Tag: Railway Department

  • ‘Misbehave ಮಾಡ್ತಿದ್ದೀರಾ’- ಶಾಸಕರ ವಿರುದ್ಧ ಮಹಿಳಾ ಅಧಿಕಾರಿ ಆಕ್ರೋಶ

    ‘Misbehave ಮಾಡ್ತಿದ್ದೀರಾ’- ಶಾಸಕರ ವಿರುದ್ಧ ಮಹಿಳಾ ಅಧಿಕಾರಿ ಆಕ್ರೋಶ

    ಹಾಸನ: ಇವರು ನನ್ನನ್ನು ತಳ್ಳುತ್ತಿದ್ದಾರೆ. ನನ್ನ ಜೊತೆ ಮಿಸ್ಬೇವ್ ಮಾಡುತ್ತಿದ್ದಾರೆ ಎಂದು ಅರಸೀಕೆರೆ ಶಾಸಕ ಕೆಎಂ.ಶಿವಲಿಂಗೇಗೌಡ ವಿರುದ್ಧ ರೈಲ್ವೆ ಮಹಿಳಾ ಅಧಿಕಾರಿ ಗಂಭೀರ ಆರೋಪ ಮಾಡಿ, ಸಾರ್ವಜನಿಕರ ಎದುರೇ ಆಕ್ರೋಶ ಹೊರಹಾಕಿದ್ದಾರೆ.

    ಇಂದು ನೈಋತ್ಯ ರೈಲ್ವೆ ವಿಭಾಗದ ಜಿಎಂ ಅಜಯ್ ಕುಮಾರ್ ಸಿಂಗ್ ಮತ್ತು ಮೈಸೂರು ವಿಭಾಗದ ಡಿ.ಆರ್.ಎಂ ಅಪರ್ಣ ಖರ್ಗ್ ಅರಸೀಕೆರೆಗೆ ಆಗಮಿಸಿದ್ದರು. ಅರಸೀಕೆರೆ ನಗರದ ಅಂಚೆಕೊಪ್ಪಲಿನಿಂದ ಅರಸೀಕೆರೆ ನಗರಕ್ಕೆ ಮೇಲ್ಸೇತುವೆ ಮಾಡಬೇಕೆಂದು ಮನವಿ ಪತ್ರ ಸಲ್ಲಿಸಲು ಶಾಸಕ ಶಿವಲಿಂಗೇಗೌಡ ಸೇರಿದಂತೆ ಸ್ಥಳೀಯ ಮುಖಂಡರು ಅಧಿಕಾರಿಗಳ ಬಳಿ ತೆರಳಿ ಚರ್ಚೆ ನಡೆಸಿದರು.

    ಈ ವೇಳೆ ಮಹಿಳಾ ಅಧಿಕಾರಿ ಅಪರ್ಣಾ ಖರ್ಗ್, ತಮ್ಮ ಹಿಂದೆ ನಿಂತಿದ್ದ ಶಾಸಕ ಶಿವಲಿಂಗೇಗೌಡ ವಿರುದ್ಧ ಮಿಸ್ಬೇವ್ ಮಾಡುತ್ತಿದ್ದಾರೆ ಎಂದು ಏಕಾಏಕಿ ಆಕ್ರೋಶ ಹೊರಹಾಕಿದ್ರು. ಮಹಿಳಾ ಅಧಿಕಾರಿ ಆರೋಪದಿಂದ ಬೇಸರಗೊಂಡ ಶಾಸಕ ಶಿವಲಿಂಗೇಗೌಡ, ಹಿಂದೆಯಿಂದ ಜನ ತಳ್ಳಿದಾಗ ನಾನು ಮುಂದೆ ಬಂದೆ. ಇದನ್ನು ಮಿಸ್ ಬಿಹೇವ್ ಎಂದರೆ ಹೇಗೆ ಎಂದು ಮಹಿಳಾ ಅಧಿಕಾರಿ ವಿರುದ್ಧ ಅಸಮಾಧಾನ ಹೊರಹಾಕಿದರು.

    ತಕ್ಷಣ ಮಹಿಳಾ ಅಧಿಕಾರಿಯನ್ನು ಸಮಾಧಾನ ಮಾಡಲು ಮುಂದಾದ ಅಧಿಕಾರಿಗಳು ಮತ್ತು ಸ್ಥಳೀಯರು, ಅವರ ಬಗ್ಗೆ ತಪ್ಪು ತಿಳಿಯಬೇಡಿ ಎಂದು ಸಮಾಧಾನಪಡಿಸಲು ಯತ್ನಿಸಿದರು. ಆದರೆ ಅದು ಸಫಲವಾಗಲಿಲ್ಲ.

  • ನ್ಯೂ ಇಯರ್‌ಗೆ ರೈಲ್ವೇ ಪ್ರಯಾಣಿಕರಿಗೆ ಶುಲ್ಕ ಹೆಚ್ಚಳದ ಶಾಕ್

    ನ್ಯೂ ಇಯರ್‌ಗೆ ರೈಲ್ವೇ ಪ್ರಯಾಣಿಕರಿಗೆ ಶುಲ್ಕ ಹೆಚ್ಚಳದ ಶಾಕ್

    ನವದೆಹಲಿ: ದೇಶದಾದ್ಯಂತ ಜನರು ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ. ಆದರೆ ಹೊಸ ವರ್ಷಕ್ಕೂ ಮುಂಚಿತವಾಗಿ ರೈಲ್ವೇ ಇಲಾಖೆ ರೈಲು ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಅದೇನೆಂದರೆ ಇಲಾಖೆ ರೈಲ್ವೇ ಸೇವೆಗಳ ಶುಲ್ಕವನ್ನು ಹೆಚ್ಚಳ ಮಾಡಿದೆ.

