Tag: Rakesh Tikayat

  • ಮೂರು ಕೃಷಿ ಕಾನೂನು ವಾಪಸ್ – ಖುಷಿಯಾಗದ ಕಾಂಗ್ರೆಸ್ ನಾಯಕರು

    ಮೂರು ಕೃಷಿ ಕಾನೂನು ವಾಪಸ್ – ಖುಷಿಯಾಗದ ಕಾಂಗ್ರೆಸ್ ನಾಯಕರು

    ನವದೆಹಲಿ: ಕೊಟ್ಟ ಮಾತಿನಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರು ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್ ಪಡೆದುಕೊಂಡಿದೆ. ಸಂಸತ್ ಚಳಿಗಾಲದ ಅಧಿವೇಶನದ ಮೊದಲ ದಿನವೇ ಲೋಕಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಡಿಸಿದ ಮಸೂದೆಗಳಿಗೆ ಬಿಜೆಪಿ ತನ್ನ ಸರ್ವಾನುಮತದಿಂದ ಒಪ್ಪಿಗೆ ನೀಡುವ ಮೂಲಕ ಮೂರು ಕಾನೂನುಗಳನ್ನು ವಾಪಸ್ ಪಡೆಯಿತು.

    ಕಳೆದ ವರ್ಷ ಅಂಗೀಕರಿಸಿದ್ದ, ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಅನುಕೂಲ) ಕಾನೂನು 2020, ರೈತರ(ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ, ಕೃಷಿ ಸೇವೆಗಳ ಕಾನೂನು 2020, ಅಗತ್ಯ ಸರಕುಗಳ ತಿದ್ದುಪಡಿ ಕಾನೂನು 2020 ಅನ್ನು ಸರ್ಕಾರ ಹಿಂಪಡೆದುಕೊಂಡಿದೆ. ಆದರೆ ಕೇಂದ್ರ ಸರ್ಕಾರದ ನಡವಳಿಕೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಇದನ್ನೂ ಓದಿ: 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ – ಕಂಟೈನ್ಮೆಂಟ್ ಝೋನ್ ಆಯ್ತು ವೃದ್ಧಾಶ್ರಮ

    ಮೂರು ವಿವಾದಿತ ಕಾನೂನುಗಳನ್ನು ಚರ್ಚೆಯ ಮೂಲಕ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತು. ಬಿಲ್ ಮಂಡನೆ ವೇಳೆ ಲೋಕಸಭೆಯ ಕಾಂಗ್ರೆಸ್ ನಾಯಕ ಅಧಿರಂಜನ್ ಚೌಧರಿ ಚರ್ಚೆ ನಡೆಸಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಪ್ರತಿಭಟನೆ ನಡೆಸಿದರು. ಈ ವೇಳೆ ಗದ್ದಲ ಏರ್ಪಟ್ಟ ಹಿನ್ನೆಲೆ 12 ಗಂಟೆಗೆ ಕಲಾಪ ಮುಂದೂಡಲಾಯಿತು. 12 ಗಂಟೆ ಶುರುವಾದ ಕಲಾಪ ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್ ಸೇರಿ ವಿಪಕ್ಷಗಳ ಗದ್ದಲದ ಕಾರಣ ಮತ್ತೆ 2 ಗಂಟೆಗೆ ಮುಂದೂಡಿಕೆಯಾಯಿತು.

    ಎರಡು ಗಂಟೆಗೆ ಶುರುವಾದ ಕಲಾಪದ ವೇಳೆ ಕಾಂಗ್ರೆಸ್ ನಾಯಕರ ವಿರೋಧದ ನಡುವೆ ತನ್ನ ಸಂಖ್ಯಾಬಲದೊಂದಿಗೆ ಕಾನೂನು ವಾಪಸ್ ಪಡೆಯುವಲ್ಲಿ ಸಫಲವಾಗಿದೆ. ಆದರೆ ಸರ್ಕಾರದ ವರ್ತನೆಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಚರ್ಚೆ ನಡೆಸಲು ಸರ್ಕಾರ ಹೆದರುತ್ತಿದೆ ಎಂದು ಆರೋಪಿಸಿದರು. ರಾಜಕೀಯ ಕೆಸರಾಟದಲ್ಲಿ ಮೂರು ಕಾನೂನು ವಾಪಸ್ ಪಡೆಯಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಸಾರಿಗೆಯ ಶೇ.50 ಮಂದಿ ಪಡೆಯಬೇಕಿದೆ 2ನೇ ಡೋಸ್

    ಈ ನಡುವೆ ಕಾನೂನು ಹಿಂಪಡೆದರೂ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಮೂರು ಕಾನೂನು ವಾಪಸ್ ಪಡೆದರೆ ಸಾಲದು ಎಂಎಸ್‍ಪಿ ಗ್ಯಾರಂಟಿ ಮತ್ತು ಇತರೆ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಮತ್ತು ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

  • ಹೋರಾಟ ನಿಲ್ಲಿಸಿ ಮನೆಗೆ ಹೋಗಿ: ರೈತರಿಗೆ ನರೇಂದ್ರ ಸಿಂಗ್ ಮನವಿ

    ಹೋರಾಟ ನಿಲ್ಲಿಸಿ ಮನೆಗೆ ಹೋಗಿ: ರೈತರಿಗೆ ನರೇಂದ್ರ ಸಿಂಗ್ ಮನವಿ

    ನವದೆಹಲಿ: ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸಿ ಮನೆಗೆ ಹೋಗಬೇಕೆಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿದ್ದಾರೆ.

    ರೈತರ ಆಂದೋಲನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಚಳಿಗಾಲದ ಅಧಿವೇಶನದ ಮೊದಲ ದಿನ(ನವೆಂಬರ್ 29) ಸಂಸತ್ತಿನಲ್ಲಿ ಮಂಡಿಸಲಾಗುವುದು. ಬೆಳೆ ವೈವಿಧ್ಯೀಕರಣ ವಿಷಯಗಳ ಕುರಿತು ಚರ್ಚಿಸಲು ಸಮಿತಿಯನ್ನು ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕೃಷಿ ಮತ್ತು ಕನಿಷ್ಠ ಬೆಂಬಲ ಬೆಲೆಗೆ (ಎನ್‍ಎಸ್‍ಪಿ) ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ಮಾಡುವುದು ಈ ಸಮಿತಿ ಉದ್ದೇಶವಾಗಿರುತ್ತೆ ಎಂದು ತಿಳಿಸಿದ್ದಾರೆ.  

    ಈ ಸಮಿತಿಯ ರಚನೆಯೊಂದಿಗೆ, ಎಂಎಸ್‍ಪಿ ಮೇಲಿನ ರೈತರ ಬೇಡಿಕೆ ಈಡೇರುತ್ತದೆ. ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದಾಗಿ ಘೋಷಿಸಿದ ನಂತರ ರೈತರ ಆಂದೋಲನವನ್ನು ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ರೈತರು ತಮ್ಮ ಧರಣಿಯನ್ನು ಕೊನೆಗೊಳಿಸಿ ಮನೆಗೆ ಹೋಗಬೇಕೆಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.

    26 ನವೆಂಬರ್ 2020ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆ ಮೋದಿ ಅವರು ಕಳೆದ ವಾರ, ಕೇಂದ್ರವು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಗತ್ಯ ಮಸೂದೆಗಳನ್ನು ತರಲಿದೆ ಎಂದು ಘೋಷಿಸಿದ್ದರು. ಈ ವೇಳೆ ಎಂಎಸ್‍ಪಿ ಹೊಸ ಚೌಕಟ್ಟಿನ ಮೇಲೆ ಕೆಲಸ ಮಾಡಲು ಸರ್ಕಾರವು ಸಮಿತಿಯನ್ನು ರಚಿಸುತ್ತದೆ ಎಂದು ಮೋದಿ ಅವರು ತಿಳಿಸಿದ್ದರು. ಇದನ್ನೂ ಓದಿ: ಹೊಸ ರೂಪಾಂತರಿ ವೈರಸ್ ಪೀಡಿತ ದೇಶಗಳಿಂದ ವಿಮಾನ ಹಾರಾಟ ನಿಲ್ಲಿಸಿ – ಮೋದಿಗೆ ಕೇಜ್ರಿವಾಲ್ ಮನವಿ 

    ಕನಿಷ್ಠ ಬೆಂಬಲ ಬೆಲೆ(ಎಂಎಸ್‍ಪಿ) ಕಾನೂನಿನ ನಮ್ಮ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡ ನಂತರ ನಾವು ಪ್ರತಿಭಟನೆಯನ್ನು ಹಿಂಪಡೆಯುತ್ತೇವೆ. ಈ ಪ್ರತಿಭಟನೆಯ ವೇಳೆ ಸಾವನ್ನಪ್ಪಿದ 750 ರೈತರ ಕುಟುಂಬಕ್ಕೆ ಪರಿಹಾರ ನೀಡಿದ ನಂತರ ನಾವು ಮನೆಗೆ ಹಿಂದಿರುಗುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದರು.

  • ರಮೇಶ್ ಜಾರಕಿಹೊಳಿ ಮಹಾನಾಯಕನ ಹೆಸರು ಬಿಚ್ಚಿಡಲಿ: ಸಿದ್ದರಾಮಯ್ಯ

    ರಮೇಶ್ ಜಾರಕಿಹೊಳಿ ಮಹಾನಾಯಕನ ಹೆಸರು ಬಿಚ್ಚಿಡಲಿ: ಸಿದ್ದರಾಮಯ್ಯ

    – ರಾಜ್ಯದಲ್ಲಿ ಹಲವಾರು ಮಂದಿ ಮಹಾನಾಯಕರು ಇದ್ದಾರೆ
    – ಮಹಾನಾಯಕರ ಜೊತೆಗೆ ಮಹಾನಾಯಕಿರೂ ಇದ್ದಾರೆ

    ಬೆಂಗಳೂರು: ಸಿಡಿ ವಿಚಾರವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳುವ ಮಹಾ ನಾಯಕ ಯಾರು ಎಂದು ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಮಹಾ ನಾಯಕರು ಬಹಳಷ್ಟು ಜನ ಇದ್ದಾರೆ. ಬಿಜೆಪಿಯಲ್ಲೂ ಇದ್ದಾರೆ. ನಮ್ಮ ಪಕ್ಷದಲ್ಲೂ ಬಹಳ ನಾಯಕರುಗಳು ಇದ್ದಾರೆ. ಇವರೊಂದಿಗೆ ಮಹಾ ನಾಯಕಿನೂ ಇದ್ದಾರೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ರಕ್ಷಣೆ ಕೊಡಿಸಬೇಕು ಎಂದಿದ್ದಾಳೆ. ಹಾಗಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ನಾನು ನಿನ್ನೆ ಸಂಜೆ ಮಾತಾಡಿದ್ದೇನೆ. ಆ ಯುವತಿಗೆ ರಕ್ಷಣೆ ಕೊಡಿ ಎಂದಿದ್ದೇನೆ. ಯಾರೇ ನಮ್ಮ ಬಳಿ ರಕ್ಷಣೆ ಕೊಡಿ ಎಂದು ಮನವಿ ಮಾಡಿಕೊಂಡರೂ ರಕ್ಷಣೆ ಕೊಡಲೇಬೇಕು. ಸಂತ್ರಸ್ತೆ ಅವಳ ತಂದೆ-ತಾಯಿಗೂ ರಕ್ಷಣೆ ಕೇಳಿದ್ದಾಳೆ. ಹೀಗಾಗಿ ಅವರಿಗೂ ರಕ್ಷಣೆ ಕೊಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

    ಆ ಸಂತ್ರಸ್ತೆ ಮರೆಯಾಗಿದ್ದು, ವೀಡಿಯೋ ಸ್ಟೆಟ್ ಮೆಂಟ್ ಕೊಡೋ ಬದಲು ಎಸ್ ಐಟಿ ಮುಂದೆ ಬರಲಿ ಎನ್ನೋದು ನನ್ನ ಸಲಹೆ. ಅಜ್ಞಾತವಾಸದಲ್ಲಿ ಇರುವ ಬದಲು ನಡೆದಿದ್ದು ಏನು? ಸತ್ಯ ಏನು ಎನ್ನುದನ್ನು ಹೇಳಲಿ. ತನಿಖೆಗೆ ಸಹಕರಿಸಲಿ ಎಂದರು.

    ನನ್ನನ್ನು ಬಳಸಿಕೊಂಡಿದ್ದಾರೆ, ಉದ್ಯೋಗ ಕೇಳಿದ್ದಕ್ಕೆ ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಳು. ನಾನು ಸಂತ್ರಸ್ತೆ ವೀಡಿಯೋ ಆಧಾರದ ಮೇಲೆ ರಮೇಶ್ ಜಾರಕಿಹೊಳಿ ಮೇಲೆ ರೇಪ್ ಕೇಸ್ ಹಾಕಬೇಕು ಎಂದು ಒತ್ತಾಯ ಮಾಡಿದ್ದೆ. ನನಗೆ ರಮೇಶ್ ಜಾರಕಿಹೊಳಿ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ರಮೇಶ್ ಜಾರಕಿಹೊಳಿ ನನ್ನ ಒಳ್ಳೆ ಸ್ನೇಹಿತ ಎಂದು ಅಭಿಪ್ರಾಯಪಟ್ಟರು.

    ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೆತ್ತಿಮೇಲೆ ಕತ್ತಿ ತೂಗಾಡುತ್ತಿದೆ. ಯಡಿಯೂರಪ್ಪ ಅವರು ನನ್ನ ಜೊತೆಗೆ ಎಲ್ಲಾ ಎಂಎಲ್‍ಎಗಳು ಇದ್ದಾರೆ ಎಂದು ತೋರಿಸಿಕೊಳ್ಳುವುದಕ್ಕೆ ಶಾಸಕರ ಜೊತೆ ಸಭೆ ನಡೆಸಿದ್ದಾರೆ. ಆದರೆ ಹಾಗಿಲ್ಲ ಅಂತ ಯತ್ನಾಳ್ ಪದೇ ಪದೇ ಹೇಳುತ್ತಿದ್ದಾರೆ. ಈ ಮೊದಲು ಸಿಎಂ ಬದಲಾವಣೆ ಆಗುತ್ತಾರೆ ಎಂದು ಮಾಹಿತಿ ಇತ್ತು ಆಗ ಆಗಲಿಲ್ಲ ಈಗ ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.

    ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಕೇಸು ಹಾಕಿದ್ದು ಖಂಡನೀಯ. ಅವರು ಬೆಂಗಳೂರು ಸೀಜ್ ಮಾಡಿ ಎಂದಿದ್ದರು. ಸೀಜ್ ಮಾಡಿ ಎಂದರೆ ಮುತ್ತಿಗೆ ಹಾಕಿ ಎಂದು ಅರ್ಥ. ಅದು ಪ್ರಚೋದನಾ ಕಾರಿ ಭಾಷಣ ಅಲ್ಲಾ ಎಂದು ಸಮರ್ಥಿಸಿಕೊಂಡರು.

    ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ನಾಳೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದು, ತಳಿ, ಡೆಂಕಣಿಕೋಟ, ಹೊಸೂರು, ಬಾಗಲೂರು, ಬೇರಿಗೆ, ಸೂಲಗಿರಿ ಹಾಗೂ ವೇಪನಪಲ್ಲಿಯಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಸಿದ್ದರಾಮಯ್ಯ ಅವರು ಮಾತನಾಡಲಿದ್ದಾರೆ.

  • ಕೃಷಿ ಕಾನೂನು ವಾಪಸ್ ಪಡೆಯದಿದ್ರೆ ಆತ್ಮಹತ್ಯೆ ಮಾಡಿಕೊಳ್ತೀನಿ: ಕಣ್ಣೀರಿಟ್ಟ ರೈತ ಮುಖಂಡ

    ಕೃಷಿ ಕಾನೂನು ವಾಪಸ್ ಪಡೆಯದಿದ್ರೆ ಆತ್ಮಹತ್ಯೆ ಮಾಡಿಕೊಳ್ತೀನಿ: ಕಣ್ಣೀರಿಟ್ಟ ರೈತ ಮುಖಂಡ

    – ರೈತರು ನಾಶ ಆಗೋದನ್ನ ನೋಡಲಾರೆ
    – ವ್ಯಕ್ತಿಯೋರ್ವನ ಕಪಾಳಕ್ಕೆ ಬಾರಿಸಿದ ರಾಕೇಶ್ ಟಿಕಾಯತ್

    ನವದೆಹಲಿ: ಕೃಷಿ ಕಾನೂನು ವಾಪಸ್ ಪಡೆಯದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಕಣ್ಮುಂದೆಯೇ ರೈತರು ನಾಶ ಆಗೋದನ್ನ ನೋಡಲಾರೆ ಎಂದು ರೈತ ಹೋರಾಟದ ಮುಂದಾಳು, ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಕಣ್ಣೀರು ಹಾಕಿದ್ದಾರೆ.

    ಘಾಜಿಯಾಬಾದ್ ಗಡಿಯಲ್ಲಿ ಧರಣಿ ಕುಳಿತಿರುವ ರೈತರನ್ನ ಖಾಲಿ ಮಾಡಿಸಲು ಕೇಂದ್ರ ಸರ್ಕಾರದ ಜೊತೆ ಉತ್ತರ ಪ್ರದೇಶದ ಸಿಎಂ ಯೋಗಿ ಸರ್ಕಾರ ಕೈ ಜೋಡಿಸಿದೆ. ಈ ಹಿನ್ನೆಲೆ ಘಾಜಿಯಾಬಾದ ಪ್ರದೇಶವನ್ನ ಖಾಕಿ ಸುತ್ತುವರಿದಿದ್ದು, ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸಂಜೆಯಾಗುತ್ತಲೇ ಪೊಲೀಸರ ಸಂಖ್ಯೆ ಹೆಚ್ಚಳವಾಗಿದ್ದು, ಕೆಲ ರೈತರು ಭಯದಿಂದ ಊರುಗಳತ್ತ ಪ್ರಯಾಣಿಸುವ ಒತ್ತಡದ ಪರಿಸ್ಥಿತಿ ಮೇಲ್ನೋಟಕ್ಕೆ ನಿರ್ಮಾಣವಾಗಿದೆ. ಆದ್ರೆ ರೈತ ನಾಯಕ ರಾಕೇಶ್ ಟಿಕಾಯತ್, ಕಾನೂನುಗಳನ್ನ ಹಿಂಪಡೆಯುವರೆಗೂ ಪ್ರತಿ ಭಟನಾ ಸ್ಥಳದಿಂದ ಕದಲಲ್ಲ ಎಂದು ದೃಢವಾಗಿದ್ದಾರೆ.

    ಸಂಜೆ ವೇಳೆ ಕೆಲ ರೈತರು ಹಿಂದಿರುಗಿತ್ತಿರೋದಕ್ಕೆ ಪ್ರತಿಕ್ರಿಯಿಸಿದ ರಾಕೇಶ್ ಟಿಕಾಯತ್, ಇಷ್ಟು ದೊಡ್ಡ ಮಟ್ಟದಲ್ಲಿ ನಮ್ಮ ವಿರುದ್ಧ ಸಂಚು ರೂಪಿಸಲಾಗುತ್ತೆ ಅನ್ನೋ ಕಲ್ಪನೆ ಸಹ ನನಗಿರಲಿಲ್ಲ. ನನ್ನ ಪತ್ನಿ ಬೇರೆ ಯಾರಿಗೂ ತನ್ನ ಮತ ಚಲಾಯಿಸಿದ್ರು. ಆದ್ರೆ ಎಲ್ಲರ ವಿರೋಧದ ನಡುವೆಗೂ ಬಿಜೆಪಿಗೆ ಮತ ನೀಡಿದೆ. ಬಿಜೆಪಿ ಮತ ನೀಡಿ ದೇಶದ್ರೋಹದ ಕೆಲಸ ಮಾಡಿದೆ ಅನ್ನೋದು ಮನವರಿಕೆಯಾಗ್ತಿದೆ ಎಂದು ಭಾವುಕರಾದರು.

    ಈ ಸರ್ಕಾರ ರೈತರನ್ನ ಅವಮಾನಿಸುವ ಮತ್ತು ಕೆಟ್ಟ ಹೆಸರು ತರಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಪ್ರತಿಭಟನೆ ಸ್ಥಳಕ್ಕೆ ಬರುತ್ತಿದ್ದು ನೀರು ಕಡಿತವಾಗಿದೆ. ವಿದ್ಯುತ್ ಸಂಪರ್ಕ ಸಹ ಕಡಿತಗೊಳಿಸಲಾಗಿದೆ ಎಂದರು.

    ಮತ್ತೊಂದು ಕಡೆ ರಾಕೇಶ್ ಸೋದರ ನರೇಶ್ ಮಾತನಾಡಿ, ಪ್ರತಿಭಟನೆ ಅಂತ್ಯಗೊಳಿಸುವುದು ಉತ್ತಮ. ಮೂಲಭೂತ ಸೌಕರ್ಯಗಳನ್ನ ಕಡಿತಗೊಳಿಸಿದ ಮೇಲೆ ಧರಣಿ ನಡೆಸೋದದರೂ ಹೇಗೆ? ಹಾಗಾಗಿ ರೈತರು ಇಲ್ಲಿಂದ ಹೊರಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ರಾಕೇಶ್ ಟಿಕಾಯತ್ ಓರ್ವ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿದರು. ಈತ ನಮ್ಮ ಗುಂಪಿನವನು ಅಲ್ಲ. ಮಾಧ್ಯಮ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಿ ಕ್ಯಾಮೆರಾಗಳ ಮುಂದೆ ಕೆನ್ನೆಗೆ ಏಟು ಕೊಟ್ಟರು.