ಜೈಪುರ: ರಾಜಸ್ಥಾನದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಮತ್ತೊಮ್ಮೆ ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಅವರ ಅಧಿಕಾರದ ಮೇಲೆ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ದ ಕಾರಣ ಸ್ಪೀಕರ್ ನೀಡಿದ್ದ ಅನರ್ಹತೆ ನೋಟಿಸ್ ವಿರುದ್ಧ ಮಾಜಿ ಡಿಸಿಎಂ ಸಚಿನ್ ಪೈಲಟ್ ಹಾಗೂ 18 ಶಾಸಕರು ರಾಜಸ್ಥಾನ ಹೈ ಕೋರ್ಟ್ ಮೇಟ್ಟಿಲೇರಿದ್ದಾರೆ.
ಸ್ಪೀಕರ್ ನೀಡಿರುವ ನೋಟಿಸ್ ವಿರುದ್ಧ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವ ಶಾಸಕರು, ಕೇವಲ ವಿಧಾನಸಭಾ ಅಧಿವೇಶನಕ್ಕೆ ಮಾತ್ರ ವಿಪ್ ಅನ್ವಯವಾಗುತ್ತದೆ. ಆದರೆ ಒತ್ತಡದ ಹಿನ್ನೆಲೆಯಲ್ಲಿ ಸ್ಪೀಕರ್ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಇತ್ತ ಸಚಿನ್ ಬೆಂಬಲಿತ ಶಾಸಕ ಪೃಥ್ವಿರಾಜ್ ಮೀನಾ ಹೈಕೋರ್ಟಿನಲ್ಲಿ ಸ್ಪೀಕರ್ ನಡೆ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ವಕೀಲರಾದ ಹರೀಶ್ ಸಾಳ್ವೆ ಹಾಗೂ ಮುಕುಲ್ ರೊಹ್ಟಗಿ ಅವರು ಪೈಲಟರ್ ಪರ ವಾದ ಮಂಡಿಸಲಿದ್ದಾರೆ. ಇತ್ತ ರಾಜಸ್ಥಾನ ಸ್ಪೀಕರ್ ಪರ ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.
ಸದ್ಯ ಹೈ ಕೋರ್ಟ್ ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದು, ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ತಿದ್ದುಪಡಿ ಮಾಡಲು ಸಮಯ ಕೋರಿದ್ದಾರೆ. ನ್ಯಾಯಾಲಯ ಅವರಿಗೆ ಸಮಯ ನೀಡಿದೆ. ತಿದ್ದುಪಡಿ ಅರ್ಜಿ ಸಲ್ಲಿಸಿದ ಬಳಿಕ ಮುಂದಿನ ವಿಚಾರಣೆ ನಡೆಯಲಿದೆ ಎಂದು ವಕೀಲ ಅಭಯ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.
ಅನರ್ಹತೆ ಮಾಡಲು ಸಾಧ್ಯವೇ?
ಈ ಹಿಂದೆ ಸ್ಪೀಕರ್ ಅಧಿಕಾರದ ಮೇಲೆ ಹಲವು ತೀರ್ಪುಗಳನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದೆ. ಆದರೆ ಸದನದ ಕಲಾಪಕ್ಕೆ ಮಾತ್ರ ವಿಪ್ ಅನ್ವಯವಾಗುತ್ತದೋ ಇಲ್ಲವೋ ಎನ್ನುವುದು ಈಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ ಕರ್ನಾಟಕ ಪ್ರಕರಣದಲ್ಲಿ ಸಂದರ್ಭದಲ್ಲಿ ವಿಪ್ ಉಲ್ಲಂಘಿಸಿದ 17 ಮಂದಿ ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್ ಕ್ರಮ ಸರಿ ಎಂದು ತೀರ್ಪು ನೀಡಿತ್ತು. ಆದರೆ ಸ್ಪೀಕರ್ 5 ವರ್ಷಗಳ ಕಾಲ ಅಂದರೆ 2023ರವರೆಗೆ ವಿಧಾನಸಭೆಯಿಂದ ಅನರ್ಹಗೊಳಿಸಿದ್ದು ಸರಿಯಲ್ಲ ಎಂದು ಹೇಳಿ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿತ್ತು. ತೀರ್ಪಿನಲ್ಲಿ ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ಅನರ್ಹಗೊಂಡ ಶಾಸಕರು ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದರು.
ರಾಜಸ್ಥಾನದಲ್ಲಿ ಶಾಸಕರು ರಾಜೀನಾಮೆಯೇ ನೀಡಿಲ್ಲ. ಜೊತೆಗೆ ವಿಧಾನಸಭಾ ಕಲಾಪವೇ ನಡೆದಿಲ್ಲ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ವಿಪ್ ಜಾರಿಗೊಳಿಸಲಾಗಿತ್ತು. ಶಾಸಕಾಂಗ ಸಭೆಗೆ ವಿಪ್ ಅನ್ವಯವಾಗುತ್ತದೋ ಇಲ್ಲವೋ ಎನ್ನುವುದು ಇಲ್ಲಿ ಎದ್ದಿರುವ ದೊಡ್ಡ ಪ್ರಶ್ನೆ. ಸ್ಪೀಕರ್ ತಮಗೆ ಸಿಕ್ಕಿರುವ ಅಧಿಕಾರದ ಹಿನ್ನೆಲೆಯಲ್ಲಿ ವಿಪ್ ಉಲ್ಲಂಘಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಅನರ್ಹಗೊಳಿಸಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಹೈಕೋರ್ಟ್ ಹೇಗೆ ಸ್ವೀಕರಿಸುತ್ತದೆ ಎಂಬ ಕುತೂಹಲ ಮೂಡಿದೆ.
ಪೈಲಟ್ ಜೊತೆ ಶಾಸಕರು ದೆಹಲಿಗೆ ತೆರಳಿದ ಹಿನ್ನೆಲೆಯಲ್ಲಿ ಅವರ ವಾಟ್ಸಪ್, ಇಮೇಲ್‍ಗೆ ಸಂದೇಶ ಕಳುಹಿಸಲಾಗಿತ್ತು. ಅಷ್ಟೇ ಅಲ್ಲದೇ ಶಾಸಕರ ಮನೆಯ ಮುಂದೆ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಶಾಸಕಾಂಗ ಸಭೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿ ಮಾಹಿತಿಯನ್ನು ನೀಡಲಾಗಿತ್ತು.
