Tag: Raju Gowda

  • ಯಾರಿಗೂ ಪ್ರೈವಸಿ ಇಲ್ಲ, ಹೆಂಡತಿ ಜೊತೆ ಮಾತಾಡ್ಬೇಕಾದ್ರೂ ಎಚ್ಚರಿಕೆಯಿಂದಿರಬೇಕು: ರಾಜುಗೌಡ

    ಯಾರಿಗೂ ಪ್ರೈವಸಿ ಇಲ್ಲ, ಹೆಂಡತಿ ಜೊತೆ ಮಾತಾಡ್ಬೇಕಾದ್ರೂ ಎಚ್ಚರಿಕೆಯಿಂದಿರಬೇಕು: ರಾಜುಗೌಡ

    – ಜನಪ್ರಿಯತೆಗೆ ಎಲ್ಲಿ, ಏನು ಬೇಕಾದ್ರೂ ರೆಕಾರ್ಡ್ ಮಾಡಿ ಲೀಕ್ ಮಾಡ್ತಾರೆ

    ಯಾದಗಿರಿ: ವಾಟ್ಸಪ್, ಫೇಸ್‌ಬುಕ್ ಬಂದಮೇಲೆ ಯಾರಿಗೂ ಪ್ರೈವಸಿ ಇಲ್ಲ. ಹೆಂಡತಿ ಜೊತೆ ಮಾತನಾಡಬೇಕಾದರೂ ಎಚ್ಚರಿಕೆಯಿಂದ ಮಾತನಾಡಬೇಕಾದ ಪರಿಸ್ಥಿತಿ ಇದೆ. ನಮ್ಮವರೇ ಆಡಿಯೋ ರಿಲೀಸ್ ಮಾಡಿದ್ದಾರೆ ಎಂದು ಬಿಎಸ್‌ವೈ ಆಡಿಯೋ ಪ್ರಕರಣದ ಬಗ್ಗೆ ಸುರಪುರ ಬಿಜೆಪಿ ಶಾಸಕ ರಾಜುಗೌಡ ಪ್ರತಿಕ್ರಿಯಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ರಾಜುಗೌಡ ಸಿಎಂ ಯಡಿಯೂರಪ್ಪ ಆಡಿಯೋ ಪ್ರಕರಣದ ಬಗ್ಗೆ ಪ್ರತಿಕ್ರಿಸಿದರು. ಈಗ ಹೆಂಡತಿ ಜೊತೆ ಮಾತನಾಡುವಾಗಲು ಎಚ್ಚರಿಕೆಯಿಂದ ಇರಬೇಕಾಗಿದೆ. ವಾಟ್ಸಪ್, ಫೇಸ್‌ಬುಕ್ ಬಂದಮೇಲೆ ಯಾರಿಗೂ ಪ್ರೈವಸಿ ಇಲ್ಲ. ಹಾಗೆಯೇ ರಾಜಕೀಯ ಪಕ್ಷದ ನಾಯಕರಿಗೆ ಅವರ ಮನದಾಳದ ಮಾತು ಹೇಳಲು ಪ್ರೈವಸಿ ಇಲ್ಲ. ಸ್ವಲ್ಪ ಜನಪ್ರಿಯತೆ ಗಳಿಸಲು ಎಲ್ಲಿಬೇಕಾದರೂ, ಏನು ಬೇಕಾದರೂ ರೆಕಾರ್ಡ್ ಮಾಡಿ ಲೀಕ್ ಮಾಡುತ್ತಾರೆ. ಬಿಜೆಪಿ ಅವರು ಮಾತ್ರ ಸಭೆಯಲ್ಲಿದ್ದಿದ್ದು, ಹೀಗಾಗಿ ನಮ್ಮವರೇ ಯಾರೋ ಬಿಎಸ್‌ವೈ ಆಡಿಯೋ ಲೀಕ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:ಮಧ್ಯರಾತ್ರಿ ಯುವಕರೊಂದಿಗೆ ಕಬಡ್ಡಿ ಆಡಿದ ಬಿಜೆಪಿ ಶಾಸಕ ರಾಜುಗೌಡ

    ಮೈತ್ರಿ ಸರ್ಕಾರದ ಅವಧಿಯಲ್ಲಿ ಪ್ರಸನ್ನಾನಂದಪುರಿ ಸ್ವಾಮಿಜಿ ಫೋನ್ ಕದ್ದಾಲಿಕೆ ನಡೆದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಭಯೋತ್ಪಾದಕರು, ನಕ್ಸಲರ ಫೋನ್ ಟ್ಯಾಪ್ ಮಾಡಬೇಕು. ಆದರೆ ಎಚ್‌ಡಿಕೆ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿದ್ದಾರೆ. ರಾಜಕೀಯ, ಸ್ವಾರ್ಥಕ್ಕಾಗಿ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು.

    ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಸಿಬಿಐ ತನೆಖೆಯಿಂದ ಸತ್ಯ ಬೆಳಕಿಗೆ ಬರುತ್ತದೆ. ಕುಮಾರಸ್ವಾಮಿ ಅವರು ತಮ್ಮ ಸಮುದಾಯದ ಗುರುಗಳ ಫೋನನ್ನೇ ಕದ್ದಾಲಿಕೆ ಮಾಡಿದ್ದಾರೆ. ಇನ್ನು ಬೇರೆ ಸಮುದಾಯದ ಸ್ವಾಮಿಗಳ ಫೋನ್ ಟ್ಯಾಪ್ ಮಾಡದೆ ಇರುತ್ತಾರಾ ಎಂದು ಪ್ರಶ್ನೆ ಹಾಕಿದ್ದಾರೆ. ಹಾಗೆಯೇ ಕುಮಾರಸ್ವಾಮಿ ರಾಜಕೀಯ ಮಾಡಲಿ, ಆದರೆ ಕದ್ದಾಲಿಕೆ ಮಾಡಿದ್ದು ಸರಿಯಲ್ಲ. ಫೋನ್ ಕದ್ದಾಲಿಕೆ ಮಾಡಿದರೂ ಕುಮಾರಸ್ವಾಮಿ ಸರ್ಕಾರ ಉಳಿಯಲಿಲ್ಲ. ಅವರು ಜನರ ಹೃದಯ, ಶಾಸಕರ ಹೃದಯ ಗೆದ್ದಿದ್ದರೆ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ. ಫೋನ್ ಟ್ಯಾಪ್ ಮಾಡುವ ಬದಲು ಜನರ ಸಮಸ್ಯೆಗಳನ್ನ ಟ್ಯಾಪ್ ಮಾಡಬೇಕಿತ್ತು ಎಂದು ಕಾಲೆಳೆದಿದರು.

  • ನೋಬಾಲ್‍ಗೆ ರನೌಟ್ ಆಗಿದ್ದೇ ಬೇಜಾರು- ರಾಜು ಗೌಡ

    ನೋಬಾಲ್‍ಗೆ ರನೌಟ್ ಆಗಿದ್ದೇ ಬೇಜಾರು- ರಾಜು ಗೌಡ

    ಬೆಂಗಳೂರು: ಮೂರು ವಾರಗಳ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಅರ್ಧ ಸಚಿವ ಸಂಪುಟ ರಚನೆಯಾಗಿದೆ. ಈ ಬೆನ್ನಲ್ಲೇ ಹಲವರು ತಮ್ಮ ಅಸಮಾಧಾನ ಹೊರಹಾಕಿದ್ದು ಶಾಸಕ ರಾಜು ಗೌಡ ಕೂಡ ಕೊನೆ ಗಳಿಗೆಯಲ್ಲಿ ನೋಬಾಲ್ ಗೆ ರನೌಟ್ ಆಗಿದ್ದೇ ಬೇಜಾರು ಎಂದು ಹೇಳಿದ್ದಾರೆ.

