Tag: Rakesh Malli

  • ಬಡವರನ್ನು ಬೀದಿ ಪಾಲು ಮಾಡಿದ್ರೆ ಜೋಕೆ: ಮಂಗಳೂರು ಮಹಾನಗರ ಪಾಲಿಕೆಗೆ ರಾಕೇಶ್ ಮಲ್ಲಿ ಎಚ್ಚರಿಕೆ

    ಬಡವರನ್ನು ಬೀದಿ ಪಾಲು ಮಾಡಿದ್ರೆ ಜೋಕೆ: ಮಂಗಳೂರು ಮಹಾನಗರ ಪಾಲಿಕೆಗೆ ರಾಕೇಶ್ ಮಲ್ಲಿ ಎಚ್ಚರಿಕೆ

    ಮಂಗಳೂರು: ಕಳೆದ 32 ವರ್ಷಗಳಿಂದ ರವಿವಾರ ಸಂತೆ ವ್ಯಾಪಾರ ಮಾಡುತ್ತಿದ್ದ ಬಡವರನ್ನು ಯಾವುದೇ ಕಾರಣಕ್ಕೂ ಬೀದಿ ಪಾಲು ಮಾಡಬಾರದು. ಮತ್ತೆ ರವಿವಾರ ಸಂತೆಗೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಪಾಲಿಕೆ ವಿರುದ್ಧ ನಿರಂತರ ಹೋರಾಟ ಅನಿವಾರ್ಯ ಎಂದು ಮಂಗಳೂರು ಮಹಾನಗರ ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಎಚ್ಚರಿಸಿದ್ದಾರೆ.

    ಸುರತ್ಕಲ್ ನಲ್ಲಿ ರವಿವಾರ ನಡೆಯುತ್ತಿದ್ದ ಸಂತೆ ವ್ಯಾಪಾರ ಬಂದ್ ಮಾಡಿರುವುದನ್ನು ವಿರೋಧಿಸಿ ಇಂಟಕ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ರಾಕೇಶ್ ಮಲ್ಲಿ, ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಯವರಿಗೆ ರವಿವಾರ ಸಂತೆಗೆ ಅನುಮತಿ ನೀಡಲು ಮನವಿ ಮಾಡಲಾಗುವುದು. ಅನುಮತಿ ನೀಡದೆ ಹೋದಲ್ಲಿ ಹೋರಾಟದ ಹಾದಿ ತುಳಿಯ ಬೇಕಾಗುತ್ತದೆ ಎಂದು ಪಾಲಿಕೆಯ ವಿರುದ್ಧ ಕಿಡಿಕಾರಿದ್ದಾರೆ.

    ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಸುಪ್ರೀಂ ಕೋರ್ಟ್ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದೆ. ಅದಲ್ಲದೆ ಇದೀಗ ಸರ್ಕಾರದಿಂದ ಆರ್ಥಿಕ ಸಹಾಯವನ್ನೂ ನೀಡಲಾಗುತ್ತಿದೆ. ಆದರೆ ಸುರತ್ಕಲ್‍ನಲ್ಲಿ ಮಾತ್ರ ಮಂಗಳೂರು ಮಹಾನಗರ ಪಾಲಿಕೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸುತ್ತಿದೆ. ಯಾವುದೇ ತೊಂದರೆ ಇಲ್ಲದೆ ವ್ಯಾಪಾರ ಮಾಡುವ ಬಡವರ ವಿರುದ್ಧ ಯಾರಿಗೆ ದ್ವೇಷವಿದೆ ಎಂಬುದು ಅರ್ಥವಾಗುತ್ತಿಲ್ಲ. ಸ್ಟೇಟ್ ಬ್ಯಾಂಕ್ ನಲ್ಲಿ ನಿತ್ಯವೂ ವ್ಯಾಪಾರವಿದೆ. ಇಲ್ಲಿನ ಸಂತೆಗಳಲ್ಲಿ ಉತ್ತರ ಕರ್ನಾಟಕದ ಸಾವಿರಾರು ಕುಟುಂಬಗಳು ಬದುಕಿನ ಹಾದಿ ಕಂಡುಕೊಂಡಿದೆ. ತಕ್ಷಣವೇ ಪಾಲಿಕೆ ರವಿವಾರದ ಸಂತೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.

    ಇಂಟಕ್‍ನ ದ.ಕ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ ಕೊರೊನಾ ಸಂದರ್ಭ ನಾವು ಸರ್ಕಾರದ ನಿರ್ದೇಶನ ಪಾಲಿಸಿದ್ದೆವು. ಆ ಬಳಿಕ ಪಾಲಿಕೆ ಏಕಾಏಕಿ ರವಿವಾರ ಸಂತೆಗೆ ನಿರ್ಭಂಧ ಹೇರಿತ್ತು. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ, ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ ಆದರು ಸಮಸ್ಯೆ ಬಗೆಹರಿದಿಲ್ಲ ಈಗಿನ ಆಡಳಿತ ಪಕ್ಷಕ್ಕೆ ಬಡವರ ಬಗ್ಗೆ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇಂಟಕ್ ಮುಖಂಡರಾದ ಅಬೂಬಕರ್ ಕೃಷ್ಣಾಪುರ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಯುವ ಇಂಟಕ್ ಕಾರ್ಯದರ್ಶಿ ದಿನಕರ್ ಶೆಟ್ಟಿ, ಜಯಕರ್ನಾಟಕ ಸಂಘಟನೆಯ ವೈ. ರಾಘವೇಂದ್ರ ರಾವ್, ಇನ್ನಿತರ ಪ್ರಮುಖ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

  • ರಾಕೇಶ್ ಮಲ್ಲಿ ಹತ್ಯೆಗೆ ಸುಪಾರಿ ಕೊಟ್ಟಿರೋದು ನಿಜ: ಮನ್ವಿತ್ ರೈ

    ರಾಕೇಶ್ ಮಲ್ಲಿ ಹತ್ಯೆಗೆ ಸುಪಾರಿ ಕೊಟ್ಟಿರೋದು ನಿಜ: ಮನ್ವಿತ್ ರೈ

    – ರೈ ಹಣದ ಶಕ್ತಿಯ ಎದುರು ಭಾರತದಲ್ಲಿ ಇರಲು ಸಾಧ್ಯವಿಲ್ಲ

    ಮಂಗಳೂರು: ಮುತ್ತಪ್ಪ ರೈ ಅವರ ಆಪ್ತರಾಗಿದ್ದ ರಾಕೇಶ್ ಮಲ್ಲಿಯನ್ನು ಕೊಲೆ ಮಾಡಲು ಮಾಜಿ ಡಾನ್ ಮುತ್ತಪ್ಪ ರೈ ಸುಪಾರಿ ಕೊಟ್ಟಿರುವುದು ನಿಜ ಎಂದು ಮುತ್ತಪ್ಪ ರೈ ಅವರ ಅಕ್ಕನ ಮಗ ಮನ್ವಿತ್ ರೈ ಸ್ಪಷ್ಟಪಡಿಸಿದ್ದಾರೆ.

    ಗುರುವಾರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ರಾಕೇಶ್ ಮಲ್ಲಿ ನನ್ನ ಹತ್ಯೆಗೆ ಮುತ್ತಪ್ಪ ರೈ ಸಂಚು ರೂಪಿಸಿದ್ದು, ಅವರ ಅಕ್ಕನ ಮಗ ಮನ್ವಿತ್ ರೈ ಅವರಿಗೆ 3 ಕೋಟಿ ರೂ. ಕೊಡುತ್ತೇನೆ ರಾಕೇಶ್ ಮಲ್ಲಿಯನ್ನು ಹತ್ಯೆ ಮಾಡಬೇಕೆಂದು ಹೇಳಿದ್ದರು. ಇಂದು ವಿದೇಶದಿಂದ ಮನ್ವಿತ್ ರೈ ವಿಡಿಯೋ ಬಿಡುಗಡೆ ಮಾಡಿದ್ದ. ಅದರಲ್ಲಿ ರಾಕೇಶ್ ಮಲ್ಲಿ ಕೊಲ್ಲಲು ಸುಪಾರಿ ಕೊಡುವುದಾಗಿ ಹೇಳಿದ್ದು ನಿಜ ಎಂದು ಹೇಳಿದ್ದಾರೆ.

    ಮುತ್ತಪ್ಪ ರೈ ನನಗೆ ಕರೆ ಮಾಡಿ ಹಣ ಕೊಡುತ್ತೇನೆ ಅವನನ್ನು ಮುಗಿಸುವಂತೆ ಹೇಳಿದ್ದರು. ಆದರೆ ನಾನು ಅದಕ್ಕೆ ಒಪ್ಪಿರಲಿಲ್ಲ. ನಿಮಗೆ ಏನಾದರೂ ತೊಂದರೆಯಾದರೆ ಸಹಾಯ ಮಾಡುತ್ತೇನೆ. ಆದರೆ ಈ ರೀತಿ ಕೆಲಸಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದೆ. ಆಗ ನನಗೂ ಕೂಡ ಜೀವ ಬೆದರಿಕೆ ಹಾಕಿದ್ದರು ಎಂದು ಮನ್ವಿತ್ ಹೇಳಿದ್ದಾರೆ. ಇದನ್ನು ಓದಿ: ತನ್ನ 30 ವರ್ಷದ ಆಪ್ತ ರಾಕೇಶ್ ಮಲ್ಲಿ ಹತ್ಯೆಗೆ ಸುಪಾರಿ ಕೊಟ್ಟ ಮುತ್ತಪ್ಪ ರೈ?

    ಮುತ್ತಪ್ಪ ರೈ ಅವರ ಹಣದ ಶಕ್ತಿಯ ಮುಂದೆ ಭಾರತದಲ್ಲಿ ಇರಲು ಸಾಧ್ಯವಿಲ್ಲ ಅದಕ್ಕಾಗಿ ವಿದೇಶದಲ್ಲಿ ಇದ್ದೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ರಾಕೇಶ್ ಮಲ್ಲಿಯನ್ನು ಹತ್ಯೆ ಮಾಡಲು ಮುತ್ತಪ್ಪ ರೈ ಯತ್ನಿಸಿದ್ದರು ಅನ್ನೊದು ಮೇಲ್ನೋಟಕ್ಕೆ ಸಾಬೀತಾಗಿದೆ.

  • ತನ್ನ 30 ವರ್ಷದ ಆಪ್ತ ರಾಕೇಶ್ ಮಲ್ಲಿ ಹತ್ಯೆಗೆ ಸುಪಾರಿ ಕೊಟ್ಟ ಮುತ್ತಪ್ಪ ರೈ?

    ತನ್ನ 30 ವರ್ಷದ ಆಪ್ತ ರಾಕೇಶ್ ಮಲ್ಲಿ ಹತ್ಯೆಗೆ ಸುಪಾರಿ ಕೊಟ್ಟ ಮುತ್ತಪ್ಪ ರೈ?

    – ಮತ್ತೆ ಫೀಲ್ಡ್ ಗೆ ಇಳಿದ್ರಾ ರೈ

    ಮಂಗಳೂರು: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಮತ್ತೆ ಫೀಲ್ಡ್ ಗೆ ಇಳಿದ್ರಾ ಅನ್ನುವ ಸಂಶಯ ಹುಟ್ಟಲಾರಂಭಿಸಿದೆ. ಇದಕ್ಕೆ ಪುಷ್ಠಿ ನೀಡುವಂತೆ ರೈ ವಿರುದ್ಧ 30 ವರ್ಷಗಳ ಒಡನಾಟವಿದ್ದ ಆಪ್ತ ಮಂಗಳೂರು ಮೂಲದ ರಾಕೇಶ್ ಮಲ್ಲಿ ತನಗೆ ಜೀವ ಬೆದರಿಕೆ ಇದೆ ಎಂದು ಬೆಂಗಳೂರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ರಾಕೇಶ್ ಮಲ್ಲಿ, ಬಂಟ್ವಾಳದಲ್ಲಿ ನಾಲ್ಕೂವರೆ ವರ್ಷಗಳ ಹಿಂದೆ ಮುತ್ತಪ್ಪ ರೈ ಜೊತೆಗೂಡಿ ಹದಿನೇಳುವರೆ ಎಕರೆ ಜಾಗಕೊಂಡಿದ್ದೇವೆ. ಈಗ ಹಣ ಅಥವಾ ಜಾಗ ಕೇಳಿದರೆ ರೈ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನ್ಯಾಯಯುತವಾದ ಹಣ ಕೇಳಿದ್ರೆ ರೈಗೆ ಪುತ್ತೂರು ಕೋರ್ಟ್ ಆವರಣದಲ್ಲಿ ಗುಂಡು ಹೊಡೆದವರಿಂದಲೇ ನನ್ನನ್ನು ಕೊಲೆ ಮಾಡಲು ಸುಪಾರಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಸಂಘಟನೆ ಕಟ್ಟಿ ತನ್ನ ಹಿಂದಿನ ತಪ್ಪುಗಳಿಗೆ ಬೇಲಿ ಹಾಕಿದ್ದ ರೈ ಮಾತಿನಿಂದಲೇ ಎಲ್ಲರನ್ನು ಓಲೈಸುತ್ತಿದ್ದಾರೆ. ಮುತ್ತಪ್ಪ ರೈ ತುಂಬಾ ಮಂದಿಗೆ ಹಣ ಕೊಡೋದಕ್ಕೆ ಬಾಕಿ ಇದೆ. ಹಣ ಕೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಮುತ್ತಪ್ಪ ರೈ ಅವರ ಅಕ್ಕನ ಮಗ ಮನ್ವಿತ್ ರೈಗೆ 3 ಕೋಟಿ ರೂ. ಕೊಡುತ್ತೇನೆ ರಾಕೇಶ್ ಮಲ್ಲಿಯನ್ನು ಹತ್ಯೆ ಮಾಡಬೇಕೆಂದು ಸುಪಾರಿ ನೀಡಿದ್ದರು ಎಂದು ಮಲ್ಲಿ ಆರೋಪ ಮಾಡಿದ್ದಾರೆ.

    ಹಣದ ಮೇಲೆ ಅತಿಯಾಸೆ ಹೊಂದಿರುವ ರೈ ಇಲ್ಲಿಯವರೆಗೆ ಒಂದು ರೂಪಾಯಿ ಹಣವನ್ನು ಯಾರಿಗೂ ನೀಡಿಲ್ಲ. ಯಾರಿಗೂ ಸೈಟ್ ನೀಡಿಲ್ಲ ಎಂದು ರಾಕೇಶ್ ಮಲ್ಲಿ ತಿಳಿಸಿದ್ದಾರೆ. ಮುತ್ತಪ್ಪ ರೈ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮಾಡಿ ಕಾನೂನು ಮೂಲಕ ಶಿಕ್ಷೆ ನೀಡಬೇಕೆಂದು ರಾಕೇಶ್ ಮಲ್ಲಿ ಆಗ್ರಹಿಸಿದ್ದಾರೆ.