Tag: Rajanath Sing

  • ಭಾರತಕ್ಕೆ ಭೇಟಿ ನೀಡಲಿದ್ದಾರೆ ಒಮಾನ್ ರಕ್ಷಣಾ ಅಧಿಕಾರಿಗಳು

    ಭಾರತಕ್ಕೆ ಭೇಟಿ ನೀಡಲಿದ್ದಾರೆ ಒಮಾನ್ ರಕ್ಷಣಾ ಅಧಿಕಾರಿಗಳು

    ನವದೆಹಲಿ: ಜನವರಿ 30 ರಿಂದ ಫೆಬ್ರವರಿ 3 ರವರೆಗೆ ಒಮಾನ್ ರಕ್ಷಣಾ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಾಸರ್ ಅಲ್ ಝಾಬಿ ಸೇರಿದಂತೆ ಹಲವಾರು ಉನ್ನತ ಮಟ್ಟದ ರಕ್ಷಣಾ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ.

    ಭೇಟಿ ಬಳಿಕ ಭಾರತ ಮತ್ತು ಒಮಾನ್ ರಕ್ಷಣಾ ಸಂಬಂಧಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದಾರೆ. ಜಂಟಿ ಮಿಲಿಟರಿ ಸಹಕಾರ ಸಮಿತಿ(ಜೆಎಂಎಂಸಿ) ಭಾರತ ಮತ್ತು ಒಮಾನ್ ನಡುವಿನ ರಕ್ಷಣಾ ವೇದಿಕೆಯಾಗಿದೆ.

    ಕೊನೆಯ (ಜೆಎಂಸಿಸಿ) 2018 ರಲ್ಲಿ ಒಮಾನ್‍ನಲ್ಲಿ ನಡೆದಿತ್ತು. ಕೋವಿಡ್ ಬಿಕ್ಕಟ್ಟಿನಿಂದಾಗಿ 3 ವರ್ಷಗಳ ಅಂತರದ ನಂತರ ನಡೆಯುತ್ತಿರುವ ಭೇಟಿ ಇದಾಗಿದೆ. ಭಾರತ ಪ್ರವಾಸದ ವೇಳೆ ಝಾಬಿ ಅವರು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ಭೇಟಿಯ ವೇಳೆ ರಕ್ಷಣಾ ಉತ್ಪನ್ನಗಳ ಖರೀದಿ ಸಂಬಂಧ ಮಾತುಕತೆ ನಡೆಯುವ ಸಾಧ್ಯತೆಯೂ ಇದೆ. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ ದಾಳಿ- 6 ಇಸ್ಲಾಮಿಕ್ ಸ್ಟೇಟ್ ಉಗ್ರರ ಹತ್ಯೆ

    ಫೆಬ್ರವರಿಯಲ್ಲಿ ಒಮಾನ್‍ನ ವಾಯುಪಡೆಯ ಮುಖ್ಯಸ್ಥರು ಮತ್ತು ರಾಯಲ್ ನೌಕಾಪಡೆ ಮುಖ್ಯಸ್ಥರು ಸಹ ಭಾರತಕ್ಕೆ ಭೇಟಿಯಾಗಲಿದ್ದಾರೆ

    ಒಮಾನ್‍ನ ನೌಕಾ ಮತ್ತು ವಾಯುಪಡೆ ಮುಖ್ಯಸ್ಥರ ಭೇಟಿಯು 5 ವರ್ಷಗಳ ನಂತರ ನಡೆಯುತ್ತಿದೆ. ಫೆಬ್ರವರಿಯಲ್ಲಿ ಭಾರತ ಮತ್ತು ಒಮಾನ್ ವಾಯುಪಡೆಯ ನಡುವೆ ಜೋಧ್‍ಪುರದಲ್ಲಿ ಜಂಟಿಯಾಗಿ ವೈಮಾನಿಕ ಸಮರ ಅಭ್ಯಾಸ ನಡೆಯಲಿದೆ. ಒಮಾನ್‍ನಿಂದ 150 ಕ್ಕೂ ಹೆಚ್ಚು ಸಿಬ್ಬಂದಿ ಈ ಅಭ್ಯಾಸದಲ್ಲಿ ಭಾಗವಹಿಸಲಿದ್ದಾರೆ.  ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ

    ಒಮಾನ್ ದೇಶವು ಭಾರತದ ಅತ್ಯಂತ ನಿಕಟ ರಕ್ಷಣಾ ಪಾಲುದಾರರ ದೇಶಗಳಲ್ಲಿ ಒಂದಾಗಿದೆ. ಗಲ್ಫ್ ವಲಯದಲ್ಲಿರುವ ದೇಶಗಳ ಪೈಕಿ ಭಾರತದ ಮೂರು ಸೇನೆಯ ಜೊತೆ ಜಂಟಿಯಾಗಿ ಸಮರಭ್ಯಾಸ ನಡೆಸುತ್ತಿರುವ ಏಕೈಕ ದೇಶ ಒಮಾನ್ ಆಗಿದೆ.

  • ಸಚಿವ ಸ್ಥಾನಕ್ಕೆ ಯೋಗೇಶ್ವರ್ ಯೋಗ್ಯನಲ್ಲ – ಅರುಣ್‍ಸಿಂಗ್‍ಗೆ ದೂರು ಸಲ್ಲಿಸಿದ ರೇಣುಕಾಚಾರ್ಯ

    ಸಚಿವ ಸ್ಥಾನಕ್ಕೆ ಯೋಗೇಶ್ವರ್ ಯೋಗ್ಯನಲ್ಲ – ಅರುಣ್‍ಸಿಂಗ್‍ಗೆ ದೂರು ಸಲ್ಲಿಸಿದ ರೇಣುಕಾಚಾರ್ಯ

    – ರಾಜ್ಯ ಉಸ್ತುವಾರಿ ಮುಂದೆ ದೂರಿನ ಸುರಿಮಳೆಗೈದ ಶಾಸಕ

    ನವದೆಹಲಿ: ಸಚಿವ ಸ್ಥಾನ ಸಿಗದೆ ನಿರಾಸೆಯಾಗಿರುವ ಶಾಸಕ ರೇಣುಕಾಚಾರ್ಯ ಇಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಹೈಕಮಾಂಡ್‍ನತ್ತ ತೆರಳಿ ಇತರ ನಾಯಕರ ಭೇಟಿಗೂ ಪ್ರಯತ್ನಿಸಿದ್ದಾರೆ.

    ದೆಹಲಿಯ ಜಿಆರ್‍ಜಿ ರಸ್ತೆಯಲ್ಲಿರುವ ಅರುಣ್ ಸಿಂಗ್ ನಿವಾಸದಲ್ಲಿ ಭೇಟಿಯಾದ ಶಾಸಕ ರೇಣುಕಾಚಾರ್ಯ, ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

    ದೆಹಲಿಯಲ್ಲಿ ಅರುಣ್ ಸಿಂಗ್ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತಾನಾಡಿದ ರೇಣುಕಾಚಾರ್ಯ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಸುಮಾರು 45 ನಿಮಿಷ ಚರ್ಚೆ ಮಾಡಿದ್ದೇನೆ. ನನ್ನ ಬಗ್ಗೆ ಅನೇಕ ವಿಚಾರಗಳನ್ನು ಅವರು ಸಂಗ್ರಹ ಮಾಡಿದ್ದಾರೆ. ನಾನು ನಾಯಕತ್ವದ ವಿರುದ್ಧ ದೂರು ನೀಡಿಲ್ಲ. ಕರಾವಳಿ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕಕ್ಕೆ ಸಾಮಾಜಿಕವಾಗಿ ಅನ್ಯಾಯವಾಗಿದೆ. ಆ ಬಗ್ಗೆ ಗಮನಕ್ಕೆ ತಂದಿದ್ದೇನೆ ಎಂದರು.

    ನಿನ್ನೆ ಕೆಲವರನ್ನು ಭೇಟಿ ಮಾಡಿ ಕೆಲ ಮಾಹಿತಿಯನ್ನು ನೀಡಿದ್ದೇನೆ. ಯೋಗೇಶ್ವರ್ ವಿರುದ್ಧ ದೂರು ಕೊಟ್ಟಿದ್ದೇನೆ. ಭ್ರಷ್ಟಾಚಾರ ಮಾಡಿದವರು ಸಚಿವರಾಗಿದ್ದಾರೆ. ಇದರಿಂದ ಜನರಿಗೆ ಮೋಸವಾಗಿದೆ. ಸೂಕ್ತ ವ್ಯಕ್ತಿಗಳಿಗೆ ಸೂಕ್ತ ದಾಖಲೆ ನೀಡಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.

    ನಾನು ರಮೇಶ್ ಜಾರಕಿಹೋಳಿ ಯೋಗೇಶ್ವರ್ ವಿಶ್ವಾಸದ ಬಗ್ಗೆ ಅಡ್ಡಿಪಡಿಸುವುದಿಲ್ಲ. ಅವರು ಯೋಗೇಶ್ವರ್ ವಕ್ತಾರರಂತೆ ಕೆಲಸ ಮಾಡಬಾರದು. ಯೋಗೇಶ್ವರ್ ಪುತ್ರಿ ಹೆಸರನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದಾರೆ. ಇತ್ತಿಚೇಗೆ 50 ಕೋಟಿ ಆಸ್ತಿ ಖರೀದಿ ಮಾಡಿದ್ದಾರೆ. ಮನೆ ಸೇರಿದಂತೆ ಹಲವು ಕಾರು ಖರೀದಿಸಿರುವುದು ನನ್ನ ಗಮನಕ್ಕೆ ಬಂದಿದೆ. ಯೋಗೇಶ್ವರ್ ಅವರಿಂದ ಬಿಜೆಪಿಗೆ ಯಾವುದೇ ಕೊಡುಗೆ ಇಲ್ಲ. ಅವರು ಹಲವು ಪಕ್ಷಗಳೊಂದಿಗೆ ಸೇರಿ ನಂತರ ಬಿಜೆಪಿಗೆ ಬಂದಿದ್ದಾರೆ. ಡಿಕೆಶಿ ಜೊತೆಗೆ ಸೇರಿ ಕಾಂಗ್ರೆಸ್ ಸೇರಲು ಹೋಗಿದ್ದರು ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.

    ಬಿಡದಿಯಲ್ಲಿ 50 ಎಕರೆ ಆಸ್ತಿ ಮಾಡಿದ್ದಾರೆ. ದೀಪಾವಳಿ ವೇಳೆ ಹೊಸ ಕಾರು ಖರೀದಿ ಮಾಡಿದ್ದಾರೆ. ಮಗಳಿಗಾಗಿ ಹೊಸ ಮನೆ ತೆಗೆದುಕೊಂಡಿದ್ದಾರೆ. ಹಲವು ಹಗರಣದಲ್ಲಿ ಕೈಜೋಡಿಸಿದ್ದಾರೆ ಎಂದು ಸಚಿವ ಯೋಗೇಶ್ವರ್ ವಿರುದ್ಧ ಸಮರ ಸಾರಿರುವ ರೇಣುಕಾಚಾರ್ಯ ಮೆಗಾ ಸಿಟಿ ಹಗರಣಗಳ ದಾಖಲೆ ಹಿಡಿದು ಹೈಕಮಾಂಡ್ ನಾಯಕರ ಭೇಟಿ ಮಾಡುತ್ತಿದ್ದಾರೆ.

  • ಮೇಕೆದಾಟು ಯೋಜನೆಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ: ಸಿಎಂ ಎಚ್‍ಡಿಕೆ

    ಮೇಕೆದಾಟು ಯೋಜನೆಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ: ಸಿಎಂ ಎಚ್‍ಡಿಕೆ

    ನವದೆಹಲಿ: ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಜಲಸಂಪನ್ಮೂಲ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಗಡ್ಕರಿ ಭೇಟಿ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಜಲಸಂಪನ್ಮೂಲ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೇ ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ. ಈ ಬಾರಿ 200 ಟಿಎಂಸಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿದಿದೆ. ಈ ನೀರನ್ನು ಸಂಗ್ರಹಿಸಿಟ್ಟುಕೊಂಡರೆ, ಬರಗಾಲದ ಸಂದರ್ಭದಲ್ಲಿ ಬಳಕೆಗೆ ಅನುಕೂಲವಾಗಿರುತ್ತದೆ. ವಾಸ್ತವಾಂಶಗಳ ಕುರಿತು ಸಚಿವರ ಗಮನಕ್ಕೆ ತಂದಿದ್ದು, ಅವರೂ ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

    ಮೇಕೆದಾಟು ಯೋಜನೆಗೆ ಕಾನೂನಾತ್ಮಕ ಒಪ್ಪಿಗೆ ಪಡೆಯುವ ವಿಶ್ವಾಸ ಇದೆ. ನಮ್ಮ ಅಧಿಕಾರಿಗಳ ಜೊತೆ ಮಾತನಾಡಿ ಬಾಕಿ ಇರುವ ಕೆಲಸವನ್ನು ನೋಡಿಕೊಳ್ಳುತ್ತೇವೆ. ನಾವು ಅರಣ್ಯ ಮತ್ತು ಪರಿಸರ ಇಲಾಖೆಯ ಪರವಾನಿಗೆಯನ್ನೂ ಸಹ ಪಡೆಯಬೇಕಿದೆ. ಇದಲ್ಲದೇ ಮಹದಾಯಿ ತೀರ್ಪಿನಲ್ಲಿ ನೀಡಿರುವ ನೀರಿನ ಬಳಕೆಗೆ ರಾಜ್ಯಕ್ಕೆ ಅವಕಾಶ ಕೊಡಬೇಕಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ. ಗೋವಾ ಸರ್ಕಾರ ಮಹಾದಾಯಿ ತೀರ್ಪಿನ ಬಗ್ಗೆ ಸ್ಪಷ್ಟಿಕರಣ ಅರ್ಜಿ ಸಲ್ಲಿಸಿದೆ. ಗೋವಾಕ್ಕೆ ಸ್ಪಷ್ಟೀಕರಣ ಸಿಕ್ಕ ನಂತರ ನೀರಿನ ಬಳಕೆಗೆ ಅನುಮತಿ ಕೊಡುವುದಾಗಿ ಹೇಳಿದ್ದಾರೆ. ಅದನ್ನು ಹೊರತುಪಡಿಸಿ ಹೆಚ್ಚುವರಿ ನೀರನ್ನು ಬಳಕೆ ಮಾಡಲು ಅನುಮತಿ ನೀಡುವ ಬಗ್ಗೆ ಕೇಳಿಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೇಕೆದಾಟಿಗೂ ತಮಿಳುನಾಡು ಕ್ಯಾತೆ ಯಾಕೆ? ಯೋಜನೆಯಿಂದ ರಾಜ್ಯಕ್ಕಾಗುವ ಲಾಭ ಏನು?

    ರಾಜ್ಯ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಅವಕಾಶ ಕೇಳಲಾಗಿತ್ತು. ಆದರೆ ಪ್ರಧಾನಿ ಬೇರೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್‍ರವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ರಾಜ್ಯಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಚರ್ಚಿಸಿದ್ದೇನೆ. ವಿಶೇಷವಾಗಿ ಕಾಫಿ ಬೆಳಗಾರರ ಸಂಕಷ್ಟಕ್ಕೆ ಹೆಚ್ಚಿನ ನೆರವು ನೀಡಲು ಮನವಿ ಮಾಡಿಕೊಂಡಿದ್ದೇವೆ. ಕೇಂದ್ರ ಸಚಿವರು ನಮ್ಮ ಬೇಡಿಕೆಗೆ ಸ್ಪಂದಿಸಿದ್ದಾರೆ. ಅಲ್ಲದೇ ಸಹಕಾರ ನೀಡುವ ಭರವಸೆಯನ್ನು ನೀಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಈ ನಿಯೋಗದಲ್ಲಿ ಭಾಗವಹಿಸಿದ್ದು ನಮಗೆ ಸಹಾಯವಾಗಿದೆ ಎಂದು ಹೇಳಿದ್ರು.

    ಸಾಲಮನ್ನಾ ಯೋಜನೆಗೆ ಮಾಹಿತಿ ಒದಗಿಸಲು ಕಾಲ ನಿಗದಿ ಮಾಡಿಲ್ಲ. ಈಗ ಕೇವಲ ಅರ್ಜಿಗಳನ್ನು ಮಾತ್ರ ಕೊಡಲಾಗುತ್ತಿದೆ. ಇದರ ಬಗ್ಗೆ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಕಾಲಹರಣ ಮಾಡದೇ ಮಾಹಿತಿಯನ್ನು ನಾಡ ಕಚೇರಿಗೆ ನೀಡಬಹುದು. ಆರಾಮಾಗಿ ಸರಿಯಾದ ಮಾಹಿತಿಯನ್ನು ನೀಡಬೇಕು. ಏಕೆಂದರೆ ರೈತರ ಖಾತೆಗಳಿಗೆ ನೇರವಾಗಿ ಸೌಲಭ್ಯ ಲಭ್ಯವಾಗಬೇಕು. ಇದರಲ್ಲಿ ಯಾವುದೇ ದಲ್ಲಾಳಿಗಳಿಗೆ ಲಾಭ ಆಗಬಾರದು ಎನ್ನುವ ಉದ್ದೇಶ ನಮ್ಮದು. ಯಾವುದೇ ಕಾಲಮಿತಿಯನ್ನು ಹಾಕಿಲ್ಲ. ಹೀಗಾಗಿ ಯಾವುದೇ ಸುಳ್ಳು ಸುದ್ದಿಗೆ ಕಿವಿಕೊಡಬೇಡಿ ಎಂದು ರೈತರಲ್ಲಿ ಮನವಿ ಮಾಡಿಕೊಂಡರು.

    ಇದಲ್ಲದೇ ಈಗಾಗಲೇ ಋಣಮುಕ್ತ ಕಾಯ್ದೆ ವಿಚಾರ ಗೃಹ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ಬಗ್ಗೆ ಕಾನೂನು ಇಲಾಖೆ ಸ್ಪಷ್ಟನೆ ಕೇಳಿತ್ತು. ಅದನ್ನು ಈಗ ನೀಡಲಾಗಿದೆ. ಈ ಹಿಂದೆ ರಾಷ್ಟ್ರಪತಿಗಳ ಜೊತೆ ಚರ್ಚೆ ಮಾಡಿದೆ. ಇದರಿಂದಾಗಿ ರೈತರು ಖಾಸಗಿ ಸಾಲ ಪಡೆದು ಆತ್ಮಹತ್ಯೆ ಮಾಡಿಕೊಳ್ಳುವುದು ನಿಲ್ಲುತ್ತದೆ. ಸರ್ಕಾರ ದೊಡ್ಡ ಪ್ರಮಾಣದ ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಕುಟುಂಬಗಳನ್ನು ಬೀದಿಪಾಲು ಮಾಡಬೇಡಿ ಎಂದು ವಿನಂತಿಸಿಕೊಂಡರು.

    ಸಚಿವ ಸಂಪುಟ ವಿಸ್ತರಣೆ ಮಾಡಬೇಕಾಗಿದೆ. ಇದಕ್ಕೆ ಕಾಂಗ್ರೆಸ್ಸಿನಿಂದ ತೀರ್ಮಾನ ಬರಬೇಕಾಗಿದೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಸಮಯ ಕೇಳಿದ್ದೇನೆ. ಭೇಟಿಗೆ ಅವಕಾಶ ಸಿಕ್ಕರೆ ಇದರ ಬಗ್ಗೆ ಚರ್ಚೆ ಮಾಡುತ್ತೇನೆ. ಇದೇ ವೇಳೆ ಜೆಡಿಎಸ್ ಉಪಮೇಯರ್ ರಮೀಳಾ ಶಂಕರ್ ನಿಧನದ ಸುದ್ದಿ ಬಗ್ಗೆ ಮಾತನಾಡಿ, ಉಪ ಮೇಯರ್ ರಮೀಳಾರ ನಿಧನ ನೋವು ತಂದಿದೆ. ಗುರುವಾರ ನಮ್ಮೊಂದಿಗೆ ಒಟ್ಟಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಇಂದು ಅವರು ನಮ್ಮ ಜೊತೆಯಲ್ಲಿ ಅವರ ನಿಧನ ಸುದ್ದಿ ಕೇಳುತ್ತಲೇ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅಲ್ಲದೇ ಪಾಲಿಕೆ ಆಯುಕ್ತರ ಮನವಿ ಮೇರೆಗೆ ಸರ್ಕಾರಿ ಗೌರವ ನೀಡಲು ಸೂಚಿಸಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv