ಮುಜಾಫರ್ ನಗರ: ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಖೌತಲಿ ಎಂಬಲ್ಲಿ ಉತ್ಕಲ್ ಎಕ್ಸ್ ಪ್ರೆಸ್ ಅಪಘಾತಕ್ಕೀಡಾಗಿದೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಸದ್ಯ ಹತ್ತು ಜನರು ಸಾವನ್ನಪ್ಪಿದ್ದು, ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ರೈಲ್ವೆ ಓರಿಸ್ಸಾದ ಪುರಿಯಿಂದ ಹರಿದ್ವಾರಕ್ಕೆ ತೆರಳುವ ವೇಳೆ ಅಪಘಾತ ಸಂಭವಿಸಿದೆ. ನವದೆಹಲಿಯ 100 ಕಿ.ಮೀ ದೂರದಲ್ಲಿ ಅಪಘಾತ ಸಂಭವಿಸಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಈಗಾಗಲೇ ಸ್ಥಳೀಯ ರೈಲ್ವೆ ಇಲಾಖೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲು ಸುರೇಶ್ ಪ್ರಭು ಆದೇಶಿಸಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳದಲ್ಲಿ ವಿದ್ಯುತ್ ಇಲ್ಲದಿರುವುದು ರಕ್ಷಣಾ ಕಾರ್ಯಚರಣೆಗೆ ತೊಂದರೆಯನ್ನುಂಟು ಮಾಡಿದೆ. ರೈಲ್ವೆಯ 6 ರಿಂದ 8 ಬೋಗಿಗಳು ಹಳಿ ತಪ್ಪಿದ್ದು, ಸುಮಾರು 50ಕ್ಕೂ ಹೆಚ್ಚು ಜನರು ರೈಲ್ವೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹಲವು ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಎರಡೂ ಬೋಗಿಗಳು ಒಂದರ ಮೇಲೊಂದು ಬಿದ್ದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.
ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ 3.5 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಮತ್ತು ಸಣ್ಣ ಪುಟ್ಟ ಗಾಯಾಳುಗಳಿಗೆ 25 ಸಾವಿರ ರೂ. ಪರಿಹಾರ ಹಣವನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಕಟಿಸಿದ್ದಾರೆ.




