Tag: Rallies

  • ಗುಜರಾತ್ ವಿಧಾನಸಭೆ ಚುನಾವಣೆ – 15 ದಿನಗಳಲ್ಲಿ 40 ರ‍್ಯಾಲಿ ನಡೆಸಲಿದ್ದಾರೆ ಮೋದಿ

    ಗುಜರಾತ್ ವಿಧಾನಸಭೆ ಚುನಾವಣೆ – 15 ದಿನಗಳಲ್ಲಿ 40 ರ‍್ಯಾಲಿ ನಡೆಸಲಿದ್ದಾರೆ ಮೋದಿ

    ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆ (Gujarat Assembly Election) ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಇಳಿಯಲಿದ್ದಾರೆ. ಸರಿ ಸುಮಾರು 15 ದಿನಗಳಲ್ಲಿ ಅವರು 40ಕ್ಕೂ ಅಧಿಕ ಬೃಹತ್ ರ‍್ಯಾಲಿಗಳನ್ನು (Rallie) ನಡೆಸಲಿದ್ದಾರೆ. ಈ ಮೂಲಕ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಮೂಲಕ ಗೆಲುವಿನ ದಡ ಸೇರುವ ನಿರೀಕ್ಷೆಯಲ್ಲಿದೆ.

    ಪಕ್ಷದ ಮೂಲಗಳ ಪ್ರಕಾರ, ನವೆಂಬರ್ 15 ರಿಂದ ರ‍್ಯಾಲಿಗಳನ್ನು ಆರಂಭಿಸಲಿದ್ದಾರೆ. 12-15 ದಿನಗಳಲ್ಲಿ ಮೋದಿ 40 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರು, ಟಿವಿ, ಸಿನಿಮಾ ನಟರು, ಸ್ಟಾರ್ ಪ್ರಚಾರಕರ ದಂಡು ಬಿಜೆಪಿ (BJP) ಪರ ಮತಯಾಚನೆ ಮಾಡಲಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ – ಮತದಾರರ ಕೈಯಲ್ಲಿ 412 ಅಭ್ಯರ್ಥಿಗಳ ಭವಿಷ್ಯ

    ಬಹುತೇಕ ಟಿಕೆಟ್ ಹಂಚಿಕೆ ಕಾರ್ಯ ಮಕ್ತಾಯಗೊಂಡಿದ್ದು, ಕಡೆಯ 22 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಭಾನುವಾರದೊಳಗೆ ಅಂತಿಮ ಪಟ್ಟಿಯೂ ಬಿಡುಗಡೆಯಾಗಬಹುದು ಎಂದು ಮೂಲಗಳು ಹೇಳಿವೆ. ದುರ್ಬಲ ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಗೆಲುವುಗಾಗಿ ಇಲ್ಲಿ ಪ್ರಚಾರ ಕಾರ್ಯ ಹೆಚ್ಚಲಿದೆ. ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಕೇಸ್ – ಸುಪ್ರೀಂ ತೀರ್ಪು ಸ್ವಾಗತಿಸಿದ ಸ್ಟಾಲಿನ್

    ದುರ್ಬಲ ಕ್ಷೇತ್ರಗಳ ಮೇಲೆ ಗೃಹ ಸಚಿವ ಅಮಿತ್ ಶಾ (Amit Shah) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಕೇಂದ್ರಿಕರಿಸಿದ್ದಾರೆ. ಜಾತಿ ಮತ್ತು ಸಮುದಾಯ ಸಮೀಕರಣಗಳ ಲೆಕ್ಕಾಚಾರದಲ್ಲಿ ಚುನಾವಣೆ ನಡೆಸುತ್ತಿರುವ ಬಿಜೆಪಿ ನರೇಂದ್ರ ಮೋದಿ ಪ್ರತಿ ರ‍್ಯಾಲಿಯಲ್ಲಿ 4-5 ವಿಧಾನಸಭೆ ಕ್ಷೇತ್ರಗಳು ಒಳಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಮಾಚಲ ಪ್ರದೇಶದಲ್ಲಿ 8 ಬೃಹತ್ ಚುನಾವಣಾ ರ‍್ಯಾಲಿ ನಡೆಸಲಿದ್ದಾರೆ ಪ್ರಿಯಾಂಕಾ ಗಾಂಧಿ

    ಹಿಮಾಚಲ ಪ್ರದೇಶದಲ್ಲಿ 8 ಬೃಹತ್ ಚುನಾವಣಾ ರ‍್ಯಾಲಿ ನಡೆಸಲಿದ್ದಾರೆ ಪ್ರಿಯಾಂಕಾ ಗಾಂಧಿ

    ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ (Himachal Pradesh Election) ದಿನಾಂಕ ನಿಗದಿಯಾಗಿದ್ದು ಕಾಂಗ್ರೆಸ್ (Congress), ಬಿಜೆಪಿ (BJP) ಸೇರಿ ಎಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿವೆ. ಈ ನಡುವೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ (Rahul Gandhi)  ತೊಡಗಿರುವ ಹಿನ್ನೆಲೆ ಕಾಂಗ್ರೆಸ್‍ನಿಂದ ಸ್ಟಾರ್ ಪ್ರಚಾರಕರು ಯಾರು ಎನ್ನುವ ಪ್ರಶ್ನೆ ಕೇಳಿ ಬಂದಿತ್ತು. ಇದಕ್ಕೆ ಉತ್ತರ ಸಿಕ್ಕಿದ್ದು ಹಿಮಾಚಲ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ (Priyanka Gandhi) ಅತಿ ಹೆಚ್ಚು ರ‍್ಯಾಲಿ (Rallie) ನಡೆಸುವ ಸಾಧ್ಯತೆಗಳಿದೆ.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನವೆಂಬರ್ 10 ರವರೆಗೆ ಹಿಮಾಚಲ ಪ್ರದೇಶದ ಮಂಡಿ, ಕುಲು, ಕಂಗ್ರಾ, ಚಂಬಾ ಹಮೀರ್‌ಪುರ್‌, ಉನಾ, ಶಿಮ್ಲಾ ಮತ್ತು ಸಿರ್ಮೌರ್‌ನಲ್ಲಿ ಎಂಟು ರ‍್ಯಾಲಿಗಳು ಮತ್ತು ರೋಡ್‍ಶೋಗಳನ್ನು (Road shows) ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ

    ನವೆಂಬರ್ 3 ರಂದು ಕಾಂಗ್ರಾ ಮತ್ತು ಚಂಬಾ ಮತ್ತು ನವೆಂಬರ್ 7 ರಂದು ಹಮೀರ್‌ಪುರ್‌ ಮತ್ತು ಉನಾಗೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲು ಅವರು ಅಕ್ಟೋಬರ್ 31 ರಂದು ಮಂಡಿ ಮತ್ತು ಕುಲಗಳಲ್ಲಿ ರ‍್ಯಾಲಿ ನಡೆಸಲಿದ್ದಾರೆ. ನವೆಂಬರ್ 10 ರಂದು ಶಿಮ್ಲಾ ಮತ್ತು ಸಿರ್ಮೌರ್‌ನಲ್ಲಿ ರ‍್ಯಾಲಿಗಳು ಮತ್ತು ರೋಡ್‍ಶೋಗಳನ್ನು ನಡೆಸಲಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಸರ್ವರಿಗೂ ಸೌಹಾರ್ದತೆ, ಸಾಮರಸ್ಯ ಅತ್ಯಗತ್ಯ: ಯು.ಟಿ ಖಾದರ್

    ನವೆಂಬರ್ 12 ರಂದು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಡಿಸೆಂಬರ್ 8 ರಂದು ರಾಜ್ಯದಲ್ಲಿ ಮತ ಎಣಿಕೆ ನಡೆಯಲಿದೆ. ಭಾರತೀಯ ಜನತಾ ಪಕ್ಷ ಅಧಿಕಾರವನ್ನು ಉಳಿಸಿಕೊಳ್ಳಲು ಹವಣಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಜನ ಆಕ್ಸಿಜನ್‍ಗಾಗಿ ಅಳ್ತಿದ್ದಾರೆ, ನಾಯಕರು ರ‍್ಯಾಲಿಯಲ್ಲಿ ನಗ್ತಿದ್ದಾರೆ: ಪ್ರಿಯಾಂಕಾ ಗಾಂಧಿ

    ಜನ ಆಕ್ಸಿಜನ್‍ಗಾಗಿ ಅಳ್ತಿದ್ದಾರೆ, ನಾಯಕರು ರ‍್ಯಾಲಿಯಲ್ಲಿ ನಗ್ತಿದ್ದಾರೆ: ಪ್ರಿಯಾಂಕಾ ಗಾಂಧಿ

    ನವದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಜನ ಆಕ್ಸಿಜನ್ ಗಾಗಿ ಆಸ್ಪತ್ರೆಗಳಲ್ಲಿ ಕ್ಯೂ ನಿಂತು ಬೇಡಿಕೊಳ್ಳುತ್ತಿದ್ದಾರೆ. ಆದರೆ ಇತ್ತ ನಮ್ಮ ರಾಜಕೀಯ ನಾಯಕರು ಮಾತ್ರ ಚುನಾವಣಾ ರ‍್ಯಾಲಿಯಲ್ಲಿ ನಗುತ್ತಿದ್ದಾರೆ ಎಂದು ನಾಯಕರ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಗುಡುಗಿದ್ದಾರೆ.

    ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜಕೀಯ ನಾಯಕರು ಇಂದು ಕೂಡ ಚುನಾವಣೆಯ ರ‍್ಯಾಲಿಯಲ್ಲಿ ಭಾಗವಹಿಸಿಕೊಂಡು ವೇದಿಕೆ ಮೇಲೆ ನಗುತ್ತಿದ್ದಾರೆ. ಆದರೆ ಇತ್ತ ದೇಶದ ಜನ ಕೊರೊನಾದಿಂದಾಗಿ ಅಳುತ್ತಿದ್ದು, ಆಕ್ಸಿಜನ್, ಆಸ್ಪತ್ರೆಗಳಲ್ಲಿ ಬೆಡ್, ಔಷಧಿಗೋಸ್ಕರ ನರಳಾಡುತ್ತಿದ್ದಾರೆ. ಜನ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಆದರೆ ಸರ್ಕಾರದ ನಾಯಕರು ಮಾತ್ರ ರ‍್ಯಾಲಿಗಳಲ್ಲಿ ಭಾಗಿಯಾಗುತ್ತಾ ನಗುತ್ತಿದ್ದಾರೆ. ದೇಶದಲ್ಲಿ ಉಂಟಾಗಿರುವ ಭೀಕರ ಆರೋಗ್ಯ ತುರ್ತು ಪರಿಸ್ಥಿತಿ ಬಗ್ಗೆ ಅವರಿಗೆ ಅರಿವೆ ಇಲ್ಲದವರಂತೆ ಇದ್ದಾರೆ ಎಂದು ಟೀಕಿಸಿದ್ದಾರೆ.

    ಇಂದು ಕೋವಿಡ್-19ನಿಂದಾಗಿ ದೇಶದ ಜನ ನರಳಾಟದಲ್ಲಿದ್ದರೆ, ಇತ್ತ ಕೇಂದ್ರ ಸರ್ಕಾರ ಪಶ್ಚಿಮಬಂಗಾಳದಲ್ಲಿ ಚುನಾವಣೆ ರ‍್ಯಾಲಿ ನಡೆಸುತ್ತಿದೆ. ಸರ್ಕಾರದ ನಾಯಕರು ಕೂಡ ಚುನಾವಣಾ ಪ್ರಚಾರ ನಡೆಸುತ್ತಿದ್ದು, ರ‍್ಯಾಲಿಗಳಲ್ಲಿ ವೇದಿಕೆ ಮೇಲೆ ನಿಂತುಕೊಂಡು ವಿರೋಧ ಪಕ್ಷವನ್ನು ಟೀಕಿಸುತ್ತಾ ಕಾಲಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಭಾರತದಲ್ಲಿ ಆಕ್ಸಿಜನ್ ಉತ್ಪಾದನೆ ವಿಶ್ವದಲ್ಲಿಯೇ ಬೃಹತ್ ಪ್ರಮಾಣದಲ್ಲಿದೆ. ಹೀಗಿರುವಾಗ ಆಕ್ಸಿಜನ್ ಕೊರತೆ ಹೇಗೆ ಉಂಟಾಯಿತು. ಕೊರೊನಾ ಮೊದಲ ಅಲೆ ಭಾರತದಲ್ಲಿ ಕಾಣಿಸಿಕೊಂಡು ಕಡಿಮೆಯಾಗಿ ಎರಡನೇ ಅಲೆ ಪ್ರಾರಂಭವಾಗುವ ಮಧ್ಯೆ 8 ರಿಂದ 9 ತಿಂಗಳು ಸಮಯವಿತ್ತು. ಇದರೊಂದಿಗೆ ಸರ್ಕಾರದ ಸಮೀಕ್ಷೆಯ ಪ್ರಕಾರ ಎರಡನೇ ಅಲೆ ತೀವ್ರವಾಗಿದೆ ಎಂದು ಮಾಹಿತಿ ಇತ್ತು. ಆದರೆ ಸರ್ಕಾರ ಮಾತ್ರ ಅದನ್ನು ನಿರ್ಲಕ್ಷ್ಯ ಮಾಡಿ ಕೈ ಕಟ್ಟಿ ಕುಳಿತಿತ್ತು ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶವಿತ್ತು ಆದರೆ ಇಂದು ಭಾರತ ಕೇವಲ 2 ಸಾವಿರ ಟ್ರಕ್ ನಷ್ಟು ಮಾತ್ರ ಆಕ್ಸಿಜನ್ ನ್ನು ಸಾಗಾಟ ಮಾಡಬಹುದಾಗಿದೆ. ಆಕ್ಸಿಜನ್ ನಮ್ಮಲ್ಲಿ ಇದೆ, ಆದರೆ ಅದು ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪುತ್ತಿಲ್ಲ. ಕಳೆದ ಆರು ತಿಂಗಳಲ್ಲಿ 1.1 ಮಿಲಿಯನ್ ರೆಮೆಡಿಸಿವಿರ್ ರಫ್ತಾಗಿದೆ. ಆದರೆ ಇದೀಗ ನಾವೇ ಕೊರತೆ ಎದುರಿಸುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರ ಕಳೆದ ಜನವರಿಯಿಂದ ಮಾರ್ಚ್ ನಡುವೆ 6 ಕೋಟಿ ಲಸಿಕೆಗಳನ್ನು ರಫ್ತು ಮಾಡಿದೆ. ಈ ಸಮಯದಲ್ಲಿ 3ರಿಂದ 4 ಕೋಟಿ ಭಾರತೀಯರಿಗೆ ಲಸಿಕೆ ಹಾಕಲಾಗಿದೆ. ಮೊದಲು ನಮ್ಮ ದೇಶದವರಿಗೆ ಆದ್ಯ ಕೊಡಬೇಕಾಗಿತ್ತು. ನಂತರ ಇತರ ದೇಶಗಳಿಗೆ ರಫ್ತು ಮಾಡಬೇಕಾಗಿತ್ತು. ಇದು ಸರ್ಕಾರದ ತಪ್ಪು ನಿರ್ಧಾರ, ಸರಿಯಾದ ಯೋಜನೆಯಿಲ್ಲದೆ ದೇಶದಲ್ಲಿ ರೆಮೆಡಿಸಿವಿರ್, ಲಸಿಕೆ ಮತ್ತು ಆಕ್ಸಿಜನ್ ಕೊರತೆಯುಂಟಾಗಿದೆ ಎಂದು ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

  • ಗುರುವಾರ ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರಧಾನಿ ಮೋದಿ ರಣ ಕಹಳೆ

    ಗುರುವಾರ ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರಧಾನಿ ಮೋದಿ ರಣ ಕಹಳೆ

    ಬೆಳಗಾವಿ/ಬಾಗಲಕೋಟೆ: ದಕ್ಷಿಣ ಕರ್ನಾಟಕದ ಮೊದಲ ಹಂತದ ಚುನಾವಣೆ ಸಿದ್ಧತೆ ನಡೆದಿದ್ದರೆ, ಇತ್ತ ಉತ್ತರ ಕರ್ನಾಟಕದ ಎರಡನೇ ಹಂತದ ಚುನಾವಣಾ ಕಣಕ್ಕೆ ಪ್ರಧಾನಿ ಮೋದಿ ಆಗಮಿಸಿ ರಣ ಕಹಳೆ ಮೊಳಗಿಸಲಿದ್ದಾರೆ.

    ವಿಜಯ ಸಂಕಲ್ಪ ಯಾತ್ರೆ ಮೂಲಕ ರಣಕಹಳೆ ಮೊಳಗಿಸುತ್ತಿರುವ ಮೋದಿ, ಗುರುವಾರ ಮಧ್ಯಾಹ್ನ ಸುಮಾರು 2:35 ಕ್ಕೆ ಆಗಮಿಸಿ ಬೃಹತ್ ಸಮಾವೇಶದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮತ ಯಾಚನೆ ಮಾಡಲಿದ್ದಾರೆ. ಮೋದಿ ಆಗಮನಕ್ಕಾಗಿ ಸಕಲ ಸಿದ್ದತೆ ನಡೆಸಲಾಗಿದೆ. ಬಳಿಕ ಪ್ರಧಾನಿ ಮೋದಿ ಚಿಕ್ಕೋಡಿಗೆ ತೆರಳಲಿದ್ದು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬೆಳಗಾವಿ ಅಭ್ಯರ್ಥಿ ಸುರೇಶ್ ಅಂಗಡಿ ಪರ ಮತಯಾಚನೆ ಮಾಡಲಿದ್ದಾರೆ. ಮೋದಿ ಆಗಮನಕ್ಕೆ ಚಿಕ್ಕೋಡಿ ಪಟ್ಟಣ ಸಕಲ ಸಿದ್ಧಗೊಂಡಿದೆ. ಸಂಜೆ 4:45 ರ ವೇಳೆಗೆ ಪ್ರಧಾನಿ ಮೋದಿ ಬಾಗಲಕೋಟೆ ಕಾರ್ಯಕ್ರಮ ಮುಗಿಸಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ಹೆಲಿಕಾಪ್ಟರ್ ಮೂಲಕ ಚಿಕ್ಕೋಡಿಗೆ ಪ್ರಯಾಣ ಬೆಳಸಲಿದ್ದಾರೆ.

    ಚಿಕ್ಕೋಡಿಯ ಬಿ ಕೆ ಕಾಲೇಜು ಎದುರಿನ ಖಾಲಿ ಮೈದಾನದಲ್ಲಿ ಸಿದ್ಧಪಡಿಸಿರುವ ವೇದಿಕೆಯ ಮೂಲಕ ಪ್ರಧಾನಿ ಮೋದಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಸಮಾವೇಶಕ್ಕೆ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಪಕ್ಕದ ಮಹಾರಾಷ್ಟ್ರ ಭಾಗದಿಂದ 2 ಲಕ್ಷಕ್ಕೂ ಹೆಚ್ಚಿನ ಜನ ಆಗಮಿಸುವ ನೀರಿಕ್ಷೆ ಇದೆ. ಈಗಾಗಲೇ ಮೋದಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಪ್ರಧಾನಿ ಕಾರ್ಯಕ್ರಮದ ಭದ್ರತೆಗೆ 1,500 ಪೊಲೀಸರು ಹಾಗೂ ಎಸ್ ಪಿ ಜಿ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಚಿಕ್ಕೋಡಿ ಪಟ್ಟಣದ ವಿವಿಧೆಡೆ 13 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

    ಕಾರ್ಯಕ್ರಮಕ್ಕೆ ಎರಡು ಗಂಟೆ ಮೊದಲು ಬಿಜೆಪಿ ಕಾರ್ಯಕತರು ಆಗಮಿಸುವಂತೆ ಬಿಜೆಪಿ ಮುಖಂಡರು ವಿನಂತಿಸಿಕೊಂಡಿದ್ದಾರೆ. ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ, ನಟಿ ತಾರಾ, ಸಿಎಂ ಉದಾಸಿ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಲಿದ್ದಾರೆ.

  • ಎಸ್‍ಪಿ, ಬಿಎಸ್‍ಪಿಗೆ ತಿರುಗೇಟು ನೀಡಲು ರಾಹುಲ್ ಗಾಂಧಿ ಮೆಗಾ ಪ್ಲಾನ್!

    ಎಸ್‍ಪಿ, ಬಿಎಸ್‍ಪಿಗೆ ತಿರುಗೇಟು ನೀಡಲು ರಾಹುಲ್ ಗಾಂಧಿ ಮೆಗಾ ಪ್ಲಾನ್!

    – ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಚಿಂತನೆ
    – 13 ಕಡೆಗಳಲ್ಲಿ ಬೃಹತ್ ರ‍್ಯಾಲಿಗೆ ರಾಹುಲ್ ಗಾಂಧಿ ಸಿದ್ಧತೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಹಾಗೂ ಸಮಾಜವಾದಿ ಪಕ್ಷಕ್ಕೆ (ಎಸ್‍ಪಿ) ತಿರುಗೇಟು ನೀಡಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೆಗಾ ಪ್ಲಾನ್ ರೂಪಿಸಿದ್ದಾರೆ.

    ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಈ ನಿಟ್ಟಿನಲ್ಲಿ ಆರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಂದೊಂದರಂತೆ ಒಟ್ಟು 13 ಕಡೆ ಬೃಹತ್ ಬಹಿರಂಗ ರ‍್ಯಾಲಿ ಕೈಗೊಳ್ಳಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಬಹಿರಂಗ ರ‍್ಯಾಲಿ ನಡೆಸುವ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಅಜಾದ್ ಮತ್ತು ಉತ್ತರ ಪ್ರದೇಶದ ಮುಖಂಡ ರಾಜ್ ಬಬ್ಬರ್ ಇಂದು ಸುದೀರ್ಘ ಚರ್ಚೆ ನಡೆಸಿದ್ದಾರೆ. ರಾಜ್ಯದ ಪಶ್ಚಿಮ ಕ್ಷೇತ್ರಗಳಾದ ಹಾಪುರ್, ಮೊರಾದಾಬಾದ್ ಮತ್ತು ಸಹರಾನ್ಪುರ್ ನಿಂದ ರ್ಯಾಲಿ ಆರಂಭಿಸಲು ನಿರ್ಧಾರವನ್ನು ಈ ನಾಯಕರು ಕೈಗೊಂಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ನಾಯಕಿ ಮಾಯಾವತಿ ಹಾಗೂ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಶನಿವಾರ ಸುದ್ದಿಗೋಷ್ಠಿ ನಡೆಸಿ ಮೈತ್ರಿ ವಿಚಾರವನ್ನು ತಿಳಿಸಿದ್ದರು. ಈ ಮೈತ್ರಿಯ ಒಪ್ಪಂದದ ಪ್ರಕಾರ ಎರಡೂ ಪಕ್ಷಗಳು ಒಟ್ಟು ತಲಾ 38 ಕ್ಷೇತ್ರಗಳನ್ನು ಹಂಚಿಕೊಂಡು, ಅಮೇಠಿ ಹಾಗೂ ರಾಯ್ ಬರೇಲಿಯನ್ನು ಕಾಂಗ್ರೆಸ್‍ಗೆ, ಉಳಿದ ಎರಡು ಕ್ಷೇತ್ರಗಳನ್ನು ರಾಷ್ಟ್ರೀಯ ಲೋಕದಳಗೆ ಬಿಟ್ಟುಕೊಟ್ಟಿದ್ದರು.

    ಬಿಎಸ್‍ಪಿ ಹಾಗೂ ಎಸ್‍ಪಿ ಕೇವಲ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್‍ಗೆ ಬಿಟ್ಟು ಮೈತ್ರಿ ಮಾಡಿಕೊಂಡ ಬೆನ್ನಲೇ ರಾಹುಲ್ ಗಾಂಧಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಕೇವಲ ಎರಡು ಕ್ಷೇತ್ರ ಬಿಟ್ಟ ಮೈತ್ರಿ ವಿರುದ್ಧ ಗರಂ ಆಗಿರುವ ರಾಹುಲ್ ಗಾಂಧಿ, 80 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ನಿರ್ಧಾರ ಕೈಗೊಂಡಿದ್ದಾರೆ.

    ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢ್‍ನಲ್ಲಿ ಅಧಿಕಾರ ಹೊಂದಿರುವ ಕಾಂಗ್ರೆಸ್ ಈ ರಾಜ್ಯಗಳಲ್ಲಿ ಹೆಚ್ಚು ಕ್ಷೇತ್ರಗಳಿಂದ ಜಯಗಳಿಸುವ ಸಾಧ್ಯತೆಗಳಿವೆ. ಆದರೆ ಮಾಯಾವತಿ ಹಾಗೂ ಅಖಿಲೇಶ್ ಮೈತ್ರಿಯಿಂದಾಗಿ ಉತ್ತರ ಪ್ರದೇಶದಿಂದ ಕಾಂಗ್ರೆಸ್ ಬೆರಳೆಣಿಕೆ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಉತ್ತರ ಪ್ರದೇಶದಲ್ಲಿ 1992ರಂದು ನಡೆದ ಬಾಬ್ರಿ ಮಸೀದಿ ದ್ವಂಸ ಘಟನೆ ಕಾಂಗ್ರೆಸ್ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಘಟೆಯ ಬಳಿಕ ನಿಧಾನವಾಗಿ ಕಾಂಗ್ರೆಸ್ ಕ್ಷೇತ್ರಗಳನ್ನು ಕಳೆದುಕೊಂಡಿತು. ಇತ್ತ ಬಿಜೆಪಿ ತನ್ನ ಮೇಲುಗೈ ಸಾಧಿಸಿ 2014ರಲ್ಲಿ 71 ಕ್ಷೇತ್ರಗಳಿಂದ ಜಯ ಸಾಧಿಸಿತ್ತು. ಈಗ ಮತದಾರರ ನಿರೀಕ್ಷೆಗಳು ಭಿನ್ನವಾಗಿವೆ. ಯಾದವರು ಹಾಗೂ ದಲಿತರು ಬಿಎಸ್‍ಪಿ ಮತ್ತು ಎಸ್‍ಪಿಗೆ ನೀಡಿದ ಬೆಂಬಲ ಹೇಗಿದೆ ಎನ್ನುವ ಪ್ರಶ್ನೆಗೆ ಮೇ ತಿಂಗಳಿನಲ್ಲಿ ಪ್ರಕಟವಾಗಲಿರುವ ಫಲಿತಾಂಶ ಉತ್ತರ ನೀಡಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv