ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್‌ನಿಂದ ಇಬ್ಬರು ಶಾಸಕರನ್ನು ಉಚ್ಚಾಟನೆ ಮಾಡಲಾಗಿದೆ.
ಗುಬ್ಬಿ ಶ್ರೀನಿವಾಸ್, ಕೋಲಾರ ಶ್ರೀನಿವಾಸ ಗೌಡ ಉಚ್ಚಾಟನೆಗೊಳಿಸಿ ಜೆಡಿಎಸ್ ಆದೇಶ ಹೊರಡಿಸಿದೆ. ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ರಾರಾ ರಕ್ಕಮ್ಮ ಹಾಡಿಗೆ ರೇಣುಕಾಚಾರ್ಯ ಭರ್ಜರಿ ಸ್ಟೆಪ್ಸ್
ರಾಜ್ಯಸಭಾ ಚುನಾವಣೆಯಲ್ಲಿ ತಾವು ಪಕ್ಷದ ಅಧಿಕೃತ ಅಭ್ಯರ್ಥಿಯಾದ ಡಿ.ಕುಪೇಂದ್ರರೆಡ್ಡಿ ಅವರಿಗೆ ಮತ ನೀಡದೇ, ಅವರ ವಿರುದ್ಧವಾಗಿ ನಿಮ್ಮ ಪ್ರಥಮ ಪ್ರಾಶಸ್ತ್ಯ ಮತವನ್ನು ಬಿಜೆಪಿ ಅಭ್ಯರ್ಥಿ ಲೆಹರ್‌ಸಿಂಗ್ ಮತ್ತು ದ್ವಿತೀಯ ಮತವನ್ನು ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರಿಗೆ ನೀಡಿರುವ ಬಗ್ಗೆ ಹೆಚ್.ಡಿ.ರೇವಣ್ಣ ಅವರು ನೀಡಿರುವ ವರದಿಯಲ್ಲಿ ವಿವರಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗುಬ್ಬಿ ಶ್ರೀನಿವಾಸ್ ಅವರು ಖಾಲಿ ಪೇಪರ್ ಅನ್ನು ಬ್ಯಾಲೆಟ್ ಬಾಕ್ಸ್‌ಗೆ ಹಾಕಿ ಸಂಚಲನ ಮೂಡಿಸಿದ್ದರು. ಇದಕ್ಕೂ ಮೊದಲು ಜೆಡಿಎಸ್‌ನ ಶ್ರೀನಿವಾಸ್ ಗೌಡ ಅವರು ಅಡ್ಡ ಮತದಾನ ಮಾಡಿದ್ದರು.
ರಾಯಚೂರು: ಪ್ರಸ್ತುತ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವಿನ ಜಗಳದಿಂದಲೇ ನಮಗೆ ಲಾಭವಾಗಿದೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ರಾಯಚೂರಿನ ಸಿಂಧನೂರು ತಾಲೂಕಿನ ಜವಳಗೇರಾದಲ್ಲಿ ಮೊರಾರ್ಜಿ ವಸತಿ ಶಾಲೆ ಉದ್ಘಾಟನೆ ಬಳಿಕ ಮಾತನಾಡಿದ ಸಚಿವರು, ಬಿಜೆಪಿಯಲ್ಲಿ ನಮ್ಮ ಲೆಕ್ಕಾಚಾರ ನಮಗಿದೆ. ಆದ್ದರಿಂದಲೇ ನಾವು ರಾಜ್ಯಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರ ದಲಿತ ಪರ ಕಾಳಜಿಯ ಪೊರೆ ಕಳಚುತ್ತಿದೆ: ಬಿಜೆಪಿ ಟೀಕೆ
ಜೆಡಿಎಸ್‌ನವರು ತಮ್ಮ ಸಿದ್ಧಾಂತಗಳನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಎಂತಹ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಕಡೆಗೆ ಹೋಗಲು ಆಗಲಿಲ್ಲ. ಸಿದ್ದರಾಮಯ್ಯ ಅವರು ಮೊದಲಿನಿಂದಲೂ ಜೆಡಿಎಸ್ ವಿರುದ್ಧವಾಗಿಯೇ ಬಂದಿದ್ದಾರೆ. ಅವರಲ್ಲಿ ಗಲಾಟೆಯಾಗಿರುವುದರಿಂದ ನಮಗೆ ಅನುಕೂಲವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ನಮ್ಮ ಶಾಲೆಗಳು ಪೈಪೋಟಿ ಕೊಡುವಂತೆ ಕೆಲಸ ಮಾಡುತ್ತೇವೆ: ಶ್ರೀರಾಮುಲು
ಕೋಲಾರ: ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆ ಸಂದರ್ಭ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ನಾನು ಯಾಕೆ ಅಡ್ಡ ಮತದಾನ ಮಾಡಿದೆ ಎಂಬುದಕ್ಕೆ ಈಗ ಹಳೆ ಕಥೆ ಬಿಚ್ಚಿಟ್ಟು ಶ್ರೀನಿವಾಸ್ ಗೌಡ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಶ್ರೀನಿವಾಸ್ ಗೌಡ, ನಿನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ. ಈ ಹಿನ್ನೆಲೆ ಜೆಡಿಎಸ್ ಮುಖಂಡರು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ ಎಂದು ತಿಳಿಸಿದರು.
7 ತಿಂಗಳ ಹಿಂದೆಯೇ ಪ್ರಜ್ವಲ್ ರೇವಣ್ಣ ಅವರು ನನ್ನನ್ನು ಉಚ್ಚಾಟನೆ ಮಾಡಿದ್ದರು. ಇದೀಗ ಜೆಡಿಎಸ್‌ನವರಿಗೆ ನನ್ನ ವಿಷಯದಲ್ಲಿ ಮಾತನಾಡುವ ಹಕ್ಕು ಇಲ್ಲ. ಅವರು ಉಚ್ಚಾಟನೆ ಮಾಡಿದ ಬಳಿಕ ನಾನು ಯಾವುದೇ ಪಕ್ಷಕ್ಕೂ ಹೋಗಬಹುದು ಎಂದು ಹೇಳಿದರು.
ನಾನೊಬ್ಬ ಹಿರಿಯ ಶಾಸಕನಾಗಿದ್ದರೂ ನನ್ನನ್ನು ಸಚಿವನನ್ನಾಗಿ ಮಾಡಿಲ್ಲ. ನಾನು ಮಂತ್ರಿಯಾಗಿದ್ದಾಗ ಕುಮಾರಸ್ವಾಮಿಯವರು ಶಾಸಕರೂ ಆಗಿರಲಿಲ್ಲ. ಇಂತಹ ಹಿರಿಯ ಶಾಸಕನನ್ನು ಪಕ್ಷ ಸರಿಯಾಗಿ ನೋಡಿಕೊಂಡಿಲ್ಲ. ನನ್ನ ಹಿನ್ನೆಲೆ ನೋಡಿಯಾದರೂ ಗೌರವ ನೀಡಬೇಕಿತ್ತು ಎಂದು ನುಡಿದರು. ಇದನ್ನೂ ಓದಿ: ಬಿಜೆಪಿ ‘ಎ’ ಟೀಂ ಅಂತ ಎಲ್ಲರೂ ಒಪ್ಪಿಕೊಂಡಾಗಿದೆ, ಬಿ ಟೀಂ ಯಾವುದಾದರೇನು: ಬೊಮ್ಮಾಯಿ
ನಾನು ಧರಂ ಸಿಂಗ್ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಅವರ ನಡತೆ ನ್ಯಾಯಯುತವಾಗಿರಲಿಲ್ಲ. ಈಗ ತಾಲೂಕು, ಜಿಲ್ಲಾ ಪಂಚಾಯತ್ ಎಲ್ಲದರಿಂದಲೂ ನಾನು ಹೊರ ಬಂದಿದ್ದೇನೆ. ನನ್ನ ಕೈಲಾದಮಟ್ಟಿಗೆ ಅಭಿವೃದ್ಧಿ ಮಾಡಿದ್ದೇನೆ. ಕೋಲಾರಕ್ಕೆ ರಿಂಗ್ ರಸ್ತೆ ಮಾಡಿಸುವ ಕನಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ – ಸುಳಿವು ಬಿಟ್ಟುಕೊಟ್ಟ ಅಶ್ವಥ್ ನಾರಾಯಣ್
2018ರಲ್ಲಿ ನನಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತಪ್ಪಿತ್ತು. ಕಾಂಗ್ರೆಸ್‌ನಲ್ಲಿ ಟಿಕೆಟ್ ಕೇಳಿದ್ದಾಗ ಮಿಸ್ ಆಯ್ತು ಎಂದು ಜೆಡಿಎಸ್‌ನಿಂದ ಸ್ಪರ್ಧೆಗೆ ನಿಂತಿದ್ದೆ. ವಿಧಾನಪರಿಷತ್ ಚುನಾವಣೆಯಲ್ಲಿ ಎಲ್ಲಾ ಶಾಸಕರಿಗೂ 50 ಲಕ್ಷ ರೂ. ನೀಡಲಾಗಿದೆ. ಅದನ್ನು ಎಲ್ಲಾ ಜೆಡಿಎಸ್ ಶಾಸಕರೂ ಪಡೆದಿದ್ದಾರೆ. ಆದರೆ ನಾನು ಪಡೆದಿಲ್ಲ ಎಂದು ಹೇಳಿಕೆ ನೀಡಿದರು.
ಬೆಂಗಳೂರು: ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರುವ ವಿಚಾರ ತಿಳಿದು ಬರುತ್ತಲೇ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ಕಿಡಿ ಕಾರಿದ್ದಾರೆ.
ಆ ಮನುಷ್ಯನಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ. ಕೋಲಾರ ಜನತೆಯ ಜೆಡಿಎಸ್ ಮತದಾರರಿಗೆ ಅವರು ಅವಮಾನ ಮಾಡಿದ್ದಾರೆ. ನಮ್ಮ ಪಕ್ಷದ ಚಿಹ್ನೆ ಅಡಿ ಗೆದ್ದು, ಅವರಿಗೆ ಮತ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ
ಕಾಂಗ್ರೆಸ್‌ನವರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. 2016ರಲ್ಲಿ 8 ಶಾಸಕರ ಕೈಯಲ್ಲಿ ಅಡ್ಡ ಮತ ಹಾಕಿಸಿಕೊಂಡಿದ್ದರು. ಇದೀಗ ಶ್ರೀನಿವಾಸ್ ಗೌಡ ಅವರ ಕೈಯಲ್ಲಿ ಅಡ್ಡ ಮತ ಹಾಕಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಗುಬ್ಬಿ ಶ್ರೀನಿವಾಸ್ ಬಗ್ಗೆ ಮಾತನಾಡಿದ ಹೆಚ್‌ಡಿಕೆ, ಗುಬ್ಬಿ ಶ್ರೀನಿವಾಸ್ ಯಾರಿಗೂ ಮತ ಹಾಕಿಲ್ಲ. ಖಾಲಿ ಪೇಪರ್ ಕೊಟ್ಟು ಹೋಗಿದ್ದಾರೆ. ಆದರೆ ಮಾಧ್ಯಮದ ಮುಂದೆ ಜೆಡಿಎಸ್‌ಗೆ ಮತ ಹಾಕಿದ್ದೇನೆ ಎಂದು ಹೇಳುತ್ತಿದ್ದಾರೆ. ಯಾಕೆ ಇಷ್ಟು ನಾಟಕವಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜೆಡಿಎಸ್‌ಗೆ ಬಿಗ್ ಶಾಕ್ ಕೊಟ್ಟ ಗುಬ್ಬಿ ಶ್ರೀನಿವಾಸ್
ಇವರನ್ನು ಮಂತ್ರಿ ಮಾಡಿದ್ದೇ ತಪ್ಪಾಯಿತು. ಇವರ ಬಂಡವಾಳ ಸಂಜೆ ಗೊತ್ತಾಗಲಿದೆ. ಇವರಿಗೆ ಜನರೇ ತಕ್ಕ ಬುದ್ಧಿ ಕಲಿಸುತ್ತಾರೆ ಎಂದು ಹೇಳಿಕೆ ನೀಡಿದರು.
ಬೆಂಗಳೂರು: ಜೆಡಿಎಸ್ ನಾಯಕರಿಗೆ ಗುಬ್ಬಿ ಶ್ರೀನಿವಾಸ್ ಶಾಕ್ ಕೊಟ್ಟಿದ್ದಾರೆ. ಇಂದಿನ ರಾಜ್ಯಸಭಾ ಚುನಾವಣೆಯಲ್ಲಿ ಶ್ರೀನಿವಾಸ್ ಖಾಲಿ ಪೇಪರ್ ಅನ್ನು ಬ್ಯಾಲೆಟ್ ಬಾಕ್ಸ್‌ಗೆ ಹಾಕಿ ಸಂಚಲನ ಮೂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಶ್ರೀನಿವಾಸ್ ಅವರು ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದಾರೆ. ಸಾಯಂಕಾಲ ಇವರ ಹಣೆಬರಹ ಗೊತ್ತಾಗುತ್ತದೆ. ನಮ್ಮ ಪಕ್ಷದಲ್ಲಿ ನಿಂತು ನಮಗೆ ದ್ರೋಹ ಮಾಡಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ಪಕ್ಷಕ್ಕೆ ರಾಜೀನಾಮೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ
ಗುಬ್ಬಿ ಶ್ರೀನಿವಾಸ್ ಅವರು ಖಾಲಿ ಬ್ಯಾಲೆಟ್ ಹಾಕಿದ್ದಾರೋ ಇಲ್ಲವೋ ಎನ್ನುವುದು ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಒಂದು ವೇಳೆ ಯಾರಿಗೂ ಮತ ಹಾಕದೇ ಖಾಲಿ ಬ್ಯಾಲೆಟ್ ಹಾಕಿದರೆ ಮತ ತಿರಸ್ಕೃತವಾಗಲಿದೆ. ಸಂಜೆ ಚುನಾವಣಾ ಎಣಿಕೆಯ ವೇಳೆ ಎಲ್ಲವೂ ಸ್ಪಷ್ಟವಾಗಲಿದೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ರೇವಣ್ಣ ಮತ ತಿರಸ್ಕೃತವಾಗುತ್ತಾ?
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಗುಬ್ಬಿ ಶ್ರೀನಿವಾಸ್ ಅವರು ನಾನು ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ಜೆಡಿಎಸ್ ಶ್ರೀನಿವಾಸ ಗೌಡ ಅವರು ಅಡ್ಡ ಮತದಾನ ಮಾಡಿದ್ದರು.
ಬೆಂಗಳೂರು: ಬೇರೆಯವರು ತಾಳಿಕಟ್ಟಿದವರ ಬಳಿ ಹೋಗಿ ಲವ್ ಲೆಟರ್ ಬರೆದರೆ ಆಗುತ್ತಾ ಎಂದು ಜೆಡಿಎಸ್ ಶಾಸಕ ಸಿಎಂ ಇಬ್ರಾಹಿಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಜೆಡಿಎಸ್ ಶಾಸಕರಿಗೆ ಪತ್ರ ಬರೆದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಕದ ಮನೆಯವನ ಧರ್ಮ ಪತ್ನಿಗೆ ಪತ್ರ ಬರೆಯುತ್ತೀರಾ? ಇದು ಅಪರಾಧ ಅಲ್ವಾ, ಇದು ನೈತಿಕತೆಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಜೊತೆ ಡೀಲ್, ಸಿದ್ದರಾಮಯ್ಯ ಬಣ್ಣ ಬಯಲಾಯ್ತು: ಹೆಚ್‌ಡಿಕೆ ಬಾಂಬ್
ಶ್ರೀನಿವಾಸ್ ನಮ್ಮ ಬಳಿ ಜೆಡಿಎಸ್‍ಗೆ ಮತ ಹಾಕ್ತೀವಿ ಅಂತಾ ಹೇಳಿದ್ದಾರೆ. ಎಲ್ಲರೂ ಮತ ಹಾಕುತ್ತಾರೆ ಅಂತಾ ನಮಗೆ ಭರವಸೆ ಇದೆ. ದೇವರು ನಮ್ಮ ಪಕ್ಷದ 35 ಅಭ್ಯರ್ಥಿಗಳಿಗೆ ಒಳ್ಳೆ ಬುದ್ಧಿ ಕೊಡುತ್ತಾನೋ ಕಾದು ನೋಡಬೇಕಿದೆ. ಲೆಹರ್ ಸಿಂಗ್ ಕನ್ನಡದವರಾ? ಸಿದ್ದರಾಮಯ್ಯ ಕನ್ನಡಕ್ಕಾಗಿ ಕೈ ಎತ್ತು ಅಂತಾರೆ. ಅವರೇನು ಬಡವರಾ? ನಮ್ಮದು ಹಳ್ಳಿಲಿ ಆಫೀಸ್ ಇರೋದು ಉಳಿದ ಪಕ್ಷಗಳಂತೆ ದೆಹಲಿಯಲ್ಲಿ ಇಲ್ಲ. ಜೆಡಿಎಸ್ ಇವತ್ತು ಬದುಕುತ್ತಿರುವುದು ಸತ್ಯ ಧರ್ಮದ ಆಧಾರದ ಮೇಲೆ. ನಮ್ಮದು ಬಡವರ ಪಕ್ಷ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಕಚೇರಿಗೆ ಸಿಟಿ ರವಿ!
ಬೆಂಗಳೂರು: ಒಂದೇ ಒಂದು ರಾಜ್ಯಸಭೆ ಸೀಟ್ ಬೇರೆ ಬೇರೆ ರೀತಿಯ ಟ್ವಿಸ್ಟ್‌ಗೆ ಸಾಕ್ಷಿಯಾಗುತ್ತಿದೆ. ಜೆಡಿಎಸ್ ಬಹಿರಂಗ ಬೆಂಬಲದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ರಾಜಕೀಯ ಚದುರಂಗದಾಟ ಆರಂಭಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಜೆಡಿಎಸ್ ಶಾಸಕರಿಗೆ ಎರಡು ಪುಟಗಳ ಪತ್ರದ ಮೂಲಕ ‘ಆತ್ಮಸಾಕ್ಷಿ’ ಮತ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೊನೆಯ ಹಂತದಲ್ಲಿ ರಾಜ್ಯಸಭೆ ಅಭ್ಯರ್ಥಿಗಳ ಗೆಲುವಿಗಾಗಿ ಕಾಂಗ್ರೆಸ್ ಜೆಡಿಎಸ್ ಜೊತೆ ಬಹಿರಂಗವಾಗಿ ಪತ್ರದ ಮೂಲಕ ಬೆಂಬಲ ಕೇಳಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್‍ಗೆ ಆತ್ಮಸಾಕ್ಷಿ ಮತ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ. ರಾಜ್ಯಸಭೆ ಚುನಾವಣೆ ಜಾತ್ಯತೀತ ಸಾವು ಬದುಕಿನ ಪ್ರಶ್ನೆ. ಕೋಮುವಾದಿ ಬಿಜೆಪಿ ಒಂದ್ಕಡೆ, ಕಾಂಗ್ರೆಸ್, ಜೆಡಿಎಸ್ ಇನ್ನೊಂದೆಡೆ ನಿಂತಿದೆ. ಹಾಗಾಗಿ ಜಾತಿವಾದಿ, ಕೋಮುವಾದಿಗಳಿಗೆ ತಕ್ಕ ಉತ್ತರ ನೀಡಬೇಕೆಂದು ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿ ಜೆಡಿಎಸ್ ಜೊತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಂಖ್ಯೆ 19 ರಲ್ಲಿದೆ ಲೆಹರ್ ಸಿಂಗ್ ಗೆಲುವಿನ ಸೀಕ್ರೆಟ್
ಪತ್ರದಲ್ಲಿ ಏನಿದೆ?
ಜಾತ್ಯತೀತ ಜನತಾದಳದ ವಿಧಾನಸಭಾ ಸದಸ್ಯರಿಗೆ ಪ್ರೀತಿಯ ನಮಸ್ಕಾರಗಳು. ದೇಶ ಅತ್ಯಂತ ಆತಂಕಕಾರಿ ಹಾದಿಯಲ್ಲಿ ಸಾಗುತ್ತಿರುವುದು ನಮ್ಮೆಲ್ಲರ ಅರಿವಿನಲ್ಲಿದೆ. ಸಾಮಾಜಿಕ ನ್ಯಾಯ, ಸಮಾನತೆ, ಭಾತೃತ್ವ, ಜಾತ್ಯತೀತತೆ ಮೊದಲಾದ ಸಂವಿಧಾನದ ಆಶಯಗಳ ಮೇಲೆ ಪ್ರಭುತ್ವವೇ ನಡೆಸುತ್ತಿರುವ ನಿರಂತರ ದಾಳಿಯಿಂದ ದೇಶದ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳು ಸೇರಿದಂತೆ ಎಲ್ಲ ಬದಲಾವಣೆಗಳಿಗೂ ರಾಜಕೀಯ ಬದಲಾವಣೆಯೇ ಚಾಲನಾ ಶಕ್ತಿ ಎನ್ನುವುದು ನಾವು ಇತಿಹಾಸದಿಂದ ಕಲಿತ ಪಾಠವಾಗಿದೆ. ಕಲಿತ ಪಾಠವನ್ನು ಪ್ರಯೋಗಿಸುವ ಅವಕಾಶ ಎದುರಾದಾಗ ಮುಕ್ತ ಮನಸ್ಸಿನಿಂದ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಕರ್ತವ್ಯವಾಗಿದೆ.
ಇಂತಹದ್ದೊಂದು ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುವ ಅವಕಾಶವನ್ನು ಇದೇ ಜೂನ್ ಹತ್ತರಂದು ರಾಜ್ಯದಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆ ನಮಗೆ ನೀಡಿದೆ. ಕಾಂಗ್ರೆಸ್ ಕೋಮುವಾದದ ಜೊತೆ ಎಂದೂ ರಾಜಿಯಾಗದೇ ಜಾತ್ಯತೀತತೆ ಪರವಾಗಿ ಗಟ್ಟಿಯಾಗಿ ನಿಂತಿರುವ ಪಕ್ಷ. ಕೋಮುವಾದಿ ಶಕ್ತಿಗಳನ್ನು ಸೋಲಿಸುವ ಪ್ರಸಂಗ ಎದುರಾದಾಗ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವನ್ನು ಲೆಕ್ಕಿಸದೆ ಜಾತ್ಯತೀತತೆ ಪರವಾಗಿ ಕಾಂಗ್ರೆಸ್ ಪಕ್ಷ ನಿಂತಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಜನತಾದಳದ ಹಿರಿಯ ನಾಯಕ ಹೆಚ್.ಡಿ.ದೇವೇಗೌಡರಿಗೆ ಪ್ರಧಾನಿಯಾಗುವ ಅವಕಾಶ ಎದುರಾದಾಗ ಕಾಂಗ್ರೆಸ್ ಪಕ್ಷ ಮುಕ್ತ ಹೃದಯದಿಂದ ಬೆಂಬಲಿಸಿತ್ತು. ಎರಡು ವರ್ಷಗಳ ಹಿಂದೆ ಹೆಚ್.ಡಿ.ದೇವೇಗೌಡರು ರಾಜ್ಯಸಭಾ ಚುನಾವಣೆಯನ್ನು ಎದುರಿಸಿದಾಗ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಗೌಡರನ್ನು ಬೆಂಬಲಿಸಿ ಗೆಲ್ಲಿಸಿತ್ತು. ನಾಲ್ಕು ವರ್ಷಗಳ ಹಿಂದೆ ಕೇವಲ 37 ಶಾಸಕರನ್ನು ಹೊಂದಿದ್ದ ಜಾತ್ಯತೀತ ಜನತಾದಳಕ್ಕೆ ನಮ್ಮ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಹೆಚ್.ಡಿ.ಕುಮರಾಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿತ್ತು. ಇದು ನಮ್ಮ ಸೈದ್ದಾಂತಿಕ ಬದ್ದತೆ. ಈ ಬಾರಿ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಇದೇ ಸೈದ್ದಾಂತಿಕ ಬದ್ದತೆಯಿಂದ ಜನತಾದಳ ನಮ್ಮ ಎರಡನೇ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸಬಹುದು ಎಂಬ ನಿರೀಕ್ಷೆಯಿಂದ ನಮ್ಮ ಯುವನಾಯಕ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿದ್ದೆವು. ನಮ್ಮ ಅಭ್ಯರ್ಥಿ ಘೋಷಣೆ ಮಾಡಿದ ಮರುದಿನ ತಮ್ಮಲ್ಲಿ ಒಬ್ಬ ಅಭ್ಯರ್ಥಿಯನ್ನೂ ಗೆಲ್ಲಿಸುವಷ್ಟು ಮತಗಳು ಲಭ್ಯವಿಲ್ಲದೆ ಇದ್ದರೂ ಜೆಡಿಎಸ್ ಪಕ್ಷ, ಹಠಾತ್ತನೆ ತನ್ನ ಅಭ್ಯರ್ಥಿಯನ್ನು ಘೋಷಿಸಿರುವುದು ನಮಗೆ ಆಘಾತವುಂಟುಮಾಡಿದೆ. ಇದನ್ನೂ ಓದಿ: ಡಿಕೆಶಿ ಬಳಿಕ ಸಿದ್ದರಾಮಯ್ಯ ಇಮೇಜ್ ಬಿಲ್ಡ್‌ಗೆ ಮೊರೆ
ಈ ಚುನಾವಣೆ ಬಹುಮುಖ್ಯವಾಗಿ ಜಾತ್ಯಾತೀತತೆ ಮತ್ತು ಕೋಮುವಾದ ಎಂಬ ಎರಡು ಸಿದ್ದಾಂತಗಳ ನಡುವಿನ ಸಮರವೂ ಆಗಿದೆ ಎನ್ನುವುದನ್ನು ನೀವು ಬಲ್ಲಿರಿ. ರಾಷ್ಟ್ರಕವಿ ಕುವೆಂಪು ಅವರು ಹೆಮ್ಮೆಯಿಂದ ಹೇಳಿಕೊಂಡ ಸರ್ವಜನಾಂಗದ ಶಾಂತಿಯ ತೋಟವನ್ನು ಬಿಜೆಪಿ, ಧಾರ್ಮಿಕ ದ್ವೇಷಾಸೂಯೆಗಳಿಂದ ಹಾಳುಗೆಡಹುತ್ತಿರುವುದನ್ನು ನಾವು ನಿತ್ಯ ನೋಡುತ್ತಿದ್ದೇವೆ. ಪಠ್ಯಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರು, ನಾಡಪ್ರಭು ಕೆಂಪೇಗೌಡ, ಕುವೆಂಪು ಸೇರಿದಂತೆ ನಾವು ಗೌರವಿಸುವ ಮಹಾಪುರುಷರಿಗೆ ಮಾಡಿರುವ ಅವಮಾನ ಇದಕ್ಕೆ ಇತ್ತೀಚಿನ ಜ್ವಲಂತ ಉದಾಹರಣೆ.
ಕನ್ನಡಿಗರೆಲ್ಲರ ಆತ್ಮಸ್ವರೂಪಿಯಾದ ಕುವೆಂಪು ವಿರಚಿತ ನಾಡಗೀತೆಯನ್ನೇ ತಿರುಚಿದ ಕಿಡಿಗೇಡಿಯಿಂದಲೇ ಈ ಎಲ್ಲ ದುಷ್ಕೃತ್ಯಗಳನ್ನು ಮಾಡಿಸುವ ಧಾಷ್ಟ್ರ್ಯವನ್ನು ಬಿಜೆಪಿ ತೋರಿದೆ. ರಾಜ್ಯಸಭಾ ಚುನಾವಣೆಯ ಮೂಲಕ ಒದಗಿ ಬಂದ ಅವಕಾಶವನ್ನು ಬಳಸಿಕೊಂಡು ಕೋಮುವಾದಿ ಮತ್ತು ಜಾತಿವಾದಿ ಬಿಜೆಪಿಗೆ ತಕ್ಕ ಉತ್ತರ ನೀಡಬೇಕೆಂದು ಜಾತ್ಯತೀತತೆ, ಸೌಹಾರ್ದತೆ ಮತ್ತು ಸಹಬಾಳ್ವೆಯ ಮೇಲೆ ನಂಬಿಕೆ ಇಟ್ಟಿರುವ ನಾಡಬಾಂಧವರೆಲ್ಲರ ಮನದಾಳದ ಹಾರೈಕೆಯಾಗಿದೆ. ಜಾತ್ಯತೀತತೆಯ ಸಾವು-ಬದುಕಿನ ಪ್ರಶ್ನೆಯಾಗಿ ರಾಜ್ಯಸಭಾ ಚುನಾವಣೆ ನಮ್ಮ ಮುಂದಿದೆ. ಸೈದ್ದಾಂತಿಕವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದು ಕಡೆ ಇದ್ದರೆ, ಕೋಮುವಾದವನ್ನೇ ಉಸಿರಾಡುವ ಬಿಜೆಪಿ ಇನ್ನೊಂದು ಕಡೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಎರಡನೇ ಅಭ್ಯರ್ಥಿಯಾಗಿರುವ ಮನ್ಸೂರ್ ಅಲಿ ಖಾನ್ ಅವರ ಸೋಲು-ಗೆಲುವನ್ನು ರಾಜ್ಯದ ಅಲ್ಪಸಂಖ್ಯಾತ ಸಮುದಾಯ ಮಾತ್ರವಲ್ಲ ಜಾತ್ಯತೀತತೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಕುತೂಹಲದಿಂದ ಗಮನಿಸುತ್ತಿದ್ದಾರೆ. ಸೈದ್ದಾಂತಿಕ ಬದ್ದತೆಯಿಂದ ಜಾತ್ಯಾತೀತ ಜನತಾದಳ ಬೆಂಬಲಿಸಿದರೆ ಈ ಯುವನಾಯಕನ ಆಯ್ಕೆ ನಿರಾತಂಕವಾಗಿ ನಡೆದುಹೋಗುತ್ತದೆ. ಮನ್ಸೂರು ಅಲಿ ಖಾನ್ ಅವರ ಗೆಲುವು ಯಾವುದೇ ಒಂದು ಪಕ್ಷದ ಗೆಲುವಾಗದೆ ಜಾತ್ಯತೀತ ಸಿದ್ದಾಂತದ ಮೇಲೆ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಪಕ್ಷಗಳೆರಡರ ಸೈದ್ದಾಂತಿಕ ಗೆಲುವಾಗುತ್ತದೆ. ಪ್ರಜಾಪ್ರತಿನಿಧಿಗಳಾದ ನಾವೆಲ್ಲರೂ ನಮ್ಮ ಪ್ರಭುಗಳಾದ ಪ್ರಜೆಗಳ ಆತ್ಮಸಾಕ್ಷಿಗೆ ದನಿಯಾಗಬೇಕಾಗಿರುವುದು ಕರ್ತವ್ಯವಾಗಿದೆ. ಈ ಆತ್ಮಸಾಕ್ಷಿಯ ಮತವನ್ನು ಜಾತ್ಯತೀತತೆಗೆ ಬದ್ದವಾಗಿರುವ ನಮ್ಮ ಪಕ್ಷದ ಮನ್ಸೂರ್ ಅಲಿ ಖಾನ್ ಅವರಿಗೆ ಚಲಾಯಿಸಬೇಕೆಂದು ನನ್ನ ಸವಿನಯ ವಿನಂತಿ.
ಬೆಂಗಳೂರು: ರಾಜ್ಯಸಭೆ ಚುನಾವಣೆ ರೋಚಕ ಘಟ್ಟಕ್ಕೆ ತಲುಪಿದೆ. ಇದೇ ತಿಂಗಳ ಜೂನ್ 10ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದ್ದು, ಜೆಡಿಎಸ್ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ.
ಸಾಂದರ್ಭಿಕ ಚಿತ್ರ
ಜೆಡಿಎಸ್‌ನ ಎಲ್ಲ ಶಾಸಕರನ್ನು ದೇವನಹಳ್ಳಿ ಬಳಿಯಿರುವ ಖಾಸಗಿ ರೆಸಾರ್ಟ್‌ಗೆ ಶಿಫ್ಟ್ ಮಾಡಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ವೇಳೆಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಈಗಾಗಲೇ ರೆಸಾರ್ಟ್‌ಗೆ ಬರಲು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಕೈ, ದಳದಲ್ಲಿ ಗೊಂದಲ – ಇಬ್ಬರ ಜಗಳದ ಲಾಭ ಪಡೆಯುವ ನಿರೀಕ್ಷೆಯಲ್ಲಿ BJP
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಇಂದು ಮತ್ತು ನಾಳೆ ಎರಡು ದಿನ ರೆಸಾರ್ಟ್‌ನಲ್ಲೇ ಉಳಿಯಲಿದ್ದು, ರಾಜ್ಯಸಭೆ ಚುನಾವಣೆ ದಿನದಂದು ನೇರವಾಗಿ ಮತದಾನಕ್ಕೆ ಹಾಜರಾಗಲು ನಿರ್ಧಾರಿಸಲಾಗಿದೆ.
ಜೆಡಿಎಸ್ ಪಾಳಯದಲ್ಲೂ ಆತಂಕ ಮುಂದುವರಿದಿದ್ದು, ಶತಾಯಗತಾಯ ಕಾಂಗ್ರೆಸ್ ಬೆಂಬಲ ಪಡೆದು ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳಲೇಬೇಕೆಂದು ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರ ಮನವೊಲಿಸುವ ಪ್ರಯತ್ನಗಳೂ ನಡೆದಿತ್ತು. ಇದೀಗ ಜೆಡಿಎಸ್‌ಗೆ ಅಡ್ಡ ಮತದಾನದ ಭೀತಿ ಶುರುವಾಗಿದ್ದು, ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಲು ವರಿಷ್ಠರು ಮುಂದಾಗಿದ್ದಾರೆ.
ನವದೆಹಲಿ: ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ ಕಾವು ಜೋರಾಗುತ್ತಿದ್ದು, ಕಾಂಗ್ರೆಸ್‍ನ ಎರಡನೇ ಅಭ್ಯರ್ಥಿ ಹಿಂದೆ ಸರಿಸುವ ಪ್ರಯತ್ನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಹಿನ್ನಡೆಯಾಗಿದೆ. ಎರಡನೇ ಅಭ್ಯರ್ಥಿಯನ್ನು ಹಿಂದೆ ಸರಿಸುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ.
ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕಾಗಿ ಮೂರು ಪಕ್ಷಗಳ ನಡುವೆ ಬಾರಿ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸದರೆ, ಜೆಡಿಎಸ್‍ನ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡದ ಮೇರೆಗೆ ಹೈಕಮಾಂಡ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿತ್ತು. ಇದನ್ನೂ ಓದಿ: ಉಪಚುನಾವಣೆ: ಉತ್ತರಾಖಂಡ್ ಸಿಎಂಗೆ ಧಾಮಿಗೆ ಭರ್ಜರಿ ಗೆಲುವು
ಮನ್ಸೂರ್ ಅಲಿ ಖಾನ್ ಸ್ಪರ್ಧೆಯಿಂದ ತನ್ನ ಪಾಲಿಗೆ ಬರಬಹುದಾದ ಒಂದು ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಜೆಡಿಎಸ್ ಇದ್ದು, ಈ ಹಿನ್ನೆಲೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಜೊತೆಗೆ ಹೆಚ್.ಡಿ ದೇವೇಗೌಡ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ಇತ್ತ ದೆಹಲಿಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೂಲಕ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಬೆಂಬಲಕ್ಕೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿರುವ ಸೋನಿಯಾಗಾಂಧಿ ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ, ಸ್ಥಳೀಯ ನಾಯಕರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಏನೇ ಮಾತುಕತೆ ಇದ್ದರೂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಉಸ್ತುವಾರಿ ರಣದೀಪ್ ಸುರ್ಜೆವಾಲ ಜೊತೆಗೆ ನಡೆಸಿ ಎಂದು ಸೋನಿಯಾಗಾಂಧಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಸೋನಿಯಾ ಗಾಂಧಿ ಬಳಿಕ ಪ್ರಿಯಾಂಕಾ ಗಾಂಧಿಗೂ ಕೊರೊನಾ
ಎರಡನೇ ಅಭ್ಯರ್ಥಿಯನ್ನು ಹಿಂದೆ ಪಡೆಯುವ ಪ್ರಶ್ನೆ ಇಲ್ಲ, ಜೆಡಿಎಸ್ ಜೊತೆಗೆ ಹೊಂದಾಣಿಕೆಯ ಮಾತೇ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲ ಎಂದಿದ್ದರು. ಆದರೆ ಹೆಚ್.ಡಿ ದೇವೇಗೌಡರು ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆಸುವ ಪ್ರಯತ್ನ ನಡೆಸಿದ್ದರು.
ಹೈಕಮಾಂಡ್‍ನ ಈ ನಿರ್ಧಾರದಿಂದ ಹೆಚ್.ಡಿ ದೇವೇಗೌಡರಿಗೆ ಭಾರೀ ಮುಖಭಂಗವಾಗಿದ್ದು, ಮಾಜಿ ಗುರು – ಶಿಷ್ಯರ ರಾಜಕೀಯ ಯುದ್ಧದಲ್ಲಿ ಶಿಷ್ಯ ಸಿದ್ದರಾಮಯ್ಯ ಗೆದ್ದು ಬೀಗುವಂತಾಗಿದೆ. ಜೂನ್ 10 ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಇಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ.
ಬೆಂಗಳೂರು: ರಾಜ್ಯಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಕಾಂಗ್ರೆಸ್ ನಾಯಕರನ್ನ ಮನವೊಲಿಸುವ ಕೆಲಸಕ್ಕೆ ಜೆಡಿಎಸ್ ಮುಂದಾಗಿದೆ. ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಜೆಡಿಎಸ್ ನಾಯಕರಿಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯರ ಸರ್ಕಾರಿ ನಿವಾಸದಲ್ಲಿ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯರಾದ ಫಾರೂಕ್ ಮತ್ತು ಶರವಣ ಅವರ ನಿಯೋಗ ಸಿದ್ದರಾಮಯ್ಯರೊಂದಿಗೆ ಚರ್ಚೆ ನಡೆಸಿತು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಜೆಡಿಎಸ್ ನಿಯೋಗ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿ, ಬೆಂಬಲ ಕೇಳಿದೆ. ಇದನ್ನೂ ಓದಿ: ನಕಲಿ ಗಾಂಧಿಗಳ ನಾಯಕತ್ವಕ್ಕೆ ಕಾಂಗ್ರೆಸ್ ಕಾರ್ಯಕರ್ತರೇ ಬೇಸತ್ತಿದ್ದಾರೆ – ಎಚ್ಚರ ಡಿಕೆಶಿ ಎಚ್ಚರ: ಬಿಜೆಪಿ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶರವಣ, ಬಿಜೆಪಿ ಗೆಲ್ಲಬಾರದೆಂಬುದು ಎರಡೂ ಪಕ್ಷಗಳ ಆಶಯ. ಬಿಜೆಪಿ ವಿರುದ್ಧ ಜಾತ್ಯಾತೀತ ಪಕ್ಷಗಳು ಒಂದಾಗಬೇಕು. ಹೀಗಾಗಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಕೊಡಿ ಅಂತ ಮನವಿ ಮಾಡಿದ್ದೇವೆ. ಕಾಂಗ್ರೆಸ್‌ಗಿಂತ ಜೆಡಿಎಸ್ ಬಳಿ ಹೆಚ್ಚು ಸ್ಥಾನಗಳಿವೆ. ಹಾಗಾಗಿ ನಮಗೆ ಬೆಂಬಲ ಕೊಡುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಸವಣ್ಣನ ಪಠ್ಯವನ್ನೇ ತಿರುಚಲಾಗಿದೆ: ಲಿಂಗಾಯತ ಸ್ವಾಮೀಜಿಗಳು ಅಸಮಾಧಾನ
ಇತ್ತ ಜೆಡಿಎಸ್ ನಿಯೋಗಕ್ಕೂ ಸಿದ್ದರಾಮಯ್ಯ ಸ್ಪಷ್ಟ ಭರವಸೆ ನೀಡಿಲ್ಲ ಅಂತ ಮೂಲಗಳು ಹೇಳ್ತಿವೆ. ಬೆಂಬಲ ನೀಡುವ ಬಗ್ಗೆ ಬಗ್ಗೆ ಸಿದ್ದರಾಮಯ್ಯ ಯಾವುದೇ ಭರವಸೆಯನ್ನೂ ನೀಡಿಲ್ಲ. ಶಾಸಕರ ಜೊತೆ ಚರ್ಚೆ ಮಾಡುತ್ತೇನೆ ಅಂತ ಹೇಳಿ ಕಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.