    ಉಪನಗರ ರೈಲುಗಳನ್ನು ಹೊರತುಪಡಿಸಿ, ಉಳಿದೆಲ್ಲಾ ರೈಲ್ವೇ ಸೇವೆಗಳ ಶುಲ್ಕವನ್ನು ಏರಿಕೆ ಮಾಡಿದೆ. ಅಲ್ಲದೇ ಜನವರಿ 1, 2020 ರಿಂದ ಅಂದರೆ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಮಂಗಳವಾರ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.

    ಮಂಗಳವಾರ ಇಲಾಖೆ ಹೊರಡಿಸಿದ್ದ ಆದೇಶದಂತೆ ಸಾಮಾನ್ಯ, ನಾನ್ ಎಸಿ ರೈಲು ದರಗಳು ಪ್ರತಿ ಕಿ.ಮೀ ಪ್ರಯಾಣಕ್ಕೆ 1 ಪೈಸೆ ಏರಿಕೆಯಾಗಿದೆ. ರೈಲ್ವೆ ಮೇಲ್, ಎಕ್ಸ್ ಪ್ರೆಸ್, ಎಸಿ ರಹಿತ ರೈಲುಗಳ ದರದಲ್ಲಿ ಕಿಲೋ ಮೀಟರ್‌ಗೆ 2 ಪೈಸೆ ಹೆಚ್ಚಳ ಮತ್ತು ಎಸಿ ತರಗತಿಗಳ ದರದಲ್ಲಿ ಪ್ರತಿ ಕಿಲೋ ಮೀಟರ್‌ಗೆ 4 ಪೈಸೆ ಏರಿಕೆಯಾಗಲಿದೆ ಎಂದು ಇಲಾಖೆ ಘೋಷಿಸಿದೆ.

    ಪ್ರೀಮಿಯಂ ರೈಲುಗಳಾದ ಶತಾಬ್ದಿ, ರಾಜಧಾನಿ ಮತ್ತು ಡುರೊಂಟೊ ರೈಲುಗಳ ಶುಲ್ಕವೂ ಹೆಚ್ಚಳವಾಗಲಿದೆ. 1,447 ಕಿ.ಮೀ ದೂರ ಕ್ರಮಿಸುವ ದೆಹಲಿ-ಕೋಲ್ಕತಾ ರಾಜಧಾನಿ ಎಕ್ಸ್ ಪ್ರೆಸ್‍ನಲ್ಲಿ ಪ್ರತಿ ಕಿ.ಮೀ.ಗೆ 4 ಪೈಸೆ ದರ ಹೆಚ್ಚಳ ಮಾಡಲಾಗಿದೆ. ಅಂದರೆ ಅಂದಾಜು 58 ರೂ. ಅಧಿಕವಾಗಿದೆ.

    ರೈಲ್ವೇ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಮುಂಗಡ ಟಿಕೆಟ್ ಶುಲ್ಕ ಮತ್ತು ಸೂಪರ್ ಫಾಸ್ಟ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಯಾರನ್ನೂ ಹಳಿ ದಾಟಲು ಬಿಡಲ್ಲ – ರೈಲ್ವೇ ನಿಲ್ದಾಣದಲ್ಲಿ ಶ್ವಾನ ಪಾಲಕ

    ಯಾರನ್ನೂ ಹಳಿ ದಾಟಲು ಬಿಡಲ್ಲ – ರೈಲ್ವೇ ನಿಲ್ದಾಣದಲ್ಲಿ ಶ್ವಾನ ಪಾಲಕ

    ಚೆನ್ನೈ: ಬುದ್ಧಿವಂತ ಪ್ರಾಣಿ ಎಂದು ಹೆಸರು ಪಡೆದಿರುವ ನಾಯಿಯೊಂದು ಚೆನ್ನೈ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಪಾಲಕನಂತೆ ಕೆಲಸ ಮಾಡುತ್ತಿದೆ. ಪ್ರಯಾಣಿಕರು ರೈಲಿನ ಹಳಿಗಳನ್ನು ದಾಟದಂತೆ, ರೈಲಿನ ಫುಟ್ ಬೋರ್ಡಿನಲ್ಲಿ ನಿಂತು ಪ್ರಯಾಣಿಸದಂತೆ ಎಚ್ಚರಿಕೆ ವಹಿಸುತ್ತಿದೆ.

    ಈ ಶ್ವಾನಕ್ಕೆ ಅಲ್ಲಿನ ರೈಲ್ವೇ ಸಿಬ್ಬಂದಿ ಚಿನ್ನಪೋನು ಎಂದು ಹೆಸರಿಟ್ಟಿದ್ದಾರೆ. ಈ ನಾಯಿಯನ್ನು ಎರಡು ವರ್ಷದ ಹಿಂದೆ ಯಾರೋ ತಂದು ಚೆನ್ನೈನ ಪಾರ್ಕ್ ಟೌನ್ ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ. ಅಂದಿನಿಂದ ಇಲ್ಲಿಯವರೆಗೂ ಈ ನಾಯಿ ರೈಲ್ವೇ ನಿಲ್ದಾಣದಲ್ಲೇ ವಾಸವಾಗಿದೆ.

    ಪಾರ್ಕ್ ಟೌನ್ ರೈಲ್ವೇ ನಿಲ್ದಾಣದಲ್ಲಿ ದಿನ ಪ್ರಯಾಣ ಮಾಡುವವರಿಗೆ ಚಿನ್ನಪೋನು ಬಹಳ ಅಚ್ಚುಮೆಚ್ಚಾಗಿದ್ದು, ನಾಯಿ ಸೂಕ್ಷ್ಮತೆ ಮತ್ತು ಆದರ ಕಾರ್ಯವೈಖರಿ ಕಂಡು ಜನರು ಬೆರಗಾಗಿದ್ದಾರೆ. ಯಾರಾದರು ಈ ನಾಯಿಯ ಮುಂದೆ ರೈಲ್ವೇ ಹಳಿಯನ್ನು ದಾಟಿದರೆ ಅವರನ್ನು ಕಂಡು ಬೊಗಳುವ ನಾಯಿ ಅವರನ್ನು ಹಳಿ ದಾಟಲು ಬಿಡುವುದಿಲ್ಲ. ಹಾಗೆಯೇ ಯಾರದರೂ ಪ್ರಯಾಣಿಕರು ರೈಲಿನ ಫುಟ್ ಬೋರ್ಡ್ ಮೇಲೆ ನಿಂತುಕೊಂಡು ಪ್ರಯಾಣಿಸಿದರೆ ಅವರನ್ನು ನೊಡಿ ಬೊಗಳಿ ಅವರನ್ನು ಒಳಗೆ ಹೋಗುವಂತೆ ಸೂಚಿಸುತ್ತದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸ್ಥಳೀಯರೊಬ್ಬರು, ಚಿನ್ನಪೋನು ಸುಮಾರು ಎರಡು ವರ್ಷದ ಹಿಂದಿನಿಂದಲೂ ಇಲ್ಲೇ ಇದೆ. ಇದನ್ನು ಯಾರೋ ತಂದು ಇಲ್ಲಿ ಬಿಟ್ಟು ಹೋಗಿದ್ದರು. ಅಂದಿನಿಂದ ಈ ನಾಯಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್.ಪಿ.ಎಫ್) ಸಿಬ್ಬಂದಿಯೊಂದಿಗೆ ಇತ್ತು. ಹಾಗಾಗಿ ಅವರು ಮಾಡುವ ರೀತಿಯಲ್ಲೇ ಇದು ಕೂಡ ಕೆಲಸ ಮಾಡುತ್ತದೆ. ಪ್ರಯಾಣಿಕರನ್ನು ರೈಲ್ವೇ ಹಳಿ ದಾಟಲು ಬಿಡುವುದಿಲ್ಲ. ರೈಲು ಚಲಿಸುವಾಗ ಹತ್ತಿರಕ್ಕೆ ಹೋಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

    ಈ ನಾಯಿ ಆರ್.ಪಿ.ಎಫ್ ಸಿಬ್ಬಂದಿಯ ರೀತಿಯಲ್ಲೇ ದಿನಲು ರೈಲ್ವೇ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವುದನ್ನು ಸ್ಥಳಿಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಭಾರತದ ರೈಲ್ವೇ ಇಲಾಖೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಎರಡು ವರ್ಷದಿಂದ ರೈಲ್ವೇ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿರುವ ನಾಯಿಗೆ ಧನ್ಯವಾದಗಳು ಎಂದು ಬರೆದುಕೊಂಡಿದೆ.

  • ರೈಲ್ವೇ ಹಳಿಯಲ್ಲಿ ಶವ- ತೆಗೆಯಲು ಬಂದಾಗ ಎದ್ದು ಕುಳಿತ

    ರೈಲ್ವೇ ಹಳಿಯಲ್ಲಿ ಶವ- ತೆಗೆಯಲು ಬಂದಾಗ ಎದ್ದು ಕುಳಿತ

    ಭೋಪಾಲ್: ವ್ಯಕ್ತಿಯೊಬ್ಬರ ಮೃತ ದೇಹ ಮಧ್ಯಪ್ರದೇಶದ ಅಶೋಕ್ ನಗರ್ ರೈಲು ಹಳಿ ಮೇಲೆ ಬಿದ್ದಿದೆ ಎಂಬ ಮಾಹಿತಿ ಅನ್ವಯ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಕ್ಷಣ ಕಾಲ ದಂಗಾದ ಘಟನೆ ನಡೆದಿದೆ.

    ಹಳಿ ನಡುವೆ ಸತ್ತು ಬಿದ್ದಿದ್ದಾನೆ ಎಂದು ತಿಳಿದಿದ್ದ ಪೊಲೀಸರು ಮೃತದೇಹವನ್ನು ತೆರವು ಮಾಡಲು ಆಗಮಿಸಿದರು. ಈ ವೇಳೆ ಒಮ್ಮೆಲೆ ರೈಲ್ವೇ ಹಳಿ ನಡುವೆ ಬಿದ್ದಿದ್ದ ವ್ಯಕ್ತಿ ಎದ್ದು ನಿಂತಿದ್ದ. ಇದರಿಂದ ಕ್ಷಣ ಕಾಲ ಪೊಲೀಸರು ಅಚ್ಚರಿಗೊಂಡಿದ್ದರು. ಸದ್ಯ ಆತನನ್ನು ಪೊಲೀಸರು ಸ್ಥಳೀಯ ನಿವಾಸಿ ಧರ್ಮೇಂದ್ರ ಎಂದು ಗುರುತಿಸಿದ್ದಾರೆ.

    ನಡೆದಿದ್ದೇನು?
    ಧರ್ಮೇಂದ್ರ ಕಂಠಪೂರ್ತಿ ಕುಡಿದು ರೈಲ್ವೇ ಹಳಿ ನಡುವೆ ಬಂದು ಮಲಗಿ ಕೊಂಡಿದ್ದ. ಇದನ್ನು ಕಂಡ ರೈಲ್ವೇ ಲೋಕೋ ಪೈಲಟ್ ವ್ಯಕ್ತಿಯೊಬ್ಬರು ರೈಲ್ವೇ ಹಳಿ ಮೇಲೆ ಬಿದಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ಈ ಮಾರ್ಗವಾಗಿ 3 ರೈಲುಗಳು ಸಂಚಾರಿಸಿದ್ದವು.

    ರೈಲು ಸಂಚಾರಿಸಿದ ಪರಿಣಾಮ ರೈಲ್ವೇ ಹಳಿ ಮೇಲಿರುವ ವ್ಯಕ್ತಿ ಮೃತ ಪಟ್ಟಿರುತ್ತಾನೆ ಎಂದು ಪೊಲೀಸರು ತಿಳಿದಿದ್ದರು. ಆದರೆ ಸ್ಥಳಕ್ಕೆ ಬಂದು ನೋಡಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಮೂರು ರೈಲು ಸಂಚರಿಸಿದರು ಆತನಿಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಕಂಠ ಪೂರ್ತಿ ಕುಡಿದಿದ್ದ ಕಾರಣ ಆತ ತಾನು ಎಲ್ಲಿ ಮಲಗಿದ್ದೆ, ರೈಲ್ವೇ ಹಳಿ ಮೇಲೆ ಯಾವಾಗ ಬಂದೆ ಎಂಬ ಬಗ್ಗೆಯೂ ಆತನಿಗೆ ನೆನಪಿರಲಿಲ್ಲ. ಅಲ್ಲದೇ ಆತ ರೈಲ್ವೇ ಹಳಿ ನಡುವೆ ಮಲಗಿದ್ದ ಸಮಯದಲ್ಲಿ 3 ರೈಲು ಸಂಚಾರಿಸಿದ್ದು ಕೂಡ ತಿಳಿದಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಏಕಾಏಕಿ ಮಾಯವಾದ ಶನೇಶ್ವರ- ಭಕ್ತರು ಕಂಗಾಲು

    ಏಕಾಏಕಿ ಮಾಯವಾದ ಶನೇಶ್ವರ- ಭಕ್ತರು ಕಂಗಾಲು

    – ರೈಲ್ವೇ ಇಲಾಖೆ ವಿರುದ್ಧ ಭಕ್ತರ ಆಕ್ರೋಶ
    – ಹೈಕೋರ್ಟ್ ಆದೇಶದಂತೆ ಶನೇಶ್ವರ ಶಿಫ್ಟ್

    ಬೆಂಗಳೂರು: ಸಾಮಾನ್ಯವಾಗಿ ಭಕ್ತರು ಶನಿವಾರ ಬಂದ್ರೆ ಶನೇಶ್ವರ ದೇವಸ್ಥಾನಕ್ಕೆ ಹೋಗುತ್ತಾರೆ. ಮೆಜೆಸ್ಟಿಕ್ ಸಮೀಪದ ಶನೇಶ್ವರ ದೇಗುಲಕ್ಕೂ ಸಾಕಷ್ಟು ಜನ ಬರುತ್ತಿದ್ದರು. ಆದರೆ ದೇವಸ್ಥಾನವನ್ನು ರೈಲ್ವೇ ಇಲಾಖೆಯವರು ಏಕಾಏಕಿ ತೆರವುಗೊಳಿಸಿದ್ದಾರೆ.

    ಹೈಕೋರ್ಟ್ ಆದೇಶದಂತೆ ರೈಲ್ವೇ ಇಲಾಖೆಯ ಸಿಬ್ಬಂದಿ ಇಲಾಖೆಯ ಜಾಗದಲ್ಲಿದ್ದ ಶನೇಶ್ವರ ದೇವಸ್ಥಾನವನ್ನು ಶಿಫ್ಟ್ ಮಾಡಿದ್ದಾರೆ. ಆದರೆ ಈ ಬಗ್ಗೆ ಮಾಹಿತಿ ಇರದ ಭಕ್ತರು ಇಂದು ಶನೇಶ್ವರ ದೇವಸ್ಥಾನಕ್ಕೆ ಬಂದಿದ್ದಾರೆ. ದೇಗುಲ, ದೇವರ ಮೂರ್ತಿ ಇರದಿದ್ದನ್ನು ಕಂಡ ಭಕ್ತರು ರೈಲ್ವೇ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರೈಲ್ವೇ ಇಲಾಖೆ ಸಿಬ್ಬಂದಿಯು ಶನೇಶ್ವರನ ಮೂರ್ತಿಯನ್ನು ಶ್ರೀರಾಮಪುರದ ಅಯ್ಯಪ್ಪ ದೇಗುಲದಲ್ಲಿ ಇಟ್ಟಿದ್ದಾರೆ. ಆದರೆ ದೇವರ ಪಾದವನ್ನು ಮಾತ್ರ ಅಲ್ಲಿಯೇ ಬಿಟ್ಟಿದ್ದಾರೆ. ಇದನ್ನು ನೋಡಿದ ಭಕ್ತರು ರೈಲ್ವೇ ಇಲಾಖೆ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.

    ನಲವತ್ತು ವರ್ಷಗಳಿಂದ ಶನೇಶ್ವರ ಇದೆ. ಆದರೆ ಅದನ್ನು ಪದೇ ಪದೇ ರೈಲ್ವೇ ಇಲಾಖೆಯವರು ಶಿಫ್ಟ್ ಮಾಡುತ್ತಿದ್ದಾರೆ. ಹೀಗೆ ಮಾಡಿದರೆ ಹೇಗೆ. ಇಲ್ಲಿಗೆ ಬಂದು ದೇವರ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇತ್ತು. ಇಷ್ಟು ಜಾಗ ಖಾಲಿ ಇದೆ. ಇದರಲ್ಲಿ ದೇವಸ್ಥಾನಕ್ಕೆ ಒಂದಿಷ್ಟು ಜಾಗ ಬಿಟ್ಟಿದ್ದರೆ ಏನಾಗುತ್ತಿತ್ತು ಎಂದು ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ.

    ಮೂರನೇ ಬಾರಿ ಶನೇಶ್ವರ ಶಿಫ್ಟಿಂಗ್:
    ಇದವರೆಗೂ ಮೂರು ಬಾರಿ ಶನೇಶ್ವರ ದೇವಸ್ಥಾನವನ್ನು ಶಿಫ್ಟ್ ಮಾಡಲಾಗಿದೆ. ಈ ಹಿಂದೆ ಶ್ರೀರಾಮಪುರದಿಂದ ಓಕಳಿಪುರಂಗೆ ದೇಗುಲವನ್ನು ಶಿಫ್ಟ್ ಮಾಡಲಾಗಿತ್ತು. ಬಳಿಕ ರಸ್ತೆ ಅಗಲೀಕರಣಕದ ಉದ್ದೇಶದಿಂದ ರೈಲ್ವೇ ಇಲಾಖೆಯು ಆರು ತಿಂಗಳ ಹಿಂದಷ್ಟೇ ಮೆಜೆಸ್ಟಿಕ್ ಸಮೀಪದ ಸ್ಥಳಕ್ಕೆ ಶಿಫ್ಟ್ ಮಾಡಿತ್ತು. ಇದೀಗ ಅಲ್ಲಿಂದಲೂ ಶನೇಶ್ವರನನ್ನು ಓಕಳೀಪುರಂನಲ್ಲಿರುವ ಅಯ್ಯಪ್ಪ ದೇಗುಲಕ್ಕೆ ಶಿಫ್ಟ್ ಮಾಡಿದ್ದಾರೆ.

  • ಅ.2ರಿಂದ ರೈಲ್ವೆ ಇಲಾಖೆಯಿಂದ ಪ್ಲಾಸ್ಟಿಕ್ ಬ್ಯಾನ್

    ಅ.2ರಿಂದ ರೈಲ್ವೆ ಇಲಾಖೆಯಿಂದ ಪ್ಲಾಸ್ಟಿಕ್ ಬ್ಯಾನ್

    ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲ್‍ಗಳು ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳು ವ್ಯಾಪಕವಾಗಿ ಬಳಕೆಯಲ್ಲಿದ್ದು, ಇದನ್ನು ತಡೆಗಟ್ಟಲು ರೈಲ್ವೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

    ಇದರ ಭಾಗವಾಗಿ ಭಾರತೀಯ ರೈಲ್ವೆ ತನ್ನ ವ್ಯಾಪ್ತಿಯಲ್ಲಿ ಒಂದು ಬಾರಿ ಬಳಸುವ(ಸಿಂಗಲ್ ಯುಸ್) ಪ್ಲಾಸ್ಟಿಕ್ ಪರಿಕರಗಳನ್ನು ನಿಷೇಧಿಸಲು ನಿರ್ಧರಿಸಿದ್ದು, ಈ ನಿಯಮ ಅಕ್ಟೋಬರ್ 2ರಿಂದ ಜಾರಿಗೆ ಬರಲಿದೆ.

    ಪ್ಲಾಸ್ಟಿಕ್ ನಿರ್ವಹಣೆ ಹಾಗೂ ಮರು ಬಳಕೆಗಾಗಿ ಈಗಾಗಲೇ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದ್ದು, ಮೊದಲ ಹಂತದಲ್ಲಿ 360 ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಟ್ಟು 1,853 ಪ್ಲಾಸ್ಟಿಕ್ ವಾಟರ್ ಬಾಟಲ್‍ಗಳನ್ನು ಪುಡಿ(ಪ್ಲಾಸ್ಟಿಕ್ ವಾಟರ್ ಬಾಟಲ್ ಕ್ರಶಿಂಗ್ ಮಷಿನ್) ಮಾಡುವ ಯಂತ್ರಗಳನ್ನು ಅಳವಡಿಸಿದೆ. ಆದರೂ ಸಹ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡುವ ಕ್ರಮಕ್ಕೆ ಮುಂದಾಗಿದೆ.

    ಇದೀಗ ರೈಲ್ವೆ ಮಂಡಳಿ ಐಆರ್‍ಸಿಟಿಸಿ(ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಡೆವಲಪ್‍ಮೆಂಟ್ ಕಾರ್ಪೋರೇಷನ್)ಗೆ ತಿಳಿಸಿದ್ದು, ಬಳಸಿದ ನಂತರ ಬಾಟಲಿಗಳನ್ನು ಸಂಸ್ಥೆಯಿಂದಲೇ ಮರಳಿ ಪಡೆಯಬೇಕೆಂದು ಸೂಚಿಸಿದೆ.

    ಝೋನಲ್ ರೈಲ್ವೆ ಹಾಗೂ ಉತ್ಪಾದನಾ ಘಟಕಗಳು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತಪ್ಪಿಸಲು ಪ್ರೋತ್ಸಾಹಿಸುವಂತೆ ಸೂಚಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಮರು ಬಳಕೆ ಮಾಡುವುದು ಹಾಗೂ ಪ್ಲಾಸ್ಟಿಕ್ ತಿರಸ್ಕರಿಸುವ ಮೂರು ಸೂತ್ರಗಳನ್ನು ರಚಿಸಲಾಗಿದೆ. ಅಲ್ಲದೆ, ಪ್ಲಾಸ್ಟಿಕ್ ಹೊರತುಪಡಿಸಿ ಮರು ಬಳಕೆ ಮಾಡಬಹುದಾದ ಕಡಿಮೆ ಬೆಲೆಯ ಚೀಲಗಳನ್ನು ಬಳಸುವಂತೆ ಜನರಿಗೆ ತಿಳುವಳಿಕೆ ನೀಡುವಂತೆ ಪ್ರಧಾನ ವ್ಯವಸ್ಥಾಪಕರು ರೈಲ್ವೆ ನೌಕರರಿಗೆ ಸೂಚನೆ ನೀಡಿದ್ದಾರೆ.

    ಭಾರತೀಯ ರೈಲ್ವೆಯು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಅನುಸರಿಸುತ್ತಿದ್ದು, ಪ್ಲಾಸ್ಟಿಕ್ ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳುತ್ತಿದೆ. ಅದರಂತೆ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡಲು, ಅಲ್ಲದೆ ಪ್ಲಾಸ್ಟಿಕ್‍ನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡುವ ಕುರಿತು ಕ್ರಮ ಕೈಗೊಳ್ಳಬೇಕಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.

  • ಪ್ರವಾಹದಲ್ಲಿ ಸಿಲುಕಿಕೊಳ್ತು 2 ಸಾವಿರ ಪ್ರಯಾಣಿಕರಿದ್ದ ರೈಲು

    ಪ್ರವಾಹದಲ್ಲಿ ಸಿಲುಕಿಕೊಳ್ತು 2 ಸಾವಿರ ಪ್ರಯಾಣಿಕರಿದ್ದ ರೈಲು

    – ರೈಲ್ವೇ ಇಲಾಖೆ ಮನವಿ
    – ಸ್ಥಳಕ್ಕೆ ದೌಡಾಯಿಸಿದ ಎನ್‍ಡಿಆರ್‍ಎಫ್ ಸಿಬ್ಬಂದಿ

    ಮುಂಬೈ: ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಮುಂಬೈ-ಕೊಲ್ಹಾಪುರ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಪ್ರವಾಹದ ನೀರಿನಲ್ಲಿ ಸಿಲುಕಿದೆ. ಸುಮಾರು 2 ಸಾವಿರ ಪ್ರಯಾಣಿಕರಿರುವ ಈ ರೈಲು ಬದ್ಲಾಪುರ ಮತ್ತು ವಂಗಣಿ ನಡುವೆ ನಿಲುಗಡೆಯಾಗಿದ್ದು, ನಿನ್ನೆ ರಾತ್ರಿಯಿಂದ ನಿಂತಲ್ಲೇ ನಿಂತಿದೆ.

    ಘಟನೆ ಕುರಿತು ಮಾಹಿತಿ ಪಡೆದ ರೈಲ್ವೇ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಪ್ರಯಾಣಿಕರಿಗೆ ನೀರು, ಬಿಸ್ಕೆಟ್ ನೀಡಿದ್ದಾರೆ. ಅಲ್ಲದೆ ಎನ್‍ಡಿಆರ್ ಎಫ್ ತಂಡ ಕಾರ್ಯಾಚರಣೆಗೆ ಇಳಿದಿದ್ದು, 8 ಬೋಟ್‍ಗಳೊಂದಿಗೆ ಸ್ಥಳಕ್ಕೆ ಸೇರಿಕೊಳ್ಳಲಿದೆ. ಈ ಕುರಿತು ಟ್ವೀಟ್ ಮಾಡಿರುವ ರೈಲ್ವೇ ಇಲಾಖೆ, ಪ್ರಯಾಣಿಕರನ್ನು ರೈಲಿನಿಂದ ಕೆಳಗೆ ಇಳಿಯದಂತೆ ಮನವಿ ಮಾಡಿದೆ.

    ಘಟನಾ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪ್ರಯಾಣಿಕರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದು, ಪ್ರಯಾಣಿಕರು ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿ ರಕ್ಷಣೆಗೆ ಮುಂದಾಗಿದ್ದಾರೆ. ರೈಲಿನಲ್ಲಿ ಇರುವ ಜನರಿಗೆ ಅಗತ್ಯವಾದ ಆರೋಗ್ಯ ಸೇವೆಯನ್ನು ನೀಡಲು ಕೂಡ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಪ್ರಯಾಣಿಕರನ್ನು ಕೊಲ್ಹಾಪುರಕ್ಕೆ ಕರೆತರಲು ಸಿದ್ಧತೆ ನಡೆಸಲಾಗಿದೆ.

    ಮಹಾರಾಷ್ಟ್ರದ ವಾಲ್ಧುನಿ ನದಿ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ನದಿ ಉಕ್ಕಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಮುಂಬೈ ಸುತ್ತ ಮುತ್ತ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು, ಈಗಾಗಲೇ ಹಲವು ರೈಲು ಹಾಗೂ ವಿಮಾನಗಳ ಸಮಯ ಬದಲಾಗಿದೆ ಎಂಬ ಮಾಹಿತಿ ಲಭಿಸಿದೆ.

  • ಗುಡ್ಡ ಕುಸಿತ: ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತ

    ಗುಡ್ಡ ಕುಸಿತ: ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತ

    ಹಾಸನ: ಮಂಗಳೂರು-ಬೆಂಗಳೂರು ನಡುವಿನ ರೈಲು ಮಾರ್ಗದಲ್ಲಿ ಇಂದು ಗುಡ್ಡ ಕುಸಿದ ಪರಿಣಾಮ ತಾತ್ಕಾಲಿಕವಾಗಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವ್ಯಾಪ್ತಿಯಲ್ಲಿರುವ ಶಿರುವಾಗಿಲು ಬಳಿ ಮಳೆ ಕಾರಣ ಇಂದು ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಕಂಡುಬಂದಿದೆ. ಮಾರ್ಗದ 86ನೇ ಮೈಲಿಯ ಸಮೀಪದಲ್ಲಿ ಇರುವ ರೈಲ್ವೆ ಸುರಂಗದ ಬಳಿ ಮಣ್ಣು ಕುಸಿಯುತ್ತಿದ್ದು ರೈಲ್ವೆ ಕಾರ್ಮಿಕರು ತೆರವು ಕಾರ್ಯ ಮುಂದುವರಿಸಿದ್ದಾರೆ.

    ಸದ್ಯ ಯಾವುದೇ ಅಪಾಯ ಇಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ರೈಲು ಸಂಚಾರ ಶೀಘ್ರ ಆರಂಭವಾಗುವುದಾಗಿ ಮಾಹಿತಿ ನೀಡಿದ್ದಾರೆ. ಕಳೆದ ವರ್ಷವೂ ಇದೇ ಭಾಗದಲ್ಲಿ ಭಾರೀ ಭೂ ಕುಸಿತ ಉಂಟಾಗಿ ರೈಲು ಮಾರ್ಗವನ್ನು ತಿಂಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಇಷ್ಟಾದರೂ ಸಹ ಈ ಕುರಿತು ಅಧಿಕಾರಿಗಳು ಹಾಗೂ ರಾಜಕಾರಣಿಗಳು ನಿರ್ಲಕ್ಷ್ಯವಹಿಸಿದ್ದು, ಗುಡ್ಡ ಕುಸಿತದಿಂದ ಸುರಕ್ಷತೆಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬಸವ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ: 3 ಗಂಟೆ ನಿಂತಲ್ಲೇ ನಿಂತ ರೈಲು

    ಬಸವ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ: 3 ಗಂಟೆ ನಿಂತಲ್ಲೇ ನಿಂತ ರೈಲು

    ಮಂಡ್ಯ: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸವ ಎಕ್ಸ್‌ಪ್ರೆಸ್‌ ರೈಲು 3 ಗಂಟೆಗಳ ಕಾಲ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಬಳಿ ನಿಂತಲ್ಲೇ ನಿಂತಿತ್ತು.

    ಮಧ್ಯಾಹ್ನ 12 ಗಂಟೆ ವೇಳೆಗೆ ಕೆಟ್ಟ ನಿಂತ ರೈಲು ಮಧ್ಯಾಹ್ನ 3:30ರ ವೇಳೆಗೆ ರಿಪೇರಿಯಾಗಿ ಹೊರಟಿತ್ತು. ಬೆಂಗಳೂರಿನಿಂದ ಮೈಸೂರಿಗೆ ರೈಲು ತೆರಳುತ್ತಿರುವ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಬಸ್ ಸಂಪರ್ಕವೂ ಸರಿಯಾಗಿಲ್ಲದ ಮಾರ್ಗದಲ್ಲಿ ರೈಲು ಕೆಟ್ಟು ನಿಂತಿತ್ತು. ಹೀಗಾಗಿ ಅನ್ಯ ಮಾರ್ಗವಿಲ್ಲದೆ ಪ್ರಯಾಣಿಕರು ರೈಲಿನಲ್ಲೇ ಕುಳಿತು ಕುಳಿತುಕೊಳ್ಳಬೇಕಾಯಿತು.

    ಊಟದ ಸಮಯದ ವೇಳೆಯೇ ರೈಲು ಕೆಟ್ಟು ನಿಂತಿ ಪರಿಣಾಮ, ಚಿಕ್ಕ ಮಕ್ಕಳು, ವೃದ್ಧರು ಹಾಗೂ ಮಹಿಳೆಯಲು ಹಸಿವಿನಿಂದ ಪರದಾಡಿದರು.

  • ರೈಲಿನಲ್ಲಿಯೇ ಹೆರಿಗೆ ಮಾಡಿಸಿದ ಟಿಟಿಇ- ಬೇಷ್ ಎಂದ ರೈಲ್ವೇ ಇಲಾಖೆ

    ರೈಲಿನಲ್ಲಿಯೇ ಹೆರಿಗೆ ಮಾಡಿಸಿದ ಟಿಟಿಇ- ಬೇಷ್ ಎಂದ ರೈಲ್ವೇ ಇಲಾಖೆ

    ನವದೆಹಲಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಟಿಟಿಇ (Travelling Ticket Examiner) ಯೊಬ್ಬರು ಹೆರಿಗೆ ಮಾಡಿಸಿ ಮಾನವೀಯತೆ ಮೆರೆದು ಬೇಷ್ ಎನಿಸಿಕೊಂಡಿದ್ದಾರೆ.

    ಹೌದು. ಬಸ್ ಹಾಗೂ ರೈಲ್ವೇ ನಿಲ್ದಾಣದಲ್ಲಿ ಹೆರಿಗೆಯಾಗಿರುವ ಬಗ್ಗೆ ಹಲವು ಸುದ್ದಿಗಳನ್ನು ನೋಡಿರಬಹುದು. ದೆಹಲಿ ವಿಭಾಗದ ರೈಲ್ವೇ ಟಿಟಿಇ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಎಸ್. ರಾಣಾ ಅವರು ಕಾರ್ಯಕ್ಕೆ ರೈಲ್ವೇ ಇಲಾಖೆ ಬೇಷ್ ಎಂದಿದೆ. ರೈಲಿನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಕೊಂಡಿತ್ತು. ಈ ವೇಳೆ ರೈಲಿನಲ್ಲಿ ವೈದ್ಯರು ಇಲ್ಲದ ಕಾರಣ ರಾಣಾ ಅವರೇ ಇತರೇ ಪ್ರಯಾಣಿಕರ ಸಹಾಯ ಪಡೆದು ಹೆರಿಗೆ ಮಾಡಿಸಿದ್ದಾರೆ.

    ಟಿಟಿಇ ಈ ಕೆಲಸವನ್ನು ಭಾರತೀಯ ರೈಲ್ವೆ ಇಲಾಖೆ ಮೆಚ್ಚಿದೆ. ರಾಣಾ ಅವರ ಮಾನವೀಯ ಮತ್ತು ಉದಾತ್ತ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ರೈಲ್ವೇ ಸಚಿವಾಲಯವು ಟ್ವೀಟ್ ಮಾಡಿ ಸಿಬ್ಬಂದಿ ಕೆಲಸವನ್ನು ಹೆಮ್ಮೆಯಿಂದ ಹೇಳಿಕೊಂಡಿದೆ.

    ಟ್ವೀಟ್‍ನಲ್ಲಿ ಏನಿದೆ?
    ಭಾರತೀಯ ರೈಲ್ವೇ ಇಲಾಖೆ ಪ್ರಯಾಣಿಕರ ಮೊಗದಲ್ಲಿ ನಗು ಮೂಡಿಸಿದೆ. ದೆಹಲಿ ವಿಭಾಗದ ಟಿಟಿಇ ಎಚ್.ಎಸ್ ರಾಣಾ ಅವರು ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಗೆ ರಾತ್ರಿ ಇತರೆ ಪ್ರಯಾಣಿಕರ ಸಹಾಯ ಪಡೆದು ಹೆರಿಗೆ ಮಾಡಿಸಿದ್ದಾರೆ. ರೈಲಿನಲ್ಲಿ ವೈದ್ಯರು ಇರದ ಕಾರಣ ಅವರೇ ಹೆರಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಸಿಬ್ಬಂದಿಯ ಈ ಕಾರ್ಯಕ್ಕೆ ನಾವು ಹೆಮ್ಮೆ ಪಡುತ್ತೇವೆ ಎಂದು ಬರೆದು ಟ್ವೀಟ್ ಮಾಡಿದೆ.