Tag: Raichur Lockdown

  • ಲಾಕ್‍ಡೌನ್ ಮಧ್ಯೆಯೂ ಪಡಿತರಕ್ಕಾಗಿ ನೂಕುನುಗ್ಗಲು

    ಲಾಕ್‍ಡೌನ್ ಮಧ್ಯೆಯೂ ಪಡಿತರಕ್ಕಾಗಿ ನೂಕುನುಗ್ಗಲು

    -ರಾಯಚೂರಿನಲ್ಲಿ ಬ್ಯಾರಿಕೇಡ್ ತೆಗೆದು ಓಡಾಟ

    ರಾಯಚೂರು: ಲಾಕ್‍ಡೌನ್ ಮಧ್ಯೆಯೂ ಪಡಿತರ ತೆಗೆದುಕೊಳ್ಳಲು ರಾಯಚೂರಿನಲ್ಲಿ ಜನ ನೂಕು ನುಗ್ಗಲು ಮಾಡಿದ್ದಾರೆ. ಸಾಮಾಜಿಕ ಅಂತರವನ್ನ ಮರೆತು ನ್ಯಾಯ ಬೆಲೆ ಅಂಗಡಿ ಮುಂದೆ ಗುಂಪುಗುಂಪಾಗಿ ನಿಂತು ಜನ ಪಡಿತರ ಪಡೆಯುತ್ತಿದ್ದಾರೆ. ನಗರದ ಸಿಯತಲಾಬ್ ನ್ಯಾಯಬೆಲೆ ಅಂಗಡಿ ಮುಂದೆ ಜನ ಸಂದಣಿ ಹೆಚ್ಚಾದ ಹಿನ್ನೆಲೆ ಸ್ಥಳಕ್ಕೆ ಬಂದ ಅಧಿಕಾರಿಗಳು ಜನರನ್ನ ನಿಯಂತ್ರಿಸಿದ್ದಾರೆ.

    ಮಾಸ್ಕ್ ಧರಿಸದೆ ಪಡಿತರಕ್ಕಾಗಿ ಸಾಲಲ್ಲಿ ನಿಂತ ಜನ ನೂಕುನುಗ್ಗಲು ಮಾಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಪಡಿತರ ವಿತರಣೆ ಮಾಡುತ್ತಿರುವುದರಿಂದ ಜನ ಗುಂಪು ಸೇರಿದ್ದಾರೆ. ಪಡಿತರ ವಿತರಣೆ ಅವಧಿ ಕಡಿತವಾಗಿದ್ದರಿಂದ ಜನ ಹೆಚ್ಚು ಸೇರಬೇಕಾಗಿದೆ, ಬೆಳಗ್ಗೆಯಿಂದ ಸಂಜೆವರೆಗೆ ಪಡಿತರ ವಿತರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಇನ್ನೂ ರಾಯಚೂರಿನಲ್ಲಿ ಕೊರೊನಾ ವೈರಸ್ ಭೀತಿಯೇ ಮಾಯಾವಾಗಿದ್ದು ಜನ ಎಂದಿನಂತೆ ಓಡಾಡುತ್ತಿದ್ದಾರೆ. ಲಾಕ್‍ಡೌನ್‍ನ ನಾಲ್ಕನೇ ದಿನವೂ ರಾಯಚೂರಿನಲ್ಲಿ ಪರಿಸ್ಥಿತಿ ಬದಲಾಗಿಲ್ಲ. ಬ್ಯಾರಿಕೇಡ್ ಗಳನ್ನ ತೆಗೆದು ಜನ ಓಡಾಡುತ್ತಿದ್ದಾರೆ. ಹೀಗಾಗಿ ಲಾಕ್‍ಡೌನ್ ಬಿಗಿಗೊಳಿಸಲು ಪೊಲೀಸರು ವಾಹನಗಳ ಜಪ್ತಿಮಾಡಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಆಟೋ, ಕಾರು, ಬೈಕ್ ಗಳನ್ನು ಜಪ್ತಿಮಾಡಿ ದಂಡ ವಸೂಲಿ ಮಾಡುತ್ತಿದ್ದಾರೆ.

  • ನಾಳೆಯಿಂದ ರಾಯಚೂರು ಜಿಲ್ಲೆಯ ಎರಡು ನಗರ ಲಾಕ್‍ಡೌನ್

    ನಾಳೆಯಿಂದ ರಾಯಚೂರು ಜಿಲ್ಲೆಯ ಎರಡು ನಗರ ಲಾಕ್‍ಡೌನ್

    ರಾಯಚೂರು: ನಾಳೆಯಿಂದ ಜುಲೈ 22 ರವರೆಗೆ ರಾಯಚೂರು ನಗರ ಮತ್ತು ಸಿಂಧನೂರು ನಗರಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತಿದೆ. ತುರ್ತು ಹಾಗೂ ಅಗತ್ಯ ಸೇವೆಗಳಾದ ಕಿರಾಣಿ , ಔಷಧಿ ಅಂಗಡಿ, ಆಸ್ಪತ್ರೆ, ಪೆಟ್ರೋಲ್ ಬಂಕ್ ಹೊರತು ಪಡಿಸಿ ಉಳಿದೆಲ್ಲಾ ಕಾರ್ಯಚಟುವಟಿಕೆ ಸಂಪೂರ್ಣ ಬಂದ್ ಇರುತ್ತದೆ. ಜಿಲ್ಲೆಯ ಉಳಿದ ತಾಲೂಕುಗಳಾದ ದೇವದುರ್ಗ, ಲಿಂಗಸುಗೂರು, ಸಿರವಾರ, ಮಸ್ಕಿ ಹಾಗೂ ಮಾನ್ವಿಯಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಎಲ್ಲದಕ್ಕೂ ಅವಕಾಶ ಇದ್ದು ನಂತರ ಸಂಪೂರ್ಣ ಬಂದ್ ಇರುತ್ತದೆ.

    ರಾಯಚೂರು ಜಿಲ್ಲಾಡಳಿತ ಲಾಕ್‍ಡೌನ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ರಾಯಚೂರು, ಸಿಂಧನೂರು ನಗರದಲ್ಲಿ ಸಂಪೂರ್ಣ ಲಾಕ್ ಡೌನ್ ಘೊಷಿಸಿದೆ. ಅವಶ್ಯಕ ವಸ್ತುಗಳ ಹಾಗೂ ಅಗತ್ಯ ಸೇವೆಗಳಿಗಾಗಿ ಸಮಯ ನಿಗದಿ ಮಾಡಿದ್ದು, ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಮಯ ನಿಗದಿ ಮಾಡಿದೆ. ಅಗತ್ಯ ಹಾಗೂ ತುರ್ತು ಸೇವೆಗಳಿಗೆ ಯಾವುದೇ ನಿರ್ಬಂಧ ಇಲ್ಲ. ಅನಾವಶ್ಯಕವಾಗಿ ಜನರು ಮನೆಬಿಟ್ಟು ಹೊರ ಬರುವಂತಿಲ್ಲ. ಸಿಟಿ ಬಸ್ ಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ತುರ್ತು ಸೇವೆಗಳಿಗಾಗಿ ಜನರು ಓಡಾಟ ಮಾಡಬಹುದು. ಕೃಷಿ ಚುಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇಲ್ಲ.

    ಸರ್ಕಾರಿ ಕಚೇರಿಯಲ್ಲಿ ಶೇ.50ರಷ್ಟು ಉದ್ಯೋಗಿಗಳು ಕೆಲಸ ಮಾಡಬಹುದು. 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ ಮಕ್ಕಳು ಮನೆಯಲ್ಲೇ ಇರಬೇಕು. ಸಾರಿಗೆ ಬಸ್ ಗಳು ಎರಡು ನಗರ ಹೊರತುಪಡಿಸಿ ಇತರ ಕಡೆಗಳಿಗೆ ಸಂಚರಿಸಬಹುದು.

    ರಾಯಚೂರು ಜಿಲ್ಲೆಯ ಎರಡು ನಗರಗಳಲ್ಲಿ ಮಾತ್ರ ಲಾಕ್‍ಡೌನ್ ಇದ್ದು, ಜಿಲ್ಲೆಯ ಇನ್ನುಳಿದ ಕಡೆ ಅನ್‍ಲಾಕ್-2 ಮಾರ್ಗಸೂಚಿ ಅನ್ವಯವಾಗಲಿದೆ. ಜಿಲ್ಲೆಯಾದ್ಯಂತ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವ್ಯಾಪಾರ- ವಹಿವಾಟಿಗೆ ಅವಕಾಶ ನೀಡಲಾಗಿದೆ. ರಾಯಚೂರು ಜಿಲ್ಲೆಗೆ ಬೇರೆ ಜಿಲ್ಲೆಗಳಿಂದ ಬಂದರೆ ಕಡ್ಡಾಯವಾಗಿ ಒಂದು ವಾರ ಹೋಂ ಕ್ವಾರಂಟೇನ್ ಸೂಚಿಸಲಾಗಿದೆ. ಮದುವೆ ಸಮಾರಂಭ, ಅಂತ್ಯಸಂಸ್ಕಾರಕ್ಕೆ ಕೇವಲ 20 ಜನರಿಗೆ ಅವಕಾಶ ನೀಡಲಾಗಿದೆ. ರಾಜಕೀಯ ಕಾರ್ಯಕ್ರಮ, ಪ್ರತಿಭಟನೆಗಳಿಗೆ ಒಂದು ವಾರ ಜಿಲ್ಲೆಯಾದ್ಯಂತ ನಿಷೇಧ ಮಾಡಲಾಗಿದೆ.

    ಇನ್ನೂ ಲಾಕ್ ಡೌನ್ ಯಶಸ್ವಿಗೊಳಿಸಲು ಇಬ್ಬರು ಎಸ್ ಪಿ , ಇಬ್ಬರು ಡಿವೈಎಸ್ಪಿ, 7 ಸಿಪಿಐ, 15 ಪಿಎಸ್‍ಐ, 450 ಸಿಬ್ಬಂದಿ ಹಾಗೂ 4 ಡಿಎಆರ್ ತುಕಡಿಗಳನ್ನ ನೇಮಿಸಲಾಗಿದೆ. 45 ಕಡೆ ಚೆಕ್ ಪೋಸ್ಟ್ ಗಳನ್ನು ಹಾಕಿ ವಿಶೇಷ ಕಾರ್ಯಾಚರಣೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ. ಹಾಗಾಗಿ ಅನವಶ್ಯಕವಾಗಿ ತಿರುಗಾಡಿದಲ್ಲಿ ಹಾಗೂ ಮಾಸ್ಕ್ ಧರಿಸದೆ ತಿರುಗಾಡುವವರ ಮೇಲೆ ಸೂಕ್ತ ಶಿಸ್ತಿನ ಕಾನೂನು ಕ್ರಮವನ್ನು ಜರುಗಿಸುವುದಾಗಿ ಪೊಲೀಸ್ ಇಲಾಖೆ ಎಚ್ಚರಿಸಿದೆ.