Tag: Raja Amaresh Nayak

  • 3 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ – ರಮೇಶ್ ಕತ್ತಿಗೆ ಟಿಕೆಟ್ ಇಲ್ಲ

    3 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ – ರಮೇಶ್ ಕತ್ತಿಗೆ ಟಿಕೆಟ್ ಇಲ್ಲ

    ಬೆಂಗಳೂರು: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದಂತೆ ಬಿಜೆಪಿ ಕರ್ನಾಟಕದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದು, ಸದ್ಯ ಬಿಡುಗಡೆ ಆಗಿರುವ 12ನೇ ಪಟ್ಟಿಯಲ್ಲಿ ರಾಜ್ಯದ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

    ಪ್ರಮುಖವಾಗಿ ಬಹು ನಿರೀಕ್ಷೆ ಮೂಡಿಸಿದ್ದ ಚಿಕ್ಕೋಡಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಣ್ಣ ಸಾಹೇಬ್ ಜೊಲ್ಲೆ ಪಕ್ಷದ ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದು, ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ನಿರಾಕರಿಸಲಾಗಿದೆ.

    ಕೊಪ್ಪಳ ಕ್ಷೇತ್ರದಲ್ಲಿ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಈ ಬಾರಿ ಸಂಗಣ್ಣ ಅವರಿಗೆ ಅವರಿಗೆ ಟಿಕೆಟ್ ನೀಡುವುದು ಕಷ್ಟಸಾಧ್ಯ ಎಂಬ ಮಾತು ಕೇಳಿ ಬಂದಿತ್ತು. ಎಲ್ಲದರ ನಡುವೆಯೇ ಮತ್ತೊಮ್ಮೆ ಕರಡಿ ಸಂಗಣ್ಣ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ರಾಯಚೂರು ಕ್ಷೇತ್ರದಲ್ಲಿ ರಾಜಾ ಅಮರೇಶ್ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ. ವಾಲ್ಮೀಕಿ ಸಮುದಾಯದ ಮತಗಳು ಪ್ರಮುಖ ಆಗಿರುವುದರಿಂದ ಆ ಸಮುದಾಯಕ್ಕೆ ಸೇರಿದ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ನಾಯಕರು ಅಳೆದು ತೂಗಿ ರಾಜಾ ಅಮರೇಶ್ ನಾಯಕ್ ಅವರಿಗೆ ಟಿಕೆಟ್ ನೀಡಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಮೇಶ್ ಕತ್ತಿ ಪರ ಬ್ಯಾಟಿಂಗ್ ನಡೆಸಿದ್ದರು ಕೂಡ ಹೈಕಮಾಂಡ್ ಟಿಕೆಟ್ ನೀಡಲು ನಿರಾಕರಿಸಿದೆ. ಈ ಮೂಲಕ ಬಿಎಸ್ ವೈ ಅವರಿಗೆ ಮತ್ತೊಮ್ಮೆ ಹೈಕಮಾಂಡ್ ಮಟ್ಟದಲ್ಲಿ ಹಿನ್ನಡೆಯಾಗಿದೆ.

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಈ ಹಿಂದಿನಿಂದಲೂ ಕೂಡ ಉಮೇಶ್ ಕತ್ತಿ ಮತ್ತು ಬೆಂಬಲಿಗರು ಬಿಎಸ್‍ವೈ ಅವರಿಗೆ ನೆರವಾಗಿದ್ದರು. ಅಲ್ಲದೇ ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಅತಿ ಹೆಚ್ಚು ಸ್ಥಾನವನ್ನು ಗೆದ್ದರೆ ರಾಜ್ಯದ ಮೈತ್ರಿ ಸರ್ಕಾರದ ನಡೆಯಬಹುದಾದ ಲಾಭದ ಅಂಶಗಳನ್ನು ಗಮನಹರಿಸಿ ಸರ್ಕಾರ ರಚನೆ ಮಾಡುವ ಕನಸ್ಸನ್ನು ಬಿಎಸ್‍ವೈ ಹೊಂದಿದ್ದರು. ಆದರೆ ಈಗ ರಮೇಶ್ ಕತ್ತಿಗೆ ಟಿಕೆಟ್ ನೀಡದ ಕಾರಣ ಅವರ ಮುಂದಿನ ನಡೆ ಏನು ಎನ್ನುವುದರ ಬಗ್ಗೆ ಕುತೂಹಲ ಮೂಡಿಸಿದೆ.