Tag: railway bridge

  • ಅಪಾಯ ಮಟ್ಟ ಮೀರಿದ ಯಮುನಾ ನದಿ – ದೆಹಲಿ ಸಚಿವಾಲಯಕ್ಕೂ ನುಗ್ಗಿದ ಪ್ರವಾಹ ನೀರು

    ಅಪಾಯ ಮಟ್ಟ ಮೀರಿದ ಯಮುನಾ ನದಿ – ದೆಹಲಿ ಸಚಿವಾಲಯಕ್ಕೂ ನುಗ್ಗಿದ ಪ್ರವಾಹ ನೀರು

    – 10,000ಕ್ಕೂ ಅಧಿಕ ಮಂದಿ ಸ್ಥಳಾಂತರ

    ನವದೆಹಲಿ: ದೆಹಲಿಯಲ್ಲಿ ಉಕ್ಕಿ ಹರಿಯುತ್ತಿರುವ ಯಮುನಾ ನದಿಯಿಂದ ಬರುವ ಪ್ರವಾಹದ (Yamuna flood) ನೀರು ಹತ್ತಿರದ ಪ್ರದೇಶಗಳನ್ನು ಮುಳುಗಿಸಿವೆ. ಅಲ್ಲದೇ ಪ್ರವಾಹದ ನೀರು ದೆಹಲಿ ಸಚಿವಾಲಯಕ್ಕೂ ನುಗ್ಗಿದೆ.

    ಅಧಿಕೃತ ಮಾಹಿತಿಯ ಪ್ರಕಾರ, ನಸುಕಿನ ಜಾವ 2 ಗಂಟೆಯಿಂದ 5ರ ವರೆಗೆ ನೀರಿನ ಮಟ್ಟ 207.47 ಮೀಟರ್‌ನಲ್ಲಿ ಸ್ಥಿರವಾಗಿತ್ತು. ಬೆಳಗ್ಗೆ 6 ರಿಂದ 7ರ ವರೆಗೂ 207.48 ಮೀಟರ್‌ನಲ್ಲಿ ನೀರಿನ ಮಟ್ಟ ಇತ್ತು. ಬಳಿಕ ನೀರಿನ ಪ್ರಮಾಣ ಹೆಚ್ಚಾಗಿದ್ದು, ಯಮುನೆಯ ಆಕ್ರೋಶ ಕಟ್ಟೆಯೊಡೆದಂತಾಗಿದೆ. ಇದನ್ನೂ ಓದಿ: ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಮೂತಿಗೆ ಹಕ್ಕಿ ಡಿಕ್ಕಿ

    ದೆಹಲಿ ಮುಖ್ಯಮಂತ್ರಿ (Delhi CM), ಸಂಪುಟ ಸಚಿವರು ಮತ್ತು ಪ್ರಮುಖ ಅಧಿಕಾರಿಗಳ ಕಚೇರಿಗಳನ್ನು ಹೊಂದಿರುವ ದೆಹಲಿ ಸಚಿವಾಲಯದ (Delhi Ministry) ಬಳಿಗೂ ಪ್ರವಾಹ ನೀರು ನುಗ್ಗಿದೆ. ವಾಸುದೇವ್ ಘಾಟ್ ಸುತ್ತಮುತ್ತಲಿನ ಪ್ರದೇಶಗಳು ಸಹ ಜಲಾವೃತಗೊಂಡವು. ಕಾಶ್ಮೀರಿ ಗೇಟ್ ಬಳಿಯ ಶ್ರೀ ಮಾರ್ಗಟ್ ವಾಲೆ ಹನುಮಾನ್ ಬಾಬಾ ಮಂದಿರಕ್ಕೂ ಪ್ರವಾಹ ನೀರು ಆವರಿಸಿದೆ. ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್‌ ಆ್ಯಪ್ ಪ್ರಕರಣ – ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌ಗೆ ಇಡಿ ಸಮನ್ಸ್‌

    ಕಂದಾಯ ಇಲಾಖೆಯ ಪ್ರಕಾರ, 8,018 ಜನರನ್ನ ಡೇರೆಗಳಿಗೆ ಸ್ಥಳಾಂತರಿಸಲಾಗಿದ್ದು, 2,030 ಜನರನ್ನು 13 ಶಾಶ್ವತ ಆಶ್ರಯಗಳಿಗೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿಯ ಬಗ್ಗೆ ದೆಹಲಿ ಸರ್ಕಾರ 24/7 ನಿಗಾ ಇಡುತ್ತಿದೆ. ಇದನ್ನೂ ಓದಿ: ಇನ್ಮುಂದೆ ಜಿಎಸ್‌ಟಿಯಲ್ಲಿ 2 ಸ್ಲ್ಯಾಬ್‌ – ಸೆ.22 ರಿಂದ ಜಾರಿ| ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪಟ್ಟಿ

  • ದೇಶದ ಮೊದಲ ವರ್ಟಿಕಲ್ ಪಂಬನ್ ರೈಲ್ವೆ ಬ್ರಿಡ್ಜ್ – ಇದರ ವಿಶೇಷತೆಯೇನು?

    ದೇಶದ ಮೊದಲ ವರ್ಟಿಕಲ್ ಪಂಬನ್ ರೈಲ್ವೆ ಬ್ರಿಡ್ಜ್ – ಇದರ ವಿಶೇಷತೆಯೇನು?

    ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆಗೆ ಸಜ್ಜಾಗಿದೆ. ರಾಮೇಶ್ವರಂಗೆ ತೆರಳುವ ಭಕ್ತರಿಗೆ, ಧನುಷ್ಕೋಡಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಪಂಬನ್ ಬ್ರಿಡ್ಜ್‌(Pamban Bridge) ಅನ್ನು ನಿರ್ಮಿಸಲಾಗಿದೆ. ಸಮುದ್ರದಲ್ಲಿ ನಿರ್ಮಿಸಲಾದ ಮೊದಲ ವರ್ಟಿಕಲ್ ಲಿಫ್ಟ್ ಸೇತುವೆ ಇದಾಗಿದ್ದು, ಈ ಸೇತುವೆಯನ್ನು ರಾಮನವಮಿಯಂದು ಪ್ರಧಾನಿ ಮೋದಿಯವರು(Narendra Modi) ಲೋಕಾರ್ಪಣೆ ಮಾಡಲಿದ್ದಾರೆ.

    ಪಂಬನ್ ರೈಲು ಸೇತುವೆಯ ನಿರ್ಮಾಣದ ಕಾರ್ಯವನ್ನು 1870ರಲ್ಲಿ ಬ್ರಿಟಿಷ್ ಸರ್ಕಾರವು ಶ್ರೀಲಂಕಾಕ್ಕೆ ವ್ಯಾಪಾರ ಸಂಪರ್ಕವನ್ನು ವಿಸ್ತರಿಸಲು ನಿರ್ಧರಿಸಿದಾಗ ಪ್ರಾರಂಭಿಸಲಾಯಿತು. ಸುಮಾರು 2.2 ಕಿ.ಮೀ.ಗಳಷ್ಟು ವಿಸ್ತಾರವಿದ್ದ, 143 ಪಿಯರ್‌ಗಳನ್ನು ಹೊಂದಿರುವ ಇದನ್ನು 1914ರಲ್ಲಿ ಅಧಿಕೃತವಾಗಿ ಕಾರ್ಯರೂಪಕ್ಕೆ ತರಲಾಯಿತು.

    ಪಂಬನ್ ರೈಲು ಸೇತುವೆಯು ಶೆರ್ಜರ್ ರೋಲಿಂಗ್ ಲಿಫ್ಟ್ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ದೋಣಿ ಅಥವಾ ಹಡಗು ಚಲಿಸುವಾಗ 90 ಡಿಗ್ರಿ ಕೋನದಲ್ಲಿ ಮೇಲಕ್ಕೆ ತೆರೆಯುತ್ತದೆ. ಸಮುದ್ರದ ಮೇಲೆ ನಿರ್ಮಿಸಲಾದ ಭಾರತದ ಅತಿ ಉದ್ದದ ಸೇತುವೆಯಾಗಿದೆ. ಪಂಬನ್ ರೈಲ್ವೆ ಸೇತುವೆಯು 1988ರವರೆಗೆ ರಾಮೇಶ್ವರಂ ಮತ್ತು ಮುಖ್ಯ ಭೂಭಾಗದ ನಡುವಿನ ಏಕೈಕ ಸಂಪರ್ಕವಾಗಿತ್ತು. ನಂತರ ಅದಕ್ಕೆ ಸಮಾನಾಂತರವಾಗಿ ರಸ್ತೆ ಸೇತುವೆಯನ್ನು ನಿರ್ಮಿಸಲಾಯಿತು.

    78 ಮೀಟರ್ ಉದ್ದ ಮತ್ತು 380 ಟನ್ ತೂಕದ ಸೇತುವೆಯ ಒಂದು ಭಾಗವು ಹಡಗು ಸಂಚಾರಕ್ಕಾಗಿ 17 ಮೀಟರ್ ಎತ್ತರಕ್ಕೆ ಹೋಗುತ್ತದೆ. ತಮಿಳುನಾಡಿನ ಮಂಟಪಂದಿಂದ ರಾಮೇಶ್ವರಂ ದ್ವೀಪವನ್ನು ಸಂಪರ್ಕಿಸಲು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಈ ಸೇತುವೆಯನ್ನು ನಿರ್ಮಿಸಲಾಗಿದೆ. 111 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದ ಹಳೆಯ ಸೇತುವೆ ಶಿಥಿಲಗೊಂಡಿದ್ದರಿಂದ ಅದರ ಪಕ್ಕದಲ್ಲಿಯೇ ಈ ಹೊಸ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆಯಲ್ಲಿ ಟ್ರ್ಯಾಕ್ ಡಬ್ಲಿಂಗ್ ಹಾಗೂ ವಿದ್ಯುತ್ ಕಾಮಗಾರಿ ಕೂಡ ಮಾಡಲಾಗಿದೆ. ರೈಲ್ವೆ ಟ್ರ್ಯಾಕ್ ಸೇರಿದಂತೆ ಈ ಸೇತುವೆಯ ತೂಕ 660 ಮೆಟ್ರಿಕ್ ಟನ್ ಇದೆ.

    ಸಮುದ್ರದಲ್ಲಿ ಸೇತುವೆ ನಿರ್ಮಾಣಕ್ಕೆ ಮರಳು ಹಾಗೂ ಉಪ್ಪು‌ನೀರು ಸವಾಲಾಗಿರುತ್ತದೆ. ಇದರಿಂದ ಬೇಗ ತುಕ್ಕು ಸಹ ಹಿಡಿಯುತ್ತದೆ. ಇದನ್ನು ತಡೆಗಟ್ಟಲು ಸಾಕಷ್ಟು ತಾಂತ್ರಿಕತೆ ಬಳಸಿಕೊಳ್ಳಲಾಗಿದೆ. ಹಳೇ ಬ್ರಿಡ್ಜ್ 1914ರಿಂದ 2021ರವರೆಗೆ ಕಾರ್ಯನಿರ್ವಹಿಸಿದೆ. ಈ ಬಾರಿಯ ನೂತನ ಪಂಬನ್ ಬ್ರಿಡ್ಜ್ ತುಕ್ಕು ಹಿಡಿಯಬಾರದು ಎಂಬ ಕಾರಣಕ್ಕೆ ನಿರಂತರವಾಗಿ ಡಬಲ್ ಕೋಟ್ ಪೇಯಿಂಟ್ ಹಾಕಲಾಗಿದೆ. ಇದು ತುಕ್ಕು ರಹಿತ ಪೇಯಿಂಟ್ ಆಗಿದೆ.

    ಹಳೇ ಬ್ರಿಡ್ಜ್‌ ಮಾನವ ಸಹಿತವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈ ನೂತನ ಬ್ರಿಡ್ಜ್‌ ಮಾನವ ರಹಿತವಾಗಿ ಕಾರ್ಯನಿರ್ವಹಿಸುತ್ತದೆ. ಇದು ಎಲೆಕ್ಟ್ರಿಕಲ್ ಆಟೋ‌ಮೆಕ್ಯಾನಿಕಲ್ ತಂತ್ರಜ್ಞಾನ ಒಳಗೊಂಡಿದೆ. ಹಳೇ ಬ್ರಿಡ್ಜ್ ತೆರೆದುಕೊಳ್ಳಲು 45 ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು. ಆದರೆ ಹೊಸ ಬ್ರಿಡ್ಜ್ 5.3 ನಿಮಿಷದಲ್ಲಿ ತೆರೆದುಕೊಳ್ಳಲಿದೆ. ಒಂದು ಬಾರಿ ಈ ಸೇತುವೆಯನ್ನು ಮೇಲೆ ಎತ್ತಲು 120 ಕಿಲೋ ವ್ಯಾಟ್ ವಿದ್ಯುತ್ ಬೇಕಾಗುತ್ತದೆ.

    ಇದರ ವಿಶೇಷತೆಯೇನು?
    – 2.5 ಕಿ.ಮೀ ಉದ್ದದ ದೇಶದ ಮೊದಲ ವರ್ಟಿಕಲ್‌ ಲಿಫ್ಟ್‌ ರೈಲು ಸೇತುವೆ
    – ಇದು ಮಾನವ ರಹಿತವಾಗಿ ಕಾರ್ಯನಿರ್ವಹಿಸುತ್ತದೆ
    – ಹಡಗು ಸಂಚಾರ ವೇಳೆ ಮೇಲಕ್ಕೆತ್ತಲ್ಪಟ್ಟು ಮತ್ತೆ ಅದೇ ಸ್ಥಾನಕ್ಕೆ ಮರಳುತ್ತದೆ
    – ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಯಾತ್ರಾರ್ಥಿಗಳಿಗೆ ಅನುಕೂಲ
    – ಮುಖ್ಯಭೂಮಿಯಿಂದ ರಾಮೇಶ್ವರಂಗೆ 5 ನಿಮಿಷದ ಪ್ರಯಾಣ
    – 535 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸೇತುವೆ
    – ಸೇತುವೆಯಲ್ಲಿ ಚಲಿಸುವ ರೈಲಿನ ವೇಗದ ಮಿತಿ ಗಂಟೆಗೆ 75 ಕಿ.ಮೀ
    – ಶೆರ್ಜರ್ ರೋಲಿಂಗ್ ಲಿಫ್ಟ್ ತಂತ್ರಜ್ಞಾನದ ಬಳಕೆ
    – ತುಕ್ಕು ಹಿಡಿಯದಂತೆ ತುಕ್ಕು ರಹಿತ ಡಬಲ್ ಕೋರ್ಟ್ ಪೇಯಿಂಟ್ ಬಳಕೆ
    – ಸೇತುವೆಯನ್ನು ಮೇಲೆ ಎತ್ತಲು 120 ಕಿಲೋ ವ್ಯಾಟ್ ವಿದ್ಯುತ್

    ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini Vaishnaw) ಅವರು ಪಂಬನ್ ರೈಲು ಸೇತುವೆಯ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ವೇಗದ ರೈಲುಗಳು ಮತ್ತು ಹೆಚ್ಚಿದ ಜನದಟ್ಟಣೆಯನ್ನು ನಿರ್ವಹಿಸುವಂತೆ ಈ ಸೇತುವೆಯ ನಿರ್ಮಾಣ ಮಾಡಲಾಗಿದೆ. ಹೊಸ ಪಂಬನ್ ಸೇತುವೆ ಕೇವಲ ಕ್ರಿಯಾತ್ಮಕವಾಗಿಲ್ಲ. ಇದು ಪ್ರಗತಿಯ ಸಂಕೇತವಾಗಿದ್ದು, ಈ ಸೇತುವೆ ನಿರ್ಮಾಣಕ್ಕೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಇಂಜಿನಿಯರ್ ಗಳ ಕೈಚಳಕವು ಇಡೀ ಭಾರತ ಹುಬ್ಬೇರಿಸುವಂತೆ ಮಾಡಿದೆ ಎಂದು ಶ್ಲಾಘಿಸಿದ್ದಾರೆ.

    ಭಾರತದ ಮೊದಲ ಲಂಬ ಲಿಫ್ಟ್ ಪಂಬನ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 6 ರಾಮ ನವಮಿಯಂದು ಉದ್ಘಾಟಿಸಲಿದ್ದಾರೆ.

  • ತುಮಕೂರು ಜಿಲ್ಲೆಗೆ ಮೂರು ರೈಲ್ವೆ ಸೇತುವೆ ಮಂಜೂರು

    ತುಮಕೂರು ಜಿಲ್ಲೆಗೆ ಮೂರು ರೈಲ್ವೆ ಸೇತುವೆ ಮಂಜೂರು

    ನವದೆಹಲಿ: ತುಮಕೂರು (Tumakuru) ಜಿಲ್ಲೆಗೆ ರೈಲ್ವೆಯ 2 ಕೆಳ ಸೇತುವೆ, 1 ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ರೈಲ್ವೆ ಸಚಿವಾಲಯ ಮಂಜೂರು ಮಾಡಿದೆ. ಈ ಮೂರು ಸೇತುವೆಗಳು ಒಟ್ಟು 60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸೋಮಣ್ಣ (V.Somanna) ತಿಳಿಸಿದ್ದಾರೆ.

    ಕಲ್ಲಿಪಾಳ್ಯ ರೋಡ್ (ರಸ್ತೆ ಕೆಳ ಸೇತುವೆ 13.44 ಕೋಟಿ ರೂ.), ಬೆಂಚಗೆರೆ ಗೇಟ್ (ರಸ್ತೆ ಮೇಲ್ಸೇತುವೆ 36.62 ಕೋಟಿ ರೂ.), ಬಂಡಿಹಳ್ಳಿ ರೋಡ್ ಗೇಟ್ (ರಸ್ತೆ ಕೆಳ ಸೇತುವೆ 10.01 ಕೋಟಿ ರೂ.) ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದನ್ನೂ ಓದಿ: ಫೋರ್ಜರಿ ಸಹಿ ಮಾಡಿದ್ರೆ ಏಕೆ ದೂರು ಕೊಡಲಿಲ್ಲ?: ಹೆಚ್‍ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ

    ಈ ಹಿಂದೆ 5 ಮೇಲ್ಸೇತುವೆ ಕಾಮಗಾರಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ತುಮಕೂರು ನಗರದಲ್ಲಿ 3, ನಗರದ ಹೊರ ವಲಯದ ಹರಿಯೂರು (ಮಲ್ಲಸಂದ್ರ) ಬಳಿ 1, ಗುಬ್ಬಿ ತಾಲ್ಲೂಕಿನ ನಿಟ್ಟೂರು ರೈಲ್ವೆ ಸ್ಟೇಷನ್ ಬಳಿ 1 ಸೇರಿ ಒಟ್ಟು 5 ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸಲು 350 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆದೇಶಿಸಿತ್ತು.

  • ಉಡುಪಿ ರೈಲ್ವೇ ಬ್ರಿಡ್ಜ್‌ನಲ್ಲಿ ನಿತ್ಯಾನಂದ ಬಾಬಾ ಉರುಳುಸೇವೆ

    ಉಡುಪಿ ರೈಲ್ವೇ ಬ್ರಿಡ್ಜ್‌ನಲ್ಲಿ ನಿತ್ಯಾನಂದ ಬಾಬಾ ಉರುಳುಸೇವೆ

    ಉಡುಪಿ: ಜಿಲ್ಲೆಯ ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಇಂದ್ರಾಳಿ ಬ್ರಿಡ್ಜ್ ಬಳಿಯ ರಸ್ತೆ ಅವ್ಯವಸ್ಥೆಯನ್ನು ಖಂಡಿಸಿ ಇಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಅವರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

    ಇಂದ್ರಾಳಿ ಬ್ರಿಡ್ಜ್‌ನ ಹೊಂಡ ಗುಂಡಿ ರಸ್ತೆಗೆ ಆರತಿ ಎತ್ತಿ, ತೆಂಗಿನಕಾಯಿ ಒಡೆದು ಗುಂಡಿ ರಸ್ತೆ ಮೇಲೆ ಉರುಳು ಸೇವೆ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸಲು ಮುಂದಾದರು. ಈ ರಸ್ತೆಗೆ ಟೆಂಡರ್ ಆಗಿ ಮೂರು ವರ್ಷಗಳಿಂದ ರಸ್ತೆ ಹಾಳಾದರೂ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಪ್ರತಿನಿತ್ಯ ಸಾವಿರಾರು ಜನರು ಈ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ಸ್ವತಃ ಮುಖ್ಯಮಂತ್ರಿಗಳೇ ಈ ರಸ್ತೆಯಲ್ಲಿ ಸಂಚಾರ ಮಾಡಿದರೂ ಕೂಡಾ ಅವರ ಕಣ್ಣಿಗೂ ಈ ರಸ್ತೆಯ ಸಮಸ್ಯೆ ಕಂಡು ಬಂದಿಲ್ಲ. ಇಲ್ಲಿನ ಹೊಂಡಗಳನ್ನು ರಿಪೇರಿ ಮಾಡಲು ಸ್ವತಃ ಮೋದಿ ಮತ್ತು ನಿತಿನ್ ಗಡ್ಕರಿ ಬರಬೇಕಾದ ಅನಿವಾರ್ಯತೆ ಇದೆ.

    ಉಡುಪಿ ಜನರು ಮುಗ್ಧರು, ಯಾರೂ ಪ್ರಶ್ನೆ ಮಾಡುವುದಿಲ್ಲ. ಮಾನ್ಯ ಪ್ರಧಾನ ಮಂತ್ರಿಗಳು ಉಡುಪಿಗೆ ಬಂದು ಜನರ ಸಮಸ್ಯೆ ಬಗೆಹರಿಸಲಿ. ಈ ರಸ್ತೆಯಲ್ಲಿ ಬೀದಿ ದೀಪ ಕೂಡಾ ಇಲ್ಲ. ಇದರಿಂದಾಗಿ ದನ ಕರುಗಳು ಸಾಯುತ್ತವೆ. ದನ ಕರುಗಳ ಹೆಸರಿನಲ್ಲಿ ವೋಟ್ ತೆಗೆದುಕೊಳ್ಳುವ ಇವರಿಗೆ ಇದು ಕಾಣುವುದಿಲ್ಲವಾ. ಮೊನ್ನೆ ಮುಖ್ಯಮಂತ್ರಿಯವರು ಬರುವ ಸಂದರ್ಭದಲ್ಲಿ ಹಾಕಿದ ಡಾಂಬಾರ್ ಒಂದೇ ದಿನದಲ್ಲಿ ಕಿತ್ತು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನಲಪಾಡ್‌ ಅಕಾಡೆಮಿಯಿಂದ ರಾಜಕಾಲುವೆ ಒತ್ತುವರಿ – ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ BBMP ಹಿಂದೇಟು!

    ಇಂದ್ರಾಳಿಯ ಈ ಭಾಗದಲ್ಕಿ ಪ್ರತಿನಿತ್ಯ ವಾಹನ ಸವಾರರು ಓಡಾಟಮಾಡಲು ಪರದಾಡುತ್ತಾರೆ. ದ್ವಿಚಕ್ರ ಮತ್ತು ಇತರ ವಾಹನಗಳ ಸವಾರರು ನಿರಂತರವಾಗಿ ಸಂಕಷ್ಟ ಅನುಭವಿಸುತಿದ್ದಾರೆ. ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಇದೇ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದು ಸಮಸ್ಯೆ ಅರಿತಿರುವವರು ಈ ಬಗ್ಗೆ ಕೂಡಲೇ ಗಮನ ಕೊಡಬೇಕು ಎಂದು ಒತ್ತಾಯಿಸಲಾಯಿತು. ಇದನ್ನೂ ಓದಿ: ನೀವು ಹಿಂದೂ ಆಗಿರುವವರೆಗೂ ಅಸ್ಪೃಶ್ಯರಾಗಿರುತ್ತೀರಾ – ಡಿಎಂಕೆ ಸಂಸದನ ಹೇಳಿಕೆಗೆ ಬಿಜೆಪಿ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ – ಚಕ್ಕಿ ನದಿ ಮೇಲಿನ ರೈಲ್ವೆ ಸೇತುವೆ ಕುಸಿತ

    ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ – ಚಕ್ಕಿ ನದಿ ಮೇಲಿನ ರೈಲ್ವೆ ಸೇತುವೆ ಕುಸಿತ

    ಶಿಮ್ಲಾ: ಭಾರೀ ಮಳೆಯಿಂದಾಗಿ ಪಂಜಾಬ್ ಮತ್ತು ಹಿಮಾಚಲ ಪ್ರದೇಶವನ್ನು ಸಂಪರ್ಕಿಸುವ ಚಕ್ಕಿ ನದಿಯ ಮೇಲಿನ ರೈಲ್ವೆ ಸೇತುವೆ ಶನಿವಾರ ಕುಸಿದಿದೆ.

    ಹಿಮಾಚಲ ಪ್ರದೇಶದಲ್ಲಿರುವ ಬಲ್ಹ್, ಸದರ್, ಥುನಾಗ್, ಮಂಡಿ, ಲಮಾಥಾಚ್ ಸ್ಥಳಗಳಲ್ಲಿ ಧಾರಕಾರ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಶಾಲೆಗಳಿಗೆ ಶನಿವಾರ ರಜೆಯನ್ನು ಜಿಲ್ಲಾಧಿಕಾರಿ ಅರಿಂದಮ್ ಚೌಧರಿ ಅವರು ಘೋಷಿಸಿದ್ದರು. ಇದನ್ನೂ ಓದಿ: ಅಪ್ಪಾ, ನೀವು ಯಾವಾಗ್ಲೂ ನನ್ನ ಹೃದಯದಲ್ಲಿದ್ದೀರಿ- ರಾಜೀವ್ ಗಾಂಧಿ ಜನ್ಮದಿನದಂದು ನೆನೆದ ರಾಹುಲ್

    ಕಳೆದೆರಡು ದಿನಗಳಿಂದ ಮಂಡಿಯಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ (ಕಾಲೇಜುಗಳು ಮತ್ತು ಐಟಿಐ ಹೊರತುಪಡಿಸಿ) ಆಗಸ್ಟ್ 20ರಂದು ರಜೆ ನೀಡಲು ನಿರ್ಧರಿಸಲಾಗಿದೆ ಎಂದು ಶುಕ್ರವಾರ ಸಂಜೆ ಆದೇಶ ಹೊರಡಿಸಲಾಗಿತ್ತು. ಇದನ್ನೂ ಓದಿ: ಮೋದಿ, ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಅವಹೇಳನಕಾರಿ ಪೋಸ್ಟ್ – ಕಾನ್‍ಸ್ಟೇಬಲ್ ಅಮಾನತು

    Live Tv
    [brid partner=56869869 player=32851 video=960834 autoplay=true]

  • ರೇಲ್ವೆ ಮೇಲ್ಸೇತುವೆ ಕಳಪೆ ಕಾಮಗಾರಿ- ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಜೋಶಿ ಆದೇಶ

    ರೇಲ್ವೆ ಮೇಲ್ಸೇತುವೆ ಕಳಪೆ ಕಾಮಗಾರಿ- ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಜೋಶಿ ಆದೇಶ

    ಹುಬ್ಬಳ್ಳಿ: ಲಕ್ಷ್ಮೇಶ್ವರ-ಮುನವಳ್ಳಿ ರಾಜ್ಯ ಹೆದ್ದಾರಿಯಲ್ಲಿ ಕುಂದಗೋಳ ತಾಲೂಕಿನ ಶಿರೂರ ಗ್ರಾಮದ ಬಳಿ ನಿರ್ಮಿಸಿರುವ ರೇಲ್ವೇ ಮೇಲ್ಸೇತುವೆ, ಪೂರ್ಣಗೊಂಡು ಹಸ್ತಾಂತರವಾದ 6 ರಿಂದ 7 ತಿಂಗಳಲ್ಲಿ ಹಾನಿಯಾಗಿದ್ದು, ಕಳಪೆ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಕಾಮಗಾರಿ ಕೈಗೊಂಡ ಗುತ್ತಿಗೆದಾರರು, ನಿರ್ವಹಿಸಿದ ಅಂದಿನ ಕೆಆರ್‍ಡಿಸಿಎಲ್ ಅಧಿಕಾರಿಗಳನ್ನು ಹೊಣೆ ಮಾಡಬೇಕು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಕುರಿತು ವಿವರವಾದ ವರದಿಯನ್ನು ಸರ್ಕಾರಕ್ಕೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ಶಿರೂರ ಬಳಿ ಹಾನಿಗೀಡಾಗಿರುವ ರೇಲ್ವೆ ಮೇಲ್ಸೇತುವೆ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಣೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೇತುವೆ ಒಂದೇ ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿಗೀಡಾಗಲು ಸಾಧ್ಯವಿಲ್ಲ. ಕಾಮಗಾರಿ ಕಳಪೆಯಾಗಿದೆ, ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರೊಂದಿಗೂ ಚರ್ಚಿಸಲಾಗಿದೆ. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ವೆಚ್ಚ ಮಾಡಿದ ಹಣ ಮರು ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದರು.

    ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ಕಾಮಗಾರಿ ಶೀಘ್ರ ಪ್ರಾರಂಭಿಸಬೇಕು ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರ ಪ್ರಾರಂಭವಾದರೆ ತೊಂದರೆಯಾಗುತ್ತದೆ. ಪರ್ಯಾಯ ರಸ್ತೆ ಕಲ್ಪಿಸಬೇಕು ಎಂದರು.

    ರಾಜ್ಯ ಕೃಷಿ ಉತ್ಪನ್ನ ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ.ಚೌಡಣ್ಣವರ ಮತ್ತಿತರರು ಉಪಸ್ಥಿತರಿದ್ದರು.

    ಕುಂದಗೋಳ ತಾಲೂಕಿನಲ್ಲಿ 1,400 ಡೋಸ್ ಲಸಿಕೆ ಲಭ್ಯ
    ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ 500 ಹಾಗೂ ತಾಲೂಕಿನ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಒಟ್ಟು ತಾಲೂಕಿನಲ್ಲಿ 1,400 ಡೋಸ್ ಕೋವಿಡ್ ಲಸಿಕೆ ಲಭ್ಯ ಇದೆ. ಗ್ರಾಮೀಣ ಜನರು ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಂಡು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ನಗರ ಪ್ರದೇಶಗಳಲ್ಲಿ ಲಸಿಕೆಗೆ ಜನ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಗ್ರಾಮೀಣ ಜನರು ಅನಗತ್ಯವಾಗಿ ಭಯಪಡಬಾರದು. ಅಪಪ್ರಚಾರಗಳಿಗೆ ಕಿವಿಗೊಡಬಾರದು, ಲಸಿಕೆಯಿಂದ ಜೀವರಕ್ಷಣೆಯಾಗಲಿದೆ. ಗ್ರಾಮೀಣ ಜನ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪ್ರಹ್ಲಾದ್ ಜೋಶಿ ಮನವಿ ಮಾಡಿದರು.

  • ರಾತ್ರೋ ರಾತ್ರಿ ಕಾಣೆಯಾಯ್ತು 23 ಮೀ. ಉದ್ದದ, 56 ಟನ್ ತೂಕದ ರೈಲ್ವೇ ಬ್ರಿಡ್ಜ್

    ರಾತ್ರೋ ರಾತ್ರಿ ಕಾಣೆಯಾಯ್ತು 23 ಮೀ. ಉದ್ದದ, 56 ಟನ್ ತೂಕದ ರೈಲ್ವೇ ಬ್ರಿಡ್ಜ್

    ಮಾಸ್ಕೋ: ಇಷ್ಟು ದಿನ ಮೊಬೈಲ್, ಅಂಗಡಿ, ಮನೆ ಕಳ್ಳತನ ನಡೆದಿರೋದನ್ನು ಕೇಳಿರುತ್ತವೆ. ರಷ್ಯಾದಲ್ಲಿ ರಾತ್ರೋ ರಾತ್ರಿ ಬರೋಬ್ಬರಿ 23 ಮೀಟರ್ ಉದ್ದದ ಮತ್ತು 56 ಟನ್ ತೂಕದ ರೈಲ್ವೇ ಬ್ರಿಡ್ಜ್ ಕಾಣೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರೈಲ್ವೇ ಬ್ರಿಡ್ಜ್ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ಆಶ್ವರ್ಯ ವ್ಯಕ್ತಪಡಿಸುತ್ತಿದ್ದಾರೆ.

    ರಷ್ಯಾದ ಮುರಮ್ನೆಸಕ್ ಎಂಬಲ್ಲಿ ಈ ಕಳ್ಳತನ ನಡೆದಿದೆ. ಮುರಮ್ನೆಸಕ್ ಪಟ್ಟಣದ ಸಮೀಪ ಉಮಬಾ ನದಿಗೆ ಅಡ್ಡಲಾಗಿ ಲೋಹದ ಬ್ರಿಡ್ಜ್ ಕಟ್ಟಲಾಗಿತ್ತು. ಈ ಪ್ರದೇಶ ರಷ್ಯಾ ಮತ್ತು ಫಿನ್ ಲ್ಯಾಂಡ್ ನಡುವಿನ ಗಡಿಭಾಗವಾಗಿದೆ. ಮೇ 16ರಂದು ಬ್ರಿಡ್ಜ್ ಮಧ್ಯಭಾಗ ಕಳ್ಳತನವಾಗಿದ್ದು, ಅಧಿಕಾರಿಗಳು ಸ್ಥಳೀಯ ಕಿರೋವಸ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನದಿಯ ಮಧ್ಯಭಾಗದಲ್ಲಿ ಸೇತುವೆಯನ್ನು ಸಂಪೂರ್ಣ ಲೋಹದಿಂದ ನಿರ್ಮಿಸಲಾಗಿತ್ತು.

    ಸೇತುವೆಯ ಮಧ್ಯಭಾಗದ ಸಂಪೂರ್ಣ ಲೋಹವನ್ನು ಕೆಳಗಡೆ ಎಳೆಯಲಾಗಿದೆ. ಎಲ್ಲ ಲೋಹ ನದಿಯಲ್ಲಿ ಬಿದ್ದ ಕೂಡಲೇ ಬಿಡಿ ಭಾಗಗಳನ್ನು ವಿಂಗಡಿಸಿ ಎಲ್ಲವನ್ನು ವಾಹನಗಳ ಮೂಲಕ ಕಳ್ಳರು ಸಾಗಣೆ ಮಾಡಿದ್ದಾರೆ ಎಂದು ವರದಿಯಾಗಿದೆ.

  • ಲಕ್ಷಾಂತರ ಜನ ಓಡಾಡುವ ರೈಲ್ವೇ ಬ್ರಿಡ್ಜ್ ರೋಡ್‍ನಲ್ಲಿ ಮಹಾ ಬಿರುಕು!

    ಲಕ್ಷಾಂತರ ಜನ ಓಡಾಡುವ ರೈಲ್ವೇ ಬ್ರಿಡ್ಜ್ ರೋಡ್‍ನಲ್ಲಿ ಮಹಾ ಬಿರುಕು!

    ಬೆಂಗಳೂರು: ಚೋಳರಪಾಳ್ಯ ಪಾದರಾಯನಪುರದ ರೈಲ್ವೇ ಸೇತುವೆಯಲ್ಲಿ ದೊಡ್ಡ ಬಿರುಕು ಮೂಡಿದ್ದು, ಸಂಪೂರ್ಣವಾಗಿ ಕುಸಿಯುವ ಹಂತದಲ್ಲಿದೆ.

    ದಿನಕ್ಕೆ ಲಕ್ಷಾಂತರ ಜನರು ವಾಹನದ ಮೂಲಕ ಮೆಜೆಸ್ಟಿಕ್, ಮೈಸೂರು ರೋಡ್, ವಿಜಯನಗರ ಪೈಪ್‍ಲೈನ್, ಹೊಸಹಳ್ಳಿ, ಜೆಜೆಆರ್ ನಗರ, ಕೆಪಿ ಅಗ್ರಹಾರಕ್ಕೆ ಈಗ ಮಾರ್ಗವಾಗಿಯೇ ಸಾಗುತ್ತಿದ್ದಾರೆ.

    ಹಳೆಯ ಕಾಲದ ಸೇತುವೆ ಇದಾಗಿದ್ದು, ಈಗ ಕೆಳಭಾಗದಿಂದ ಸಂಪೂರ್ಣ ಶಿಥಿಲಗೊಂಡು ದೊಡ್ಡ ಕ್ರ್ಯಾಕ್ ಮೂಡಿದೆ. ಒಂದು ಮಳೆ ಬಂದರೆ ರಸ್ತೆ ಸಂಪೂರ್ಣ ಕುಸಿಯುವ ಹಂತದಲ್ಲಿದೆ. ಟ್ರಾಫಿಕ್ ಪೊಲೀಸರು ಈ ಮೇಲ್ಸೆತುವೆ ಬಳಿ ಈ ಬ್ರಿಡ್ಜ್ ಬಿರುಕು ಬಿಟ್ಟಿದ್ದು ಭಾರೀ ವಾಹನಗಳು, 4 ಚಕ್ರದ ವಾಹನಗಳು ಹೋಗುವಂತಿಲ್ಲ ಎಂದು ಬೋರ್ಡ್ ಹಾಕಿದ್ದಾರೆ. ಆದರೂ ವಾಹನಸವಾರರು ಇದನ್ನು ಗಮನಿಸದೇ ಸಾಗುತ್ತಿದ್ದಾರೆ.

    ಇದರಿಂದ ಸ್ಥಳೀಯರು ಆತಂಕಗೊಂಡಿದ್ದು, ಬೋರ್ಡ್ ಹಾಕುವ ಬದಲು ರಿಪೇರಿ ಮಾಡಬೇಕು. ಒಂದು ಮಳೆ ಬಂದರೆ ಎತ್ತರದಲ್ಲಿರುವ ಈ ರಸ್ತೆ ಕುಸಿಯುತ್ತದೆ ಎಂದು ಆತಂಕ ತೋಡಿಕೊಂಡಿದ್ದಾರೆ.

  • ಉದ್ಘಾಟನೆಗೆ ಮುಂಚೆಯೇ ರೇವಣ್ಣ ಕ್ಷೇತ್ರದಲ್ಲಿ ಸತತ ಮೂರನೇ ಬಾರಿ ಕುಸಿದ ಮೇಲ್ಸೇತುವೆ!

    ಉದ್ಘಾಟನೆಗೆ ಮುಂಚೆಯೇ ರೇವಣ್ಣ ಕ್ಷೇತ್ರದಲ್ಲಿ ಸತತ ಮೂರನೇ ಬಾರಿ ಕುಸಿದ ಮೇಲ್ಸೇತುವೆ!

    ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಬಳಿ ಸತತ ಮೂರನೇ ಬಾರಿ ರೈಲ್ವೇ ಮೇಲ್ಸೇತುವೆ ಕುಸಿದಿದೆ.

    ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 40 ಕೋಟಿ ರೂ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಿದ್ದು, ಉದ್ಘಾಟನೆಗೂ ಮುನ್ನ ಈ ರೇಲ್ವೇ ಮೇಲ್ಸೇತುವೆ ಪದೇ ಪದೇ ಕುಸಿಯುತ್ತಿದೆ. ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಸೇತುವೆ ಆಗಾಗ್ಗೆ ಕುಸಿಯುತ್ತಿದೆ ಅಂತ ಸ್ಥಳೀಯರು ಹಾಗೂ ಪ್ರಯಾಣಿಕರು ಆರೋಪಿಸುತ್ತಿದ್ದಾರೆ.

    ನೂತನ ಫ್ಲೈಓವರ್ ಇದಾಗಿದ್ದು, ಕೆಲ ತಿಂಗಳ ಹಿಂದೆ ರೈಲ್ವೇ ಮೇಲ್ಸೇತುವೆ ತಡೆಗೋಡೆ ಒಂದು ಬಾರಿ ಮೊದಲೇ ಕುಸಿದು ಬಿದ್ದಿತ್ತು. ನಂತರ ಅದರ ಪಕ್ಕದ ಎಡಭಾಗದಲ್ಲಿ ಕಳೆದ ಜುಲೈ ತಿಂಗಳಿನಲ್ಲಿ 2ನೇ ಬಾರಿಗೆ ಕುಸಿದಿತ್ತು. ಇದರಿಂದಾಗಿ ಸ್ಥಳೀಯರು ಮತ್ತು ಪ್ರಯಾಣಿಕರು ಹೆಚ್ಚಿನ ಆತಂಕಪಟ್ಟಿದ್ದರು.

    ಸೇತುವೆಯ ಗೋಡೆಗಳು ಕುಸಿತವಾಗಿದ್ದು, ಸಾರ್ವಜನಿಕರಿಗೆ ಕಾಣಬಾರದೆಂದು ಟಾರ್ಪಲ್ ಅಳವಡಿಕೆ ಮಾಡಲಾಗಿತ್ತು. ಉದ್ಘಾಟನೆಗೂ ಮುನ್ನವೇ ಮೇಲ್ಸೇತುವೆ ಕುಸಿತಕೊಂಡಿದ್ದು ಕಳಪೆ ಕಾಮಾಗಾರಿಗೆ ಉದಾಹರಣೆಯಾಗಿದೆ. ಇನ್ನು ಗೋಡೆ ಕುಸಿತದ ವೇಳೆಯಲ್ಲಿ ಯಾವುದೇ ವಾಹನಗಳು ಚಲಿಸುತ್ತಿರಲಿಲ್ಲ. ಹಾಗಾಗಿ ಅನಾಹುತವೊಂದು ತಪ್ಪಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=hcPdS2X3dPI

  • ರೈಲ್ವೆ ಸೇತುವೆ ತಡೆ ಕಂಬಿ ಕಳಚಿ ಬಿದ್ದು ಮಹಿಳೆಯ ಕೈ ಕಟ್

    ರೈಲ್ವೆ ಸೇತುವೆ ತಡೆ ಕಂಬಿ ಕಳಚಿ ಬಿದ್ದು ಮಹಿಳೆಯ ಕೈ ಕಟ್

    ಚಿತ್ರದುರ್ಗ: ರೈಲ್ವೆ ಸೇತುವೆ ತಡೆ ಕಂಬಿ ಕಳಚಿ ಬಿದ್ದು ದ್ವಿಚಕ್ರವಾಹನದಲ್ಲಿ ಚಲಿಸುತ್ತಿದ್ದ ಮಹಿಳೆಯ ಕೈ ಮುರಿದಿರುವ ಘಟನೆ ಚಿತ್ರದುರ್ಗದ ಪಿಳ್ಳಕ್ಯಾರನಹಳ್ಳಿ ಬಳಿ ನಡೆದಿದೆ.

    ಜೆಸಿಬಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ರೈಲ್ವೆ ಸೇತುವೆ ತಡೆ ಕಂಬಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಕೆಲ ಸಮಯದ ನಂತರ ತಡೆ ಕಂಬಿ ಕುಸಿದು ಬಿದ್ದಿದ್ದು, ಇದೇ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಜೆಎಮ್‍ಐಟಿ ಕಾಲೇಜು ಉಪನ್ಯಾಸಕಿ ಪುಷ್ಪ ಅವರ ಕೈ ಮುರಿದಿದೆ.

    ಘಟನೆಯಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ನಂತರ ಗ್ರಾಮಾಂತರ ಪೊಲೀಸರು ಬಂದು ಸಂಚಾರ ಸುಗಮಗೊಳಿಸಿದ್ದಾರೆ. ಈ ಬಗ್ಗೆ ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿ ಲಾರಿಯನ್ನ ವಶಕ್ಕೆ ಪಡೆದಿದ್ದಾರೆ.

    ಇದುವರೆಗೂ ಇಂತಹ ಅಪಘಾತದಲ್ಲಿ 3 ಜನ ಮೃತಪಟ್ಟಿದ್ದಾರೆ. ಆದರೂ ರೈಲ್ವೆ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಿತ್ರದುರ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಳೆದ ತಿಂಗಳು ಇದೇ ಕಾರಣಕ್ಕೆ ಪ್ಯಾಸೆಂಜರ್ ರೈಲು ಹಳಿ ತಪ್ಪಿತ್ತು.