Tag: Rahul Tripathi

  • ಗಿಲ್‌ ಚೊಚ್ಚಲ ಶತಕ, ಶಮಿ, ಮೋಹಿತ್‌ ಬೆಂಕಿ ಬೌಲಿಂಗ್‌ – ಗುಜರಾತ್‌ ಪ್ಲೇ ಆಫ್‌ಗೆ, ಹೈದರಾಬಾದ್‌ ಮನೆಗೆ

    ಗಿಲ್‌ ಚೊಚ್ಚಲ ಶತಕ, ಶಮಿ, ಮೋಹಿತ್‌ ಬೆಂಕಿ ಬೌಲಿಂಗ್‌ – ಗುಜರಾತ್‌ ಪ್ಲೇ ಆಫ್‌ಗೆ, ಹೈದರಾಬಾದ್‌ ಮನೆಗೆ

    ಅಹಮದಾಬಾದ್‌: ಶುಭಮನ್‌ ಗಿಲ್‌ (Shubman Gill)  ಭರ್ಜರಿ ಶತಕದ ಬ್ಯಾಟಿಂಗ್‌ ಹಾಗೂ ಮೊಹಮ್ಮದ್‌ ಶಮಿ, ಮೋಹಿತ್‌ ಶರ್ಮಾ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡ ಹೈದರಾಬಾದ್‌ ವಿರುದ್ಧ 34 ರನ್‌ಗಳ ಜಯ ಸಾಧಿಸಿದೆ.

    ಈ ಮೂಲಕ 2023ರ ಆವೃತ್ತಿಯಲ್ಲೂ 13ರ ಪೈಕಿ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್‌ಗೆ ಭರ್ಜರಿ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ.‌ ಸತತ ಸೋಲಿನಿಂದ ಕಂಗೆಟ್ಟಿದ್ದ ಹೈದರಾಬಾದ್‌  (Sunrisers Hyderabad) ತಂಡ 12 ಪಂದ್ಯಗಳಲ್ಲಿ ಕೇವಕ 4ರಲ್ಲಿ ಗೆಲುವು ಸಾಧಿಸಿ ಬಹುತೇಕ ಮನೆಗೆ ಮರಳೋದು ಖಚಿತವಾಗಿದೆ.

    ಮೊದಲು ಬ್ಯಾಟಿಂಗ್‌ ಮಾಡಿದ ಟೈಟಾನ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 188 ರನ್‌ ಗಳಿಸಿತ್ತು. ಗೆಲುವಿಗೆ 189 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಹೈದರಾಬಾದ್‌ 20 ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 154ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಹೈದರಾಬಾದ್‌ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಪವರ್‌ ಪ್ಲೇ ಮುಗಿಯುವಷ್ಟರಲ್ಲೇ 45 ರನ್‌ ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. 9ನೇ ಓವರ್‌ ಮುಕ್ತಾಯಕ್ಕೆ 7 ವಿಕೆಟ್‌ ಕಳೆದುಕೊಂಡು ಗೆಲುವಿನ ಭರವಸೆಯನ್ನೇ ಕಳೆದುಕೊಂಡಿತು.

    ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಹೋರಾಟ ನಡೆಸಿದ ಹೆನ್ರಿಚ್‌ ಕಳಸೇನ್‌ ಅರ್ಧಶತಕ ಗಳಿಸಿದರು. ಕಳಸೇನ್‌ 44 ಎಸೆತಗಳಲ್ಲಿ 64 ರನ್‌ (4 ಬೌಂಡರಿ, 3 ಸಿಕ್ಸರ್‌) ಗಳಿಸಿದರು. ಇದರೊಂದಿಗೆ ಭುವನೇಶ್ವರ್‌ ಕುಮಾರ್‌ 27 ರನ್‌, ಕೊನೆಯಲ್ಲಿ ಮಯಾಂಕ್‌ ಮಾರ್ಕಂಡೆ 9 ಎಸೆತಗಳಲ್ಲಿ ಸ್ಫೋಟಕ 18 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳ ಕಳಪೆ ಪ್ರದರ್ಶನದಿಂದಾಗಿ ತಂಡ ಸೊಲೊಪ್ಪಿಕೊಳ್ಳಬೇಕಾಯಿತು.

    ಗುಜರಾತ್‌ ಟೈಟಾನ್ಸ್‌ ಪರ ಬೆಂಕಿ ಬೌಲಿಂಗ್‌ ದಾಳಿ ನಡೆಸಿದ ಮೊಹಮ್ಮದ್‌ ಶಮಿ 4 ಓವರ್‌ಗಳಲ್ಲಿ 21 ರನ್‌ ನೀಡಿ 4 ವಿಕೆಟ್‌ ಕಿತ್ತರೆ, ಮೋಹಿತ್‌ ಶರ್ಮಾ 4 ಓವರ್‌ಗಳಲ್ಲಿ 28 ರನ್‌ ನೀಡಿ 4 ವಿಕೆಟ್‌ ಉರುಳಿಸಿದರು. ಯಶ್‌ ದಯಾಳ್‌ 1 ವಿಕೆಟ್‌ ಪಡೆದರು.

    ಐಪಿಎಲ್‌ನಲ್ಲಿ ಗಿಲ್‌ ಚೊಚ್ಚಲ ಶತಕ: ಈ ವರ್ಷದ ಆರಂಭದಿಂದಲೂ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ ಶುಭಮನ್‌ ಗಿಲ್‌ ಈ ಬಾರಿ ಐಪಿಎಲ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸುತ್ತಿದ್ದಾರೆ. ಸೋಮವಾರದ ಪಂದ್ಯದಲ್ಲೂ ಹೈದರಾಬಾದ್‌ ಬೌಲರ್‌ಗಳನ್ನ ಬೆಂಡೆತ್ತಿದ್ದ ಗಿಲ್‌ ಶತಕ ಸಿಡಿಸಿ ಮಿಂಚಿದರು. 58 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್‌ನೊಂದಿಗೆ 101 ರನ್‌ ಗಳಿಸಿದರು. ಇದು ಐಪಿಎಲ್‌ನಲ್ಲಿ ಗಿಲ್‌ ಸಿಡಿಸಿದ ಚೊಚ್ಚಲ ಶತಕ ಹಾಗೂ ಟಿ20 ಫಾರ್ಮ್ಯಾಟ್‌ನಲ್ಲಿ ಚಚ್ಚಿದ 2ನೇ ಶತಕವಾಯಿತು. ಇದರೊಂದಿಗೆ ಸಾಯಿ ಸುದರ್ಶನ್‌ 36 ಎಸೆತೆಗಳಲ್ಲಿ 47 ರನ್‌ (6 ಬೌಂಡರಿ, 1 ಸಿಕ್ಸರ್‌) ಗಳಿಸಿ ಸಾಥ್‌ ನೀಡಿದರು. ಇವರಿಬ್ಬರ ಜೊತೆಯಾಟದಿಂದ 2ನೇ ವಿಕೆಟ್‌ ಪತನಕ್ಕೆ 14.1 ಓವರ್‌ಗಳಲ್ಲಿ 147 ರನ್‌ ಸೇರ್ಪಡೆಯಾಯಿತು.

    ಭುವಿ ಬೆಂಕಿ ಬೌಲಿಂಗ್‌: ಸನ್‌ ರೈಸರ್ಸ್‌ ಹೈದರಾಬಾದ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಭುವನೇಶ್ವರ್‌ ಕುಮಾರ್‌ 4 ಓವರ್‌ಗಳಲ್ಲಿ 30 ರನ್‌ ನೀಡಿ ‌ಪ್ರಮುಖ 5 ವಿಕೆಟ್‌ ಕಿತ್ತರೇ, ಮಾರ್ಕೊ ಜಾನ್ಸೆನ್‌, ಫಜಲ್‌ಹಕ್‌ ಫಾರೂಕಿ ಹಾಗೂ ಟಿ. ನಟರಾಜನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ಜೋರಾಯ್ತು IPL ಮ್ಯಾಚ್‌ ಫಿಕ್ಸಿಂಗ್‌ ಸದ್ದು

    ಜೋರಾಯ್ತು IPL ಮ್ಯಾಚ್‌ ಫಿಕ್ಸಿಂಗ್‌ ಸದ್ದು

    ಜೈಪುರ: ಐಪಿಎಲ್‌ನಲ್ಲಿ (IPL) ನೋಬಾಲ್‌ ವಿವಾದಗಳು (Noball Controversy) ಇದೇ ಮೊದಲೇನಲ್ಲಾ. ಪ್ರತೀ ಪಂದ್ಯದಲ್ಲೂ ಒಂದಿಲ್ಲೊಂದು ನೋಬಾಲ್‌ ಇದ್ದೇ ಇರುತ್ತವೆ. ಆದ್ರೆ ಕೆಲವೊಂದು ಪಂದ್ಯಗಳಲ್ಲಿ ಡೆತ್‌ ಓವರ್‌ಗಳಲ್ಲಿ ನೀಡುವ ನೋಬಾಲ್‌ ಇಡೀ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿವೆ.

    ಭಾನುವಾರ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ಹಾಗೂ ಹೈದರಾಬಾದ್‌ (Sunrisers Hyderabad) ನಡುವಿನ ಪಂದ್ಯದಲ್ಲಿ ರಾಜಸ್ಥಾನ್‌ ಆಟಗಾರ ಸಂದೀಪ್‌ ಶರ್ಮಾ (Sandeep Sharma) ನೀಡಿದ ನೋಬಾಲ್‌ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ನೆಟ್ಟಿಗರಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, ಮ್ಯಾಚ್‌ ಫಿಕ್ಸಿಂಗ್‌ ಸದ್ದು ಕೇಳಿಬರುತ್ತಿದೆ.

    ತವರಿನಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಬೌಲಿಂಗ್‌ನಲ್ಲಿದ್ದ ಸಂದೀಪ್‌ ಶರ್ಮಾ 19 ರನ್‌ ಬೇಕಿದ್ದಾಗ 14 ರನ್‌ ಚಚ್ಚಿಸಿಕೊಂಡಿದ್ದರು. ಕೊನೇ ಎಸೆತದಲ್ಲಿ 5 ರನ್‌ ಅಗತ್ಯವಿದ್ದಾಗ ಕ್ರೀಸ್‌ನಲ್ಲಿದ್ದ ಅಬ್ದುಲ್‌ ಸಮದ್‌ ಸಿಕ್ಸ್‌ ಸಿಡಿಸಲು ಪ್ರಯತ್ನಿಸಿ ಕ್ಯಾಚ್‌ ನೀಡಿದ್ದರು. ಆದ್ರೆ ಸಂದೀಪ್‌ ಶರ್ಮಾ ಕ್ರೀಸ್‌ನಲ್ಲಿ ನೋಬಾಲ್‌ ಕೊಟ್ಟಿದ್ದರು. ಇದರಿಂದ ರಾಜಸ್ಥಾನ್‌ ತಂಡಕ್ಕೆ ಪಂದ್ಯಗೆದ್ದ ಖುಷಿ ಮಿಂಚಿನಂತೆ ಮಾಯವಾಗಿ ಸೋಲಿನ ಕಹಿ ಅನುಭವಿಸುವಂತಾಯಿತು.

    ಇದಾದ ಬಳಿಕ ಇದು ಪಕ್ಕಾ ಮ್ಯಾಚ್‌ ಫಿಕ್ಸಿಂಗ್‌ ಎಂದು ನೆಟ್ಟಿಗರಿಂದ ಟೀಕೆಗಳು ವ್ಯಕ್ತವಾಗುತ್ತಿದೆ. ಸಂದೀಪ್‌ ಶರ್ಮಾ ಹಾಗೂ ರಾಜಸ್ಥಾನ್‌ ತಂಡದ ವಿರುದ್ಧ ಕ್ರಿಕೆಟ್‌ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: IPL 2023ː ಕೊನೇ ಎಸೆತದಲ್ಲಿ ನೋಬಾಲ್‌ ಎಡವಟ್ಟು – ಹೈದರಾಬಾದ್‌ಗೆ ರೋಚಕ ಜಯ

    ಐಪಿಎಲ್‌ನಲ್ಲಿ ಈ ಹಿಂದೆಯೂ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣಗಳು ಬೆಳಕಿಗೆ ಬಂದಿದೆ. ಟೀಂ ಇಂಡಿಯಾ ಮಾಜಿ ವೇಗಿ ಎಸ್‌ ಶ್ರೀಶಾಂತ್‌, ಅಂಕಿತ್‌ ಚವಾಣ್‌ ಹಾಗೂ ಅಜಿತ್‌ ಚಂಡೀಲಾ ಅವರು ಮ್ಯಾಚ್ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ಫ್ರಿನ್ಸಿಪಾಲ್‌ ಗುರುನಾಥ್‌ ಮೇಯಪ್ಪನ್‌ ಅವರು ಕೂಡ ಇವರ ಜೊತೆ ಶಿಕ್ಷೆಗೆ ಒಳಗಾಗಿದ್ದರು. ಬಾಂಗ್ಲಾದೇಶ ಮಾಜಿ ನಾಯಕ ಶಕಿಬ್‌ ಅಲ್‌ ಹಸನ್ ಅವರು 2021ರಲ್ಲಿ ಭ್ರಷ್ಟಚಾರದ ಕುರಿತು ವರದಿ ಮಾಡುವಲ್ಲಿ ವಿಫಲರಾಗಿದ್ದರಿಂದ ಅವರು ಕೆಲ ತಿಂಗಳ ಕಾಲ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು. ಇದನ್ನೂ ಓದಿ: ಧೋನಿ ಕ್ಯಾಪ್ಟನ್‌ ಆಗಿದ್ದಿದ್ದರೆ RCB ಮೂರು ಬಾರಿ ಕಪ್‌ ಗೆಲ್ಲುತ್ತಿತ್ತು ಎಂದ ಪಾಕ್‌ ಮಾಜಿ ಕ್ರಿಕೆಟಿಗ

    BCCI ಭ್ರಷ್ಟಾಚಾರ ನಿಗ್ರಹ ಘಟಕ ಹೇಳುವುದೇನು?
    ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಆಟಗಾರರು ಹಾಗೂ ಅಧಿಕಾರಿಗಳನ್ನ ಸಂಪರ್ಕಿಸಿದರೆ, ತಕ್ಷಣ ಅವರು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಬೇಕು. ಇಲ್ಲದೇ ಇದ್ದಲ್ಲಿ ಅಂತಹ ಆಟಗಾರರು ಅಮಾನತು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ, ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಕಾರ್ಯ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಭ್ರಷ್ಟಚಾರ ನಿಗ್ರಹ ಘಟಕ ಹೇಳಿದೆ.

  • IPL 2023ː ಕೊನೇ ಎಸೆತದಲ್ಲಿ ನೋಬಾಲ್‌ ಎಡವಟ್ಟು –  ಹೈದರಾಬಾದ್‌ಗೆ ರೋಚಕ ಜಯ

    IPL 2023ː ಕೊನೇ ಎಸೆತದಲ್ಲಿ ನೋಬಾಲ್‌ ಎಡವಟ್ಟು – ಹೈದರಾಬಾದ್‌ಗೆ ರೋಚಕ ಜಯ

    ಜೈಪುರ: ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡದ ಬೌಲರ್‌ ಸಂದೀಪ್‌ ಶರ್ಮಾ (Sandeep Sharma) ಕೊನೆಯ ಎಸೆತದಲ್ಲಿ ಮಾಡಿದ ನೋಬಾಲ್‌ ಎಡವಟ್ಟಿನಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ ವಿರೋಚಿತ ಸೋಲನುಭವಿಸಿತು. ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ 6 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

    ಕೊನೆಯ 6 ಎಸೆತಗಳಲ್ಲಿ ಹೈದರಾಬಾದ್‌ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಸಂದೀಪ್‌ ಶರ್ಮಾ ಬೌಲಿಂಗ್‌ನಲ್ಲಿದ್ದರು. ಮೊದಲ ಎಸೆತದಲ್ಲಿ 2 ರನ್‌ ಕೊಟ್ಟ ಸಂದೀಪ್‌ 2ನೇ ಎಸೆತದಲ್ಲಿ ಸಿಕ್ಸ್‌ ಹೊಡೆಸಿಕೊಂಡರು. 3ನೇ ಎಸೆತದಲ್ಲಿ 2 ರನ್‌ ಹಾಗೂ 4 ಮತ್ತು 5ನೇ ಎಸೆತದಲ್ಲಿ ತಲಾ ಒಂದೊಂದು ರನ್‌ ಬಿಟ್ಟುಕೊಟ್ಟರು. ಕೊನೆಯ ಎಸೆತದಲ್ಲಿ 5 ರನ್‌ ಬೇಕಿದ್ದಾಗ ಅಬ್ದುಲ್ ಸಮದ್ (Abdul Samad) ಸಿಕ್ಸ್‌ ಸಿಡಿಸಲು ಯತ್ನಿಸಿ ಕ್ಯಾಚ್‌ ನೀಡಿದರು. ರಾಜಸ್ಥಾನ ತಂಡ ಗೆದ್ದಾಯಿತು ಎಂದು ಸಂಭ್ರಮಿಸುತ್ತಿದ್ದಂತೆ 3ನೇ ಅಂಪೈರ್‌ನಿಂದ ನೋಬಾಲ್‌ ಫಲಿತಾಂಶ ಹೊರಬಂದಿತು. ಮರು ಎಸೆತದಲ್ಲೇ ಸಮದ್‌ ಭರ್ಜರಿ ಸಿಕ್ಸರ್‌ ಸಿಡಿಸಿ ತಂಡವನ್ನ ಗೆಲ್ಲಿಸಿದರು.

    ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ತಂಡ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 214 ರನ್‌ ಸಿಡಿಸಿತ್ತು. ಈ ಗುರಿ ಬೆನ್ನತ್ತಿದ್ದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 217 ರನ್‌ ಬಾರಿಸಿ ಗೆಲುವು ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ ಹೈದರಾಬಾದ್‌ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ ಪತನಕ್ಕೆ 5 ಓವರ್‌ಗಳಲ್ಲಿ 51 ರನ್‌ ಗಳಿಸಿದ್ದ ಹೈದರಾಬಾದ್‌ 2ನೇ ವಿಕೆಟ್‌ಗೆ 12.4 ಓವರ್‌ಗಳಲ್ಲಿ 116 ರನ್‌ ಕಲೆಹಾಕಿತ್ತು. 2ನೇ ವಿಕೆಟ್‌ ನಲ್ಲಿ ರಾಹುಲ್‌ ತ್ರಿಪಾಠಿ (Rahul Tripathi) ಹಾಗೂ ಅಭಿಷೇಕ್‌ ಶರ್ಮಾ (Abhishek Sharma) ಅವರ ಭರ್ಜರಿ ಬ್ಯಾಟಿಂಗ್‌ನಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಇನ್ನೂ 18 ಎಸೆತಗಳಲ್ಲಿ 44 ರನ್‌ ಬೇಕಿರುವಾಗಲೇ ಯಜುವೇಂದ್ರ ಚಾಹಲ್‌ ಬೌಲಿಂಗ್‌ನಲ್ಲಿ ರಾಹುಲ್‌ ತ್ರಿಪಾಠಿ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಗ್ಲೇನ್‌ ಫಿಲಿಪ್ಸ್‌ (Glenn Phillips) 7 ಎಸೆತಗಳಲ್ಲಿ ಸ್ಫೋಟಕ 25 ರನ್‌ ಚಚ್ಚಿ ವಿಕೆಟ್‌ ಒಪ್ಪಿಸಿದರು. ಕೊನೆಯ ಓವರ್‌ನಲ್ಲಿ ಪಂದ್ಯ ರೋಚಕ ತಿರುವು ಪಡೆದಿತ್ತು. ರಾಜಸ್ಥಾನ್‌ಗೆ ಗೆಲ್ಲುವ ಅವಕಾಶವಿದ್ದರೂ ಬೌಲರ್‌ ಸಂದೀಪ್‌ ಶರ್ಮಾ ಮಾಡಿದ ಬೌಲಿಂಗ್‌ ಎಡವಟ್ಟಿನಿಂದ ವಿರೋಚಿತ ಸೋಲನುಭವಿಸಿತು.

    ಹೈದರಾಬಾದ್‌ ಪರ ಅನ್ಮೋಲ್ಪ್ರೀತ್ ಸಿಂಗ್ 33 ರನ್‌, ಅಭಿಷೇಕ್‌ ಶರ್ಮಾ 55 ರನ್‌ (34 ಎಸತೆ, 2 ಸಿಕ್ಸರ್‌, 5 ಬೌಂಡರಿ), ರಾಹುಲ್‌ ತ್ರಿಪಾಠಿ 47 ರನ್‌ (29 ಎಸೆತ, 3 ಸಿಕ್ಸರ್‌, 2 ಬೌಂಡರಿ), ಹೆನ್ರಿಚ್‌ ಕಳಸೇನ್‌ 26 ರನ್‌ (12 ಎಸೆತ, 2 ಸಿಕ್ಸರ್‌, 2 ಬೌಂಡರಿ), ಫಿಲಿಪ್ಸ್‌ 25 ರನ್‌ (7 ಎಸೆತ, 3 ಸಿಕ್ಸರ್‌, 1 ಬೌಂಡರಿ) ಗಳಿಸಿದರೆ, ಕೊನೆಯಲ್ಲಿ ಅಬ್ದುಲ್‌ ಸಮದ್‌ 7 ಎಸೆತಗಳಲ್ಲಿ 17 ರನ್‌ ಚಚ್ಚಿ ತಂಡದ ಗೆಲುವಿಗೆ ಕಾರಣರಾದರು.

    ರಾಜಸ್ಥಾನ್‌ ಪರ 4 ಓವರ್‌ಗಳಲ್ಲಿ 29 ರನ್‌ ನೀಡಿದ ಯಜುವೇಂದ್ರ ಚಾಹಲ್‌ 4 ವಿಕೆಟ್‌ ಕಿತ್ತರೆ, ಕುಲ್‌ದೀಪ್‌ ಯಾದವ್‌ ಹಾಗೂ ರವಿಚಂದ್ರನ್‌ ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ತಂಡ ಅಮೋಘ ಪ್ರದರ್ಶನ ನೀಡಿತ್ತು. ಯಶಸ್ವಿ ಜೈಸ್ವಾಲ್‌, ಜೋಸ್‌ ಬಟ್ಲರ್‌, ನಾಯಕ ಸಂಜು ಸ್ಯಾಮ್ಸನ್‌ ಅವರ ಸಿಕ್ಸರ್‌ ಬೌಂಡರಿ ಬ್ಯಾಟಿಂಗ್‌ನಿಂದ ತಂಡ 200 ರನ್‌ಗಳ ಗಡಿ ದಾಟಿತ್ತು. ರಾಜಸ್ಥಾನ್‌ ಪರ ಯಶಸ್ವಿ ಜೈಸ್ವಾಲ್‌ 35 ರನ್‌, ಜೋಸ್‌ ಬಟ್ಲರ್‌ (Jos Buttler) 95 ರನ್‌ (59 ಎಸೆತ, 10 ಬೌಂಡರಿ, 4 ಸಿಕ್ಸರ್‌), ಸಂಜು ಸ್ಯಾಮ್ಸನ್‌ (Sanju Samson) 66 ರನ್‌ (38 ಎಸೆತ, 4 ಬೌಂಡರಿ,5 ಸಿಕ್ಸರ್‌), ಶಿಮ್ರಾನ್‌ ಹೆಟ್ಮೇಯರ್‌ 7 ರನ್‌ ಗಳಿಸಿದರು.

    ಹೈದರಾಬಾದ್‌ ಪರ ಭುವನೇಶ್ವರ್‌ ಕುಮಾರ್‌ ಹಾಗೂ ಮಾರ್ಕೋ ಜಾನ್ಸೆನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಜಡೇಜಾ ಜಾದು, ಕಾನ್ವೆ ಕಿಕ್‌ – ತವರಿನಲ್ಲಿ ತಿಣುಕಾಡಿ ಗೆದ್ದ ಚೆನ್ನೈ; ಹೈದರಾಬಾದ್‌ ವಿರುದ್ಧ 7 ವಿಕೆಟ್‌ಗಳ ಜಯ

    ಜಡೇಜಾ ಜಾದು, ಕಾನ್ವೆ ಕಿಕ್‌ – ತವರಿನಲ್ಲಿ ತಿಣುಕಾಡಿ ಗೆದ್ದ ಚೆನ್ನೈ; ಹೈದರಾಬಾದ್‌ ವಿರುದ್ಧ 7 ವಿಕೆಟ್‌ಗಳ ಜಯ

    ಚೆನ್ನೈ: ಡಿವೋನ್‌ ಕಾನ್ವೆ ಸ್ಫೋಟಕ ಬ್ಯಾಟಿಂಗ್‌ ಹಾಗೂ ರವೀಂದ್ರ ಜಡೇಜಾ ಸ್ಪಿನ್‌ ಜಾದು ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ತವರಿನಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ. ಆರಂಭದಲ್ಲಿ ಅಬ್ಬರಿಸಿದರೂ ಮಧ್ಯಮ ಕ್ರಮಾಂಕದಲ್ಲಿ ಹೈದರಾಬಾದ್‌ ಬೌಲರ್‌ಗಳ ಬಿಗಿ ಹಿಡಿತಕ್ಕೆ ಸಿಕ್ಕಿದ ಚೆನ್ನೈ 19ನೇ ಓವರ್‌ನಲ್ಲಿ ಗೆಲುವಿನ ಮೊತ್ತ ದಾಖಲಿಸಿದೆ.

    ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ ರೈಸರ್ಸ್‌ ಹೈದರಾಬಾದ್‌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿತು. 135 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ 18.4 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 138 ರನ್‌ ಗಳಿಸಿ ಗೆಲುವು ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಡಿವೋನ್‌ ಕಾನ್ವೆ ಹಾಗೂ ಋತುರಾಜ್‌ ಗಾಯಕ್ವಾಡ್‌ ಭರ್ಜರಿ ಸಿಕ್ಸರ್‌, ಬೌಂಡರಿಯ ಆಟವಾಡಿದ್ದರು. ಮೊದಲ ವಿಕೆಟ್‌ ಪತನಕ್ಕೆ ಈ ಜೋಡಿ 66 ಎಸೆತಗಳಲ್ಲಿ 87 ರನ್‌ ಗಳಿಸಿತ್ತು. ಈ ವೇಳೆ ಋತುರಾಜ್‌ ಗಾಯಕ್ವಾಡ್‌ 35 ರನ್‌ (30 ಎಸೆತ, 2 ಬೌಂಡರಿ) ರನ್‌ ಗಳಿಸಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ರನ್‌ ವೇಗ ಕಡಿಮೆಯಾಯಿತು.

    ಮಧ್ಯಮ ಕ್ರಮಾಂಕದಲ್ಲಿ ಬಿಗಿ ಬೌಲಿಂಗ್‌ ಹಿಡಿತ ಸಾಧಿಸಿದ ಹೈದರಾಬಾದ್‌ ತಂಡ ಚೆನ್ನೈ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳಾದ ಅಜಿಂಕ್ಯಾ ರಹಾನೆ ಹಾಗೂ ಅಂಬಟಿ ರಾಯುಡು ಅವರನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಆದ್ರೆ ಡಿವೋನ್‌ ಕಾನ್ವೆ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಕೊನೆಯವರೆಗೂ ಹೋರಾಡಿದ ಡಿವೋನ್‌ ಕಾನ್ವೆ 57 ಎಸೆತಗಳಲ್ಲಿ 77 ರನ್‌ (12 ಬೌಂಡರಿ, 1 ಸಿಕ್ಸರ್) ಚಚ್ಚಿದರೆ, ಕೊನೆಯಲ್ಲಿ ಮೊಯಿನ್‌ ಅಲಿ 6 ರನ್‌ ಗಳಿಸಿ ಅಜೇಯರಾಗುಳಿದರು. ಅಜಿಂಕ್ಯಾ ರಹಾನೆ ಹಾಗೂ ಅಂಬಟಿ ರಾಯುಡು ತಲಾ 9 ರನ್‌ ಗಳಿಸಿ ಔಟಾದರು.

    ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಹೈದರಾಬಾದ್‌ ತಂಡ ರವೀಂದ್ರ ಜಡೇಜಾ ಸೇರಿದಂತೆ ಚೆನ್ನೈ ಬೌಲರ್‌ಗಳ ದಾಳಿಗೆ ತತ್ತರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್‌ ಶರ್ಮಾ ಹಾಗೂ ಹ್ಯಾರಿ ಬ್ರೂಕ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾದರು. ಆರಂಭದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮುಂದಾದಾ ಬ್ರೂಕ್‌ 13 ಎಸೆತಗಲ್ಲಿ 18 ರನ್‌ ಗಳಿಸಿ ಔಟಾದರು. ಮತ್ತೋರ್ವ ಆರಂಭಿಕನಾಗಿ ಕಣಕ್ಕಿಳಿದಿದ್ದ ಅಭಿಷೇಕ್‌ ಶರ್ಮಾ 26 ಎಸೆತಗಳಲ್ಲಿ 34 ರನ್‌ (3 ಬೌಂಡರಿ, 1 ಸಿಕ್ಸರ್‌) ಗಳಿಸಿದರು. ನಂತರದಲ್ಲಿ ಕಣಕ್ಕಿಳಿದ ಯಾರೊಬ್ಬರೂ ಉತ್ತಮ ಜೊತೆಯಾಟ ನೀಡದ ಕಾರಣ ಹೈದರಾಬಾದ್‌ ತಂಡ ಅಲ್ಪ ಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

    ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದವರಲ್ಲಿ ರಾಹುಲ್‌ ತ್ರಿಪಾಠಿ 21 ರನ್‌ ಗಳಿಸಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರೆ, ನಾಯಕ ಏಡನ್‌ ಮಾರ್ಕ್ರಮ್‌ 12 ರನ್‌, ಹೆನ್ರಿಕ್ ಕ್ಲಾಸೆನ್ 17 ರನ್‌, ಮಯಾಂಕ್‌ ಅಗರ್ವಾಲ್‌ ಕೇವಲ 2 ರನ್‌, ವಾಷಿಂಗ್ಟನ್‌ ಸುಂದರ್‌ 9 ರನ್‌ ಹಾಗೂ ಮಾರ್ಕೊ ಜಾನ್ಸೆನ್‌ 17 ರನ್‌ ಗಳಿಸಿದರು.

    ಜಡೇಜಾ ಜಾದು: ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಸ್ಪಿನ್‌ ಜಾದು ನಡೆಸಿದ ರವೀಂದ್ರ ಜಡೇಜಾ 4 ಓವರ್‌ಗಳಲ್ಲಿ ಕೇವಲ 22 ರನ್‌ ನೀಡಿ ಪ್ರಮುಖ 3 ವಿಕೆಟ್‌ ಕಬಳಿಸಿದರು. ಇನ್ನೂ ಇಂಪ್ಯಾಕ್ಟ್‌ ಪ್ಲೇಯರ್‌ ಆಕಾಶ್‌ ಸಿಂಗ್‌, ಮಹೇಶ್‌ ತೀಕ್ಷಣ ಹಾಗೂ ಮತೀಶ ಪತಿರಾನ ತಲಾ ಒಂದೊಂದು ವಿಕೆಟ್‌ ಪಡೆದರು.

  • IPL 2023: ಪಂಜಾಬ್‌ಗೆ ಪಂಚ್‌ ಕೊಟ್ಟ ಸನ್‌ ರೈಸರ್ಸ್‌ – ಹೈದರಾಬಾದ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    IPL 2023: ಪಂಜಾಬ್‌ಗೆ ಪಂಚ್‌ ಕೊಟ್ಟ ಸನ್‌ ರೈಸರ್ಸ್‌ – ಹೈದರಾಬಾದ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    ಹೈದರಾಬಾದ್‌: ರಾಹುಲ್‌ ತ್ರಿಪಾಠಿ ಭರ್ಜರಿ ಅರ್ಧ ಶತಕದ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು ಕಿಂಗ್ಸ್‌ ಪಂಜಾಬ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿತು. 144 ರನ್‌ಗಳ ಗುರಿ ಬೆನ್ನತ್ತಿದ್ದ ಹೈದರಾಬಾದ್‌ ತಂಡ 17.1 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: IPL 2023: ಮೋದಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ರಶೀದ್‌ ಖಾನ್‌

    ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಹೈದರಾಬಾದ್‌ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಆರಂಭಿಕರಾದ ಹ್ಯಾರಿ ಬ್ರೂಕ್‌ 13 ರನ್‌, ಮಯಾಂಕ್‌ ಅಗರ್ವಾಲ್‌ 21 ರನ್‌ ಗಳಿಸಿ ಔಟಾಗಿದ್ದರು. ಮೊದಲ 6 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಕೇವಲ 34 ರನ್‌ ಗಳಿಸಿತ್ತು. ನಂತರ 3ನೇ ವಿಕೆಟ್‌ಗೆ ಜೊತೆಯಾದ ರಾಹುಲ್‌ ತ್ರಿಪಾಠಿ ಹಾಗೂ ನಾಯಕ ಏಡನ್‌ ಮಾರ್ಕಮ್ ಮುರಿಯದ 3ನೇ ವಿಕೆಟ್‌ಗೆ 52 ಎಸೆತಗಳಲ್ಲಿ 100 ರನ್‌ಗಳ ಜೊತೆಯಾಟವಾಡಿದರು.

    ರಾಹುಲ್‌ ತ್ರಿಪಾಠಿ 48 ಎಸೆತಗಳಲ್ಲಿ 74 ರನ್‌ (10 ಬೌಂಡರಿ, 3 ಸಿಕ್ಸರ್‌) ಸಿಡಿಸಿದರೆ, ಮಾರ್ಕಮ್‌ 37 ರನ್‌ (21 ಎಸೆತ, 6 ರನ್‌) ಗಳಿಸಿ ತಂಡದ ಗೆಲುವಿಗೆ ಆಸರೆಯಾದರು. ಕಿಂಗ್ಸ್‌ ಪಂಜಾಬ್‌ ಪರ ಅರ್ಷ್‌ದೀಪ್‌ ಸಿಂಗ್‌ ಹಾಗೂ ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: IPL 2023: ಕೊನೆಯ ಓವರ್‌ನಲ್ಲಿ 6, 6, 6, 6, 6 -‌ KKRಗೆ 3 ವಿಕೆಟ್‌ಗಳ ರೋಚಕ ಜಯ

    ಇನ್ನೂ ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ ಪರ ಏಕಾಂಗಿ ಹೋರಾಟ ನಡೆಸಿದ ಶಿಖರ್ ಧವನ್ 1 ರನ್‌ನಿಂದ ಶತಕವಂಚಿತರಾದರು. 66 ಎಸೆತಗಳಲ್ಲಿ ಅಜೇಯ 99 ರನ್ ಗಳಿಸಿದ ಶಿಖರ್ ತಂಡ ಮೊತ್ತ 140ರ ಗಡಿದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಸ್ಯಾಮ್‌ ಕರ್ರನ್‌ 22 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ ಎರಡಂಕಿಯ ಮೊತ್ತ ಗಳಿಸದ ಕಾರಣ ಪಂಜಾಬ್‌ ಅಲ್ಪಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

    ಹೈದರಾಬಾದ್‌ ಪರ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದ ಮಯಾಂಕ್‌ ಮಾರ್ಕಂಡೆ, 4 ವಿಕೆಟ್‌ ಕಿತ್ತರೆ, ಉಮ್ರಾನ್‌ ಮಲಿಕ್‌, ಮಾರ್ಕೊ ಜಾನ್ಸೆನ್‌ ತಲಾ 2 ವಿಕೆಟ್‌ ಹಾಗೂ ಭುವನೇಶ್ವರ್‌ ಕುಮಾರ್‌ ಒಂದು ವಿಕೆಟ್‌ ಕಿತ್ತರು.

  • ಕೋಟಿ ಕೋಟಿ ಸುರಿದು ಖರೀದಿಸಿದ ಆಟಗಾರರು ಬ್ಯಾಟಿಂಗ್‌ನಲ್ಲಿ ಫ್ಲಾಪ್‌ – ಮಾಲೀಕರಿಗೆ ನಿರಾಸೆ

    ಕೋಟಿ ಕೋಟಿ ಸುರಿದು ಖರೀದಿಸಿದ ಆಟಗಾರರು ಬ್ಯಾಟಿಂಗ್‌ನಲ್ಲಿ ಫ್ಲಾಪ್‌ – ಮಾಲೀಕರಿಗೆ ನಿರಾಸೆ

    ಲಕ್ನೋ: ಇಲ್ಲಿನ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (Lacknow Super Gaints) ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ನಡುವೆ ನಡೆದ ಪಂದ್ಯದಲ್ಲಿ ಲಕ್ನೋ ತಂಡ 5 ವಿಕೆಟ್‌ಗಳ ಜಯ ಸಾಧಿಸಿತು.

    121 ಅತ್ಯಲ್ಪ ರನ್‌ ಗಳಿಸಿದ್ದ ಹೈದರಾಬಾದ್‌ ತಂಡ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ ಹಾಗೂ ಬೌಲರ್‌ಗಳ ಕಳಪೆ ಪ್ರದರ್ಶನದಿಂದ 2ನೇ ಪಂದ್ಯದಲ್ಲೂ ಹೀನಾಯ ಸೋಲನುಭವಿಸಿತು. ಇದನ್ನೂ ಓದಿ: IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

    ಲಕ್ನೋ ಸೂಪರ್‌ ಜೈಂಟ್ಸ್ ತಂಡ ಚೇಸಿಂಗ್‌ ಆರಂಭಿಸುತ್ತಿದ್ದಂತೆ ಬೌಲಿಂಗ್‌ನಲ್ಲಿ ಉತ್ತಮ ಹಿಡಿತ ಸಾಧಿಸಿದ್ದ ಹೈದರಾಬಾದ್‌ ಪವರ್‌ ಪ್ಲೇ ನಂತರ ರನ್‌ ಬಿಟ್ಟುಕೊಟ್ಟಿತು. ಕಳೆದ ಎರಡೂ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಆರಂಭಿಕ ಕೇಲ್‌ ಮೇಯರ್ಸ್‌ 13 ರನ್‌ಗಳಿಗೆ ಔಟಾಗುತ್ತಿದ್ದಂತೆ ಹೈದರಾಬಾದ್‌ ತಂಡದ ಮಾಲೀಕರಾದ ಕಾವ್ಯ ಮಾರನ್‌ (Kavya Maran) ಹುಚ್ಚೆದ್ದು ಕುಣಿದಿದ್ದರು. ಕೊನೆಯಲ್ಲಿ ತಂಡದ ಸೋಲಿನಿಂದ ನಿರಾಸೆ ಅನುಭವಿಸಿದರು. ಈ ಕುರಿತ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

    ಕೈಕೋಟ್ಟ ದುಬಾರಿ ಆಟಗಾರರು: ಇನ್ನೂ ಐಪಿಎಲ್‌ ಹರಾಜಿನಲ್ಲಿ ಕೋಟಿ ಕೋಟಿ ಹಣ ಸುರಿದು ಬಿಕರಿ ಮಾಡಿದ ಹೈದರಾಬಾದ್‌ ತಂಡದ ಆಟಗಾರರು ಕಳೆದ 2 ಪಂದ್ಯಗಳಲ್ಲೂ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಇದನ್ನೂ ಓದಿ: ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

    ಇಂಗ್ಲೆಂಡ್‌ ತಂಡದಲ್ಲಿ ಟೆಸ್ಟ್‌, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಹ್ಯಾರಿ ಬ್ರೂಕ್‌ (Harry Brook) ಅವರನ್ನ ಹೈದರಾಬಾದ್‌ ತಂಡ 13.25 ಕೋಟಿ ರೂ.ಗೆ ಖರೀದಿಸಿತ್ತು. ಅದೇ ರೀತಿ ರಣಜಿಯಲ್ಲಿ ಏಕಾಂಗಿ ಹೋರಾಟ ನಡೆಸಿ ಕರ್ನಾಟಕ ತಂಡವನ್ನ ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ್ದ ಮಯಾಂಕ್‌ ಅಗರ್ವಾಲ್‌ (Mayank Agarwal) ಅವರನ್ನ 8.25 ಕೋಟಿ ರೂ. ನೀಡಿ ಖರೀದಿಸಿದೆ. ಟೀಂ ಇಂಡಿಯಾ ಆಟಗಾರರಾದ ರಾಹುಲ್‌ ತ್ರಿಪಾಠಿ (Rahul Tripathi) ಹಾಗೂ ವಾಷಿಂಗ್ಟನ್‌ ಸುಂದರ್‌ ಅವರನ್ನ ಕ್ರಮವಾಗಿ 8.50 ಕೋಟಿ ರೂ., 8.75 ಕೋಟಿ ರೂ. ನೀಡಿ ಖರೀದಿಸಿದೆ. ತಂಡಕ್ಕೆ ದುಬಾರಿ ಬೆಲೆಗೆ ಬಿಕರಿಯಾದ ಆಟಗಾರರ ಕಳಪೆ ಪ್ರದರ್ಶನದಿಂದ ತಂಡ ಸೋಲನುಭವಿಸಿದ್ದು, ಮಾಲೀಕರೂ ನಿರಾಸೆ ಹೊಂದಿದ್ದಾರೆ.

    ಕಳೆದ ಎರಡೂ ಪದ್ಯಗಳಲ್ಲೂ ಹೈದರಾಬಾದ್‌ ತಂಡ ಬೌಲಿಂಗ್‌ನಲ್ಲಿ ಸ್ವಲ್ಪ ಹಿಡಿತ ಸಾಧಿಸಿದರೂ, ಬ್ಯಾಟಿಂಗ್‌ನಲ್ಲಿ ಬೃಹತ್‌ ಮೊತ್ತ ಕಲೆಹಾಕುವಲ್ಲಿ ಎಡವಿದೆ. ಮೊದಲ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 131 ರನ್‌ ಗಳಿಸಿ 72 ರನ್‌ಗಳ ಅಂತರದಲ್ಲಿ ಸೋತರೆ, 2ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 121ರನ್‌ ಗಳಿಸಿ 5 ವಿಕೆಟ್‌ಗಳ ಹೀನಾಯ ಸೋಲುಕಂಡಿದೆ. ಮುಂದಿನ ಪಂದ್ಯಗಳಲ್ಲಿ ತಂಡ ಗೆಲುವಿನ ತಂತ್ರ ಹೇಗೆ ರೂಪಿಸಲಿದೆ ಎಂಬುದನ್ನ ಕಾದು ನೋಡಬೇಕಿದೆ.

  • IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

    IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

    ಲಕ್ನೋ: ಬಿಗಿ ಹಿಡಿತದ ಬೌಲಿಂಗ್‌ ಹಾಗೂ ಕೆ.ಎಲ್‌.ರಾಹುಲ್‌ (KL Rahul), ಕೃನಾಲ್‌ ಪಾಂಡ್ಯ (Krunal Pandya) ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ್ದು, 16ನೇ ಆವೃತ್ತಿಯ ಐಪಿಎಲ್‌ನಲ್ಲಿ 2ನೇ ಗೆಲುವು ದಾಖಲಿಸಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಏಡೆನ್ ಮಾರ್ಕ್ರಮ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿತು. 122 ರನ್‌ ಗಳ ಅಲ್ಪಮೊತ್ತದ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ (Lacknow Super Gaints) ತಂಡವು 16 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ:  ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

    ಚೇಸಿಂಗ್‌ ಆರಂಭಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ರನ್‌ ಕಲೆಹಾಕುತ್ತಾ ಸಾಗಿತು. ಆರಂಭಿಕರಾಗಿ ಕಣಕ್ಕಿಳಿದ ಕೇಲ್‌ ಮೇಯರ್ಸ್‌ 13 ರನ್‌ ಗಳಿಸಿ ಔಟಾಗುತ್ತಿದ್ದಂತೆ ದೀಪಕ್‌ 7 ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿದರು. 3ನೇ ವಿಕೆಟ್‌ಗೆ ಜೊತೆಯಾದ ಕೃನಾಲ್‌ ಪಾಂಡ್ಯ ಹಾಗೂ ಆರಂಭಿಕ ಕೆ.ಎಲ್‌. ರಾಹುಲ್‌ ಉತ್ತಮ ಜೊತೆಯಾಟವಾಡಿ ಚೇತರಿಕೆ ನೀಡಿದರು. 38 ಎಸೆತಗಳಲ್ಲಿ ಈ ಜೋಡಿ 55 ರನ್‌ ಕಲೆಹಾಕಿತು. ಈ ವೇಳೆ ಕೃನಾಲ್‌ ಪಾಂಡ್ಯ 23 ಎಸೆತಗಳಲ್ಲಿ 34 ರನ್‌ (4 ಬೌಂಡರಿ, 1 ಸಿಕ್ಸರ್)‌ ಗಳಿಸಿದರು. ಇನ್ನೂ 36 ಎಸೆತಗಳಲ್ಲಿ ಗೆಲುವಿಗೆ 8 ರನ್‌ಗಳ ಅಗತ್ಯವಿದ್ದಾಗಲೇ ರಾಹುಲ್‌ 35 ರನ್‌ (30 ಎಸೆತ, 4 ಬೌಂಡರಿ) ಗಳಿಸಿ ಹೊರನಡೆದರು. ಕೊನೆಯಲ್ಲಿ ಮಾರ್ಕಸ್‌ ಸ್ಟೋಯ್ನಿಸ್‌ 10 ರನ್‌, ನಿಕೊಲಸ್‌ ಪೂರನ್‌ ಅಜೇಯ 11 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಹೈದರಾಬಾದ್‌ ತಂಡದ ಪರ ಆದಿಲ್‌ ರಶೀದ್‌ 2 ವಿಕೆಟ್‌ ಪಡೆದರೆ, ಭುವನೇಶ್ವರ್‌ ಕುಮಾರ್‌, ಫಜಲ್ಹಕ್ ಫಾರೂಕಿ, ಹಾಗೂ ಉಮ್ರಾನ್‌ ಮಲಿಕ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

    ಸನ್‌ರೈಸರ್ಸ್ ಹೈದರಾಬಾದ್ ತಂಡ ಪರ ಬ್ಯಾಟಿಂಗ್ ಆರಂಭಿಸಿದ ಮಯಾಂಕ್ ಅಗರ್ವಾಲ್ (Mayank Agarwal) ಮತ್ತು ಅನ್ಮೋಲ್‌ಪ್ರಿತ್ ಸಿಂಗ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. 2.5 ಓವರ್‌ಗಳಲ್ಲಿ ತಂಡದ ಮೊತ್ತ 21 ರನ್‌ಗಳಾಗಿದ್ದಾಗಲೇ 8 ರನ್ ಗಳಿಸಿ ಆಡುತ್ತಿದ್ದ ಮಯಾಂಕ್ ಅಗರ್ವಾಲ್ ಸುಲಭ ಕ್ಯಾಚ್‌ ನೀಡಿ ವಿಕೆಟ್ ಒಪ್ಪಿಸಿದರು. ನಂತರ ಬಂದ ರಾಹುಲ್ ತ್ರಿಪಾಠಿ (Rahul Tripathi) ನಿಧಾನಗತಿಯ ಬ್ಯಾಟಿಂಗ್‌ ನಡೆಸಿ 41 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 35 ರನ್ ಗಳಿಸಿದರು. ಈ ವೇಳೆ ಅನ್ಮೋಲ್‌ಪ್ರಿತ್ ಸಿಂಗ್ 26 ಎಸೆತಗಳಲ್ಲಿ 31 ರನ್ (3 ಬೌಂಡರಿ, 1 ಸಿಕ್ಸರ್)‌ ಗಳಿಸಿ ಔಟಾದರು.

    4ನೇ ವಿಕೆಟ್‌ಗೆ ಕ್ರೀಸ್‌ಗಿಳಿದ ನಾಯಕ ಏಡೆನ್ ಮಾರ್ಕ್ರಮ್ ಮೊದಲ ಎಸೆತದಲ್ಲೇ ಕೃನಾಲ್ ಪಾಂಡ್ಯ ಸ್ಪಿನ್‌ ದಾಳಿಗೆ ತುತ್ತಾದರು. ನಂತರ ಹ್ಯಾರಿ ಬ್ರೂಕ್ 3 ರನ್, ವಾಷಿಂಗ್ಟನ್ ಸುಂದರ್ 28 ಎಸೆತಗಳಲ್ಲಿ 16 ರನ್, ಅಬ್ದುಲ್ ಸಮದ್ 10 ಎಸೆತಗಳಲ್ಲಿ 21 ರನ್, ಆದಿಲ್ ರಶೀದ್ 4 ರನ್ ಗಳಿಸಿದರು.

    ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕೃನಾಲ್ ಪಾಂಡ್ಯ 4 ಓವರ್‌ಗಳಲ್ಲಿ 18 ರನ್ ನೀಡಿ 3 ವಿಕೆಟ್ ಕಿತ್ತರೆ, ಅಮಿತ್ ಮಿಶ್ರಾ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಯಶ್ ಠಾಕೂರ್ ಮತ್ತು ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

  • ಐಪಿಎಲ್‌ನಲ್ಲಿ ಮಿಂಚಿದ ತ್ರಿಪಾಠಿಗೆ ಯಾಕಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ? – ರೊಚ್ಚಿಗೆದ್ದ ಅಭಿಮಾನಿಗಳು

    ಐಪಿಎಲ್‌ನಲ್ಲಿ ಮಿಂಚಿದ ತ್ರಿಪಾಠಿಗೆ ಯಾಕಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ? – ರೊಚ್ಚಿಗೆದ್ದ ಅಭಿಮಾನಿಗಳು

    ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ 15ನೇ ಆವೃತ್ತಿ ಐಪಿಎಲ್ ಭರ್ಜರಿ ಪ್ರದರ್ಶನ ನೀಡಿದ ಬ್ಯಾಟ್ಸ್ಮನ್ ರಾಹುಲ್ ತ್ರಿಪಾಠಿಗೆ ಸ್ಥಾನ ಕಲ್ಪಿಸಿಕೊಟ್ಟಿಲ್ಲ ಈ ಕಾರಣಕ್ಕೆ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

    ಈ ಬಾರಿಯ ಐಪಿಎಲ್‌ನಲ್ಲಿ ತ್ರಿಪಾಠಿ 12 ಪಂದ್ಯಗಳಲ್ಲಿ 413 ರನ್ ಗಳಿಸಿ ಗಮನ ಸೆಳೆದಿದ್ದರು. ಪಂದ್ಯಗಳಲ್ಲಿ ತ್ರಿಪಾಠಿ 3 ಅರ್ಧಶತಕ ಸೇರಿದಂತೆ 161.73 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ. ಇದನ್ನೂ ಓದಿ: ಎದೆ ಹಿಡಿದುಕೊಂಡು ಮೈದಾನದಲ್ಲೇ ಕುಸಿದು ಬಿದ್ದ ಲಂಕಾ ಕ್ರಿಕೆಟಿಗ

    ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ಆಯ್ಕೆ ಮಾಡಿದ ತಂಡದಲ್ಲಿ ತ್ರಿಪಾಠಿ ಹೆಸರು ಕಾಣಿಸದಿದ್ದಾಗ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಅವಕಾಶಕ್ಕೆ ತ್ರಿಪಾಠಿ ಅರ್ಹರಿದ್ದರೂ ಅವರನ್ನು ಆಯ್ಕೆ ಮಾಡಲಾಗಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಂದ್ಯವಾಡದೇ ಆರ್‌ಸಿಬಿ ಮನೆಗೆ ಬರುತ್ತಾ?

    ದಕ್ಷಿಣ ಆಫ್ರಿಕಾ ಸರಣಿಗೆ ಇಂಡಿಯಾ ತಂಡದಲ್ಲಿ ಬಿಸಿಸಿಐ ಕೆಎಲ್ ರಾಹುಲ್‌ರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ರಿಷಬ್ ಪಂತ್ ಉಪನಾಯಕರಾಗಿದ್ದಾರೆ. ಈ ಬಾರಿ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

    ಭಾರತ ಹಾಗೂ ದಕ್ಷಿಣ ಆಫ್ರಿಕಾ ಟಿ20 ಸರಣಿ ಜೂನ್ 9ರಿಂದ ಪ್ರಾರಂಭವಾಗಲಿದೆ.

  • ‘ರಾಹುಲ್, ನಾಮ್ ತೋ ಸುನಾ ಹೋಗಾ’- ತ್ರಿಪಾಠಿಗೆ ಶಾರುಖ್ ಖಾನ್ ಮೆಚ್ಚುಗೆ

    ‘ರಾಹುಲ್, ನಾಮ್ ತೋ ಸುನಾ ಹೋಗಾ’- ತ್ರಿಪಾಠಿಗೆ ಶಾರುಖ್ ಖಾನ್ ಮೆಚ್ಚುಗೆ

    ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ಸಹ ಮಾಲೀಕ ಶಾರುಖ್ ಖಾನ್ ತಮ್ಮ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಡೆದ 10 ರನ್ ಗಳ ಜಯವನ್ನು ಸಿನಿಮಾ ಡೈಲಾಗ್ ಹೇಳುವ ಮೂಲಕ ಸಂಭ್ರಮಿಸಿದ್ದಾರೆ.

    ಪಂದ್ಯದಲ್ಲಿ 81 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ರಾಹುಲ್ ತ್ರಿಪಾಠಿಗೆ ಮೆಚ್ಚುಗೆ ಸೂಚಿಸಿದ ಶಾರುಖ್ ಕಾನ್, ಕುಚ್ ಕುಚ್ ಹೋತಾ ಹೈ ಸಿನಿಮಾದ ನಾಮ್ ತೋ ಸುನಾ ಹೋಗಾ ಎಂಬ ಡೈಲಾಗ್ ಹೇಳುವ ಮೂಲಕ ಶಹಭಾಸ್ ಗಿರಿ ನೀಡಿದ್ದಾರೆ.

    ರಾಹುಲ್ ಹೆಸರು ಶಾರುಖ್ ಖಾನ್ ಅವರ ಚಲನಚಿತ್ರ ವೃತ್ತಿಜೀವನದಲ್ಲಿ ಹಲವು ಸಿನಿಮಾಗಳಲ್ಲಿ ಬಳಸಿದ ಸ್ಕ್ರೀನ್ ನೇಮ್‍ಗಳಲ್ಲಿ ಒಂದು. 1197 ರಲ್ಲಿ ತೆರೆಕಂಡಿದ್ದ ‘ದಿಲ್ ತೋ ಪಾಗಲ್ ಹೈ’ ಸಿನಿಮಾದಲ್ಲಿ ಮೊದಲ ಬಾರಿಗೆ ರಾಹುಲ್ ಹೆಸರು ಬಳಸಲಾಗಿತ್ತು.

    ಇತ್ತ ನಿನ್ನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಶುಭ್‍ಮನ್ ಗಿಲ್ ಅವರೊಂದಿಗೆ ರಾಹುಲ್ ತ್ರಿಪಾಠಿರನ್ನು ಕಣಕ್ಕಿಳಿಸುವ ಮೂಲಕ ಹೊಸ ಆರಂಭಿಕ ಜೋಡಿಗೆ ಅವಕಾಶ ನೀಡಿತ್ತು. ಸಿಕ್ಕ ಅವಕಾಶವನ್ನು ಜವಾಬ್ದಾರಿಯುತವಾಗಿ ಬಳಿಸಿಕೊಂಡ ತ್ರಿಪಾಠಿ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದರು. 51 ಎಸೆತಗಳಲ್ಲಿ 81 ಸಿಡಿಸಿ ಮಿಂಚಿದ 29 ವರ್ಷದ ತ್ರಿಪಾಠಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಇದುವರೆಗೂ ರಾಹುಲ್ ತ್ರಿಪಾಠಿ 20 ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದು, 34.61ರ ಸರಾಸರಿಯಲ್ಲಿ 650 ಪ್ಲಸ್ ರನ್ ಗಳಿಸಿದ್ದಾರೆ.

  • ತ್ರಿಪಾಠಿ ಸೂಪರ್ ಬ್ಯಾಟಿಂಗ್, ಮಧ್ಯಮ ಕ್ರಮಾಂಕದಲ್ಲಿ ಕೋಲ್ಕತ್ತಾ ಕುಸಿತ – ಚೆನ್ನೈಗೆ 168 ರನ್‍ಗಳ ಗುರಿ

    ತ್ರಿಪಾಠಿ ಸೂಪರ್ ಬ್ಯಾಟಿಂಗ್, ಮಧ್ಯಮ ಕ್ರಮಾಂಕದಲ್ಲಿ ಕೋಲ್ಕತ್ತಾ ಕುಸಿತ – ಚೆನ್ನೈಗೆ 168 ರನ್‍ಗಳ ಗುರಿ

    – ಕರಣ್ ಶರ್ಮಾ, ಶಾರ್ದುಲ್ ಠಾಕೂರ್ ಬೌಲಿಂಗ್ ಮೋಡಿ
    – ಡೆತ್ ಓವರಿನಲ್ಲಿ ಚೆನ್ನೈ ವೇಗಿಗಳ ಆರ್ಭಟ

    ಅಬುಧಾಬಿ: ಇಂದು ನಡೆಯುತ್ತಿರುವ ಐಪಿಎಲ್-2020ಯ 21ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 168 ರನ್‍ಗಳ ಟಾರ್ಗೆಟ್ ನೀಡಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತಾ ತಂಡ ಮೊದಲ ಹತ್ತು ಓವರಿನಲ್ಲಿ ಅದ್ಭುತವಾಗಿ ಆಡಿತು. ಸ್ಫೋಟಕ ಬ್ಯಾಟಿಂಗ್ ಮುಂದಾದ ಓಪನರ್ ರಾಹುಲ್ ತ್ರಿಪಾಠಿ ಸಿಕ್ಸ್ ಫೋರುಗಳ ಸುರಿಮಳೆಗೈದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕುಸಿದ ಕೋಲ್ಕತ್ತಾ ಮೊದಲ 10 ಓವರಿನಲ್ಲಿ 93 ರನ್ ಗಳಿಸಿದರು. ನಂತರ ಉತ್ತಮವಾಗಿ ಆಡಲಿಲ್ಲ. ಕೊನೆಯಲ್ಲಿ ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್ ಮತ್ತು ಇಯೊನ್ ಮೊರ್ಗಾನ್ ಅವರ ವೈಫಲ್ಯ ತಂಡಕ್ಕೆ ಮುಳುವಾಗಿತು.

    ಡೆತ್ ಓವರಿನಲ್ಲಿ ಚೆನ್ನೈ ಬೌಲರ್ಸ್ ಆರ್ಭಟ
    ಮೊದಲಿನಲ್ಲಿ ಕೊಂಚ ದುಬಾರಿಯಾದರೂ ಡೆತ್ ಓವರ್ ಗಳಲ್ಲಿ ಚೆನ್ನೈ ತಂಡ ವೇಗಿಗಳು ಅದ್ಭುತವಾಗಿ ಬೌಲಿಂಗ್ ಮಾಡಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ನಾಲ್ಕು ಓವರ್ ಬೌಲ್ ಮಾಡಿ ಶಾರ್ದುಲ್ ಠಾಕೂರ್ ಅವರು 28 ರನ್ ನೀಡಿ ಎರಡು ವಿಕೆಟ್ ಗಬಳಿಸಿದರು. ಅಂತೆಯೇ ವೇಗಿಗಳಾದ ಸ್ಯಾಮ್ ಕರ್ರನ್ ಎರಡು ವಿಕೆಟ್ ಮತ್ತು ಡ್ವೇನ್ ಬ್ರಾವೋ ಮೂರು ವಿಕೆಟ್ ಕಿತ್ತು ಮಿಂಚಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಸ್ಪಿನ್ನರ್ ಕರಣ್ ಶರ್ಮಾ ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು ಕೇವಲ 25 ರನ್ ನೀಡಿದರು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಆರಂಭಿಕರಾದ ಶುಭ್‍ಮನ್ ಗಿಲ್ ಮತ್ತು ರಾಹುಲ್ ತ್ರಿಪಾಠಿ ಸಾಧಾರಣ ಆರಂಭ ನೀಡಿದರು. ಆದರೆ 11 ರನ್ ಗಳಿಸಿದ್ದ ಗಿಲ್ ಶಾರ್ದುಲ್ ಠಾಕೂರ್ ಅವರಿಗೆ ಔಟ್ ಆದರು. ನಂತರ ಜೊತೆಯಾದ ನಿತೀಶ್ ರಾಣಾ ಮತ್ತು ತ್ರಿಪಾಠಿ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಪರಿಣಾಮ ಆರು ಓವರ್ ಮುಕ್ತಾಯಕ್ಕೆ ಕೋಲ್ಕತ್ತಾ ತಂಡ ಒಂದು ವಿಕೆಟ್ ಕಳೆದುಕೊಂಡು 52 ರನ್ ಸೇರಿಸಿತು.

    ನಂತರ ತ್ರಿಪಾಠಿ ಮತ್ತು ರಾಣಾ ತಾಳ್ಮೆಯಿಂದ ಆಡುತ್ತಿದ್ದರು. ಆದರೆ 8ನೇ ಓವರಿನ ಮೊದಲನೇ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ರಾಣಾ, ಕರಣ್ ಶರ್ಮಾ ಅವರ ಎಸೆತದಲ್ಲಿ ರವೀಂದ್ರ ಜಡೇಜಾ ಅವರು ಹಿಡಿದು ಉತ್ತಮ ಕ್ಯಾಚಿಗೆ ಬಲಿಯಾದರು. ಇದೇ ವೇಳೆ ಆರಂಭದಿಂದಲೂ ಉತ್ತಮವಾಗಿ ಆಡುತ್ತಿದ್ದ ರಾಹುಲ್ ತ್ರಿಪಾಠಿಯವರು 31 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು.

    ನಂತರ ಬ್ಯಾಟ್ ಟು ಬ್ಯಾಕ್ ಬೌಂಡರಿ ಸಿಡಿಸುತ್ತಿದ್ದ ಸುನಿಲ್ ನರೈನ್ ಅವರು ಫಾಫ್ ಡು ಪ್ಲೆಸಿಸ್ ಮತ್ತು ರವೀಂದ್ರ ಜಡೇಜಾ ಜೋಡಿ ಸೇರಿ ಹಿಡಿದು ಸೂಪರ್ ಕ್ಯಾಚಿಗೆ ಬಲಿಯಾದರು. 13ನೇ ಓವರಿನಲ್ಲಿ 7 ರನ್ ಸಿಡಿಸಿ ಆಡುತ್ತಿದ್ದ ಇಯೊನ್ ಮೋರ್ಗಾನ್ ಅವರು ಸ್ಯಾಮ್ ಕರ್ರನ್ ಅವರ ಎಸೆತದಲ್ಲಿ ಧೋನಿಯವರಿಗೆ ಕ್ಯಾಚ್ ನೀಡಿ ಹೊರನಡೆದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ, ತ್ರಿಪಾಠಿಯವರು ಬಾಲನ್ನು ಬೌಂಡರಿಗೆ ಅಟ್ಟತ್ತಲೇ ಇದ್ದರು. ಪರಿಣಾಮ ಕೋಲ್ಕತ್ತಾ 15 ಓವರ್ ಮುಕ್ತಾಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 128 ರನ್ ಕಲೆ ಹಾಕಿತು.

    ನಂತರ ಸ್ಫೋಟಕ ಆಟಗಾರ ಆಂಡ್ರೆ ರಸ್ಸೆಲ್ ಅವರು 15ನೇ ಓವರಿನ ಮೊದಲ ಬಾಲಿನಲ್ಲಿ ಶಾರ್ದುಲ್ ಠಾಕೂರ್ ಅವರ ಬೌಲಿಂಗ್‍ನಲ್ಲಿ 2 ರನ್ ಗಳಿಸಿ ಕೀಪರ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಆರಂಭದಿಂದಲೂ ಸೂಪರ್ ಆಗಿ ಬ್ಯಾಟ್ ಬೀಸಿದ ರಾಹುಲ್ ತ್ರಿಪಾಠಿ 51 ಬಾಲಿಗೆ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್ ಸಮೇತ 81 ರನ್ ಸಿಡಿಸಿ 16ನೇ ಓವರಿನಲ್ಲಿ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ನಾಯಕ ದಿನೇಶ್ ಕಾರ್ತಿಕ್ ಅವರು ಕೂಡ ಕ್ಯಾಚ್ ನೀಡಿದರು. ನಂತರ ಶಿವಂ ಮಾವಿಯವರ ಔಟ್ ಆದರು.