Tag: Railway Project

  • ರೈಲ್ವೆ ಯೋಜನೆಗಳಿಗೆ ಹಣ ಕೊಡದ ರಾಜ್ಯ ಸರ್ಕಾರ – ಬಿಜೆಪಿ ನಾಯಕರಿಂದ ತೀವ್ರ ಟೀಕೆ

    ರೈಲ್ವೆ ಯೋಜನೆಗಳಿಗೆ ಹಣ ಕೊಡದ ರಾಜ್ಯ ಸರ್ಕಾರ – ಬಿಜೆಪಿ ನಾಯಕರಿಂದ ತೀವ್ರ ಟೀಕೆ

    ಬೆಂಗಳೂರು: ಮೈಸೂರು (Mysuru) – ಕುಶಾಲನಗರ, ಬೆಂಗಳೂರು (Bengaluru) – ಸತ್ಯಮಂಗಲ ರೈಲು ಯೋಜನೆಗಳಿಗೆ ರಾಜ್ಯ ಸರ್ಕಾರ ಹಣಕಾಸು ಮುಗ್ಗಟ್ಟು ಕಾರಣದಿಂದ ರೆಡ್ ಸಿಗ್ನಲ್ ಕೊಟ್ಟಿದೆ. ಸರ್ಕಾರದ ನಡೆಗೆ ವಿಪಕ್ಷ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ.

     

    ಈ ಸಂಬಂಧ ಎಕ್ಸ್‌ನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಕಿಡಿಕಾರಿದ್ದು, ಸಿಕ್ಕಸಿಕ್ಕವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಕೊಟ್ಟು ಮೆರೆಸಲು ದುಡ್ಡಿದೆ, ಅತೃಪ್ತ ಶಾಸಕರಿಗೆ ಗೂಟದ ಕಾರು ಗ್ಯಾರೆಂಟಿ ನೀಡುವ ಸಮಿತಿ ರಚಿಸಲು ದುಡ್ಡಿದೆ, ಶಾಸಕರಿಗೆ, ಮಂತ್ರಿಗಳಿಗೆ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಕಾರು ಖರೀದಿ ಮಾಡಲು ದುಡ್ಡಿದೆ, ಅಲ್ಪಸಂಖ್ಯಾತರಿಗೆ 10,000 ಕೋಟಿ ರೂಪಾಯಿ ನೀಡಲು ದುಡ್ಡಿದೆ, ಹತ್ತಾರು ಕೋಟಿ ದುಂದುವೆಚ್ಚ ಮಾಡಿ ಸಾಧನಾ ಸಮಾವೇಶ ನಡೆಸಲು ದುಡ್ಡಿದೆ, ಆದರೆ ರೈಲ್ವೆ ಯೋಜನೆಗಳಿಗೆ ದುಡ್ಡಿಲ್ಲ. ಈ ಸರ್ಕಾರ ತೊಲಗುವವರೆಗೂ ಕರ್ನಾಟಕದ ಪ್ರಗತಿ ಸಾಧ್ಯವೇ ಇಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕುರುಬ ಸಮುದಾಯದ ನಾಯಕರ ಸಭೆ; ವಿಜಯೇಂದ್ರ‌ ಪರ ಬ್ಯಾಟಿಂಗ್ – ಈಶ್ವರಪ್ಪ ಘರ್ ವಾಪ್ಸಿ ಬಗ್ಗೆ ಚರ್ಚೆ

    ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y Vijayendra) ಸಹ ಎಕ್ಸ್‌ನಲ್ಲಿ ಪೋಸ್ಟ್‌, ಹಂಚಿಕೆ ಸೂತ್ರದ ಅನ್ವಯ ರಾಜ್ಯದ ಪಾಲಿನ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಈ ಯೋಜನೆಗಳಿಗೆ ‌’ಹಣ ಹೊಂದಿಸಲು ಸಾಧ್ಯವಿಲ್ಲ’ ಎಂದು ರಾಜ್ಯ ಸರ್ಕಾರ ಕೈ ಚೆಲ್ಲಿದೆ. ರೈಲ್ವೆ ಯೋಜನೆಗಳನ್ನು ಹಳ್ಳ ಹಿಡಿಯುವಂತೆ ಮಾಡಿದೆ. ಕಾಂಗ್ರೆಸ್ ಆಡಳಿತ ಕರ್ನಾಟಕ ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದೆ. ಅಧಿಕಾರದಲ್ಲಿ ಉಳಿಯುವುದೊಂದೇ ತಮ್ಮ ಧ್ಯೇಯ ಎಂಬಂತೆ ಭಂಡತನದಿಂದ ನಡೆದುಕೊಳ್ಳುತ್ತಿರುವ, ಪ್ರತಿ ಇಲಾಖೆಯಲ್ಲೂ ಲಂಚ ಹಾಗೂ ಕಮಿಷನ್ ದಂಧೆಗೆ ಕುಮ್ಮಕ್ಕು ನೀಡುತ್ತಿರುವ, ಅಭಿವೃದ್ಧಿಯ ಹಾದಿಯಲ್ಲಿ ತುಕ್ಕು ಹಿಡಿದು ಕುಳಿತಿರುವ ಈ ಸರ್ಕಾರವನ್ನು ಕಿತ್ತೊಗೆಯದಿದ್ದರೆ ಕರ್ನಾಟಕ ಅಭಿವೃದ್ಧಿ ಆಗಲ್ಲ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಗೋ ರಕ್ಷಣೆ ಮಾಡಲು ಮುಂದಾಗಿದ್ದಕ್ಕೆ ಮರಕ್ಕೆ ಕಟ್ಟಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ

  • ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 60ಕ್ಕೂ ಅಧಿಕ ರೈಲ್ವೆ ಯೋಜನೆಗಳ ಕುರಿತು ಸಂಸದ ಸುಧಾಕರ್‌ ಚರ್ಚೆ

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 60ಕ್ಕೂ ಅಧಿಕ ರೈಲ್ವೆ ಯೋಜನೆಗಳ ಕುರಿತು ಸಂಸದ ಸುಧಾಕರ್‌ ಚರ್ಚೆ

    ಚಿಕ್ಕಬಳ್ಳಾಪುರ: ಉಪನಗರ ರೈಲು ಸೇರಿದಂತೆ ಚಿಕ್ಕಬಳ್ಳಾಪುರ (Chikkaballapur) ಲೋಕಸಭಾ ಕ್ಷೇತ್ರದ 60ಕ್ಕೂ ಅಧಿಕ ರೈಲ್ವೆ ಯೋಜನೆಗಳ ಕುರಿತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಕೆಲವು ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರ ಬೇಕಿದ್ದು, ಈ ಕುರಿತು ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ ಕೆ ಸುಧಾಕರ್ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೊಸ ರೈಲ್ವೆ ಯೋಜನೆ ಹಾಗೂ ಜಾರಿಯಲ್ಲಿರುವ ಕಾಮಗಾರಿಗಳ ಬಗ್ಗೆ ಚರ್ಚಿಸಲು ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸದ ಡಾ.ಕೆ.ಸುಧಾಕರ್‌ ಪಾಲ್ಗೊಂಡಿದ್ದರು. ಬೆಂಗಳೂರು ಉಪನಗರ ರೈಲು ಯೋಜನೆ, ಹೊಸ ರೈಲು ಮಾರ್ಗಗಳು, ಡಬ್ಲಿಂಗ್, ವಿದ್ಯುದೀಕರಣ, ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ, ರೈಲು ನಿಲುಗಡೆ, ರೈಲು ನಿಲ್ದಾಣಗಳ ಅಭಿವೃದ್ಧಿ ಸೇರಿದಂತೆ 60ಕ್ಕೂ ಹೆಚ್ಚು ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ.

    ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್‌, ಅಭಿವೃದ್ಧಿಯ ಎಂಜಿನ್‌ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಡೆಗೆ ಸಾಗುತ್ತಿದ್ದು, ಇದು ಹೊಸ ಬೆಂಗಳೂರಾಗಿ ಪರಿವರ್ತನೆಯಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ, ಚಿಕ್ಕಬಳ್ಳಾಪುರ-ಪುಟ್ಟಪರ್ತಿ, ಚಿಕ್ಕಬಳ್ಳಾಪುರ-ಗೌರಿಬಿದನೂರು, ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ, ದೇವನಹಳ್ಳಿ-ದೊಡ್ಡಬಳ್ಳಾಪುರ-ಯಲಹಂಕ ಸೇರಿದಂತೆ 60ಕ್ಕೂ ಅಧಿಕ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

    ಕೆಲವು ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇನ್ನೂ ಕೆಲ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರ ಬೇಕಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿ ಹಾಗೂ ಸಚಿವರೊಂದಿಗೆ ಚರ್ಚಿಸಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷಗಳಲ್ಲಿ ರೈಲ್ವೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಹಿಂದಿನ ಸರ್ಕಾರಗಳು ನೀಡುತ್ತಿದ್ದ ಅನುದಾನಕ್ಕಿಂತ ಏಳು ಪಟ್ಟು ಅಧಿಕ ಅನುದಾನವನ್ನು ಎನ್‌ಡಿಎ ಸರ್ಕಾರ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ನೀಡಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ ವಲಯಕ್ಕೆ ಯಾರೂ ಹೆಚ್ಚು ಆದ್ಯತೆ ನೀಡಿರಲಿಲ್ಲ. ನಾನು ಈ ಕುರಿತು ಹೆಚ್ಚು ಗಮನಹರಿಸಿದ್ದೇನೆ ಎಂದರು.

  • ರಾಜ್ಯದ ಬಾಕಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರಕ್ಕೆ ಡಿಕೆ ಸುರೇಶ್ ಮನವಿ

    ರಾಜ್ಯದ ಬಾಕಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರಕ್ಕೆ ಡಿಕೆ ಸುರೇಶ್ ಮನವಿ

    ನವದೆಹಲಿ: ರಾಜ್ಯದ ಬಾಕಿ ರೈಲ್ವೇ (Railway Project) ಹಾಗೂ ಜಲ ಮಿಷನ್ ಯೋಜನೆಗಳನ್ನು  ಆದಷ್ಟು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಮನವಿ ಮಾಡಿದ್ದಾರೆ.

    ಡಿಕೆ ಸುರೇಶ್ ಅವರು ದೆಹಲಿಯಲ್ಲಿ ಕೇಂದ್ರ ರೈಲ್ವೇ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ ಸೋಮಣ್ಣ (V Somanna) ಅವರನ್ನು ಬುಧವಾರ ಭೇಟಿ ಮಾಡಿ ಈ ಮನವಿ ಸಲ್ಲಿಸಿದರು. ಇದನ್ನೂ ಓದಿ: ಎಲ್ಲವನ್ನೂ ಸಿಬಿಐಗೆ ಕೊಡಲು ಸಾಧ್ಯವಿಲ್ಲ: ಪರಮೇಶ್ವರ್

    ಹೆಜ್ಜಾಲ, ಕನಕಪುರ ಹಾಗೂ ಚಾಮರಾಜನಗರ ಹೊಸ ರೈಲ್ವೇ ಮಾರ್ಗ ಈ ಹಿಂದೆಯೇ ಮಂಜೂರಾಗಿ, ಟೆಂಡರ್ ಪ್ರಕ್ರಿಯೆ ಆಗಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಅದೇ ರೀತಿ ರಾಜ್ಯದ ಅನೇಕ ರೈಲ್ವೇ ಯೋಜನೆಗಳು ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಈ ಯೋಜನೆಗಳಿಗೆ ಅನುದಾನ ನೀಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಎಂದು ಕೋರಿದರು. ಇದನ್ನೂ ಓದಿ: ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಹೆಚ್‍ಡಿಕೆಗೆ ಸ್ಥಾನ

    ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಯೋಜನೆಗಳಿಗೆ ಸಲ್ಲಿಸಿರುವ ಪ್ರಸ್ತಾವನೆಗಳು ಆರು ತಿಂಗಳಿನಿಂದ ಬಾಕಿ ಉಳಿದಿವೆ. ಅವುಗಳಿಗೆ ಮಂಜೂರಾತಿ ಕೊಡಿ ಎಂದು ಡಿಕೆ ಸುರೇಶ್ ವಿನಂತಿ ಮಾಡಿದ್ದು, ಸಚಿವ ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದನ್ನೂ ಓದಿ: ಹುತಾತ್ಮ ಅಗ್ನಿವೀರ್‌ ಕುಟುಂಬಕ್ಕೆ 98.39 ಲಕ್ಷ ನೀಡಲಾಗಿದೆ – ರಾಹುಲ್‌ ಆರೋಪದ ಬೆನ್ನಲ್ಲೇ ಸೇನೆ ಸ್ಪಷ್ಟನೆ

  • ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಅಶ್ವಿನಿ ವೈಷ್ಣವ್ ಜೊತೆಗೆ ಹೆಚ್‌ಡಿಕೆ ಚರ್ಚೆ

    ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಅಶ್ವಿನಿ ವೈಷ್ಣವ್ ಜೊತೆಗೆ ಹೆಚ್‌ಡಿಕೆ ಚರ್ಚೆ

    ನವದೆಹಲಿ: ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಹಾಗೂ ಹಾಲಿ ನಡೆಯುತ್ತಿರುವ ರೈಲ್ವೆ ಯೋಜನೆಗಳನ್ನು (Railway Project) ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಮನವಿ ಮಾಡಿದ್ದಾರೆ.

    ದೆಹಲಿಯಲ್ಲಿ (New Delhi) ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಹೆಚ್‌ಡಿಕೆ ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಹೊಸ ರೈಲ್ವೆ ಮಾರ್ಗಗಳಿಗೆ ಅನುಮೋದನೆ ನೀಡಿ ಹಣಕಾಸು ನೆರವು ಒದಗಿಸುವ ಬಗ್ಗೆ ರೈಲ್ವೆ ಸಚಿವರೊಂದಿಗೆ ಹೆಚ್‌ಡಿಕೆ ಸುದೀರ್ಘ ಸಮಾಲೋಚನೆ ನಡೆಸಿದರು. ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡ ಅವರ ಕಾಲದಲ್ಲಿ ಮಂಜೂರಾಗಿದ್ದ ಬೆಂಗಳೂರು-ಸತ್ಯಮಂಗಲ-ಚಾಮರಾಜನಗರ (ಕನಕಪುರ-ಮಳವಳ್ಳಿ ಮಾರ್ಗವಾಗಿ) ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಂಡು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು ಮನವಿ ಮಾಡಿದರು. ಇದನ್ನೂ ಓದಿ: ದರ್ಶನ್ ಕೇಸ್‌ನಲ್ಲಿ ಎಸ್‌ಪಿಪಿ ಬದಲಾವಣೆ ಪ್ರಸ್ತಾವನೆ ನನ್ನ ಮುಂದೆ ಬಂದಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

    ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್‌ಡಿಕೆ, ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವರ ಜೊತೆ ಮಾಹಿತಿ ಹಂಚಿಕೊಳ್ಳಲಾಯಿತು. ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದು ನನಗೆ ಬಹಳ ಸಂತೋಷ ಉಂಟು ಮಾಡಿತು ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಗೆ ಮೈಸೂರಿನ ಹೋಟೆಲ್‌ನಲ್ಲಿ ನಡೆದಿತ್ತಾ ಸ್ಕೆಚ್‌? – ಇಡೀ ಪ್ಲಾನ್ ಮಾಸ್ಟರ್ ಮೈಂಡ್‌ ಯಾರು?

  • ಅಮೇಥಿ ಕ್ಷೇತ್ರಕ್ಕೆ ರೈಲು ಬಂದ ಕಥೆ ಹೇಳಿದ ಸ್ಮೃತಿ ಇರಾನಿ!

    ಅಮೇಥಿ ಕ್ಷೇತ್ರಕ್ಕೆ ರೈಲು ಬಂದ ಕಥೆ ಹೇಳಿದ ಸ್ಮೃತಿ ಇರಾನಿ!

    ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಮೇಥಿ ಕ್ಷೇತ್ರಕ್ಕೆ ರೈಲು ಬಂದಿದ್ದು ಹೇಗೆ ಎನ್ನುವುದನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವೆ  ಸ್ಮೃತಿ ಇರಾನಿ ಹೇಳಿದ್ದಾರೆ.

    ಬೊಮ್ಮನಹಳ್ಳಿಯಲ್ಲಿ ಆಯೋಜನೆಗೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮೇಥಿಯ ಬಿಜೆಪಿ ಕಚೇರಿಗೆ ಹಿರಿಯ ವ್ಯಕ್ತಿಯೊಬ್ಬರು ಮಗನ ಜೊತೆ ಬಂದಿದ್ದರು. ಈ ವೇಳೆ ಅವರ ಜೊತೆ ಮಾತನಾಡುತ್ತಿದ್ದಾಗ ಅವರು ಅಮೇಥಿ ಕ್ಷೇತ್ರಕ್ಕೆ ಬಂದ ರೈಲಿನ ಕಥೆಯನ್ನು ತಿಳಿಸಿದರು ಎಂದರು.

    “ನಾನು ನನ್ನ ತಂದೆ ಜೊತೆ ನೆಹರು ಭಾಷಣ ಕೇಳಲು ಹೋಗಿದ್ದೆ. ಭಾಷಣದಲ್ಲಿ ಮಾತನಾಡಿದ ನೆಹರು, ಅಮೇಥಿಗೆ ರೈಲು ಸಂಪರ್ಕ ಕೊಡಿಸುತ್ತೇನೆ. ನನಗೆ ಮತ ನೀಡಿ ಎಂದು ಜನರಲ್ಲಿ ಕೇಳಿಕೊಂಡರು. ತಂದೆ ಅವರಿಗೆ ಮತ ಹಾಕಿ ಗೆಲ್ಲಿಸಿದರು. ರೈಲು ಮಾತ್ರ ಬರಲಿಲ್ಲ. ನಂತರ ನನಗೆ ಮದುವೆ ಆಯಿತು. ಚುನಾವಣೆ ವೇಳೆ ಇಂದಿರಾ ಗಾಂಧಿ ಕೂಡ ಅದನ್ನೇ ಹೇಳಿ, ಚುನಾವಣೆಯಲ್ಲಿ ಗೆದ್ದರು. ಆದರೆ ರೈಲು ಮಾತ್ರ ಬರಲೇ ಇಲ್ಲ. ರಾಜೀವ್ ಗಾಂಧಿ ಅದೇ ಮಾತನ್ನು ಮುಂದುವರಿಸಿದರು. ಈಗ ರಾಹುಲ್ ಕೂಡ ಅದನ್ನೇ ಹೇಳುತ್ತಿದ್ದಾರೆ” ಎಂದು ಹಿರಿಯ ವ್ಯಕ್ತಿ ನನ್ನಲ್ಲಿ ವಿಚಾರ ಹೇಳಿದರು ಎಂದು ಸ್ಮೃತಿ ಇರಾನಿ ತಿಳಿಸಿದರು.

    ಆ ರೈಲು ಯೋಜನೆಯ ಆರಂಭಿಸಲು ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರಬೇಕಾಯಿತು. ಕಾಂಗ್ರೆಸ್ ನಾಯಕರು ರೈಲು ಹೆಸರಿನಲ್ಲಿ ಮತ ಹಾಕಿಸಿಕೊಂಡರೇ ವಿನಃ ಕೆಲಸ ಮಾಡಲಿಲ್ಲ. ಇದು ಕಾಂಗ್ರೆಸ್ ಆಡಳಿತ ವ್ಯವಸ್ಥೆ ಎಂದು ಹೇಳುವ ಮೂಲಕ ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

    ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್, ಶಾಸಕ ಸತೀಶ್ ರೆಡ್ಡಿ, ಚಿತ್ರ ನಟಿ ತಾರಾ ಭಾಗಿಯಾಗಿದ್ದರು.

    2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ವಿರುದ್ಧ 1,07,903 ಮತಗಳ ಅಂತರದಿಂದ ಜಯಗಳಿಸಿದ್ದರು. ರಾಹುಲ್ ಗಾಂಧಿ 4,08,651 ಮತಗಳನ್ನು ಪಡೆದಿದ್ದರೆ, ಸ್ಮೃತಿ ಇರಾನಿ 3,00,748 ಮತಗಳನ್ನು ಪಡೆದಿದ್ದರು.