Tag: rahulgandhi

  • ಕಾಂಗ್ರೆಸ್ ಹಿನ್ನಡೆಗೆ ಈ ಮೂರು ಕಾರಣಗಳಿವೆ ಅಂದ್ರು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ!

    ಕಾಂಗ್ರೆಸ್ ಹಿನ್ನಡೆಗೆ ಈ ಮೂರು ಕಾರಣಗಳಿವೆ ಅಂದ್ರು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ!

    ಬಾಗಲಕೋಟೆ: ಬಿಜೆಪಿಯಿಂದ ಇವಿಎಂ ಮತ ಯಂತ್ರದ ದುರ್ಬಳಕೆ, ಉದ್ಯಮಿಗಳ ಹಣದ ಪ್ರಭಾವ ಮತ್ತು ಅತಿಯಾದ ಸುಳ್ಳುಗಳೇ ಗುಜರಾತ್ ನಲ್ಲಿ ಕಾಂಗ್ರೆಸ್ ಹಿನ್ನಡೆಗೆ ಮೂರು ಕಾರಣಗಳು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದ್ದಾರೆ.

    ಚುನಾವಣಾ ಫಲಿತಾಂಶದ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ಜನರ ತೀರ್ಪಿಗೆ ತಲೆ ಬಾಗುತ್ತೇನೆ. ಹಿಮಾಚಲಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯಿಂದ ಸೋಲಾಗಿರೋದು ನಿಜ. ಗುಜರಾತ್ ದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಮೂರು ಕಾರಣಗಳಿದ್ದು, ಬಿಜೆಪಿಯಿಂದ ಇವಿಎಮ್ ಮತ ಯಂತ್ರದ ದುರ್ಬಳಕೆ, ಉದ್ಯಮಿಗಳ ಹಣದ ಪ್ರಭಾವ ಹಾಗೂ ಬಿಜೆಪಿಯ ಅತಿಯಾದ ಸುಳ್ಳುಗಳೇ ಕಾಂಗ್ರೆಸ್ ಹಿನ್ನಡೆಗೆ ಕಾರಣ ಅಂತ ಅವರು ಗಂಭೀರ ಆರೋಪ ಮಾಡಿದ್ರು.

    ಆದ್ರೆ ಈ ಫಲಿತಾಂಶ ಕರ್ನಾಟಕ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 2018ರ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ಕಾಂಗ್ರೆಸ್ ಪಕ್ಷ. ಇವುಗಳ ಮಧ್ಯೆ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಿದೆ. ರಾಜ್ಯದ ಯಾವ ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷಕ್ಕೆ ಹೋಗಲ್ಲ. ಒಂದು ವೇಳೆ ಹೋದ್ರೆ ರಾತ್ರಿ ನೀರಿಲ್ಲದ ಬಾವಿ ಕಂಡು ಹಗಲು ಬಿದ್ದಂತೆ ಅಂತ ಅವರು ಹೇಳಿದ್ರು.

     

  • ಗುಜರಾತ್ ನಲ್ಲಿ ಇಂದಿನಿಂದ ಮೋದಿ ರ‍್ಯಾಲಿ – ಟಿಕೆಟ್ ಹಂಚಿಕೆಯಲ್ಲಿ ಸುಸ್ತಾದ ಕೈ

    ಗುಜರಾತ್ ನಲ್ಲಿ ಇಂದಿನಿಂದ ಮೋದಿ ರ‍್ಯಾಲಿ – ಟಿಕೆಟ್ ಹಂಚಿಕೆಯಲ್ಲಿ ಸುಸ್ತಾದ ಕೈ

    ಗಾಂಧಿನಗರ: 2019ರ ಚುನಾವಣೆಗೆ ನಿರ್ಣಾಯಕ ಎನ್ನಲಾಗಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ.

    22 ವರ್ಷಗಳಿಂದ ಅಧಿಕಾರದ ಗದ್ದುಗೆ ಹಿಡಿದಿರುವ ತವರು ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿಗೆ ಬೆಟ್ಟದಂತ ಸವಾಲಾಗಿದೆ.

    ಇಂದು ಒಂದೇ ದಿನ ಮೋದಿ, ಐದು ಜಿಲ್ಲೆಗಳಲ್ಲಿ ಬೃಹತ್ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭೂಕಂಪಕ್ಕೆ ನಲುಗಿದ್ದ ಭುಜ್, ರಾಜ್‍ಕೋಟ್‍ನ ಜಸ್ ದನ್, ಅಮ್ರೆಲಿಯ ಧಾರಿ, ಗುಜರಾತ್‍ನ ಕಮ್ರೇಜ್‍ನಲ್ಲಿ ಮತಯಾಚಿಸಲಿದ್ದಾರೆ. ನಾಳೆ ಸೋಮನಾಥ್ ಬಳಿಯ ಮೋರ್ಬಿ, ಪ್ರಾಚಿ, ದಕ್ಷಿಣ ಗುಜರಾತ್‍ನ ನವ್ರಾಸಿ ಮತ್ತು ಭಾವ್‍ನಗರದ ಪಾಲಿಠಾನದಲ್ಲಿ ಪ್ರಚಾರ ಮಾಡಲಿದ್ದಾರೆ.

    ಬಿಜೆಪಿ ವಿರುದ್ಧ ತೊಡೆತಟ್ಟಿರುವ ಪಾತಿದಾರ್, ದಲಿತ ಮತ್ತು ಸಣ್ಣ ವ್ಯಾಪಾರಿಗಳಿಗೆ ಮೋದಿ ಎರಡು ದಿನಗಳ ತಮ್ಮ ಭಾಷಣದಲ್ಲಿ ಏನು ಸಮಾಧಾನ ಹೇಳುತ್ತಾರೆ ಅನ್ನೋದು ತುಂಬಾನೇ ಕುತೂಹಲ ಮೂಡಿಸಿದೆ. ಮೋದಿ ನಾಡಲ್ಲಿ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿರುವ ರಾಹುಲ್ ಗಾಂಧಿ, ಗುಜರಾತ್ ಅಭಿವೃದ್ಧಿ ಎಲ್ಲಾಗಿದೆ ಎಂಬ ಪ್ರಶ್ನೆಗಳನ್ನು ಕೇಳುತ್ತಾ ಟಾರ್ಗೆಟ್ ಮಾಡ್ತಿದ್ದಾರೆ.

    ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸರ್ಕಾರವನ್ನೇ ಗುಜರಾತಿನಲ್ಲಿ ತೊಡಗಿಸಿಕೊಂಡಿರುವ ಬಿಜೆಪಿ ಕೊನೆಯ ಕ್ಷಣದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರಿಗೂ ಮೊರೆ ಹೋಗಿದೆ. ಆಕ್ರೋಶಿತಗೊಂಡಿರುವ ಸಮುದಾಯವನ್ನ ಆರ್ ಎಸ್ ಎಸ್ ಕಾರ್ಯಕರ್ತರು ಸಮಾಧಾನ ಮಾಡೋ ಸರ್ಕಸ್ ಮಾಡ್ತಿದ್ದಾರೆ. ಜಿಎಸ್‍ಟಿ, ದಲಿತರ ಮೇಲಿನ ಹಲ್ಲೆ, ಪಟೇಲ್ ಮೀಸಲಾತಿ ಬಗ್ಗೆಯೆಲ್ಲಾ ಬಿಜೆಪಿ ನಿಲುವೇನು ಎಂಬ ಬಗ್ಗೆ ಮನವರಿಕೆ ಮಾಡೋ ಹರಸಾಹಸ ಪಡ್ತಿದ್ದಾರೆ. ಕಾಂಗ್ರೆಸ್‍ಗೆ ಬೆಂಬಲ ಘೋಷಿಸಿರುವ ಹಾರ್ದಿಕ್ ಪಟೇಲ್, ಮುಖ್ಯಮಂತ್ರಿ ವಿಜಯ್ ರೂಪಾನಿ ವಿರುದ್ಧ ಸೇರಿದಂತೆ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‍ನಲ್ಲಿ 10 ಮೆಗಾ ರ‍್ಯಾಲಿಗಳನ್ನು ನಡೆಸಲಿದ್ದಾರೆ.

    ಇತ್ತ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗುಜರಾತ್ ಕಾಂಗ್ರೆಸ್‍ನಲ್ಲಿ ಬಿರುಗಾಳಿ ಎದ್ದಿದೆ. ಒಂದು ಕಡೆ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿರುಗಾಳಿಯಂತೆ ಪ್ರಚಾರ ಮಾಡ್ತಿದ್ರೂ ಯಾರಿಗೆ ಟಿಕೆಟ್ ಕೊಡ್ಬೇಕು ಅನ್ನೋದೇ ಕೈಗೆ ತಲೆನೋವಾಗಿದೆ. ನಿನ್ನೆಯಷ್ಟೇ ತಡ ರಾತ್ರಿ 70 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ವಿಚಿತ್ರ ಅಂದ್ರೆ ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನ. 14 ಅಭ್ಯರ್ಥಿಗಳಿಗೆ ದೂರವಾಣಿ ಮೂಲಕವೇ ನಾಮಪತ್ರ ಸಲ್ಲಿಸುವಂತೆ ಸೂಚಿಸಲಾಗಿದೆ.

    ಮೊದಲ ಹಂತದಲ್ಲಿ ಡಿಸೆಂಬರ್ 9ರಂದು ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‍ನ 89 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಉಳಿದ ಸ್ಥಾನಗಳಿಗೆ ಡಿಸೆಂಬರ್ 14 ಉಳಿದ 93 ಸ್ಥಾನಗಳಲ್ಲಿ ಮತದಾನ ನಡೆಯಲಿದೆ. ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿಯುವುದನ್ನು ತಪ್ಪಿಸಲು ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ಟಿಕೆಟ್ ಘೋಷಣೆ ಮಾಡೋ ತಂತ್ರಕ್ಕೆ ಮೊರೆ ಹೋಗಿದೆ.

  • ರಾಹುಲ್‍ಗಾಂಧಿಗಾಗಿ ಝೀರೋ ಟ್ರಾಫಿಕ್- ವಾಹನ ತಡೆದಿದ್ದಕ್ಕೆ ಪೇದೆಗೆ ಕಪಾಳಮೋಕ್ಷ ಮಾಡಿದ ಮಹಿಳೆಯ ಬಂಧನ

    ರಾಹುಲ್‍ಗಾಂಧಿಗಾಗಿ ಝೀರೋ ಟ್ರಾಫಿಕ್- ವಾಹನ ತಡೆದಿದ್ದಕ್ಕೆ ಪೇದೆಗೆ ಕಪಾಳಮೋಕ್ಷ ಮಾಡಿದ ಮಹಿಳೆಯ ಬಂಧನ

    ಬೆಂಗಳೂರು: ಕರ್ತವ್ಯನಿರತ ಪೊಲೀಸ್ ಪೇದೆಗೆ ಮಹಿಳೆಯೊಬ್ಬಳು ಕಪಾಳಮೋಕ್ಷ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಕೆ.ಜಿ. ಹಳ್ಳಿ ಸಂಚಾರಿ ಪೊಲೀಸ್ ಠಾಣೆಯ ಪೇದೆ ವೆಂಕಟೇಶ್ ಅವರಿಗೆ ಸಾರಿಕಾ ಎಂಬ ಮಹಿಳೆ ಕಪಾಳಮೋಕ್ಷ ಮಾಡಿದ್ದು, ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಘಟನೆ?: ಜೂ. 12ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಬಂದ ದಿನ ಈ ಘಟನೆ ನಡೆದಿದೆ. ಅಂದು ರಾಹುಲ್ ಗಾಂಧಿ ವಸಂತನಗರದ ಅಂಬೇಡ್ಕರ್ ಭವನಕ್ಕೆ ತೆರಳುತ್ತಿದ್ರು. ರಾಹುಲ್ ಗಾಂಧಿ ತೆರಳುತ್ತಿದ್ದ ಮಾರ್ಗದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಇತ್ತು. ಬೆಂಗಾವಲು ಕಾರಿನ ಹಿಂದೆಯೇ ಈ ಮಹಿಳೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಳು. ಇದನ್ನ ಕಂಡು ವೆಂಕಟೇಶ್ ಮಹಿಳೆಯ ವಾಹನವನ್ನ ಅಡ್ಡಗಟ್ಟಿದ್ದರು. ವಾಹನ ತಡೆದಿದ್ದಕ್ಕೆ ಆಕ್ರೋಶಗೊಂಡ ಆಕೆ ಕಪಾಳಮೋಕ್ಷ ಮಾಡಿದ್ದಾಳೆ.

    ಈ ಬಗ್ಗೆ ಪೇದೆಯಿಂದ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಗಿತ್ತು. ಇದೀಗ ಸಾರಿಕಾಳನ್ನು ಪೊಲೀಸರು ಬಂಧಿಸಿದ್ದು, ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೇಸ್ ದಾಖಲಿಸಿದ್ದಾರೆ.

  • ಯುಪಿ ಸಿಎಂ ಯೋಗಿ ಆದಿತ್ಯನಾಥ್‍ರನ್ನು ಹೊಗಳಿದ ರಾಹುಲ್ ಗಾಂಧಿ

    ಯುಪಿ ಸಿಎಂ ಯೋಗಿ ಆದಿತ್ಯನಾಥ್‍ರನ್ನು ಹೊಗಳಿದ ರಾಹುಲ್ ಗಾಂಧಿ

    ನವದೆಹಲಿ: ಉತ್ತರಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ಧಾರಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶಂಸೆ ವ್ಯಕ್ತಪಡಿಸಿದ್ದು ಇದೊಂದು ಸರಿಯಾದ ನಿರ್ಧಾರ ಅಂತಾ ಹೇಳಿದ್ದಾರೆ.

    ಇದೇ ವೇಳೆ ರಾಜ್ಯಗಳ ನಡುವೆ ಯಾವುದೇ ತಾರತಮ್ಯ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸಾಲ ಮನ್ನಾದಿಂದ ಉತ್ತರಪ್ರದೇಶದ ರೈತರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ, ಆದರೆ ಈ ಹೆಜ್ಜೆ ಸರಿಯಾದ ಮಾರ್ಗದಲ್ಲಿದೆ. ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡುವುದನ್ನ ಕಾಂಗ್ರೆಸ್ ಯಾವಾಗಲೂ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

    ಉತ್ತರಪ್ರದೇಶದಲ್ಲಿ ಕೊನೆಗೂ ಬಿಜೆಪಿ ರೈತರ ಸಾಲ ಮನ್ನಾ ಮಾಡಿರುವುದು ನನಗೆ ಸಂತಸ ತಂದಿದೆ. ದೇಶದಲ್ಲಿ ಸಂಕಷ್ಟದಲ್ಲಿರೋ ಬಡ ರೈತರೊಂದಿಗೆ ರಾಜಕೀಯ ಮಾಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸಲಹೆ ನೀಡಿದ್ರು.

    ಉತ್ತಪ್ರದೇಶದ ಚುನಾವಣೆಯ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿತ್ತು. ಅದರಂತೆ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಯೋಗಿ ಆದಿತ್ಯನಾಥ್ ರಾಜ್ಯದ ರೈತರ 36,359 ಕೋಟಿ ರೂ. ಸಾಲ ಮನ್ನಾ ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ.

    2.15 ಕೋಟಿ ರೈತರಲ್ಲಿ 1 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡಿದ್ದಾರೆ. ಇದರ ಜೊತೆಗೆ ಪಾಳು ಬಿದ್ದಿರುವ ಜಮೀನು ಹೊಂದಿರುವ 7 ಲಕ್ಷ ರೈತರ 5,630 ಕೋಟಿ ರೂಪಾಯಿ ಮನ್ನಾ ಮಾಡಿದ್ದಾರೆ.2016ರ ಮಾರ್ಚ್ 31ರವರೆಗೆ ಸಾಲ ಪಡೆದ ರೈತರಿಗೆ ಇದು ಅನ್ವಯವಾಗಲಿದೆ. 2017ರ ಮಾರ್ಚ್‍ಗೆ 31ರವರೆಗೆ ಬಾಕಿಯಿರೋ ಸಾಲವನ್ನ ಸರ್ಕಾರ ಪಾವತಿಸುತ್ತದೆ.

  • ನಾಲ್ಕು ರಾಜ್ಯಗಳಲ್ಲಿ ಮೋದಿ ಭರ್ಜರಿ ಕಮಾಲ್

    ನಾಲ್ಕು ರಾಜ್ಯಗಳಲ್ಲಿ ಮೋದಿ ಭರ್ಜರಿ ಕಮಾಲ್

    ಚುನಾವಣೋತ್ತರ ಸಮೀಕ್ಷೆಯಲ್ಲಿ ಕಮಲ ಕಿಲಕಿಲ
    – ಆನೆ ಜೊತೆ ಸೈಕಲ್ ತುಳಿಯಲು ಅಖಿಲೇಶ್ ಸಿದ್ದ

    ನವದೆಹಲಿ: ದೇಶವೇ ಕುತೂಹಲದಿಂದ ಕಾಯುತ್ತಿದ್ದ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ಬಹಿರಂಗವಾಗಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

    ಪಂಜಾಬ್‍ನಲ್ಲಿ ಆಪ್, ಗೋವಾ ಅತಂತ್ರ, ಉತ್ತರಾಖಂಡ್ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಅಂತ ಸಮೀಕ್ಷೆ ನಡೆಸಿರುವ ರಾಷ್ಟ್ರೀಯ ವಾಹಿನಿಗಳು, ಸುದ್ದಿ ಸಂಸ್ಥೆಗಳು ಹೇಳಿವೆ.

    ಇಂದು ಚುನಾವಣೋತ್ತರ ಸಮೀಕ್ಷೆಯಾದರೂ ಇದೇ 11ಕ್ಕೆ ಫಲಿತಾಂಶ ಅಧಿಕೃತವಾಗಿ ಹೊರಬರಲಿದೆ. ಸಮೀಕ್ಷೆಗಳ ಫಲಿತಾಂಶದಿಂದ ಬಿಜೆಪಿ ನಾಯಕರು ಹಿಗ್ಗಿದ್ದಾರೆ.

    ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಇತರೆ ರಾಜ್ಯಗಳ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳೋದು ಗ್ಯಾರಂಟಿ. ಇನ್ನು, ಈ ಫಲಿತಾಂಶ ದೇಶದ ರಾಜಕೀಯ, ಆರ್ಥಿಕ, ಆಡಳಿತಾತ್ಮಕ ವಿಷ್ಯಗಳಲ್ಲಿ ಭಾರೀ ಮಹತ್ವ ಪಡೆದಿದೆ. ಈ ಮಧ್ಯೆ, ಬಿಜೆಪಿಯನ್ನ ಹೊರಗಿಡಲು ಬಿಎಸ್‍ಪಿ ಜೊತೆಗಾದರೂ ಮೈತ್ರಿಗೆ ಸಿದ್ಧ ಅಂತ ಸಿಎಂ ಅಖಿಲೇಶ್ ಯಾದವ್ ಘೋಷಿಸಿದ್ದಾರೆ.

    ಹೀಗಾಗಿ ಇಲ್ಲಿ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ, ಚುನಾವಣಾ ಪೂರ್ವ ಸಮೀಕ್ಷೆ, 2012ರ ವಿಧಾನಸಭಾ ಚುನಾವಣೆ, 2014ರ ಲೋಕಸಭಾ ಚುನಾವಣಾ ಫಲಿತಾಂಶ ಮಾಹಿತಿಯನ್ನು ನೀಡಲಾಗಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಪಡೆದ ಮತಗಳನ್ನು ಲೆಕ್ಕ ಹಾಕಿದ್ರೆ ಈಗ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎನ್ನುವ ಮಾಹಿತಿಯೂ ಇದೆ.

    ಉತ್ತರ ಪ್ರದೇಶ
    ಒಟ್ಟು ಕ್ಷೇತ್ರ – 403
    ಸರಳ ಬಹುಮತ – 202
    ಒಟ್ಟು 7 ಹಂತಗಳಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 4,843
    ಒಟ್ಟು ಮತದಾರರು – 10.18 ಕೋಟಿ

    ಪಂಜಾಬ್ 
    ಒಟ್ಟು ಕ್ಷೇತ್ರಗಳು – 117 ಕ್ಷೇತ್ರ
    ಸರಳ ಬಹುಮತ – 59
    ಒಂದೇ ಹಂತದಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 1,145
    ಒಟ್ಟು ಮತದಾರರು – 1,98,76,069

    ಗೋವಾ
    ಒಟ್ಟು ಕ್ಷೇತ್ರಗಳು – 40 ಕ್ಷೇತ್ರ
    ಸರಳ ಬಹುಮತ – 21
    ಒಂದೇ ಹಂತದಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 251
    ಒಟ್ಟು ಮತದಾರರು – 11,10,884

    ಉತ್ತರಾಖಂಡ್
    ಒಟ್ಟು ಕ್ಷೇತ್ರಗಳು – 70
    ಒಂದೇ ಹಂತದಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 628
    ಒಟ್ಟು ಮತದಾರರು – 75,12,559

    ಮಣಿಪುರ
    ಒಟ್ಟು ಕ್ಷೇತ್ರಗಳು – 60
    ಎರಡು ಹಂತಗಳಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 266
    ಒಟ್ಟು ಮತದಾರರು – 19.02 ಲಕ್ಷ

     

  • ಉತ್ತರಪ್ರದೇಶದ ಗದ್ದುಗೆ ಯಾರಿಗೆ: ಸಮೀಕ್ಷೆಗಳ ಫಲಿತಾಂಶ ಇಲ್ಲಿದೆ

    ಉತ್ತರಪ್ರದೇಶದ ಗದ್ದುಗೆ ಯಾರಿಗೆ: ಸಮೀಕ್ಷೆಗಳ ಫಲಿತಾಂಶ ಇಲ್ಲಿದೆ

    ನವದೆಹಲಿ: ಉತ್ತರಪ್ರದೇಶದಲ್ಲಿ ಈ ಬಾರಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಟೈಮ್ಸ್ ನೌ ಹೊರತು ಪಡಿಸಿ ಉಳಿದ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ 190 ಅಸುಪಾಸಿನಲ್ಲಿ ಸ್ಥಾನಗಳನ್ನು ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿದಿದೆ. ಹೀಗಾಗಿ ಇಲ್ಲಿ ಎಲ್ಲ ಸಮೀಕ್ಷೆಗಳ ವಿವರವನ್ನು ನೀಡಲಾಗಿದೆ.

    ಈ ವಿವರದ ಜೊತೆ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿತ್ತು? ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನ ಸಿಕ್ಕಿತ್ತು? ಲೋಕಸಭಾ ಚುನಾವಣೆಯಲ್ಲಿ ಬಿದ್ದಿರುವ ಶೇಕಡಾವಾರು ಮತಗಳನ್ನು ಲೆಕ್ಕ ಹಾಕಿದ್ರೆ ಈಗ ಎಷ್ಟು ಸ್ಥಾನವನ್ನು ಗೆಲ್ಲಬಹುದು ಎನ್ನುವ ಮಾಹಿತಿಯನ್ನು ನೀಡಲಾಗಿದೆ.

    ಉತ್ತರಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 202 ಸ್ಥಾನಗಳು ಬೇಕು. 2012ರ ಚುನಾವಣೆಯಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ 224 ಸ್ಥಾನವನ್ನು ಗೆದ್ದುಕೊಂಡಿತ್ತು. ಈ ಮೂಲಕ ಅಖಿಲೇಶ್ ಯಾದವ್ ಮೊದಲ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಪಟ್ಟವನ್ನು ಆಲಂಕರಿಸಿದ್ದರು.

  • ಕೊನೆಗೂ ಭೂಕಂಪ ಆಯ್ತು: ರಾಹುಲ್‍ಗೆ ಮೋದಿ ಟಾಂಗ್

    ನವದೆಹಲಿ: ಸೋಮವಾರದಂದು ಉತ್ತರ ಭಾರತದ ಹಲವೆಡೆ ಭೂಕಂಪ ಸಂಭವಿಸಿರುವ ಬೆನ್ನಲ್ಲೇ, ಕೊನೆಗೂ ಭೂಕಂಪ ಆಯ್ತು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.

    ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಿದ ಮೋದಿ, ಕೊನೆಗೂ ಭೂಕಂಪ ಆಯ್ತು. ಭೂಮಿ ತಾಯಿ ಕೋಪಗೊಂಡಿರಬಹುದು ಎಂದರು. ಈ ಹಿಂದೆ ರಾಹುಲ್ ಗಾಂಧಿ, ಮೋದಿ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ, ನಾನು ಸಂಸತ್ತಿನಲ್ಲಿ ಮಾತನಾಡಿದ್ರೆ ಭೂಕಂಪವಾಗುತ್ತೆ ಎಂದಿದ್ದರು.

    ಭಾರತದ ಪ್ರಜಾಪ್ರಭುತ್ವದ ಶಕ್ತಿಯ ಬಗ್ಗೆ ಮಾತನಾಡಿದ ಮೋದಿ, ಜನ ಶಕ್ತಿಯಿಂದಲೇ ಒಬ್ಬ ಟೀ ಮಾರುವವರ ಮಗ ದೇಶದ ಪ್ರಧಾನಿಯಾಗಿದ್ದು ಎಂದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.

    ಮಲ್ಲಿಕಾರ್ಜುನ್ ಖರ್ಗೆ ಅವರ ಟೀಕೆಗೆ ಉತ್ತರಿಸಿ, ನಾವು ನಾಯಿಗಳ ಪರಂಪರೆಯಿಂದ ಬೆಳೆದುಬಂದಿಲ್ಲ ಅಂದ್ರು. ಭಗತ್ ಸಿಂಗ್ ಮತ್ತು ಆಝಾದ್‍ರಂತಹವರು ಕೂಡ ಇದ್ದರು ಅನ್ನೋದನ್ನು ಇವರ ಬಾಯಲ್ಲಿ ಕೇಳೇ ಇಲ್ಲ. ಕೇವಲ ಒಂದು ಪರಿವಾರದಿಂದಲೇ ಸ್ವಾತಂತ್ರ್ಯ ಸಿಕ್ಕಿದೆ ಅಂದುಕೊಂಡಿದ್ದಾರೆ ಅಂತ ಉತ್ತರಿಸಿದ್ರು.

    ಕಾಂಗ್ರೆಸ್‍ನಲ್ಲಿ ಜವಹರ್ ಲಾಲ್ ನೆಹರೂ, ಇಂದಿರಾ ಗಾಂಧಿಯಂತ ನಾಯಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ರು. ಆದ್ರೆ ಬಿಜೆಪಿಯಿಂದ ಒಂದು ನಾಯಿ ಕೂಡ ಸತ್ತಿಲ್ಲ ಅಂತ ಖರ್ಗೆ ಹೇಳಿಕೆ ನೀಡಿದ್ದರು.

  • ಬಜೆಟ್ ಬಗ್ಗೆ ರಾಹುಲ್ ಗಾಂಧಿ ಹೀಗಂದ್ರು!

    ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದಿನ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಜೆಟ್ ಮಂಡನೆ ಮುಕ್ತಾಯಗೊಂಡ ಬಳಿಕ ಸಂಸತ್ತಿನ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ಬಾರಿಯ ಬಜೆಟ್‍ನಲ್ಲಿ ಯುವಕರಿಗೆ ಹಾಗೂ ರೈತರ ಪರವಾಗಿ ದೊಡ್ಡ ಮಟ್ಟದ ಘೋಷಣೆಗಳನ್ನು ಮಾಡಿಲ್ಲ ಎಂದು ಟೀಕಿಸಿದ್ದಾರೆ.

    ಇಂದಿನ ಬಜೆಟ್‍ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಒಳ್ಳೆಯ ಭಾಷಣ ಮಾಡಿದ್ದಾರೆ ಹೊರತು ಯುವಕರ ಉದ್ಯೋಗದ ಬಗ್ಗೆ ಯಾವುದೇ ಘೋಷಣೆಗಳನ್ನು ಮಾಡಿಲ್ಲ. ಹೀಗಾಗಿ ನಿರುದ್ಯೋಗಸ್ಥ ಯುವಕರಿಗೆ ಹಾಗೂ ರೈತರಿಗೆ ಇದರಿಂದ ಯಾವುದೇ ಲಾಭಗಳಿಲ್ಲ ಎಂದು ತಿಳಿಸಿದ್ದಾರೆ.

    ಬಳಿಕ ರೈಲ್ವೇ ಬಜೆಟ್ ಬಗ್ಗೆ ಮಾತನಾಡಿದ ಅವರು, ಈ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ಬುಲೆಟ್ ಟ್ರೈನ್ ಬರುತ್ತದೆ ಅಂತಾ ಹೇಳಿದ್ರು. ಆದ್ರೆ ಈ ರೈಲು ಬರುತ್ತಾ ಅಂತಾ ಪ್ರಶ್ನಿಸಿದ್ದಾರೆ. ಇನ್ನು ರಾಜಕೀಯ ಫಂಡ್ ಗೆ ಸಂಬಂಧಿಸಿದಂತೆ ಸರ್ಕಾರದ ಎಲ್ಲಾ ಕ್ರಮಗಳನ್ನು ಬೆಂಬಲಿಸುತ್ತೇನೆ ಅಂತಾ ಹೇಳಿದ್ರು.