Tag: Rajnath sing

  • ವರನೇ ಇಲ್ಲದ ಮದುವೆ ದಿಬ್ಬಣದಂತಿದೆ ಕಾಂಗ್ರೆಸ್ ಪಕ್ಷ: ರಾಜನಾಥ್ ಸಿಂಗ್

    ವರನೇ ಇಲ್ಲದ ಮದುವೆ ದಿಬ್ಬಣದಂತಿದೆ ಕಾಂಗ್ರೆಸ್ ಪಕ್ಷ: ರಾಜನಾಥ್ ಸಿಂಗ್

    ಭೋಪಾಲ್: ವರನೇ ಇಲ್ಲದ ಮದುವೆಗೆ ಸಿದ್ಧವಾಗಿರುವ ಮದುವೆ ದಿಬ್ಬಣದಂತೆ ಕಾಂಗ್ರೆಸ್ ಪಕ್ಷ ಕಾಣುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವ್ಯಂಗ್ಯವಾಡಿದ್ದಾರೆ.

    ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸದ್ಯದ ಕಾಂಗ್ರೆಸ್ ಸ್ಥಿತಿ ನಮ್ಮ ಪಕ್ಷಕ್ಕಿಂತಲು ಕಳಪೆಯಾಗಿದೆ. ಬಿಜೆಪಿಯು ಚುನಾವಣೆಗೂ ಮುನ್ನವೇ ಆಯಾ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಆದರೆ ಕಾಂಗ್ರೆಸ್ ನಾಯಕರಿಗೆ ಅಭ್ಯರ್ಥಿಗಳನ್ನು ಘೋಷಿಸಲು ಧೈರ್ಯವಿಲ್ಲದೇ ಚುನಾವಣೆಗಳನ್ನು ಎದುರಿಸುತ್ತಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಕಾಂಗ್ರೆಸ್ ಪಕ್ಷ ವರನೇ ಇಲ್ಲದ ಮದುವೆ ದಿಬ್ಬಣದಂತೆ ಕಾಣಿಸುತ್ತಿದೆ ಎಂದು ಕಿಚಾಯಿಸಿದರು.

    ದೇಶದಲ್ಲಿ ನಡೆಯುತ್ತಿರುವ ಮೂರು ಚುನಾವಣೆಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‍ಘಡ ರಾಜ್ಯಗಳಲ್ಲಿ ಬೇರೆ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ಸಿನಲ್ಲಿ ನಾಯಕತ್ವದ ಕೊರತೆಯಿಂದಾಗಿ, ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರು ನಾವೇ ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಘೋಷಿಸಿಕೊಳ್ಳುತ್ತಿದ್ದಾರೆಂದು ಟೀಕಿಸಿದ್ದಾರೆ.

    ದೇಶದಲ್ಲಿ ಈಗಾಗಲೇ `ಅಚ್ಛೇ ದಿನ್’ ಜಾರಿಯಲ್ಲಿದೆ. ಆದರೆ ಸರ್ಕಾರದ ವಿರೋಧಿಗಳು ಇದನ್ನು ತಿಳಿದುಕೊಳ್ಳುವ ಶಕ್ತಿ ಹೊಂದಿಲ್ಲ. ಸದ್ಯದ ದೇಶದ ಆರ್ಥಿಕ ಪರಿಸ್ಥಿತಿಯು ಉತ್ತಮ ರೀತಿಯಲ್ಲಿದೆ. ಇದೇ ರೀತಿಯ ಬೆಳವಣಿಗೆ ಮುಂದುವರಿದರೆ ಭಾರತ 2033ರ ವೇಳೆಗೆ ಪ್ರಪಂಚ ಅಗ್ರ ಮೂರು ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ನಿಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್ ವ್ಯವಸ್ಥಿತವಾಗಿ ದೇಶದ ಆರ್ಥಿಕತೆಯನ್ನು ನಾಶಮಾಡಿದೆ. ಅಲ್ಲದೇ ಅವರ ಆಡಳಿತದ ಅವಧಿಯಲ್ಲಿ ಸಾಕಷ್ಟು ರಾಜ್ಯಗಳು ಆರ್ಥಿಕ ಬಲವಿಲ್ಲದಂತಾಗಿದ್ದವು. ನಮ್ಮ ಎನ್‍ಡಿಎ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಆರ್ಥಿಕತೆಗೆ ಮಹತ್ತರವಾದ ಶಕ್ತಿಯನ್ನು ತುಂಬಿದೆ. ನಮ್ಮ ಪಕ್ಷ ಹೊಂದಿರುವ ಸಿದ್ಧಾಂತ ಹಾಗೂ ರಾಜಕೀಯ ಚಿಂತನೆಗಳಿಂದಾಗಿ ಈ ಪ್ರಮಾಣಕ್ಕೆ ಏರಿಕೆಯಾಗಲು ಕಾರಣವಾಗಿದೆ ಎಂದು ತಿಳಿಸಿದರು.

    ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ವಿಶ್ವಾಸರ್ಹತೆಯ ಬಿಕ್ಕಟ್ಟಿಗೆ ಕಾಂಗ್ರೆಸ್ ಸಿಲುಕಿದೆ. ಅಲ್ಲದೇ ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಗಳ ಪೈಕಿ ಯಾವುದನ್ನು ನೇರವೇರಿಸಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳು ಪೋಸ್ಟ್ ಡೇಟೆಡ್ ಚೆಕ್ ನಂತೆ ಕಾಣುತ್ತವೆ. ಅವರ ಪ್ರಣಾಳಿಕೆಗಳಲ್ಲಿ ಹೊಸದೇನು ಕಾಣುತ್ತಲೇ ಇಲ್ಲ. ತಮ್ಮ ಹಿಂದಿನ ಪ್ರಣಾಳಿಕೆಯನ್ನು ಪುನಃ ಬಿಡುಗಡೆ ಮಾಡಿದ್ದಾರೆಂದು ಲೇವಡಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv