೆಳಗಾವಿಯಲ್ಲಿ ಬೃಹತ್ ಜಾಥಾ

    ಬೆಳಗಾವಿ: ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸ್ವಾತಂತ್ರ್ಯ ಧರ್ಮದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಇದೇ ಆಗಸ್ಟ್ 22ರಂದು ಬೆಳಗಾವಿಯಲ್ಲಿ ಲಿಂಗಾಯತರು ಬೃಹತ್ ಜಾಥಾ ನಡೆಸಲಿದ್ದಾರೆ.

    ಜಾಥಾದಲ್ಲಿ ಮೂರು ಲಕ್ಷ ಲಿಂಗಾಯತರು ಭಾಗವಹಿಸಲ್ಲಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮ ರಚನೆಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಸ್ವಾಮೀಜಿಗಳು ಒತ್ತಾಯ ಮಾಡಲಿದ್ದಾರೆ.

    ಜೈನ, ಬೌದ್ಧ, ಸಿಖ್ ಧರ್ಮದಂತೆ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಬೇಕಾಗಿದೆ ಅಂತಾ ಲಿಂಗಾಯತ ಶ್ರೀಗಳು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಮಾಡಿ ಒತ್ತಾಯ ಮಾಡಿದ್ದಾರೆ.

    ಜುಲೈ 19ರಂದು ಬೀದರ್ ನಲ್ಲಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಆಗ್ರಹಿಸಿ  ಲಿಂಗಾಯತ ಧರ್ಮ ಸಮನ್ವಯ ಸಮಿತಿಯಿಂದ  ಬೃಹತ್ ಮೆರವಣಿಗೆ ನಡೆದಿತ್ತು. ಸರ್ಕಾರದ ಮೇಲೆ ಒತ್ತಡ ಹೇರಲು ನಡೆದ ಈ ಮೆರವಣಿಗೆಯಲ್ಲಿ ಲಿಂಗಾಯತ ಸಮುದಾಯ ಭಾಗವಹಿಸುವ ಮೂಲಕ ಹೋರಾಟಕ್ಕೆ ಸಾಕ್ಷಿಯಾಗಿದ್ದರು

  • ಲಿಂಗಾಯತ ಜಾತಿಯನ್ನು ಸ್ವತಂತ್ರ ಧರ್ಮ ಮಾಡಲು ಆಗ್ರಹಿಸಿ ಬೀದರ್‍ನಲ್ಲಿ ಬೃಹತ್ ಮೆರವಣಿಗೆ

    ಲಿಂಗಾಯತ ಜಾತಿಯನ್ನು ಸ್ವತಂತ್ರ ಧರ್ಮ ಮಾಡಲು ಆಗ್ರಹಿಸಿ ಬೀದರ್‍ನಲ್ಲಿ ಬೃಹತ್ ಮೆರವಣಿಗೆ

    ಬೀದರ್: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಆಗ್ರಹಿಸಿ ಬೀದರ್ ನಲ್ಲಿ ಲಿಂಗಾಯತ ಧರ್ಮ ಸಮನ್ವಯ ಸಮಿತಿಯಿಂದ ಬುಧವಾರ ಬೃಹತ್ ಮೆರವಣಿಗೆ ನಡೆಯಿತು. ಸರ್ಕಾರದ ಮೇಲೆ ಒತ್ತಡ ಹೇರಲು ನಡೆದ ಈ ಮೆರವಣಿಗೆಯಲ್ಲಿ ಲಿಂಗಾಯತ ಸಮುದಾಯ ಭಾಗವಹಿಸುವ ಮೂಲಕ ಹೋರಾಟಕ್ಕೆ ಸಾಕ್ಷಿಯಾದರು.

    ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಲಿಂಗಾಯತ ಸಮುದಾಯ ತಮ್ಮ ಒಗ್ಗಟ್ಟಿನ ಬಲ ಪ್ರದರ್ಶನ ಮಾಡಿದರು. ಗುರುವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಲಿಂಗಾಯತ ಸಮುದಾಯ ನೇಹರು ಕ್ರೀಡಾಂಗಣದಿಂದ ವಿವಿಧ ವೃತ್ತಗಳ ಮೂಲಕ ಮೌನ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ರು. ಲಿಂಗಾಯತ ಜಾತಿಯನ್ನು ಸ್ವತಂತ್ರ ಧರ್ಮ ಮಾಡಬೇಕು ಎಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಬಸವಣ್ಣ ಕರ್ಮಭೂಮಿಯಿಂದ ಎಚ್ಚರಿಕೆ ನೀಡಿದ್ರು.

    ಇಂದು ಕೂಡಾ ಎಲ್ಲಾ ಲಿಂಗಾಯತ ಸಮನ್ವಯ ಸಮಿತಿ ಸದಸ್ಯರು ಒಂದೆಡೆ ಸೇರಿ ಚರ್ಚೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಳಗಾವಿ, ಲಾತೂರ್, ಬೆಂಗಳೂರು, ದೆಹಲಿಯಲ್ಲಿ ಸಮಾವೇಶಗಳನ್ನು ಮಾಡಲಿದ್ದಾರೆ ಎನ್ನಲಾಗಿದೆ.