Tag: Raja Seat

  • ಪ್ರವಾಸಿಗರನ್ನು ಸೆಳೆಯಲು ಬೆಟ್ಟವನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ- ಸ್ಥಳೀಯರಲ್ಲಿ ಆತಂಕ

    ಪ್ರವಾಸಿಗರನ್ನು ಸೆಳೆಯಲು ಬೆಟ್ಟವನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ- ಸ್ಥಳೀಯರಲ್ಲಿ ಆತಂಕ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪ, ಭೂಕುಸಿತ. ಸಾವು-ನೋವುಗಳು ಸಂಭವಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಬೆಟ್ಟಗುಡ್ಡಗಳಲ್ಲಿ ಯಂತ್ರೋಪಕರಣಗಳನ್ನು ಬಳಕೆ ಮಾಡಬಾರದು ಬೆಟ್ಟಗುಡ್ಡಗಳಲ್ಲಿ ರೆಸಾರ್ಟ್, ಕಟ್ಟಡ ಕಾಮಗಾರಿ ಮಾಡಬಾರದು ಎಂದು ಸರ್ಕಾರಕ್ಕೆ ವರದಿ ನೀಡಿದೆ. ಹೀಗಿದ್ದರೂ ಪ್ರವಾಸಿಗರನ್ನು ಸೆಳೆಯಲು ತೋಟಗಾರಿಕೆ ಇಲಾಖೆ ಬೆಟ್ಟಗಳನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ ಮಾಡಲು ಮುಂದಾಗಿದ್ದು, ಬೆಟ್ಟದ ಕೆಳಗೆ ವಾಸ ಮಾಡುವ ಜನರಿಗೆ ಇದೀಗ ಅತಂಕ ಶುರುವಾಗಿದೆ.

    ಮಳೆಗಾಲ ಆರಂಭವಾಯಿತು ಅಂದ್ರೆ ಕೊಡಗಿನ ಜನರಿಗೆ ಅತಂಕ ಶುರುವಾಗುತ್ತದೆ. ಕಳೆದ ಮೂರು ವರ್ಷದಿಂದ ಅರಂಭವಾಗಿರುವ ಜಲಪ್ರಳಯ ಭೂಕುಸಿತ ಇಲ್ಲಿಯ ಜನರನ್ನು ಬೆಚ್ಚಿಬೀಳಿಸಿದೆ. ಕಳೆದ ವರ್ಷ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಗಜಗಿರಿ ಬೆಟ್ಟ ಪ್ರದೇಶದಲ್ಲಿ ನಡೆದ ದುರಂತದಲ್ಲಿ ಅರ್ಚಕರಾದ ನಾರಾಯಣ್ ಅಚಾರ್ ಕುಟುಂಬವೇ ಭೂ ಸಮಾಧಿಯಾಗಿದ್ದನ್ನು ಯಾರೂ ಮರೆತ್ತಿಲ್ಲ. ಹೀಗಿದ್ದರೂ ಮಂಗಳೂರು ರಸ್ತೆಗೆ ಹೊಂದಿಕೊಂಡಿರುವ ರಾಜಸೀಟ್ ವ್ಯೂವ್ ಪಾಯಿಂಟ್ ಮಾಡಲು ಸುಮಾರು ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಬೆಟ್ಟ ಕೊರೆಯುವ ಕಾಮಗಾರಿಯನ್ನು ತೋಟಗಾರಿಕೆ ಇಲಾಖೆ ಅರಂಭ ಮಾಡಿದೆ. ಇದನ್ನೂ ಓದಿ: ಕೊಡಗಿನ ವಿವಿಧೆಡೆ ಮುಂದುವರಿದ ಮಳೆ- ಹೆಗ್ಗಳ ಗ್ರಾಮದಿಂದ ಕುಟುಂಬಗಳ ಸ್ಥಳಾಂತರ

    ನಾಲ್ಕು ಹಂತವಾಗಿ ಬೆಟ್ಟವನ್ನೇ ಕತ್ತರಿಸಿ ತೆಗೆಯುವ ಕಾಮಗಾರಿ ನಡೆಸುತ್ತಿದ್ದು, ಇದರಿಂದಾಗಿ ಬೆಟ್ಟದ ಕೆಳಗೆ ವಾಸಮಾಡುತ್ತಿರುವ ಹತ್ತಾರು ಕುಟುಂಬ ಭಯದಲ್ಲಿ ದಿನ ಕಳೆಯುತ್ತಿದೆ. ಬೆಟ್ಟ ಕುಸಿದು ಬಿದ್ದರೆ ಅಪಾಯ ಅಗುವ ಸಾಧ್ಯತೆ ಹೆಚ್ಚಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸಿ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣವನ್ನು ಪೋಲು ಮಾಡಲಾಗುತ್ತಿದ್ದು, ಮಡಿಕೇರಿ ನಗರದಲ್ಲಿ ಒಂದು ರಸ್ತೆ ಕೂಡ ನಡೆದಾಡಲು ಸಮರ್ಪಕವಾಗಿಲ್ಲ. ಆದರೆ ರಾಜಾಸೀಟ್ ಗುಡ್ಡದಲ್ಲಿ ಕಾಂಕ್ರಿಟ್ ರಸ್ತೆ, ಮೆಟ್ಟಿಲು, ವ್ಯೂವ್ ಪಾಯಿಂಟ್, ತಡೆಗೋಡೆಯನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳೆವಣಿಗೆಯಾಗಿದ್ದು, ಕಾಂಕ್ರಿಟ್ ಕಾಡಿನ ಮೂಲಕ ರಭಸವಾಗಿ ಹರಿಯುವ ನೀರು ಗುಡ್ಡ ಕುಸಿಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲಿದೆ. ಇದನ್ನೂ ಓದಿ: ಕೊಡಗಿನ 47 ಪ್ರವಾಹ, 38 ಭೂಕುಸಿತ ಸಂಭವನೀಯ ಪ್ರದೇಶಗಳನ್ನು ಗುರುತಿಸಿದ ಜಿಲ್ಲಾಡಳಿತ

    ಬೆಟ್ಟ, ಗುಡ್ಡಗಳಲ್ಲಿ ಮರ, ಗಿಡ, ಹುಲ್ಲಿದ್ದರೆ ಮಳೆಯ ನೀರಿನಿಂದ ಅಪಾಯ ಸಂಭವಿಸುವುದಿಲ್ಲ. ಆದರೆ ಅಗೆದು ಸಮತೋಲನವನ್ನು ಹದಗೆಡಿಸಿದರೆ ಕುಸಿಯುವ ಭೀತಿ ಹೆಚ್ಚಾಗಿದೆ. ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ ಪ್ರಕೃತಿ ವರವಾಗಿ ನೀಡಿರುವ ಪ್ರವಾಸಿತಾಣಗಳನ್ನು ಕುರೂಪಗೊಳಿಸುತ್ತಿರುವುದನ್ನು ಜಿಲ್ಲಾಡಳಿತ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೋಡಿಯು ಮೌನಕ್ಕೆ ಶರಣಾಗಿದ್ದಾರೆ. ಈ ಕುರಿತು ಸ್ಥಳೀಯ ಸಾರ್ವಜನಿಕರು ಎಚ್ಚರಿಕೆ ನೀಡಿದ್ದು, ಕಾಮಗಾರಿ ವಿರುದ್ಧ ನ್ಯಾಯಾಲಯದ ಮೋರೆ ಹೋಗುವುದಾಗಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಮೂರು ವರ್ಷದಿಂದ ಅಗುತ್ತಿರುವ ಅನಾಹುತಗಳ ಬಗ್ಗೆ ಜಿಲ್ಲಾಡಳಿತಕ್ಕೆ ಅರಿವು ಇದ್ದರೂ ಕೂಡ ಮತ್ತೆ ಬೆಟ್ಟ ಕೊರೆದು ಕಾಮಗಾರಿ ಮಾಡುತ್ತಿದೆ. ಒಂದು ವೇಳೆ ಬೆಟ್ಟ ಕುಸಿದು ದುರಂತ ಸಂಭವಿಸಿದರೆ ಜಿಲ್ಲಾಡಳಿತ ಮತ್ತು ಸರ್ಕಾರವೇ ನೇರ ಹೊಣೆ ಹೋರಬೇಕು ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.

  • ರಾಜಾಸೀಟ್‍ಗೆ ಮತ್ತಷ್ಟು ಕಳೆ ತಂದ ಪ್ರವಾಸೋದ್ಯಮ ಇಲಾಖೆ

    ರಾಜಾಸೀಟ್‍ಗೆ ಮತ್ತಷ್ಟು ಕಳೆ ತಂದ ಪ್ರವಾಸೋದ್ಯಮ ಇಲಾಖೆ

    ಮಡಿಕೇರಿ: ಪ್ರವಾಸಿಗರ ಸ್ವರ್ಗ ಕೊಡಗು. ಇಲ್ಲಿನ ಒಂದೊಂದು ತಾಣವೂ ಮನಮೋಹಕ. ಮಡಿಕೇರಿಯ ಪ್ರವಾಸಿ ತಾಣಗಳ ಮುಕುಟ ರಾಜಾಸೀಟ್. ಸಂಜೆ ಆಗುತ್ತಲೇ ಸೂರ್ಯಾಸ್ತದ ವಿಹಂಗಮ ನೋಟ ಪ್ರಕೃತಿಯ ನೈಜ ಸೌಂದರ್ಯವನ್ನು ಅನಾವರಣಗೊಳಿಸುತ್ತೆ. ಇಂತಹ ರಾಜಾಸೀಟ್‍ಗೆ ಮತ್ತಷ್ಟು ಕಳೆ ತರುವುದ್ದಕ್ಕೆ ಪ್ರವಾಸೋದ್ಯಮ ದಿನಚಾರಣೆ ಅಂಗವಾಗಿ ಪ್ರವಾಸಿಗರಿಗೆ ಕೊಡವ ಸಂಸ್ಕೃತಿ ರಾಜ್ಯದ ವಿವಿಧ ಭಾಷೆಯ ಬಿಂಬಿಸುವ ಕಾರ್ಯಕ್ರಮವನ್ನು ರಾಜಾಸೀಟ್ ವ್ಯೂ ಪಾಯಿಂಟ್‍ನ ಸ್ಥಳದಲ್ಲಿ ಆಯೋಜಿಸಲಾಗಿತ್ತು. ಬಂದ ಪ್ರವಾಸಿಗರು ಸಾಂಸ್ಕೃತಿಕ ಕಾರ್ಯಕ್ರಮ ಕಂಡು ಖುಷಿಪಟ್ಟರು.

    ರಾಜಾಸೀಟ್ ವೀಕೆಂಡ್ ಎಂದರೆ ಸಾಕು ಮಂಜಿನ ನಗರಿ ಮಡಿಕೇರಿ ಪ್ರವಾಸಿಗರಿಂದ ತುಂಬಿ ಹೋಗುತ್ತೆ. ದೇಶದ ವಿವಿಧ ರಾಜ್ಯಗಳಿಂದ ಕೊಡಗಿನತ್ತ ಲಗ್ಗೆಯಿಡುವ ಪ್ರಕೃತಿ ಪ್ರೇಮಿಗಳು ಜಿಲ್ಲೆ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರಮುಖ ಆಕರ್ಷಣೆ ಮಡಿಕೇರಿಯ ರಾಜಾಸೀಟ್ ಬೆಳಗ್ಗೆಯಿಂದ ಜಗತ್ತನ್ನು ಬೆಳಗಿ ಸಂಜೆ ಆಗುತ್ತಲೇ ಇಲ್ಲಿನ ಬೆಟ್ಟಗುಡ್ಡಗಳ ನಡುವೆ ಮುಳುಗುವ ಸೂರ್ಯನನ್ನು ನೋಡುವುದೇ ಒಂದು ವಿಸ್ಮಯ. ಆದರೆ ಮಳೆಗಾಲ ಬಂದರೆ ನಿರಂತರ ಸುರಿಯುವ ಮಳೆ ಮುಂಜು ಮುಸುಕಿನ ವಾತಾವರಣದಿಂದಾಗಿ ಸೂರ್ಯಾಸ್ತವನ್ನು ನೋಡಲು ಸಾಧ್ಯವಾಗಲ್ಲ. ಈ ನಿಟ್ಟಿನಲ್ಲಿ ಇಂದು ಪ್ರವಾಸೋದ್ಯಮ ಇಲಾಖೆಯಿಂದ ಕೊಡವ ಸಂಸ್ಕೃತಿ ದೇಶದ ವಿವಿಧ ಭಾಷೆಗಳ ನೃತ್ಯ ಕಾರ್ಯಕ್ರಮ ಆಯೋಜಿಲಾಗಿತ್ತು.

    ಸಾಂಪ್ರದಾಯಿಕ ಉಡುಗೆ ತೊಟ್ಟು ಯುವಕರು ನಲಿದಾಡಿದ್ದಾರೆ, ಯುವತಿಯರು ಬಣ್ಣ ಬಣ್ಣದ ಸೀರೆಯುಟ್ಟು ಲಯಬದ್ದ ನಾದಕ್ಕೆ ಹಾಡಿ ಕುಣಿದಿದ್ದಾರೆ. ಪ್ರವಾಸೋದ್ಯಮ ದಿನಚಾರಣೆ ಅಂಗವಾಗಿ ಪ್ರವಾಸಿಗರಿಗೆ ಕೊಡವ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮವನ್ನು ರಾಜಾಸೀಟ್ ವ್ಯೂ ಪಾಯಿಂಟ್‍ನ ಸ್ಥಳದಲ್ಲಿ ಆಯೋಜಿಸಲಾಗಿತ್ತು. ಕೊಡಗಿನ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕೊಡಗಿನ ಮಡಿಕೇರಿ ಹಾಗೂ ವಿರಾಜಪೇಟೆ ಕಾಲೇಜು ವಿದ್ಯಾರ್ಥಿಗಳಿಂದ ಕೊಡವ ಸಂಸ್ಕೃತಿ ಬಿಂಬಿಸುವ ಉಮ್ಮತಾಟ್ ಕೋಲಾಟ್, ಜಾನಪದ ಕಲೆ ಹಾಗೂ ವಿವಿಧ ಭಾಷೆಗಳ ನೃತ್ಯಗಳನ್ನು ಪ್ರದರ್ಶಿಸಲಾಯಿತ್ತು. ಕೊಡಗಿನ ಸಂಸ್ಕ್ರತಿ ಯಾವ ದೇಶಕ್ಕೂ ಕಡಿಮೆಯಿಲ್ಲ ಎನ್ನುವಂತೆ ಕುಣಿದು ನಲಿದ ವಿದ್ಯಾರ್ಥಿಗಳು ಪ್ರವಾಸಿಗರ ಮೆಚ್ಚುಗೆ ಗಳಿಸಿದರು. ಅಷ್ಟೇ ಅಲ್ಲದೇ ಕೊಡವ ವಾಲಗಕ್ಕೆ ಪ್ರವಾಸಿಗರು ಹೆಜ್ಜೆ ಹಾಕಿದು ವಿಶೇಷವಾಗಿತ್ತು.