Tag: Rainy

  • ಹೆಬ್ಬಾಳೆ ಸೇತುವೆ ಮುಳುಗಡೆಗೆ ಒಂದೇ ಅಡಿ ಬಾಕಿ – ಕರಾವಳಿಯಲ್ಲಿ ಮತ್ತೆ ಮುಂಗಾರು ಬಿರುಸು

    ಹೆಬ್ಬಾಳೆ ಸೇತುವೆ ಮುಳುಗಡೆಗೆ ಒಂದೇ ಅಡಿ ಬಾಕಿ – ಕರಾವಳಿಯಲ್ಲಿ ಮತ್ತೆ ಮುಂಗಾರು ಬಿರುಸು

    ಚಿಕ್ಕಮಗಳೂರು/ಮಂಗಳೂರು: ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಹೆಬ್ಬಾಳೆ ಸೇತುವೆ ಮುಳುಗಡೆಗೆ ಕೇವಲ ಒಂದೇ ಅಡಿ ಬಾಕಿ ಉಳಿದಿದೆ.

    ಹೆಬ್ಬಾಳೆ ಸೇತುವೆ ಮುಳುಗಡೆಯಾದಲ್ಲಿ ಕಳಸ-ಹೊರನಾಡು ಸಂಪರ್ಕ ಕಡಿತ ಕಡಿತವಾಗಲಿದೆ. ಜೀವ ನದಿಗಳು ಮೈದುಂಬಿ ಹರಿಯುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ಒಳ ಹರಿವಿನಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ.

    ಕುದುರೆಮುಖ, ಕಳಸ, ಸಂಸೆ, ಬಾಳೆಹೊಳೆ, ಬಸ್ರೀಕಟ್ಟೆ, ತನಿಕೋಡು ವ್ಯಾಪ್ತಿಯಲ್ಲಿ ಹಾಗೂ ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಕೊಪ್ಪದಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

    ಇತ್ತ ಕರಾವಳಿ ಭಾಗದಲ್ಲೂ ಮಳೆರಾಯನ ಅಬ್ಬ ಜೋರಾಗಿದ್ದು, ಮುಂದಿನ ಮೂರು ದಿನಗಳ ಕಾಲ ಭಾರೀ ಗಾಳಿ ಬೀಸುವ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ತೀರ ಪ್ರದೇಶದಲ್ಲಿ ಸಮುದ್ರ 4 ಮೀಟರ್ ಎತ್ತರಕ್ಕೆ ಅಬ್ಬರಿಸುವ ಸಾಧ್ಯತೆ ಇದ್ದು, ಸುಮಾರು 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.

  • ಮಲೆನಾಡಲ್ಲಿ ಭಾರೀ ಮಳೆ – ಮೂಡಿಗೆರೆ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ

    ಮಲೆನಾಡಲ್ಲಿ ಭಾರೀ ಮಳೆ – ಮೂಡಿಗೆರೆ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ

    ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಳೆದ 24 ಗಂಟೆ ಸಮಯದಿಂದ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ಘೋಷಣೆ ಮಾಡಲಾಗಿದೆ.

    ಮೂಡಿಗೆರೆಯಲ್ಲಿ ಗುರುವಾರ ಹಾಗೂ ಶುಕ್ರವಾರ ಭಾರೀ ಮಳೆಯಾಗಿತ್ತು. ಪರಿಣಾಮ ಹೇಮಾವತಿ ಮೈದುಂಬಿ ಹರಿಯುತ್ತಿದೆ. ಇತ್ತ ತಾಲೂಕಿನಾದ್ಯಂತ ಗದ್ದೆ-ತೋಟಗಳು ಜಲಾವೃತವಾಗಿದ್ದು, ಮುಂಜಾಗ್ರತ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ. ಮೂಡಿಗೆರೆ ತಾಲೂಕು ಅಧಿಕಾರಿ ರಜೆ ಘೋಷಣೆ ಮಾಡಿದ್ದಾರೆ. ಮಳೆಯಿಂದ ಮುನ್ನೆಚ್ಛರಿಕೆಯ ಕ್ರಮವಾಗಿ ರಜೆ ನೀಡಲಾಗಿದೆ.

    ಇತ್ತ ಕಾವೇರಿ ಜಲಾನಯನ ಪ್ರದೇಶ ಮಡಿಕೇರಿಯ ಭಾಗಮಂಡಲದಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಕಳೆದ ವರ್ಷದ ಜಲಪ್ರವಾಹದಿಂದ ಆತಂಕ ಈಗಲೂ ಜನರ ಮನದಲ್ಲಿ ಮನೆ ಮಾಡಿದೆ. ಅದರಲ್ಲೂ ಮಡಿಕೇರಿ – ಮಂಗಳೂರು ಹೆದ್ದಾರಿಯ ಮದೆನಾಡು ಬಳಿ ದುರಸ್ತಿ ಮಾಡಿದ್ದರೂ ಬಿರುಕು ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಚರಿಸಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದಾರೆ. ಚಿಕ್ಕಮಗಳೂರು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿ, ಹೊರಟ್ಟಿ, ಕೊಟ್ಟಿಗೆಹಾರ, ಜಾಣಿಗೆ, ಗೋಣಿಬೀಡುವಿನಲ್ಲಿ ಹೊಲ-ಗದ್ದೆ, ಕಾಫಿ ತೋಟಗಳು ಜಲಾವೃತಗೊಂಡಿವೆ.

    ಭಾರೀ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳ ರಭಸವೂ ಹೆಚ್ಚಿದೆ. ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಕಾರವಾರ ನಗರದ ಅರಗಾದಲ್ಲಿರುವ ಕದಂಬ ನೌಕಾನೆಲೆ ಭಾಗದ ಹತ್ತು ಎಕರೆಗೂ ಹೆಚ್ಚು ಪ್ರದೇಶಗಳ ಜಲಾವೃತವಾಗಿದೆ. ಇತ್ತ ಬೆಂಗಳೂರಿನಲ್ಲೂ ಇಂದು ಸಂಜೆ ವೇಳೆಗೆ ವರುಣನ ಸಿಂಚನವಾಯ್ತು. ಮುಂದಿನ 4 ದಿನಗಳ ಕಾಲ ಮಳೆ ಆಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.

  • ಸ್ವರ್ಗವನ್ನ ನಾಚಿಸುವಂತಿದೆ ಅಡ್ಯಾರ್ ಫಾಲ್ಸ್-ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ, ಶಾಂತವಾಗಿ ಹರೀತಿದೆ ಜಲಪಾತ

    ಸ್ವರ್ಗವನ್ನ ನಾಚಿಸುವಂತಿದೆ ಅಡ್ಯಾರ್ ಫಾಲ್ಸ್-ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ, ಶಾಂತವಾಗಿ ಹರೀತಿದೆ ಜಲಪಾತ

    ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಹಲವು ಬೀಚ್‍ಗಳು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಆದರೆ ಕೆಲವೊಂದು ಜಲಪಾತಗಳು ಮೂಲ ಸೌಕರ್ಯದ ಕೊರತೆಯಿಂದಾಗಿ ದೂರ ಉಳಿದುಕೊಂಡಿವೆ. ಈ ಸಾಲಿನಲ್ಲಿ ಅಡ್ಯಾರ್ ಜಲಪಾತವೂ ಸೇರುತ್ತದೆ.

    ಮಂಗಳೂರು ನಗರದಿಂದ 10 ಕಿ.ಮೀ ದೂರದ ಅಡ್ಯಾರ್ ಎಂಬಲ್ಲಿ ಈ ಜಲಪಾತವಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ವಳಚ್ಚಿಲ್‍ನಿಂದ ಎಡಕ್ಕೆ ಸಾಗಿದರೆ ಸಿಗೋ ಈ ಫಾಲ್ಸ್ ವಿದ್ಯಾರ್ಥಿಗಳ ನೆಚ್ಚಿನ ವೀಕೆಂಡ್ ಸ್ಪಾಟ್ ಆಗಿದೆ. ಅಡ್ಯಾರ್ ಫಾಲ್ಸ್ ಅಂತಾನೇ ಹೆಸರುವಾಸಿಯಾಗಿರೋ ಈ ಜಲಪಾತ ಮಳೆಗಾಲದಲ್ಲಿ ಮಾತ್ರ ಸ್ವರ್ಗವನ್ನೇ ನಾಚಿಸುವ ಸೌಂದರ್ಯ ಪಡೆಯುತ್ತದೆ.

    ಬೆಟ್ಟದ ಮೇಲಿಂದ ಹಾಲ್ನೊರೆಯ ಹಾಗೆ ಹರಿದು ಬರೋ ನೀರು ಲಲನೆಯ ರೀತಿ ಹರಿಯುತ್ತದೆ. ಸುಮಾರು 40 ಅಡಿ ಎತ್ತರದಿಂದ ಧುಮುಕುವ ನೀರಿನ ಸೊಬಗನ್ನು ನೋಡಲು ಎರಡು ಕಣ್ಣು ಸಾಲದು. ಹೆಚ್ಚಿನ ಜಲಪಾತಗಳು ರಭಸದಿಂದ ಹರಿದು, ಪ್ರಪಾತ ಸೇರುವ ಕಾರಣ ಕೆಲವೊಮ್ಮೆ ಪ್ರವಾಸಿಗರ ಪಾಲಿಗೆ ಅವು ಅಪಾಯಕಾರಿಯಾಗಿರುತ್ತದೆ. ಆದರೆ ವಳಚ್ಚಿಲ್ ಜಲಪಾತದಲ್ಲಿ ನೀರು ರಭಸವಾಗಿ ಹರಿಯದೆ, ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ ಶಾಂತವಾಗಿ ಹರಿಯುತ್ತದೆ. ಹಾಗಾಗಿಯೇ ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಡ್ಯಾರ್ ಫಾಲ್ಸ್ ಗೆ ಬರುತ್ತಾರೆ.

    ಅಡ್ಯಾರ್ ಜಲಪಾತ ಜೂನ್‍ನಲ್ಲಿ ಮಳೆಯೊಂದಿಗೆ ತೆರೆದುಕೊಳ್ಳುವ ಜಲಪಾತ ನವಂಬರ್‍ವರೆಗೂ ವೈಭವದಿಂದ ಮೇಳೈಸುತ್ತದೆ. ಆದರೆ ಫಾಲ್ಸ್ ಗೆ ಹೋಗೋಕೆ ಸಮರ್ಪಕವಾದ ರಸ್ತೆ ವ್ಯವಸ್ಥೆ ಇಲ್ಲ. ಹಾಗಾಗಿಯೇ ಜನ ಫಾಲ್ಸ್ ವೈಭವ ಕಾಣೋಕೆ ಹಿಂಜರಿಯುತ್ತಾರೆ. ಇನ್ನೊಂದೆಡೆ ಪೋಲಿಗಳು ಈ ಫಾಲ್ಸ್ ನ್ನು ಜಾಲಿ ಮಾಡೋಕೆ ಬಳಸೋದ್ರಿಂದ ಮದ್ಯದ ಬಾಟಲ್ ಗಳು, ಪ್ಲಾಸ್ಟಿಕ್ ಚೀಲಗಳು ಇದರ ಸೌಂದರ್ಯಕ್ಕೆ ಧಕ್ಕೆ ತಂದಿದೆ.

    ಒಟ್ಟಿನಲ್ಲಿ ಫಾಲ್ಸ್ ನೋಡೋಕೆ ಪಶ್ಚಿಮ ಘಟ್ಟಗಳ ತಪ್ಪಲಿಗೆ ಹೋಗೋ ಜನ ಮಂಗಳೂರಿಗೆ ಕೂಗಳತೆ ದೂರದಲ್ಲಿರೋ ಫಾಲ್ಸ್ ನ ಸೌಂದರ್ಯ ನೋಡೋ ಅವಕಾಶ ವಂಚಿತರಾಗಿದ್ದಾರೆ. ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತು ಜಲಪಾತ ಸೌಂದರ್ಯ ಉಳಿಸಿದ್ರೆ ಕರಾವಳಿಯ ಪ್ರವಾಸಿ ತಾಣಗಳ ಪಟ್ಟಿಗೆ ಅಡ್ಯಾರ್ ಫಾಲ್ಸ್ ಕೂಡಾ ಸೇರಿ, ಪ್ರವಾಸಿಗರನ್ನು ತನ್ನತ್ತ ಸೆಳೆಯಬಹುದು.

    https://youtu.be/iYalE_HuW6k