Tag: Rajveer Singh Diler

  • ಹತ್ರಾಸ್ ಆರೋಪಿಗಳಿರೋ ಜೈಲಿಗೆ ಬಿಜೆಪಿ ಸಂಸದ ಭೇಟಿ

    ಹತ್ರಾಸ್ ಆರೋಪಿಗಳಿರೋ ಜೈಲಿಗೆ ಬಿಜೆಪಿ ಸಂಸದ ಭೇಟಿ

    ಲಕ್ನೋ: ಹತ್ರಾಸ್ ಗ್ಯಾಂಗ್‍ರೇಪ್ ಪ್ರಕರಣದ ಆರೋಪಿಗಳನ್ನು ಇರಿಸಲಾಗಿರುವ ಜೈಲಿಗೆ ಸ್ಥಳೀಯ ಬಿಜೆಪಿ ಸಂಸದ ರಾಜವೀರ್ ಸಿಂಗ್ ದಿಲೇರ್ ಭೇಟಿ ನೀಡಿರೋದು ಚರ್ಚೆಗೆ ಕಾರಣವಾಗಿದೆ.

    ಹತ್ರಾಸ್ ಆರೋಪಿಗಳನ್ನು ಭೇಟಿಯಾಗಲು ಸಂಸದರು ಜೈಲಿಗೆ ಹೋಗಿದ್ದರು. ಆದ್ರೆ ಜೈಲಿನ ಅಧಿಕಾರಿಗಳು ಅರೋಪಿಗಳ ಭೇಟಿಗೆ ಅವಕಾಶ ನೀಡಲಿಲ್ಲ. ಹಾಗಾಗಿ ಸಂಸದರು ವಾಪಸ್ ಆಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ರಾಜವೀರ್ ಸಿಂಗ್ ಜೈಲಿನಿಂದ ಹೊರ ಬರುವ ಫೋಟೋಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜವೀರ್ ಸಿಂಗ್, ನಾನು ಯಾವುದೇ ಖೈದಿಗಳನ್ನು ಭೇಟಿಯಾಗಲು ಜೈಲಿಗೆ ಹೋಗಿರಲಿಲ್ಲ. ಕ್ಷೇತ್ರದ ಕೆಲಸದ ನಿಮಿತ್ ಎಸ್‍ಎಸ್‍ಪಿ ಅವರನ್ನು ಭೇಟಿಯಾಗಲು ತೆರಳಿದ್ದೆ. ಆದ್ರೆ ಎಸ್‍ಎಸ್‍ಪಿ ಕೊರೊನಾ ಸೋಂಕಿಗೆ ಒಳಗಾಗಿರುವ ವಿಷಯ ತಿಳಿಯಿತು. ಹಿಂದಿರುಗಿ ಬರುವಾಗ ಜೈಲಿನ ಬಳಿ ನಿಂತಿದ್ದ ಕೆಲವರು ಜೊತೆ ಮಾತನಾಡುತ್ತಾ ನಿಂತಿದ್ದೆ ಎಂದರು.

    ಇದೇ ವೇಳೆ ನನ್ನ ಬಳಿ ಬಂದ ಜೈಲರ್ ಟೀ ಕುಡಿಯಲು ಆಹ್ವಾನಿಸಿದ್ದರಿಂದ ಜೈಲಿನ ಒಳಗೆ ಹೋದೆ. ಜೈಲಾಧಿಕಾರಿಗಳ ಜೊತೆ ಓರ್ವ ಬಂಧಿತನ ಬಗ್ಗೆ ಮಾತನಾಡಿದ್ದೆ. ಆತ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಶಿಫಾರಸ್ಸು ಬಗ್ಗೆ ಚರ್ಚಿಸಲಾಯ್ತು. ಅದರ ಹೊರತಾಗಿ ಹತ್ರಾಸ್ ಪ್ರಕರಣದ ಆರೋಪಿಗಳ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ನನ್ನ ಭೇಟಿಯನ್ನ ತಪ್ಪಾಗಿ ಅರ್ಥೈಸೋದು ಬೇಡ ಎಂದು ಹೇಳಿದರು.

    ದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಹತ್ರಾಸ್‌ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು ಉದ್ದೇಶಪೂರ್ವಕವಾಗಿ  ಹೆಸರು ಕೆಡಿಸಲು ಮಾಡಿದ ಹುನ್ನಾರ ಎಂದು ಆರೋಪಿಸಿ ರಾಜ್ಯ ಸರ್ಕಾರ  ಅನಾಮಧೇಯ ವ್ಯಕ್ತಿಗಳ ವಿರುದ್ಧ ಕೇಸ್‌ ದಾಖಲಿಸಿದೆ.
    ಉತ್ತರ ಪ್ರದೇಶ ಪೊಲೀಸರು ಈಗ ಅನಾಮಧೇಯ ವ್ಯಕ್ತಿಗಳ ವಿರುದ್ಧ 120 ಬಿ(ಕ್ರಿಮಿನಲ್‌ ಪಿತೂರಿ),153 ಎ(ಎರಡು ಗುಂಪುಗಳ ಮೇಲೆ ವೈಷಮ್ಯಕ್ಕೆ ಪ್ರಚೋದನೆ),  153 ಬಿ(ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ), 195( ಸುಳ್ಳು ಸಾಕ್ಷ್ಯ ಸೃಷ್ಟಿ), 195 ಎ( ಸುಳ್ಳು ಸಾಕ್ಷ್ಯ ನೀಡುವಂತೆ ಬೆದರಿಕೆ), 465(ಸುಳ್ಳು ಸ್ಪಷ್ಟನೆ) 468( ವಂಚಿಸುವ ಉದ್ದೇಶಕ್ಕಾಗಿ ಸುಳ್ಳು ಸ್ಪಷ್ಟನೆ), 469(ಉದ್ದೇಶಪೂರ್ವಕಾಗಗಿ ಖ್ಯಾತಿಗೆ ಕುಂದು ತರಲು ಸುಳ್ಳು ಸ್ಪಷ್ಟನೆ), 501(ಮಾನಹಾನಿಕವೆಂದು ತಿಳಿದಿರುವ ವಿಷಯವನ್ನು ಮುದ್ರಿಸುವುದು) 505 (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆಗಳು) 505 ಬಿ(ವರ್ಗಗಳ ನಡುವೆ ವೈರ ದ್ವೇಷ ಅಥವಾ ವೈಮಸ್ಸು ಉಂಟುಮಾಡುವ ಹೇಳಿಕೆ) ಜೊತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 67ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಕೆಲವೇ ಕ್ಷಣಗಳಲ್ಲಿ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಲು ಕಾರಣವಾಗಿದ್ದು  justiceforhathrasvictim.carrd.co ಹೆಸರಿನ ವೆಬ್‌ಸೈಟ್‌ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಈ ಪ್ರಕರಣದ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದು ಮಾತ್ರವಲ್ಲದೇ ದೇಶವ್ಯಾಪಿ ಪ್ರತಿಭಟನೆ ನಡೆಸಲು ಪ್ರೇರೇಪಣೆ ನೀಡಿತ್ತು ಎಂಬ ಗಂಭೀರ ಆರೋಪ ಈ ವೆಬ್‌ಸೈಟ್‌ ಮೇಲೆ ಬಂದಿದೆ.  ಈ ವೆಬ್‌ಸೈಟಿನ ಮೂಲವನ್ನು ಪತ್ತೆ ಹಚ್ಚಲು ಮುಂದಾಗುತ್ತಿದ್ದಂತೆ justiceforhathrasvictim.carrd.co ವೆಬ್‌ಸೈಟ್‌ ಕಾರ್ಯನಿರ್ವಹಿಸುವುದನ್ನು ಈಗ ನಿಲ್ಲಿಸಿದೆ.