Tag: raids

  • ರಾಜ್ಯದ 7 ಭ್ರಷ್ಟರ ಮೇಲೆ ಎಸಿಬಿ ದಾಳಿ – ಕಂತೆ ಕಂತೆ ಹಣ ಎಣಿಸಿ ಅಧಿಕಾರಿಗಳು ಸುಸ್ತು

    ರಾಜ್ಯದ 7 ಭ್ರಷ್ಟರ ಮೇಲೆ ಎಸಿಬಿ ದಾಳಿ – ಕಂತೆ ಕಂತೆ ಹಣ ಎಣಿಸಿ ಅಧಿಕಾರಿಗಳು ಸುಸ್ತು

    – ಭ್ರಷ್ಟರ ಆಸ್ತಿ ಅಂದಾಜು 100 ಕೋಟಿ ರೂ.
    – 30 ಕಡೆ ಎಸಿಬಿ ದಾಳಿ

    ಬೆಂಗಳೂರು: ಕೊರೊನಾದಿಂದಾಗಿ ಇಡೀ ದೇಶ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಸಾಕಷ್ಟು ಅಳೆದು ತೂಗಿ ನಿನ್ನೆ ಕೇಂದ್ರ ಸರ್ಕಾರ ಕೊರತೆ ಬಜೆಟ್ ಮಂಡಿಸಿದೆ. ದೇಶಕ್ಕೆ ಆರ್ಥಿಕ ಸಂಕಷ್ಟ ಎದುರಾದರೇನು? ಭ್ರಷ್ಟರಿಗೆ ಮಾತ್ರ ಸುಗ್ಗಿನೇ ಅಲ್ವಾ. ಬರ ಅಥವಾ ಸಂಕಷ್ಟ ಕಾಲ ಎನ್ನುವುದು ಅಧಿಕಾರಿಗಳಿಗೆ ಹುಲುಸಾದ ಹುಲ್ಲುಗಾವಲು ಎಂಬ ಮಾತಿಗೆ ಪೂರಕ ಎಂಬಂತೆ ಇಂದು ಬೆಳ್ಳಂಬೆಳಗ್ಗೆ ರಾಜ್ಯದ 7 ಜಿಲ್ಲೆಗಳಲ್ಲಿ ಎಸಿಬಿ ನಡೆಸಿದ ದಾಳಿಯಲ್ಲಿ ಸಪ್ತ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ.

    7 ಭ್ರಷ್ಟರಿಗೆ ಸಂಬಂಧಿಸಿ ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ಕೋಲಾರ, ಧಾರವಾಡ ಜಿಲ್ಲೆಗಳ 30 ಕಡೆ ಏಕಕಾಲದಲ್ಲಿ ಎಸಿಬಿ ದಾಳಿ ನಡೆಸಿದೆ. ದಾಳಿ ವೇಳೆ, ಒಬ್ಬೊಬ್ಬ ಅಧಿಕಾರಿ ಬಳಿ ಕೋಟಿ ಕೋಟಿ ಮೌಲ್ಯದ ಆಸ್ತಿ, ರಾಶಿ ರಾಶಿ ಚಿನ್ನಾಭರಣ, ಕಂತೆ ಕಂತೆ ಹಣ ಪತ್ತೆಯಾಗಿದೆ.

    ಹೆಂಡತಿ, ತಂದೆ-ತಾಯಿ, ಅಳಿಯ ಹೀಗೆ ಸಿಕ್ಕಸಿಕ್ಕವರ ಹೆಸರಿನಲ್ಲಿ ಆಸ್ತಿ ಮಾಡಿಕೊಂಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಬೇನಾಮಿ ಆಸ್ತಿ ಮಾಡಿರುವುದು ಪ್ರಾಥಮಿಕ ಪರಿಶಿಲನೆಯಲ್ಲಿ ದೃಢಪಟ್ಟಿದೆ. ಇದನ್ನ ನೋಡಿ ಎಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

    ಬೆಳಗ್ಗೆ 7 ಗಂಟೆಯಿಂದ ನಡೆಯುತ್ತಿರುವ ಶೋಧ ಕಾರ್ಯ, ಕೆಲವು ಕಡೆ ಕತ್ತಲಾದರೂ ನಿಂತಿಲ್ಲ. ಲೆಕ್ಕ ಹಾಕೋ ಕಾರ್ಯ ಈಗಲೂ ಮುಂದುವರೆದಿದೆ. ಲಂಚ ಹೊಡೆಯೋದ್ರಲ್ಲಿ ಇವ್ರೆಲ್ಲಾ ಪೈಪೋಟಿಗೆ ಬಿದ್ದಂತೆ ವರ್ತಿಸಿರೋದು ಕಂಡು ಬಂದಿದೆ.

    ಶ್ರೀನಿವಾಸ್
    ಬಳ್ಳಾರಿ ವಿಮ್ಸ್ ಆಸ್ಪತ್ರೆ ಮಾಜಿ ನಿರ್ದೇಶಕ ಶ್ರೀನಿವಾಸ್ ಸದ್ಯ ಕೊಪ್ಪಳದ ಕಿಮ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಆಸ್ತಿ 20 ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ. 1.94 ಲಕ್ಷ ರೂ. ನಗದು, 800ಗ್ರಾಂ ಚಿನ್ನ, 9.300 ಕೆಜಿ ಬೆಳ್ಳಿ, 3 ಕೋಟಿ ಮೌಲ್ಯದ 4 ನಿವೇಶನ, 2 ಕೋಟಿ ಮೌಲ್ಯದ ಮನೆ. ಪತ್ನಿ, ಮಾವನ ಹೆಸರಲ್ಲಿ 18 ಕೋಟಿ ಮೌಲ್ಯದ ಆಸ್ತಿ ಸೇರಿ 2 ಕಾರು, 2 ಬೈಕ್ ಹೊಂದಿದ್ದಾರೆ.

    ವಿಜಯ್‍ಕುಮಾರ್
    ಕೋಲಾರದ ಡಿಎಚ್‍ಒ ವಿಜಯ್‍ಕುಮಾರ್‌ಗೆ ಸೇರಿದ 6 ಕಡೆ ಏಕಕಾಲದಲ್ಲಿ ದಾಳಿ ನಡೆದಿದ್ದು ಅಂದಾಜು15 ಕೋಟಿ ರೂ. ಆಸ್ತಿ ಪತ್ತೆಯಾಗಿದೆ. ಬ್ಯಾಂಕ್ ಖಾತೆಯಲ್ಲಿ 71 ಲಕ್ಷ ರೂ ನಗದು, 300 ಗ್ರಾಂ ಚಿನ್ನ ಸಿಕ್ಕಿದೆ.

    ಮೂರು ಮನೆ, ಬೆಂಗಳೂರಿನಲ್ಲಿ ಮೂರು ಫ್ಲ್ಯಾಟ್ ಇದ್ದು ಒಂದೊಂದರ ಬೆಲೆಯೂ 2 ರಿಂದ 3 ಕೋಟಿ ರೂ. ಬೆಲೆ ಬಾಳುತ್ತದೆ. ಮುಳಬಾಗಲಿನಲ್ಲಿ 7 ಕೋಟಿ ರೂ.ಮೌಲ್ಯದ ಮನೆ, ಖಾಸಗಿ ಆಸ್ಪತ್ರೆ ಕೋಲಾರ ಬಳಿ ಹೈವೇ ಪಕ್ಕದಲ್ಲೇ 1.13 ಎಕರೆ ಜಮೀನು ಇವರ ಹೆಸರಿನಲ್ಲಿದೆ. ಎರಡು ಕಾರು ಒಂದು ಬೈಕ್ ಪತ್ತೆಯಾಗಿದೆ.

    ದೇವರಾಜ
    ಹುಬ್ಬಳ್ಳಿಯ ಸಣ್ಣ ನೀರಾವರಿ ಇಲಾಖೆ ಇಇ ದೇವರಾಜ್ ಶಿಗ್ಗಾಂವಿ ಬಳಿ 10 ಕೋಟಿ ರೂ. ಆಸ್ತಿ ಇರಬಹುದು ಎಂದು ಅಂದಾಜಿಸಲಾಗಿದೆ. ಹುಬ್ಬಳ್ಳಿಯಲ್ಲಿ ನಾಲ್ಕು ಮನೆ, 2 ಸೈಟ್, 59.84 ಲಕ್ಷ ನಗದು, ಬ್ಯಾಂಕ್‍ನಲ್ಲಿ 30 ಲಕ್ಷ ಹಣ, 500 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ, 3 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಪತ್ತೆಯಾಗಿದೆ.

    ಪತ್ನಿಯ ಬ್ಯಾಂಕ್ ಲಾಕರ್‌ನಲ್ಲಿ 56.50 ಲಕ್ಷ ನಗದು, 400 ಗ್ರಾಂ ಚಿನ್ನ, ಪತ್ನಿ, ಭಾಮೈದನ ಹೆಸರಲ್ಲಿ 30 ಲಕ್ಷ ರೂ. ಡಿಪಾಸಿಟ್‌, ದೇವರಾಜ್ ಮಾವನ ಲಾಕರ್‌ನಲ್ಲಿ 300 ಗ್ರಾಂ ಚಿನ್ನಾಭರಣ, ಹಾನಗಲ್‍ನಲ್ಲಿ 23 ಎಕರೆ, ಹುಬ್ಬಳ್ಳಿ ಬಳಿ 3 ಎಕರೆ ಜಮೀನು ಮತ್ತು 8 ಲಕ್ಷ  ರೂ. ಮೌಲ್ಯದ ಎರಡು ವಾಹನಗಳು ಇರುವುದು ದೃಢಪಟ್ಟಿದೆ.

    ಚನ್ನಬಸಪ್ಪ ಅವುಟೆ
    ಲೋಕೋಪಯೋಗಿ ಇಲಾಖೆ ಜೆಇ ಚನ್ನಬಸಪ್ಪ ಎರಡು ತಿಂಗಳ ಹಿಂದೆಯಷ್ಟೇ ಆಳಂದದಿಂದ ಮಾಗಡಿಗೆ ವರ್ಗಾವಣೆಯಾಗಿದ್ದರು. 10 ಕೋಟಿ ರೂ. ಆಸ್ತಿ ಇರಬಹುದು ಎಂದು ಅಂದಾಜಿಸಲಾಗಿದೆ. ಕಲಬುರಗಿ ನಿವಾಸದಲ್ಲಿ 1.27 ಲಕ್ಷ ರೂ. ನಗದು, 125 ಗ್ರಾಂ ಚಿನ್ನ, 650 ಗ್ರಾಂ ಬೆಳ್ಳಿ, 22 ಲಕ್ಷ ರೂ. ಮೌಲ್ಯದ ಇನ್ನೋವಾ ಸೇರಿ ಎರಡು ಕಾರ್, ಎರಡು ಬೈಕ್ ಪತ್ತೆಯಾಗಿವೆ.

    ಕಲಬುರಗಿ ನಗರದಲ್ಲಿ 8 ಫ್ಲ್ಯಾಟ್, 1 ಸೂಪರ್ ಮಾರ್ಕೆಟ್, 1 ಫಾರ್ಮ್‍ಹೌಸ್, ಚಿಂಚೋಳಿಯಲ್ಲಿ 23 ಎಕರೆ, ಬಸವಕಲ್ಯಾಣದಲ್ಲಿ 3 ಎಕರೆ ಜಮೀನು , ಚನ್ನಬಸಪ್ಪ ಪತ್ನಿ ಹಾಗೂ ಭಾಮೈದನ ಹೆಸರಲ್ಲೂ ಅಪಾರ ಆಸ್ತಿ, ತೆಲಂಗಾಣದ ಸಂಗಾರೆಡ್ಡಿಯಲ್ಲಿ 50 ಲಕ್ಷ ರೂ. ಮೌಲ್ಯದ ಸೈಟ್ ಹೊಂದಿದ್ದಾರೆ.

    ಪಾಂಡುರಂಗ ಗರಗ್‌
    ಸಹಕಾರ ಸಂಘಗಳ ಜಂಟಿ ನಿಬಂಧಕ ಪಾಂಡುರಂಗ ಗರಗ್ ಬಳಿ ಅಂದಾಜು 10 ಕೋಟಿ ರೂ. ಮೌಲ್ಯದ ಆಸ್ತಿಗಳಿದೆ. ಬೆಂಗಳೂರಿನ ನಾಲ್ಕು ಕಡೆ ಮತ್ತು ಚಿತ್ರದುರ್ಗದಲ್ಲಿ ರೇಡ್ ನಡೆದಿದೆ. ವಿಜಯನಗರದಲ್ಲಿ ಐಶಾರಾಮಿ 3 ಅಂತಸ್ತಿನ ಮನೆ, ಮನೆಗೆ ಲಿಫ್ಟ್, ಹೋಂ ಥಿಯೇಟರ್ ವ್ಯವಸ್ಥೆಇದೆ. 4.44 ಲಕ್ಷ  ರೂ ನಗದು, 1.166 ಕೆಜಿ ಚಿನ್ನ, 31 ಕೆಜಿ ಬೆಳ್ಳಿ, 20 ಲಕ್ಷ ರೂ. ವಿಮೆ, ಬೆಂಗಳೂರಲ್ಲಿ 2 ಸೈಟ್, ಚಿತ್ರದುರ್ಗದಲ್ಲಿ 10 ಎಕರೆ ಜಮೀನು, ಮೂರು ಕಾರು, ಒಂದು ಟ್ರಾಕ್ಟರ್, ಮೂರು ದ್ವಿ ಚಕ್ರ ವಾಹನವನ್ನು ಹೊಂದಿದ್ದಾರೆ.

    ಶ್ರೀನಿವಾಸ್
    ಧಾರವಾಡದಲ್ಲಿ ಎಸಿಎಫ್ ಆಗಿರುವ ಶ್ರೀನಿವಾಸ್ ಚಿತ್ರದುರ್ಗದಲ್ಲಿ ವಾಸವಾಗಿದ್ದಾರೆ. ಅಂದಾಜು 7 ಕೋಟಿ ರೂ. ಆಸ್ತಿ ಇದೆ. 2 ಐಶಾರಾಮಿ ಮನೆ, 1 ತೋಟದ ಮನೆ, 63 ಲಕ್ಷ  ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು, 4.87 ಲಕ್ಷ ರೂ. ನಗದು, ಬ್ಯಾಂಕ್ ಖಾತೆಯಲ್ಲಿ 5 ಲಕ್ಷ ಕ್ಯಾಶ್, 850 ಗ್ರಾಂ ಚಿನ್ನ, 3.500 ಕೆಜಿ ಬೆಳ್ಳಿ, ಎರಡು ಕಾರು, ಒಂದು ಟ್ರಾಕ್ಟರ್, ಒಂದು ಬೈಕ್ ಪತ್ತೆಯಾಗಿದೆ.

    ಜಯರಾಜ
    ಮಂಗಳೂರು ಪಾಲಿಕೆಯಲ್ಲಿ ಟೌನ್ ಪ್ಲಾನಿಂಗ್ ಆಫೀಸರ್ ಆಗಿರುವ ಜಯರಾಜ ಬಳಿ ಅಂದಾಜು 3.50 ಕೋಟಿ ರೂ. ಮೌಲ್ಯದ ಆಸ್ತಿಯಿದೆ. 8 ಲಕ್ಷ ರೂ. ನಗದು, 1.5 ಕೋಟಿ  ರೂ. ಮೌಲ್ಯದ ಆಸ್ತಿ ದಾಖಲೆ ಪತ್ರ, 500 ಮತ್ತು 2 ಸಾವಿರ ಮುಖಬೆಲೆ ನೋಟುಗಳು ಪತ್ತೆಯಾಗಿದೆ. ಪತ್ನಿಯ ಬ್ಯಾಂಕ್ ಅಕೌಂಟ್‍ನಲ್ಲಿ 1 ಕೋಟಿ ರೂ. ನಗದು, 160 ಗ್ರಾಂ ಚಿನ್ನಾಭರಣ, ಮಂಗಳೂರಿನಲ್ಲಿ ಅಪಾರ್ಟ್‍ಮೆಂಟ್, ಪಡೀಲ್‍ನಲ್ಲಿ ಮನೆ, ಕೇರಳದಲ್ಲಿರುವ ಜಯರಾಜ್ ಪತ್ನಿಯ ಕ್ವಾಟ್ರಸ್ ಮೇಲೂ ಎಸಿಬಿ ದಾಳಿ ಮಾಡಿದೆ.

  • ಬೆಳ್ಳಂಬೆಳಗ್ಗೆ ಡಿಕೆಶಿಗೆ ಶಾಕ್- ಮನೆ ಮೇಲೆ ಸಿಬಿಐ ದಾಳಿ

    ಬೆಳ್ಳಂಬೆಳಗ್ಗೆ ಡಿಕೆಶಿಗೆ ಶಾಕ್- ಮನೆ ಮೇಲೆ ಸಿಬಿಐ ದಾಳಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಸಿಬಿಐ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದು, ಮನೆಯ ಮೇಲೆ ರೇಡ್ ಮಾಡಿದ್ದಾರೆ.

    ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಇಂದು ಐವರು ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಡಿಕೆಶಿ ಮನೆಯ ಮೇಲೆ ದಾಳಿ ಮಾಡುವಂತೆ ರಾಜ್ಯ ಸರ್ಕಾರ ಸಿಬಿಐ ಅಧಿಕಾರಿಗಳಿಗೆ ಅನುಮತಿ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಇಂದು ಬೆಳಗ್ಗೆ 8 ಗಂಟೆಗೆ ಸಿಬಿಐ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿದ್ದು, ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಡಿಕೆಶಿಗೆ ಸೇರಿದ ಹಲವು ಕಡೆಗಳಲ್ಲಿ ಕೂಡ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

    ಕಳೆದ ವರ್ಷ ಸೆಪ್ಟೆಂಬರ್ 3ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿ ಡಿಕೆಶಿ ಜೈಲು ಸೇರಿದ್ದರು. ಇದೀಗ ಒಂದು ವರ್ಷ ಕಳೆಯುವ ಬೆನ್ನಲ್ಲೇ ಮತ್ತೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮನೆಯ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದು, ಅವರ ಮನೆಯಲ್ಲೂ ಶೋಧಕಾರ್ಯ ನಡೆಸುತ್ತಿದ್ದಾರೆ.

  • ಅಧಿಕಾರಿಗಳ ದಾಳಿ – ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ಜಾಲ ಪತ್ತೆ

    ಅಧಿಕಾರಿಗಳ ದಾಳಿ – ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ಜಾಲ ಪತ್ತೆ

    – 250 ಚೀಲ ಅಕ್ಕಿ, 3 ಓಮ್ನಿ, ಲಾರಿ ವಶ

    ಶಿವಮೊಗ್ಗ: ಕೊರೊನಾ ಭೀತಿಯಿಂದ ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಸಾಯಬಾರದು ಎಂಬ ಕಾರಣದಿಂದ ರಾಜ್ಯ ಸರ್ಕಾರ ಕಳೆದ ಎರಡು ದಿನಗಳಿಂದ ಎರಡು ತಿಂಗಳಿನದ್ದು ಪಡಿತರ ಅಕ್ಕಿ, ಗೋಧಿ ವಿತರಿಸುತ್ತಿದೆ. ಆದರೆ ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿ ಇದೀಗ ಸಿಕ್ಕಿಬಿದ್ದಿದ್ದಾರೆ.

    ಆಹಾರ ಇಲಾಖೆ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ನಗರದ ಹೊರ ವಲಯದ ಕಲ್ಲೂರು ಬಳಿಯ ಫಾರಂ ಹೌಸ್‍ವೊಂದರ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಪಡಿತರ ಅಕ್ಕಿ ಚೀಲವನ್ನು ಬೇರೊಂದು ಚೀಲಕ್ಕೆ ಹಾಕಿ ಮಾರಾಟಕ್ಕೆ ಯತ್ನಿಸುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಸ್ಥಳದಲ್ಲಿ 250 ಚೀಲ ಪಡಿತರ ಅಕ್ಕಿಯನ್ನು ಬೇರೆ ಚೀಲಕ್ಕೆ ಹಾಕುತ್ತಿದ್ದದ್ದು ಕಂಡು ಬಂದಿದೆ.

    ಸ್ಥಳಕ್ಕೆ ಭೇಟಿ ನೀಡಿ ದಾಳಿ ನಡೆಸಿದ ಅಧಿಕಾರಿಗಳು 250 ಚೀಲ ಅಕ್ಕಿ, ಅದನ್ನು ಸಾಗಿಸಲು ಬಳಸುತ್ತಿದ್ದ 3 ಓಮ್ನಿ ಕಾರು, 1 ಬೊಲೆರೋ ಪಿಕ್‍ಅಪ್, 1 ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಓರ್ವ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.