Tag: Raichurua

  • ರಾಯಚೂರು ಕೃಷಿ ವಿವಿಗೆ ನಕಲಿ ಪ್ರಮಾಣ ಪತ್ರ ಸಲ್ಲಿಸಿ ಪಿಎಚ್‍ಡಿ ಪಡೆದ ಮಾಜಿ ಕುಲಪತಿ ಪುತ್ರ

    ರಾಯಚೂರು ಕೃಷಿ ವಿವಿಗೆ ನಕಲಿ ಪ್ರಮಾಣ ಪತ್ರ ಸಲ್ಲಿಸಿ ಪಿಎಚ್‍ಡಿ ಪಡೆದ ಮಾಜಿ ಕುಲಪತಿ ಪುತ್ರ

    ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯ ಇತ್ತೀಚೆಗೆ ತನ್ನ ಸಾಧನೆಗಳಿಗಿಂತ ಎಡವಟ್ಟುಗಳಿಂದಲೇ ಸುದ್ದಿಯಾಗುತ್ತಿದೆ. ಕೃಷಿ ವಿಶ್ವವಿದ್ಯಾಲಯ ಆವರಣವನ್ನು ಮದುವೆ ಸಮಾರಂಭಗಳಿಗೆ ಬಾಡಿಗೆ ಕೊಟ್ಟು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾದ ಬೆನ್ನಲ್ಲೇ ಮತ್ತೊಂದು ಆರೋಪವನ್ನು ಎದುರಿಸುತ್ತಿದೆ.

    ವಿಶ್ವವಿದ್ಯಾಲಯ ಮಾಜಿ ಕುಲಪತಿ ಬಿ.ವಿ.ಪಾಟೀಲ್ ಅವರ ಪುತ್ರ ವಿನಯ್ ಪಾಟೀಲ್ ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಕೃಷಿ ಪದವಿ ಹಾಗೂ ಪಿಎಚ್‍ಡಿ ಪಡೆದಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಈ ಹಿಂದೆ ವಿಶ್ವವಿದ್ಯಾಲಯ ವಿಚಾರಣಾ ಸಮಿತಿ ಹೋರಾಟಗಾರರ ಆರೋಪವನ್ನು ಎತ್ತಿ ಹಿಡಿದಿತ್ತು. ಅಲ್ಲದೆ ಪ್ರಕರಣ ಹೈಕೋರ್ಟ್ ನಲ್ಲಿದೆ. ಹೀಗಿದ್ದರೂ ವಿನಯ್ ಪಾಟೀಲ್ ಅವರಿಗೆ ಪಿಎಚ್‍ಡಿ ಪ್ರಮಾಣ ಪತ್ರ ನೀಡಲಾಗಿದೆ ಅಂತ ಸ್ಥಳೀಯ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಜಕೀಯ ಪ್ರಭಾವ ಹಾಗೂ ಕೃಷಿ ವಿಶ್ವವಿದ್ಯಾಲಯ ಅಧಿಕಾರಿಗಳ ಲಾಬಿಯಿಂದ ಅನರ್ಹರಿಗೂ ಪಿಎಚ್‍ಡಿ ಸಿಗುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕು ಅಂತ ಹೋರಾಟಗಾರರು ಆಗ್ರಹಿಸಿದ್ದಾರೆ. ಇದನ್ನು ಓದಿ: ರಾಜಕಾರಣಿಗಳ ಮಕ್ಕಳ ಮದ್ವೆಗೆ ವೇದಿಕೆಯಾಗ್ತಿದೆ ಕೃಷಿ ವಿವಿ- ಸಾರ್ವಜನಿಕರು ಆಕ್ರೋಶ

    ಮಾಜಿ ಕುಲಪತಿ ಬಿ.ವಿ.ಪಾಟೀಲ್ ಅವರ ಪುತ್ರ ವಿನಯ್ ಪಾಟೀಲ್, ವಿವಿ ಆವರಣದಲ್ಲಿ ಇಸ್ಪೀಟ್ ಆಡಿದ್ದಾರೆ. ಮದ್ಯ ಸೇವನೆ ಸೇರಿದಂತೆ ಹಲವು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ಅನೇಕ ಬಾರಿ ನಾವು ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಷ್ಟು ಆರೋಪಗಳನ್ನು ಎದುರಿಸುತ್ತಿರುವ ವಿನಯ್ ಪಾಟೀಲ್‍ಗೆ ಗೋಲ್ಡ್ ಮೆಡಲ್ ಹಾಗೂ ಉದ್ಯೋಗ ನೀಡಲಾಗಿದೆ ಎಂದು ಹೋರಾಟಗಾರ ರವಿಕುಮಾರ್ ಆರೋಪಿಸಿದ್ದಾರೆ.

    ವಿನಯ್ ಪಾಟೀಲ್ ಹಗರಣಕ್ಕೆ ಹಾಗೂ ನಕಲಿ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದಂತೆ ಅನೇಕ ದಾಖಲೆಗಳನ್ನು ಸರ್ಕಾರಕ್ಕೆ ನೀಡಿದ್ದೇವೆ. ಇಲ್ಲಿಯವರೆಗೂ ಅವರ ವಿರುದ್ಧ ಸರ್ಕಾರ ಹಾಗೂ ಕೃಷಿ ಸಚಿವರು ಕ್ರಮಕೈಗೊಂಡಿಲ್ಲ ಎಂದು ದೂರಿದರು.

    ಬಿ.ವಿ.ಪಾಟೀಲ್ ಅವರು ತಮ್ಮ ಆದಾಯ ಪ್ರಮಾಣ ಪತ್ರದಲ್ಲಿದ್ದ 2 ಲಕ್ಷ ರೂ.ವನ್ನು 6.20 ಲಕ್ಷ ರೂ. ಎಂದು ತಿದ್ದುಪಡಿ ಮಾಡಿ ರೈತರ ಕೋಟಾದ ಅಡಿ ಮಗನಿಗೆ ಸೀಟ್ ಕೊಡಿಸಿದ್ದಾರೆ. ಈ ಕುರಿತು ದಾಖಲೆಗಳ ಸಮೇತ ರಾಜ್ಯಪಾಲರು ಹಾಗೂ ಕೃಷಿ ಸಚಿವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ನಾವು ಹೈಕೋರ್ಟ್ ಮೆಟ್ಟಿಲೇರಿದ್ದೇವೆ. ಕೋರ್ಟ್ ನಲ್ಲಿ ಪ್ರಕರಣ ಇದ್ದರೂ ವಿನಯ್ ಪಾಟೀಲ್‍ಗೆ ಪಿಎಚ್‍ಡಿ ನೀಡಲಾಗಿದೆ ಎಂದು ಹೋರಾಟಗಾರ ಟಿ.ಮಾರೆಪ್ಪ ಅಸಮಾಧಾನ ಹೊರಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv