Tag: RailOne

  • ಭಾರತೀಯ ರೈಲ್ವೆ ಇಲಾಖೆಯಿಂದ RailOne ಆಪ್‌ ಬಿಡುಗಡೆ- ಏನೆಲ್ಲಾ ಸೇವೆ ಲಭ್ಯವಿದೆ?

    ಭಾರತೀಯ ರೈಲ್ವೆ ಇಲಾಖೆಯಿಂದ RailOne ಆಪ್‌ ಬಿಡುಗಡೆ- ಏನೆಲ್ಲಾ ಸೇವೆ ಲಭ್ಯವಿದೆ?

    ದಿನದಿಂದ ದಿನಕ್ಕೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ಭಾರತೀಯ ರೈಲ್ವೆ ಇಲಾಖೆ ಇದೀಗ ಎಲ್ಲಾ ಸೇವೆಗಳು ಒಂದೇ ಸೂರಿನಡಿ ಲಭಿಸುವಂತೆ ಮಾಡಿದೆ. ಹೌದು, ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗಾಗಿ ರೈಲ್ಒನ್ (Rail One) ಎಂಬ ಸೂಪರ್ ಆಪ್ ಬಿಡುಗಡೆ ಮಾಡಿದೆ. ಈ ಆಪ್‌ನಲ್ಲಿ ಎಲ್ಲಾ ಸೇವೆಗಳು ಒಂದೇ ಪ್ಲ್ಯಾಟ್‌ಫಾರ್ಮ್‌ನಡಿ ದೊರೆಯಲಿದೆ. ಇದರಿಂದ ಪ್ರಯಾಣಿಕರಿಗೂ ಬಹಳಷ್ಟು ಪ್ರಯೋಜನಗಳು ಲಭಿಸಲಿವೆ. ಹಾಗಿದ್ರೆ ಏನಿದು ರೈಲ್‌ಒನ್‌ ಆಪ್?‌ ವಿಶೇಷತೆಗಳೇನು? ಈ ಸೂಪರ್‌ ಆಪ್‌ನಲ್ಲಿ ಯಾವೆಲ್ಲ ಸೌಲಭ್ಯಗಳು ದೊರೆಯಲಿವೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಏನಿದು ರೈಲ್‌ಒನ್?‌
    ರೈಲ್‌ಒನ್‌ ಒಂದು ಸೂಪರ್‌ ಆಪ್‌ ಆಗಿದ್ದು, ರೈಲ್ವೆಗೆ ಸಂಬಂಧಿಸಿದ ಎಲ್ಲಾ ಸೇವೆಗಳು ಒಂದೇ ಕಡೆ ದೊರೆಯುತ್ತದೆ. ಈ ಆಪ್‌ ಮೂಲಕ ಟಿಕೆಟ್ ಬುಕಿಂಗ್, ಪಿಎನ್‌ಆರ್ ಟ್ರ್ಯಾಕಿಂಗ್, ಆಹಾರ ಆರ್ಡರ್ ಸೇರಿದಂತೆ ಹಲವು ಸೇವೆಗಳ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅಲ್ಲದೇ ಐಆರ್‌ಸಿಟಿಸಿ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಆಪ್ ಸ್ಟೋರ್‌ಗಳಲ್ಲಿ ಈ ಆಪ್‌ ಡೌನ್‌ಲೋಡ್‌ಗೆ ಲಭ್ಯವಿದೆ.

    ರೈಲ್‌ಒನ್‌ ಆಪ್‌ ಉದ್ದೇಶವೇನು?
    ರೈಲ್ವೆಯ ಕೋಟ್ಯಂತರ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿದೆ. ಭಾರತೀಯ ರೈಲ್ವೆಗೆ ಸಂಬಂಧಿಸಿದ ಎಲ್ಲಾ ಅಗತ್ಯಗಳನ್ನು ಒಂದೇ ಜಾಗದಲ್ಲಿ ಪೂರೈಸುವ ಗುರಿಯೊಂದಿಗೆ ಈ ರೈಲ್‌ಒನ್ ಎಂಬ ಹೊಸ ಸೂಪರ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ.

    ಏನೇನು ಸೇವೆ ಸಿಗಲಿದೆ?
    ಐಆರ್‌ಸಿಟಿಸಿ ಕಾಯ್ದಿರಿಸಿದ, ಕಾಯ್ದಿರಿಸದ ಮತ್ತು ಪ್ಲ್ಯಾಟ್‌ಫಾರ್ಮ್‌ ಟಿಕೆಟ್‌ ಬುಕ್‌ ಮಾಡುವುದು, ಪಿಎನ್‌ಆರ್‌ ಮತ್ತು ರೈಲಿನ ಸ್ಥಿತಿಯನ್ನು ಪರಿಶೀಲಿಸುವುದು, ಕೋಚ್ ಸಂಖ್ಯೆ, ರೈಲ್ವೆ ಸಹಾಯ ಮತ್ತು ಪ್ರಯಾಣಿಕರ ಪ್ರತಿಕ್ರಿಯೆಯನ್ನು ಟ್ರ್ಯಾಕ್ ಮಾಡಬಹುದಾಗಿದೆ.

    ಸದ್ಯ ಭಾರತೀಯ ರೈಲ್ವೆ ಪ್ರಯಾಣಿಕರು ಬೇರೆ ಬೇರೆ ಸೇವೆಗಳಿಗೆ ಬೇರೆ ಬೇರೆ ಅಪ್ಲಿಕೇಶನ್‌ ಲಾಗಿನ್ ಆಗಬೇಕಾಗುತ್ತದೆ. ಅಲ್ಲದೇ ಕೆಲವೊಂದು ವೆಬ್‌ಸೈಟ್‌ಗಳಿಗೆ ಭೇಟಿ ನೀಡಬೇಕು. ಟಿಕೆಟ್‌ಗಳನ್ನು ಕಾಯ್ದಿರಿಸಲು ಐಆರ್‌ಸಿಟಿಸಿ ರೈಲ್ ಕನೆಕ್ಟ್, ಐಆರ್‌ಸಿಟಿಸಿ ಇ-ಕ್ಯಾಟರಿಂಗ್ ಫುಡ್ ಆನ್ ಟ್ರ್ಯಾಕ್, ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸಲು ಯುಟಿಎಸ್ ಮತ್ತು ರೈಲು ಎಲ್ಲಿದೆ ಎಂದು ನೋಡಲು ನ್ಯಾಷನಲ್‌ ಟ್ರೈನ್‌ ಎನ್‌ಕ್ವೈರಿ ಸಿಸ್ಟಂ ಬಳಸಲಾಗುತ್ತಿದೆ.

    ಐಆರ್‌ಸಿಟಿಸಿ ಕನೆಕ್ಟ್‌ ರೈಲ್ವೆಯ ಜನಪ್ರಿಯ ಆಪ್‌ ಆಗಿದ್ದು, 10 ಕೋಟಿಗೂ ಅಧಿಕ ಡೌನ್‌ಲೋಡ್‌ ಹೊಂದಿದೆ. ಇದನ್ನೀಗ ಬದಲಿಸುವ ಉದ್ದೇಶವನ್ನು ರೈಲ್‌ ಒನ್‌ ಹೊಂದಿದೆ. ಈ ಅಪ್ಲಿಕೇಶನ್ ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಬಳಸಬಹುದು. ಈ ಅಪ್ಲಿಕೇಶನ್ mPIN ಮತ್ತು ಬಯೋಮೆಟ್ರಿಕ್ ದೃಢೀಕರಣದಂತಹ ಸರಳ ಲಾಗಿನ್ ಆಯ್ಕೆಗಳನ್ನುಹೊಂದಿದೆ.

    ಹೊಸ ಬಳಕೆದಾರರಿಗೆ ಕನಿಷ್ಠ ಮಾಹಿತಿ ನೀಡುವ ಮೂಲಕ ನೋಂದಣಿ ಮಾಡಲು ಅವಕಾಶವಿದೆ. ನೋಂದಣಿ ಪ್ರಕ್ರಿಯೆ ಸುಲಭ ಮತ್ತು ವೇಗಗೊಳಿಸುತ್ತದೆ. ವಿಚಾರಣೆಗಳನ್ನು ಮಾತ್ರ ಮಾಡುವ ಬಳಕೆದಾರರು ಗೆಸ್ಟ್​ ಲಾಗಿನ್ ಮೂಲಕ ಮೊಬೈಲ್ ಸಂಖ್ಯೆ ಮತ್ತು OTPಯೊಂದಿಗೆ ಲಾಗಿನ್ ಮಾಡಬಹುದು.

    ರೈಲ್‌ಒನ್ ಅಪ್ಲಿಕೇಶನ್ ಅನ್ನು ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ (CRIS) ರಚಿಸಿದೆ. ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಬಳಕೆದಾರರಿಗೆ ಉತ್ತಮ ಅನುಭವ ಒದಗಿಸುವುದು ಇದರ ಮೂಲ ಉದ್ದೇಶ ಎಂದು ರೈಲ್ವೆ ಹೇಳುತ್ತದೆ. ಈ ಆಪ್ ಅನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಘೋಷಿಸಲಾಗಿತ್ತು.

    ಪಾಸ್‌ವರ್ಡ್ ನೆನಪಿಡುವ ಅಗತ್ಯವಿಲ್ಲ: ‌
    ರೈಲ್‌ಒನ್ ಅಪ್ಲಿಕೇಶನ್‌ನಲ್ಲಿ ‘ಸಿಂಗಲ್ ಸೈನ್ ಆನ್’ ವಿಶೇಷ ಸೌಲಭ್ಯ ಒದಗಿಸಲಾಗಿದೆ. ಇದಕ್ಕಾಗಿ ಬಳಕೆದಾರರು ಬಹು ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ. ರೈಲ್‌ಒನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಮೊಬೈಲ್ ಅಪ್ಲಿಕೇಶನ್‌ನಲ್ಲಿ ರೈಲ್‌ಕನೆಕ್ಟ್ ಅಥವಾ ಯುಟಿಎಸ್‌ನ ಅಸ್ತಿತ್ವದಲ್ಲಿರುವ ಬಳಕೆದಾರ ಐಡಿಯೊಂದಿಗೆ ಲಾಗಿನ್ ಮಾಡಬಹುದು. ಈ ಕಾರಣದಿಂದಾಗಿ ಬಳಕೆದಾರರು ವಿಭಿನ್ನ ಸೇವೆಗಳಿಗಾಗಿ ಪ್ರತ್ಯೇಕ ಅಪ್ಲಿಕೇಶನ್‌ಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ. ಇದು ಮೊಬೈಲ್‌ನಲ್ಲಿ ಸ್ಟೋರೇಜ್​ ಉಳಿಸುತ್ತದೆ.

    ಎಲ್ಲಾ ಪ್ರಮುಖ ರೈಲ್ವೆ ಸೇವೆಗಳನ್ನು ಒಂದೇ ಪ್ಲ್ಯಾಟ್‌ಫಾರ್ಮ್‌ಗೆ ಸಂಯೋಜಿಸುವ ಮೂಲಕ, ಲಕ್ಷಾಂತರ ಪ್ರಯಾಣಿಕರು ಭಾರತೀಯ ರೈಲ್ವೆಯೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ಸರಳಗೊಳಿಸುವಲ್ಲಿ ರೈಲ್‌ಒನ್ ಒಂದು ಪ್ರಮುಖ ಹೆಜ್ಜೆಯಾಗಿದೆ.

    ವಿಶೇಷತೆಗಳೇನು?
    -ರೈಲ್ವೆ ಸೇವೆಗಳನ್ನು ಒಂದೇ ವೇದಿಕೆಗೆ ತರುವುದು, ಈ ಮೂಲಕ ಬಳಕೆದಾರರಿಗೆ ಉತ್ತಮ ಅನುಭವ ನೀಡುವುದು.
    -ಆಂಡ್ರಾಯ್ಡ್ ಪ್ಲೇಸ್ಟೋರ್ ಮತ್ತು ಐಒಎಸ್‌ ಆಪ್ ಸ್ಟೋರ್ ಪ್ಲಾಟ್‌ಫಾರ್ಮ್‌ಗಳಿಂದ ಇದನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.
    -ಸಿಂಗಲ್ ಸೈನ್ ಇನ್‌ ಅಂದರೆ, ಹಲವು ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯ ಇಲ್ಲ.
    -ಇನ್‌ಸ್ಟಾಲ್‌ ನಂತರ ಅಸ್ತಿತ್ವದಲ್ಲಿರುವ ರೈಲ್‌ಕನೆಕ್ಟ್ ಅಥವಾ ಯುಟಿಸನ್‌ ಮೊಬೈಲ್ ಕ್ರೆಡೆನ್ಶಿಯಲ್‌ ಬಳಸಿಕೊಂಡು ನೋಂದಾಯಿಸಿಕೊಳ್ಳಬಹುದು.
    -ಬಳಕೆದಾರರಿಗೆ ಇನ್ನು ಮುಂದೆ ವಿವಿಧ ಭಾರತೀಯ ರೈಲ್ವೆ ಸೇವೆಗಳಿಗೆ ಪ್ರತ್ಯೇಕ ಅಪ್ಲಿಕೇಶನ್‌ಗಳ ಅಗತ್ಯ ಇಲ್ಲ.
    -ಅಪ್ಲಿಕೇಶನ್ ಆರ್ ವ್ಯಾಲೆಟ್ (ರೈಲ್ವೆ ಇ-ವ್ಯಾಲೆಟ್) ಕೂಡ ಇದರಲ್ಲಿದೆ.
    -ಸರಳ ಎಂಪಿನ್‌ ಅಥವಾ ಬಯೋಮೆಟ್ರಿಕ್ ಲಾಗಿನ್ ಆಯ್ಕೆಗಳ ಮೂಲಕ ಇದಕ್ಕೆ ಪ್ರವೇಶಿಸಬಹುದು
    -ಕನಿಷ್ಠ ಮಾಹಿತಿಯ ಅಗತ್ಯವಿರುವ ಸುವ್ಯವಸ್ಥಿತ ನೋಂದಣಿ ಪ್ರಕ್ರಿಯೆಯಿಂದ ಕೋಟ್ಯಂತರ ಜನರಿಗೆ ಪ್ರಯೋಜನ ಸಿಗಲಿದೆ.
    -ವಿಚಾರಣೆಗಳಿಗೆ, ಮೊಬೈಲ್ ಸಂಖ್ಯೆ/ಒಟಿಪಿ ಪರಿಶೀಲನೆಯ ಮೂಲಕ ಪ್ರವೇಶ ಲಭ್ಯ.