    ಮುಖ್ಯಮಂತ್ರಿಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಅದು ಕೈ ತಪ್ಪಿದೆ. ಹೀಗಾಗಿ ನೋಬಾಲ್ ಗೆ ರನೌಟ್ ಆಗಿರುವುದು ನನಗೆ ಬೇಜಾರಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

    ಬಹಳಷ್ಟು ಜನ ನನಗೆ ಮಂತ್ರಿ ಸ್ಥಾನ ಸಿಗಲಿ ಎಂದು ಸಹಕರಿಸಿದರು. ಅವರೆಲ್ಲರೂ ಆಸೆ ಪಟ್ಟಿದ್ದರು. ಆದರೆ ನಾನು ಸಚಿವನಾಗಲಿಲ್ಲ. ಇದರಿಂದೇನೂ ಸಮಸ್ಯೆ ಆಗಲ್ಲ. ಯಾರು ನಮಗೆ ಅಡ್ಡ ಬಂದಿದ್ದಾರೋ ಅವರ ಜೊತೆಗೆ ಎಲ್ಲರಿಗೂ ಒಳ್ಳೆಯದಾಗಲಿ. ಯಾರಿಗೂ ಕೆಟ್ಟದು ಬಯಸಲ್ಲ ಎಂದರು.

    ನಾನು ಕ್ರೀಡಾಪಟುವಾಗಿದ್ದು, ಹೀಗಾಗಿ ಆಟದಲ್ಲಿ ಸೋಲು-ಗೆಲುವು ಅನುಭವಿಸಿದ್ದೇನೆ. ಆದರೆ ಕ್ರಿಕೆಟ್ ಆಡುವಾಗ ನೋಬಾಲ್ ಗೆ ರನೌಟ್ ಆಗಿದ್ದೇನೆ ಅಂತಷ್ಟೇ ಬೇಜಾರು ಬಿಟ್ಟರೆ ಬೇರಾವುದೂ ಇಲ್ಲ. ಪರವಾಗಿಲ್ಲ ಇನ್ನೊಂದು ಮ್ಯಾಚ್ ಆಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.

  • ಬಿಜೆಪಿಯಿಂದ ವಿಪರೀತ ಒತ್ತಡ ಬಂದಿದೆ: ಕೈ ಶಾಸಕ ರಾಜುಗೌಡ

    ಬಿಜೆಪಿಯಿಂದ ವಿಪರೀತ ಒತ್ತಡ ಬಂದಿದೆ: ಕೈ ಶಾಸಕ ರಾಜುಗೌಡ

    ಮಂಗಳೂರು: ಬಿಜೆಪಿಯಿಂದ ನನಗೆ ವಿಪರೀತ ಒತ್ತಡ ಬಂದಿದೆ ಎಂದು ಶೃಂಗೇರಿ ಕಾಂಗ್ರೆಸ್ ಶಾಸಕ ರಾಜು ಗೌಡ ಆಪರೇಶನ್ ಕಮಲದ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ.

    ಶಾಸಕ ರಾಜು ಗೌಡ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ದೂರವಾಣಿ ಮೂಲಕ ರಾಜು ಗೌಡ ಅವರನ್ನು ಸಂಪರ್ಕಿಸಿದ್ದಾರೆ.

    ಈ ಬಗ್ಗೆ ರಾಜು ಗೌಡ ಮಾತನಾಡಿ, ರಾಜಕಾರಣದಲ್ಲಿ ಹಣ, ಅಧಿಕಾರ ಮುಖ್ಯ ಅಲ್ಲ. ಜನರಿಗೆ ಸೇವೆ ಮಾಡುವುದು ಮುಖ್ಯ. ನಾವು ಸೇವೆ ಮಾಡುವ ದೃಷ್ಟಿಯಿಂದ ರಾಜಕಾರಣಕ್ಕೆ ಬಂದಿದ್ದೇವೆ ಹೊರತು ಹಣ, ಅಧಿಕಾರಕ್ಕೆ ಬಂದಿಲ್ಲ. ಒಂದು ಪಕ್ಷದಲ್ಲಿ ನಾವು ಗೆದ್ದ ಮೇಲೆ ಆ ಪಕ್ಷದ ಋಣ ತೀರಿಸಬೇಕಿರುವುದು ನಮ್ಮ ಕರ್ತವ್ಯ. ಏಕೆಂದರೆ ನಮ್ಮನ್ನು ನಂಬಿ ಟಿಕೆಟ್ ನೀಡುತ್ತಾರೆ. ಟಿಕೆಟ್ ನೀಡಬೇಕು ಎಂದರೆ ಅವರಿಗೆ ಒತ್ತಡ ಇರುತ್ತದೆ. ಬಹಳಷ್ಟು ಆಕಾಂಕ್ಷಿಗಳು ಇರುತ್ತಾರೆ. ಅಂತಹದರಲ್ಲಿ ಅವರು ನಮ್ಮನ್ನು ಆಯ್ಕೆ ಮಾಡಿ ಟಿಕೆಟ್ ನೀಡುತ್ತಾರೆ.

    ನಾನು ಮೊದಲ ಬಾರಿಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆಗೆ ಹೋಗಿದ್ದೇನೆ. ನನ್ನನ್ನು ಮಲೆನಾಡ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿಯೂ ಮಾಡಿದ್ದಾರೆ. ನಾನು ಅಲ್ಲಿಯೂ ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಸಿಎಂ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಡಿಸಿಎಂ ಎಲ್ಲರೂ ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡಿದ್ದಾರೆ. ಶಾಸಕರು ಚರ್ಚೆ ಮಾಡಿ ತೀರ್ಮಾನ ಮಾಡಬಹುದಿತ್ತು. ಆದರೆ ಅದನ್ನು ಬಿಟ್ಟು ಏಕಾಏಕಿಯಾಗಿ ರಾಜೀನಾಮೆ ನೀಡಿ ಸರ್ಕಾರವನ್ನು ಅಭದ್ರಗೊಳಿಸುವುದು ಪ್ರಜಾಪ್ರಭ್ವುತ ವ್ಯವಸ್ಥೆಯಲ್ಲಿ ಇದು ಸರಿಯಲ್ಲ ಎಂದರು.

    ನನಗೂ ಎಲ್ಲರಿಂದಲೂ ಸಾಕಷ್ಟು ಒತ್ತಡ ಬಂದಿದೆ. ನಾನು ಅವರ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ. ನನಗೆ ತಡೆಯೋಕ್ಕಾಗದಷ್ಟು ಒತ್ತಡ ನೀಡಿ ಆಮೀಷವೊಡ್ಡಿದ್ದರು. ಆದರು ಕೂಡ ನಾನು ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿದ್ದೇನೆ. ನಮ್ಮ ಹೈಕಮಾಂಡ್ ಸೋನಿಯಾ ಗಾಂಧಿ ಅವರು ತ್ಯಾಗಿಮಯಿ. ಏಕೆಂದರೆ ಅವರಿಗೆ ಪ್ರಧಾನಿ ಆಗುವ ಅವಕಾಶ ಇತ್ತು. ಅವರು ಆರಾಮಾಗಿ ಪ್ರಧಾನಿ ಆಗಬಹುದಿತ್ತು. ಆ ಸಮಯದಲ್ಲಿ ವಿದೇಶಿ ಎಂದು ಹೇಳಿದ್ದ ಕಾರಣ ಸೋನಿಯಾ ತಮ್ಮ ಹುದ್ದೆಯನ್ನು ತ್ಯಾಗ ಮಾಡಿದ್ದರು. ಆಗ ಅವರು ಮನ್‍ಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡಿದ್ದರು ಎಂದು ರಾಜು ಗೌಡ ತಿಳಿಸಿದರು.

  • ಸತೀಶ್ ಜಾರಕಿಹೊಳಿ ಇಲ್ಲವೆ ಶ್ರೀರಾಮುಲು ಸಿಎಂ ಆಗ್ಲೇಬೇಕು: ಬಿಜೆಪಿ ಶಾಸಕ ರಾಜುಗೌಡ

    ಸತೀಶ್ ಜಾರಕಿಹೊಳಿ ಇಲ್ಲವೆ ಶ್ರೀರಾಮುಲು ಸಿಎಂ ಆಗ್ಲೇಬೇಕು: ಬಿಜೆಪಿ ಶಾಸಕ ರಾಜುಗೌಡ

    ದಾವಣಗೆರೆ: ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಇಲ್ಲವೇ ಶಾಸಕ ಶ್ರೀರಾಮುಲು ಅವರು ಮುಖ್ಯಮಂತ್ರಿ ಆಗಲೆಬೇಕು ಎಂದು ಬಿಜೆಪಿ ಶಾಸಕ ರಾಜುಗೌಡ ಒತ್ತಾಯಿಸಿದ್ದಾರೆ.

    ಜಿಲ್ಲೆಯ ಹರಿಹರ ತಾಲೂಕಿನ ಸಮೀಪದ ವಾಲ್ಮೀಕಿ ಮಠದಲ್ಲಿ ನಡೆದ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜದ ಕೂಗು ವಿಧಾನಸೌಧಕ್ಕೆ ತಲುಪುತ್ತಿಲ್ಲ. 17 ಜನ ಶಾಸಕರು, ಇಬ್ಬರು ಸಂಸದರು ಇದ್ದರೂ ಕೂಗು ಕೇಳುತ್ತಿಲ್ಲ. ಸಮಾಜದಿಂದ ಸಚಿವ ಸತೀಶ್ ಜಾರಕಿಹೊಳಿ ಇಲ್ಲವೇ ಶ್ರೀರಾಮುಲು ಮುಖ್ಯಮಂತ್ರಿ ಆಗಲೆಬೇಕು ಅಂತ ವಾಲ್ಮೀಕಿ ಶ್ರೀಗಳು ಆಶೀರ್ವಾದ ಮಾಡಿದ್ದಾರೆ ಎಂದು ಶಾಸಕರು ಹೇಳಿದರು.

    ಕುರುಬರ ಕೈಯಿಂದ ಬೋಣಿಗೆಯಾದರೆ ಒಳ್ಳೆಯದು ಎನ್ನುತ್ತಾರೆ. ಸತೀಶ್ ಜಾರಕಿಹೊಳಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಆಶೀರ್ವಾದವಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಸಿಗಲಿದೆ. ನಿಮ್ಮ ಇಬ್ಬರಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಸಮಾಜಕ್ಕೆ 7.1 ಮಿಸಲಾತಿ ಮಾಡಲೇಬೇಕು ಎಂದು ಸತೀಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಅವರನ್ನು ಕೇಳಿಕೊಂಡರು.

    ಆಪರೇಷನ್ ಕಮಲದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ಯಾವುದೇ ಆಪರೇಷನ್ ನಡೆಯುತ್ತಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಅವರಿಗೆ ವೈಯಕ್ತಿಕ ಸಮಸ್ಯೆ ಇದೆ. ಅವರಿಗೆ ಕಾಂಗ್ರೆಸ್‍ನಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಅವರು ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಂಡೇ ಹೊರ ಬರುತ್ತಿದ್ದಾರೆ ಎಂದು ಹೇಳಿದರು.

    ಆಡಿಯೋ ಪ್ರಕರಣ ಆರೋಪವನ್ನು ಸಾಬೀತು ಮಾಡಿ ಅಂತ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿದ್ದಾರೆ. ಎಸಿಬಿ, ಸಿಬಿಐ ಮೈತ್ರಿ ಸರ್ಕಾರದ ಕೈಯಲ್ಲಿದೆ. ತನಿಖೆ ನಡೆಸಿ ಆರೋಪ ಸಾಬೀತು ಮಾಡಿದರೆ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಲಿ ಎಂದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಪಕ್ಷದ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಅಸಮಾಧಾನದಿಂದ ಬಾಂಬೆ ಟಿಕೆಟ್ ತೆಗೆಸಿದರೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎನ್ನುವುದು ಕಾಂಗ್ರೆಸ್ ಶಾಸಕರ ತಂತ್ರ ಎಂದು ಪರೋಕ್ಷವಾಗಿ ಡಾ.ಸುಧಾಕರ್ ಅವರಿಗೆ ಟಾಂಗ್ ಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆಲಿಕಾಪ್ಟರ್ ಗೌಡ, ಯುಕೆ ಟ್ವೆಂಟಿಸೆವನ್ ಎಂದು ಶಾಸಕರನ್ನು ಕರೆದ ಸ್ಪೀಕರ್

    ಹೆಲಿಕಾಪ್ಟರ್ ಗೌಡ, ಯುಕೆ ಟ್ವೆಂಟಿಸೆವನ್ ಎಂದು ಶಾಸಕರನ್ನು ಕರೆದ ಸ್ಪೀಕರ್

    ಬೆಳಗಾವಿ: ಬಿಜೆಪಿ ಶಾಸಕ ರಾಜುಗೌಡ ಹಾಗೂ ಮಾಜಿ ಸಚಿವ ಉಮೇಶ್ ಕತ್ತಿ ಅವರನ್ನು ವಿಶೇಷ ಹೆಸರಿನ ಮೂಲಕ ಕರೆದು ಅಧಿವೇಶನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ನಗೆ ಹರಿಸಿದ್ದಾರೆ.

    ಅಧಿವೇಶನದಲ್ಲಿ ಇಂದು ಬೆಳಗ್ಗೆ ಆರಂಭವಾಗಿದ್ದ ಪ್ರಶ್ನೋತ್ತರ ಕಲಾಪದ ವೇಳೆ ಒಬ್ಬೊಬ್ಬ ಶಾಸಕರ ಪ್ರಶ್ನೆಗಳನ್ನು ಆಲಿಸಿ ಸಂಬಂಧಪಟ್ಟ ಸಚಿವರಿಂದ ಸ್ಪೀಕರ್ ಉತ್ತರ ಕೊಡಿಸುತ್ತಿದ್ದರು. ಈ ವೇಳೆ ಬಿಜೆಪಿ ಶಾಸಕ ರಾಜೂ ಗೌಡ ಅವರನ್ನು ಹೆಲಿಕಾಪ್ಟರ್ ಗೌಡ ಎಂದು ಸ್ಪೀಕರ್ ಕರೆದರು. ನಗುತ್ತಲೇ ರಾಜೂ ಗೌಡ ಎದ್ದು ನಿಂತು ಮಾತನಾಡುತ್ತಿದ್ದಾಗ ಹೆಲಿಕಾಪ್ಟರ್ ಬಂತಾ ಎಂದು ಮತ್ತೊಮ್ಮೆ ಕೇಳಿದ ಸಭೆಯಲ್ಲಿ ಎಲ್ಲರ ಮುಖದಲ್ಲಿಯೂ ನಗೆ ಬೀರಿದರು.

    ಯುಕೆ ಟ್ವೆಂಟಿಸೆವೆನ್ ಅವರು ತಮ್ಮ ಪ್ರಶ್ನೆ ಕೇಳಬಹುದು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳುತ್ತಿದ್ದಂತೆ ಯಾರನ್ನು ಉದ್ದೇಶಿಸಿ ಕರೆದಿದ್ದಾರೆ ಎನ್ನುವ ಬಗ್ಗೆ ಸ್ವಲ್ಪಹೊತ್ತು ಗೊಂದಲ ಉಂಟಾಗಿತ್ತು. ರೀ ನಾನು ಕರೆದಿದ್ದು, ಆತ್ಮೀಯ ಹಾಗೂ ಸಹೋದ್ಯೋಗಿಯಾದ ಮಾಜಿ ಸಚಿವ ಉಮೇಶ್ ಕತ್ತಿ ಅವರನ್ನು ಅಂತ ಹೇಳಿದರು. ಹಾಗೇ ಹೇಳುತ್ತಿದ್ದಂತೆ ಸದನದಲ್ಲಿದ್ದ ಎಲ್ಲರೂ ನಕ್ಕುಬಿಟ್ಟರು.

    ಈಗಾಗಲೇ ನನ್ನ ಪ್ರಶ್ನೆ ಉತ್ತರ ಕೊಟ್ಟಿದ್ದಾರೆ ಎಂದು ಉಮೇಶ್ ಕತ್ತಿ ಅವರು ಹೇಳುತ್ತಿದ್ದಂತೆ, ಬಹಳ ಚೆನ್ನಾಗಿದೆಯಂತೆ ಟ್ವೆಂಟಿಸೆವನ್ ಎಂದು ಹೇಳಿ ಮತ್ತೊಮ್ಮೆ ಸ್ಪೀಕರ್ ಕಾಲೆಳೆದರು. ನಮ್ಮ ಭಾಗದ ಕಾಲೇಜುಗಳ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಉಮೇಶ್ ಕತ್ತಿ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್ ಅವರು, ರೀ ಕಾಲೇಜುಗಳನ್ನು ಎಲ್ಲದ್ರೂ ಶುಗರ್ ಫ್ಯಾಕ್ಟರಿಯಲ್ಲಿ ತೆರೆದು ಬಿಟ್ಟೀರಾ ಎಂದು ಚಟಾಕಿ ಹಾರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv