Tag: rally

  • ಕಳೆದ 1 ವರ್ಷದಿಂದ 20 ಲಕ್ಷ ಬಟ್ಟೆಯ ಬ್ಯಾಗ್ ನೀಡಿದ ಶಿವಾಚಾರ್ಯ ಸ್ವಾಮೀಜಿ

    ಕಳೆದ 1 ವರ್ಷದಿಂದ 20 ಲಕ್ಷ ಬಟ್ಟೆಯ ಬ್ಯಾಗ್ ನೀಡಿದ ಶಿವಾಚಾರ್ಯ ಸ್ವಾಮೀಜಿ

    ಬೆಳಗಾವಿ: ಪ್ರಧಾನಿ ಮೋದಿ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಕೈ ಜೋಡಿಸಿದ್ದಾರೆ.

    ಅಲ್ಲದೇ ಕಳೆದ ಒಂದು ವರ್ಷದಿಂದ ಹುಕ್ಕೇರಿ ಹಿರೇಮಠ ಪರಿಸರ ರಕ್ಷಣೆ ಹಿನ್ನೆಲೆಯಲ್ಲಿ 20 ಲಕ್ಷ ಬಟ್ಟೆಯ ಬ್ಯಾಗ್‍ಗಳನ್ನು ನೀಡಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಲು ಶ್ರಮ ವಹಿಸುತ್ತಿದೆ ಎಂದು ಹೇಳಿದ್ದಾರೆ.

    ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕರೆ ನೀಡಿರುವ ಪ್ಲಾಸ್ಟಿಕ್ ಮುಕ್ತ ಭಾರತ ಆಂದೋಲನಕ್ಕೆ ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಚಂದ್ರಶೇಖರ ಶಿವಾಚಾರ್ಯ ಶ್ರೀಗಳಿಂದ ಜಾಗೃತಿ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ರ‍್ಯಾಲಿ ಹಮ್ಮಿಕೊಳ್ಳಲಾಯಿತು.

    ಹುಕ್ಕೇರಿ ಪಟ್ಟಣದ ಪ್ರಮುಖ ಬೀದಿ ಬದಿಯ ಕಸವನ್ನು ಸ್ವತಃ ಸ್ವಾಮೀಜಿಗಳೇ ಸ್ವಚ್ಛ ಮಾಡಿ ಇತರರಿಗೂ ಮಾದರಿಯಾದರು. ಈ ರ‍್ಯಾಲಿ ಮೂಲಕ ಶ್ರೀಗಳು ವ್ಯಾಪಾರಿಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿಕೊಂಡರು.

    ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮೊದಲು ದೇವಸ್ಥಾನಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕರೆ ನೀಡುವುದರ ಜೊತೆಗೆ ಪಟ್ಟಣದ ದೇವಸ್ಥಾನಗಳಿಗೆ ಸ್ಟೀಲ್ ಕಸದ ಬುಟ್ಟಿ ನೀಡಿ ಪ್ಲಾಸ್ಟಿಕ್ ಬಳಸದಂತೆ ದೇವಸ್ಥಾನಗಳ ಅರ್ಚಕರಲ್ಲಿ ಮನವಿ ಮಾಡಿಕೊಂಡರು.

  • ಕಾವೇರಿ ಕೂಗು ಬೈಕ್ ಜಾಥಾಕ್ಕೆ ಸ್ಯಾಂಡಲ್‍ವುಡ್ ನಟರ ಸಾಥ್

    ಕಾವೇರಿ ಕೂಗು ಬೈಕ್ ಜಾಥಾಕ್ಕೆ ಸ್ಯಾಂಡಲ್‍ವುಡ್ ನಟರ ಸಾಥ್

    ಮಡಿಕೇರಿ: ಈಶ ಫೌಂಡೇಶನ್ ಆಶ್ರಯದಲ್ಲಿ ‘ಕಾವೇರಿ ಕೂಗು’ ಅಭಿಯಾನದ ಆರಂಭಗೊಂಡಿದ್ದು, ಇಂದು ತಲಕಾವೇರಿಯಿಂದ ಶುರುವಾಗುವ ಬೈಕ್ ರ‍್ಯಾಲಿಗೆ ಫೌಂಡೇಶನ್‍ನ ಅಧ್ಯಕ್ಷ ಜಗ್ಗಿ ವಾಸುದೇವ್ ಚಾಲನೆ ನೀಡಿದರು.

    ಇಂದಿನಿಂದ ಆರಂಭವಾಗಿರುವ ಕಾವೇರಿ ಕೂಗು ಬೈಕ್ ರ‍್ಯಾಲಿ 8ರಂದು ಬೆಂಗಳೂರು ತಲುಪಲಿದೆ. ಕೊಡಗಿನ ಕಾವೇರಿ ಉಗಮ ಸ್ಥಾನದಿಂದ ಸಂಚಾರ ಪ್ರಾರಂಭವಾಗಿ ಪೊಂಪು ಹಾರ್ ನಲ್ಲಿರುವ ತಿರುವರೂರ್ ಮೂಲಕ ಸಾಗಿ, ಚೆನ್ನೈನಲ್ಲಿ ಮುಕ್ತಾಯವಾಗಲಿದೆ. ರ‍್ಯಾಲಿ ಸಾಗುವ ಮಾರ್ಗಮಧ್ಯೆ ಕಾವೇರಿ ಕೂಗಿನ ಬಗ್ಗೆ ಅರಿವು ಮೂಡಿಸಲಾಗುತ್ತದೆ.

    ಕಾವೇರಿ ಕೂಗು ಬೈಕ್ ಜಾಥಾಕ್ಕೆ ಸ್ಯಾಂಡಲ್‍ವುಡ್ ನಟರಾದ ನಟ ದಿಗಂತ್ ಮತ್ತು ರಕ್ಷಿತ್ ಶೆಟ್ಟಿ ಸಾಥ್ ನೀಡಿದರು. ಈ ಬಗ್ಗೆ ಮಾತಾನಾಡಿದ ರಕ್ಷಿತ್ ಹಾಗೂ ದಿಗಂತ್, ಕಾವೇರಿ ಕೊಳ್ಳ ಪ್ರದೇಶದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಫಲವತ್ತತೆ ಕಡಿಮೆಯಾಗಿ ಭೂ ಕುಸಿತ, ಪ್ರವಾಹಗಳು ಸೃಷ್ಟಿ ಆಗುತ್ತಿವೆ. ಫಲವತ್ತತೆ ಹೆಚ್ಚಿಸಲು ಮರಗಳನ್ನು ನೆಡಬೇಕಾದ ಅಗತ್ಯವಿದೆ ಎಂದು ನಟ ದಿಗಂತ್ ತಲಕಾವೇರಿಯಲ್ಲಿ ಹೇಳಿದರು. ಅಲ್ಲದೆ ಕಾವೇರಿ ಕೊಳ್ಳಪ್ರದೇಶದಲ್ಲಿ 1 ಲಕ್ಷ ಗಿಡನೆಟ್ಟು ಬೆಳೆಸುತ್ತೇವೆ ನಟ ರಕ್ಷಿತ್ ಶೆಟ್ಟಿ ತಿಳಿಸಿದರು.

    ಈ ಕಾವೇರಿ ಕೂಗು ಬಗ್ಗೆ ಮಾತಾನಾಡಿದ ಈಶ ಫೌಂಡೇಶನ್ ಅಧ್ಯಕ್ಷ ಜಗ್ಗಿ ವಾಸುದೇವ್, ಇಷ್ಟು ಮಳೆ ಬರುತ್ತಿದ್ದರೂ ದೇಶದಲ್ಲಿ ಕುಡಿಯಲು ನೀರಿಲ್ಲದಾಗಿದೆ. ನೂರು ವರ್ಷಗಳ ಹಿಂದೆ ಬರುತ್ತಿದ್ದ ಪ್ರಮಾಣದಲ್ಲೇ ಮಳೆ ಬರುತ್ತಿದೆ. ಇದಕ್ಕೆ ಕಾರಣ ಭೂಮಿಗೆ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಕಳೆದುಕೊಂಡಿದೆ. ಹೀಗಾಗಿಯೇ ಕೊಡಗಿನಲ್ಲಿ ಕಳೆದ ಬಾರಿ ಭೂ ಕುಸಿತ ಮತ್ತು ಪ್ರವಾಹ ಸೃಷ್ಟಿ ಆಯಿತು. ಸಹಜವಾಗಿ ಕಾಡು ಇರುವಲ್ಲಿ ಭೂ ಕುಸಿತವಾಗಿಲ್ಲ. ಬದಲಾಗಿ ನಾವು ಎಲ್ಲೆಲ್ಲಿ ಕೈ ಇಟ್ಟಿದ್ದೇವೊ ಅಲ್ಲಿ ಭೂಕುಸಿತವಾಗಿದೆ ಎಂದರು.

    ಬಳಿಕ ಮಾತನಾಡಿದ ಅವರು, ಕಾವೇರಿ ಕೊಳ್ಳ ಪ್ರದೇಶದಲ್ಲಿ ಕಳೆದ 10 ವರ್ಷದಲ್ಲಿ 47 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾವೇರಿ ನದಿಯ ನೀರಿ ಸರಿಯಾಗಿ ಸಮುದ್ರ ಸೇರುತ್ತಿಲ್ಲ. ಸಮುದ್ರ ಸೇರುವ ಮೊದಲೇ ನೀರು ಬತ್ತು ಹೋಗುತ್ತಿದೆ. ಈ ಉದ್ದೇಶಕ್ಕಾಗಿಯೇ ಕಾವೇರಿ ಕೂಗು ಅಭಿಯಾನ ಆರಂಭವಾಗಿದೆ ಎಂದು ತಿಳಿಸಿದರು.

  • ದೇಶದ ಮೊದಲ ಮಹಿಳಾ ಸೇನಾ ಭರ್ತಿ ರ‍್ಯಾಲಿಗೆ ಬೆಳಗಾವಿಯಲ್ಲಿ ಚಾಲನೆ

    ದೇಶದ ಮೊದಲ ಮಹಿಳಾ ಸೇನಾ ಭರ್ತಿ ರ‍್ಯಾಲಿಗೆ ಬೆಳಗಾವಿಯಲ್ಲಿ ಚಾಲನೆ

    ಬೆಳಗಾವಿ: ದೇಶದಲ್ಲೇ ಇದೆ ಮೊದಲ ಬಾರಿಗೆ ನಡೆಯಲಿರುವ ಮಹಿಳಾ ಸೇನಾ ಭರ್ತಿ ರ‍್ಯಾಲಿಗೆ ಇಂದು ಬೆಳಗಾವಿಯ ಎಂಎಲ್‍ಐಆರ್‍ ಸಿ ಕೇಂದ್ರದ ಶಿವಾಜಿ ಮೈದಾನದಲ್ಲಿ ಚಾಲನೆ ನೀಡಲಾಗಿದೆ.

    ಇಂದಿನಿಂದ ಐದು ದಿನಗಳ ಕಾಲ ರಾಜ್ಯದ ಏಕೈಕ ಸೈನಿಕ ತರಬೇತಿ ಕೇಂದ್ರ ಮರಾಠಾ ಲಘು ಪದಾತಿದಳದಿಂದ ಮಹಿಳಾ ಸೇನಾ ಭರ್ತಿ ಕಾರ್ಯ ನಡೆಯಲಿದೆ. ಈ ಸೇನಾ ಭರ್ತಿಗೆ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಮತ್ತು ತೆಲಂಗಾಣ ರಾಜ್ಯದಿಂದ ಅಭ್ಯರ್ಥಿಗಳು ಆಗಮಿಸಿದ್ದಾರೆ. ಇದರ ಜೊತೆಗೆ ಈ ಸೇನಾ ಭರ್ತಿ ರ‍್ಯಾಲಿಯಲ್ಲಿ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ.

    ಈ ಹಿಂದೆ ಸೇನಾ ಭರ್ತಿ ರ‍್ಯಾಲಿಗೆ 15 ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕಿದ್ದರು. ಈ ಪೈಕಿ ಮೆರಿಟ್ ಮೇಲೆ 3 ಸಾವಿರ ಅಭ್ಯರ್ಥಿಗಳ ಆಯ್ಕೆ ಮಾಡಿ ಇಂದಿನಿಂದ ನೇಮಕಾತಿ ವಿಭಾಗದ ಉಪ ಮಹಾನಿರ್ದೇಶಕ ದೀಪೇಂದ್ರ ರಾವತ್ ನೇತೃತ್ವದಲ್ಲಿ ದೈಹಿಕ ಪರೀಕ್ಷೆ ಮಾಡಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ.

