Tag: Rail roko

  • ಕೃಷಿ ಕಾಯ್ದೆ ವಿರುದ್ಧ ದೇಶಾದ್ಯಂತ ರೈಲ್ ರೋಕೋ- ಬೆಂಗ್ಳೂರು, ಬೆಳಗಾವಿ, ರಾಯಚೂರಲ್ಲಿ ಮುತ್ತಿಗೆ ಯತ್ನ

    ಕೃಷಿ ಕಾಯ್ದೆ ವಿರುದ್ಧ ದೇಶಾದ್ಯಂತ ರೈಲ್ ರೋಕೋ- ಬೆಂಗ್ಳೂರು, ಬೆಳಗಾವಿ, ರಾಯಚೂರಲ್ಲಿ ಮುತ್ತಿಗೆ ಯತ್ನ

    ನವದೆಹಲಿ/ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ರೈತರು ರೈಲ್ ರೋಕೋ ನಡೆಸಿದ್ರು. ಈ ವೇಳೆ ರೈತರಿಗಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರೇ ಇದ್ದರು. ಪಂಜಾಬ್, ಹರಿಯಾಣ, ಉತ್ತರಪ್ರದೇಶಗಳಲ್ಲಿ ರೈಲು ಹಳಿಗಳ ಮೇಲೆ ಕೂತು ರೈತರು ಪ್ರತಿಭಟನೆ ನಡೆಸಿದ್ರು. ಹಲವು ಕಡೆಗಳಲ್ಲಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು.

    ರಾಜ್ಯದಲ್ಲಿ ಬೆಂಗಳೂರಿನ ಯಶವಂತಪುರ ರೈಲ್ವೇ ನಿಲ್ದಾಣದಲ್ಲಂತೂ ಪೊಲೀಸರು ಮತ್ತು ರೈತರ ನಡುವೆ ಹೈಡ್ರಾಮವೇ ನಡೆಯಿತು. ರೈಲ್ವೇ ನಿಲ್ದಾಣದ ಮುಂಭಾಗವೇ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರನ್ನು ಪೊಲೀಸರು ತಡೆದ್ರು. ಕೆಲ ರೈತರು ರೈಲ್ವೇ ಫ್ಲ್ಯಾಟ್ ಫಾರ್ಮ್‍ವರೆಗೂ ನುಗ್ಗಿದ್ದರು. ಕೆಲಕಾಲ ನೂಕುನುಗ್ಗಲು ಸೃಷ್ಟಿಯಾಯ್ತು. ಈ ವೇಳೆ ಗರಂ ಆದ ಕುರುಬೂರು ಶಾಂತಕುಮಾರ್, ನಿಮ್ ಕೈಯಲ್ಲಿ ರೌಡಿಗಳನ್ನು, ಗೂಂಡಾಗಳನ್ನು ಹಿಡಿಯೋದಕ್ಕೆ ಆಗಲ್ಲ. ನಮ್ಮನ್ನು ಹಿಡಿಯೋಕೆ ಬರ್ತೀರಾ..? ನಮ್ಮನ್ನು ತಳ್ತೀರಾ..? ನಾವೇನ್ ದೇಶದ್ರೋಹಿಗಳಾ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.

    ಬೆಳಗಾವಿಯಲ್ಲಂತೂ ರೈತರು-ಪೊಲೀಸರ ನಡುವೇ ತಳ್ಳಾಟ ನೂಕಾಟ ನಡೆಯಿತು. ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಸೇರಿ 20ಕ್ಕೂ ಅಧಿಕ ರೈತರನ್ನು ವಶಕ್ಕೆ ಪಡೆಯಲಾಯ್ತು. ಮೈಸೂರಿನಲ್ಲಿ ಬಸ್ ಮೇಲಿದ್ದ ಪ್ರಧಾನಿ ಮೋದಿ, ಸಿಎಂ ಬಿಎಸ್‍ವೈ ಭಾವಚಿತ್ರ ಕಂಡು ರೈತರು ಶೂನಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ರು.

    ಹುಬ್ಬಳ್ಳಿಯಲ್ಲಿ ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದ್ರೆ, ಜಯಪುರದಲ್ಲಿ ರೇಲ್ವೇ ನಿಲ್ದಾಣದ ಎದುರು ರೈತ ಗೀತೆ ಹಾಡುವುದರ ಮೂಲಕ ಪ್ರತಿಭಟನೆ ಮಾಡಿದ್ರು. ರಾಯಚೂರಿನಲ್ಲಿ ರೈಲು ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ್ರು.

  • ರೈಲು ರೋಕೋಗೆ ಪೊಲಿಸರ ತಡೆ – ವಿಜಯಪುರ ನಿಲ್ದಾಣದಲ್ಲಿ ರೈತರ ಪ್ರತಿಭಟನೆ

    ರೈಲು ರೋಕೋಗೆ ಪೊಲಿಸರ ತಡೆ – ವಿಜಯಪುರ ನಿಲ್ದಾಣದಲ್ಲಿ ರೈತರ ಪ್ರತಿಭಟನೆ

    ವಿಜಯಪುರ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಸಂಘಟನೆಗಳ ಹೋರಾಟಕ್ಕೆ ಬೆಂಬಲಿಸಿ ವಿಜಯಪುರದಲ್ಲಿ ಪ್ರಗತಿಪರ ಸಂಘಟನೆಗಳು ‘ರೈಲು ರೋಕೋ’ಗೆ ಇಂದು ಮುಂದಾಗಿದ್ದರು.

    ಈ ವೇಳೆ ರೈಲ್ವೆ ಪೊಲೀಸರು ‘ರೈಲು ರೋಕೋ’ ಚಳುವಳಿಗೆ ಅಡ್ಡಿಪಡಿಸಿದ್ದಾರೆ. ಇದರಿಂದ ಕೇಂದ್ರ ರೈಲ್ವೆ ನಿಲ್ದಾಣದ ಎದುರೇ ಪ್ರತಿಭಟನೆಗೆ ಸಂಘಟನೆಗಳು ಮುಂದಾದವು.

    ರೈಲ್ವೆ ನಿಲ್ದಾಣದ ಎದುರು ರೈತ ಗೀತೆ ಹಾಡುವುದರ ಮೂಲಕ ಹೋರಾಟಗಾರು ಪ್ರತಿಭಟನೆ ಮಾಡಿದರು. ಅಲ್ಲದೆ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

    ಸದ್ಯ ಸ್ಥಳದಲ್ಲಿ ಒಂದು ಡಿಎಆರ್ ತುಕಡಿ, ಓರ್ವ ಸಿಪಿಐ, ಮೂವರು ಪಿಎಸ್‍ಐ ಹಾಗೂ ಮೂವತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

  • ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಆಂಧ್ರದ YSRCPಯಿಂದ ವಿಶೇಷ ಪ್ರತಿಭಟನೆ

    ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಆಂಧ್ರದ YSRCPಯಿಂದ ವಿಶೇಷ ಪ್ರತಿಭಟನೆ

    ಹೈದರಾಬಾದ್: ಆಂಧ್ರ ಪ್ರದೇಶಕ್ಕೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ಕಲ್ಪಿಸಬೇಕೆಂದು YSRCP ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅರೆಬೆತ್ತಲೆಯಾಗಿ ಪೋಸ್ಟರ್ ಗಳಿಂದ ದೇಹವನ್ನು ಮುಚ್ಚಿಕೊಂಡು ತಮ್ಮ ಆಕ್ರೋಶವನ್ನು ಹೊರಹಾಕಿದ್ರು.

    YSRCP ಪಕ್ಷದ ನಾಯಕರು ರೈಲ್ ರೋಕೋ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಆಂಧ್ರ ಪ್ರದೇಶದ ಎಲ್ಲ ಸಂಸದರೆಲ್ಲ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದಾರೆ. ತಮ್ಮ ಉಪವಾಸ ಸತ್ಯಾಗ್ರಹದ ಮೂಲಕ ಕೇಂದ್ರ ಸರ್ಕಾರ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಸಂದೇಶವನ್ನು ರವಾನೆ ಮಾಡಲಿದ್ದಾರೆ.

    ಶ್ರೀಕಾಕುಳಂ, ವಿಶಾಖಪಟ್ಟಣ, ಸಮರ್ಲಾಕೋಟ, ರಾಜಮಂಡ್ರಿ, ಎಲ್ಲೂರು, ಭೀಮಾವರಂ, ವಿಜಯವಾಡ, ಗುಂಟೂರು, ತೆನಾಲಿ ಸೇರಿದಂತೆ ರಾಜ್ಯಾದ್ಯಂತೆ ರೈಲ್ ರೋಕೋ ಪ್ರತಿಭಟನೆ ಮಾಡಲಾಯಿತು. ಕೆಲವಡೆ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆಗೊಳಿಸಿದರು.

  • ರಾಹುಲ್ ಗಾಂಧಿ ಬಂಧನ ಖಂಡಿಸಿ ರಾಜ್ಯದ ಹಲವೆಡೆ ಕಾಂಗ್ರೆಸ್‍ನಿಂದ ರೈಲ್ ರೋಖೋ ಯತ್ನ

    ರಾಹುಲ್ ಗಾಂಧಿ ಬಂಧನ ಖಂಡಿಸಿ ರಾಜ್ಯದ ಹಲವೆಡೆ ಕಾಂಗ್ರೆಸ್‍ನಿಂದ ರೈಲ್ ರೋಖೋ ಯತ್ನ

    ರಾಯಚೂರು/ಉಡುಪಿ: ಮಧ್ಯಪ್ರದೇಶದ ಸರ್ಕಾರ 6 ಮಂದಿ ರೈತರ ಮೇಲೆ ನಡೆಸಿದ ಗೋಲಿಬಾರ್ ಪ್ರಕರಣದ ವಿರುದ್ಧ ಹಾಗು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಂಧನ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಹಲವೆಡೆ ರೈಲ್ ರೋಖೋ ಯತ್ನ ನಡೆಸಿದ್ದಾರೆ.

    ಉಡುಪಿ, ರಾಯಚೂರು, ಯಾದಗಿರಿ ಸೇರಿದಂತೆ ರಾಜ್ಯದ ಹಲವೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆಯಲು ಯತ್ನಿಸಿದರು. ಉಡುಪಿಯಲ್ಲಿ ಇಂದ್ರಾಣಿ ರೈಲು ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮಂಗಳೂರು-ಮಡಗಾಂ ರೈಲನ್ನು ತಡೆಯಲು ಯತ್ನಿಸಿದರು.

    ಮಧ್ಯಪ್ರದೇಶ ಸರ್ಕಾರದ ನಡೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಯಚೂರಿನಲ್ಲಿ ರೈಲ್ವೇ ನಿಲ್ದಾಣಕ್ಕೆ ನುಗ್ಗಿ ಪ್ರತಿಭಟಿಸಲು ಯತ್ನಿಸಿದರು. ಈ ವೇಳೆ 30 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದ್ಯೊಯ್ದಿದ್ದಾರೆ. ಇದಕ್ಕೂ ಮುನ್ನ ನಗರದಲ್ಲಿ ಬೈಕ್ ಮೆರವಣಿಗೆ ನಡೆಸಿ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

    ಯಾದಗಿರಿಯಲ್ಲೂ ಯುವ ಕಾಂಗ್ರೆಸ್ ಕಾರ್ಯಕರ್ತರು ರೆಲ್ವೇ ನಿಲ್ದಾಣಕ್ಕೆ ನುಗ್ಗಿ ಕೋಯಿಮತ್ತೂರ್ ಕುರ್ಲಾ ಎಕ್ಸ್‍ಪ್ರೆಸ್ ರೈಲು ತಡೆಯಲು ಯತ್ನಿಸಿದಾಗ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದ್ಯೊಯ್ದಿದ್ದಾರೆ.

    ದಾವಣಗೆರೆಯಲ್ಲೂ ಕೂಡ ಯೂತ್ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆಗೆ ಯತ್ನಿಸಿದ್ರು.