Tag: Rajostava

  • ಸಿಎಂಗೆ ಕೆಟ್ಟ ಬುದ್ಧಿ, ಹುಚ್ಚು ಬುದ್ಧಿ ಹೆಚ್ಚಾಗಿದ್ದು, ಅವರ ತಲೆಯಲ್ಲಿ ಮತಾಂಧತೆಯ ಭೂತ ಮೆಟ್ಟಿಕೊಂಡಿದೆ: ಸಿ.ಟಿ ರವಿ

    ಸಿಎಂಗೆ ಕೆಟ್ಟ ಬುದ್ಧಿ, ಹುಚ್ಚು ಬುದ್ಧಿ ಹೆಚ್ಚಾಗಿದ್ದು, ಅವರ ತಲೆಯಲ್ಲಿ ಮತಾಂಧತೆಯ ಭೂತ ಮೆಟ್ಟಿಕೊಂಡಿದೆ: ಸಿ.ಟಿ ರವಿ

    ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆಟ್ಟ ಬುದ್ಧಿ, ಹುಚ್ಚು ಬುದ್ಧಿ ಹೆಚ್ಚಾಗಿದ್ದು, ಅವರ ತಲೆಯಲ್ಲಿ ಮತಾಂಧತೆಯ ಭೂತ ಮೆಟ್ಟಿಕೊಂಡಿದೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.

    ರಾಜ್ಯದ ಜನತೆಯ ವಿರೋಧದ ನಡುವೆಯೂ ಓಟ್ ಬ್ಯಾಂಕ್ ನಿರ್ಮಿಸಿಕೊಳ್ಳಲು ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದಾರೆ. ಆದರೆ, ಸಿಎಂ ಕಣ್ಣಿಗೆ ಟಿಪ್ಪು ಸುಲ್ತಾನ್ ಹೇಗೆ ದೇಶಭಕ್ತನಾಗಿ ಕಾಣುತ್ತಾನೆ ಎಂದು ಪ್ರಶ್ನಿಸಿದ್ದಾರೆ.

    ಟಿಪ್ಪು ಜಯಂತಿ ಆಚರಣೆ ವಿರುದ್ಧದ ಮೆರವಣಿಗೆಯ ಮುನ್ನ ಚಿಕ್ಕಮಗಳೂರಿನ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಮಾತನಾಡಿದ ಶಾಸಕ ಸಿ.ಟಿ. ರವಿ, ಸಿದ್ದರಾಮಯ್ಯನವರೇ, ನಿಮ್ಮ ಕಣ್ಣಿಗೆ ಟಿಪ್ಪು ಸುಲ್ತಾನ್ ಹೇಗೆ ದೇಶಭಕ್ತನಾಗಿ ಕಾಣುತ್ತಾನೆ, ಒಂದು ನಿಮಗೆ ಹುಚ್ಚಿಡಿದಿರಬೇಕು ಅಥವಾ ಮತಾಂಧತೆಯ ಭೂತ ಆವರಿಸಿಕೊಂಡಿರಬೇಕು ಎಂದು ಲೇವಡಿ ಮಾಡಿದ್ದಾರೆ.


    ಕನ್ನಡ ರಾಜ್ಯೋತ್ಸವ ನಡೆಯುವ ವೇಳೆ ಕನ್ನಡ ವಿರೋಧಿ ಟಿಪ್ಪು ಆಚರಣೆ ಮಾಡುತ್ತಿದ್ದೀರ. ನಿಮಗೆ ಹಿಡಿದಿರೋ ಹುಚ್ಚನ್ನ ಬಿಡಿಸಲು ರಾಜ್ಯದ ಜನ ಹೋರಾಟ ಮಾಡಿದರೂ ಕೂಡ ನಿಮಗೆ ಹುಚ್ಚು ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಟಿಪ್ಪು ಜಯಂತಿ ಆಚರಿಸುವ ಬದಲು ಸರ್ ಮಿರ್ಜಾ ಇಸ್ಮಾಯಿಲ್, ಸಂತ ಶಿಶುನಾಳ ಶರೀಫ್, ಎಲ್ಲಾ ಧರ್ಮ ಹಾಗೂ ಮಕ್ಕಳ ಮನದಲ್ಲಿರೋ ಅಬ್ದುಲ್ ಕಲಾಂ ಜಯಂತಿ ಮಾಡಿ ದೇಶದ ಯಾವೊಬ್ಬ ಪ್ರಜೆಯೂ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

    ವಿರೋಧದ ನಡುವೆಯೂ ರಾಜ್ಯ ಸರ್ಕಾರ ಟಿಪ್ಪು ಜಯಂತಿಗೆ ಆಚರಣೆಗೆ ಮುಂದಾಗಿದೆ. ಇದು, ಮೈಸೂರು ಅರಸರಿಗೆ, ಕೊಡವರು ಹಾಗೂ ಇತಿಹಾಸಕ್ಕೆ ಮಾಡುತ್ತಿರೋ ಅಪಮಾನ. ಗಲಭೆ ಸೃಷ್ಟಿಸಿ, ಅಲ್ಪಸಂಖ್ಯಾತರಿಗೆ ಭಯ ಹುಟ್ಟಿಸಿ ಓಟ್ ಬ್ಯಾಂಕ್ ನಿರ್ಮಾಣ ಮಾಡಿಕೊಳ್ಳಬೇಕೆಂಬುದು ಸರ್ಕಾರದ ಉದ್ದೇಶ. ಆದರೆ ಬಿಜೆಪಿ ಅಸ್ತಿತ್ವಕ್ಕೆ ಬರುವ ಮುನ್ನವೇ ಇತಿಹಾಸಕಾರರು ಟಿಪ್ಪುವಿನ ಕ್ರೌರ್ಯವನ್ನ ಸಾರಿ ಹೇಳಿದ್ದಾರೆ. ಆ ದಾಖಲೆಗಳೊಂದಿಗೆ ನಾವು ಬಹಿರಂಗ ಚರ್ಚೆಗೆ ಸಿದ್ಧವಿದ್ದೇವೆ. ನೀವು ಬನ್ನಿ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಬಹಿರಂಗ ಸವಾಲು ಹಾಕಿದರು.

    ಟಿಪ್ಪುವಿಗೆ ಎರಡು ಮುಖವಿತ್ತು. 1773 ರಿಂದ 91ರ ವರೆಗೆ ಒಂದು ಮುಖ. ನಂತರ ಒಂದು ಮುಖ ಎಂದು ಟಿಪ್ಪುವಿನ ವಿರುದ್ಧವೂ ಕಿಡಿಕಾರಿದ್ದಾರೆ. ಮೈಸೂರು, ದೇವನಹಳ್ಳಿ, ಸಖಲೇಶಪುರ ಸೇರಿದಂತೆ ಹಲವು ಊರುಗಳ ಹೆಸರನ್ನು ಬದಲಿಸಿ ಆಡಳಿತ ಭಾಷೆ ಕನ್ನಡವಿದ್ದ ಕಡೆ ಪರ್ಷಿಯನ್ ಭಾಷೆಯನ್ನು ತಂದ ಟಿಪ್ಪು ನಿಮ್ಮ ಕಣ್ಣಿಗೆ ಹೇಗೆ ದೇಶ ಭಕ್ತನಂತೆ ಕಾಣುತ್ತಾನೆಂದು ಲೇವಡಿ ಮಾಡಿದರು.

    ಇದಕ್ಕೂ ಮುನ್ನ ಟಿಪ್ಪು ಜಯಂತಿ ಆಚರಣೆಯನ್ನ ವಿರೋಧಿಸಿ ಮೆರವಣಿಗೆಗೆ ಸಜ್ಜಾಗಿದ್ದ ಶಾಸಕ ಸಿ.ಟಿ. ರವಿ ಸೇರಿದಂತೆ 150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಜಿಲ್ಲಾದ್ಯಂತ ಗುರುವಾರ ಬೆಳಗ್ಗೆಯಿಂದ ಶನಿವಾರ ಸಂಜೆವರೆಗೂ 144 ಸೆಕ್ಷನ್ ಜಾರಿಯಾಲ್ಲಿದರೂ ಕೈಗೆ ಕಪ್ಪು ಪಟ್ಟಿ ಧರಿಸಿ ಮೆರವಣಿಗೆಗೆ ಮುಂದಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.