  • ಸಾರಿಗೆ ಸಚಿವರ ವಿರುದ್ಧ ಸಾರಿಗೆ ನೌಕರರ ವಾರ್

    ಸಾರಿಗೆ ಸಚಿವರ ವಿರುದ್ಧ ಸಾರಿಗೆ ನೌಕರರ ವಾರ್

    ಬೆಂಗಳೂರು: ಇಂದು ನಗರದಲ್ಲಿ ಬಿಎಂಟಿಸಿ ಬಸ್ ಇರುತ್ತಾ ಇಲ್ವಾ, ಸಾರಿಗೆ ನೌಕರರ ಬೆಂಗಳೂರು ಚಲೋ ರ‍್ಯಾಲಿಯಿಂದಾಗಿ ಹೀಗೊಂದು ಪ್ರಶ್ನೆ ಮೂಡಿದೆ. ಸಾರಿಗೆ ಸಚಿವರ ವಿರುದ್ಧ ಸಮರ ಸಾರಿರರುವ ನೌಕರರು ಇಂದು ಬೀದಿಗಿಳಿಯಲಿದ್ದಾರೆ.

    ಇಂದು ಬಿಎಂಟಿಸಿ, ಕೆಎಸ್‍ಆರ್ ಟಿಸಿ ಸೇರಿದಂತೆ ಸರ್ಕಾರಿ ಸಾರಿಗೆ ವ್ಯವಸ್ಥೆಯ ಸೇವೆಯಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆ ಇದೆ. ಏಕೆಂದರೆ ಇಂದು ನಾಲ್ಕು ಸಾರಿಗೆ ನಿಗಮದ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಬೆಂಗಳೂರು ಚಲೋ ನಡೆಸಲಿದ್ದು ಬೀದಿಗಿಳಿಯಲಿದ್ದಾರೆ. ಸಾರಿಗೆ ಕಾರ್ಮಿಕ ಸಂಘಟನೆ ಸಿಐಟಿಯು ಉಪಾಧ್ಯಕ್ಷ ಅನಂತ ಸುಬ್ಬರಾವ್ ಈ ಬೆಂಗಳೂರು ಚಲೋಗೆ ಕರೆಕೊಟ್ಟಿದ್ದು, ಸಾರಿಗೆ ಸಚಿವರ ವಿರುದ್ಧ ಈ ವಾರ್ ಎಂದಿದ್ದಾರೆ. ಹಾಗಿದ್ರೆ ಈ ರ‍್ಯಾಲಿಗೆ ಏನ್ ಕಾರಣ, ಎಷ್ಟು ಜನ ನೌಕರರು ಭಾಗಿಯಾಗಲಿದ್ದಾರೆ ಜನ್ರಿಗೇನು ಸಮಸ್ಯೆಯಾಗಲಿದೆ ಎನ್ನವುದು ನೋಡೋದಾದರೆ.

    ಸಾರಿಗೆ ಸಚಿವರ ವಿರುದ್ಧ ನೌಕರರ ಕೋಪ ಯಾಕೆ;
    1. ಸಾರಿಗೆ ನಿಗಮ ನಷ್ಟದ ಹಾದಿಯಲ್ಲಿದೆ. ಇದು ಉದ್ದೇಶಪೂರ್ವಕ, ಸಾರಿಗೆ ನಿಗಮವನ್ನು ನಷ್ಟದ ನೆಪವೊಡ್ಡಿ ಖಾಸಗೀಕರಣ ಮಾಡಲಿದ್ದಾರೆ.
    2. ಸಾರಿಗೆ ನೌಕರರಿಗೆ ಡಿಸಿ ತಮ್ಮಣ್ಣ ಬಂದ ಬಳಿಕ ಸರಿಯಾದ ವೇತನ ಸಿಗುತ್ತಿಲ್ಲ, ಪಿಎಫ್ ದುಡ್ಡು, ಇನ್ಸೂರೆನ್ಸ್ ಹಣ ಪಾವತಿ ಮಾಡುತ್ತಿಲ್ಲ. ನೌಕರರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ನಿಗದಿತ ಸಂದರ್ಭದಲ್ಲಿ ವೇತನ ಪಾವತಿಸಬೇಕು ಎನ್ನುವುದು ಬೇಡಿಕೆ.
    3. ಡಿಸಿ ತಮ್ಮಣ್ಣ ಎಂದ್ರೆ ‘ಡೈರೆಕ್ಟ್ ಕಲೆಕ್ಷನ್’ ಅಂತಾ. ಸಿಎಂ ಸಂಬಂಧಿಯಾಗಿರೋದ್ರಿಂದ ಅವರು ಇದರ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ನಿಗಮದ ಕಾರ್ಮಿಕ ಸಂಘಟನೆಗಳ ಆರೋಪ
    4. ಸಾರಿಗೆ ನಿಗಮ ಕೋಟಿ ಕೋಟಿ ಲೆಕ್ಕದಲ್ಲಿ ನಷ್ಟದಲ್ಲಿದೆ. ಬೇಕಾಬಿಟ್ಟಿ ಸಾಲವನ್ನು ಕೂಡ ಮಾಡಲಾಗಿದೆ.
    5. ವಿದ್ಯಾರ್ಥಿಗಳ ಪಾಸ್ ದುಡ್ಡನ್ನು ಸರ್ಕಾರ ನಿಗಮಕ್ಕೆ ನೀಡಿಲ್ಲ ಬಾಕಿ ಇಟ್ಟುಕೊಂಡಿದೆ.

    ರ‍್ಯಾಲಿ ಹೇಗಿರಲಿದೆ?
    * ಶುಕ್ರವಾರ 11 ಗಂಟೆಗೆ, ಲಾಲ್‍ಬಾಗ್‍ನಿಂದ ಶಾಂತಿನಗರದ ಕೆಎಸ್‍ಆರ್ ಟಿಸಿ ಮುಖ್ಯ ಕಚೇರಿಯವರೆಗೆ ರ‍್ಯಾಲಿ ನಡೆಯಲಿದೆ.
    * ರಾಜ್ಯಾದ್ಯಾಂತ ಸಾರಿಗೆ ನೌಕರರು ಹಾಗೂ ಬಿಎಂಟಿಸಿ ಚಾಲಕ ನಿರ್ವಾಹಕರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
    * ಕರ್ತವ್ಯಕ್ಕೆ ಹಾಜರಾಗದೇ ರ‍್ಯಾಲಿಯಲ್ಲಿ ಪಾಲ್ಗೊಳ್ಳೋದ್ರಿಂದ ಬಸ್ ಸೇವೆಯಲ್ಲಿ ವ್ಯತ್ಯಯವಾಗಬಹುದು.
    * ಆದರೆ ನಾಳೆಯ ರ‍್ಯಾಲಿಗೆ ಕಡ್ಡಾಯವಾಗಿ ಸಿಬ್ಬಂದಿಗಳಿಗೆ ಭಾಗವಹಿಸುವಂತೆ ಸೂಚಿಸಿಲ್ಲ. ಆದರೆ ತಮ್ಮ ಬೇಡಿಕೆ ಈಡೇರಿಕೆಗಾಗಿ ನೌಕರರು ಸ್ವಯಂಪ್ರೇರಿತರಾಗಿ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ಭಾಗಿಯಾದರೆ ಜನರಿಗೆ ತೊಂದರೆಯಾಗಲಿದೆ.
    * ಮೂರು ಸಾವಿರ ಜನ ಸೇರೋದ್ರಿಂದ ಶಾಂತಿನಗರ, ಲಾಲ್ ಬಾಗ್ ರಸ್ತೆ, ಜಯನಗರ ಅಸುಪಾಸು ಟ್ರಾಫಿಕ್ ಬಿಸಿ ತಟ್ಟಬಹುದು.

  • ಮೋದಿ ವಂದೇ ಮಾತರಂ ಘೋಷಣೆ ಕೂಗಿದ್ರೂ ಮೌನವಾಗಿದ್ದ ನಿತೀಶ್ ಕುಮಾರ್- ವಿಡಿಯೋ

    ಮೋದಿ ವಂದೇ ಮಾತರಂ ಘೋಷಣೆ ಕೂಗಿದ್ರೂ ಮೌನವಾಗಿದ್ದ ನಿತೀಶ್ ಕುಮಾರ್- ವಿಡಿಯೋ

    – ಭಾರೀ ಚರ್ಚೆಗೆ ಕಾರಣವಾಯ್ತು ಜೆಡಿಯು ನಾಯಕನ ನಡೆ

    ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ವಂದೇ ಮಾತರಂ ಘೋಷಣೆ ಕೂಗಿದಾಗ ನಿತೀಶ್ ಕುಮಾರ್ ಮೌನವಾಗಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬಿಹಾರದ ದರ್ಭಂಗದಲ್ಲಿ ಏಪ್ರಿಲ್ 25ರಂದು ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಎನ್‍ಡಿಎ ಮೈತ್ರಿಕೂಟದ ನಾಯಕರು ಭಾಗವಹಿಸಿದ್ದರು. ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರು ಭಾಷಣ ಮಾಡಿ, ಕೊನೆಗೆ ವಂದೇ ಮಾತರಂ, ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಎಲ್ಲ ನಾಯಕರು ಜೈಕಾರ ಹೇಳಿದ್ದಾಹ ಬಿಹಾರದ ಸಿಎಂ, ಜೆಡಿಯು ಪಕ್ಷದ ನಾಯಕ ನಿತೀಶ್ ಕುಮಾರ್ ಮೌನವಾಗಿದ್ದರು.

    https://twitter.com/DilliDurAst/status/1123272927649026048

    ವಂದೇ ಮಾತರಂ ಘೋಷಣೆ ಮುಗಿಲು ಮುಟ್ಟುತ್ತಿದ್ದಂತೆ ವೇದಿಕೆ ಮೇಲಿದ್ದ ಬಿಜೆಪಿ ನಾಯಕರು ಎದ್ದು ನಿಂತಿದ್ದಾರೆ. ಇತ್ತ ಎನ್‍ಡಿಎ ಮಿತ್ರ ಪಕ್ಷ ಲೋಕಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ಕೂಡ ಧ್ವನಿಗೂಡಿಸಿದ್ದಾರೆ. ಎಲ್ಲ ನಾಯಕರು ಹಾಗೂ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಜನರು ಅತ್ಯುತ್ಸಾಹದಿಂದ ಕೈಗಳನ್ನು ಮುಷ್ಠಿ ಮಾಡಿ, ಘೋಷಣೆ ಕೂಗುತ್ತ ಒಬ್ಬೊಬ್ಬರೇ ಎದ್ದು ನಿಂತಿದ್ದಾರೆ. ಆದರೆ ನಿತೀಶ್ ಕುಮಾರ್ ಅವರು ಕೊನೆಯಲ್ಲಿ ಅನಿವಾರ್ಯ ಎಂಬಂತೆ ಎದ್ದು ನಿಲ್ಲುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನಡೆದ ನಡೆದ ಸಮಾವೇಶದಲ್ಲಿ ಮಾತನಾಡಿ, ವಂದೇ ಮಾತರಂ ಘೋಷಣೆ ಜೀವನಕ್ಕೆ ಶಕ್ತಿ ತುಂಬುತ್ತದೆ. ಅಷ್ಟೇ ಅಲ್ಲದೆ ದೇಶದ ಭದ್ರತೆ, ಶಾಂತಿ ಹಾಗೂ ಸಮೃದ್ಧಿಯನ್ನು ಖಾತರಿಪಡಿಸುವ ಜವಾಬ್ದಾರಿ ಕೂಡ ಆಗಿದೆ. ಕೆಲ ವ್ಯಕ್ತಿಗಳಿಗೆ ವಂದೇ ಮಾತರಂ ಘೋಷಣೆ ಕೂಗಲು ತೊಂದರೆ ಆಗುತ್ತಿದೆ. ಅಂತವರು ಠೇವಣಿಯನ್ನೇ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದರು.

  • ಸುಮಲತಾ ರೋಡ್ ಶೋನಲ್ಲಿ ಜನಜಾತ್ರೆ

    ಸುಮಲತಾ ರೋಡ್ ಶೋನಲ್ಲಿ ಜನಜಾತ್ರೆ

    ಮಂಡ್ಯ: ಇಂದು ಲೋಕಸಭಾ ಚುನಾವಣೆ ಪ್ರಚಾರಕ್ಕೆ ಕೊನೆಯ ದಿನವಾಗಿದ್ದು, ಹೀಗಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಬಹಿರಂಗ ಸಮಾವೇಶಕ್ಕೆ ಅಪಾರ ಸಂಖ್ಯೆಯ ಜನಸಾಗರವೇ ಹರಿದು ಬರುತ್ತಿದೆ.

    ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಸುಮಲತಾ ಅವರ ಬಹಿರಂಗ ಸಮಾವೇಶ ನಡೆಯಲಿದೆ. ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸುಮಲತಾ ಅವರು ರ‍್ಯಾಲಿಯನ್ನು ಆರಂಭಿಸಿದ್ದಾರೆ. ಈಗಾಗಲೇ ದೇವಸ್ಥಾನದ ಅಂಗಳದಲ್ಲಿ ಜನಸಾಗರವಿದ್ದು, ರ‍್ಯಾಲಿಗೆ ಸುಮಲತಾ ಅಂಬರೀಶ್ ಬೆಂಬಲಿಗರು ಸಿದ್ಧತೆ ಮಾಡಿಕೊಂಡು ಹೊರಟಿದ್ದಾರೆ.

    ಜನಪದ ಕಲಾವಿದರು ಮತ್ತು ಮತ್ತು ವಾದ್ಯದವರು ಸುಮಲತಾ, ದರ್ಶನ್ ಮತ್ತು ಯಶ್ ಅವರನ್ನು ಸ್ವಾಗತಿಸಿದ್ದಾರೆ. ಇತ್ತ ರ‍್ಯಾಲಿಯಲ್ಲಿ ಅಭಿಮಾನಿಗಳು ಪುಟ್ಟಣ್ಣಯ್ಯ ಮತ್ತು ಚೆಲುವರಾಯಸ್ವಾಮಿ ಫ್ಲೆಕ್ಸ್ ಹಿಡಿದಿದ್ದಾರೆ. ಜೊತೆಗೆ ಬಿಜೆಪಿ, ಕಾಂಗ್ರೆಸ್, ರೈತಸಂಘದ ಭಾವುಟಗಳು ಮಿಂಚುತ್ತಿವೆ. ಪುಟ್ಟಣ್ಣಯ್ಯ, ಚೆಲುವರಾಯಸ್ವಾಮಿ ಬೆಂಬಲಿಗರು ಮತ್ತು ಕಾರ್ಯಕರ್ತರು ಸಾವಿರಾರು ಸಂಖ್ಯೆಯ ಜನರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

    ಇತ್ತ ಸಮಾವೇಶಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದು, ಸಮಾವೇಶದ ಕುರ್ಚಿಗಳು ಭರ್ತಿಯಾಗಿ ಜನರು ನಿಂತಿದ್ದಾರೆ. ಸಮಾವೇಶದಲ್ಲೂ ರೈತ ಸಂಘ ಮತ್ತು ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ.

  • ಚೈತ್ರ ನವರಾತ್ರಿ ವ್ರತ – 9 ದಿನದಿಂದ ಉಪವಾಸವಿದ್ದುಕೊಂಡೇ ಮೋದಿ ಪ್ರಚಾರ!

    ಚೈತ್ರ ನವರಾತ್ರಿ ವ್ರತ – 9 ದಿನದಿಂದ ಉಪವಾಸವಿದ್ದುಕೊಂಡೇ ಮೋದಿ ಪ್ರಚಾರ!

    – 13 ರಾಜ್ಯ, 25 ಸಮಾವೇಶದಲ್ಲಿ ಭಾಗಿ
    – ಒಂದು ಬಗೆಯ ಹಣ್ಣು ಮಾತ್ರ ಸೇವನೆ

    ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ರ್ಯಾಲಿ, ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ಮಧ್ಯೆ ಚೈತ್ರ ನವರಾತ್ರಿ ಬಂದಿದ್ದು, ಕಳೆದ 9 ದಿನಗಳಿಂದ ಮೋದಿ ಅವರು ಉಪವಾಸದಲ್ಲಿದ್ದುಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

    ಹೌದು. ಕಳೆದ 9 ದಿನಗಳಿಂದ ಮೋದಿಯವರು ಉಪವಾಸವಿದ್ದುಕೊಂಡೇ ಸುಮಾರು 13 ರಾಜ್ಯಗಳಲ್ಲಿ 25ಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಭಾಗಿಯಾಗಿದ್ದಾರೆ. ಪ್ರತಿದಿನ ಏನಿಲ್ಲ ಅಂದರೂ 1 ರಿಂದ 3 ರ್ಯಾಲಿಯಲ್ಲಿ ಮೋದಿ ಅವರು ಭಾಗಿಯಾಗುತ್ತಿದ್ದಾರೆ. ದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಬೇಕು ಎಂದು ಶ್ರಮಿಸುತ್ತಿರುವ ಮೋದಿ ರ್ಯಾಲಿ, ಪ್ರಚಾರದ ಜೊತೆಗೆ ತಡ ರಾತ್ರಿಯವರೆಗೂ ಪಕ್ಷದ ಮುಖಂಡರೊಡನೆ ಸಭೆ, ಚರ್ಚೆಯನ್ನು ಮಾಡಿ, ಕೆಲವೇ ಗಂಟೆಗಳಷ್ಟೇ ನಿದ್ರೆ ಮಾಡುತ್ತಿದ್ದಾರೆ.

    ಲೋಕಸಭಾ ಚುನಾವಣೆಯೂ ಒಟ್ಟು 7 ಹಂತದಲ್ಲಿ ನಡೆಯಲಿದ್ದು, ಮೋದಿಯವರು ಪಕ್ಷಕ್ಕಾಗಿ ದೇಶಾದ್ಯಂತ ಸುಮಾರು 150ಕ್ಕೂ ಹೆಚ್ಚು ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಆದ್ರೆ ಮೊದಲನೇ ಹಾಗೂ ಎರಡನೇ ಹಂತದ ಚುನಾವಣೆ ವೇಳೆ ಚೈತ್ರ ನವರಾತ್ರಿ ಆರಂಭವಾಗಿದ್ದು, ಕಳೆದ 9 ದಿನಗಳಿಂದ ಮೋದಿಯವರು ಉಪವಾಸ ಮಾಡುತ್ತಿದ್ದಾರೆ. ಊಟವನ್ನು ಸೇವಿಸದೇ ಕೇವಲ ಹಣ್ಣು ಸೇವಿಸಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.

    ಚೈತ್ರ ನವರಾತ್ರಿ ಎಂದರೇನು?
    ದಕ್ಷಿಣ ಭಾರತದಲ್ಲಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಶರನ್ನವರಾತ್ರಿ ಆಚರಿಸುವಂತೆ, ಉತ್ತರ ಭಾರತದಲ್ಲಿ ಚೈತ್ರ ನವರಾತ್ರಿಯನ್ನು ಆಚರಿಸುತ್ತಾರೆ. ಯುಗಾದಿ ಹಬ್ಬದ ದಿನದಿಂದ ಆರಂಭವಾಗುವ ಮುಂದಿನ 9 ದಿನಗಳನ್ನು ಚೈತ್ರ ನವರಾತ್ರಿ ಎಂದು ಆಚರಿಸುತ್ತಾರೆ. ಯುಗಾದಿಯ ದಿನದಿಂದ ಶ್ರೀರಾಮ ಜನಿಸಿದ ಚೈತ್ರ ಶುದ್ಧ ನವಮಿಯವರೆಗೂ ಚೈತ್ರ ನವರಾತ್ರಿಯನ್ನು ಆಚರಿಸುವುದು ವಾಡಿಕೆ. ಈ ಆಚರಣೆಯನ್ನು ರಾಮ ನವರಾತ್ರಿ ಎಂದು ಕರೆಯುತ್ತಾರೆ. ಶರನ್ನವರಾತ್ರಿಯಂತೆ ಚೈತ್ರ ನವರಾತ್ರಿಯಂದು ಪ್ರತಿದಿನ ಶಕ್ತಿ ದೇವತೆಗಳನ್ನು ಪೂಜಿಸಲಾಗುತ್ತದೆ.

    ಮೋದಿ ಆಚರಿಸುವುದು ಹೇಗೆ?
    ಈ ಬಾರಿ ಚೈತ್ರ ನವರಾತ್ರಿ ಏ.6ಕ್ಕೆ ಆರಂಭವಾಗಿದ್ದು, ಇಂದು(ಏ.14) ಮುಕ್ತಾಯವಾಗುತ್ತದೆ. ಸುಮಾರು 45 ವರ್ಷಗಳಿಂದ ಮೋದಿ ಅವರು ಈ ಚೈತ್ರ ನವರಾತ್ರಿಯ ಕಾಲದಲ್ಲಿ ಉಪವಾಸ ಮಾಡುವ ಸಂಪ್ರದಾಯವನ್ನು ಅನುಸರಿಸುತ್ತಾ ಬಂದಿದ್ದಾರೆ. ಈ ಆಚರಣೆಯನ್ನು ಅನುಸರಿಸುತ್ತ ಬಂದಿರುವ ಮೋದಿ ಅವರು ಈ ಸಂದರ್ಭದಲ್ಲಿ ವಿಶೇಷ ಧ್ಯಾನವನ್ನು ಮಾಡುವುದಿಲ್ಲ. ಅದರ ಬದಲಾಗಿ ಒಂದು ಹಣ್ಣನ್ನು ಆಯ್ಕೆ ಮಾಡಿಕೊಂಡು 9 ದಿನಗಳ ಕಾಲ ಆ ಹಣ್ಣನ್ನು ಮಾತ್ರ ಆಹಾರವನ್ನಾಗಿ ಸೇವಿಸುತ್ತಾರೆ. ಅದನ್ನು ಬಿಟ್ಟು ಬೇರೆ ಆಹಾರವನ್ನು ಸೇವಿಸುವುದಿಲ್ಲ.

    ಹಾಗೆಯೇ ಶರನ್ನವರಾತ್ರಿ ಆಚರಣೆಯನ್ನೂ ಕೂಡ ಮೋದಿ ಅವರು ಮಾಡುತ್ತಾರೆ. ಈ ವೇಳೆ ಕೂಡ ಅವರು ಉಪವಾಸವನ್ನು ಮಾಡುತ್ತಾರೆ. ಈ ಸಮಯದಲ್ಲಿ ಕೇವಲ ನೀರು ಹಾಗೂ ಹಣ್ಣಿನ ರಸ ಬಿಟ್ಟರೇ ಬೇರೆ ಏನನ್ನು ಅವರು ಸೇವಿಸುವುದಿಲ್ಲ. ಅಲ್ಲದೇ ಈ ವೇಳೆಯಲ್ಲಿ ಕೆಲವು ಗಂಟೆಗಳ ಕಾಲ ಅವರು ಧ್ಯಾನ ಹಾಗೂ ದೇವರ ಆರಾಧನೆಯನ್ನು ಮಾಡುತ್ತಾರೆ.

    ಒಟ್ಟು 51 ದಿನಗಳಲ್ಲಿ 150 ಮೋದಿ ಸಮಾವೇಶ ನಿಗದಿಯಾಗಿದೆ. ಬೇರೆ ರಾಜಕರಣಿಗಳಂತೆ ಪ್ರಧಾನಿ ಸಚಿವಾಲಯ ಸಂಪೂರ್ಣವಾಗಿ ಚುನಾವಣೆಯ ಸಮಯದಲ್ಲಿ ಸ್ಥಗಿತಗೊಳ್ಳುವುದಿಲ್ಲ. ಸಮಾವೇಶ ಮುಗಿಸಿ ದೆಹಲಿಗೆ ತೆರಳಿದ ಬಳಿಕ ರಾತ್ರಿಯೇ ಅಧಿಕಾರಿಗಳ ಜೊತೆ ಮಹತ್ವದ ವಿಚಾರದ ಬಗ್ಗೆ ಸಭೆ ನಡೆಸುತ್ತಾರೆ. ತಂದ ನಂತರ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿ ನಿದ್ದೆಗೆ ಜಾರಿ ಮುಂಜಾನೆ ಬೇಗನೇ ಏಳುತ್ತಾರೆ.

  • ವೇದಿಕೆಯಲ್ಲೇ ಮಾಜಿ ಸಚಿವರಿಗೆ ಅವಮಾನ- ಎಚ್ ಆಂಜನೇಯ ಸ್ಪಷ್ಟನೆ

    ವೇದಿಕೆಯಲ್ಲೇ ಮಾಜಿ ಸಚಿವರಿಗೆ ಅವಮಾನ- ಎಚ್ ಆಂಜನೇಯ ಸ್ಪಷ್ಟನೆ

    ಚಿತ್ರದುರ್ಗ: ನಾನು ದಲಿತ ನಾಯಕನೂ ಹೌದು, ಕಾಂಗ್ರೆಸ್ ಮುಖಂಡನೂ ಹೌದು. ವೇದಿಕೆಯಲ್ಲಿದ್ದ ನಾಯಕರನ್ನು ಕರೆಯುವಂತೆ ಸಿದ್ದರಾಮಯ್ಯ ನನಗೆ ಸೂಚಿಸಿದರು ಅಷ್ಟೇ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ತಪ್ಪಾಗಿ ಬಿಂಬಿತವಾಗಿದೆ ಎಂದು ಮಾಜಿ ಸಚಿವ ಎಚ್ ಆಂಜನೇಯ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ಸಭೆಯ ವೇಳೆ ವೇದಿಕೆಯಲ್ಲಿ ಅವಮಾನ ಮಾಡಿದ ಬಗ್ಗೆ ಕೇಳಿದಾಗ ಆಂಜನೇಯ ಗರಂ ಆದರು. ನನ್ನ ಸ್ಪಷ್ಟನೆಯನ್ನು ಮಾಧ್ಯಮಗಳು ಪ್ರಕಟಿಸುತ್ತವೆಂಬ ನಂಬಿಕೆಯಿಲ್ಲ. ಅಲ್ಲಿ ಆಗಿದ್ದೇ ಬೇರೆ. ಆದರೆ ಮಾಧ್ಯಮಗಳಲ್ಲಿ ಪ್ರಚಾರ ಆಗಿರುವುದು ಬೇರೆಯಾಗಿದೆ. ಹೀಗಾಗಿ ಸ್ಪಷ್ಟನೆಯನ್ನು ಪ್ರಸಾರ ಮಾಡಿ ಎಂದು ಮಾಧ್ಯಮಗಳಿಗೆ ಆಂಜನೇಯ ಕಿಡಿಕಾರಿದರು.

    ನಾನು ದಲಿತ ನಾಯಕ ಹಾಗೂ ಕಾಂಗ್ರೆಸ್ ಮುಖಂಡನೂ ಹೌದು. ವೇದಿಕೆಯಲ್ಲಿದ್ದ ನಾಯಕರನ್ನು ಕರೆಯುವಂತೆ ಮಾಜಿ ಸಿಎಂ ನನಗೆ ಸೂಚಿಸಿದ್ದರು. ಆದ್ರೆ ಇದೀಗ ಅವರ ಸೂಚನೆ ತಪ್ಪಾಗಿ ಬಿಂಬಿತವಾಗಿದೆ ಎಂದು ಹೇಳಿದರು.

    ಮಾಜಿ ಸಿಎಂ ಸಿದ್ಧರಾಮಯ್ಯ ನನ್ನ ಏಳಿಗೆಗೆ ಸಹಕರಿಸುವ ನಾಯಕನಾಗಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವನಾಗಿದ್ದೆ. ಅವರು ನನ್ನ ಖಾತೆಯಲ್ಲಿ ನನಗೆ ಸರ್ವಾಧಿಕಾರ ನೀಡಿದರು ಅಂದ್ರು.

    ನಡೆದಿದ್ದೇನು?
    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚಿತ್ರದುರ್ಗದಲ್ಲಿ ಭಾಷಣ ಮಾಡುವ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ವೇದಿಕೆಗೆ ಆಗಮಿಸಿದರು. ರಾಹುಲ್ ಗಾಂಧಿಯವರನ್ನು ತಬ್ಬಿಕೊಳ್ಳುವ ಭರದಲ್ಲಿ ಸಿಎಂ ಹಾಗೂ ಮಾಜಿ ಸಿಎಂ ಮಾಜಿ ಸಚಿವ ಆಂಜನೇಯರನ್ನು ಹಿಂದಕ್ಕೆ ತಳ್ಳಿದ ಘಟನೆ ನಡೆದಿತ್ತು.

    ವೇದಿಕೆಗೆ ಮಾಜಿ ಸಿಎಂ ಆಗಮಿಸುತ್ತಿದ್ದಂತೆ ರಾಹುಲ್ ಗಾಂಧಿಯವರು ತಮ್ಮ ಭಾಷಣವನ್ನು ಮೊಟಕುಗೊಳಿಸಿ ಸಿದ್ದರಾಮಯ್ಯನವರನ್ನು ತಬ್ಬಿಕೊಂಡರು. ಈ ವೇಳೆ ಕುಮಾರಸ್ವಾಮಿಯವರು ಸಹ ರಾಹುಲ್ ಬಳಿ ಬಂದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಮಾಜಿ ಸಚಿವ ಆಂಜನೇಯ ಅವರನ್ನು ತಳ್ಳಿ ವೇಣುಗೋಪಾಲ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕುಮಾರಸ್ವಾಮಿ ಹಾಗೂ ರಾಹುಲ್ ಗಾಂಧಿ ಎಲ್ಲರೂ ಒಂದಾಗಿ ಕೈ ಎತ್ತಿ ಬಲ ಪ್ರದರ್ಶನ ಮಾಡಿದರು. ಆಂಜನೇಯ ಅವರನ್ನು ತಳ್ಳುತ್ತಿದ್ದಂತೆ ಅವರು ಹಿಂದೆ ಸರಿದಿದ್ದರು.

    ಸಿದ್ದರಾಮಯ್ಯನವರು ಆಂಜನೇಯನವರಿಗೆ ತಳ್ಳುವ ಮೂಲಕ ದಲಿತರಿಗೆ ಅವಮಾನ ಮಾಡಿದ್ದಾರೆ ಎಂದು ಬರೆದು ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದರು.

  • ರಾಜ್ಯದಲ್ಲಿಂದು ಮೋದಿ ವರ್ಸಸ್ ರಾಹುಲ್ ರ‍್ಯಾಲಿ

    ರಾಜ್ಯದಲ್ಲಿಂದು ಮೋದಿ ವರ್ಸಸ್ ರಾಹುಲ್ ರ‍್ಯಾಲಿ

    – ಮಂಗಳೂರು, ಬೆಂಗಳೂರಿನಲ್ಲಿ ನಮೋ ಕಹಳೆ
    – ಕೋಲಾರ, ಚಿತ್ರದುರ್ಗ, ಮಂಡ್ಯದಲ್ಲಿ ರಾಗಾ ಮತಬೇಟೆ

    ಬೆಂಗಳೂರು: ಇಂದು ರಾಜ್ಯದಲ್ಲಿ ಪ್ರಧಾನಿ ಮೋದಿ ವರ್ಸಸ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮರ. ರಾಹುಲ್ ಗಾಂಧಿ ಮತ್ತು ಮೋದಿ ಇಂದು ರಾಜ್ಯದಲ್ಲಿ ದಂಡಯಾತ್ರೆ ಹೊರಟಿದ್ದಾರೆ.

    ಶುಕ್ರವಾರ ಕೊಪ್ಪಳದಲ್ಲಿ ಗುಡುಗಿದ್ದ ಮೋದಿ ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವ ಬೃಹತ್ ರ‍್ಯಾಲಿಗೆ ಭರ್ಜರಿ ಸಿದ್ಧತೆ ನಡೆದಿದೆ. ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ, ಸಂಜೆ 4 ಗಂಟೆಗೆ ಮೈದಾನ ತಲುಪಲಿದ್ದಾರೆ. ಈ ಹಿನ್ನೆಲೆ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಂಗಳೂರು ರ‍್ಯಾಲಿ ಬಳಿಕ ಮೋದಿ ಬೆಂಗಳೂರು ಅರಮನೆ ಮೈದಾನದಲ್ಲಿ ಸಂಜೆ ನಡೆಯಲಿರುವ ಸಮಾವೇಶದಲ್ಲಿ ಮತಯಾಚಿಸಲಿದ್ದಾರೆ.

    ಇಂದು ಕೋಲಾರ ಜಿಲ್ಲೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ಪರಿವರ್ತನಾ ಬಹಿರಂಗ ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಮತಯಾಚನೆ ಮಾಡಲಿದ್ದಾರೆ. ಬಳಿಕ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮಂಡ್ಯಕ್ಕೆ ತೆರಳಿ ನಿಖಿಲ್ ಕುಮಾರಸ್ವಾಮಿ ಪರ ಕೆ.ಆರ್.ನಗರದಲ್ಲಿ ರಾಹುಲ್ ಮತಯಾಚಿಸಲಿದ್ದಾರೆ.

  • ಮೋದಿ ಬರೋ ಮೊದಲೇ ಮೈಸೂರಿನಲ್ಲಿ ಬಿಜೆಪಿ ಬಾವುಟ ತೆರವು!

    ಮೋದಿ ಬರೋ ಮೊದಲೇ ಮೈಸೂರಿನಲ್ಲಿ ಬಿಜೆಪಿ ಬಾವುಟ ತೆರವು!

    ಮೈಸೂರು: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಡೀ ಮೈಸೂರು ನಗರವನ್ನು ಬಿಜೆಪಿ ಕೇಸರಿ ಮಯವನ್ನಾಗಿ ಮಾಡಿತ್ತು. ಆದರೆ ಈಗ ಮೋದಿ ಬರುವ ಮೊದಲೇ ಹಾಕಿದ್ದ ಬಾವುಟಗಳನ್ನು ಕಾರ್ಯಕರ್ತರು ತೆರವು ಮಾಡಿದ್ದಾರೆ.

    ಮೈಸೂರಿನ ಬೀದಿ ಬೀದಿಗಳಲ್ಲಿ ಬಿಜೆಪಿ ಕೇಸರಿ ಬಾವುಟಗಳು ರಾರಾಜಿಸುತಿತ್ತು. ಆದರೆ ಇಂದು ನಡೆಯುವ ಮೋದಿ ಸಮಾವೇಶಕ್ಕೆ ಬಾವುಟ ಪ್ರದರ್ಶನಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾವುಟಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿತ್ತು. ಹೀಗಾಗಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಹಾಕಿದ್ದ ಬಾವುಟಗಳನ್ನು ತೆರವುಗೊಳಿಸಿದ್ದಾರೆ. ಇದನ್ನೂ ಓದಿ:ಮೈಸೂರಲ್ಲೂ ಮೋದಿಗಾಗಿ ಕಾಯುತ್ತಿದೆ ವಿಶೇಷ ಉಡುಗೊರೆ

    ಲೋಕಸಭಾ ಚುನಾವಣೆ ಪ್ರಚಾರ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಇಂದು ಎರಡು ಕಡೆ ಪ್ರಚಾರ ಭಾಷಣ ಮಾಡಲಿದ್ದಾರೆ. ಮೊದಲು ಚಿತ್ರದುರ್ಗದ ಚಳ್ಳಕೆರೆ, ನಂತರ ಮೈಸೂರಿನಲ್ಲಿ ಭಾಗಿಯಾಗಲಿದ್ದಾರೆ. ಹಳೇ ಮೈಸೂರು ಭಾಗದ ಅಭ್ಯರ್ಥಿಗಳ ಪರ ಮೈಸೂರಲ್ಲಿ ಮೋದಿ ಮತಯಾಚನೆ ಮಾಡಲಿದ್ದಾರೆ.

    ಮೈಸೂರಿಗೆ ಆಗಮಿಸುವ ಪ್ರಧಾನಿ ಮೋದಿ ಅವರಿಗೆ ಚಾಮುಂಡೇಶ್ವರಿ ಅಮ್ಮನವರ ಬೆಳ್ಳಿ ಮೂರ್ತಿಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಮೋದಿ ಅವರು ಬರೆದಿರುವ ಕವನಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಿರುವ ಕವನ ಸಂಕಲನಗಳನ್ನು ಸಹ ಇಂದು ಬಿಡುಗಡೆ ಮಾಡಲಾಗುತ್ತಿದೆ. ಈ ಮೂಲಕ ಮೋದಿ ಅವರಿಗೆ ಕನ್ನಡಕ್ಕೆ ಭಾಷಾಂತರಗೊಂಡ ಅವರ ಕವನ ಸಂಕಲಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.