Tag: Raja’s Seat

  • PUBLiC TV Impact – ಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರ

    PUBLiC TV Impact – ಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರ

    ಮಡಿಕೇರಿ: ನಗರದ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ (Raja Seat Glass Bridge) ಯೋಜನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಇತ್ತೀಚೆಗೆ ರಾಜಾಸೀಟ್‌ನಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಗಾಜಿನ ಸೇತುವೆ ಮತ್ತು ಫುಡ್ ಕೋರ್ಟ್ ನಿರ್ಮಾಣ ಯೋಜನೆಗೆ ತೋಟಗಾರಿಕೆ ಇಲಾಖೆ ಟೆಂಡರ್ ಆಹ್ವಾನಿಸಿತ್ತು. ಇದಕ್ಕೆ ಜಿಲ್ಲೆಯ ಜನರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಸರ್ಕಾರ ಆ ಯೋಜನೆಯನ್ನು ಹಿಂಪಡೆದಿದೆ.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಡಿಕೇರಿ ಶಾಸಕ ಮಂಥರ್ ಗೌಡ, ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ರಾಜ್ಯ ಸರ್ಕಾರ ಹಿಂಪಡೆದಿದೆ. ಗ್ಲಾಸ್ ಬ್ರಿಡ್ಜ್‌ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಗ್ಲಾಸ್ ಬ್ರಿಡ್ಜ್ ನಿರ್ಮಾಣವಾದರೆ ಅಪಾಯವಾಗುವ ಸಾಧ್ಯತೆ ಇದೆ. ಹಾಗಾಗಿ ಈ ಯೋಜನೆ ರದ್ದು ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮುಸುಕುದಾರಿಯ ಮಂಪರು ಪರೀಕ್ಷೆ ಮಾಡಿ : ಕೈ ಶಾಸಕ ಸವದಿ ಒತ್ತಾಯ

    ಕೋಟ್ಯಂತರ ರೂ. ವೆಚ್ಚದಲ್ಲಿ ಯೋಜನೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು. ಯೋಜನೆಯ ಅಪಾಯಗಳ ಬಗ್ಗೆ ಪಬ್ಲಿಕ್ ಟಿವಿ ಕೆಲ ದಿನಗಳ ಹಿಂದೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಕೊಡಗು (Kodagu) ಜಿಲ್ಲಾಡಳಿತದಿಂದ ಯೋಜನೆ ರದ್ದು ಮಾಡಲಾಗಿದೆ. ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಟೆಂಡರ್ ಕರೆಯುವ ಮೊದಲು ಅಲ್ಲಿಗೆ ಭೂ ವಿಜ್ಞಾನಿಗಳನ್ನ, ಪರಿಸರ ಇಲಾಖೆ ತಜ್ಞರನ್ನ ಕರೆಸಿ ವಿವಿಧ ಪರೀಕ್ಷೆಗಳನ್ನು ಮಾಡಬೇಕಿತ್ತು. ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಲು ಈ ಜಾಗ ಸುರಕ್ಷಿತವಾಗಿದೆಯಾ ಎಂದು ಚೆಕ್ ಮಾಡಬೇಕಿತ್ತು. ಆದರೆ ಯಾವುದನ್ನೂ ಮಾಡದೆ ತೋಟಗಾರಿಕಾ ಇಲಾಖೆ ಟೆಂಡರ್ ಆಹ್ವಾನಿಸಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಮಾಜಿ ಸಚಿವ ಎಂಸಿ ನಾಣಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಈ ಯೋಜನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: Bengaluru | ಪ್ರೇಯಸಿಯ ಹೊಸ ಲವ್ವರ್‌ಗೆ ಚಾಕು ಇರಿದ ಮಾಜಿ ಬಾಯ್‌ಫ್ರೆಂಡ್

  • ರಾಜಾಸೀಟ್ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ

    ರಾಜಾಸೀಟ್ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ

    ಮಡಿಕೇರಿ: ಪ್ರವಾಸಿಗರ ನೆಚ್ಚಿನ ತಾಣ ರಾಜಾಸೀಟ್ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬಳಸುವುದು ಮತ್ತು ಪುಷ್ಪಗಳನ್ನು ಕೀಳುವುದು ಕಂಡು ಬಂದಲ್ಲಿ 100 ರೂ. ದಂಡ ವಿಧಿಸಲು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಜಾಸೀಟ್ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅನೀಸ್, ಫೆಬ್ರವರಿ 07 ರಿಂದ 10 ರವರೆಗೆ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಈ ಮೂಲಕ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

    ಇದರ ಜೊತೆಗೆ ರಾಜಾಸೀಟಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗವನ್ನು ಮತ್ತಷ್ಟು ವಿಸ್ತಾರಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ರಾಜಾಸೀಟ್ ಬಳಿ ಹೆಚ್ಚಿನ ವಿದ್ಯುತ್ ದೀಪಗಳ ಅಳವಡಿಕೆಗೆ ಮತ್ತು ನಿರ್ವಹಣೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಾಜಾಸೀಟ್ ಪ್ರವೇಶ ಶುಲ್ಕದಿಂದ ರೂ. 70 ಲಕ್ಷ ಆದಾಯ ಬಂದಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರು. ಅಲ್ಲದೇ ಬರುವ ತಿಂಗಳು ರಾಜಾಸೀಟ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

  • ಮಂಜಿನ ನಗರಿಯ ರಾಜಾಸೀಟ್‍ನಲ್ಲಿ ಪ್ರವಾಸಿಗರನ್ನು ಸೆಳೆಯಲು ವಿನೂತನ ಪ್ರಯತ್ನ

    ಮಂಜಿನ ನಗರಿಯ ರಾಜಾಸೀಟ್‍ನಲ್ಲಿ ಪ್ರವಾಸಿಗರನ್ನು ಸೆಳೆಯಲು ವಿನೂತನ ಪ್ರಯತ್ನ

    ಮಡಿಕೇರಿ: ಪ್ರವಾಸಿಗರ ಸ್ವರ್ಗ ಕೊಡಗು. ಇಲ್ಲಿನ ಒಂದೊಂದು ತಾಣವೂ ಮನಮೋಹಕ. ಮಡಿಕೇರಿಯ ಪ್ರವಾಸಿ ತಾಣಗಳ ಮುಕುಟ ರಾಜಾಸೀಟ್. ಇಲ್ಲಿನ ಸೂರ್ಯಾಸ್ಥದ ವಿಹಂಗಮ ನೋಟ ಪ್ರಕೃತಿಯ ನೈಜ ಸೌಂದರ್ಯವನ್ನು ಅನಾವರಣಗೊಳಿಸುತ್ತೆ. ಇಂತಹ ರಾಜಾಸೀಟ್‍ಗೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ತೋಟಗಾರಿಕೆ ಇಲಾಖೆ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ.

    ತೋಟಗಾರಿಕೆ ಇಲಾಖೆಯವರು ಪ್ರತಿ ತಿಂಗಳ 2ನೇ ಶನಿವಾರ, ರಾಜ್ಯದ ವಿವಿಧ ಭಾಷೆಯನ್ನು ಬಿಂಬಿಸುವ ಕಾರ್ಯಕ್ರಮವನ್ನು ರಾಜಾಸೀಟ್ ವ್ಯೂ ಪಾಯಿಂಟ್‍ನ ಸ್ಥಳದಲ್ಲಿ ಆಯೋಜಿಸುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಕೊಡಗಿನತ್ತ ಲಗ್ಗೆಯಿಡುವ ಪ್ರಕೃತಿ ಪ್ರೇಮಿಗಳು ಜಿಲ್ಲೆಯ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಸದ್ಯ ತೋಟಗಾರಿಕೆ ಇಲಾಖೆಯ ವಿನೂತನ ಪ್ರಯತ್ನದಿಂದ ಕೊಡಗು ಹಾಗೂ ರಾಜ್ಯದ ಸಂಸ್ಕೃತಿಗಳನ್ನು ತಿಳಿಯಲು ಪ್ರವಾಸಿಗರಿಗೆ ನೆರವಾಗಿದೆ.

    ಮೊದಲ ಬಾರಿಗೆ ರಾಜಾಸೀಟ್‍ನಲ್ಲಿ ತೋಟಗಾರಿಗೆ ಇಲಾಖೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಬಾರಿ ಇಲಾಖೆ ಡೋಲು ಕುಣಿತ, ಸ್ಥಳೀಯ ಕಲಾವಿದರಿಂದ ಸುಗಮ ಸಂಗೀತ. ಕನ್ನಡ ಚಿತ್ರರಂಗ, ಹಿಂದಿ, ಕೊಡವ ಹಾಡು, ವಾದ್ಯ ಸೇರಿದಂತೆ ರಾಜ್ಯದ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸದಾ ಪ್ರವಾಸಿಗರಿಂದ ತುಂಬಿತುಳುಕುವ ರಾಜಾಸೀಟ್‍ಗೆ ಬಂದ ಪ್ರವಾಸಿಗರಿಗೆ ನಾಡಿನ ಸಂಸ್ಕೃತಿ ಹಾಗೂ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಕಾರ್ಯಕ್ರಮ ಮುದ ನೀಡಿದೆ.